ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಪುಡಿ ಮಾಡಿ; ಮೋಡಿ ನೋಡಿ

ನಳಪಾಕ
Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಲೀಲಾ ಮಂಜುನಾಥ್‌.

ರಸಂ ಪೌಡರ್

ಒಂದು ಪಾವು ಜೇರಿಗೆ, ಕಾಲು ಪಾವು ಕಾಳು ಮೆಣಸು, ತಲಾ ಒಂದು ಚಮಚ ಸಾಸಿವೆ, ಮೆಂತ್ಯ, 25 ಬ್ಯಾಡಗಿ ಒಣಮೆಣಸಿನಕಾಯಿ, ಕಾಲು ಚಮಚ ಇಂಗು, ಅರ್ಧ ಇಂಚು ಚಕ್ಕೆ ಇವಿಷ್ಟನ್ನೂ ಹರಿದು ಪುಡಿ ಮಾಡಿ. (ಮೂರರಿಂದ  ನಾಲ್ಕು ಜನಕ್ಕೆ ಅಡಿಗೆ ತಯಾರಿಸುವಾಗ ಈ ಪುಡಿಯಲ್ಲಿ ಎರಡು ಚಮಚ ತೆಗೆದುಕೊಳ್ಳಿ)

***
ಸಾರಿನ ಪುಡಿ

250 ಗ್ರಾಂ ಧನಿಯಾ, 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ, 100 ಗ್ರಾಂ ಗುಂಟೂರು ಮೆಣಸಿನಕಾಯಿ, ಅರ್ಧ ಪಾವು ಜೀರಿಗೆ, ಕಾಲು ಪಾವು ಮೆಂತ್ಯೆ, ನಾಲ್ಕು ಚಮಚ ಸಾಸಿವೆ, ಒಂದು ಚಮಚ ಕರಿ ಮೆಣಸು, ಕಾಲು ಚಮಚ ಇಂಗು, ತೊಳೆದು ಒಣಗಿಸಿದ ಒಂದು ಕಟ್ಟು ಕೆರಿಬೇವು ಎಲ್ಲವನ್ನು ಚೆನ್ನಾಗಿ ಹುರಿದು ಪುಡಿ ಮಾಡಿ.

ಹೀಗೂ ಮಾಡಬಹುದು
250 ಗ್ರಾಂ ಧನಿಯಾ, 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ, 100 ಗ್ರಾಂ ಜೀರಿಗೆ, 50 ಗ್ರಾಂ ಮೆಂತ್ಯೆ, 25 ಗ್ರಾಂ ಸಾಸಿವೆ, ಒಣಗಿದ ಕರಿಬೇವು, ಚಿಟಿಕೆ ಇಂಗು ಇವಿಷ್ಟನ್ನೂ ಹುರಿದು ಪುಡಿ ಮಾಡಿ.

***
ಮಸಾಲೆ ಸಾರಿನ ಪುಡಿ

250 ಗ್ರಾಂ ಧನಿಯಾ, 25 ಗ್ರಾಂ ಬ್ಯಾಡಗಿ ಮೆಣಸಿನಕಾಯಿ, 100 ಗ್ರಾಂ ಜೀರಿಗೆ, 50 ಗ್ರಾಂ ಮೆಂತ್ಯೆ, 25 ಗ್ರಾಂ ಸಾಸಿವೆ, ಕಡಲೇಕಾಯಿ ಬೀಜದ ಗಾತ್ರದ  ಇಂಗು, ಒಂದು ಕಟ್ಟು ಕರಿಬೇವು, ಒಂದು ಚಮಚ ಕರಿಮೆಣಸು, ಒಂದಿಂಚು ಉದ್ದದ ಚಕ್ಕೆ, ಒಂದು ಲವಂಗ, ಒಂದು ಮೊಗ್ಗು, ಒಂದು ಏಲಕ್ಕಿ – ಎಲ್ಲವನ್ನು ಬೇರೆ ಬೇರೆಯಾಗಿ ಘಮ್ಮೆನ್ನುವಂತೆ ಹುರಿದು ನಂತರ ಪುಡಿ ಮಾಡಿ.

***
ಪುಳಿಯೋಗರೆ ಗೊಜ್ಜಿಗೆ ಪುಡಿ

100 ಗ್ರಾಂ ಧನಿಯಾ, 100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ನಾಲ್ಕು ಚಮಚ ಜೀರಿಗೆ, ಮೂರು ಚಮಚ ಮೆಂತ್ಯೆ, ಎರಡು ಚಮಚ ಕರಿಮೆಣಸು, ಎರಡು ಚಿಟಿಕೆ ಇಂಗು, ಮೂರು ಚಮಚ ಸಾಸಿವೆ, ಒಂದು ಚಮಚ ಕರಿಬೇವು. ಈ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದು ನಂತರ ಬೆರೆಸಿಕೊಂಡು ಪುಡಿ ಮಾಡಿಕೊಂಡರೆ,  ಸಾರಿನ ಪುಡಿ ಸಿದ್ಧ. (ಮೆಣಸಿನಕಾಯಿ ಹುರಿಯುವಾಗ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಕಾದ ನಂತರ ಮೆಣಸಿನಕಾಯಿ ಹಾಕಿದರೆ ಖಾಟು ಬರುವುದಿಲ್ಲ.)

***
ಹುಳಿ ಪುಡಿ

ಅರ್ಧ ಪಾಪು ಧನಿಯಾ, ಅರ್ಧ ಪಾವಿಗಿಂತ ಕೊಂಚ ಕಮ್ಮಿ ಉದ್ದಿನಬೇಳೆ, ಕಾಲು ಪಾವು ಕಡಲೆಬೇಳೆ, ತಲಾ ಒಂದು ಚಿಕ್ಕ ಚಮಚ ಸಾಸಿವೆ, ಜೀರಿಗೆ, ಅರ್ಧ ಚಮಚ ಮೆಂತ್ಯೆ, 100 ಗ್ರಾಂ ಒಣಬ್ಯಾಡಗಿ ಮೆಣಸಿನಕಾಯಿ, ಚಿಟಿಕೆ ಇಂಗು, ಇವಿಷ್ಟನ್ನು ಚನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ.

***
ಪಲ್ಯದ ಪುಡಿ
100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ತಲಾ ಕಾಲು ಪಾವು ಉದ್ದಿನಬೇಳೆ, ಕಡಲೇಬೇಳೆ, ಧನಿಯಾ – ಇವು ನಾಲ್ಕನ್ನೂ ಹುರಿದು ಪುಡಿ ಮಾಡಿಕೊಳ್ಳಿ. ಯಾವುದೇ ತರಕಾರಿ ಪಲ್ಯಕ್ಕೂ, ಪಾಳಿನ ಪಲ್ಯಕ್ಕೂ ಇದನ್ನು ಬಳಸಿಕೊಳ್ಳಬಹುದು.

***
ಮಸಾಲೆ ಪಲ್ಯದ ಪುಡಿ

ಇದೇ ಮಸಾಲೆಗೆ ಉದ್ದ ಅಗಲದ ಚಕ್ಕೆ, ಒಂದು ಲವಂಗ, ಒಂದು ಮೊಗ್ಗು, ಒಂದು ಏಲಕ್ಕೆ ಸೇರಿಸಿ ಹುರಿದು ಪುಡಿ ಮಾಡಿದರೆ, ಮಸಾಲೆ ಪಲ್ಯದ ಪುಡಿ ಸಿದ್ದ. ಈ ಪುಡಿಯೊಂದಿಗೆ ಒಂದು ಚಮಚ ಹುರಿಗಡಲೆ ಪುಡಿಯನ್ನು  ಬಳಸಿದರೆ ಪಲ್ಯದ ರುಚಿ ಹೆಚ್ಚುತ್ತದೆ.

***
ಪೊಂಗಲ್ ಪುಡಿ

ಅರ್ಧ ಪಾವು ಜೀರಿಗೆ, ನಾಲ್ಕು ಚಮಚ ಕರಿಮೆಣಸು, ಎರಡನ್ನು ಚೆನ್ನಾಗಿ ಹುರಿದುಕೊಂಡು ಪುಡಿ ಮಾಡಿ. ಅರ್ಧ ಕಪ್ ಒಣ ಕೊಬ್ಬರಿ ತುರಿ ಬೆಚ್ಚಗೆ ಮಾಡಿ ಇದರೊಂದಿಗೆ  ಸೇರಿಸಿ ಇಡಿ. ನಾಲ್ಕು ಜನಕ್ಕೆ ಪೊಂಗಲ್ ಮಾಡುವಾಗ ಎರಡು ಚಮಚ ಈ ಪುಡಿಯನ್ನು ಸೇರಿಸಿದರೆ ಆಯಿತು. (ಪುಡಿ ತರಿತರಿಯಾಗಿರಲಿ)

***
ವಾಂಗಿಬಾತ್ ಪುಡಿ

ಅರ್ಧ ಪಾವು ಉದ್ದಿನ ಬೇಳೆ, ಅರ್ಧ ಪಾವು ಕಡಲೇಬೇಳೆ, ಕಾಲು ಪಾವು ಧನಿಯಾ, 100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ಕಾಲು ಚಮಚ ಮೆಂತ್ಯೆ,  ಒಂದು ಇಂಚು ಅಗಲ ಉದ್ದದ ಚಕ್ಕೆ, ನಾಲ್ಕು ಮೊಗ್ಗು, ಎರಡು ಲವಂಗ, ಎರಡು ಏಲಕ್ಕಿ, ಎರಡು ಬಿಡಿಸಿದ ಅನಾನಸ್ ಹೂ – ಇವೆಲ್ಲವನ್ನೂ ಹುರಿದು ಪುಡಿ ಮಾಡಿ.

***
ಬಿಸಿ ಬೇಳೆ ಬಾತ್ ಪುಡಿ

ಅರ್ಧ ಪಾವು ಉದ್ದಿನ ಬೇಳೆ, ಅರ್ಧ ಪಾವು ಕಡಲೇಬೇಳೆ, ಅರ್ಧ ಪಾವು ಧನಿಯಾ, ಒಂದು ಇಂಚು ಅಗಲ ಉದ್ದದ ಚಕ್ಕೆ, ನಾಲ್ಕು ಮೊಗ್ಗು, ಮೂರು ಲವಂಗ, ಎರಡು ಏಲಕ್ಕಿ, 50 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ಎರಡ ಎಸಳು ಅನಾನಸ್ ಹೂವು, ತಲಾ ಒಂದೊಂದು ಚಿಟಿಕೆ ಸಾಸಿವೆ, ಜೀರಿಗೆ, ಕರೆಮೇಣಸು, ಮೆಂತ್ಯೆ, ಒಂದು ಚಮಚ ಗಸಗಸೆ – ಇವೆಲ್ಲವನ್ನೂ ಚೆನ್ನಾಗಿ ಹುರಿದು ಪುಡಿ ಮಾಡಿ.

***
ಗ್ರೇವಿ ಪುಡಿ –4 ಜನಕ್ಕೆ ತರಕಾರಿ ಗ್ರೇವಿ

ಕಾಲು ಚಮಚ ಜೀರಿಗೆ, ನಾಲ್ಕು ಕರಿಮೆಣಸು, , ಚಿಟಿಕೆ ಧನಿಯಾ, ಅರ್ಧ ಚಮಚ ಗರಂ ಮಸಾಲ ಪುಡಿ, ಅರ್ಧ ಚಮಚ ಅಚ್ಚ ಮೆಣಸಿದ ಪುಡಿ, ನಾಲ್ಕು ಗೊಡಂಬಿ, ಅರ್ಧ ಚಮಚ ಗಸಗಸೆ, ಚಿಟಿಕೆ ಸೋಂಪು, ಚಿಟಿಕೆ ಹುರಿಗಡಲೆ, ಇವಿಷ್ಟನ್ನೂ ಹುರಿದು ಪುಡಿ ಮಾಡಿ.

***
ಉಪ್ಪಿನಕಾಯಿ ಪುಡಿ

100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ಒಂದು ಚಮಚ ಸಾಸಿವೆ, ಅರ್ಧ ಚಮಚ ಮೆಂತ್ಯೆ ಇವಿಷ್ಟನ್ನೂ ಕೆಂಪಗೆ ಹುರಿದು ಪುಡಿ ಮಾಡಿ, ಚಿಟಿಕೆ ಅರಿಶಿನ ಪುಡಿ, ಕಾಲು ಚಮಚ ಪುಡಿ ಇಂಗು ಸೇರಿಸಿಟ್ಟರೆ, ಕಾಲು ಕೆಜಿ ತರಕಾರಿಯ ಉಪ್ಪಿನಕಾಯಿಗೆ ಖಾರ ಮಸಾಲೆ ಸಿದ್ದವಾಗುತ್ತದೆ.

(ಕೆಂಪು ಬ್ಯಾಡಗಿ ಮೆಣಸಿನಕಾಯಿ ಬದಲು ಹಸಿಮೆಣಸಿನಕಾಯಿ ಬಳಸಿದರೆ ಹಳದಿ ಖಾರದ ಉಪ್ಪಿನಕಾಯಿ ಸಿದ್ದ ಮಾಡಬಹುದು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT