ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ, ಬೆನ್ನು ಬಿದ್ದಿದ್ದಾನೆ ನಕ್ಷತ್ರಕ!

ವಾಯು ಮಾಲಿನ್ಯ ನಿಯಂತ್ರಣ ಹೇಗೆ?
Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸಾಯನ ವಿಜ್ಞಾನಿಗಳ ಪ್ರಯೋಗಾಲಯದ ನಳಿಕೆಗಳಲ್ಲಿ ಬಂದಿಯಾಗಿ ಥರಾವರಿ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕಿದ್ದ ಸಾರಜನಕದ ಡೈಆಕ್ಸೈಡ್‌, ಗಂಧಕದ ಡೈಆಕ್ಸೈಡ್‌, ಇಂಗಾಲದ ಮೊನಾಕ್ಸೈಡ್‌, ಮಿಥೇನ್‌ ಮೊದಲಾದ ರಾಸಾಯನಿಕ ಪದಾರ್ಥಗಳು ಗಾಳಿಯೊಂದಿಗೆ ಗಾಢವಾಗಿ ಬೆರೆತುಬಿಟ್ಟಿವೆ. ಇಡೀ ಮನುಕುಲ ಈಗ ಅಕ್ಷರಶಃ ವಿಷ ವರ್ತುಲದ ಬಲೆಯೊಳಗೆ ಸಿಕ್ಕಿಬಿದ್ದಿದೆ; ತನ್ನ ಶರೀರದ ಸುತ್ತ ಗೂಡನ್ನು ಕಟ್ಟುತ್ತಾ, ಕಟ್ಟುತ್ತಾ ಅದರೊಳಗೇ ಉಸಿರು ಕಳೆದುಕೊಳ್ಳುವ ರೇಷ್ಮೆ ಹುಳದಂತೆ!

ಭವಿಷ್ಯದಲ್ಲಿ ನಮ್ಮ ದೇಶ ಎದುರಿಸಬೇಕಾದ ಗಂಡಾಂತರ ಸನ್ನಿವೇಶಗಳ ಕುರಿತು ಇದೀಗ ದೆಹಲಿಯಲ್ಲಿ ನಡೆದಿರುವ ಬೆಳವಣಿಗೆಗಳು ಢಾಳಾಗಿ ಮುನ್ಸೂಚನೆ ಕೊಡುತ್ತಿವೆ. ಅಲ್ಲವೆ ಮತ್ತೆ, ಮಾಲಿನ್ಯದ ಪರಿಣಾಮವಾಗಿ ಶಾಲೆಗಳಿಗೆ ರಜೆ ಘೋಷಿಸುವ ಪ್ರಮೇಯ ಬಂದು ಬಿಟ್ಟಿದೆಯಲ್ಲ. ಮಾಲಿನ್ಯ ತಗ್ಗಿಸಲು ಹೆಲಿಕಾಪ್ಟರ್‌ ಮೂಲಕ ಈಗ ಮಳೆಯನ್ನು ಬೇರೆ ಸುರಿಸಬೇಕಂತೆ! ನಗರೀಕರಣದ ನಾಗಾಲೋಟ ಹೇಗಿದೆಯೆಂದರೆ ನಮ್ಮ ಪರಿಸರ ಅದರ ತುಳಿತಕ್ಕೆ ಸಿಲುಕಿ ಸಂಪೂರ್ಣ ಅಪ್ಪಚ್ಚಿಯಾಗಿದೆ. ಪ್ರಾಯಶಃ ಪರಿಸರದ ಪಾಲಿಗೆ ಮುಯ್ಯಿ ತೀರಿಸಿಕೊಳ್ಳುವ ಕಾಲ ಈಗ ಬಂದಿದೆ. ವಾಯುಮಂಡಲದ ಸ್ವಾಸ್ಥ್ಯ ಕೆಡಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅದು ತೊಡೆತಟ್ಟಿ ನಿಂತಿದೆ.

ಶುದ್ಧ ಗಾಳಿಯಿಂದ ತುಂಬಿರಬೇಕಿದ್ದ ವಾತಾವರಣದಲ್ಲಿ ದೂಳಿನ ಕಣಗಳೇ ತೇಲಾಡುತ್ತಿವೆ. ರಾಸಾಯನಿಕ ಲೇಪನವನ್ನೂ ಮಾಡಿಕೊಂಡಿರುವ ಈ ಕಣಗಳು ನಾವು ಉಸಿರಾಡುವಾಗ ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಅಲ್ಲಿಯೇ ನಿಲ್ಲುತ್ತವೆ. ಹೌದು, ವಾಯುಮಂಡಲದ ಪ್ರತಿನಿಧಿಗಳಾಗಿ ದೇಹದೊಳಗೆ ಅವುಗಳು ನಮ್ಮನ್ನು ‘ನಕ್ಷತ್ರಕ’ನಂತೆ ಕಾಡುತ್ತಿವೆ. ವಾಯು ಮಾಲಿನ್ಯ ನಮ್ಮ ದೇಶದ ಪಾಲಿಗೆ ಎಷ್ಟೊಂದು ದುಬಾರಿ ಆಗಿದೆಯೆಂದರೆ ಅದರಿಂದ ದೇಶದ ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 7.69ರಷ್ಟು ಪ್ರಮಾಣ ನಷ್ಟವಾಗುತ್ತಿದೆ.

ನಮ್ಮ ದೇಶದಲ್ಲಿ ಅಸ್ತಮಾ ಹಾಗೂ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಒಂದೇ ಸಮನೆ ಏಕೆ ಏರುತ್ತಿದೆ ಎಂಬುದನ್ನು ಒಮ್ಮೆ ಯೋಚಿಸಿ. ನಗರ ಪ್ರದೇಶದಲ್ಲಿ ವಾಸವಾಗಿರುವ ದಂಪತಿಗಳಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತಿದ್ದು, ಅವರ ಸಂತಾನಶಕ್ತಿ ಸಹ ಕಳೆದು ಹೋಗುತ್ತಿರುವುದು ಏಕೆ? ದೇಶದ ಪ್ರತಿ ಮೂರರಲ್ಲಿ ಒಂದು ಮಗು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಜೀವ ಹಿಡಿಯಲು ಏದುಸಿರು ಬಿಡುತ್ತಿದೆಯಲ್ಲ– ಈ ವಿದ್ಯಮಾನ ಕೊಡುವ ಸೂಚನೆಯಾದರೂ ಏನಿದ್ದೀತು? ಸಂದೇಹವೇ ಇಲ್ಲ, ಒಳಗಿನ ‘ನಕ್ಷತ್ರಕ’ ಕಾರ್ಯಾಚರಣೆಗೆ ಇಳಿದಿದ್ದಾನೆ!

ದೇಶದ ಮಹಾನಗರಗಳು ತಾವೇ ಹೆಣೆದ ವಿಷದ ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುವುದು ನಮ್ಮ ಪುಟ್ಟ ಪಟ್ಟಣಗಳಿಗೆ ಕಾಣುತ್ತಲೇ ಇಲ್ಲ. ಅಭಿವೃದ್ಧಿ ಎಂಬ ಬೆಂಕಿಯೊಳಗೆ ಅವು ಬೆಳಕಿನ ಹುಳುಗಳಂತೆ ಹೋಗಿ ಬೀಳುತ್ತಿವೆ. ‘ಜ್ವಾಲೆ’ ಹೆಚ್ಚಾದಾಗ ಅಲ್ಲಿನ ನೆಲದಿಂದ ವಿಷದ ಕಣಗಳು ನಭದತ್ತ ಚಿಮ್ಮುತ್ತಿವೆ. ವಾತಾವರಣದ ತಾಪಮಾನ ಹೆಚ್ಚಿಸುವ ವಿದ್ಯುತ್‌ ಸ್ಥಾವರ, ಇಂಗಾಲ ಉಗುಳುವ ವಾಹನ, ಮಿಥೇನ್‌ ಮಥಿಸುವ ಘನತ್ಯಾಜ್ಯ, ಲಂಗುಲಗಾಮಿಲ್ಲದೆ ನಡೆದಿರುವ ಕಟ್ಟಡ ನಿರ್ಮಾಣ ಕಾಮಗಾರಿ, ರಾಸಾಯನಿಕ ಕಣಗಳನ್ನು ಚಿಮ್ಮಿಸುವ ಕೈಗಾರಿಕೆ, ರಸಗೊಬ್ಬರ ಬಳಸುವ ಕೃಷಿ– ವಾಯುಮಂಡಲವನ್ನೇ ಮಾಲಿನ್ಯಗೊಳಿಸಲು ‘ನಾಗರಿಕ ಸಮಾಜ’ ಇಂಥ ನೂರಾರು ದಾರಿಗಳನ್ನು ಕಂಡುಕೊಂಡಿದೆ. ದೆಹಲಿಯಲ್ಲಿ ಇತ್ತೀಚೆಗೆ ಮಾಲಿನ್ಯದ ಪ್ರಮಾಣ ಹೆಚ್ಚಾಗಲು ಇನ್ನೂ ಕೆಲ ಕಾರಣಗಳಿವೆ. ಉಪಗ್ರಹಗಳು ಸೆರೆ ಹಿಡಿದಿರುವ ಚಿತ್ರಗಳತ್ತ ಕಣ್ಣು ಹಾಯಿಸಿದಾಗ ಪಂಜಾಬ್‌, ಹರಿಯಾಣದಲ್ಲಿ ಕೃಷಿ ತ್ಯಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಹಾಕಿರುವುದು ಎದ್ದುಕಂಡಿದೆ. ಅಲ್ಲದೆ, ಚಳಿಗಾಲದ ಕಾರಣದಿಂದ ತಾಪಮಾನದಲ್ಲಿ ಇಳಿಕೆಯಾಗಿ ಹೊಂಜು (ಹೊಗೆ ಮತ್ತು ಮಂಜು) ಕೂಡ ಕೆಳಗೆ ಇಳಿದಿದೆ.

ಸಾರಿಗೆ ವಲಯವೇ ತೈಲೋತ್ಪನ್ನದ ಬಹುದೊಡ್ಡ ಗ್ರಾಹಕ. ದೇಶಕ್ಕೆ ಆಮದು ಮಾಡಿಕೊಳ್ಳಲಾಗುವ ತೈಲದ ಶೇ 50ರಷ್ಟನ್ನು ಈ ವಲಯವೇ ನುಂಗಿ, ಹೊಗೆ ಬಿಡುತ್ತದೆ. 2035ರ ವೇಳೆಗೆ ಭಾರತದಲ್ಲಿ ರಸ್ತೆ ಸಾರಿಗೆಗೆ ಬಳಸುವ ಇಂಧನದ ಪ್ರಮಾಣ ಸದ್ಯದ ಪ್ರಮಾಣಕ್ಕಿಂತ 2–3 ಪಟ್ಟು ಹೆಚ್ಚಲಿದೆ ಎನ್ನುತ್ತದೆ ಏಷ್ಯಾ ಅಭಿವೃದ್ಧಿ   ಬ್ಯಾಂಕ್‌ನ ವರದಿ. ಖಾಸಗಿ ವಾಹನಗಳ ಸಂಖ್ಯೆ ರಾಕೆಟ್‌ ಮೇಲೆ ನಿಂತಂತೆ ಒಂದೇ ಸಮನೆ ಏರುತ್ತಿರುವುದು, ಸರಕು ಸಾಗಾಣಿಕೆಯಲ್ಲಿ ರೈಲು ಸಾರಿಗೆಯನ್ನು ಹಿಂದಿಕ್ಕಿ ರಸ್ತೆ ಸಾರಿಗೆಯೇ ಪ್ರಭುತ್ವ ಸಾಧಿಸುತ್ತಿರುವುದು ಇಂಧನದ ಬಳಕೆಯಲ್ಲಿ ತೀವ್ರ ಏರಿಕೆಗೆ ಕಾರಣ.

ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ದ್ವಿಚಕ್ರ ವಾಹನದಲ್ಲಿ ಓಡಾಡುವ ಕನಸು. ದ್ವಿಚಕ್ರ ವಾಹನ ಸವಾರರಿಗೆ ಕಾರು ಖರೀದಿಸುವ ಹಂಬಲ. ಕಾರು ಇದ್ದವರಿಗೆ ಐಷಾರಾಮಿ ಎಸ್‌ಯುವಿ ಬೇಕು. ಇತ್ತ, ಇಂತಹ ಕನಸುಗಳು ನನಸಾಗುತ್ತಾ ಹೋದಂತೆ, ಅತ್ತ, ಹಡಗುಗಳಲ್ಲಿ ಬರುವ ತೈಲದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತಿದೆ. ಇದೆಲ್ಲದರ ಪರಿಣಾಮ ಉಷ್ಣ ವೃದ್ಧಿ ಮಾಡುವ ಅನಿಲದ (ಗ್ರೀನ್‌ಹೌಸ್‌ ಗ್ಯಾಸ್‌– ಜಿಎಚ್‌ಜಿ) ಏರಿಕೆ. ಏನು ಮಾಡುವುದು, ವಾಹನಗಳಿಂದ ಹೆಚ್ಚುತ್ತಿರುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದಕ್ಕಿಂತ ಅವುಗಳ ಮಾರಾಟದಿಂದ ಬರುವ ತೆರಿಗೆ ಸಂಗ್ರಹದತ್ತಲೇ ಸರ್ಕಾರದ ಚಿತ್ತ ನೆಟ್ಟಿದೆ.

ಖಾಸಗಿ ವಾಹನಗಳು ಹೆಚ್ಚು ಬಳಕೆಯಾಗದಂತೆ ಮುತುವರ್ಜಿ ವಹಿಸಬೇಕಾದ ಸರ್ಕಾರಗಳು, ಮೇಲ್ಸೇತುವೆ ಕಟ್ಟಿ, ಪಾರ್ಕಿಂಗ್‌ ತಾಣ ನಿರ್ಮಿಸಿ ಕಾರು ಕೇಂದ್ರಿತ ಸಾರಿಗೆ ವ್ಯವಸ್ಥೆಯನ್ನು ಪೋಷಿಸುತ್ತಿವೆ. ನಗರ ಪ್ರದೇಶದಲ್ಲಿ ಘನತ್ಯಾಜ್ಯ ದಹಿಸಿದರೆ, ಗ್ರಾಮಾಂತರ ಭಾಗದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಲಾಗುತ್ತದೆ. ವಾಯು ಮಾಲಿನ್ಯದ ತೀವ್ರತೆ ಹೆಚ್ಚಾಗಲು ಈ ಹೊಣೆಗೇಡಿತನ ಸಹ ಕಾರಣ. ಘನತ್ಯಾಜ್ಯದಲ್ಲಿ ರಾಸಾಯನಿಕದ ಕಾಕ್‌ಟೇಲ್‌ ಇದ್ದು, ಅದರೊಳಗಿನ ವಿಷವು ಹೊಗೆಯೊಂದಿಗೆ ನೇರವಾಗಿ ಗಾಳಿಯನ್ನು ಸೇರುತ್ತಿದೆ. ಮಹಾನಗರಗಳಲ್ಲಿ ಎಗ್ಗಿಲ್ಲದೆ ನಡೆದಿರುವ ಹಳೆ ಕಟ್ಟಡಗಳ ನೆಲಸಮ, ಹೊಸ ಕಟ್ಟಡಗಳ ನಿರ್ಮಾಣದ ಭರಾಟೆಯಿಂದ ವಾತಾವರಣದಲ್ಲಿ ದೂಳಿನ ಕಣಗಳು ದಟ್ಟೈಸುತ್ತಿವೆ. ಕಟ್ಟಡ ಒಡೆಯುವ ದೈತ್ಯ ಯಂತ್ರಗಳ ಅಬ್ಬರದಲ್ಲಿ ಅಸ್ತಮಾ ರೋಗಿಗಳ ಕೆಮ್ಮಿನ ಸದ್ದು ಕರಗಿ ಹೋಗುತ್ತಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ನಮ್ಮಲ್ಲೂ ಈ ಪ್ರವೃತ್ತಿ ಇದೆಯಾದರೂ ಅಷ್ಟೊಂದು ಗಂಡಾಂತರ ಮಟ್ಟ ತಲುಪಿಲ್ಲ. ಕಲ್ಲು ತುಂಡರಿಸುವ, ಪುಡಿ ಮಾಡುವ ಘಟಕಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಹೊಂಜು ಆವರಿಸುತ್ತಿದ್ದರೂ ಆಡಳಿತ ವ್ಯವಸ್ಥೆಯ ಕಣ್ಣು ಅದನ್ನು ಕಾಣದಷ್ಟು ಮಂಜಾಗಿದೆ.

ನಮ್ಮ ಮಹಾನಗರಗಳು ತಮ್ಮ ಬೆಳವಣಿಗೆಯಲ್ಲಿ ಎಂದಿಗೂ ಪರಿಸರವನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಕೆರೆ–ಕುಂಟೆ, ಕಾಲುವೆ–ನದಿಗಳೆಲ್ಲ ಕೊಚ್ಚೆ ಗುಂಡಿಗಳಾದರೆ, ಇಂಗಾಲ ಹೀರುತ್ತಿದ್ದ ಮರಗಳ ಉಸಿರುಗಟ್ಟಿದೆ. ಪರಿಶುದ್ಧ ಗಾಳಿ ಪಡೆಯಬೇಕೆಂದರೆ ಒಬ್ಬ ವ್ಯಕ್ತಿಗೆ 32 ಮರಗಳು ಇರಬೇಕು. ಆದರೆ, ದೇಶದ ಸ್ಥಿತಿ ಈಗ ಉಲ್ಟಾ ಆಗುತ್ತಿದೆ. ಬೆಂಗಳೂರಿನ ಉದಾಹರಣೆಯನ್ನೇ ತೆಗೆದು­ಕೊಂಡರೆ, 45 ವರ್ಷಗಳಲ್ಲಿ ಶೇ 78ರಷ್ಟು ಹಸಿರಿನ ಹೊದಿಕೆ ಕಣ್ಮರೆಯಾಗಿದ್ದು, ಶೇ 79ರಷ್ಟು ಕೆರೆಕುಂಟೆಗಳು ಕಳೆದುಹೋಗಿವೆ. ಈ ಅವಧಿಯಲ್ಲಿ ಇತರ ಮಹಾನಗರಗಳು ಸಹ ಸರಾಸರಿ 500 ಪಟ್ಟು ಬೆಳೆದಿವೆ. ಒಂದೆಡೆ ಮಾಲಿನ್ಯ ಉಂಟುಮಾಡುವ ಪ್ರವೃತ್ತಿ ಹೆಚ್ಚಾಗಿದ್ದರೆ, ಇನ್ನೊಂದೆಡೆ ಅದನ್ನು ಹೀರುವ ಪರಿಸರ ಕಡಿಮೆಯಾಗಿದೆ. ಈ ಅಸಮತೋಲನದ ಪರಿಣಾಮವನ್ನು ಅದಕ್ಕೆ ಕಾರಣರಾದ ನಾವಲ್ಲದೆ ಬೇರೆ ಯಾರು ಅನುಭವಿಸಬೇಕು?

ಯುರೋಪಿನ ಮನೆಗಳ ಅಂದಕ್ಕೆ ಮಾರುಹೋಗಿ ನಮ್ಮ ಮನೆ ಗೋಡೆಗೂ ಗಾಜಿನ ಹೊದಿಕೆ ಹೊದಿಸುತ್ತೇವೆ. ಅದರಿಂದ ಅಧಿಕ ತಾಪಮಾನ ಉಂಟಾಗುತ್ತದೆ. ಅದರ ಶಮನಕ್ಕೆ ಹವಾ ನಿಯಂತ್ರಿತ (ಎ/ಸಿ) ವ್ಯವಸ್ಥೆ ಬೇಕಾಗುತ್ತದೆ.  ಇದರಿಂದ ವಿದ್ಯುತ್‌ ಬಳಕೆ ಹೆಚ್ಚುತ್ತದೆ. ಈ ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲು ಸುಡಬೇಕು. ಮತ್ತೆ ಉಷ್ಣದ ಬೋನಿನೊಳಗೆ ಬೀಳಬೇಕು. ಮಾಲಿನ್ಯದ ಈ ವರ್ತುಲ ಚಕ್ರವ್ಯೂಹದಂತೆ ಹೀಗೇ ಸುತ್ತುತ್ತದೆ. ಅದರಿಂದ ಹೊರಗೆ ಬರುವುದು ಅಸಾಧ್ಯ. ಹಾಗಾದರೆ ಮಾಲಿನ್ಯ ತಡೆಗಟ್ಟುವ ಬಗೆ ಹೇಗೆ? ಉತ್ತರ ತುಂಬಾ ಸುಲಭ. ನಗರ ಪ್ರದೇಶಗಳ ಅಭಿವೃದ್ಧಿಯ ನಾಗಾಲೋಟಕ್ಕೆ ಬ್ರೇಕ್‌ ಹಾಕಬೇಕು. ಹಳ್ಳಿಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಿ, ಉತ್ತಮ ಆರೋಗ್ಯ ವ್ಯವಸ್ಥೆಯೂ ಸಿಕ್ಕರೆ ವಲಸೆ ಪ್ರಮಾಣ ಬಹುಮಟ್ಟಿಗೆ ತಗ್ಗಲಿದೆ. ಇದರಿಂದ ನಗರಗಳ ಮೇಲಿನ ಒತ್ತಡ ಕಡಿಮೆ ಆಗಲಿದೆ.

ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಲಂಡನ್‌, ಸಿಂಗಪುರದಲ್ಲಿ ಕೈಗೊಂಡ ಕ್ರಮಗಳು ವಿಶಿಷ್ಟವಾಗಿವೆ. ಅಲ್ಲಿ ಖಾಸಗಿ ವಾಹನಗಳಿಗೆ ಭಾರಿ ಪ್ರಮಾಣದ ‘ದಟ್ಟಣೆ ಶುಲ್ಕ’ ಆಕರಿಸಲಾಗುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕಿಂಗ್‌ ಮೇಲೂ ನಿರ್ಬಂಧ ವಿಧಿಸಲಾಗಿದೆ. ಅದೇ ಕಾಲಕ್ಕೆ ಸಮೂಹ ಸಾರಿಗೆ ವ್ಯವಸ್ಥೆ ಸದೃಢಗೊಳಿಸಲಾಗಿದೆ. ಹೀಗಾಗಿ ಅಲ್ಲಿನ ಜನ ಸಮೂಹ ಸಾರಿಗೆಯಲ್ಲಿ ಖುಷಿಯಿಂದ ಪ್ರಯಾಣ ಮಾಡುತ್ತಾರೆ. ಇಂತಹ ವ್ಯವಸ್ಥೆಯನ್ನು ನಮ್ಮಲ್ಲೂ ಜಾರಿಗೊಳಿಸಬೇಕು.

ಮೆಟ್ರೊ, ಉಪನಗರ ರೈಲು, ನಗರ ಸಾರಿಗೆ ಬಸ್‌, ಮಿನಿ ಬಸ್‌ಗಳ ಸೇವೆ ಒಂದಕ್ಕೊಂದು ಪೂರಕವಾಗಿ ಇರಬೇಕು. ಸಮೂಹ ಸಾರಿಗೆಗೂ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಸೇರಿದಂತೆ ಸ್ವಚ್ಛ ಇಂಧನವನ್ನೇ ಬಳಕೆ ಮಾಡಬೇಕು. ಸೈಕ್ಲಿಂಗ್‌ ಮಾಡುವವರಿಗೆ, ಪಾದಚಾರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯುವುದನ್ನು ನಿಲ್ಲಿಸಬೇಕು. ಬದಲಾಗಿ ರಸ್ತೆಯ ಎರಡೂ ಬದಿ  ಸಸಿ ನೆಟ್ಟು ಬೆಳೆಸುವ ಆಂದೋಲನ ನಡೆಸಬೇಕು. ಕೃಷಿ ತ್ಯಾಜ್ಯವನ್ನು ಸುಡುವ ಬದಲು ಕತ್ತರಿಸಿ ಮಣ್ಣಿನಲ್ಲಿ ಬೆರೆಸಿದರೆ ಅದು ಪರಿಸರಕ್ಕೆ ಮಾರಕವಾಗುವ ಬದಲು ಸಾವಯವ ಗೊಬ್ಬರವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಉದ್ಯಾನಗಳಲ್ಲಿನ ಎಲೆ ಮತ್ತಿತರ ತ್ಯಾಜ್ಯವನ್ನು ಗೊಬ್ಬರ ಮಾಡಲು ಗುಂಡಿಗಳ ನಿರ್ಮಾಣ ಮಾಡಬೇಕು. ಸೌರಶಕ್ತಿಯ ಬಳಕೆ ಹೆಚ್ಚಿಸಬೇಕು. ಪರಿಸರಕ್ಕೆ ಪೂರಕವಾದ ಯೋಜನೆಗಳು ನಮ್ಮ ಆದ್ಯತೆಗಳಾಗಬೇಕು. ದೇಶದ ನಾನಾ ಭಾಗಗಳಲ್ಲಿ ಈಗೀಗ ಕುರುಡು ಅಭಿವೃದ್ಧಿ ಯೋಜನೆಗಳ ವಿರುದ್ಧ ದೊಡ್ಡದಾಗಿಯೇ ಕೂಗೆದ್ದಿದೆ. ಜನಜಾಗೃತಿಯಿಂದ ರೂಪುಗೊಂಡಿರುವ ಈ ಆಂದೋಲನ, ಸರ್ಕಾರದ ಕಣ್ಣು ತೆರೆಸುವ ಜತೆ ಜತೆಗೆ ನಾಗರಿಕರ ಹೊಣೆಯನ್ನೂ ನೆನಪಿಸಬೇಕಾದ ಕೆಲಸ ಮಾಡಬೇಕಿದೆ.

ಮನೆಯೊಳಗಿನ ‘ಗುಮ್ಮ’
ವಾಯು ಮಾಲಿನ್ಯಕ್ಕೆ ಮನೆಯೊಳಗಿನ ವಾತಾವರಣವೂ ಕಾರಣವಾಗುತ್ತಿದೆ. ಕಟ್ಟಿಗೆ ಹಾಗೂ ಸೀಮೆಎಣ್ಣೆ ಒಲೆ, ಕಟ್ಟಡದ ದೂಳು, ಸೊಳ್ಳೆನಾಶಕ ಬತ್ತಿ, ಆಯಿಲ್‌ ಪೇಂಟ್‌, ಸುವಾಸನೆಗಾಗಿ ಸ್ಪ್ರೇ ಮಾಡುವ ದ್ರವ್ಯ ಮತ್ತು ಧೂಮಪಾನದಿಂದ ನಮ್ಮ ಸುತ್ತಲಿನ ಗಾಳಿ ಮಲಿನಗೊಳ್ಳುತ್ತಿದೆ. ನೆನಪಿಡಿ: ಮನೆಯಲ್ಲಿ ನಾವು ನಡೆಸುವ ಈ ಮಾಲಿನ್ಯ ಚಟುವಟಿಕೆಗಳ ಮೊದಲ ಬಲಿಪಶು ನಾವೇ ಆಗಿರುತ್ತೇವೆ!
-ನಿರೂಪಣೆ: ಪ್ರವೀಣ ಕುಲಕರ್ಣಿ

*
ಮಾಲಿನ್ಯದ ಪ್ರಮಾಣ ಹೆಚ್ಚಾಗಲು ವಾಹನಗಳಷ್ಟೇ ಹದಗೆಟ್ಟ ರಸ್ತೆಗಳೂ ಕಾರಣ. ಹಾಳಾದ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಅಲ್ಲಿಯವರೆಗೆ ದೂಳು ಏಳದಂತೆ ನೀರು ಹಾಕಬೇಕು. ಹೆಚ್ಚು ಮರಗಳನ್ನು ಬೆಳೆಸಬೇಕು.
–ಲಿಯೊ ಸಲ್ಡಾನ, ಇಎಸ್‌ಜಿ ಇಂಡಿಯಾ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT