ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಧಾರಣೆಯಲ್ಲೂ ಕಾಡುವ ಕಾಯಿಲೆ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇಂದು ಮಧುಮೇಹಿಗಳ ಸಂಖ್ಯೆ ಜಾಗತಿಕವಾಗಿ ಹೆಚ್ಚುತ್ತಿದೆ. ಹೆಚ್ಚುತ್ತಿರುವ ನಗರೀಕರಣ, ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆ, ಆಹಾರಸೇವನೆಯಲ್ಲಿ ಬದಲಾವಣೆ, ಹೆಚ್ಚುತ್ತಿರುವ ಬೊಜ್ಜು - ಇವೆಲ್ಲವೂ ಇದಕ್ಕೆ ಕಾರಣ ಎನ್ನುವುದು ನಿರ್ವಿವಾದ.

ಇದರ ಜೊತೆಗೆ ತಾಯ್ತನವೆಂಬ ಮಧುರ ಕ್ಷಣಗಳನ್ನು ಸಂತೋಷದಿಂದ ಅನುಭವಿಸಬೇಕು, ಏನೆಲ್ಲಾ ತಿಂದು ತನ್ನ ಗರ್ಭಸ್ಥ ಶಿಶುವನ್ನು ಹೇಗೆ ಆರೋಗ್ಯಪೂರ್ಣವಾಗಿ ಬೆಳೆಸಬೇಕು ಎಂದು ಲೆಕ್ಕಾಚಾರ ಹಾಕುತ್ತಿರಬೇಕಾದರೆ,  ಮಧುಮೇಹ ಉಸ್ಥಿತಿಯನ್ನು ಸಾರಿ ಬಿಡುತ್ತದೆ. ನಿರ್ಲಕ್ಷಿಸಿದರೆ ಇದು ತಾಯಿ ಹಾಗೂ ಮಗು – ಇಬ್ಬರಿಗೂ ತೊಡಕಾಗಬಲ್ಲದು. ಹಾಗಾಗಿ ರೋಗಿಗಳು ಹಾಗೂ ಜನಸಾಮಾನ್ಯರಲ್ಲಿ ಈ ಬಗ್ಗೆ ಮಾಹಿತಿ ಇರಲೇಬೇಕು.

ವಿಶ್ವದಾದ್ಯಂತ ಮಧುಮೇಹ ಸುಮಾರು ಶೇ. 3ರಿಂದ 5ರಷ್ಟು ಗರ್ಭಧಾರಣೆಯನ್ನು ಬಾಧಿಸಿದರೆ ಭಾರತದಲ್ಲಂತೂ ಗರ್ಭಧಾರಣೆಯಲ್ಲಿ ಮಧುಮೇಹ ಬರುವ ಸಂಭವ ಶೇ. 16ರಿಂದ 18ರಷ್ಟು. 

ಇದು ಎರಡು ರೀತಿಯದ್ದಾಗಿರಬಹುದು:
* ಗರ್ಭಧಾರಣೆಯಲ್ಲಿಯೇ ಪ್ರಥಮ ಬಾರಿಗೆ ಮಧುಮೇಹ ಕಾಣಿಸಿಕೊಳ್ಳುವುದು. (ಶೇ. 88ರಷ್ಟು) ಇದನ್ನು ಜಿ.ಡಿ.ಎಂ. (ಗೆಸ್ಟೇಶನಲ್ ಡಯಾಬಿಟಿಸ್ ಮೆಲ್ಲಿಟಸ್) ಎನ್ನುತ್ತಾರೆ.

* ಗರ್ಭಧಾರಣೆಗೆ ಮೊದಲೇ ಮಧುಮೇಹ ಇರುವುದು. ( ಟೈಪ್‌–1: ಶೇ. 7.5ರಷ್ಟು / ಟೈಪ್– 2: ಶೇ.  2.5ರಷ್ಟು) ಏನಿದು ಜಿ.ಡಿ.ಎಂ?: ಜಿ.ಡಿ.ಎಂ. ಎಂದರೆ ಗರ್ಭಧಾರಣೆಯಾದಾಗಲೇ ಮಧುಮೇಹ ಮೊದಲ ಬಾರಿಗೆ ಕಾಣಿಸಿಕೊಳ್ಳುವುದು.

* ಯಾರಲ್ಲಿ ಶರೀರದ ತೂಕ ಅಧಿಕವಾಗಿ ಇರುತ್ತದೆಯೋ (ಬಿ.ಎಂ.ಐ.> 30ಕ್ಕಿಂತ ಹೆಚ್ಚಾಗಿದ್ದರೆ)

* ಮೊದಲ ಗರ್ಭಧಾರಣೆಯಲ್ಲಿ 4ರಿಂದ 4.5ಕೆ.ಜಿ.ಗೂ ಅಧಿಕ ತೂಕದ ಮಗು ಪಡೆದಿದ್ದರೆ

* ಕುಟುಂಬದಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ, ಸಹೋದರಿ ಮಧುಮೇಹಿಗಳಾಗಿದ್ದರೆ

* ಪಿ.ಸಿ.ಓ.ಡಿ. ಸಮಸ್ಯೆ ಇದ್ದರೆ (ಪಾಲಿಸಿಸ್ಟಿಕ್ ಓವೆರಿಯನ್ ಡಿಸೀಸ್)

* ಪದೇ ಪದೇ ಗರ್ಭಪಾತವಾಗುತ್ತಿದ್ದರೆ / ಹೊಟ್ಟೆಯೊಳಗೆ ಮಗು ಸತ್ತು ಹೋಗಿದ್ದರೆ

* ಗರ್ಭಾವಸ್ಥೆಯಲ್ಲಿ ನೆತ್ತಿನೀರು ಅಧಿಕವಾಗಿದ್ದರೆ

* ತಡವಾದ ತಾಯ್ತನ (> 26 ವರ್ಷಗಳು)

* ಪದೇ ಪದೇ ಯೋನಿ ಸೋಂಕಾಗುವವರಲ್ಲಿ, ಧೂಮಪಾನಿ, ಮದ್ಯಪಾನಿಗಳಲ್ಲಿ. 

ಜಿ.ಡಿ.ಎಂ. ಯಾಕೆ ಉಂಟಾಗುತ್ತದೆ ?
ಗರ್ಭಧಾರಣೆಯಲ್ಲಿ  ಇನ್ಸುಲಿನ್ ಬೇಡಿಕೆ ಸಹಜವಾಗಿಯೇ ಹೆಚ್ಚುತ್ತದೆ. ಇನ್ಸುಲಿನ್ ಪ್ರತಿರೋಧ ಹೆಚ್ಚಾಗುತ್ತದೆ. ಯಾರಲ್ಲಿ ಈ ಪ್ರತಿರೋಧವನ್ನು ಎದುರಿಸಲು ಸಾಧ್ಯವಿಲ್ಲವೋ ಅಂಥವರು ಜಿ.ಡಿ.ಎಂ.ಗೆ ತುತ್ತಾಗುತ್ತಾರೆ. ಗರ್ಭಧರಿಸುವ ಪ್ರತಿ ಮಹಿಳೆಯರನ್ನೂ ಸಾರ್ವತ್ರಿಕ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸುವುದು ಸೂಕ್ತ.

ಭಾರತ ಗರ್ಭಿಣಿಯರ ಮಧುಮೇಹ ಸಂಶೋಧನಾ ಸಂಸ್ಥೆಯ(DIPSI) ಪ್ರಕಾರ ಮೊದಲ ಬಾರಿಗೆ ಗರ್ಭಧಾರಣೆಯಾದಾಗ ನಂತರ 24ರಿಂದ  28 ವಾರಗಳಲ್ಲಿ ಹೀಗೆ ಕನಿಷ್ಠ ಎರಡು ಬಾರಿಯಾದರೂ ಪರೀಕ್ಷಿಸಬೇಕು. ಸರಿಯಾಗಿ ನಿರ್ವಹಣೆಯಾಗದಿದ್ದರೆ ತಾಯಿ ಹಾಗೂ ಮಗು ಇಬ್ಬರಿಗೂ ಅಪಾಯಗಳಿವೆ.

ತಾಯಿಯಲ್ಲಿ: ಪದೇ ಪದೇ ಗರ್ಭಪಾತವಾಗಬಹುದು. ಏರು ರಕ್ತದೊತ್ತಡ, ಟಾಕ್ಸೀಮಿಯಾ ಹೆಚ್ಚು. ಅವಧಿಪೂರ್ವ ಜನನ ಆಗಬಹುದು. ಗರ್ಭಾಶಯದಲ್ಲಿ ಹೆಚ್ಚು ನೀರು ಸೇರುವಿಕೆ, ಪ್ರಸವದಲ್ಲಿ ಅಧಿಕ ರಕ್ತಸ್ರಾವ, ಪ್ರಸವದ ನಂತರ ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚು.  ಎದೆಹಾಲು ಕಡಿಮೆಯಾಗಬಹುದು. ಮುಂದೆ ವಯಸ್ಸಾದ ಮೇಲೆ ಟೈಪ್‌–2 ಮಧುಮೇಹ ಬರುವ ಸಂಭವ ಹೆಚ್ಚು.

ಮಗುವಿಗಾಗುವ ತೊಂದರೆಗಳು: ಗರ್ಭಸ್ಥ ಶಿಶುವಿನ ತೂಕ ನಾಲ್ಕು ಕೆ.ಜಿ.ಗಿಂತ ಹೆಚ್ಚಾಗುವುದು, ಮಗುವಿನ ತಲೆಬುರುಡೆ ಸರಿಯಾಗಿ ವಿಕಾಸವಾಗದೇ ಇರುವುದು, ಜನ್ಮಜಾತ ವೈಕಲ್ಯಗಳ ಸಂಭವ 2–3ಪಟ್ಟು ಹೆಚ್ಚಾಗುವುದು (5–9%), ಅಕಾಲಿಕ ಹೆರಿಗೆ, ಹೆಚ್ಚುವ ಶಸ್ತ್ರಚಿಕಿತ್ಸೆಯ ಸಂಭವದಿಂದ ಉಸಿರಾಟದ ತೊಂದರೆ(ಎ.ಆರ್.ಡಿ.ಎಸ್.),

ಹೊಟ್ಟೆಯಲ್ಲೇ ಮಗು ಸತ್ತು ಹೋಗುವುದು, ನವಜಾತ ಶಿಶುವಿಗೂ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಕಡಿಮೆಯಾಗುವುದು, ಎಲೆಕ್ಟ್ರೋಲೈಟ್ ಮಟ್ಟದಲ್ಲಿ ಏರು ಪೇರು  – ಇವೆಲ್ಲವುಗಳಿಂದ ಸೆಳೆವು ರೋಗ(ಸೀಜರ್ಸ್) ಉಂಟಾಗಬಹುದು. ಜಿ.ಡಿ.ಎಂ.ನಲ್ಲಿ ಹುಟ್ಟಿದ ಶೇ. 30–80ರಷ್ಟು ಮಕ್ಕಳಲ್ಲಿ ಬಾಲ್ಯದಲ್ಲೇ ಬೊಜ್ಜು ಹಾಗೂ ನಂತರದ ದಿನಗಳಲ್ಲಿ ಟೈಪ್–2 ಮಧುಮೇಹ ಬರುವ ಸಂಭವವೂ ಹೆಚ್ಚು.

ಆದರೆ ಮಧುಮೇಹದ ಸೂಕ್ತ ನಿರ್ವಹಣೆ ಮಾಡಿದರೆ ಆರೋಗ್ಯಪೂರ್ಣ ಮಗುವನ್ನು ಪಡೆಯಲು ಸಾಧ್ಯವಿದೆ. ಅದಕ್ಕೇನು ಮಾಡಬೇಕು?  ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕ್ರಮಬದ್ದವಾದ ಆಹಾರಪದ್ಧತಿಯನ್ನು ಅನುಸರಿಸಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕು. ಅಧಿಕ ತೂಕವಿದ್ದವರು ಗರ್ಭಧಾರಣೆಗೆ ಮೊದಲೇ ತೂಕ ನಿಯಂತ್ರಣ ಮಾಡಿಕೊಳ್ಳಬೇಕು.

ಗರ್ಭಧಾರಣೆಯಲ್ಲಿ ಮಧುಮೇಹದ ನಿರ್ವಹಣೆ: ಒಮ್ಮೆ ಜಿ.ಡಿ.ಎಂ. ಇದೆ ಎಂದು ಪತ್ತೆಯಾದಲ್ಲಿ / ಮಧುಮೇಹವಿರುವವರು ಗರ್ಭ ಧರಿಸಿದಲ್ಲಿ ಸ್ತ್ರೀರೋಗತಜ್ಞರು, ಮಧುಮೇಹತಜ್ಞರು, ಆಹಾರತಜ್ಞರು, ಮಕ್ಕಳ ತಜ್ಞರ ಚಿಕಿತ್ಸೆ-ಸಲಹೆ ಪಡೆಯುವುದು ಅತ್ಯುತ್ತಮ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆ ಸ್ವತಃ ಆಹಾರಸೇವನೆ, ವ್ಯಾಯಾಮದ ಪ್ರಾಮುಖ್ಯದ ಬಗ್ಗೆ ತಿಳಿದುಕೊಳ್ಳಬೇಕು. 

ನಿಯಮಿತವಾಗಿ ಮಾತ್ರೆಗಳ ಸೇವನೆ, ಇನ್ಸುಲಿನ್ ಇಂಜೆಕ್ಷನ್‌ನ್ನು ಸ್ವತಃ ತೆಗೆದುಕೊಳ್ಳುವುದನ್ನು ಕಲಿಯಬೇಕು. ನಿಯಮಿತ ಪ್ರಸವಪೂರ್ವ ತಪಾಸಣೆಯನ್ನು 20 ವಾರಗಳವರೆಗೆ ತಿಂಗಳಿಗೊಮ್ಮೆ ನಂತರ, 30 ವಾರಗಳವರೆಗೆ 15 ದಿನಕ್ಕೊಮ್ಮೆ, ನಂತರ ವಾರಕ್ಕೊಮ್ಮೆ ಹೆರಿಗೆಯ ವರೆಗೆ ತಪಾಸಣೆ ಮಾಡಿಸಿಕೊಳ್ಳಬೇಕು.

ಆಹಾರಸೇವನೆಯಲ್ಲಿ ಸೂಕ್ತ ನಿಯಮವನ್ನು ಪಾಲಿಸಬೇಕು. ಆಹಾರವಿಭಜನೆಯನ್ನು ಮಾಡಿಕೊಂಡು ಚಿಕ್ಕ ಚಿಕ್ಕ ಆಹಾರವನ್ನು 2–3 ಗಂಟೆಗೊಮ್ಮೆ ಸೇವಿಸಿ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಹಣ್ಣು, ತರಕಾರಿಗಳು, ನಾರಿನಾಂಶವುಳ್ಳ ಸೊಪ್ಪುಗಳು, ದ್ವಿದಳ ಧಾನ್ಯಗಳು, ಮೊಳಕೆಕಾಳುಗಳು ಹೆಚ್ಚಿರಲಿ.

ತಜ್ಞರ ಸಲಹೆಯ ಮೇರೆಗೆ ವಾಕಿಂಗ್, ಯೋಗ ಮಾಡಿ ಮಧುಮೇಹದ ನಿರ್ವಹಣೆ ಮಾಡಿಕೊಂಡರೆ ತಾಯಿ, ಮಗುವಿಗಾಗುವ ಅಪಾಯವನ್ನು ತಪ್ಪಿಸಿ ಆರೋಗ್ಯಪೂರ್ಣ ಮಗುವನ್ನು ಪಡೆಯಬಹುದು. ಸೂಕ್ತ ನಿರ್ವಹಣೆಯಾದಲ್ಲಿ ಮಧುಮೇಹವಿದ್ದರೂ ತಾಯ್ತನದ ಮಧುರ ಕ್ಷಣಗಳನ್ನು ನಿರಾತಂಕವಾಗಿ ಅನುಭವಿಸಬಹುದು.

(ಡಾ. ವಿಣಾ ಭಟ್‌ ಭದ್ರಾವತಿ, ಸ್ತ್ರೀರೋಗತಜ್ಞರು (9480353878)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT