ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗೂ, ಅಂಚೆಯಲ್ಲಿ ನಿನ್ನ ಪತ್ರ ಬಂದರೆ ನೀನೇ ಬಂದಂತೆ...

Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮಗೂ,
ಶುಭಾಶಯ.

ನಾಳೆ, ಜವಾಹರಲಾಲ್ ನೆಹರೂ ಹುಟ್ಟಿದ ದಿನ, ನವೆಂಬರ್ 14, ಮಕ್ಕಳ ದಿನಾಚರಣೆಯ ದಿನ.
‘ಅಯ್ಯೊ ಅಜ್ಜೀ, ನನಗೆ ಗೊತ್ತು, ನಾನವರ ಕುರಿತು ಆಗಲೇ ಓದಿಕೊಂಡಿದ್ದೇನೆ. ಅದನ್ನೇ ಮತ್ತೆ ಹೇಳುತ್ತೀ’ ಎಂದೆಯ? ಇಲ್ಲ, ಇಲ್ಲ. ನನಗೆ ಆ ನೆಪದಲ್ಲಿ ಇವತ್ತು ನಿನಗೊಂದು ಪತ್ರ ಬರೆಯಬೇಕೆನಿಸಿತು. ಮೊದಲು ಫೋನ್ ಮಾಡೋಣ ಅಂದುಕೊಂಡೆ. ಆದರೆ ಬೇಡ, ಪತ್ರವನ್ನೇ ಬರೆಯುವೆ ಅಂದುಕೊಂಡೆ. ನಾವೆಲ್ಲ ಮುಂಚೆ ಪತ್ರವನ್ನೇ ಬರೆಯುತಿದ್ದವರು. ಅದರ ರುಚಿ ಗೊತ್ತಿದ್ದವರು. ಆಗ ಫೋನ್ ಇರುತ್ತಿದ್ದರೆ ನಾವೂ ಅದರಲ್ಲೇ ಮುಗಿಯುವವರೇ ಎನ್ನು. ಇರಲಿಲ್ಲವಲ್ಲ. ಹಾಗಾಗಿ ಅದೃಷ್ಟ, ಪತ್ರ ಬರೆದೆವು. ಅದು ಎಷ್ಟು ಸುಂದರ ಅಭ್ಯಾಸ ಅಂತಿ! 

ಫೋನಿನಲ್ಲಿ ಎಷ್ಟೇ ಮಾತಾಡಲಿ, ಅಲ್ಲಿಗೆ ಕಳೆಯಿತು. ಆದರೆ ಬರೆಯಲು ಹೊರಡುವೆವೋ, ಮನಸ್ಸು ಒಳಗೆ ಒಳಗೆ ಇಳಿದು ಏನೆಲ್ಲ ವಿಷಯ ನೆನೆನೆನೆದು ಕೆದಕಿ ಕೆದಕಿ ಬರೆಯಲು ಆರಂಭಿಸುತ್ತದೆ. ನೀನು ಯಾವಾಗ ಬೇಕಾದರೂ ಅದನ್ನು ತೆರೆದು ಓದಬಹುದು. ಬರೆವ ಅಭ್ಯಾಸ ಇಲ್ಲದ ನನ್ನ ಅಮ್ಮ – ಎಂದರೆ ನಿನ್ನ ಪಿಜ್ಜಿ – ಮನೆ ಮಂದಿಗೆ ಒಕ್ಕಣೆ ಹೇಳಿಯಾದರೂ ನಮಗೆ ಮಕ್ಕಳಿಗೆ ಎಷ್ಟೊಂದು ಪತ್ರ ಬರೆಸುತಿದ್ದಳು ಅಂತ! ಫೋನ್ ಇಲ್ಲದ್ದರಿಂದ ನಮಗಾದ ಲಾಭವಿದು. ನಾವು ಉತ್ತರ ಬರೆಯುವುದು ತಡವಾದರೆ ‘ಹಾಗಾದರೆ ನಿಮಗೆಲ್ಲ ಅಕ್ಷರ ಕಲಿಸಿದ್ದು ಯಾಕೆ’ ಎಂದು ಅಬ್ಬರಿಸುತಿದ್ದಳು. ಈಗ ಆಕೆ ಇಲ್ಲ, ಆದರೆ ಅವಳ ಪತ್ರಗಳು ಇವೆ. ಆ ಪತ್ರಗಳ ಮೂಲಕ ಈಗಲೂ ಆಕೆ ನನ್ನ ಬಳಿ ಮಾತಾಡುತಿದ್ದಾಳೆ.

ಅವಳ ಪತ್ರದಲ್ಲಿ ಏನೆಲ್ಲಾ ಸುದ್ದಿ! ಹಟ್ಟಿಯಲ್ಲಿ ಬೆಳ್ಳಿದನ ಕರು ಹಾಕಿದ್ದು, ‘ಹೆಂಗರು ಬೇಕಿತ್ತು, ಗಂಡುಕರು ಹಾಕಿತು’ ಎಂಬ ಬೇಸರ. ಆ ಕರುವಿನ ಬಣ್ಣ, ಅದು ಓಡಾಡುವ ನೆಗೆವ ಚಂದ ಎಲ್ಲವೂ. ಅಷ್ಟೇ ಅಲ್ಲ, ಮನೆಯ ಅಂಗಳಕ್ಕೆ ಮಣ್ಣು ಹಾಕಿ ವರೆದಿರುವುದು, ನಮ್ಮೂರಿನ ಹಲವು ವಿಚಾರಗಳು, ಮನೆಗೆ ಬಂದ ನೆಂಟರು, ಹಪ್ಪಳ ಸೆಂಡಿಗೆ ಮಾಡಿದ ಸುದ್ದಿ, ಎದುರಿನ ಸಿನೆಮಾ ಟಾಕೀಸಿನಲ್ಲಿ ಬಂದ ಸಿನಿಮಾಗಳು, ಮನೆಮಂದಿಯ ಆರೋಗ್ಯದ ಸುದ್ದಿ, ನನ್ನ ಅಣ್ಣ ತಮ್ಮ ತಂಗಿಯರ ಮದುವೆ ತಯಾರಿಯ ವಿವರ, ಹೇಳಲು ಹೋದರೆ ಹೇಳುತ್ತಾ ಹೋಗಬೇಕು, ಅಷ್ಟು. ನಾನು ಆ ಪತ್ರಗಳನ್ನು ಹಾಗೆಯೇ ತೆಗೆದಿರಿಸಿಕೊಂಡಿರುವೆ. ಅವುಗಳ ಒಂದು ಕಟ್ಟೇ ನನ್ನ ಬಳಿ ಇದೆ. ಮನಸ್ಸಿಗೆ ಬೇಸರವಾದಾಗಲೆಲ್ಲ ಈಗಲೂ ನಾನವುಗಳನ್ನು ತೆರೆದು ಓದುತ್ತೇನೆ.

ಮಗೂ,
ಇವತ್ತೂ ದಿನವಿಡೀ ಓದು ಅಭ್ಯಾಸಗಳಲ್ಲಿ ಕಳೆದುಹೋಯಿತೆ? ನೀನು ಮಾತ್ರವಲ್ಲ, ಇವತ್ತು ಎಲ್ಲ ಮಕ್ಕಳೂ ಹೀಗೆಯೇ, ಸರಿ. ಒಪ್ಪಿಕೊಳ್ಳುವೆ. ಆದರೆ ದಿನದಲ್ಲಿ ಒಂದು ಸಣ್ಣ ಸಮಯವನ್ನಾದರೂ ಬೇರೆ ಓದಿಗೆ ಮತ್ತು ಮಾತುಕತೆಗೆ ತೆಗೆದಿಡು. ನಾನು ನಿನ್ನ ಅಮ್ಮನೊಡನೆಯೂ ಹೇಳಿದ್ದೇನೆ. ಪಾಠ ಪುಸ್ತಕ ಅಭ್ಯಾಸ ಇತ್ಯಾದಿಗಳ ಎಡೆಯಲ್ಲೇ ಒಂದು ಅರ್ಧಗಂಟೆಯನ್ನಾದರೂ ಬೇರೆ ಪುಸ್ತಕ ಓದಲು ಕೊಡು. ಅಷ್ಟೇ ಇಲ್ಲ, ಮಗುವಿನೊಡನೆ ಕುಳಿತು ಮಾತಾಡು. ಮನೆಗೆ ಬಂದು ಹೋಗುವವರೊಡನೆ ಮಗುವೂ ಒಂದು ಗಳಿಗೆ ಬೆರೆಯಲಿ, ಬಿಡು. ಓದು ಓದು ಓದು ಮಾರ್ಕು ಮಾರ್ಕು ಮಾರ್ಕು ಅಂತ ಹೊರಪ್ರಪಂಚವೇ ಮರೆತು ಹೋಗಬಾರದಲ್ಲವೆ – ಅಂತ. ನನ್ನ ಭಯಕ್ಕೆ, ಅವಳಿಗೆ ಗೊತ್ತಿರುವುದನ್ನೇ ಹೇಳಿ ಪಾಪ, ಅವಳ ದುಗುಡ ಹೆಚ್ಚು ಮಾಡುತ್ತೇನೆ. ಅವಳಿಂದ ಬೈಸಿಕೊಳ್ಳುತ್ತೇನೆ, ಹಹಹ!

ಮಗೂ,
ಬೆಳಿಗ್ಗೆ ಒಮ್ಮೆ ಹೊರಬಂದು ನೋಡಿದೆವೆಂದರೆ, ಎಷ್ಟೆಲ್ಲಾ ಹಕ್ಕಿಗಳು, ನಿದ್ದೆಯಿಂದ ಎದ್ದಿವೆ, ಆಹಾರಕ್ಕಾಗಿ ಹೊರಡುವ ಸಂಭ್ರಮದಲ್ಲಿವೆ! ಎಷ್ಟೆಲ್ಲಾ ಹೂವುಗಳು ಅರಳಿವೆ! ಗಾಳಿ ಎಷ್ಟು ತಣ್ಣಗೆ ಸದ್ದಿಲ್ಲದೆ ಬೀಸುತ್ತಿದೆ. ಒಮ್ಮೆ ದೀರ್ಘ ಉಸಿರೆಳೆದುಕೋ, ಆಹ ಪರಿಮಳವೆ! ಸೂರ್ಯ ಮೂಡುವ ಹೊತ್ತಿನ ಆಕಾಶ ನೋಡು, ಹೊನ್ನ ಹಾಳೆಯಂತೆ ಹೊಳೆಯುತ್ತಿದೆ. ಒಂದೊಂದು ದಿನ ಒಂದೊಂದು ಬೆಳಗು.

ಆದರೆ ನಿನಗೋ, ಅವನ್ನು ನೋಡಲೂ ಬಿಡುವಿಲ್ಲದಂತೆ ಹೆಣೆದ ದಿನಚರಿ! ಅದನ್ನು ನೀನೇ ತುಸು ಬದಲಿಸಿಕೋ. ನೀನಿರುವ ಸಿಟಿಯಲ್ಲಿ ಕಟ್ಟಡಗಳ ನಡುವೆ ಆಕಾಶವೇ ಕಾಣದಿರಬಹುದು. ಹಕ್ಕಿಯ ದನಿಯೇ ಕೇಳದಿರಬಹುದು. ಆದರೇನು? ಕಿವಿಯನ್ನು ಸೂಕ್ಷ್ಮ ತೆರೆದುಕೋ. ಎದ್ದೇಳುವ ಮುಂಚೆ ಒಮ್ಮೆ ಸುಮ್ಮನೆ ಮಲಗಿ ಆಲಿಸು. ಮುಂಜಾವದ ಶಬ್ದ–ನಿಶ್ಶಬ್ದದ ಬೆರಕೆಯೂ ಮನಸ್ಸಿಗೊಂದು ಒಪ್ಪ ಕೊಡುತ್ತದೆ. ನಮಗೆ ಬೇಕಾದ್ದು ಸಿಗುತ್ತಿಲ್ಲ ಎನ್ನುವುದಕ್ಕಿಂತ ಸಿಗುವುದರಲ್ಲಿಯೇ ಬೇಕಾದ್ದನ್ನು ಆಯ್ದುಕೊಳ್ಳುವ ಗುಣ ದೊಡ್ಡದು. ನೀನು ಈ ಗುಣವನ್ನು ಈಗಲೇ ಬೆಳೆಸಿಕೊ. ಅದು ನಿನ್ನನ್ನು ಬೆಳೆಸುತ್ತದೆ. ನೋಡುತ್ತಿರು.

‘ಅಜ್ಜೀ, ನೀನು ಯಾವಾಗ ಬರುತ್ತೀ’ ಅಂತ ಪ್ರತಿಸಲ ಬಂದಾಗಲೂ ನೀನು ಕೇಳುತ್ತಿ. ನೀನು ಹಾಗೆ ಕೇಳುತ್ತಿಯಲ್ಲ, ನನಗೆ ಅದೇ ಖುಷಿ. ಸದ್ಯ, ನಮ್ಮ ಪಕ್ಕದ ಮನೆ ನೀರಜಳ ಮಕ್ಕಳಂತೆ ಮನೆಗೆ ಯಾರಾದರೂ ಬಂದರೆ ಗೊಣಗುವುದಿಲ್ಲವಲ್ಲ. ಅವರೆಲ್ಲ ಹಿಂದೆ ಎಷ್ಟು ನಗೆ ಕುಶಾಲು ಅಂತ ನಿಗಿನಿಗಿ ಇದ್ದರು. ಯಾಕೋ ದಿನ ಹೋದಂತೆ ಕೋಣೆಯೊಳಗೆ ಕಂಪ್ಯೂಟರಿನಲ್ಲಿ ತಮ್ಮಷ್ಟಕ್ಕೆ ತಾವು ಅಂತ ಇವೆ. ಪ್ರಪಂಚವಿಡೀ ಅದರಲ್ಲೇ ಇರುವಂತೆ. ಅದೇನು ತಪ್ಪಲ್ಲ, ಹೌದು. ತಪ್ಪು ಇರುವುದು ಯಾವುದೂ ಅತಿಯಾಗುವಲ್ಲಿ; ಒಂದೆಂದರೆ ಒಂದೇ ಅಲ್ಲ. ಆಚೆ ಈಚೆ ಪ್ರಪಂಚ ಇದೆ. ನಮಗೆ ಜನ್ಮಕೊಟ್ಟವರು, ನಮ್ಮ ಒಡಹುಟ್ಟಿದವರು, ನಮಗೆ ಅಕ್ಷರಜ್ಞಾನ ಕೊಟ್ಟವರು ನಮ್ಮ ಪರಿಸರ ಊರು ಕೇರಿ ಜನ... ಎಲ್ಲರೂ. ನಾವು ಕಲಿಯುವುದು ಮರೆಯಲಿಕ್ಕಲ್ಲ, ಇನ್ನಷ್ಟು ಎಲ್ಲವನ್ನು ಅರಿಯಲಿಕ್ಕೆ – ಎಂಬುದನ್ನೇ ಮರೆಯುವಲ್ಲಿ. ನಮ್ಮದೇ ಆದೊಂದು ಭಾಷೆ ಇದೆ ಎಂಬುದನ್ನಂತೂ ಮರೆತೇ ಬಿಡುವ ಕಾಲವಿದು. ನೀನಾದರೂ ಅದನ್ನು ಮರೆಯುವುದಿಲ್ಲ... ಅಂದುಕೊಳ್ಳುವೆ. ಭಾಷೆ ಮರೆತರೆ ನೀನು ನಿನ್ನನ್ನೇ ಮರೆತಂತೆ. ನೆನಪಿಡು. ಈ ಕುರಿತು ವಿವರವಾಗಿ ಇನ್ನೆಂದಾದರೂ ಬರೆವೆ. ಈಗಕ್ಕೆ ಇಷ್ಟು ಸಾಕು. 

ಮುದ್ದೂ,
ದುಡ್ಡಿನಿಂದ ಮಾತ್ರ ಮನುಷ್ಯರನ್ನು ಅಳೆಯುವ ದುಶ್ಚಟ ನಿನಗೆ ಎಂದೂ ಬಾಧಿಸದಿರಲಿ. ಅಷ್ಟೇ ಅಲ್ಲ, ಜಾತಿ ಮತ ಸಮುದಾಯ ಎಲ್ಲವೂ ಹೇಗೋ ನಮ್ಮಮಧ್ಯೆ ನುಸುಳಿವೆ. ‘ನಾವೆಲ್ಲ ಒಂದೇ’ ಎಂಬುದೇ ಅಳಿಸಿಹೋಗಿದೆ. ನೀನೇ ಚಿಕ್ಕಂದಿನಲ್ಲಿ ಒಮ್ಮೆ ನಿನ್ನ ತರಗತಿಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವಾಗ ಅವರ ಜಾತಿಮತ ಸಮೇತ ಹೇಳಿದೀ, ಅವರು ‘ಕೆಟ್ಟವರು’ ಎಂದೀ, ನೆನಪಿದೆಯಾ ಮರಿ? ಆದರೆ ತಿದ್ದಿ ಹೇಳಿದ್ದೇ ಹೇಗೆ ನಿನಗೆ ಅವರೂ ನಿನ್ನಂತೆಯೇ ಎಂದು ತಿಳಿದುಬಿಟ್ಟಿತು! ತಿಳಿಯಬೇಕಾದ್ದು ಇನ್ನೂ ಎಷ್ಟೋ ಇವೆ. ಅಲ್ಲದ್ದಕ್ಕೆ ಕಿವಿಗೊಡದೆ ಎಲ್ಲರನ್ನೂ ಪ್ರೀತಿಸು. ಮನುಷ್ಯರನ್ನಷ್ಟೇ ಅಲ್ಲ, ನೆಲ ನೀರು ಗಾಳಿ ಗುಡ್ಡ ಆಕಾಶ ಮರ ಗಿಡ ಬಳ್ಳಿ ಮೃಗ ಪಕ್ಷಿ ಕ್ರಿಮಿಕೀಟ... ಎಲ್ಲವನ್ನೂ. ಎಲ್ಲವೂ ನಿನ್ನಂತೆಯೇ ನನ್ನಂತೆಯೆ ಜೀವ ಇರುವವೇ. ಜೀವವಿಲ್ಲದ್ದು ಯಾವ್ಯಾವುದೂ ಇಲ್ಲ, ತಿಳಕೋ.

...ಅಂದ ಹಾಗೆ ನಿನ್ನ ಕ್ಲಾಸಿನ ಹುಡುಗಿಯೊಬ್ಬಳಿಗೆ ಏನೋ ಆಗಿ, ಅವಳು ಅಳುತಿದ್ದಳಂತೆ, ನಿನ್ನಮ್ಮ ಹೇಳಿದಳು. ಅವಳು ಆತಂಕಗೊಂಡಿದ್ದಳು. ‘ಇವತ್ತು ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರನ್ನೂ ಒಬ್ಬರಿಗೊಬ್ಬರು ಗೌರವ ತೋರಿ ಬೆಳೆಯುವಂತೆ ಬೆಳೆಸುವ ದೊಡ್ಡ ಹೊಣೆ ಇದೆಯಮ್ಮಾ’ ಎಂದಳು. ಅದು ಯಾವತ್ತಿನಿಂದಲೂ ಇತ್ತು. ಆದರೆ ಹೊಣೆ ಹೊತ್ತವರಿರಲಿಲ್ಲ. ಹಾಗಾಗಿ ಹೆಣ್ಣುಮಕ್ಕಳನ್ನು ಕಾಣುವ ಕಣ್ಣೇ ಬೇರೆಯಾಯಿತು.

ಮಗೂ,
ಕಣ್ಣು ಬಹಳ ಮುಖ್ಯ, ಹೊರಗಣ್ಣು ಮಾತ್ರವಲ್ಲ, ಒಳಗಣ್ಣೂ. ಅದು ಶುಭ್ರವಾಗಿದ್ದರೆ ಬದುಕು ಶುಭ್ರ, ಇಡೀ ಜಗತ್ತೇ ಶುಭ್ರ.
ಆ ಶುಭ್ರತೆ ನಿನಗಿರಲಿ, ಅದು ನಿನ್ನನ್ನು ಕಾಪಾಡಲಿ. ನಿನ್ನಿಂದ ಯಾರ ಮನಕೂ  ನೋವಾಗದಿರಲಿ. ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಕಡಿಮೆ ಹೆಚ್ಚು ಎಂಬುದನ್ನು ನಂಬದಿರು. ಅದೆಲ್ಲ ಸುಳ್ಳು; ಇಬ್ಬರೂ ಸರಿಸಮಾನರು. ಈ ನಂಬಿಕೆ ನಿನ್ನಲ್ಲಿ ದೃಢವಾಗಿರಲಿ.

ಹಾಗಂತ ಇಬ್ಬರಲ್ಲಿಯೂ ಅವರವರದೇ ಮಿತಿ ಮತ್ತು ವಿಶೇಷ ಗುಣಗಳಿವೆ. ಬೆಳೆದಂತೆ ನಿನಗೇ ಅವುಗಳ ಅರಿವಾಗುತ್ತದೆ, ಆಗಲಿ.
ಪತ್ರ ಒಳಗಿಳಿಯಲು ತುಸು ಕಷ್ಟವಾಯಿತೆ? ತೆಗೆದಿಡು. ಮತ್ತೆ ಯಾವತ್ತಾದರೂ ಓದು. ಈಗಲೇ ಈ ಕ್ಷಣವೇ ಎಲ್ಲವೂ ಅರ್ಥಗಿರ್ತ ಆಗಿಯೇ ಬಿಡಬೇಕೆಂಬ ಹಟವೂ ಸಲ್ಲದಷ್ಟೆ?

ರಜೆಗೆ ನಮ್ಮನೆಗೆ ಬರುತ್ತಿಯಲ್ಲ ಈ ಬಾರಿ? ನನ್ನ ‘ಅಮ್ಮನಪತ್ರ’ದ ಕಟ್ಟನ್ನು ನಿನಗೆ ಕೊಡುವೆ. ಹೋ, ಈಗ ಹೀಗೆ ಹೇಳಿ, ಕಡೆಗೆ ‘ಅಜ್ಜಿಮರೆವಿ’ನಲ್ಲಿ ಕೊಡದೇ ಹೋದೇನು. ಮರೆಯದೇ ನೆನಪಿಂದ ಪಡೆದುಕೊ. ಅದು ನಿನಗೆ ನಾನು ಕೊಡುವ ಆಸ್ತಿ. ಜೋಪಾನ ತೆಗೆದಿಟ್ಟುಕೋ. ಇನ್ನೊಂದು ಹತ್ತುವರ್ಷ ಕಳೆಯಲಿ, ಆಮೇಲೆ, ಅದನ್ನು ಮೆಲ್ಲಗೆ ಬಿಡಿಸಿ, ಸಾಧ್ಯವಾದಾಗೆಲ್ಲ ಒಂದೊಂದನ್ನೇ  ಓದು, ಸ್ವಾರಸ್ಯ, ಮತ್ತೆ ಹೇಳು!
ಅಯ್ಯೊ, ನನಗೆ ಮರುಳು, ನೀನು ಹೇಳುವುದನ್ನು ಕೇಳಲು ಆಗ ನಾನೆಲ್ಲಿ ಇರುವೆ!
ಬಿಡು, ಎಲ್ಲಾದರೂ ಇದ್ದೇ ಇರುವೆ, ಇದ್ದು ಕಿವಿ ತೆರೆದು ಕೇಳೇ ಕೇಳುವೆ!

ಈ ಪತ್ರ ಓದುವುದು ಮಾತ್ರವಲ್ಲ, ಹ್ಞಾ, ನನಗೆ ಉತ್ತರ ಬರೆಯಬೇಕು. ಕೊನೇಪಕ್ಷ ತಿಂಗಳಿಗೆ ಒಂದಾದರೂ... ಬರೆಯುವಿಯಷ್ಟೆ? ಕಂಪ್ಯೂಟರ್ ಕಲಿಸಿದ್ದಾರೆ ಅಂತ, ಇಂಗ್ಲಿಷಿನಲ್ಲಿ ಟೈಪ್ ಮಾಡುವುದು ಸುಲಭ ಅಂತ ಅದರಲ್ಲಿ ಬರೆಯಬೇಡ. ಕೈಯಲ್ಲೇ ಕನ್ನಡದಲ್ಲೇ ಬರೆ. ಅಂಚೆಯಲ್ಲಿ ನಿನ್ನ ಪತ್ರ ಬಂತು ಎಂದರೆ ನೀನೇ ಬಂದಂತೆ, ಅದರಲ್ಲಿ ನಿನ್ನಕ್ಷರ ನೋಡಿದೆನೆಂದರೆ ನಿನ್ನನ್ನೇ ಕಂಡಂತೆ ಮನಸ್ಸಿಗೆ  ಮುದಮುದವಾಗುತ್ತದೆ. 
ಎಂದು,
ನಿನಗೆ ಮತ್ತು ಎಲ್ಲಾ ಮಕ್ಕಳಿಗೆ 
ಒಳ್ಳೆಯ ಜಗತ್ತನ್ನು ಹಾರೈಸುತ್ತ,
ಪ್ರೀತಿ ಕೊಂಡಾಟದಿಂದ
ನಿನ್ನ,
ಅಜ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT