ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ: ಬಂದ್‌ಗೆ ಕರೆ

ಟಿಪ್ಪು ಜಯಂತಿ ಆಚರಣೆಗೆ ಪರ– ವಿರೋಧ: ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌
Last Updated 7 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮಡಿಕೇರಿ: ಟಿಪ್ಪು ಜಯಂತಿಗೆ ಕೊಡಗಿನಲ್ಲಿ ಪರ– ವಿರೋಧ ವ್ಯಕ್ತವಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಸೋಮವಾರ ಸಂಜೆ 4ರಿಂದ ನವೆಂಬರ್‌ 11ರ ಬೆಳಿಗ್ಗೆ 8 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ನ. 10ರಂದು ಕೊಡಗು ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ.

ನಿಷೇಧಾಜ್ಞೆಯ ದಿನಗಳಂದು ಸರ್ಕಾರಿ ಕಾರ್ಯಕ್ರಮ, ಪೂರ್ವ ನಿಯೋಜಿತ ಮದುವೆ ಸಮಾರಂಭ ಹೊರತುಪಡಿಸಿ, ಉಳಿದ ಎಲ್ಲಾ ಸಾರ್ವಜನಿಕ ಸಮಾರಂಭ, ರಾಜಕೀಯ ಬಹಿರಂಗ ಸಭೆ, ಮೆರವಣಿಗೆ, ಪ್ರತಿಭಟನೆ, ಜಾಥಾ, ಮುತ್ತಿಗೆ ಚಳವಳಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಸೋಮವಾರ ಆದೇಶ ಹೊರಡಿಸಿದ್ದಾರೆ.

ನಿಷೇಧಿತ ಅವಧಿಯಲ್ಲಿ 5 ಜನರಿಗಿಂತ ಮೇಲ್ಪಟ್ಟು ಗುಂಪು ಸೇರುವಂತಿಲ್ಲ. ಮಾರಕಾಸ್ತ್ರಗಳನ್ನು ತೆಗೆದುಕೊಂಡು ತಿರುಗಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಆವರಣ, ವಿರಾಜಪೇಟೆ, ಸೋಮವಾರಪೇಟೆ, ಮಡಿಕೇರಿ ತಾಲ್ಲೂಕು ಕಚೇರಿ ಆವರಣ ಹಾಗೂ ಇದೇ 10ರಂದು ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮ ಸ್ಥಳಗಳ ಆವರಣದಲ್ಲಿ ಮಾತ್ರ ಬೆಳಿಗ್ಗೆ 9.30ರಿಂದ 11.30ರ ವರೆಗೆ ನಿಷೇಧಾಜ್ಞೆ ಸಡಿಸಲಾಗಿದೆ. ಇದೇ 10ರಂದು ಜಿಲ್ಲೆಯಲ್ಲಿ ನಡೆಯುವ ಜಾತ್ರೆ, ಸಂತೆಗಳನ್ನೂ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊಡಗು ಬಂದ್‌ಗೆ ಕರೆ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಇದೇ 10ರಂದು ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಟಿಪ್ಪು ಜಯಂತಿ ಆಚರಣೆ ವಿರೋಧಿ ಹೋರಾಟ ಸಮಿತಿ ಹಾಗೂ ಜಯಕರ್ನಾಟಕ ಸಂಘದ ಕಾರ್ಯಕರ್ತರು ಕೊಡಗು ಜಿಲ್ಲೆಯ ಬಂದ್‌ಗೆ ಕರೆ ನೀಡಿದ್ದಾರೆ.

‘ಟಿಪ್ಪು ಸುಲ್ತಾನ್‌ ಮತಾಂಧ, ದೇಶದ್ರೋಹಿ. ಕೊಡವರ ಹತ್ಯೆ ನಡೆಸಿದ ಟಿಪ್ಪುವಿನ ಜಯಂತಿ ಆಚರಣೆಗೆ ಬಿಡುವುದಿಲ್ಲ. ಜೈಲ್‌ ಭರೋ ಚಳವಳಿಗೂ ಸಿದ್ಧವಿದ್ದೇವೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರದಲ್ಲಿ ಸಾರ್ವಜನಿಕರು ಅಂಗಡಿ– ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ನೀಡಿ’ ಎಂದು ಟಿಪ್ಪು ಜಯಂತಿ ಆಚರಣೆ ವಿರೋಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಭಿಮನ್ಯು ಕುಮಾರ್‌ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ಟಿಪ್ಪು ಜಯಂತಿ ವಿರುದ್ಧ ಹೇಳಿಕೆ ನೀಡಿದವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದರು.
ಸೋಮವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ಕರೆದಿದ್ದ ಶಾಂತಿ ಸಭೆಯಲ್ಲಿ ಟಿಪ್ಪು ಜಯಂತಿ ಭಾರಿ ವಿರೋಧ ವ್ಯಕ್ತವಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮನುಮುತ್ತಪ್ಪ ಮಾತನಾಡಿ, ‘ವಿರೋಧದ ನಡುವೆಯೂ ಜಯಂತಿ ಆಚರಿಸಿದರೆ ಜಿಲ್ಲಾಡಳಿತ ಘೋರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಬಳಿಕ ಶಾಂತಿ ಸಭೆಯನ್ನು ಬಿಜೆಪಿ, ಬಜರಂಗದಳದ ಕಾರ್ಯಕರ್ತರು ಬಹಿಷ್ಕರಿಸಿದರು.

ಟಿಪ್ಪು ಜಯಂತಿ ವಿರುದ್ಧ ಹೋರಾಟ (ಕಲಬುರ್ಗಿ ವರದಿ): ‘ರಾಜ್ಯ ಸರ್ಕಾರವು ಹಟಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸಬಾರದು. ಒಂದು ವೇಳೆ ಆಚರಿಸುವುದೇ ಆದರೆ ಅದರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯದಲ್ಲಿ ಶಾಂತಿ ಕದಡುವ ಕೆಲಸವನ್ನು ಸರ್ಕಾರ ಮಾಡಬಾರದು. ಜಯಂತಿ ಆಚರಣೆ ನಿರ್ಧಾರವನ್ನು ವಾಪಸ್‌ ಪಡೆಯಬೇಕು. ಟಿಪ್ಪು  ದೇಶದ್ರೋಹಿ, ನಾಡದ್ರೋಹಿ ಹಾಗೂ ಮತಾಂಧ ಎಂಬುದಕ್ಕೆ ದಾಖಲೆಗಳಿವೆ. ಬ್ರಿಟಿಷರು, ಫ್ರೆಂಚರು ಹಾಗೂ ಉರ್ದು ಲೇಖಕರು ಬರೆದ ಪುಸ್ತಕಗಳಲ್ಲಿ ಈ ಬಗ್ಗೆ ಉಲ್ಲೇಖಗಳಿವೆ’ ಎಂದರು.

‘ಟಿಪ್ಪು ಸುಲ್ತಾನ್‌ ತನ್ನ ಸೇನಾಧಿಪತಿಗಳಿಗೆ ಬರೆದಿದ್ದ ಎರಡು ಸಾವಿರ ಪತ್ರಗಳು ಇವೆ. ಸುಮಾರು ಎಂಟು ಸಾವಿರ ಹಿಂದು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಲ್ಲದೆ, ಲಕ್ಷಾಂತರ ಹಿಂದುಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವುದು ಇತಿಹಾಸದಲ್ಲಿದೆ. ಕೊಡಗು, ಕೇರಳ ಹಾಗೂ ತಮಿಳುನಾಡಿನಲ್ಲಿ ಇರುವ ಮಾಪಿಳ್ಳೆ ಜನಾಂಗವು ಟಿಪ್ಪುವಿನ ಒತ್ತಡಕ್ಕೆ ಮಣಿದು ಮತಾಂತರಗೊಂಡವರು’ ಎಂದು ಹೇಳಿದರು.

ಗೋಮೂತ್ರದಿಂದ ಸ್ವಚ್ಛ
ಮಂಡ್ಯ:
ಜಿಲ್ಲಾಡಳಿತ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿದರೆ,  ಜಯಂತಿ ಆಚರಿಸಿದ ಸ್ಥಳವನ್ನು ಗೋ ಮೂತ್ರದಿಂದ ಸ್ವಚ್ಛಗೊಳಿಸಲಾಗುವುದು ಎಂದು ಬಿಜೆಪಿ ಮುಖಂಡ ಸಿದ್ದರಾಜುಗೌಡ ಹೇಳಿದ್ದಾರೆ.

ಜಯಂತಿ ಆಚರಿಸಬಾರದು ಎಂದು ನ. 8ರಂದು ನಗರದಲ್ಲಿ ಪ್ರತಿಭಟನೆ ಮಾಡಲಾಗುವುದು. ಆ ನಂತರವೂ 10ರಂದು ಜಯಂತಿ ಆಚರಣೆ ಮಾಡಿದರೆ, ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಜಯಂತಿ ಆಚರಿಸಿದ ಸ್ಥಳವನ್ನು ಮರುದಿನ ಸ್ವಚ್ಛ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸ್ಲಿಮರಲ್ಲಿ ವ್ಯಕ್ತಿ ಪೂಜೆ ಮಾಡುವುದಿಲ್ಲ. ಆದರೂ, ರಾಜ್ಯ ಸರ್ಕಾರವು ಮತ ಪಡೆಯುವುದಕ್ಕಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಶೋಭಾ, ಪ್ರತಾಪಸಿಂಹ ಬಂಧನ
ಮೈಸೂರು:
ಟಿಪ್ಪು ಜಯಂತಿ ವಿರೋಧಿಸಿ ಹಾಗೂ ರವಿ ಮಾಗಳಿ ಅನುಮಾನಸ್ಪದ ಸಾವು ಪ್ರಕರಣ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಬಳಿಕವೂ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟಿದ್ದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ಸೇರಿ 28 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿ ಬಿಡುಗಡೆಗೊಳಿಸಿದರು.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯ ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಡಲು ಅಣಿಯಾದರು. ಇದಕ್ಕೆ ಪೊಲೀಸರು ಅವಕಾಶ ನಿರಾಕರಿಸಿದಾಗ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಪ್ರತಿಭಟನಾಕಾರರು ಚಾಮರಾಜ ವೃತ್ತ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಮೆರವಣಿಗೆ ತಡೆದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು. ಬಳಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಆರ್‌) ಮೈದಾನಕ್ಕೆ ಕರೆದೊಯ್ದು ಬಿಡುಗಡೆ ಮಾಡಿದರು.

ಸ್ಥಳದಿಂದ ಚದುರಿದ ನೂರಕ್ಕೂ ಹೆಚ್ಚು ಕಾರ್ಯಕರ್ತರು 20 ನಿಮಿಷಗಳ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು. ‘ಕರ್ನಾಟಕ ಏಕೀಕರಣದ ವಜ್ರಮಹೋತ್ಸವ’ದ ಫ್ಲೆಕ್ಸ್‌ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಮಣ್ಣಿನ ನೀರು ಎರಚಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT