ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಇ.ಎಸ್‌ಗೆ ನೋಟಿಸ್‌

ಕರಾಳ ದಿನಾಚರಣೆ ಮೆರವಣಿಗೆ ವೇಳೆ ಷರತ್ತು ಉಲ್ಲಂಘನೆ
Last Updated 7 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಕರಾಳ ದಿನಾಚರಣೆ ಮೆರವಣಿಗೆ ಆಯೋಜಿಸಲು ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ ಬಗ್ಗೆ ಕಾರಣ ಕೇಳಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್‌) ಪದಾಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಜಿ. ಕೃಷ್ಣ ಭಟ್‌ ಇಲ್ಲಿ ಸೋಮವಾರ ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೆರವಣಿಗೆ ನಡೆಸುವ ಸಂಬಂಧ ಎಂ.ಇ.ಎಸ್‌ಗೆ ಹಲವು ಷರತ್ತು ವಿಧಿಸಲಾಗಿತ್ತು. ಮೆರವಣಿಗೆಗೆ ಮಧ್ಯಾಹ್ನ 1ರ ವರೆಗೆ ಮಾತ್ರ ಸಮಯ ನೀಡಲಾಗಿತ್ತು. ಇದನ್ನು ಉಲ್ಲಂಘಿಸಲಾಗಿದೆ. ಇನ್ನೊಂದು ಭಾಷಿಕರನ್ನು ಅವಹೇಳನ ಮಾಡಲಾಗಿದೆ. ಇದು ಸರಿಯಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ’ ಎಂದರು.

60 ಮಂದಿ ಬಂಧನ: ‘ಕರಾಳ ದಿನಾಚರಣೆ ಮೆರವಣಿಗೆಯಲ್ಲಿ ಕಲ್ಲು ತೂರಾಟ ಹಾಗೂ ಗಲಭೆಯಲ್ಲಿ ಭಾಗಿಯಾಗಿದ್ದ 60 ಮಂದಿ ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದೆ. ವ್ಯಕ್ತಿಯೊಬ್ಬ  ಬಂದೂಕು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದರಿಂದ ಷರತ್ತು ಉಲ್ಲಂಘನೆಯಾಗಿದೆ. ನೋಟಿಸ್‌ಗೆ 3 ದಿನದೊಳಗೆ ಉತ್ತರ ಕೊಡಬೇಕು ಎಂದು ತಿಳಿಸಲಾಗಿದೆ. ಎಂಇಎಸ್‌ ಮುಖಂಡರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕನ್ನಡಿಗರ ಸಮಾವೇಶ: ‘ಬೆಳಗಾವಿಯಲ್ಲಿ ಎಂ.ಇ.ಎಸ್ ಆಯೋಜಿಸಲಿರುವ ಮರಾಠಾ ಮಹಾಮೇಳಾವ್‌ಗೆ ಪ್ರತಿಯಾಗಿ ಮಹಾರಾಷ್ಟ್ರದ ಜತ್ತ್‌ನಲ್ಲಿ ಇದೇ 27ರಂದು ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ನವ ನಿರ್ಮಾಣ ಪಡೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.

ಇಲ್ಲಿಯ ರಾಣಿ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮ ಪ್ರತಿಮೆಯ ಕೈಯಲ್ಲಿನ ಖಡ್ಗಕ್ಕೆ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರಾಳ ದಿನ ಮೆರವಣಿಗೆಯಲ್ಲಿ ಬಂದೂಕು ಪ್ರದರ್ಶಿಸಿದ್ದಕ್ಕೆ ಪ್ರತಿಯಾಗಿ ತಾವು ಆಯೋಜಿಸಲು ಉದ್ದೇಶಿಸಿದ್ದ ಖಡ್ಗ– ಕತ್ತಿ ಮೆರವಣಿಗೆಗೆ ಅನುಮತಿ ನೀಡದ ಪೊಲೀಸರ ವಿರುದ್ಧ ಕಿಡಿಕಾರಿದರು.  

ಪ್ರಧಾನಿಗೆ ಪತ್ರ: ‘ಬೆಳಗಾವಿಯೂ ಸೇರಿದಂತೆ ಗಡಿಯಲ್ಲಿರುವ ಪ್ರದೇಶಗಳ ಬಗ್ಗೆ ಎಂ.ಇ.ಎಸ್‌ ತಪ್ಪು ಮಾಹಿತಿ ನೀಡುವ ಮೂಲಕ ಪ್ರಕರಣ ತಿರುಚಲು ಪ್ರಯತ್ನಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪತ್ರ ಬರೆದಿದ್ದಾರೆ.

ಗಡಿ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಹಾಗೂ ಮರಾಠಿಗರ ಮೇಲೆ ನಡೆಯುತ್ತಿರುವ ಪೊಲೀಸ್‌ ದೌರ್ಜನ್ಯ ತಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಎಂ.ಇ.ಎಸ್‌ ಕಾರ್ಯಕರ್ತರು ಪ್ರಧಾನಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿರುವ ಅವರು, ‘ಎಂ.ಇ.ಎಸ್‌ ಕಾರ್ಯಕರ್ತರು ತಪ್ಪು ಮಾಹಿತಿ ನೀಡುವ ಮೂಲಕ ಗಡಿ ಸಮಸ್ಯೆಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ’ ಎಂದು ವಿವರಿಸಿದ್ದಾರೆ.

‘ಗಡಿ ಸಮಸ್ಯೆ ಇತ್ಯರ್ಥಪಡಿಸುವಂತೆ ಇದೇ ಎಂ.ಇ.ಎಸ್ ಕಾರ್ಯಕರ್ತರು 2004ರಲ್ಲಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ ಎನ್ನುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನ್ಯಾಯಾಲಯದಲ್ಲಿ ಇರುವ ಕಾರಣಕ್ಕೆ ಮಹಾದಾಯಿ ಹಾಗೂ ಕಾವೇರಿ ಪ್ರಕರಣಗಳಲ್ಲಿ ನೀವು ಮಧ್ಯ ಪ್ರವೇಶಿಸಿರಲಿಲ್ಲ. ಆದಾಗ್ಯೂ ನೀವು ಗಡಿ ಸಮಸ್ಯೆ ಇತ್ಯರ್ಥಪಡಿಸಲು ಬಯಸುವುದಾದರೆ 1970ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿರುವ ಮಹಾಜನ ಆಯೋಗದ ವರದಿ  ಜಾರಿಗೊಳಿಸಿ’ ಎಂದು  ಮೋದಿ ಅವರನ್ನು ಕೋರಿದ್ದಾರೆ.

ಮುಖ್ಯಮಂತ್ರಿಗಳ ಮಾತುಕತೆಗೆ  ಆಗ್ರಹ
ಮುಂಬೈ:
ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಶಿವಸೇನಾ, ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸುವಂತೆ ಆಗ್ರಹಿಸಿದೆ.

ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸಿದ ಮರಾಠಿ ಭಾಷಿಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಸೇನಾ, ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಆರೋಪಿಸಿದೆ.

‘ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದರೂ ಯಾರೂ ಮಾತನಾಡುತ್ತಿಲ್ಲ. ಪೊಲೀಸರ ವಿರುದ್ಧ ಮಾನವಹಕ್ಕುಗಳ ಉಲ್ಲಂಘನೆಯ ಪ್ರಕರಣ ದಾಖಲಿಸಬೇಕು’ ಎಂದು ‘ಸಾಮ್ನಾ’ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT