ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ವಿರುದ್ಧ ಬೌದ್ಧಿಕ ಯುದ್ಧ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರವಾದಿ ಮುಹಮ್ಮದರ ಮೊಮ್ಮಗ ಇಮಾಂ ಹುಸೇನ್ ಅವರ ಬಲಿದಾನದ ಕಥೆ ಕನ್ನಡಿಗರಿಗೇನೂ ಅಪರಿಚಿತವಲ್ಲ. ನಮ್ಮ ಮೊಹರಮ್ ಹಾಡುಗಳ ಮೂಲಕ ಅದು ಕನ್ನಡ ಜನಪದದ ಭಾಗವೇ ಆಗಿಬಿಟ್ಟಿದೆ. ಈ ಹಾಡುಗಳ ಮೂಲಕ ನಾವು ನೆನಪಿಟ್ಟುಕೊಂಡಿರುವ ಘಟನೆಗಳು ನಡೆದದ್ದು  ಕ್ರಿಸ್ತಶಕ 680ರಲ್ಲಿ. ಅದೂ ಕರ್ನಾಟಕದಿಂದ ಬಹುದೂರವಿರುವ ಇರಾಕ್‌ನಲ್ಲಿ. ಸಾವಿರಾರು ವರ್ಷಗಳಿಂದ ಇಮಾಂ ಹುಸೇನ್‌ರನ್ನು ಜನರೇಕೆ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ? ಇದು ಕೇವಲ ಒಂದು ಧರ್ಮಕ್ಕೆ ಅಥವಾ ಒಂದು ಸಮುದಾಯಕ್ಕೆ ಸಂಬಂಧಿಸಿದ ನೆನಪಲ್ಲ. ಅದು ಇಮಾಂ ಹುಸೇನ್ ಪ್ರತಿಪಾದಿಸಿದ ಸಾರ್ವಕಾಲಿಕ ಮತ್ತು ಸಾರ್ವಲೌಕಿಕ ಮೌಲ್ಯಗಳ ನೆನಪು.

ಅರೇಬಿಯಾದ ಬುಡಕಟ್ಟುಗಳ ಕ್ರೌರ್ಯದ ಕತ್ತಲೆ ತೊಡೆದದ್ದು ಪ್ರವಾದಿ ಮುಹಮ್ಮದರು. ಅವರು ತೋರಿಸಿದ ಹಾದಿಯಲ್ಲಿ ತಮ್ಮ ಜನರನ್ನು ಕೊಂಡೊಯ್ಯಲು ಪ್ರಯತ್ನಿಸಿದವರು ಇಮಾಂ ಹುಸೇನ್. ಇದನ್ನೇ ಅವರ ಬದುಕೂ ಪ್ರತಿಪಾದಿಸುತ್ತಿತ್ತು. ಅವರು ಪರಿಭಾವಿಸಿದ ಸಮಾಜದಲ್ಲಿ ಸಮಾನತೆಯೆಂಬ ಮೌಲ್ಯಕ್ಕೆ ಮೊದಲ ಸ್ಥಾನವಿತ್ತು. ಇದೇ ಕಾರಣಕ್ಕೆ ಅವರು ಉಳಿದೆಲ್ಲಾ ಸುಧಾರಕರಿಗಿಂತ ಹೆಚ್ಚು ಹೋರಾಡಬೇಕಾಯಿತಷ್ಟೇ ಅಲ್ಲ ಕೊನೆಗೆ ನಂಬಿದ ಮೌಲ್ಯಗಳಿಗಾಗಿ ಹುತಾತ್ಮನೂ ಆದರು.

ಸಮಾನತೆ ಎಂಬ ಮೌಲ್ಯ ಇಮಾಂ ಹುಸೇನ್ ಅವರ ಮಟ್ಟಿಗೆ ನಾಯಕನೊಬ್ಬ ಅಲಂಕಾರಕ್ಕೆ ಹೇಳುವ ಮಾತಾಗಿರಲಿಲ್ಲ. ಅದು ಅನುಸರಿಸಬೇಕಾದ ಮೌಲ್ಯವಾಗಿತ್ತು. ಜನರು ಇಷ್ಟಪಡದ ಯಝೀದ್ ಅಧಿಕಾರಕ್ಕೆ ಏರಿದಾಗ ಅವನ ಕಪಿಮುಷ್ಟಿಯಿಂದ ಜನರನ್ನು ವಿಮೋಚಿಸುವುದನ್ನು ಅವರು ತನ್ನ ಕರ್ತವ್ಯ ಎಂದು ಭಾವಿಸಿ ಮುಂದುವರಿದರು. ಇದಕ್ಕಾಗಿ ಅವರು ಆರಿಸಿಕೊಂಡದ್ದು ಶಾಂತಿಯ ಹಾದಿಯನ್ನು. ಆದರೆ ಯಝೀದ್ ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಮೋಸದಲ್ಲಿ ಇಮಾಂ ಹುಸೇನ್‌ರ ಸಂಗಾತಿಗಳು ಮತ್ತು ಕುಟುಂಬವನ್ನೇ ಬಲಿತೆಗೆದುಕೊಂಡದ್ದು ಈಗ ಇತಿಹಾಸ. ಈ ಘಟನೆಯನ್ನು ವಿಶ್ವವ್ಯಾಪಿಯಾಗಿ ಇಮಾಂ ಹುಸೇನ್ ಅವರ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಶಿಯಾ ಮುಸ್ಲಿಮರು ಅಶೂರಾ ದಿನವನ್ನು ತಮ್ಮ ದುಃಖವನ್ನು ತೋಡಿಕೊಳ್ಳುವ ದಿನವಾಗಿ ಆಚರಿಸುತ್ತಾರೆ.

ಇಮಾಂ ಹುಸೇನ್ ಪ್ರತಿಪಾದಿಸಿದ ಮೌಲ್ಯಗಳು ಸಾರ್ವಕಾಲಿಕತೆ ಮತ್ತು ಸಾರ್ವಲೌಕಿಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರತೀ ವರ್ಷ ‘ಹುಸೇನ್ ದಿನ’ ವೊಂದನ್ನು ಆಚರಿಸುವ ಪರಿಪಾಠವಿದೆ. ವರ್ತಮಾನದ ಜಗತ್ತು ಎದುರಿಸುತ್ತಿರುವ ತಲ್ಲಣಗಳಿಗೆ ಇಮಾಂ ಅವರ ಬದುಕಿನ ಸಂದೇಶವನ್ನು ಅನ್ವಯಿಸಿ ಅರ್ಥಮಾಡಿಕೊಳ್ಳುವ ಪ್ರಯತ್ನ ಇದು. ಈ ವರ್ಷದ ಹುಸೇನ್‌ ದಿನವನ್ನು ಭಯೋತ್ಪಾದನೆಯೆಂಬ ಪಿಡುಗಿನಿಂದ ಜಗತ್ತನ್ನು ಕಾಪಾಡುವ ಬಗೆ ಹೇಗೆಂಬ ಚಿಂತನೆಗೆ ಮೀಸಲಿಡಲಾಗಿದೆ. ಇಮಾಂ ಹುಸೇನ್ ಬಲಿದಾನವೂ ಇದೇ ಪಿಡುಗಿನ ವಿರುದ್ಧವಾಗಿತ್ತು ಎಂಬುದು ಸ್ಮರಣೀಯ.

ಅಂದು ಯಝೀದ್ ಮಾಡಿದ್ದನ್ನೇ ಈಗ ಐಎಸ್ ಮಾಡುತ್ತಿದೆ. ಆತನ ಕ್ರೌರ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿರುವ ಐಎಸ್ ಏನೇನು ಮಾಡಿದೆ ಎಂಬುದನ್ನು ಮಾಧ್ಯಮಗಳೇ ಜಗತ್ತಿನ ಎದುರು ತೆರೆದಿಟ್ಟಿವೆ. ಯಝೀದ್‌ನ ಪಡೆಗಳು ಹೆಂಗಸರು ಮತ್ತು ಮಕ್ಕಳನ್ನೂ ಬಿಡದೆ ಕೊಲೆ ನಡೆಸಿದ್ದನ್ನು ನೆನಪಿಸುವಂತೆ ಇಂದಿನ ಐಎಸ್ ನಡೆದುಕೊಳ್ಳುತ್ತಿದೆ. ಐಎಸ್ ಅನ್ನು ಹಿಮ್ಮೆಟ್ಟಿಸಿದ ಪ್ರದೇಶದಲ್ಲಿ ಕಾಣಿಸಿರುವ ಸಮೂಹ ಸಮಾಧಿಗಳು ಆ ಸಂಘಟನೆಯ ಕ್ರೌರ್ಯ ಎಂಥದ್ದಾಗಿತ್ತು ಎಂಬುದನ್ನು ಹೇಳುತ್ತಿವೆ.

ಭಯೋತ್ಪಾದನೆಯನ್ನು ಶಸ್ತ್ರಸಜ್ಜಿತವಾಗಿ ಎದುರಿಸುವ ಕೆಲಸವನ್ನು ಸರ್ಕಾರಗಳು, ಸೇನಾ ಪಡೆಗಳು ಮಾಡುತ್ತವೆ. ಆದರೆ ಭಯೋತ್ಪಾದಕರು ‘ಧರ್ಮ ಪ್ರತಿಪಾದನೆ’ ಹೆಸರಿನಲ್ಲಿ ತಮ್ಮ ಕ್ರೌರ್ಯಕ್ಕೆ ಸಮರ್ಥನೆ ಕಂಡುಕೊಳ್ಳುವುದರ ವಿರುದ್ಧ ಒಂದು ಬೌದ್ಧಿಕ ಯುದ್ಧದ ಅಗತ್ಯವಿದೆ. ‘ಹುಸೇನ್ ದಿನ’ದ ಆಚರಣೆ ಈ ಬೌದ್ಧಿಕ ಯುದ್ಧದ ಸಂಕೇತಗಳಲ್ಲಿ ಒಂದು. ಇಮಾಂ  ಅವರ ಬದುಕಿನ ಕಥನವೇ ಅಂಥದ್ದು. ದೇಶ ಮತ್ತು ಭಾಷೆಗಳ ಗಡಿಗಳನ್ನು ಮೀರಿ ಅವರ ಬಲಿದಾನದ ಕಥನ ವ್ಯಾಪಿಸಿರುವುದು ಇದಕ್ಕೆ ದೊಡ್ಡ ಸಾಕ್ಷಿ. ಈ ಕಥನಗಳು ಸಾವಿರಕ್ಕೂ ಮೀರಿದ ವರ್ಷಗಳಿಂದ ಜನರ ನೆನಪಿನಲ್ಲಿ ಮುಂದುವರಿಯುತ್ತಿರುವುದರ ಹಿಂದೆ ಇರುವುದು ಶಾಂತಿಯೆಂಬ ಮೌಲ್ಯವನ್ನು ಜನರು ಸ್ವೀಕರಿಸಿರುವುದಕ್ಕೆ ಸಂಕೇತವಾಗುತ್ತದೆ. ಇದು ಜಗತ್ತು ಅಸ್ತಿತ್ವ ಇರುವ ತನಕವೂ ಮುಂದುವರಿಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಸಾಮಾಜಿಕ ಬದಲಾವಣೆಗೆ ಶ್ರಮಿಸುವವರೆಲ್ಲರೂ ಅನುಸರಿಸುವ ಮೌಲ್ಯಗಳೆಂದರೆ ಸತ್ಯ, ನ್ಯಾಯ ಮತ್ತು ಉದಾತ್ತವಾದ ಬದುಕು. ಇಮಾಂ ಹುಸೇನ್ ಅವರು ತಮ್ಮ ಕೊನೆಯ ಕ್ಷಣದ ತನಕವೂ ಪ್ರತಿಪಾದಿಸಿದ್ದು ಇದನ್ನೇ. ಈ ಮೌಲ್ಯಗಳಿಗೆ ಚ್ಯುತಿಯುಂಟಾದಾಗ ಅವರು ಅದನ್ನು ಎದುರಿಸಿ ನಿಂತರು. ಇದನ್ನು ಇತಿಹಾಸ ದಾಖಲಿಸಿದೆ. ಅವರಲ್ಲಿ ಇದ್ದದ್ದು ಸಹನೆಯೆಂಬ ಅಸ್ತ್ರದ ಅಪರಿಮಿತ ಪೂರೈಕೆ. ಎಲ್ಲಾ ಬಗೆಯ ಒತ್ತಡಗಳನ್ನು ಎದುರಿಸಿ ನಿಲ್ಲುವುದಕ್ಕೆ ಅವರಿಗೆ ಸಹಕರಿಸಿದ್ದೂ ಈ ಸಹನೆಯೆಂಬ ಆಯುಧವೇ. ಎಲ್ಲಾ ಯಾತನೆಗಳಿಗೆ ಅವರು ಎದೆಯೊಡ್ಡಿದರೇ ಹೊರತು ಅದರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಲಿಲ್ಲ. ಸಮಾನತೆ ಮತ್ತು ಸತ್ಯದಂಥ ಮೌಲ್ಯಗಳಿಗೆ ಬದ್ಧರಾಗಿರುವವರು ಈ ಕ್ಷಣದಲ್ಲಿ ಮಾಡಬೇಕಾಗಿರುವುದು ಇದನ್ನೇ.

ಮನುಕುಲವನ್ನೇ ನಾಶ ಮಾಡುವುದಕ್ಕೆ ಪಣತೊಟ್ಟಂತೆ ಇರುವ ಭಯೋತ್ಪಾದನೆಯಂಥ ಸಮಸ್ಯೆಯನ್ನು ನಾವು ಎದುರಿಸಬೇಕಾಗಿರುವುದು ಇದೇ ಬಗೆಯಲ್ಲಿ ತಾನೇ?  ಜಾಗತಿಕ ಶಾಂತಿಗೆ ಈಗ ಅಗತ್ಯವಿರುವುದು ಭಯೋತ್ಪಾದನೆಗೆ ಬೆದರದೇ ಇರುವ ಒಂದು ಮನಃಸ್ಥಿತಿ. ಬೇರೆ ಬೇರೆ ಬಗೆಯಲ್ಲಿ ಮನುಕುಲವನ್ನು ಒಡೆಯುವ ಭಯೋತ್ಪಾದಕ ತಂತ್ರಗಳನ್ನು ಅಲ್ಲಗಳೆಯಲು ಬೇಕಾಗಿರುವ ಸಹನೆ. ಇಮಾಂ ಹುಸೇನ್  ತಮ್ಮ ಅನುಯಾಯಿಗಳಿಗೆ ಹೇಳಿದ ಮಾತುಗಳನ್ನಿಲ್ಲಿ ನೆನಪಿಸಿಕೊಳ್ಳಬಹುದು ‘ನಾನಿಲ್ಲಿಗೆ ಬಂದಿರುವುದು ಹಿಂಸೆಗಾಗಿಯಲ್ಲ. ಅಥವಾ ಶೋಷಣೆಯನ್ನು ಹರಡುವುದಕ್ಕಾಗಿಯೂ ಅಲ್ಲ. ನನ್ನ ಅಜ್ಜ, ಅಲ್ಲಾಹುವಿನ ಸಂದೇಶ ವಾಹಕರು ಕಟ್ಟಿದ ಸಮಾಜದ ಸುಧಾರಣೆಗೆ. ಕೆಡುಕನ್ನು ದೂರವಿರಿಸಿ ಒಳಿತಿನ ಮಹತ್ವವನ್ನು ಎತ್ತಿ ಹಿಡಿಯುವುದಕ್ಕೆ’.

ವರ್ತಮಾನದ ಜಗತ್ತಿನ ಮುಂದಿರುವ ದೊಡ್ಡ ಸವಾಲು ಇದುವೇ ತಾನೇ. ಕೆಡುಕನ್ನು ದೂರವಿರಿಸಿ ಒಳಿತಿನ ಮಹತ್ವವನ್ನು ಎತ್ತಿ ಹಿಡಿಯುವುದಕ್ಕೆ ಇರುವ ಸವಾಲುಗಳಿಗೆ ಇಂದು ಬೇಕಾಗಿರುವುದು ಕೇವಲ ಸೈನ್ಯದ ಶಕ್ತಿಯಷ್ಟೇ ಅಲ್ಲ. ಭಯೋತ್ಪಾದನೆಯ ಬೇರುಗಳಿರುವುದು ತಪ್ಪು ವ್ಯಾಖ್ಯಾನಗಳಲ್ಲಿ, ಮನುಕುಲವನ್ನು ಒಡೆದು ಆಳುವ ಪ್ರಚಾರಾಂದೋಲನಗಳಲ್ಲಿ. ನಮ್ಮ ಸೋದರರನ್ನು ಈ ಬಗೆಯ ಒಡೆದು ಆಳುವ ಕುಪ್ರಚಾರಗಳಿಂದ ದೂರವಿಡುವ ದೊಡ್ಡ ಸವಾಲಿದೆ. ಅದರ ಜೊತೆ ಜೊತೆಯಲ್ಲೇ ಒಳಿತಿನ ಮಹತ್ವವನ್ನು ಎತ್ತಿಹಿಡಿಯಬೇಕಾಗಿದೆ. ‘ಹುಸೇನ್ ದಿನ’ ಎಂಬುದು ಕೇವಲ ಸ್ಮರಣೆಯ ದಿನವಷ್ಟೇ ಅಲ್ಲ. ಅದು ವರ್ತಮಾನದಲ್ಲಿ ಸಾಗಬೇಕಿರುವ ಹಾದಿಯ ಬೆಳಕೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT