ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಗಳೆ ಇದ್ದರೆ ಇರಲಿ ಎರಡು ಮಕ್ಕಳಿರಲಿ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಏಳನೇ ತರಗತಿ ಓದುವ ಮಗಳಿಗೆ ಇಂಗ್ಲಿಷ್ ಕಲಿಸಿ, ಎರಡನೇ ತರಗತಿ ಸೇರಿದ ಮಗನಿಗೆ ಒತ್ತಕ್ಷರಗಳನ್ನು ಬರೆಸುವಾಗ ಮಧ್ಯೆ ಆಗಾಗ ಪ್ರಶ್ನೆಗಳ ಸರಮಾಲೆಯನ್ನೇ ಹಾಕುವ ಅವನಿಗೆ ಉತ್ತರಿಸುವುದು ತುಸು ಕಷ್ಟವೇ. 

ನನ್ನ ಮಗನ ಇಂದಿನ ಪ್ರಶ್ನೆಯೆಂದರೆ, ‘ಅಮ್ಮ, ನನಗೆ ಮಾತ್ರ ಅಕ್ಕ ಇದ್ದಾಳೆ, ಆಚೆ ಮನೆಯ ಅಭಯಣ್ಣಂಗೆ, ಸುಧಾಂಶುಗೆ, ವಿನಯ ಭಾವಂಗೆ ಎಲ್ಲ ಯಾಕೆ ಅಕ್ಕ ಇಲ್ಲ?’ ಅಂತ ದಿಢೀರನೆ ಕೇಳಿದ ಮುಗ್ಧ ಮನಸ್ಸಿನ ಈ ಪ್ರಶ್ನೆಗೆ ಏನೆಂದು ಉತ್ತರಿಸಲಿ? ಅವನಿಗೆ ಅದು ಸರಿ ಉತ್ತರ ಅಲ್ಲ ಎನಿಸಿದರೆ, ಮತ್ತೆ ಹತ್ತು ಪ್ರಶ್ನೆಗಳನ್ನು ಕೇಳುತ್ತಾನೆ.

ಹಾಗಾಗಿ ಇವನಿಗೆ ಏನಂತ ಉತ್ತರಿಸಲಿ?  ತುಂಬ ವಿಚಾರ ಮಾಡಿ ಹೇಳಿದೆ: ‘ಮಗಾ ಎಲ್ಲರಿಗೂ ಅಕ್ಕ, ತಮ್ಮ ಇರಲೇಬೇಕು ಅಂತೇನೂ ಇಲ್ಲ, ಒಂದೊಂದು ಮನೆಯಲ್ಲಿ ಒಂದೊಂದು ರೀತಿ, ಅದನ್ನೆಲ್ಲಾ ಪ್ರಶ್ನೆ ಮಾಡಬಾರದು.’ ಏನೋ ಸಮಾಧಾನವಾದವನಂತೆ ಹೋಂವರ್ಕ್ ಮುಗಿಸಿ ಅಡಲು ಹೊರಟುಹೋದ.

ಇಬ್ಬರಿಗೂ ಹೋಂವರ್ಕ್ ಮುಗಿಸಿ, ಒಳಗೆ ಅಡುಗೆಗೆ ಕುಕ್ಕರ್ ಇಡಲು ಬರುತ್ತಿರುವಾಗ, ಹೊರಗೆ ಜಗುಲಿಯ ಮೇಲೆ ಕುಳಿತ ನಮ್ಮ ಹೆಂಗಸರ ಕಟ್ಟೆ ಪಟ್ಟಂಗ ಕಿವಿಗೆ ಬಿತ್ತು.ಅಲ್ದೇ ಸರಸಕ್ಕ, ‘ಅವರ ಮನೆ ಪರಿಸ್ಥಿತಿ ನೋಡು, ಒಬ್ಬನೇ ಮಗನಾಗಿದ್ನಲ್ಲೆ, ಎಂಥ ಕಾಯಿಲೆ ಬಂತಾ ಯಂತೇನ, ಏನು ಮಾಡಿದ್ರೂ ಅವನ್ನ ಉಳಿಸಿಕೊಳ್ಳಕ್ಕೇ ಆಜಿಲ್ಯಡ.

ಪಾಪ, ಕೈಗೆ ಬಂದ ತುತ್ತು ಬಾಯಿಗಿಲ್ಲೆ ಅನ್ನೋ ಹಾಂಗಾತು. ಈಗ ಆ ಗಂಡ, ಹೆಂಡತಿ ಗೋಳು ಯಾರಿಗೂ ಬ್ಯಾಡ’ . ಹವ್ಯಕಭಾಷೆಯ ನಮ್ಮ ಈ ಮಾತನ್ನು ಕೇಳಿಸಿಕೊಂಡ ನನ್ನ ಮನಸ್ಸು ಆಗಷ್ಠೇ ಕೇಳಿದ ಮಗನ ಪ್ರಶ್ನೆಗೂ, ಇದಕ್ಕೂ ಸರಪಳಿ ಜೋಡಿಸಲು ಶುರುಮಾಡಿತು.

ಸಂಜೆಯ ಅಡುಗೆ ಮಾಡುತ್ತಿದ್ದರೂ ಮನಸ್ಸು ಮಾತ್ರ ಬೇರೆಯದನ್ನೇ ವಿಚಾರ ಮಾಡುತ್ತಿತ್ತು. ಎಲ್ಲರೂ ತಮಗೆ ಒಂದೇ ಮಗು ಸಾಕೆಂದು  ಬುದ್ಧಿವಂತರಾದ ಅಪ್ಪ-ಅಮ್ಮಂದಿರೇ ಹೇಳುವಾಗ, ಮಕ್ಕಳಿಗೆ ಹುಟ್ಟಿನಿಂದಲೇ ಒಂಟಿತನ ಕಾಡುತ್ತದೆ. ಮಧ್ಯದಲ್ಲಿ ಏನಾದರೂ ಆ ಮಗುವಿಗೆ ಹೆಚ್ಚು ಕಡಿಮೆಯಾದರೆ ಕೊನೆಗೆ ಅನಾಥರಾಗುವುದು ಇವರೇ ತಾನೆ?

ಹಾಗಾದರೆ ಒಂದು ಮಗುವನ್ನು ಕರುಣಿಸಿದ ದೇವರು ಎರಡನೆಯದಕ್ಕೆ ಇಲ್ಲವೆನ್ನುತ್ತಾನೆಯೇ? ಇದು ನಾವೇ ತೋಡಿದ ಬಾವಿಗೆ ನಾವೇ ಬೀಳುವ ವ್ಯವಸ್ಥೆಯಲ್ಲದೆ ಮತ್ತಿನ್ನೇನು ಎನಿಸಿತು. ಒಂದೇ ಮಗು ಬೆಳೆಯುವ  ರೀತಿಗೂ ಎರಡು ಮಕ್ಕಳು ಜೊತೆಯಾಗಿ ದೊಡ್ಡವರಾಗುವ ರೀತಿಗೂ ತುಂಬಾ ವ್ಯತ್ಯಾಸವಿದೆ.

ಒಂದೇ ಮಗುವಿರುವ ತಂದೆ-ತಾಯಂದಿರು ಅವರು ಹೇಳಿದಂತೆ ಕೇಳಿ, ಯಾವ ಕೊರತೆಯ ಅರಿವೂ ಕೂಡ ಆಗದಂತೆ ನೋಡಿಕೊಳ್ಳುತ್ತಾರೆ. ತೀರಾ ಒಬ್ಬಂಟಿಯಾಗಿ ಬೆಳೆಯುವ ಆ ಮಗು ಮುಂದೆ ತನ್ನ ಸ್ವಭಾವವನ್ನೇ ಪೋಷಕರ ಎದುರು ಒಂದು ಅಸ್ತ್ರವಾಗಿ ಪ್ರಯೋಗಿಸುತ್ತದೆ. ಮಗು ಬೆಳೆದು ಎದೆಯ ಮಟ್ಟಕ್ಕೆ ಬಂದು ನಿಂತಾಗ ಅಪ್ಪ-ಅಮ್ಮಂದಿರ ವಾತ್ಸಲ್ಯಕ್ಕಿಂತಲೂ ಅವರ ಸ್ವಾರ್ಥವೇ ಹೆಚ್ಚಾಗಿರುತ್ತದೆ.

ನಾಲ್ಕು ಜನ ಅತಿಥಿಗಳು ಬಂದರೂ ತೀರಾ ಕಿರಿಕಿರಿಯನ್ನು ಅನುಭವಿಸುತ್ತದೆ. ಬದುಕಿನಲ್ಲಿ ಹೊಂದಾಣಿಕೆಯೆಂದರೇನು ಎಂಬುದೇ ತಿಳಿದಿರುವುದಿಲ್ಲ. ಮಗುವನ್ನು ದೊಡ್ಡವನನ್ನಾಗಿ ಮಾಡಿ ವಿಧ್ಯಾಭ್ಯಾಸ ಕೊಡಿಸಿ, ಇನ್ನೇನು ತಮಗೆ ಆಸರೆಯಾಗಬಹುದು ಎಂದು ಕನಸು ಕಾಣುವಾಗ ಅವರೇನಾದರೂ ಇವರನ್ನು ಧಿಕ್ಕರಿಸಿ ಹೋದರೆ ಅಥವಾ ದುರ್ದೈವವಶಾತ್ ಮರಣ ಹೊಂದಿದನೆಂದರೆ, ಈ ಅಪ್ಪ-ಅಮ್ಮನ ಸಂಕಟಕ್ಕೆ ಪಾರವೇ ಇರುವುದಿಲ್ಲ.

ಇಂತಹ ಸನ್ನಿವೇಶವನ್ನು ಊಹೆ ಮಾಡಲಿಕ್ಕೂ ಕಷ್ಟವೆನಿಸುತ್ತದೆ. ಆದರೆ ಜೊತೆಗೆ ಇನ್ನೊಂದು ಮಗುವಿದ್ದಿದ್ದರೆ, ಹೋದ ಜೀವ ಬರದಿದ್ದರೂ ಇರುವ ಜೀವದ ಮುಖ ನೋಡಿಯಾದರೂ ಆ ನೋವನ್ನು ಮರೆಯಬಹುದೇನೊ?  ಎರಡು ಮಕ್ಕಳಿದ್ದರೆ ರಗಳೆ ಎಂದು ಮೊದಲು ಅನ್ನಿಸಿದರೂ, ಅವರ ಬೆಳವಣಿಗೆಯ ಪ್ರತಿ ಹಂತವನ್ನು ನೋಡುವಾಗ ತುಂಬ ಖುಷಿಯೆನಿಸುತ್ತದೆ.

ಅವರ ಪ್ರೀತಿ, ಪರಸ್ಪರ ಹೊಂದಾಣಿಕೆ, ನೋಡಿದವರಿಗೇ ಗೊತ್ತು. ಇವರು ತಮ್ಮ ಹತ್ತಿರ ಏನೇ ಇರಲಿ ಮತ್ತೊಬ್ಬರಿಗೆ ತೋರಿಸಿ, ಹಂಚಿಕೊಂಡು ತಿನ್ನುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ರಕ್ಷಣೆಗೆ  ನಿಲ್ಲುತ್ತಾರೆ. ಅವರ ಹಟ, ರಂಪಾಟ, ಏನೇ ಇದ್ದರೂ ಹೆಚ್ಚು  ಹೊತ್ತು ನಡೆಯುವುದಿಲ್ಲ. ಏಕೆಂದರೆ, ಒಬ್ಬರನ್ನು ನೋಡಿ ಇನ್ನೊಬ್ಬರು ಸುಧಾರಿಸುತ್ತಾರೆ. ಇವರಿಗೆ ಯಾವಾಗಲೂ ಅನಾಥಪ್ರಜ್ಞೆ ಕಾಡುವುದಿಲ್ಲ.

ನಾವು ನಮ್ಮ ಮಕ್ಕಳೇ ನಮಗೆ ಆಸ್ತಿಯೆಂದು ಭಾವಿಸಿದಾಗ ಅವರನ್ನು ಸಾಕುವುದು ಕಷ್ಟವೆನಿಸುವುದಿಲ್ಲ. ಇಂದಿನ ಮಕ್ಕಳು ತುಂಬಾ ಬುದ್ಧಿವಂತರಾಗಿರುವುದರಿಂದ ಅವರಿಗೆ ಬದುಕುವ ಸರಿಯಾದ ಮಾರ್ಗ ತೋರಿಸಿದರೆ ಸಾಕಾಗುತ್ತದೆ.

ಒಂದೇ ಮಗುವಿರುವವರು, ನಾವು ತುಂಬಾ ಕಾಳಜಿಯಿಂದ, ಪ್ರೀತಿಯಿಂದ ಸಾಕಿದ್ದೇವೆ; ನಮ್ಮ ಮಗು ತಪ್ಪು ದಾರಿ ಹಿಡಿಯಲು ಸಾಧ್ಯವೇ ಇಲ್ಲ ಎನ್ನುವುದು ಅವರ ಭ್ರಮೆಯಷ್ಟೆ ಆಗಿರುತ್ತದೆ. ಇಬ್ಬರು ಮಕ್ಕಳಿದ್ದರೆ, ನಾವು ಅವರ ಮೇಲೆ ಹಿಡಿತ ಸಾಧಿಸಬಹುದು ಅನ್ನುವುದಕ್ಕಿಂತ ಒಂದು ರೀತಿಯ ಸುರಕ್ಷತಾ ಭಾವನೆಯಿರುತ್ತದೆ...  ಎಂದೆಲ್ಲ ಅಂದುಕೊಳ್ಳುತ್ತಿರುವಾಗ, ನನ್ನ ಯೋಚನೆಗೆ ಪೂರ್ಣವಿರಾಮವೆನ್ನುವಂತೆ, ‘ಅಮ್ಮಾ ನನಗೆ ನಿದ್ರೆ ಬರುತ್ತಿದೆ’ ಎಂದು ಅಳುತ್ತಾ ಬಂದ ಮಗನ ಕೂಗಿಗೆ ಎಚ್ಚೆತ್ತು ಮತ್ತೆ ನನ್ನ ಮನೆ ಚಾಕರಿ ಶುರು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT