ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನಕ್ಕೆ ಇರಲಿ ಸುಗಂಧದ ಬಂಧ

Last Updated 10 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಹೌದು, ಸುವಾಸನೆಗೆ ಹಲವು ಬಣ್ಣ. ಬಿಸಿಲು ಕಾಲದಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿದು ಮಣ್ಣಿನಿಂದ ಏಳುವ ವಾಸನೆ ಮನಸಿಗೆ ಅಪ್ಯಾಯಮಾನ. ಇಂಥ ಸುಗಂಧಗಳು ಒಮ್ಮೊಮ್ಮೆ ಬಾಲ್ಯದ ನೆನಪು ಮರುಕಳಿಸುವಂತೆ ಮಾಡುತ್ತವೆ.

ಪುಸ್ತಕಗಳ ಮೂಲಕ ಓದು,  ಹಾಡಿನ ಮೂಲಕ ಸಂಗೀತ ನೆನಪಾಗುವಂತೆ ಸುಗಂಧವು ಇಡೀ ಪರಿಸರದ ಆಸ್ವಾದನೆ ಹೆಚ್ಚಿಸುತ್ತದೆ. ಚಿರಕಾಲ ಉಳಿಯುವಂತೆ ಮಾಡುತ್ತದೆ. ಇದು ಪರಿಮಳಕ್ಕಿರುವ ಶಕ್ತಿ.

ಮನೆಗಳಲ್ಲಿ ಸುಗಂಧಕ್ಕೂ ಸ್ಥಾನ ನೀಡಿದಲ್ಲಿ ಮನೆ ಅಲಂಕಾರ ಶೈಲಿಗೆ ಮೆರುಗು ಬರುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಗ್ರಹಿಸುವವರು ಕಡಿಮೆ. ಮನೆಯ ಪ್ರತಿ ಜಾಗದಲ್ಲೂ ವೈವಿಧ್ಯಮಯ ಸುವಾಸನೆ ಮೂಡಿಸುವ ಟ್ರೆಂಡ್ ಗಟ್ಟಿಯಾಗುತ್ತಿದೆ.

ಸುಗಂಧ ದ್ರವ್ಯದ ಆಯ್ಕೆ
ಸುಗಂಧದ್ರವ್ಯದ ಆಯ್ಕೆಗೂ ಮೊದಲು ನಿಮ್ಮ ಮನೆ ಹಾಗೂ ಜೀವನ ಶೈಲಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಮನಸ್ಸನ್ನು ಉಲ್ಲಸಿತಗೊಳಿಸುವ ಹಲವು ಸುಗಂಧ ದ್ರವ್ಯಗಳು ಮಾರುಕಟ್ಟೆಯಲ್ಲಿವೆ. ಇವು ನಿಮ್ಮ ಮನದಿಂಗಿತವನ್ನು ಹಿನ್ನೆಲೆಯಲ್ಲಿ ನಿಂತು ಪೋಷಿಸುತ್ತವೆ.  ಅಷ್ಟೇ ಅಲ್ಲದೆ ನಿಮ್ಮ ಅಲಂಕಾರ, ಶೈಲಿ ಹಾಗೂ ವೈಯಕ್ತಿಕ ಸ್ಪಂದನೆಗೂ ಮೆರುಗು ತರುತ್ತವೆ.

ಮನೆಯ ವಿವಿಧ ಕೋಣೆಗಳು ಪ್ರತ್ಯೇಕ ಉದ್ದೇಶಗಳಿಗೆ ಬಳಕೆಯಾಗುತ್ತವೆ. ಪ್ರತಿ ಜಾಗವನ್ನೂ ಉಲ್ಲಸಿತವಾಗಿಡಲು ವೈವಿಧ್ಯಮಯ ಸುಂಗಧ ದ್ರವ್ಯಗಳನ್ನು ಬಳಸಬಹುದು. ನೆನಪಿರಲಿ, ವ್ಯತಿರಿಕ್ತ ಸುವಾಸನೆ ಬೀರುವ ದ್ರವ್ಯಗಳು ನಿಮಗೂ  ಮತ್ತು ಮನೆಗೆ ಬರುವ ಅತಿಥಿಗಳಿಗೂ ಅಸಹ್ಯ ಎನಿಸಬಹುದು. ಸಂಗೀತವನ್ನು  ಹುಡುಕಿ ಹುಡುಕಿ ಕೇಳುವ ರೀತಿಯಲ್ಲೇ ಸುಗಂಧ ದ್ರವ್ಯಗಳನ್ನು ಮರು ಹೊಂದಾಣಿಕೆ ಮಾಡಿ ಆಸ್ವಾದಿಸಿ.

ಲಿವಿಂಗ್ ರೂಮ್
ಹೆಚ್ಚಿನ ಮಾತಿನ ಹರವು ಇರುವ ಲಿವಿಂಗ್ ರೂಮ್‌ನಲ್ಲಿ ಹಿಂಬದಿಯಿಂದ ಸುಮಧುರ ಗಂಧ ತೇಲಿಬರಲಿ. ಔತಣಕೂಟದಂಥ ಸಂದರ್ಭದಲ್ಲಿ ಸಾರವತ್ತಾದ ಸುಗಂಧವು ವಾತಾವರಣದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹಾಗೆಂದ ಮಾತ್ರಕ್ಕೆ ಇದಕ್ಕೆ ನಿರ್ದಿಷ್ಟ ಸೂತ್ರವೇನೂ ಇಲ್ಲ. ಸಾಮಾನ್ಯವಾಗಿ ಕೆಲವು ಅಲಂಕಾರ ಶೈಲಿಗೆ ಹೊಂದುವ ಸುಗಂಧ ದ್ರವ್ಯಗಳನ್ನು ಹೆಸರಿಸಬಹುದು.

ತೇಗ, ಬೀಟೆ, ಮಹಾಗನಿ ಮರದ ಪೀಠೋಪಕರಣಗಳು ಸಾಮಾನ್ಯವಾಗಿ ಪರಿಮಳ ಬೀರುತ್ತವೆ. ದಾಲ್ಚಿನ್ನಿ ಹಾಗೂ ವೆನಿಲ್ಲಾ ಮಿಶ್ರಿತ ಘಮ ಹರಡಿರುತ್ತದೆ. ಇಂಥಹದ್ದೇ ಸುವಾಸನೆಯನ್ನು ಸುಗಂಧದ್ರವ್ಯಗಳ ಮೂಲಕ ಇತರ ಕೋಣೆಗಳೂ ನೀವು ಪಸರಿಸಬಹುದು.

ಉದಾಹರಣೆಗೆ ಹೆಚ್ಚು ಚಟುವಟಿಕೆಗಳಿಂದ ಕೂಡಿರುವ ವಾಸದ ಕೋಣೆಗಳಲ್ಲಿ ಚೆರ್ರಿ ಹಾಗೂ ನಿಂಬೆಯುಕ್ತ ಪರಿಮಳ ಸೂಕ್ತ. ಬಹುತೇಕ ಭಾರತೀಯ ಮನೆಗಳಲ್ಲಿ ಕೆಲವು ಪ್ರಧಾನ ಸುಗಂಧಗಳನ್ನು ನಾವು ನಿಯಮಿತವಾಗಿ ಗುರುತಿಸಬಹುದು.

ಯಾವುದು ಸೂಕ್ತ?
ಭಾರತೀಯ ಕುಟುಂಬಗಳಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವುದು ಮಲ್ಲಿಗೆ ಸುಗಂಧ. ಇದು ಪರಿಣಾಮಕಾರಿ ಕೂಡಾ. ನರಗಳನ್ನು ಚೈತನ್ಯಗೊಳಿಸುವುದು ಮತ್ತು ಆಶಾವಾದ, ವಿಶ್ವಾಸ ಪ್ರಜ್ಞೆ ವೃದ್ಧಿಸುವಲ್ಲಿ ಇದರ ಪಾತ್ರ ಅನನ್ಯ. ಇದರ ಜತೆ ಲ್ಯಾವೆಂಡರ್,  ಲೆಮನ್‌ಗ್ರಾಸ್, ಸಾಂಬ್ರಾಣಿ ಅಥವಾ ದೂಪ, ಗ್ರೀನ್ ಆ್ಯಪಲ್ ಮತ್ತು  ನಿಂಬೆ, ಕಿತ್ತಳೆ ಅಥವಾ ಗುಲಾಬಿ ವಾಸನೆಯಿರುವ ಪುಷ್ಪಗಳೂ ಚೈತನ್ಯ ತುಂಬುತ್ತವೆ.

ಮಕ್ಕಳ ಕೋಣೆ
ದಾಲ್ಚಿನ್ನಿ ಏಕಾಗ್ರತೆ ಹೆಚ್ಚಿಸುತ್ತದೆ ಎಂಬುದು ನಿಮಗೆ ಗೊತ್ತೇ? ಇದು ಮನದ ಆಯಾಸ, ದುಗುಡ ನಿವಾರಿಸಿ, ಏಕಾಗ್ರತೆ ವೃದ್ಧಿಸುತ್ತದೆ. ನಿಂಬೆಹಣ್ಣಿನ ಹಾಗೂ ಪುದಿನಾ ಸುಗಂಧ ಕೂಡಾ ಇದೇ ಪರಿಣಾಮ ಹೊಂದಿವೆ. ಈ ಸುಗಂಧ ದ್ರವ್ಯಗಳು ಮಕ್ಕಳು ಓದುವ ಕೋಣೆಗೆ ಅದರಲ್ಲೂ ಪರೀಕ್ಷೆಯ ಸಂದರ್ಭದಲ್ಲಿ ಸೂಕ್ತ ಎನ್ನುತ್ತಾರೆ ತಜ್ಞರು. ನಿಮ್ಮ ಒತ್ತಡದ ಮಟ್ಟಕ್ಕೆ ಅನುಗುಣವಾಗಿ ಮಲ್ಲಿಗೆ ಮತ್ತು ಲ್ಯಾವೆಂಡರ್ ಬಳಸುವುದು ಸೂಕ್ತ.

ಅಡುಗೆ ಮನೆ
ಡೈನಿಂಗ್ ಹಾಗೂ ಅಡುಗೆ ಮನೆಗೆ ಹಣ್ಣಿನ ವಾಸನೆಯುಕ್ತ ಸುಗಂಧದ್ರವ್ಯಗಳು ಸೂಕ್ತ. ಈ ಜಾಗದಲ್ಲಿ ಸಾಮಾನ್ಯವಾಗಿ  ಇರುವ ಖಾರಯುಕ್ತ ಮಸಾಲೆಯ ವಾಸನೆಯನ್ನು ಇವು ಗಣನೀಯವಾಗಿ ಕಡಿಮೆ ಮಾಡುತ್ತವೆ. ‘ರೋಸ್‌ಮರಿ’ ಈ ಸ್ಥಳಕ್ಕೆ ಹೇಳಿ ಮಾಡಿಸಿದ್ದು. ಇದರ ಉಲ್ಲಾಸದಾಯಕ ಪರಿಮಳವು ಆಘ್ರಾಣಿಸುವಂತೆ ಮಾಡುವ ಶಕ್ತಿ ಹೊಂದಿದೆ. ಪ್ರತಿ ಮುಂಜಾನೆಯನ್ನೂ ಇದು ಉತ್ತೇಜಿಸಬಲ್ಲದು.

ಮನಸು ಸಜ್ಜುಗೊಳಿಸಿ
ಸ್ನಾನದ ಕೋಣೆಗಳು ನಿಂಬೆ, ಕಿತ್ತಳೆ ಅಥವಾ ಸೀಬೆಯ ಘಮ ಬಿಟ್ಟು ಇರಲಾರವು. ಟಬ್‌ನಲ್ಲಿ ನೆನೆಯುತ್ತಾ ಸ್ನಾನದ ಉಲ್ಲಾಸ ಅನುಭವಿಸುವಾಗ ನಿಮ್ಮ ಇಂದ್ರಿಯಗಳು ತಣಿಯುತ್ತವೆ.  ಮಲಗುವ ಕೋಣೆಗೂ ಇದೇ ಮೂಡ್ ವಿಸ್ತರಿಸುವ ಬಯಕೆ ನಿಮಗಿದ್ದರೆ ವೆನಿಲ್ಲಾ  ಸುಂಗಧದಿಂದ ಕೂಡಿದ ರೂಮ್ ಫ್ರೆಶ್‌ನರ್ಸ್ ಬಳಕೆ ಸೂಕ್ತ.

ಅಚ್ಚರಿಯೆಂದರೆ ಕುಂಬಳಕಾಯಿ ಪರಿಮಳದ ಸುಗಂಧದ್ರವ್ಯ ಕಾಮೋತ್ತೇಜಕವಾಗಿಯೂ ಕೆಲಸ ಮಾಡಬಲ್ಲದು. ಇದಕ್ಕೆ ಪ್ರಣಯದ ರಸತಂತಿಗಳನ್ನು ಮೀಟುವ ಸಾಮರ್ಥ್ಯವೂ ಇದೆಯಂತೆ.

ಲ್ಯಾವೆಂಡರ್, ಸುಲಭವಾಗಿ ಲಭ್ಯವಾಗುವ ಸುಗಂಧ ದ್ರವ್ಯ. ಇದು ಮಲಗುವ ಕೋಣೆಯ ಪರಿಸರವನ್ನು ಸಂತುಷ್ಟಗೊಳಿಸುತ್ತದೆ. ಅದರಲ್ಲೂ ನಿದ್ರೆ ಬಾರದ ರಾತ್ರಿಗಳನ್ನು ಇದು ಇಲ್ಲವಾಗಿಸುತ್ತೆ.

ಸುಗಂಧ ಆಯ್ಕೆ ಮಾಡಿಕೊಂಡ ಮೇಲೆ ಅದನ್ನು ಹೇಗೆ ಪಸರಿಸುವುದು ಎಂದು ಯೋಚಿಸಿ. ಭಾರತೀಯ ಪರಿಸರಕ್ಕೆ ಹೋಲಿಸಿ ಹೇಳುವುದಾದರೆ ಅಗರಬತ್ತಿ ಅಥವಾ ಸುಂಗಧಲೇಪಿತ ಕಡ್ಡಿ ಜನಜನಿತ. ಪಾಟ್ ಪೊರ್ರಿ, ಡಿಫ್ಯೂಜರ್‌ ಮತ್ತು ನೆಚ್ಚಿನ ಸುವಾಸನೆಯುಕ್ತ ಕ್ಯಾಂಡಲ್‌ಗಳು ಇತರ ಆಯ್ಕೆಗಳು.

ಮೇಣ ಅಥವಾ ಸೋಯಾದಿಂದ ತಯಾರಿಸಿದ ಕ್ಯಾಂಡಲ್‌ಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಕ್ಯಾಂಡಲ್ ತಯಾರಿಸಲು ಬಳಸುವ ಕೊಬ್ಬು ಕೆಲವೊಮ್ಮೆ ಉಸಿರಾಟದ ತೊಂದರೆಗೂ ಕಾರಣವಾಗುತ್ತದೆ.

ಕೆಲ ತೈಲಗಳು  ಸುಗಂಧದಿಂದ ಸಾಂದ್ರೀಕರಿಸಲ್ಪಟ್ಟಿರುತ್ತವೆ. ಒಂದರೆಡು ಹನಿಗಳು ಅದ್ಭುತ ಸೃಷ್ಟಿಸಬಲ್ಲವು. ಉದಾಹರಣೆಗೆ ಟಿಷ್ಯು ಪೇಪರ್ ಮೇಲೆ ಲೆಮನ್‌ಗ್ರಾಸ್ ಸುಗಂಧದ ಒಂದರೆಡು ಹನಿಗಳನ್ನು ತಾಗಿಸಿ ಕಪ್‌ಬೋರ್ಡ್‌ನಲ್ಲಿ ಇರಿಸಿ ಹಾಯಾಗಿರಬಹುದು.

ಡಿಸ್ಟಿಲ್ಡ್‌ ವಾಟರ್ ಜತೆ ಸುಗಂಧಭರಿತ ತೈಲ ಮಿಶ್ರಮಾಡಿ ಕೊಠಡಿಯಲ್ಲಿ ಸಿಂಪಡಿಸುವ ಸುಲಭ ವಿಧಾನವೂ ಇದೆ. ಮನೆಯಲ್ಲಿ ತಾಜಾ ಮಲ್ಲಿಗೆ ಹೂವನ್ನು ಇರಿಸಿ ಅದರ ಘಮ ಆಘ್ರಾಣಿಸಲು ಯಾರ ಅಡ್ಡಿಯೂ ಇಲ್ಲವಲ್ಲ! ಆಯ್ಕೆ ನಿಮ್ಮದು.

(ಅನುವಾದ: ಅಮೃತ ಕಿರಣ ಬಿ.ಎಂ.) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT