ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಬಾರದ ಲೋಕಕ್ಕೆ ಹೋದ ಬಲಭೀಮರು

ದುರಂತ ಅಂತ್ಯ
Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ಖಳನಟರಾಗಿ ಆಗಷ್ಟೇ ಗಮನ ಸೆಳೆದಿದ್ದ ರಾಘವ ಉದಯ್ ಮತ್ತು ಅನಿಲ್ ಅವರಿಗೆ ತಮ್ಮ ಜೀವದ ಬಗ್ಗೆ ಆತಂಕ ಮೂಡಿತ್ತು.ಹೀಗಾಗಿಯೇ ಅವರು ಹೆಲಿಕಾಪ್ಟರ್ ಟೇಕಾಫ್ ಆಗುವ ಮೊದಲು  ಅಪಾಯ ಧ್ವನಿಸುವ ಮಾತಾಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ದುನಿಯಾ ವಿಜಯ್ ಆಪ್ತ ಬಳಗದ ಈ ಇಬ್ಬರೂ ಚಿತ್ರರಂಗದ ಭರವಸೆಯ ಖಳನಟರಾಗಿ ಬೆಳೆಯುತ್ತಿದ್ದವರು. ವಿಭಿನ್ನ ಹಿನ್ನೆಲೆಯಿಂದ ಬಂದು, ಸಿನಿಮಾಗಳಲ್ಲಿ ಸಾಹಸ ಕಲಾವಿದರಾಗಿ ಬೆಳೆದ ನಂತರ ಖಳನಟರಾದವರು. ಆ ಎರಡು ಭರವಸೆಯ ನಕ್ಷತ್ರಗಳು ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿವೆ.

ಸಿನಿಮಾದತ್ತ ವಾಲಿದ ಸ್ನೇಹ
ಅನಿಲ್‌, ನಗರದ ಕದಿರೇನಹಳ್ಳಿ ನಿವಾಸಿ. ವೇಣುಗೋಪಾಲ್‌ ಮತ್ತು ಸರಸ್ವತಿ ದಂಪತಿಯ ಐವರು ಮಕ್ಕಳ ಪೈಕಿ ಅನಿಲ್ ಮೂರನೆಯವರು. ಮಧ್ಯಮವರ್ಗದ ಕೂಡು ಕುಟುಂಬ. ಓದಿನತ್ತ ಅಷ್ಟಾಗಿ ಆಸಕ್ತಿ ಬೆಳೆಯದ್ದದರಿಂದ,  ಕದಿರೇನಹಳ್ಳಿಯಲ್ಲೇ ಸ್ವಂತ ಜಿಮ್‌ ನಡೆಸುತ್ತಿದ್ದರು. ಪತ್ನಿ ಭ್ರಮ್ಯ. ಒಂದು ಗಂಡು, ಒಂದು ಹೆಣ್ಣು ಮಗು.

ಜಿಮ್‌ಗೆ ಬರುತ್ತಿದ್ದ ಹುಡುಗರಿಗೆ ತರಬೇತಿ ನೀಡುತ್ತಿದ್ದ ಅನಿಲ್‌, ಸ್ನೇಹಜೀವಿಯಾದ್ದರಿಂದ ಅವರ ಮಿತ್ರರ ಬಳಗ ದೊಡ್ಡದಿತ್ತು. ಕಾರ್ಯಕ್ರಮಮೊಂದರಲ್ಲಿ ವಿಜಯ್‌ಗೆ ಪರಿಚಯವಾಗಿದ್ದರು. ವಿಜಯ್ ಆಗಷ್ಟೆ ಚಿತ್ರಗಳಲ್ಲಿ ಸಾಹಸ ಕಲಾವಿದನಾಗಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಆಗ ಇವರಲ್ಲೂ ನಟನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ನಂತರ ವಿಜಯ್ ಚಿತ್ರರಂಗದಲ್ಲಿ ತಳವೂರಿದ ಬಳಿಕ ಅವರ ಚಿತ್ರಗಳಿಂದಲೇ ಇವರ ನಟನೆಯ ಪಯಣ ಶುರುವಾಯಿತು.

ವಿಜಯ್ ನಟನೆಯ ‘ಯುಗ’, ‘ಕರಿಚಿರತೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ಇತರ ಚಿತ್ರರಂಗಗಳಲ್ಲೂ ಅವಕಾಶಗಳು ಅರಸಿ ಬರುತ್ತಿದ್ದವು. ತಾವು ಕಷ್ಟಪಟ್ಟು ಮೇಲೆ ಬಂದಿದ್ದನ್ನು ಎಂದೂ ಮರೆಯದ ಅವರು, ಎಷ್ಟೋ ಮಂದಿಗೆ ತಮ್ಮ ಕೈಲಾದಷ್ಟು ಸಹಾಯ ಕೂಡ ಮಾಡಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ನೆನಪಿಸಿಕೊಳ್ಳುತ್ತಾರೆ.

ಸೆಟ್‌ನಲ್ಲೂ ವರ್ಕೌಟ್‌
‘ಶೂಟಿಂಗ್ ವೇಳೆ ಅವರಿಬ್ಬರು ದುರ್ಮರಣಕ್ಕೀಡಾದ ಸುದ್ದಿ ಕೇಳಿ ಶಾಕ್ ಆಯಿತು. ಈ ಪೈಕಿ ಅನಿಲ್ ನನ್ನ ಸಾಹಸ ನಿರ್ದೇಶನದ ‘ಸಪ್ತಗಿರಿ ಎಕ್ಸ್‌ಪ್ರೆಸ್’ ಎಂಬ ತೆಲುಗು ಚಿತ್ರದಲ್ಲಿ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೆ ಕೆಲಸ ಮಾಡಿದ್ದರು. ಚಿತ್ರದಲ್ಲಿ ಅವರದು ಪ್ರಮುಖ ಖಳ ಪಾತ್ರ. ಅವರಂತಹ ಡೆಡಿಕೇಟೆಡ್ ನಟನನ್ನು ನಾನು ನೋಡೇ ಇಲ್ಲ.

ಸೆಟ್‌ನಲ್ಲೂ ಅವರು ಡಂಬಲ್ಸ್‌ ಇಟ್ಟುಕೊಂಡು ವರ್ಕೌಟ್‌ ಮಾಡುತ್ತಿದ್ದರು’ ಎಂದು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ರಾಮ್ ಸುಂಕರ ಹೇಳುತ್ತಾರೆ.‘ಆ ಚಿತ್ರದ ಸೆಟ್‌ಗೆ ಬಂದಿದ್ದ ನಟ ಪವನ್ ಕಲ್ಯಾಣ್ ಅವರು ಅನಿಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ತೆಲುಗಿನ ಮೂರ್ನಾಲ್ಕು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರೊಂದಿಗೆ ತೆಗೆಸಿಕೊಂಡ ಸೆಲ್ಫಿ ನೋಡಿದರೆ ತುಂಬಾ ಬೇಜಾರಾಗುತ್ತದೆ’ ಎಂದು ಅವರು ದುಃಖಿಸಿದರು.

ಕುಟುಂಬಕ್ಕೆ ಆಧಾರವಾಗಿದ್ದ ಉದಯ್
ಬಡ ಕುಟುಂಬದಿಂದ ಬಂದಿದ್ದ ಉದಯ್ ಓದನ್ನು ಅರ್ಧಕ್ಕೆ ನಿಲ್ಲಿಸಿ ಸಿನಿಮಾದತ್ತ ಆಕರ್ಷಿತರಾದವರು. ಆರಂಭದಲ್ಲಿ ಬನಶಂಕರಿ ಸುತ್ತಮುತ್ತ ಆಟೊ ಓಡಿಸುತ್ತಿದ್ದ ಅವರು ಕುಟುಂಬದ ಆಧಾರ ಸ್ತಂಭವಾಗಿದ್ದರು. ನಟನೆಯ ಕನಸಿನ ಸಾಕಾರಕ್ಕಾಗಿ ಗಾಂಧಿನಗರದಲ್ಲಿ ಅಲೆದಿದ್ದು ಎಷ್ಟೋ?. ಈ ಮಧ್ಯೆ ಅವಕಾಶಕ್ಕಾಗಿ ತನ್ನಂತೆಯೇ ಕಷ್ಟಪಡುತ್ತಿದ್ದ ದುನಿಯಾ ವಿಜಯ್ ಪರಿಚಯವಾಗಿದ್ದರು.

ಅವರ ಮೂಲಕ ಅನಿಲ್ ಸ್ನೇಹಿತರಾದರು. ಅಂದಿನಿಂದ ಅವರ ಜಿಮ್‌ನಲ್ಲೇ ವರ್ಕೌಟ್ ಶುರು ಮಾಡಿದರು. ಮೂವರ ಸ್ನೇಹ ಗಟ್ಟಿಯಾಗಿದ್ದೂ ಆಗಲೇ. ವಿಜಯ್ ನಾಯಕ ನಟರಾದ ಮೇಲೆ ತನ್ನ ಗೆಳೆಯರನ್ನೂ ಚಿತ್ರರಂಗದಲ್ಲಿ ಹಂತಹಂತ ವಾಗಿ ಮೇಲೆ ತಂದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಡೇಂಜರ್ ಜೋನ್’ ಎಂಬ ಚಿತ್ರದಲ್ಲಿ ಪ್ರಮುಖ ಖಳನಾಗಿ ಉದಯ್ ಕಾಣಿಸಿಕೊಂಡಿದ್ದರು.

ಚಿತ್ರದಲ್ಲಿ ಅವರಿಗೆ ‘ಶ್ರೀಗಂಧ ದೇವತೆ’ ಎಂಬ ಹಾಡಿತ್ತು. ಈ ಕುರಿತು ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ‘ಇದೇ ಮೊದಲ ಬಾರಿಗೆ ನನಗೊಂದು ಹಾಡು ಸಿಕ್ಕಿದೆ’ ಎಂದು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿದ್ದರು ಉದಯ್.

ಕೊನೆಯ ಮಗ ಉದಯ್‌
‘ಉದಯ್ ತಂದೆ– ತಾಯಿಗೆ ಮೂವರು ಮಕ್ಕಳು. ಅವರಲ್ಲಿ ಉದಯ್ ಕಡೆಯವರು. ಚಿತ್ರಗಳಲ್ಲಿ ಖಳನಾಗಿ ಉದಯ್ ನಟಿಸಲು ತೊಡಗಿದಾಗಿನಿಂದ ಅವರ ಕುಟುಂಬದ ಆರ್ಥಿಕ ಮಟ್ಟವೂ ಸುಧಾರಿಸಿತ್ತು. ಫ್ಯಾಮಿಲಿ ಈಗ ನನ್ನ ಹಿಡಿತಕ್ಕೆ ಬಂದಿದೆ ಎಂದು ಆಗಾಗ ಹೇಳುತ್ತಿದ್ದ. ಮಗನಿಂದಾಗಿ ನಮ್ಮ ಕುಟುಂಬ ದಡ ಸೇರಿತು ಎಂದು ಅವರ ಅಮ್ಮ ಹೇಳಿಕೊಂಡಿದ್ದರು. ಅಲ್ಲದೆ, ಮುಂದಿನ ವರ್ಷ ಮದುವೆಯಾಗಬೇಕು ಎಂದು ಹೇಳಿದ್ದ’ ಎಂದು ಸಾಹಸ ನಿರ್ದೇಶಕ ಹಾಗೂ ಸಾಹಸ ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ವಿನೋದ್ ಕುಮಾರ್ ನೆನೆಯುತ್ತಾರೆ.

ಗಾಡ್‌ಫಾದರ್ ಆಗಿದ್ದ ವಿಜಯ್
ನಟ ವಿಜಯ್‌ಗೆ ಅನಿಲ್ ಮತ್ತು ಉದಯ್‌ ಎಡಗೈ ಮತ್ತು ಬಲಗೈನಂತಿದ್ದರು. ಆಪ್ತಮಿತ್ರರಾಗಿದ್ದ ಮೂವರೂ ಕಷ್ಟವಿರಲಿ, ಸುಖವಿರಲಿ ಎಂದಿಗೂ ಒಬ್ಬರನೊಬ್ಬರು ಬಿಟ್ಟುಕೊಟ್ಟವರಲ್ಲ. ಸ್ನೇಹಿತರನ್ನೂ ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಅವರ ಬದುಕನ್ನೂ ಭದ್ರಗೊಳಿಸಿದರು. ವಿಜಯ್ ನಟಿಸಿರುವ ಬಹುತೇಕ ಚಿತ್ರಗಳಲ್ಲಿ ಅವರ ಈ ಸ್ನೇಹಿತರಿಗೆ ಸಣ್ಣ ಪಾತವಾದರೂ ಇದ್ದೇ ಇರುತ್ತಿತ್ತು.

ತಮ್ಮ ನಿರ್ಮಾಣದ ಮೊದಲ ಚಿತ್ರ ‘ಜಯಮ್ಮನ ಮಗ’ದಲ್ಲಿ ಉದಯ್‌ಗೆ ಪ್ರಮುಖ ಖಳನ ಪಾತ್ರವನ್ನು ಕೊಟ್ಟಿದ್ದರು ವಿಜಯ್. ಅಂದಿನಿಂದ ಉಯದ್ ಹಂತ ಹಂತವಾಗಿ ಮೇಲೆ ಬಂದರು. ಅಲ್ಲದೆ, ಸುಂದರ್‌ ಮತ್ತು ಅನಿಲ್‌ ನಿರ್ಮಿಸಿದ್ದ  ‘ಜಾಕ್ಸನ್’ ಚಿತ್ರದಲ್ಲಿ ವಿಜಯ್‌ ಸಂಭಾವನೆ ಪಡೆಯದೆ ನಟಿಸಿದ್ದರು. ಸ್ನೇಹಿತರ ಜತೆಗಿನ ಸಿನಿ ಪಯಣದ ಮಹತ್ವಾಕಾಂಕ್ಷೆಯ ಘಟ್ಟವೇ ‘ಮಾಸ್ತಿಗುಡಿ’.

ಗೆಳೆಯರ ಚಿತ್ರ ‘ಮಾಸ್ತಿಗುಡಿ’
‘ಮಾಸ್ತಿಗುಡಿ’ ಚಿತ್ರ ಆರಂಭವಾದಾಗಿನಿಂದ, ಇದು ಸ್ನೇಹಿತರ ಚಿತ್ರ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿತ್ತು. ಚಿತ್ರಕ್ಕೆ ವಿಜಯ್ ನಾಯಕನಾದರೆ, ಅವರ ಸ್ನೇಹಿತರಾದ ಸುಂದರ ಗೌಡ್ರು ಹಾಗೂ ಮೃತ ಅನಿಲ್ ನಿರ್ಮಾಪಕರು. ಇವರೆಲ್ಲರನ್ನೂ ಚನ್ನಾಗಿ ಬಲ್ಲ ನಾಗಶೇಖರ್ ನಿರ್ದೇಶಕ. ಅನಿಲ್ ಮತ್ತು ಉದಯ್ ಚಿತ್ರದ ಪ್ರಮುಖ ಖಳನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಇದು ‘ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರಿಗೋಸ್ಕರ’ ಮಾಡುತ್ತಿರುವ ಚಿತ್ರ ಎಂಬ ಮಾತು ಕೇಳಿಬರುತ್ತಿತ್ತು.

ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡಗಳ ಮೆಲುಕು
1996:
ದೇವರಾಜ್‌ ನಾಯಕ ನಟರಾಗಿದ್ದ ರಾಮು ನಿರ್ಮಾಣದ ‘ಲಾಕಪ್‌ ಡೆತ್‌’ ಚಿತ್ರದ ಸಾಹಸ ದೃಶ್ಯ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಾಹಸ ಕಲಾವಿದರು ಬಸ್‌ ಮೇಲೆ ಬೈಕ್‌ ಹಾರಿಸುವಾಗ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

1998: ನಟ ಬಿ.ಸಿ.ಪಾಟೀಲ್‌ ಅಭಿನಯದ ‘ನಿರ್ಣಯ’ ಚಿತ್ರದ ಶೂಟಿಂಗನ್ನು ಮಲ್ಲೇಶ್ವರದಲ್ಲಿ ನಡೆಸುತ್ತಿದ್ದಾಗ, 2 ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದವು. ಈ ವೇಳೆ ಶೂಟಿಂಗ್ ಕ್ಯಾಮೆರಾ ಪುಡಿಯಾಗಿತ್ತು.

1999: ಬೆಂಗಳೂರಿನ ಹೊರವಲಯದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಸಾಯಿಕುಮಾರ್‌ ನಟನೆಯ ‘ಟಿಕೆಟ್‌ ಟಿಕೆಟ್‌’ ಚಿತ್ರೀಕರಣ ನಡೆಯುತ್ತಿದ್ದಾಗ, ಕಲರ್‌ ಬಾಂಬ್‌ ಸ್ಫೋಟಗೊಂಡು ಇಬ್ಬರು ಕಲಾವಿದರು ಗಾಯಗೊಂಡಿದ್ದರು.

2009: ಕಂಠೀರವ ಸ್ಟುಡಿಯೋದಲ್ಲಿ ‘ಸವಾರಿ’ ಚಿತ್ರಕ್ಕಾಗಿ ಕಾರು ಜಿಗಿಸುವ ಸಾಹಸ ದೃಶ್ಯದ ಶೂಟಿಂಗ್‌ ವೇಳೆ ನಡೆದ ಅನಾಹುತದಿಂದಾಗಿ, ಕಾರೊಂದು ನಜ್ಜುಗುಜ್ಜಾಗಿತ್ತು.

2012: ಹೃಷಿಕೇಶದಲ್ಲಿರುವ ಗಂಗಾನದಿ ತಟದಲ್ಲಿ ಯೋಗೇಶ್ ಅಭಿನಯದ ‘ಅಂಬರ’ ಚಿತ್ರದ ಚಿತ್ರೀಕರಣ ವೇಳೆ, ಲೈಟ್‌ಮ್ಯಾನ್ ಸದಾಶಿವಯ್ಯ ಎನ್ನುವವರು ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರು.

2013: ‘ಶಕ್ತಿ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಶಿವನಸಮುದ್ರ ಬಳಿ ದೃಶ್ಯವೊಂದನ್ನು ಚಿತ್ರೀಕರಣ ನಡೆಸುತ್ತಿದ್ದಾಗ, ಮಾಲಾಶ್ರೀ ಅವರು ನೀರಿನ ಸೆಳೆತಕ್ಕೆ ಸಿಲುಕಿದ್ದರು.

2015: ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಭುಜಂಗ’ ಚಿತ್ರದ ಶೂಟಿಂಗ್ ವೇಳೆ ನಟ ಬುಲೆಟ್‌ ಪ್ರಕಾಶ್‌ ಬೈಕ್‌ನಿಂದ ಹಾರುವಾಗ ಜಾರಿಬಿದ್ದು ಗಾಯಗೊಂಡಿದ್ದರು.

***
ಕತ್ತಿ ಮೇಲಿನ ನಡಿಗೆ
‘ಡ್ಯೂಪ್ ಮಾಡುವುದು ಸೇರಿದಂತೆ ಸಾಹಸ ದೃಶ್ಯಗಳಿಗಾಗಿ ಬೈಕ್ ಹಾರಿಸುವ, ಜಿಗಿಯುವ, ಬೀಳುವ, ನೀರಿಗೆ ಧುಮುಕುವ.. ಹೀಗೆ ಮೈನವಿರೇಳಿಸುವಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಮ್ಮ ಕೆಲಸ ಒಂದು ರೀತಿಯಲ್ಲಿ ಕತ್ತಿ ಮೇಲಿನ ನಡಿಗೆ. ಹಾಗಾಗಿ ಪ್ರತಿ ಸಿನಿಮಾವೂ ನಮಗೆ ಮರುಹುಟ್ಟು ಇದ್ದಂತೆ.

ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಸಾಹಸ ಕಲಾವಿದರಿಗೆ ಯಾವ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬ ಬಗ್ಗೆ ಚಿತ್ರರಂಗದಲ್ಲಿ  ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಆ ಚಿತ್ರದ ಸಾಹಸ ನಿರ್ದೇಶಕರೇ ಕಲಾವಿದರ ಬಗ್ಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಸಾಹಸ ಕಲಾವಿದರ ಸಂಘದ ಅಧ್ಯಕ್ಷ ವಿನೋದ್ ಕುಮಾರ್.

‘ಉದಯ್ ಮತ್ತು ಅನಿಲ್ ಇಬ್ಬರನ್ನೂ ಹತ್ತಿರದಿಂದ ಬಲ್ಲೆ. ಇಬ್ಬರಿಗೂ ಈಜುಕೊಳದಲ್ಲಿ ಬಿಟ್ಟರೆ ಬೇರೆಲ್ಲೂ ಈಜಲು ಬರುವುದಿಲ್ಲ. ಹೀಗಿದ್ದರೂ ಹೆಲಿಕಾಪ್ಟರ್‌ನಿಂದ ಜಲಾಶಯದ ಮಧ್ಯಭಾಗಕ್ಕೆ ಜಿಗಿಯುವಂತಹ ದೃಶ್ಯವನ್ನು ಅದು ಹೇಗೆ ಒಪ್ಪಿಕೊಂಡರೋ ಗೊತ್ತಿಲ್ಲ’ ಎಂದು ಅವರು ಹೇಳುತ್ತಾರೆ.

ನೆಗೆಯುವುದಷ್ಟೇ ಗೊತ್ತು
ಯಾವ್ ಪ್ರಿಪರೇಷನ್ನು ಗೊತ್ತಿಲ್ಲ (ನಗುತ್ತಾ). ಹೆಲಿಕಾಪ್ಟರ್‌ನಿಂದ ರಿಯಲ್ ಆಗಿ ಕೆಳಕ್ಕೆ ಜಿಗೀಬೇಕು ಅಂತ ನಿನ್ನೆ ಕರೆದು ಹೇಳಿದರು. ಓಕೆ ಅಂದಿದೀವಿ. ನೆಗೆಯುವುದಷ್ಟೇ ಗೊತ್ತು ನಮಗೆ. ಹೆಲಿಕಾಪ್ಟರ್‌ನಲ್ಲಿ ಹೋಗಬೇಕು ಎಂಬ ಆಸೆ ಇತ್ತು. ಎಂಜಾಯ್ ಮಾಡೋಕೆ ಹೋಗಬೇಕು ಅಂತ ಅಂದ್ಕೊಂಡೆ. ಈ ರೀತಿ ರಿಸ್ಕ್ ಮಾಡ್ಬೇಕು ಅಂತ ಅಂದುಕೊಂಡಿರಲಿಲ್ಲ. ಖುಷಿ ಜತೆಗೆ, ಭಯವೂ ಆಗುತ್ತಿದೆ. ಏನಾಗುತ್ತೋ ಗೊತ್ತಿಲ್ಲ?
– ಅನಿಲ್, ಹೆಲಿಕಾಪ್ಟರ್‌ ಏರುವ ಮೊದಲು ಆಡಿದ ಮಾತು

***

ತಲೆ ಸುತ್ತು ಬರುತ್ತೆ
ನನಗೆ ಮೊದಲ ಮಹಡಿಯಿಂದ ಕೆಳಕ್ಕೆ ನೋಡಿದರೂ ತಲೆ ಸುತ್ತಿ ಬರುತ್ತದೆ. ಚೆನ್ನಾಗಿ ಈಜಲು ಬರುವುದಿಲ್ಲ. ಸ್ಟಂಟ್ ಮಾಸ್ಟರ್‌ಗೆ ಎಲ್ಲ ವಿಷಯ ಹೇಳಿದ್ದೀನಿ. ನಾ ಎಲ್ಲ ಸೇಫ್ ಮಾಡ್ತೀನಿ ಅಂತ ಹೇಳಿದಾರೆ. ಫಸ್ಟ್ ಟೈಮ್ ಹೆಲಿಕಾಪ್ಟರ್‌ ಮೇಲಿಂದ ಬೀಳುತ್ತಿರುವುದು. ಮೂವರೂ ಸ್ನೇಹಿತರು... ದೇವರ ಮೇಲೆ ಭಾರ ಹಾಕಿ ಶಾಟ್ಸ್‌ ಮಾಡುತ್ತಿದ್ದೇವೆ.
– ಉದಯ್, ಹೆಲಿಕಾಪ್ಟರ್ ಏರುವ ಮೊದಲು ಆಡಿದ ಮಾತು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT