ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ಣ ಸಮಸ್ಯೆಗೆ ‘ಉತ್ತರ’ದ ಹುಡುಕಾಟ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಜಗಳ ತಾರಕಕ್ಕೇರುವ ಹಂತ ತಲುಪಿತ್ತು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಸ್ಥಳೀಯ ಮುಖಂಡರೊಬ್ಬರು ಸಂಧಾನಕಾರನ ಪಾತ್ರ ವಹಿಸಿ ಸಮಾಧಾನಪಡಿಸಿದರು. ಆದರೂ ಇಬ್ಬರ ಮನಸ್ಸಿನಲ್ಲಿ ಈ ವಿಷಯ ಕೆಲ ಹೊತ್ತು ‘ಹೊಗೆ’ಯಾಡಿತು. ಅವರ ಪೈಕಿ ಒಬ್ಬರದು ಸಾಮಾಜಿಕ ಕಾಳಜಿಯ ಕೋಪವಾದರೆ ಮತ್ತೊಬ್ಬರ ಜಗಳ ನಿಷ್ಪ್ರಯೋಜಕ.

ದೆಹಲಿಯಲ್ಲಿ ‘ಹೊಂಜು’ ಕವಿದ ಸುದ್ದಿಯು ಸದ್ದು ಮಾಡಿದ ಸಂದರ್ಭದಲ್ಲಿ ಹುಬ್ಬಳ್ಳಿ ವಿದ್ಯಾನಗರ ಪ್ರದೇಶದ ಬಡಾವಣೆಯೊಂದರಲ್ಲಿ ನಡೆದ ಘಟನೆ ಇದು. ಜಗಳಕ್ಕೆ ಕಾರಣವಾದದ್ದು ಇಲ್ಲಿನ ಕರ್ಕಿ ಹಳ್ಳದ ಬದಿಯಲ್ಲಿ ಕಸ ಸುರಿದು ಅದಕ್ಕೆ ಬೆಂಕಿ ಹಚ್ಚಿದ ವಿಷಯ. ಪರಿಸರ ಕಾಳಜಿಯಿಂದ ಜಗಳವಾಡಿದ್ದು ಈಗ ತಾನೆ ಎಂಜಿನಿಯರಿಂಗ್ ಮುಗಿಸಿರುವ ಯುವಕ. ಪರಿಸರ ಪ್ರೇಮಿಗಳು ಅಥವಾ ಸಾಮಾಜಿಕ ಕಾಳಜಿ ಹೊಂದಿರುವವರು ಮತ್ತು ಪರಸರಕ್ಕೆ ಹಾನಿ ಉಂಟು ಮಾಡುವವರ ನಡುವಿನ ಇಂಥ ವಾಗ್ವಾದ ಇಲ್ಲಿ ಈಗ ಸಾಮಾನ್ಯ.

ಹುಬ್ಬಳ್ಳಿ– ಧಾರವಾಡ ಅವಳಿ ನಗರ ಬೆಳೆದಂತೆಲ್ಲ ಪರಿಸರಕ್ಕೆ ಹಾನಿಯಾಗುವ ಮಾಲಿನ್ಯದ ಪ್ರಸಂಗಗಳು ಹೆಚ್ಚುತ್ತಿವೆ. ಪರಿಸರ ಸಂರಕ್ಷಣೆಯ ಕಾಳಜಿ ಹೊಂದಿರುವವರ ‘ಕೆಲಸ’ವೂ ಹೆಚ್ಚುತ್ತಿದೆ. ಆದರೆ ತಮ್ಮ ಕಾಳಜಿಗೆ ತಕ್ಕ ಫಲ ಸಿಗುತ್ತಿಲ್ಲ ಎಂಬುದು ಅವರ ಆರೋಪ. ಈ ಕಾರಣದಿಂದಲೇ ಇಲ್ಲಿ ಮಾಲಿನ್ಯದ ಸಮಸ್ಯೆ ಸಂಕೀರ್ಣವಾಗಿದೆ ಎಂಬುದು ಅವರ ವಾದ. ಅಭಿವೃದ್ಧಿ ಮತ್ತು ಜೀವನ ವಿಧಾನದಲ್ಲಿ ಆಗಿರುವ ಬದಲಾವಣೆಯ ನಡುವೆ ಪರಿಸರ ಸಂರಕ್ಷಣೆ ಎಂಬ ಸಂಕೀರ್ಣ ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನ ನಿತ್ಯವೂ ನಡೆಯುತ್ತಿದೆ.

ಹುಬ್ಬಳ್ಳಿ– ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ವಾಯು ಮಾಲಿನ್ಯದ ಪ್ರಮುಖ ವಾಹಕ ದೂಳು. ಈ ಭಾಗದ ಭೂಪ್ರಕೃತಿಯೇ ಇದಕ್ಕೆ ಪ್ರಮುಖ ಕಾರಣ ಎಂಬ ವಾದ ಅಧಿಕಾರಿಗಳಿಂದ ಮಾತ್ರವಲ್ಲ, ಪರಿಸರವಾದಿಗಳಿಂದಲೂ ಕೇಳಿಬರುತ್ತಿದೆ. ವಿಜಯಪುರ, ಬಾಗಲಕೋಟೆ, ಬೀದರ್‌, ಕಲಬುರ್ಗಿ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಪ್ರಾಕೃತಿಕವಾಗಿ ಮೇಲೇಳುವ ದೂಳನ್ನು ನಿಯಂತ್ರಿಸುವ ಶ್ರಮವೇ ವ್ಯರ್ಥ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ. ಪ್ರಾಕೃತಿಕವಾಗಿ ಬರುವ ದೂಳಿನೊಂದಿಗೆ ಕಾಮಗಾರಿಗಳು, ವಾಹನ ಸಂಚಾರದ ರಭಸ ಇತ್ಯಾದಿ ಈಗ ಉತ್ತರ ಕರ್ನಾಟಕದ ದೂಳಿಗೆ ಹೊಸ ವ್ಯಾಖ್ಯೆ ಬರೆದಿವೆ. ‘ಕೆಲವು ವರ್ಷಗಳ ಹಿಂದೆ ಧಾರವಾಡದ ಮಂದಿ ಹುಬ್ಬಳ್ಳಿಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಹುಬ್ಬಳ್ಳಿಗೆ ದೂಳಿನ ನಗರ ಎಂಬ ಪಟ್ಟ ಇದ್ದದ್ದು. ಈಗ ಹಾಗಿಲ್ಲ. ಧಾರವಾಡದಲ್ಲೂ ಈ ಮಾಯೆ ತುಂಬಿದೆ’ ಎನ್ನುವ ಪರಿಸರವಾದಿ ಪ್ರಕಾಶ ಭಟ್ ಅವರ ಮಾತು ಇಡೀ ಉತ್ತರ ಕರ್ನಾಟಕಕ್ಕೂ ಅನ್ವಯವಾಗುತ್ತದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ದಾಖಲೆಗಳಲ್ಲಿ ಮತ್ತು ಮಾತುಗಳಲ್ಲಿ ಈ ಭಾಗದಲ್ಲಿ ವಾಯುಮಾಲಿನ್ಯ ಪ್ರತಿ ವರ್ಷ ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಇದೆಯಾದರೂ ಪರಿಸರವಾದಿಗಳ ಆತಂಕ ಮುಂದುವರಿದಿದೆ. ಆದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವಷ್ಟು ಮಾಲಿನ್ಯ ಇನ್ನೂ ಇಲ್ಲಿ ಆಗಿಲ್ಲ ಎಂದು ವೈದ್ಯರು ಪ್ರಮಾಣೀಕರಿಸುತ್ತಾರೆ. 

ಮಾಲಿನ್ಯ ನಿಯಂತ್ರಣ ಮಂಡಳಿ ವಾಯುಮಾಲಿನ್ಯದ ಪ್ರಮಾಣವನ್ನು ಆರು ಹಂತಗಳಲ್ಲಿ ವಿಂಗಡಿಸುತ್ತದೆ. ಇವುಗಳನ್ನು ಒಂದೊಂದು ಬಣ್ಣಗಳು ಪ್ರತಿನಿಧಿಸುತ್ತವೆ. ಉತ್ತರ ಕರ್ನಾಟಕದ ಯಾವ ಭಾಗವೂ ಈ ಪೈಕಿ ಎರಡನೇ ಹಂತವನ್ನು ಮೀರಿ ಹೋಗಿಲ್ಲ ಎಂಬುದು ದಾಖಲೆಗಳಲ್ಲಿರುವ ಮಾಹಿತಿ. ಬಳ್ಳಾರಿ ಹೊರತುಪಡಿಸಿ ಉಳಿದ ಯಾವ ಜಿಲ್ಲೆಯಲ್ಲೂ ಕಳೆದ ಎರಡು ವರ್ಷಗಳಲ್ಲಿ ಮಾಲಿನ್ಯದ ಪ್ರಮಾಣ ಏರಿಲ್ಲ ಎಂಬ ಮಾಹಿತಿಯೂ ಇದೆ.

ಉತ್ತರ ಕರ್ನಾಟಕದಲ್ಲಿ ವಾಯು ಮಾಲಿನ್ಯಕ್ಕೆ ಹೊಗೆ ಕೂಡ ಕಾರಣವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಸ ಮತ್ತು ಪ್ಲಾಸ್ಟಿಕ್‌ ಸುಡುವ ಪ್ರವೃತ್ತಿಗೆ ಅಂತ್ಯ ಹಾಡಲು ಈ ಭಾಗದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಆಂದೋಲನಗಳು ಜನರ ಮೇಲೆ ಪರಿಣಾಮ ಬೀರಲೇ ಇಲ್ಲ. ಗ್ರಾಮೀಣ ಪ್ರದೇಶಗಳ ಹೊಲಗಳಲ್ಲಿ ‘ಹೊಗೆ’ ಹಾಕುವುದನ್ನು ನಿಲ್ಲಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್‌ಗೂ ಪೂರಕ ಪ್ರತಿಕ್ರಿಯೆ ಲಭಿಸಲಿಲ್ಲ. ಈ ಕಾರಣದಿಂದ ಅವರು ‘ಅದು ಸೀಸನಲ್‌ ಸಮಸ್ಯೆ. ಅದರಿಂದ ದೊಡ್ಡ ತೊಂದರೆ ಇಲ್ಲ’ ಎಂಬ ಉತ್ತರ ಹೇಳಿ ಸುಮ್ಮನಾಗಲು ನಿರ್ಧರಿಸಿದ್ದಾರೆ.

ಬಾಗಲಕೋಟೆ, ವಿಜಯಪುರ, ರಾಯಚೂರು, ಬೀದರ್‌ ಮುಂತಾದ ಜಿಲ್ಲೆಗಳಲ್ಲಿ ಕಬ್ಬು, ದ್ರಾಕ್ಷಿ, ಬಾಳೆ, ದಾಳಿಂಬೆ ಮುಂತಾದವುಗಳ ಕಟಾವು ಆದ ನಂತರ ತ್ಯಾಜ್ಯಕ್ಕೆ ಬೆಂಕಿ ಹಾಕಲಾಗುತ್ತದೆ. ಕೊಪ್ಪಳ, ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗಳಲ್ಲೂ ಇದೇ ಸ್ಥಿತಿ. ಧಾರವಾಡದ ಹಳಿಯಾಳ ರಸ್ತೆಗುಂಟ ಇರುವ ಹೊಲಗಳಲ್ಲಿ ಕಬ್ಬು ಕಟಾವು ಆದ ನಂತರ ಹೊಗೆ ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಇಲ್ಲೆಲ್ಲ ಹಾರುಬೂದಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ.

‘ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳಲ್ಲಿ ಭತ್ತದ ಗದ್ದೆಗಳಿಗೆ ಸಿಂಪಡಿಸುವ ಕೀಟನಾಶಕಗಳು ಕೂಡ ವಾಯು ಮಾಲಿನ್ಯಕ್ಕೆ ಕೊಡುಗೆ ನೀಡಲು ಸಜ್ಜಾಗಿವೆ’ ಎನ್ನುತ್ತಾರೆ ಕ್ರಿಯಾಶೀಲ ಗೆಳೆಯರ ಬಳಗ ಎಂಬ ಸಂಘಟನೆ ಮೂಲಕ ಮಾಲಿನ್ಯದ ವಿರುದ್ಧ ಹೋರಾಡುತ್ತಿರುವ ಮುಕುಂದ ಮೈಗೂರ.

ವಾಹನಗಳು ಉಗುಳುವ ಹೊಗೆ ವಾಯು ಮಾಲಿನ್ಯಕ್ಕೆ ಕಾರಣವಾಗುವ ಸ್ಥಿತಿ ಈ ಭಾಗದಲ್ಲಿ ಇಲ್ಲ ಎಂಬುದು ಸಾರಿಗೆ ಅಧಿಕಾರಿಗಳ ಹೇಳಿಕೆ. ಹಳೆಯ ಮಾದರಿ ವಾಹನಗಳು ಮಾತ್ರ ಹಾನಿಕಾರಕ ಹೊಗೆ ಉಗುಳುತ್ತವೆ. ಅಂಥ ವಾಹನಗಳನ್ನು,  ಸೀಮೆಎಣ್ಣೆ ಹಾಕಿ ಚಲಾಯಿಸುವ ಆಟೊರಿಕ್ಷಾಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಇತ್ತೀಚೆಗೆ ವಾಹನಗಳಿಂದಾಗಿ ಮಾಲಿನ್ಯಹೆಚ್ಚಾಗುವ ಪ್ರಸಂಗ ತೀರಾ ಕಡಿಮೆ ಎಂಬುದು ಅವರ ವಾದ.

ಅಂಕಿಅಂಶ ಏನೇ ಹೇಳಲಿ, ಉತ್ತರ ಕರ್ನಾಟಕ ಮಾಲಿನ್ಯದ ರಾಕ್ಷಸ ಮುಷ್ಟಿಗೆ ಸಿಲುಕುತ್ತಿದೆ ಎಂಬ ದಿಗ್ಭ್ರಮೆಯ ಮಾತುಗಳು ಕೇಳಿಬರುತ್ತಿವೆ. ದೂಳು, ಹೊಗೆ, ಕೀಟನಾಶಕ ಇತ್ಯಾದಿಗಳನ್ನು ವಾತಾವರಣಕ್ಕೆ ಬಿಟ್ಟು ಗಾಳಿಯನ್ನು ಹಾಳು ಮಾಡಿರುವುದು, ನೀರು ಇಂಗಿಸುವ ‘ಸಂಸ್ಕೃತಿ’ಯನ್ನು ಮರೆತು ಪ್ರಾದೇಶಿಕ ‘ಜಲಚಕ್ರ’ಕ್ಕೆ ಧಕ್ಕೆ ಮಾಡಿರುವುದು, ಅದರಿಂದ ದೂಳು ಗಾಳಿಯಲ್ಲಿ ಹಾರಾಡಲು ಅವಕಾಶ ಮಾಡಿರುವುದು ಮುಂತಾದ ಸೂಕ್ಷ್ಮ ವಿಷಯಗಳೆಲ್ಲ ಮುಂದೊಂದು ದಿನ ಭಾರಿ ಸಮಸ್ಯೆ ಉಂಟುಮಾಡಲಿವೆ ಎಂಬುದು ಈ ಆತಂಕಕ್ಕೆ ಕಾರಣ.

ವಾಯು ಮಾಲಿನ್ಯ ಅಳೆಯಲು ಜಿಲ್ಲಾ ಕೇಂದ್ರ ಅಥವಾ ಪ್ರಮುಖ ನಗರಗಳಲ್ಲಿ ಒಂದು ಇಲ್ಲವೇ ಎರಡು ಉಪಕರಣಗಳನ್ನು ಇರಿಸಲಾಗುತ್ತದೆ. ಅದು ಮಾಲಿನ್ಯ ಪ್ರದೇಶದಿಂದ ದೂರ ಇರುತ್ತದೆ. ಅಲ್ಲಿಗೆ ಬಂದು ಬೀಳುವ ದೂಳಿನ ಕಣಗಳನ್ನು ಪರೀಕ್ಷಿಸಿ ಮಾಲಿನ್ಯ ನಿರ್ಧರಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ‘ಯಾವುದೋ ಮೂಲೆಯಲ್ಲಿ ಇರಿಸಿದ ಉಪಕರಣದಲ್ಲಿ ದಾಖಲಾದ ಮಾಹಿತಿ ಆಧರಿಸಿ ಇಡೀ ಜಿಲ್ಲೆ ಅಥವಾ ನಗರದಲ್ಲಿ ವಾಯು ಮಾಲಿನ್ಯ ಇಲ್ಲ ಅಥವಾ ಕಡಿಮೆಯಾಗಿದೆ ಎಂದು ಹೇಳುವುದು ಎಷ್ಟು ಸಮಂಜಸ’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವವರೆಗೆ ಉತ್ತರ ಕರ್ನಾಟಕದ ವಾಯು ಮಾಲಿನ್ಯ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿಯಲಿದೆ.

ನಿರ್ವಹಣಾ ಕೇಂದ್ರಗಳ ಕೊರತೆ
ವಾಯು ಮಾಲಿನ್ಯದ ಪ್ರಮಾಣವನ್ನು ಅಳೆಯುವ ಮತ್ತು ಮಾಹಿತಿ ಸಂಗ್ರಹಿಸುವ ಕೇಂದ್ರಗಳು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇಲ್ಲ. ಕೆಲವು ಜಿಲ್ಲೆಗಳಲ್ಲಿ ಇದ್ದರೂ ಅವು ಹೊಸ ತಂತ್ರಜ್ಞಾನಕ್ಕೆ ‘ಅಪ್‌ಡೇಟ್‌’ ಆಗಿಲ್ಲ. ಬೆಂಗಳೂರು, ಮೈಸೂರಿನಂಥ ಜಿಲ್ಲೆಗಳಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಉಪಕರಣಗಳು ಇದ್ದರೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಳೆಯ ಮಾದರಿಯಲ್ಲೇ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಮಾಲಿನ್ಯ ಅಳೆಯುವ ಕೇಂದ್ರಗಳು ಇಲ್ಲ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೇಂದ್ರ ಇದ್ದರೂ ಅದು ತಾಂತ್ರಿಕವಾಗಿ ದಾವಣಗೆರೆ ಜಿಲ್ಲೆಗೆ ಸೇರಿದ್ದು ಎಂಬುದು ವಿಶೇಷ. 

ಉತ್ತರ ಕರ್ನಾಟಕದ ಹೃದಯ ಭಾಗವಾದ ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲೂ ‘ಮಾನವ ಶಕ್ತಿ’ ಬಳಸಿ ಮಾಲಿನ್ಯದ ಪ್ರಮಾಣವನ್ನು ಅಳೆಯಲಾಗುತ್ತಿದೆ. ವಾರದಲ್ಲಿ ಒಂದು ಬಾರಿ 24 ತಾಸು ಮಾಲಿನ್ಯದ ಪ್ರಮಾಣ ಅಳೆದು ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ಗಾಳಿಯಲ್ಲಿ ಹಾರುವ (ದೂಳಿನ) ಕಣಗಳನ್ನು ಸಂಗ್ರಹಿಸಿ ಮಾಲಿನ್ಯವನ್ನು ಲೆಕ್ಕ ಹಾಕಲಾಗುತ್ತದೆ. ಈ ಕಣಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿಂದ ಬರುವ ಫಲಿತಾಂಶದ ಆಧಾರದಲ್ಲಿ ಮಾಲಿನ್ಯವನ್ನು ಅಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT