ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ ಬಡಿಸುವ ಪ್ರೀತಿ

ಮೇಜು ರಿವಾಜು
Last Updated 10 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಅಡುಗೆ ತಯಾರಿ ಹೇಗೇ ಇರಲಿ, ರುಚಿ ಹೇಗಾದರೂ ಇರಲಿ, ಬಡಿಸುವಾಗ ಪ್ರೀತಿ ಇರಲಿ’ ಎನ್ನುವುದು ಗಾದೆ ಮಾತು. ಬಡಿಸುವ ಪ್ರೀತಿಯಿಂದಲೇ ಊಟದ ರುಚಿ ಹೆಚ್ಚಾಗುವ ಬಗೆಯಿದು. ಹಾಗೆಯೇ ಊಟ ಬಡಿಸುವಲ್ಲಿ ಡೈನಿಂಗ್‌ ಟೇಬಲ್‌ನ ಶಿಸ್ತು ಕೂಡಾ ಮುಖ್ಯ. ಡೈನಿಂಗ್‌ ಟೇಬಲ್‌ ಮೇಲೆ ಯಾವ್ಯಾವ ಊಟವನ್ನು ಹೇಗೆ ಹೇಗೆ ಬಡಿಸಬೇಕು ಎಂಬುದು ಕೂಡಾ ಆಹಾರ ಸಂಸ್ಕೃತಿಯ ಭಾಗ.

ಆಯಾ ಆಹಾರಕ್ಕೆ ಅದರದ್ದೇ ರೀತಿಯಲ್ಲಿ ಬಡಿಸುವ ಹಾಗೂ ಡೈನಿಂಗ್‌ ಟೇಬಲ್‌ ಮೇಲೆ ಅದಕ್ಕೆ ಪೂರಕವಾದ ಸಾಮಗ್ರಿಗಳನ್ನು ಇಡುವ ರೂಢಿಯಿದೆ. ಸಸ್ಯಾಹಾರವಿರಲಿ, ಮಾಂಸಾಹಾರವಿರಲಿ ಅದನ್ನು ಅಚ್ಚುಕಟ್ಟಾಗಿ ಆಸ್ವಾದಿಸಲು ಬೇಕಾದ ಸಾಮಗ್ರಿಗಳು ಡೈನಿಂಗ್‌ ಟೇಬಲ್‌ ಮೇಲೆ ಒಪ್ಪವಾಗಿದ್ದರೇ ಚೆನ್ನ.
ಹಣ್ಣಿನ ಸಲಾಡ್‌ ತಿನ್ನಲು ಬೇಕಾದ ಫೋರ್ಕ್‌ (ಮುಳ್ಳಿನ ಚಮಚ), ಚಾಕುಗಳು ಒಂದು ಬಗೆಯದ್ದಾದರೆ, ಮಾಂಸ, ಮೀನು ತಿನ್ನಲು ಬೇಕಾದ ಚಾಕು, ಚಮಚಗಳು ಬೇರೆಯದ್ದೇ ರೀತಿಯವು. ಆಯಾ ಊಟ ಸವಿಯಲು ಪೂರಕವಾದ ಚಮಚ, ಚಾಕು ಮುಂತಾದ ಸಾಮಗ್ರಿಗಳಿದ್ದರೆ ಊಟಕ್ಕೂ ಮೆರುಗು.

ಡೈನಿಂಗ್‌ ಟೇಬಲ್‌ ಎಷ್ಟು ಆಲಂಕಾರಿಕವಾಗಿರುತ್ತದೆಯೋ ಬಡಿಸಿದ ಆಹಾರವನ್ನು ಅಲಂಕರಿಸಲೂ ಅಷ್ಟೇ ಗಮನ ನೀಡಬೇಕು. ಡೈನಿಂಗ್‌ ಟೇಬಲ್‌ ಇರುವ ಜಾಗ, ಅಲ್ಲಿನ ಅಕ್ಕಪಕ್ಕದ ಗೋಡೆಗಳ ಬಣ್ಣ, ಕಿಟಕಿಯ ಕರ್ಟನ್‌, ಬೆಳಗುತ್ತಿರುವ ದೀಪ ಇವೆಲ್ಲವೂ ಊಟವನ್ನು ಸವಿಯುವಾಗ ಬೇರೆಯೇ ರೀತಿಯ ಅನುಭವ ನೀಡುತ್ತವೆ. ಇವೆಲ್ಲಾ ಊಟದ ಸವಿಯನ್ನು ಹೆಚ್ಚಿಸುವ ಅಂಶಗಳು.

ಅಡುಗೆಮನೆಯಲ್ಲಿ ತರಕಾರಿ ಹೆಚ್ಚಲು ಬಳಸುವ ಚಾಕು ಹಾಗೂ ಡೈನಿಂಗ್ ಟೇಬಲ್‌ ಮೇಲೆ ಬಳಸುವ ಊಟದ ಚಾಕು (ಡಿನ್ನರ್‌ ನೈಫ್‌) ಬೇರೆ ಬೇರೆ. ಊಟದ ಚಾಕು ಫ್ರೂಟ್‌ ಅಥವಾ ವೆಜ್‌ ಸಲಾಡ್‌ ಕತ್ತರಿಸಿಕೊಂಡು ತಿನ್ನಲು, ಬೆಣ್ಣೆ ಹಚ್ಚಿಕೊಳ್ಳಲು ಹಾಗೂ ಮಾಂಸ, ಮೀನಿನ ಖಾದ್ಯ ಕತ್ತರಿಸಿಕೊಂಡು ತಿನ್ನಲು ಬಳಕೆಯಾಗುತ್ತದೆ. ಫ್ರೂಟ್‌ ಸಲಾಡ್‌ಗೆ ಬಳಸುವ ಚಾಕುವಿಗಿಂತ ಮಾಂಸ, ಮೀನಿನ ಊಟಕ್ಕೆ ಬಳಸುವ ಚಾಕು ಸ್ವಲ್ಪ ಹರಿತವಾಗಿರುತ್ತದೆ.

ಅದೇ ರೀತಿ ಫೋರ್ಕ್‌ ಹಾಗೂ ಚಮಚಗಳಲ್ಲೂ ಅನೇಕ ವಿಧಗಳಿವೆ. ಸಲಾಡ್‌ ತಿನ್ನಲು ಬಳಸುವ ಫೋರ್ಕ್‌, ಮಾಂಸ ತಿನ್ನಲು ಬಳಸುವ ಫೋರ್ಕ್‌ ಮತ್ತು ಮೀನು ತಿನ್ನಲು ಬಳಸುವ ಫೋರ್ಕ್‌ ಬೇರೆ ಬೇರೆ. ಸಲಾಡ್‌ ತಿನ್ನಲು ಬಳಸುವ ಫೋರ್ಕ್‌ನಲ್ಲಿ ಮುಳ್ಳುಗಳು ಸ್ವಲ್ಪ ಉದ್ದವಾಗಿರುತ್ತವೆ. ಮಾಂಸ ಹಾಗೂ ಮೀನು ತಿನ್ನಲು ಬಳಸುವ ಫೋರ್ಕ್‌ನ ಮುಳ್ಳುಗಳು ಸ್ವಲ್ಪ ಅಗಲವಾಗಿರುತ್ತವೆ.

ಹಾಗೆಯೇ ಚಮಚಗಳಲ್ಲೂ ಕೂಡಾ ವೈವಿಧ್ಯವಿದೆ. ಸೂಪ್‌ ಕುಡಿಯಲು ಬಳಸುವ ಚಮಚ ಒಂದು ರೀತಿಯದ್ದಾದರೆ, ಅನ್ನ ತಿನ್ನಲು ಬಳಸುವ ಚಮಚವೇ ಬೇರೆ. ಇನ್ನು ಐಸ್‌ಕ್ರೀಮ್‌ ತಿನ್ನಲು ಬಳಸುವ ಚಮಚ ಈ ಎರಡೂ ಚಮಚಗಳಿಗಿಂತ ಭಿನ್ನವಾಗಿರುತ್ತದೆ. ತಿನ್ನುವ ಊಟವೆಲ್ಲಾ ಹೊಟ್ಟೆಗೇ ಸೇರಿದರೂ ಅದನ್ನು ಸೇರಿಸಲು ಬಳಸುವ ಸಾಮಾಗ್ರಿಗಳು ಮಾತ್ರ ಭಿನ್ನಭಿನ್ನ!

ಬೇರೆಬೇರೆ ರೀತಿಯ ಚಾಕು, ಫೋರ್ಕ್‌, ಚಮಚಗಳನ್ನು ಟೇಬಲ್‌ ಮೇಲೆ ಹೇಗೆಂದರೆ ಹಾಗೆ ಇಟ್ಟರೂ ಅದು ಅವಲಕ್ಷಣವೇ. ಅದಕ್ಕಾಗಿಯೇ ಟೇಬಲ್‌ ಶಿಸ್ತನ್ನು ಅನುಸರಿಸಬೇಕು. ಊಟ ಬಡಿಸುವ ಪ್ಲೇಟ್‌ನ ಎಡಭಾಗಕ್ಕೆ ಚಮಚ ಹಾಗೂ ಬಲಭಾಗದಲ್ಲಿ ಚಾಕು ಇಡುವುದು ಸಾಮಾನ್ಯ. ಈ ಚಾಕುವಿನ ಹರಿತವಾದ ಭಾಗ ಪ್ಲೇಟ್‌ನ ಕಡೆಗೆ ಮುಖ ಮಾಡಿರಬೇಕು. ಚಮಚ ಹಾಗೂ ಫೋರ್ಕ್‌ಗಳು ಪ್ಲೇಟ್‌ನ ಪಕ್ಕದಲ್ಲಿ ಡೈನಿಂಗ್‌ ಟೇಬಲ್‌ಗೆ ಮುಮ್ಮುಖವಾಗಿ ಇಡಬೇಕು.

ಹೀಗೆ ಶಿಸ್ತಾಗಿ ಬಡಿಸಿದ ಡೈನಿಂಗ್‌ ಟೇಬಲ್‌ ಮೇಲೆ ಕುಳಿತು ಊಟ ಮಾಡುವುದಕ್ಕೂ ಮುಂಚೆ ಅದರ ಅಲಂಕಾರವನ್ನು ನೋಡುವುದೇ ಒಂದು ರೀತಿಯ ಖುಷಿ ಕೊಡುತ್ತದೆ. ಇಂಥದ್ದೆಲ್ಲಾ ಸ್ಟಾರ್‌ ಹೋಟೆಲ್‌ಗಳಲ್ಲಷ್ಟೇ ಚೆಂದ ಎಂದುಕೊಳ್ಳುವುದಕ್ಕಿಂತ ಮನೆಯಲ್ಲೂ ಇಂಥ ಊಟದ ಶಿಸ್ತನ್ನು ಬೆಳೆಸಿಕೊಂಡರೆ ಬಡಿಸುವವರಿಗೂ ಖುಷಿ, ತಿನ್ನುವವರಿಗೂ ಖುಷಿ. ನಿಮ್ಮ ಮನೆಯಲ್ಲಿ ಈ ರೀತಿ ಊಟ ಸವಿದ ಅತಿಥಿಗಳು ಜೀವನದಲ್ಲಿ ಎಂದೂ ನಿಮ್ಮ ಮನೆಯ ಊಟವನ್ನು ಮರೆಯಲಾರರು.
(ಅನು: ದಯಾನಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT