ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಮಿಶ್ರ ಮಧುಮೇಹ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮಾನವನು ತನ್ನ ದೇಹದಲ್ಲಿಯೇ ಲಭ್ಯವಿರುವ ಪದಾರ್ಥಗಳು ಉತ್ಪಾದಿಸಿದ ಪ್ರತಿಕಾಯಗಳ ಪ್ರಭಾವದಿಂದ ರಕ್ಷಣೆ  (Immunity) ಪಡೆಯುವುದರ ಬದಲಾಗಿ ರೋಗ ಪಡೆಯುತ್ತಿದ್ದಾನೆ. ಇಂಥ ಅಪಾಯಕಾರಿ ಬೆಳವಣಿಗೆ ಹಲವು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಕಂಡುಬರುತ್ತಿರುವುದು ವಿಷಾದದ ಸಂಗತಿ.

ಈ ಬೆಳವಣಿಗೆಯಿಂದ ಪ್ರವರ್ಗ –1 ಅಥವಾ type–1 ಡಯಾಬಿಟಿಸ್‌ ಮತ್ತು ಪ್ರವರ್ಗ–2 ಅಥವಾ type –2 ಡಯಾಬಿಟಿಸ್‌ ಒಂದೇ ಮಾನವ ದೇಹದಲ್ಲಿ ಉದ್ಭವವಾಗುತ್ತಿರುವುದನ್ನು ವೈಜ್ಞಾನಿಕವಾಗಿ ಗುರುತಿಸಲಾಗಿದೆ. ಇಂಥ ಪ್ರವರ್ಗದ ಮಧುಮೇಹಕ್ಕೆ ಈಗ ಮಿಶ್ರ ಮಧುಮೇಹ, ಜೋಡಿ ಮಧುಮೇಹ, Hybrid diabetes, Doub*e diabetes ಎಂಬುದಾಗಿ ನಾಮಕರಣ ಮಾಡಲಾಗಿದೆ.

ಇವೆರಡೂ ಪ್ರವರ್ಗಗಳು ಒಬ್ಬರಲ್ಲೇ ಇರುವುದನ್ನು ಗುರುತಿಸುವುದಾದರೂ ಹೇಗೆ ಎಂದರೆ, ಮಕ್ಕಳಲ್ಲಿ ಮಿಶ್ರ ಮಧುಮೇಹವಿದ್ದರೆ ಇದು Auto immune ಮೂಲದಿಂದ ಬಂದಿರುವುದಾದರೆ ಇನ್ಸುಲಿನ್‌ಗೆ ಪ್ರತಿಕ್ರಿಯೆ ತೋರುತ್ತಾರೆ. ಆಗ ಮಧುಮೇಹ ಹತೋಟಿಗೆ ಬರುತ್ತದೆ. ಆದರೆ ಸ್ಥೂಲಕಾಯ ಮೂಲದ IRನಿಂದ ಉದ್ಭವಿಸಿದ್ದರೆ ಅವರು ಪ್ರತಿಕ್ರಿಯೆ ತೋರದೆ ಮಧುಮೇಹ ಹತೋಟಿಗೆ ಬರುವುದಿಲ್ಲ. ಅವರಿಗೆ Metformin ಎಂಬ ಗುಳಿಗೆಗಳನ್ನೂ ಕೊಟ್ಟರೆ ಮಧುಮೇಹ ಹತೋಟಿಗೆ ಬರುತ್ತದೆ.

ದೊಡ್ಡವರಲ್ಲಿ ಬರುವ ಎರಡನೆಯ ನಮೂನೆಯ ಮಧುಮೇಹ ಮಕ್ಕಳಲ್ಲಿ ಬರುವುದಕ್ಕೆ ಏನು ಕಾರಣ? ಮಕ್ಕಳು ಸ್ಥೂಲಕಾಯರಾಗುತ್ತಿರುವುದು ಏಕೈಕ ಕಾರಣ. ಸ್ಥೂಲಕಾಯಕ್ಕೆ ಜೀವನಶೈಲಿಯೇ ಮುಖ್ಯಕಾರಣ. ಜೀವನಶೈಲಿಯಲ್ಲಿ ಅನಿಯಮಿತವಾಗಿ ಉಣ್ಣುವ ಆಹಾರ ಮತ್ತು ಶಾರೀರಿಕ ವ್ಯಾಯಾಮವಿಲ್ಲದೆ ಬಾಲ್ಯ ಮುಂದುವರಿಸುತ್ತಿರುವುದೇ ಕಾರಣ.

ಕಳೆದ 20–30 ವರ್ಷಗಳಿಂದ ಮಕ್ಕಳಲ್ಲೂ ಹೊಟ್ಟೆಭಾಗದ ಬೊಜ್ಜು ಬೆಳೆದು ಸ್ಥೂಲಕಾಯ ಆವರಿಸಿಕೊಳ್ಳುತ್ತಿರುವುದರಿಂದ ಎರಡನೆಯ ನಮೂನೆ ಮಧುಮೇಹ ಮಕ್ಕಳಲ್ಲಿ ಕಂಡುಬರುತ್ತಿದೆ.

ಆರೋಗ್ಯಕರ ಮಕ್ಕಳಲ್ಲಿ ಜೀರ್ಣಾಂಗಗಳ ಕ್ರಿಯೆಯಿಂದ ಉಂಡ ಆಹಾರ ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಆಗ ಮೇದೋಜೀರಕಾಂಗದಿಂದ ಇನ್ಸುಲಿನ್ ಬಿಡುಗಡೆಯಾಗಿ, ಜೀವಕೋಶಗಳ ಬಾಗಿಲುಗಳನ್ನು ತೆಗೆದು ರಕ್ತದಲ್ಲಿರುವ ಗ್ಲುಕೋಸ್ ಜೀವಕೋಶಗಳೊಳಗೆ ಅವಿರೋಧವಾಗಿ ಪ್ರವೇಶಿಸಲು ಅನುವು ಮಾಡಿಕೊಡುವುದರಿಂದ ಮತ್ತು ಜೀವಕೋಶದೊಳಗೆ ಗ್ಲುಕೋಸ್ ಉರಿದು ಭಸ್ಮವಾಗುವುದರಿಂದ ಗ್ಲುಕೋಸ್ ಅಧಿಕವಾಗಿ ಶೇಖರಣೆಯಾಗುವುದಿಲ್ಲ.

  ಕಾಲಕ್ರಮೇಣ ಅಧಿಕವಾಗಿ ಶೇಖರಣೆಯಾಗುತ್ತಿರುವ ಗ್ಲುಕೋಸ್ ಮಕ್ಕಳಾದರೂ ಕರುಣೆ ತೋರಿಸದೇ ಮಧುಮೇಹದಿಂದ ದೊಡ್ಡವರಲ್ಲಾಗುವ ದಶವ್ಯಾಧಿಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಹೃದ್ರೋಗ, ಅಂಧತ್ವ, ಮೂತ್ರಪಿಂಡ ವೈಫಲ್ಯಗಳಿಗೆ ಕಾರಣವಾಗುತ್ತದೆ.

ಮಕ್ಕಳಲ್ಲಿ ಮತ್ತು ಯವ ಜನಾಂಗದಲ್ಲಿ ಯಾರು ಮಿಶ್ರ ಮಧುಮೇಹಕ್ಕೆ ಗುರಿಯಾಗುತ್ತಾರೆಂದರೆ:
* ಮೈನೆರೆಯುತ್ತಿರುವ ಹೆಣ್ಣುಮಕ್ಕಳು
* ಸ್ಥೂಲಕಾಯದವರು
* ಕುಟುಂಬ ಸದಸ್ಯರಲ್ಲಿ ಮಧುಮೇಹದ ಅನುವಂಶೀಯತೆ ಇರುವವರು
* ಅಮೆರಿಕನ್ ಭಾರತೀಯರು
* ಇನ್ಸುಲಿನ್‌ಗೆ ಪ್ರತಿರೋಧ ತೋರುವ ಗುಣ ಹೊಂದಿರುವವರು.

ಪ್ರಪ್ರಥಮವಾಗಿ ಮಕ್ಕಳಲ್ಲಿ 2ನೇ ನಮೂನೆ ಮಧುಮೇಹವನ್ನು ಗುರುತಿಸಿದ್ದು 1979ರಲ್ಲಿ. ಆ ಮಗು ಅಮೆರಿಕ ದೇಶದ್ದು; ಅದರೆ ಅದು ಭಾರತೀಯ ಮೂಲದ್ದು. ಅದಕ್ಕೆ ಕಾರಣವಿದೆ, ಏನೆಂದರೆ ಭಾರತೀಯರು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅವರಲ್ಲಿ ಮಧುಮೇಹವನ್ನು ಹೊತ್ತಿರುವ ವಂಶವಾಹಿನಿಗಳಿರುವುದೇ ಕಾರಣ (ಆಧಾರ: ಮಧುಮೇಹ ದಶವ್ಯಾಧಿಗಳ ಮೂಲಗ್ರಂಥ).

ಅಂದಿನಿಂದೀಚೆಗೆ ಗಣನೀಯ ಪ್ರಮಾಣದಲ್ಲಿ ವೈಶ್ವಿಕವಾಗಿ ಅಂಕಿ-ಅಂಶಗಳು ಏರುತ್ತಲೇ ಸಾಗುತ್ತಿವೆ. ಇತ್ತೀಚೆಗೆ  ಸಿಡಿಸಿ – ಸೆಂಟರ್‌ ಫಾರ್ ಡಯಾಬಿಟಿಸ್ ಕಂಟ್ರೋಲ್ ವರದಿಯ ಪ್ರಕಾರ 20 ವರ್ಷದ ವಯೋಮಿತಿಯ ಒಳಗಿರುವವರಲ್ಲಿ 2 ಲಕ್ಷ 8 ಸಾವಿರ ಮಂದಿಯಲ್ಲಿ ಮಧುಮೇಹವನ್ನು ಗುರುತಿಸಲಾಗಿದೆ. ಭಾರತದಲ್ಲೂ ಈ ಅಂಕಿ-ಅಂಶಗಳು ಏರುತ್ತಲೇ ಇವೆ.

ಮಕ್ಕಳಲ್ಲಿ ಮಧುಮೇಹವನ್ನು ಗುರುತಿಸುವುದು ಹೇಗೆ? ಚಿಹ್ನೆಗಳೇನು?
ಮೊದಲಲ್ಲಿ ಚಿಹ್ನೆಗಳು ಏನೂ ಇರಲಾರದು. ಆದರೆ ಕ್ರಮೇಣ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ:

* ತೂಕ ಕ್ಷೀಣಿಸುತ್ತಿರುವುದು
* ಉಂಡರೂ ಹಸಿವು, ಬಾಯಾರಿಕೆ
* ಬಾಯಿ ಒಣಗುವುದು
* ಧಣಿವಾಗುವುದು
* ಭಾರವಾಗಿ ಉಸಿರಾಡುವುದು
* ಗಾಯಗಳು ಒಣಗದಿರುವುದು
* ಹಸ್ತ-ಪಾದಗಳಲ್ಲಿ ಸ್ಪರ್ಶಜ್ಞಾನ ಕ್ಷೀಣಿಸುತ್ತಿರುವುದು

ಇಂಥ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ತಪಾಸಣೆ ಮಾಡಿಸಬೇಕು. 1ನೇ ನಮೂನೆ ಮಧುಮೇಹವೇ ಅಥವಾ 2ನೇ ನಮೂನೆ ಮಧುಮೇಹವೇ ಅಥವಾ ಎರಡೂ ನಮೂನೆಗಳಿರುವ ಮಿಶ್ರ ಮಧುಮೇಹವೇ ಎಂಬುದನ್ನು ವೈದ್ಯರು ಹೇಳುತ್ತಾರೆ.  ಮಧುಮೇಹದ ಮೂಲ-ನಮೂನೆ ಗುರುತಿಸಿದ ನಂತರ ವ್ಯಾಧಿಗೆ ತಕ್ಕಂತೆ ಚಿಕಿತ್ಸೆ ಪ್ರಾರಂಭಿಸಬೇಕು.

ಮಕ್ಕಳಿಗೆ ಮಧುಮೇಹ ಬಾರದಂತೆ ತಡೆಗಟ್ಟುವುದು ಹೇಗೆ? ಅಥವಾ ಬಂದರೆ ಯಾರು ಯಾವ ಎಚ್ಚರಿಕೆ ವಹಿಸಬೇಕು?
ಪೋಷಕರು ಕುಟುಂಬದಲ್ಲಿ;

* ಮಕ್ಕಳ ತೂಕ, ವ್ಯಾಯಾಮದ ಬಗ್ಗೆ ಮಾರ್ಗದರ್ಶನ ನೀಡಬೇಕು.
* ಮಕ್ಕಳಿಗೊಂದು ಪಥ್ಯಾಹಾರ, ಇತರರಿಗೆ ಭೂರೀಭೋಜನವಿರಬಾರದು.
* ಬದಲಾವಣೆಗಳನ್ನು ಕ್ರಮೇಣ ತರಬೇಕು.
* ಕುಟುಂಬದ ದೊಡ್ಡವರೇ ಹೆಚ್ಚು ತಿನ್ನುತ್ತಿದ್ದರೆ, ಹೆಚ್ಚಿನ ಸಮಯ ಟಿವಿ ಮುಂದೆ ಕೂತಿದ್ದರೆ, ಮಕ್ಕಳಿಗೆ ಬೋಧನೆ ಮಾಡುವುದರಿಂದ ಪ್ರಯೋಜನವಿಲ್ಲ.
* ಮಕ್ಕಳು ಮಾತು ಕೇಳದಿದ್ದರೆ, ಅವರಿಗೆ ಹಿತವಾದ ರೀತಿಯಲ್ಲಿ ಮನವರಿಕೆ ಮಾಡಿಸಿ, ಬದಲಾವಣೆ ತನ್ನಿ.
* ಜಂಕ್‌–ಫುಡ್‌ ತಿನ್ನುವುದನ್ನು ನಿಲ್ಲಿಸಿ.

ಸಮಾಜ ಏನು ಮಾಡಬೇಕು?: ಪತ್ರಿಕೆ, ಟಿವಿ, ರೇಡಿಯೋದಂಥ ಸಮೂಹ ಮಾಧ್ಯಮಗಳು ಮತ್ತು ಶೈಕ್ಷಣಿಕ ವ್ಯವಸ್ಥೆಗಳು ತಿಳಿವಳಿಕೆ ಕಾರ್ಯಕ್ರಮಗಳ ಮೂಲಕ ಮಧುಮೇಹದ ಬಗ್ಗೆ ಅರಿವು ಮೂಡಿಸಬೇಕು.

ಶಾಲೆಗಳಲ್ಲಿ ಏನು ಮಾಡಬೇಕು?: ಶಾಲೆಗಳಲ್ಲಿ ಮಕ್ಕಳ ನಡವಳಿಕೆ ಹೇಗಿದೆ, ವಾರ್ಷಿಕ ವೈದ್ಯಕೀಯ ತಪಾಸಣೆ ಹೇಗಿದೆ, ಆಟದ ಮೈದಾನದಲ್ಲಿ ಮಕ್ಕಳು ಚಟುವಟಿಕೆಯಿಂದ ಇದ್ದಾರೆಯೇ ಎನ್ನುವುದನ್ನು ನೋಡಬೇಕು.

ಸರ್ಕಾರ ಏನು ಮಾಡಬೇಕು?: ಸರ್ಕಾರದವರು ಶಾಲೆಗಳಿರುವ ಆಸು-ಪಾಸಿನಲ್ಲಿ ಜಂಕ್‌ ಫುಡ್ ಅಂಗಡಿಗಳಿಗೆ ಪರವಾನಗಿ ಕೊಡದಂತೆ ಕಾನೂನು ಮಾಡಬೇಕು. ಇಂಥ ಕಾನೂನು ಸಿಂಗಾಪುರದಲ್ಲಿದೆ.

(ಡಾ. ವಿ. ಲಕ್ಷ್ಮೀನಾರಾಯಣ, ಎಂ.ಡಿ. ಮೈಸೂರು ವಿಶ್ವವಿದ್ಯಾಲಯ (9449824994)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT