ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಬೇಕು ಜಲಮೂಲಗಳನ್ನು

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಅತೀ ಕಡಿಮೆ ಮಳೆ ಬೀಳುವ ರಾಜ್ಯಗಳಲ್ಲಿ ರಾಜಸ್ತಾನ ಮೊದಲನೆಯದಾಗಿದ್ದರೆ ಕರ್ನಾಟಕ ಎರಡನೆಯದ್ದು. ಇಂಥಾ ಸ್ಥಿತಿಯಲ್ಲಿರುವ ರಾಜ್ಯದಲ್ಲಿ  ಹರಿಯುವ ನದಿಗಳಲ್ಲಿನ ನೀರಿನ ಒಂದು ದೊಡ್ಡ ಪಾಲನ್ನು ನೆರ ರಾಜ್ಯಗಳಿಗೆ ನೀಡಬೇಕಾದ ಪರಿಸ್ಥಿತಿ ಇದೆ. ಭವಿಷ್ಯದ ಕರ್ನಾಟಕದ ಬಗ್ಗೆ ಯೋಚಿಸುವಾಗ ಈ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಲೇ ಬೇಕು.

ಕಾವೇರಿಯ ನೀರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ವಾದಿಸುವ, ಮಹದಾಯಿಯಲ್ಲಿ ನಮಗೂ ಪಾಲು ಬೇಕು ಎಂದು ವಾದಿಸುವುದಕ್ಕೆ ಬಹಳ ಜನರಿದ್ದಾರೆ. ಆದರೆ ರಾಜ್ಯದೊಳಗೆ ನೀರಿನ ಸಂಪನ್ಮೂಲ ಕಡಿಮೆಯಾಗದಂತೆ ತಡೆಯುವ ಮಾರ್ಗಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಯಾರ ಸಹಾಯವೂ ಬೇಕಾಗಿಲ್ಲ. ನಮ್ಮ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾಡುಗಳನ್ನು ಕಡಿಯಲಾಗಿದೆ. ಈ ಕಾಡಿನ ಹನನ ಕಾರ್ಯ ಈಗಲೂ ಅವ್ಯಾಹತವಾಗಿ ಮುಂದುವರಿದಿದೆ. ಹಾಗಾಗಿ ಮರಳಿ ಕಾಡು ಬೆಳೆಸುವ ಕಾರ್ಯಕ್ಕೆ ಆದ್ಯತೆಯಲ್ಲಿ ತೊಡಗಿಸಿಕೊಳ್ಳಬೇಕು.

ಸರ್ಕಾರದ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳೂ ಕೈ ಜೋಡಿಸಿ ಉದ್ಯಮಿಗಳ ಸಹಾಯವನ್ನೂ ಪಡೆದು ಜನರು ತೊಡಗಿಸಿಕೊಳ್ಳುವಂತೆ  ನೋಡಿಕೊಂಡು ಮುನ್ನಡೆಯುವ ಅವಶ್ಯಕತೆ ಇದೆ. ಇದು ಬಹಳ ದೀರ್ಘ ಕಾಲ ಸತತವಾಗಿ ನಡೆಯಬೇಕಾದ ಪ್ರಯತ್ನ.ಹಾಗಾದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಸಾಧ್ಯ.

ಎರಡನೆಯದಾಗಿ ನಮ್ಮಲ್ಲಿರುವ ಆಣೆಕಟ್ಟುಗಳು, ಕೆರೆಕಟ್ಟೆಗಳು ಹೂಳು ತುಂಬಿ ಅರ್ಧಕ್ಕರ್ಧ ಅನುಪಯುಕ್ತ ಮಟ್ಟ ತಲುಪಿವೆ. ತಕ್ಷಣದಲ್ಲಿ ಹೂಳು ತೆಗೆಯುವ ಕಾರ್ಯ ಆರಂಭವಾಗಲೇ ಬೇಕಿದೆ ಹಾಗು ನಿಯಮಿತ ಅವಧಿಗೊಮ್ಮೆ ಈ ಕಾರ್ಯ ಪುನರಾವರ್ತನೆ ಆಗುವ ಅಗತ್ಯ ಇದೆ. ಕರ್ನಾಟಕದ ನಗರ ಪ್ರದೇಶಗಳ ನೀರಿನ ಸಮಸ್ಯೆಯನ್ನು ಪರಿಹರಿಸುವುದಕ್ಕೆ ನದಿ ನೀರನ್ನು ತರುವ ಯೋಜನೆಗಳನ್ನು ರೂಪಿಸುವ ಬದಲಿಗೆ ಆಯಾ ನಗರಗಳಲ್ಲಿಯೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಹಾದಿಯಲ್ಲಿ ಹೆಜ್ಜೆ ಇಡಬೇಕು. ಕೊಳವೆ ಬಾವಿಗಳ ಮರುಪೂರಣದಿಂದ ತೊಡಗಿ ಕೆರೆಗಳ ಪುನರುಜ್ಜೀವದಂಥ ಚಟುವಟಿಕೆಗಳ ತನಕ ಇದು ವಿಸ್ತರಿಸಿಕೊಳ್ಳಬೇಕು. ಈ ಎಲ್ಲಾ ಯೋಜನೆಗಳನ್ನು ಈ ಕ್ಷಣದಲ್ಲಿಯೇ ಆರಂಭಿಸಿದರೆ ಮುಂದಿನ ನಲವತ್ತು ವರ್ಷಗಳಲ್ಲಿಯಾದರೂ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂಬುದನ್ನು ಅರಿಯುವ ಅಗತ್ಯವಿದೆ.

ಈ ಎಲ್ಲ ಯೋಜನೆಗಳು ಜಾರಿಗೆ ಬರಬೇಕೆಂದರೆ ಅಂತಹ ಮನೋಭಿಲಾಷೆಯುಳ್ಳ ಹಾಗೂ ಸಾಮರ್ಥ್ಯವುಳ್ಳ ಜನಪ್ರತಿನಿಧಿಗಳು ಗೆದ್ದು ಬರಬೇಕಾದುದು ಮೂಲಭೂತ ಅಗತ್ಯ. ಮುಂದಿನ ವರುಷಗಳಲ್ಲಿ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುತ್ತೇನೆ ಎಂದು ಜನ ನಿರ್ಧರಿಸಬೇಕಾದುದು ಮುಂದಿನ ನಲ್ವತ್ತು ವರುಷಗಳ ಹಣೆ ಬರಹ ಬರೆಯುವ ಸೂತ್ರ. ಅದಿಲ್ಲದಿದ್ದರೆ ಎಲ್ಲಾ ಯೋಜನೆಗಳೂ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೇ ಆದೀತು.

- ಆನಂದ ಸಿ ಹೆಗಡೆ ಧಾರೇಶ್ವರ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT