ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಪುಟ್ಟಿಗೆ ರೆಕ್ಕೆ ಬಂದ ಕಥೆ

ಹೇಗಿದ್ದೆ ಹೇಗಾದೆ ಗೊತ್ತಾ?
Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸೌಮ್ಯ ಕಲ್ಯಾಣ್‌ಕರ್‌
ಪುಟ್ಟನಿಗೆ ಒಬ್ಬ ಪುಟ್ಟ ತಂಗಿ ಇದ್ದಳಂತೆ, ಅವಳ ಹೆಸರು ಪುಟ್ಟಿ ಅಂತೆ. ಪುಟ್ಟನಿಗೆ ಒಂಬತ್ತು ವರ್ಷ, ಪುಟ್ಟಿಗೆ ಏಳು.
ಒಂದು ದಿನ ಪುಟ್ಟ ಮತ್ತೆ ಪುಟ್ಟಿ ಇಬ್ರೂ ಪಪ್ಪ, ಅಮ್ಮನೊಟ್ಟಿಗೆ ಕಾರಲ್ಲಿ ದೂರ ಹೋಗ್ತಾ ಇದ್ರಂತೆ. ಕಾರಿನ ಎದುರುಗಡೆ ಸೀಟಲ್ಲಿ ಪಪ್ಪ–ಅಮ್ಮ ಸೀಟು ಬೆಲ್ಟು ಹಾಕೊಂಡು ಕೂತಿದ್ರಂತೆ. ಪುಟ್ಟ ಮತ್ತೆ ಪುಟ್ಟಿ ಹಿಂದುಗಡೆ ಸೀಟಲ್ಲಿ ಸೀಟು ಬೆಲ್ಟು ಹಾಕಿಕೊಂಡು ಕೂತಿದ್ರಂತೆ. ಆಯ್ತಾ? ಪುಟ್ಟ, ಪುಟ್ಟಿ ಏನೇನೋ ಆಟ ಆಡ್ತಾ ಇದ್ರಂತೆ. ಹಾಡಿನ ಬಂಡಿ, ಗಣಿತದ ಲೆಕ್ಕಾಚಾರಗಳು, ಪಝಲ್ಸ್ ಹೀಗೆ ಏನೇನೋ.

ಆಟ ಆಡ್ತಾ ಆಡ್ತಾ ಇಬ್ರಿಗೂ ಜಗಳ ಶುರುವಾಯ್ತಂತೆ. ಇಬ್ರೂ ಸರೀ ಕಿತ್ತಾಡಿದ್ರಂತೆ, ಸಿಟ್ಟು ಬಂದ ಪುಟ್ಟ ‘ನೀ ಬೇಡ ಪುಟ್ಟಿ ನಂಗೆ, ಬೇರೆ ತಂಗಿ ತರ್ತೇನೆ, ಜಗಳ ಆಡದ ಸ್ವೀಟ್ ತಂಗಿ, ಹಾರ್ಲಿಕ್ಸ್ ಒಟ್ಟಿಗೆ ಫ್ರೀ ಸಿಗ್ತಾಳೆ, ಹೋಗು ನೀನು ಕಾರು ಬಿಟ್ಟು’ ಅಂತ ಬೈದು ಬಿಟ್ಟನಂತೆ. ಪುಟ್ಟಿಯೂ ‘ಬೇಡಾದ್ರೆ ಬೇಡ, ನಾನೂ ವಾಪಸು ಬರಲ್ಲ, ಬೇರೆ ಅಣ್ಣ ಹತ್ರ ಹೋಗ್ತೇನೆ, ನೀನೂ ನಂಗೆ ಬೇಡ, ಕೆಟ್ಟ ಅಣ್ಣ’ ಅಂದವಳೇ ಸೀಟು ಬೆಲ್ಟು ತೆಗೆದು, ಕಾರಿನ ಛಾವಣಿ ಎತ್ತಿ ಕಿಂಡಿ ಮಾಡಿಕೊಂಡು ತನ್ನ ರೆಕ್ಕೆ ಬಿಡಿಸಿ ಸುಂಯ್ ಅಂತ ಹಾರಿ ಹೋದ್ಳಂತೆ.

ಸ್ವಲ್ಪ ಹೊತ್ತು ಮುಖ ಊದಿಸಿ ಕೂತ ಪುಟ್ಟನಿಗೆ ಆಮೇಲಾಮೇಲೆ ಬೇಜಾರಾಯ್ತಂತೆ. ‘ಅಯ್ಯೋ, ನನ್ನ ಶಣ್ಣ ಬಾಬು ತಂಗಿ ಎಲ್ಲಿ ಹೋದಳಪ್ಪ’ ಅಂತ ಅವನೂ ಸೀಟು ಬೆಲ್ಟು ತೆಗೆದು, ಕಾರಿನ ಛಾವಣಿಯಲ್ಲಿ ಪುಟ್ಟಿ ಮಾಡಿದ್ದ ಕಿಂಡಿಯ ಮೂಲಕವೇ ತನ್ನ ರೆಕ್ಕೆ ಬಿಡಿಸಿ ಸುಂಯ್ ಅಂತ ಹಾರಿ ಹೋದ ಅಂತೆ. ಹಾಗೆ ಹಾರಿ ಹಿಂದೆ ಬರ್ತಾ ಇತ್ತಲ್ಲ, ಆ ಕಾರಿಗೆ ಹೋಗಿ ಕೂತ ಅಂತೆ, ಆ ಕಾರಲ್ಲಿ ಅಂಕಲ್ ಆಂಟಿ ಇದ್ರಂತೆ. ಪುಟ್ಟ ಕೇಳಿದ, ‘ಆಂಟಿ, ನಿಮಗೆ ಒಬ್ಬ ನನ್ನ ಹಾಗಿನ ಮಗ ಇದ್ದಾನಾ?’. ‘ಇಲ್ಲಪ್ಪಾ’ ಅಂದ್ರಂತೆ ಆ ಆಂಟಿ. ಆಂಟಿ ಏನಾದ್ರೂ ಕೇಳೋ ಮೊದಲೇ ಪುಟ್ಟ ಅಲ್ಲಿಂದ ಹಾರಿ ಹೋಗಿ ಬಿಟ್ಟ ಅಂತೆ.

ಹಾಗೆ ಅದರ ಹಿಂದಿನ ಇನ್ನೊಂದು ಕಾರಿನ ಒಳಗೆ ಹೋದ ಅಂತೆ. ಅಲ್ಲೊಬ್ಬ ಇವನ ಹಾಗಿನ ಬಾಬಣ್ಣ ಹಿಂದಿನ ಸೀಟಲ್ಲಿ ಕೂತಿದ್ದ ಅಂತೆ. ಇವನು ಕೇಳಿದ ಅಂತೆ, ‘ಹಾಯ್ ನಾನು ಪುಟ್ಟ, ನಿನ್ನ ಹತ್ತಿರ ಒಬ್ಬಳು ಹುಡುಗಿ ಬಾಬು ಬಂದಿದ್ಳಾ, ನೀ ನನ್ನ ಅಣ್ಣ ಆಗ್ತೀಯಾ ಅಂತ ಕೇಳಿಕೊಂಡು?’. ‘ಹ್ಞೂ ಒಬ್ಬಳು ಚಿಕ್ಕ ತಂಗಿ ಬಂದಿದ್ಲು, ತುಂಬಾ ಚೆಂದದ ತಂಗಿ. ಆದ್ರೆ ಐದೇ ನಿಮಿಷದಲ್ಲಿ ನೀನು ನನ್ನ ಪುಟ್ಟಣ್ಣನಷ್ಟು ಸ್ವೀಟ್ ಇಲ್ಲ ಅಂತ ಹಾರಿ ಹೋದ್ಲು, ಯಾರವಳು ನಿನ್ನ ತಂಗಿಯಾ?’ ಅಂದ ಆ ಬಾಬಣ್ಣ. ‘ಹೌದು ಮಾರಾಯ, ನಾನು ಬೈದೆ ಅಂತ ಸಿಟ್ಟು ಮಾಡಿಕೊಂಡು ಹೋದ್ಲು, i  miss  her , ಎಲ್ಲಿದ್ದಾಳೋ ಏನೋ, ನಾ ಹುಡುಕ್ತೇನೆ, ಬಾಯ್’ ಎಂದು ಪುಟ್ಟ ಮತ್ತೆ ಹಾರಿದ.

ದೂರದವರೆಗೂ ನೋಡ್ತಾನಂತೆ, ಯಾವ ಕಾರೂ ಕಾಣ್ತಿಲ್ಲ, ತುಂಬಾ ದೂರ ಹಾರಿದ ಅಂತೆ. ಅವನ ಪಪ್ಪ ಅಮ್ಮ ಕಾರಿಂದ ತುಂಬಾ ದೂರ. ಅಲ್ಲೊಂದು ದೊಡ್ಡ ಕಾರು ಬರ್ತಿತ್ತಂತೆ , ಆ ಕಾರೊಳಗೆ ಹೋಗಿ ಕೇಳಿದ ಅಲ್ಲಿದ್ದ ಒಬ್ಬ ಆಂಟಿ ಹತ್ರ, ‘ಆಂಟಿ, ನಿಮಗೆ ನನ್ನ ಹಾಗಿನ ಮಗ ಇದ್ದಾನಾ?’ ಅಂತ. ಆಂಟಿ ‘ಹೌದು’ ಅಂದಕೂಡ್ಲೇ, ‘ಅವನಿಗೆ ಒಬ್ಬಳು ಹೊಸ ತಂಗಿ ಬಂದಿದ್ದಾಳಾ, ಒಬ್ಬಳು ಸ್ವೀಟ್ ತಂಗಿ?’ ಅಂತ ಆತುರದಿಂದ ಕೇಳಿದನಂತೆ. ಆಂಟಿ ನಕ್ಕು, ‘ಹೌದು, ನೋಡಿಲ್ಲಿ, ಇವಳ ಹೆಸರು ಚಿನ್ನಿ’ ಅಂತ ಕೈಲಿದ್ದ ಹಲ್ಲೂ ಕೂದ್ಲು ಇಲ್ಲದ ಪುಟಾಣಿ ಪಾಪನ್ನ ತೋರಿಸಿದ್ರಂತೆ. ಪುಟ್ಟನಿಗೆ ಆ ಬಾಬಣ್ಣಿಯನ್ನ ನೋಡಿ ತುಂಬಾ ಖುಷಿಯಾದ್ರೂ, ಪುಟ್ಟಿ ನಮ್ಮ ಮನೆಗೆ ಬಂದಾಗ ಹೀಗೆ ಪುಟ್ ಪುಟಾಣಿಯಾಗಿದ್ಳಲ್ಲ ಅಂತ ಅನಿಸಿದ್ರೂ ಅದು ಪುಟ್ಟಿ ಅಲ್ಲ ಅನಿಸಿ ಬೇಜಾರಾಗಿ, ಆ ಬಾಬಣ್ಣಿ ಕೆನ್ನೆ ಒಂದ್ಸಲ ಹಗುರಕ್ಕೆ ಸವರಿ ಹಾರಿಬಿಟ್ಟ ಅಂತೆ.

ಅವನು ಹೀಗೆ ಕೇಳ್ಕೊಂಡು ಹಿಂದೆ ಹಿಂದೆ ಹೋಗ್ತಾ ಇರಬೇಕಾದ್ರೆ ಮತ್ತೊಂದು ದೊಡ್ಡ ಕಾರು ಸಿಕ್ಕಿತಂತೆ. ನೋಡಿದ್ರೆ ಲಾಸ್ಟ್ ಸೀಟಲ್ಲಿ ಪುಟ್ಟಿ ಚಾಚಿ ಮಾಡಿದ್ಳಂತೆ, ಇವನು ಸಿಕ್ಕಾಪಟ್ಟೆ ಖುಷಿಯಾಗಿ ಅವಳ ಹತ್ರ ಕೂತ ಅಂತೆ. ‘ಇವಳು ಆರಾಮಾಗಿ ಮಲಗಿದ್ದಾಳೆ, ಎಬ್ಬಿಸೋದು ಬೇಡ, ಅರ್ಧಕ್ಕೆ ಎದ್ರೆ ಜೋರಾಗಿ ಅಳ್ತಾಳೆ, ಕಾರು ಹೇಗೋ ಪಪ್ಪ ಹೋಗೋ ದಿಕ್ಕಲ್ಲೇ ಹೋಗ್ತಾ ಇದೆ’ ಅಂತ ಯೋಚನೆ ಮಾಡಿ ಕಾಯ್ತಾ ಕೂತ ಅಂತೆ. ಸ್ವಲ್ಪ ಹೊತ್ತಾದ ಮೇಲೆ ಪುಟ್ಟಿ ಎದ್ದು ಕಣ್ಣು ಬಿಟ್ಟು ನೋಡಿದ್ರೆ ಪುಟ್ಟಣ್ಣ ಕೂತಿದ್ದಾನೆ! ಹೇ ಅಂತ ಇಬ್ರೂ ಖುಷಿಯಲ್ಲಿ ಕಿರುಚಿ ಅಪ್ಪಿಕೊಂಡರಂತೆ. ಅದ್ರಲ್ಲಿದ್ದ ಅಂಕಲ್, ಆಂಟಿ ಇಬ್ರಿಗೂ ಎಲ್ಲ ಕಥೆ ಹೇಳಿದ ಪುಟ್ಟ, ‘ನಾನ್ಯಾವತ್ತೂ ಬಯ್ಯಲ್ಲ ಪುಟ್ಟಿ ನಿಂಗೆ, ಸಾರಿ, ಬಾ ಹೋಗೋಣ’ ಅಂದ ಅಂತೆ. ಪುಟ್ಟಿನೂ ‘ನಾನೂ ನಿನ್ನ ಬಿಟ್ಟು ಹೋಗಲ್ಲ, ನೀನು ವರ್ಲ್ಡ್‌ ಬೆಸ್ಟ್ ಅಣ್ಣ’ ಅಂದಳಂತೆ.
ಇಬ್ರೂ ಹಾರಿ ಹಾರಿ ಹಾರಿ ಹಾರಿ ಪಪ್ಪ ಅಮ್ಮ ಹತ್ರ ಹೋದ್ರಂತೆ.
(ಚಿತ್ರ ಕಥೆಗಾರ್ತಿಯದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT