ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿ ಆಚರಣೆ

Last Updated 11 ನವೆಂಬರ್ 2016, 4:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕು ಆಡಳಿತದ ವತಿಯಿಂದ ಇಲ್ಲಿನ ಮಿನಿ ವಿಧಾನ­ಸೌಧದಲ್ಲಿ ಗುರುವಾರ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿ­ಯೊಬ್ಬರನ್ನು ತಪಾಸಣೆ ಮಾಡಿದ ಬಳಿಕ ಟಿಪ್ಪು ಜಯಂತಿ ಆಯೋಜಿಸ­ಲಾಗಿದ್ದ ಮಿನಿ ವಿಧಾನಸೌಧದ ಒಳಗೆ ಬಿಡಲಾಯಿತು.

ಕಾರ್ಯಕ್ರಮಕ್ಕೆ ಅಡಚಣೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕಪ್ಪು ಪ್ಯಾಂಟ್‌, ಶರ್ಟ್‌, ಕರವಸ್ತ್ರ, ಬೆಂಕಿಪೊಟ್ಟಣ, ಬೀಡಿ, ಸಿಗರೇಟ್‌ ಇರುವವರನ್ನು ತಡೆದರು. ಕಾರ್ಯಕ್ರಮ­ದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ವಿಳಾಸವನ್ನು ಪೊಲೀಸರು ದಾಖಲಿಸಿಕೊಂಡರು.

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಪಾಂಡುರಂಗ ಠಾಣೆ, ಡಿಎಸ್‌ಪಿ ಜಿನೇಂದ್ರ ಖನಗಾವಿ, ಎಸಿಪಿ ದಾವುದ್‌ ಖಾನ್‌, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮುತ್ತಣ್ಣ ಸರವಗೋಳ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಬಿಜೆಪಿ ಪ್ರತಿಭಟನೆ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂದೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಗೇಶ ಕಲ­ಬುರ್ಗಿ, ಮುಖಂಡರಾದ ಮಹಾಂತೇಶ ಟೆಂಗಿನಕಾಯಿ, ಶಿವು ಮೆಣಸಿಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಶಿವಾನಂದ ಮುತ್ತಣ್ಣವರ, ಬಸಯ್ಯ ಹಿರೇಮಠ ಸೇರಿದಂತೆ ಸುಮಾರು 80 ಜನ ಪ್ರತಿಭಟನಾ­ಕಾರರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

ಜಯಂತಿಗೆ ಬೆಂಬಲ: ಟಿಪ್ಪು ಜಯಂತಿಗೆ ಬೆಂಬಲ ವ್ಯಕ್ತಪಡಿಸಿ ವಿವಿಧ ಸಂಘಟನೆ­ಗಳ ಮುಖಂಡರು ಮಿನಿವಿಧಾನಸೌಧದ ಎದುರು ಜಯಕಾರ ಹಾಕಿದರು.
ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ವಿರುದ್ಧ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್‌ ಅವರನ್ನು ಆಗ್ರಹಿಸಿದರು.

ಜೆಡಿಎಸ್‌ ಮುಖಂಡ ಆಲ್ತಾಫ್‌ ಕಿತ್ತೂರ, ವಿವಿಧ ಸಂಘಟನೆಗಳ ಮುಖಂ­ಡ­ರಾದ ಅಮೃತ ಇಜಾರಿ, ಸಿದ್ದು ತೇಜಿ, ಬಾಬಾಜಾನ್ ಮುಧೋಳ, ಪೀತಾಂಬರಪ್ಪ ಬಿಳಾರ, ಶಾರುಖ್‌ ಮುಲ್ಲಾ, ಮಹೇಶ ಪತ್ತಾರ, ಆಲ್ತಾಫ್‌ ಹಳ್ಳೂರ, ಗುರುನಾಥ ಉಳ್ಳಿಕಾಶಿ, ರಾಜು ಯರಗುಪ್ಪಿ, ಹನುಮಂತ ಗಾಯಕವಾಡ ಮತ್ತಿತರರು ಇದ್ದರು.

ಟಿಪ್ಪು ಜಯಂತಿ ತಡೆ ಅಸಾಧ್ಯ: ಸಿ.ಎಸ್‌.ಶಿವಳ್ಳಿ
ಹುಬ್ಬಳ್ಳಿ: ಟಿಪ್ಪು ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುವುದು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್‌.ಶಿವಳ್ಳಿ ಹೇಳಿದರು.

ತಾಲ್ಲೂಕು ಆಡಳಿತದಿಂದ ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಟಿಪ್ಪು ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೂರನ ಜನ್ಮ ದಿನಾಚರಣೆಯನ್ನು ವಿರೋಧಿಸುವವರು ರಣಹೇಡಿಗಳು ಎಂದು ಟೀಕಿಸಿದರು.

ಬಿಜೆಪಿ ಮುಖಂಡರಾದ ಬಿ.ಎಸ್‌.­ಯಡಿಯೂರಪ್ಪ, ಜಗದೀಶ ಶೆಟ್ಟರ್‌ ತಮ್ಮ ಅಧಿಕಾರವಧಿಯಲ್ಲಿ ಟಿಪ್ಪುವಿನ ಟೊಪ್ಪಿ ತೊಟ್ಟು, ಖಡ್ಗ ಹಿಡಿದು ಕೊಂಡಾಡಿ­ದರು. ಆದರೆ, ಇದೀಗ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ವಿರೋಧ ವ್ಯಕ್ತಪಡಿ­ಸು­ತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಪ್ರಸಾದ್‌ ಅಬ್ಬಯ್ಯ ಮಾತನಾಡಿ, ಟಿಪ್ಪು ಎಂದಿಗೂ ಹಿಂದೂ ವಿರೋಧಿಯಾಗಿರಲಿಲ್ಲ. ದಲಿತರಿಗೆ ಭೂಮಿ ನೀಡಿದ ದೇಶದ ಏಕೈಕ ರಾಜನಾಗಿದ್ದಾನೆ. ಇಂದಿನ ಯುವ ಪೀಳಿಗೆ ಟಿಪ್ಪುವಿನ ನೈಜ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಸೆಲ್‌ ಮಿಷನ್‌ನ ಪಾದ್ರಿ ಸುದೀರ್‌ ಉಳ್ಳಾಗಡ್ಡಿ, ಬ್ರಿಟೀಷರ ವಿರುದ್ಧ ಹೋರಾ­ಡು­ತ್ತಲೇ ರಣರಂಗದಲ್ಲೇ ಪ್ರಾಣತ್ಯಾಗ ಮಾಡಿದ ಟಿಪ್ಪು ಉದಾತ್ತ ದೇಶಪ್ರೇಮಿ ಎಂದು ಶ್ಲಾಘಿಸಿದರು.

ಟಿಪ್ಪು ಭಾಷಾ ಪ್ರೇಮಿ, ಸಮರ್ಥ ಆಡಳಿತಗಾರ, ದೈವಭಕ್ತನಾಗಿದ್ದ. ದಿಟ್ಟ­ತನ ಮತ್ತು ಶೌರ್ಯಕ್ಕೆ ಟಿಪ್ಪು ಮಾದರಿಯಾಗಿದ್ದ ಎಂದು ಹೇಳಿದರು.
ಹುಬ್ಬಳ್ಳಿಯ ಸಯ್ಯದ್‌ ತಾಜುದ್ದಿನ್‌ ಖಾದ್ರಿ, ಟಿಪ್ಪು ಜಯಂತಿ ಆಚರಿಸಬೇಕು ಎಂಬುದು ಸರ್ಕಾರದ ತೀರ್ಮಾನ. ಇದಕ್ಕೂ, ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿ ವಿಷಯದಲ್ಲಿ ಅನಗತ್ಯವಾಗಿ ಅವಹೇಳನ ನಡೆಯುತ್ತಿರುವುದು ವಿಷಾದದ ಸಂಗತಿ ಎಂದರು.

ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಪಾಲಿಕೆ ಸದಸ್ಯ ಆಲ್ತಾಫ್‌ ಕಿತ್ತೂರ, ಬಷೀರ್‌ ಅಹ್ಮದ್‌ ಗುಡಮಾಲ ಇದ್ದರು.

ಉರ್ದು ಶಾಲೆಗೆ ಭೂಮಿ ದಾನ ಮಾಡಿದ ಹಸನ್‌ಸಾಬ್‌ ಕುಂದಗೋಳ, ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತೀಕ್‌ ಐತಾಳ್‌ ಮತ್ತು ಶೇ 99.36 ಅಂಕ ಗಳಿಸಿದ ಶಫಾ ಭಂಡಾರಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಮತಾ ಸೈನಿಕ ದಳ: ಸಮತಾ ಸೈನಿಕ ದಳ ಮತ್ತು ವಿವಿಧ ದಲಿತ ಸಂಘಟನೆಗಳ ಮಹಾಮಂಡಳದ ವತಿಯಿಂದ ಸಂಘದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು.
ದಳದ ಮುಖಂಡ ಶಂಕರ ಅಜಮನಿ ಮಾತನಾಡಿ, ಟಿಪ್ಪು ಅಪ್ಪಟ ದೇಶಪ್ರೇಮಿ, ಪರಧರ್ಮ ಸಹಿಷ್ಣುವಾಗಿದ್ದ. ಮತಾಂ­ಧರು ಟಿಪ್ಪುವಿನ ಜಯಂತಿ ವಿರೋಧಿ­ಸುತ್ತಿದ್ದಾರೆ ಎಂದರು. ರಮೇಶ ವಡ್ಡಪಲ್ಲಿ, ಎಂ.ಮಹಾದೇವ­ಸ್ವಾಮಿ, ಪ್ರೊ.ಹಾಸಂ ಇಳಕಲ್‌, ಹನುಮಂತ ಗಾಯಕವಾಡ, ರಾಜು ಯರಗುಪ್ಪಿ, ಭರಮಣ್ಣ ಮಂಕಣಿ, ಗಂಗಾಧರ ಪೆರೂರ, ಅಬ್ದುಲ್‌ ಮುಲ್ಲಾ, ಶ್ರೀನಿವಾಸ ವೇಮು, ಶಂಕರ ಎಲಿಮೇತ್ರಿ, ವಿಜಯ ಕಾರೆ ಮಮತಾಜ್‌ ಪಠಾಣ, ಫಾತಿಮಾ ನೂರಾನಿ, ಭಾಗ್ಯಮ್ಮ ಕಲ್ಲು, ನಿರ್ಮಲಾ ಮಾನೆ ಇದ್ದರು.
ಮಸೂತಿ ಓಣಿ: ಗೋಪನಕೊಪ್ಪದ ಜಾಮಿಯಾ ಮಸೀದಿ ಸಮೀಪದ ಮಸೂತಿ ಓಣಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯ ಪಪ್ಪಿ ರಾಯನಗೌಡ್ರ ಅವರು ಹಣ್ಣು, ಸಿಹಿ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಾಮಿಯಾ ಮಸೀದಿಯ ಮುತವಲ್ಲಿ ಅನ್ವರ್‌ ಹಂಚಿನಾಳ, ನಬಿ ರಾಜೇಸಾಬ್‌ ನದಾಫ್‌, ಮಕಬೂಲ್‌ ಬಾನಿ, ಹೈದರ್‌ಸಾಬ್‌ ದಾವಲಬಾಯಿ, ಮುನ್ನಾ ಅರಳಿಕಟ್ಟಿ, ರೆಹಮಾನ್‌ ನದಾಫ, ಮುನೀರ್‌ ಮುಸ್ತಾಕ್‌ ನದಾಫ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT