ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳ ಹಿಂದಿನಿಂದಲೇ ಸಿದ್ಧತೆ

Last Updated 9 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: 2300 ಕೋಟಿ ನೋಟುಗಳನ್ನು ಬದಲಿಸುವ ರಿಸರ್ವ್‌ ಬ್ಯಾಂಕ್‌ನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆರು ತಿಂಗಳ ಹಿಂದೆಯೇ ಅನುಮತಿ ನೀಡಿದ್ದರು.

ಆದರೆ ಹೊಸ ನೋಟುಗಳ ಬಿಡುಗಡೆ ದಿನಾಂಕವನ್ನು ಸರ್ಕಾರ ನಿರ್ಧರಿಸುವವರೆಗೂ ಅದನ್ನು ಅತಿ ಗೋಪ್ಯವಾಗಿ ಇರಿಸಲು ಬಯಸಿದ್ದರು.

ಹಿಂದಿನ ಗವರ್ನರ್‌ ರಘುರಾಂ ರಾಜನ್ ಅವರ ಅವಧಿಯಲ್ಲಿಯೇ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಸಂಬಂಧಪಟ್ಟವರನ್ನು ಹೊರತುಪಡಿಸಿ ಹೊಸ ನೋಟುಗಳ ಚಲಾವಣೆಯ ಕುರಿತು ಉಳಿದ ಸಚಿವರಿಗೆ ಅರಿವು ಇರಲಿಲ್ಲ.

ಮೋದಿ ಅವರು ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ಸ್ವಲ್ಪ ಹೊತ್ತಿಗೆ ಮುನ್ನವಷ್ಟೇ ಸಂಪುಟದ ಇತರೆ ಸಚಿವರಿಗೆ ಅದರ ಮಾಹಿತಿ ನೀಡಲಾಯಿತು. ಬಳಿಕ ಮೋದಿ ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಕರೆ ಮಾಡಿ ವಿವರ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ನಡೆಸ ಸಚಿವ ಸಂಪುಟ ಸಭೆಗೆ ಮೊಬೈಲ್ ಫೋನ್‌ ಗಳನ್ನು ಕೊಂಡೊಯ್ಯಲು ಯಾವ ಸಚಿವರಿಗೂ ಅನುಮತಿ ನೀಡಿರಲಿಲ್ಲ. 

ಭಯೋತ್ಪಾದನೆ ಮೇಲಿನ ದಾಳಿ: ಅಧಿಕ ಮೌಲ್ಯದ ಹಳೆಯ ನೋಟುಗಳ ರದ್ದತಿ ಭಯೋತ್ಪಾದನೆಯ ವಿರುದ್ಧದ ದಾಳಿ ಎಂದು ಗೃಹಸಚಿವ ರಾಜನಾಥ್‌ ಸಿಂಗ್‌ ಬುಧವಾರ ಹೇಳಿದ್ದಾರೆ.

ಈ ಕ್ರಮ ಪಾಕಿಸ್ತಾನವನ್ನು ಚಿಂತೆಗೀಡುಮಾಡಿದೆ ಎಂದೂ ಅವರು ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮಾತನಾಡಿದ ಅವರು, ‘ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿ ರುವುದು ದೇಶವನ್ನು ಆರ್ಥಿಕವಾಗಿ ಪ್ರಬಲ ದೇಶವನ್ನಾಗಿಸುವ ಹೆಜ್ಜೆ. ಈ ನೋಟುಗಳು ಭಯೋತ್ಪಾದನೆಗೆ ಆಶ್ರಯ ನೀಡುವವರಿಗೆ ಶಕ್ತಿ ನೀಡುತ್ತಿದ್ದವು. ಭಾರತದ ಆರ್ಥಿಕತೆಯನ್ನು ನಾಶಮಾಡಲು ನಕಲಿ ನೋಟುಗಳನ್ನು ಪಾಕಿಸ್ತಾನದಲ್ಲಿ ಮುದ್ರಿಸಿ, ದೇಶದೆಲ್ಲೆಡೆ ಹಂಚಲಾಗುತ್ತಿತ್ತು.  ನೋಟುಗಳನ್ನು ರದ್ದು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಈ ಶಕ್ತಿಯನ್ನು ಕಸಿದುಕೊಂಡಿದ್ದಾರೆ’ ಎಂದಿದ್ದಾರೆ.

ಜನಸಾಮಾನ್ಯರಿಗೆ ಸಂಕಷ್ಟ ತಂದ ಮೋದಿ: ರಾಹುಲ್‌ ಟೀಕೆ
ನವದೆಹಲಿ:
₹500, ₹1000 ನೋಟುಗಳ ಚಲಾವಣೆ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ,  ಸರಣಿ ಟ್ವೀಟ್‌ಗಳ ಮೂಲಕ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

‘ಜನಸಾಮಾನ್ಯರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಮೋದಿ ಪ್ರದರ್ಶಿಸಿದ್ದಾರೆ. ರೈತರು, ಸಣ್ಣ ಅಂಗಡಿಗಳ ಮಾಲೀಕರು ಮತ್ತು ಗೃಹಿಣಿಯರು ತೊಂದರೆಗೆ ಸಿಲುಕಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಕಪ್ಪು ಹಣ ಹೊಂದಿರುವ ನಿಜವಾದ ಅಪರಾಧಿಗಳು ಅರಾಮವಾಗಿ ಕುಳಿತಿದ್ದಾರೆ. ಜನಸಾಮಾನ್ಯರು ಮಾತ್ರ ತೊಂದರೆ ಅನುಭವಿಸುವಂತಾಗಿದೆ’  ಎಂದು ರಾಹುಲ್‌ ಟೀಕಿಸಿದ್ದಾರೆ.

‘ಪ್ರಧಾನಿ ಅವರಿಗೆ ಒಂದು ಪ್ರಶ್ನೆ: ₹1ಸಾವಿರ ನೋಟುಗಳ ಬದಲಾಗಿ ₹2 ಸಾವಿರ ನೋಟುಗಳನ್ನು ಚಲಾವಣೆಗೆ ತರುವ ಮೂಲಕ ಕಪ್ಪು ಹಣವನ್ನು ನಿಯಂತ್ರಿಸಲು ಸಾಧ್ಯವೇ? ಇದು ಮೋದಿ  ತರ್ಕ ಇರಬಹುದೇ’ ಎಂದು ಕೇಳಿದ್ದಾರೆ.

ನಿತೀಶ್‌ ಬೆಂಬಲ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ನೋಟು ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ದೇಶದ ಆರ್ಥಿಕತೆ ದೃಷ್ಟಿಯಿಂದ ದೀರ್ಘಾವಧಿಯಲ್ಲಿ ಈ ನಿರ್ಧಾರ ಅನುಕೂಲವಾಗಲಿದೆ’ ಎಂದು ನಿತೀಶ್‌ ತಿಳಿಸಿದ್ದಾರೆ.

ನಗದು ತಿರಸ್ಕಾರ!
ಚೆನ್ನೈ: ₹500 ಮತ್ತು 1 ಸಾವಿರ ನೋಟುಗಳನ್ನು  ರದ್ದುಪಡಿಸಿರು ವುದು ಮದುವೆ ಮತ್ತು ಇತರ ಸಮಾರಂಭಗಳಲ್ಲಿ ನಗದು ಕಾಣಿಕೆ ನೀಡುವವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ನಗರದಲ್ಲಿ ಸಂಬಂಧಿಕರೊಬ್ಬರ ಮಗುವಿನ ಕಿವಿ ಚುಚ್ಚುವ ಕಾರ್ಯ ಕ್ರಮಕ್ಕೆ ತೆರಳಿದ್ದ 47 ವರ್ಷದ ಸೇಂಥಿಲ್‌ ಕುಮಾರನ್‌ ಅವರು   ₹ 2 ಸಾವಿರ (1 ಸಾವಿರ ರೂಪಾ ಯಿಯ ಎರಡು ನೋಟುಗಳು) ನಗದು ನೀಡಲು ಮುಂದಾದರು. ಈ ಕಾಣಿಕೆ ಯನ್ನು ನಯವಾಗಿಯೇ ತಿರಸ್ಕರಿಸಿದ ಸಂಬಂಧಿಕರು ಈ ನೋಟುಗಳು ಸದ್ಯ ಚಲಾವಣೆಯಲ್ಲಿ ಇಲ್ಲ. ಇವುಗಳ ಬದಲಾಗಿ ₹100 ನೋಟುಗಳನ್ನು ನೀಡಿ ಎಂದು ಕೋರಿದರು.

ಸಿನಿಮಾ ಬಿಡುಗಡೆ ಮುಂದಕ್ಕೆ
ಬೆಂಗಳೂರು:
₹ 500 ಮತ್ತು ₹ 1,000 ಮುಖಬೆಲೆಯ ಹಳೆಯ ನೋಟುಗಳನ್ನು ನಿಷೇಧ ಮಾಡಿರು ವುದು ಕನ್ನಡ ಚಿತ್ರೋದ್ಯಮದ ಮೇಲೆಯೂ ಪರಿಣಾಮ ಬೀರಿದೆ. ಈ ಶುಕ್ರವಾರ ತೆರೆಕಾಣಬೇಕಿದ್ದ ಮೂರು ಕನ್ನಡ ಚಿತ್ರಗಳ ಪೈಕಿ ಎರಡು ಚಿತ್ರಗಳ ಬಿಡುಗಡೆ ಇದೇ ಕಾರಣಕ್ಕೆ ಮುಂದೆ ಹೋಗಿದೆ.

ಗುರು ದೇಶಪಾಂಡೆ ನಿರ್ದೇಶನದ ‘ಜಾನ್ ಜಾನಿ ಜನಾರ್ಧನ್’ ಹಾಗೂ ಅಮೃತ್ ಕುಮಾರ್ ನಿರ್ದೇಶನದ ‘ರಿಕ್ತ’ ಚಿತ್ರಗಳ ಬಿಡುಗಡೆಯನ್ನು ಮುಂದೂಡಲಾಗಿದೆ.

* ಹಳೆಯ ನೋಟುಗಳ ನಿಷೇಧದಿಂದಾಗಿ ಜನರ ಬಳಿ ಹೋಟೆಲ್‌ಗಳಲ್ಲಿ ತಿಂಡಿ ತಿನ್ನಲೂ ಹಣವಿಲ್ಲದಂತಾಗಿದೆ. ಈ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಸೂಕ್ತವಲ್ಲ. ಹಾಗಾಗಿ ಸಿನಿಮಾ ಬಿಡುಗಡೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದ್ದೇವೆ.

–ಎಲ್. ಪದ್ಮನಾಭ್,  ಜಾನ್ ಜಾನಿ ಜನಾರ್ಧನ್’, ಚಿತ್ರದ ನಿರ್ಮಾಪಕ

* ಜನರ ಬಳಿ ಸದ್ಯ ಹಣವಿಲ್ಲ. ಈ ಸಂದರ್ಭದಲ್ಲಿ ಅವರು ತಮ್ಮ ಮೂಲಭೂತ ಅವಶ್ಯಗಳ ಬಗೆಗೆ ಯೋಚಿಸು ತ್ತಾರೆಯೇ ಹೊರತು ಮನರಂಜನೆಯ ಕುರಿತು ಆಸಕ್ತಿ ವಹಿಸುವುದಿಲ್ಲ. ಹಾಗಾಗಿ ಈ ವಾರ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇವೆ. ಚಿತ್ರತಂಡದೊಂದಿಗೆ ಚರ್ಚಿಸಿ ಬಿಡುಗಡೆ ದಿನಾಂಕವನ್ನು ನಿರ್ಧರಿಸುತ್ತೇವೆ.
–ಅರುಣ್ ಕುಮಾರ್, ‘ರಿಕ್ತ’ ಚಿತ್ರದ ನಿರ್ಮಾಪಕ

10 ಗ್ರಾಂ ಚಿನ್ನಕ್ಕೆ ₹ 31,145
ಮುಂಬೈ : ಕಪ್ಪುಹಣ ನಿಯಂತ್ರ ಣಕ್ಕೆ ಸರ್ಕಾರ ತೆಗೆದು ಕೊಂಡಿರುವ ಕ್ರಮ ಗಳು  ಚಿನಿವಾರ ಪೇಟೆಗಳ ಮೇಲೆಯೂ ಪರಿಣಾಮ ಬೀರಿದೆ.

ಮುಂಬೈ ಚಿನಿವಾರ ಪೇಟೆಯಲ್ಲಿ ಸ್ಟ್ಯಾಂಡರ್ಡ್‌ ಚಿನ್ನ 10 ಗ್ರಾಂಗೆ ಬುಧವಾರ  ₹815ರಷ್ಟು ಏರಿಕೆ ಯಾಗಿ, ₹31,145 ರಂತೆ ವಹಿವಾಟು ನಡೆಸಿತು.

ಬೆಳ್ಳಿ ಬೆಲೆಯೂ ಸಹ ಕೆ.ಜಿಗೆ ₹1, 390ರಷ್ಟು ಏರಿಕೆ ಕಂಡು, ₹45 ಸಾವಿರ ದಂತೆ ಮಾರಾಟವಾಯಿತು.
ಚಿನ್ನದ ಬೆಲೆಯು ಲಂಡನ್‌ನಲ್ಲಿ ಆರು ವಾರಗಳ ಗರಿಷ್ಠ ಮಟ್ಟಕ್ಕೆ ಅಂದರೆ ಒಂದು ಔನ್ಸ್‌ಗೆ 1,337 ಡಾಲರ್‌ಗಳಿಗೆ (ಶೇ 5ರಷ್ಟು) ತಲುಪಿತ್ತು.

ಡಾಲರ್‌ಗೆ ಭಾರಿ ಬೇಡಿಕೆ
ಬೆಂಗಳೂರು: 
ಬೇರೆ ದಿನಗಳಲ್ಲಿ ಸಹಜವಾಗಿ ಬೇರೆ ಕರೆನ್ಸಿಗಳನ್ನು ಕೊಟ್ಟು ರೂಪಾಯಿ ಪಡೆಯುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಆದರೆ, ಬುಧವಾರ ಮಾತ್ರ ಶೇ 95 ರಷ್ಟು ಮಂದಿ ಅವರ ಬಳಿ ಇದ್ದ ₹500, ₹1000 ಮುಖಬೆಲೆಯ ನೋಟುಗಳನ್ನು ಕೊಟ್ಟು ಅದಕ್ಕೆ ಬದಲಾಗಿ ಡಾಲರ್‌ ಪಡೆದುಕೊಂಡಿದ್ದಾರೆ’ ಎನ್ನುತ್ತಾರೆ ಎಂ.ಜಿ ರಸ್ತೆಯಲ್ಲಿರುವ ಕರೆನ್ಸಿ ವಿನಿಮಯ ಅಂಗಡಿಯ ಮಾಲೀಕ ಮಹಮ್ಮದ್ ಜಬೀವುಲ್ಲಾ ಅವರು.

‘ಇನ್ನು ಮುಂದೆ ಪ್ರಯೋಜನಕ್ಕೆ ಬಾರದ ನೋಟುಗಳಿಗಿಂತಲೂ ಡಾಲರ್‌ ಇಟ್ಟುಕೊಳ್ಳುವುದೇ ಹೆಚ್ಚು ಸೂಕ್ತ’ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ, ಕೆಲವೇ ಕೆಲವು ಗ್ರಾಹಕರು ಮಾತ್ರ ತಮ್ಮ ಬಳಿ ಇದ್ದ  ವಿದೇಶಿ ಕರೆನ್ಸಿಗೆ ಬದಲಾಗಿ ₹500, ₹1000 ನೋಟು ನೀಡಿದರೆ ‘ಇದನ್ನು ಇಟ್ಟುಕೊಂಡು ಏನು ಮಾಡಲಿ? ಇದು ನಡೆಯುವುದಿಲ್ಲ’ ಎಂದು ಅದನ್ನು ಪಡೆಯಲು ಒಪ್ಪದೇ ಹಿಂದಿರುಗಿದ್ದಾರೆ.  ಎನ್ನುತ್ತಾರೆ ಅವರು.

ಬಿಹಾರ: ಅಂತ್ಯಕ್ರಿಯೆಗೂ ಅಡ್ಡಿ
ಪಟ್ನಾ:
ಬಿಹಾರದ ಹಲವು ರೈಲ್ವೆ ನಿಲ್ದಾಣ ಮತ್ತು ಆಸ್ಪತ್ರೆಗಳಲ್ಲೂ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ ಪ್ರಸಂಗಗಳು ನಡೆದಿವೆ.

ಮಧೆಪುರದಲ್ಲಿ ತಾಯಿಯ ಅಂತ್ಯಕ್ರಿಯೆ ನಡೆಸಲು ಸಹ ಅಡ್ಡಿಯಾಯಿತು.  ಸಂಪ್ರದಾಯದಂತೆ ತಾಯಿಯ ಅಂತ್ಯಕ್ರಿಯೆ ನಡೆಸಬೇಕಾಗಿದ್ದ ಮಗನಿಗೆ ಚಿಲ್ಲರೆ ಅಭಾವ ಕಾಡಿತು. ಅಂತ್ಯಕ್ರಿಯೆಯ ಕಾರ್ಯಗಳನ್ನು ನೆರವೇರಿಸಿದವರು ₹500 ಸ್ವೀಕರಿಸಲಿಲ್ಲ. ಇದರಿಂದ ಸಕಾಲಕ್ಕೆ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT