ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವಾರ ಎಟಿಎಂ ಅಡಚಣೆ

ಜನರಿಗೆ ತೊಂದರೆಯಾಗಿದ್ದಕ್ಕೆ ವಿಷಾದಿಸಿದ ಸಚಿವ ಜೇಟ್ಲಿ
Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿರುವ ಅಂದಾಜು 2 ಲಕ್ಷ ಎಟಿಎಂ ಕೇಂದ್ರಗಳಲ್ಲಿ ಹಣ ಸರಿಯಾಗಿ ಸಿಗುವಂತಾಗಲು ಇನ್ನೂ ಮೂರು ವಾರ ಬೇಕಾಗಬಹುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

‘₹100ರ ನೋಟುಗಳ ಜೊತೆ ಹೊಸ ₹ 2,000 ಮತ್ತು ₹ 500 ಮುಖಬೆಲೆಯ ನೋಟುಗಳೂ ಗ್ರಾಹಕರಿಗೆ ಸಿಗುವಂತೆ ಆಗಲು ಪ್ರತಿ ಎಟಿಎಂ ಯಂತ್ರದಲ್ಲಿ ಕೆಲವು ಮಾರ್ಪಾಡುಗಳನ್ನು ತರಬೇಕು. ಇದಕ್ಕೆ ತುಸು ಕಾಲ ಬೇಕು’ ಎಂದು ಅವರು ಹೇಳಿದರು.

ಚಲಾವಣೆಯಲ್ಲಿದ್ದ ₹ 1,000 ಮತ್ತು ₹ 500 ಮುಖಬೆಲೆಯ ನೋಟುಗಳ ಮೌಲ್ಯ ₹ 14 ಲಕ್ಷ ಕೋಟಿ ಆಗಿತ್ತು. ಇಷ್ಟು ದೊಡ್ಡ ಮೌಲ್ಯದ ನೋಟುಗಳನ್ನು ಬದಲಿಸಲು ಅಗತ್ಯವಿರುವ ಹೊಸ ನೋಟುಗಳ ಸಂಗ್ರಹ ಆರ್‌ಬಿಐ ಮತ್ತು ಇತರ ಬ್ಯಾಂಕ್‌ಗಳ ಬಳಿ ಇದೆ ಎಂದು ಅವರು ತಿಳಿಸಿದರು.

‘ಜನಧನ ಮೇಲೆ ನಿಗಾ’: ಜನಧನ ಯೋಜನೆಯ ಅಡಿ ತೆರೆದ ಖಾತೆಗಳಿಗೆ ಇದ್ದಕ್ಕಿದ್ದಂತೆ ಹಣ ಜಮಾ ಆಗಿರುವುದರ ಬಗ್ಗೆ ಸರ್ಕಾರ ನಿಗಾ ಇಟ್ಟಿದೆ ಎಂದು ಜೇಟ್ಲಿ ಹೇಳಿದರು.ನೋಟುಗಳನ್ನು ಅಕ್ರಮವಾಗಿ ಬದಲಾಯಿಸುವವರು, ಕಪ್ಪುಹಣ ಬಚ್ಚಿಡಲು ಚಿನ್ನ ಖರೀದಿ ಮಾಡುತ್ತಿರುವವರ ಮೇಲೆಯೂ ಸರ್ಕಾರ ಹದ್ದಿನ ಕಣ್ಣಿಟ್ಟಿದೆ ಎಂದು ಅವರು ಎಚ್ಚರಿಸಿದರು.

ನೋಟುಗಳ ಚಲಾವಣೆ ರದ್ದು ಮಾಡಿದ ನಂತರ ಉದ್ಭವಿಸಿರುವ ಪರಿಸ್ಥಿತಿ ಅವಲೋಕಿಸಲು ಹಾಗೂ ಹೊಸ ನೋಟುಗಳ ಹಂಚಿಕೆ ಬಗ್ಗೆ ಮಾಹಿತಿ ಪಡೆಯಲು ಜೇಟ್ಲಿ ಅವರು ಆರ್‌ಬಿಐನ ಹಿರಿಯ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು.

‘ಜನಧನ ಖಾತೆಗಳಲ್ಲಿ ಹಣ ಜಮಾ ಇದ್ದಕ್ಕಿದ್ದಂತೆ ಹೆಚ್ಚಿದೆ ಎಂಬ ವರದಿಗಳು ಬಂದಿವೆ. ಹಣಕಾಸಿನ ವಹಿವಾಟಿನ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ನಿಗಾ ಇಟ್ಟಿದೆ’ ಎಂದು ನಂತರ ತುರ್ತು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚಲಾವಣೆಯಲ್ಲಿ ಇಲ್ಲದಿರುವ ನೋಟುಗಳನ್ನು ಅಕ್ರಮವಾಗಿ ಬಳಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದರು. ವಿದೇಶಿ ವಿನಿಮಯ ವಹಿವಾಟಿನಲ್ಲಿ ತೊಡಗಿರುವ 67 ವರ್ತಕರ ಮೇಲೆ ಇ.ಡಿ. ಕಣ್ಣಿಟ್ಟಿದೆ. ಪ್ರಮುಖ ಚಿನ್ನದ ವ್ಯಾಪಾರಿಗಳ ಮೇಲೆ ಕೇಂದ್ರ ಅಬಕಾರಿ ಗುಪ್ತದಳ ನಿಗಾ ಇಟ್ಟಿದೆ ಎಂದು ತಿಳಿಸಿದರು.

ಸಚಿವರ ವಿಷಾದ: ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಕ್ರಮದಿಂದ ಜನರಿಗೆ ಆಗಿರುವ ತೊಂದರೆಗೆ ಜೇಟ್ಲಿ ವಿಷಾದ ವ್ಯಕ್ತಪಡಿಸಿದರು.

‘ಜನ ತುಸು ಸಂಯಮದಿಂದ ಇರಬೇಕು. ಈಗ ಕೈಗೊಂಡಿರುವ ಕ್ರಮದಿಂದ ಅರ್ಥ ವ್ಯವಸ್ಥೆಗೆ ದೂರಗಾಮಿ ಪ್ರಯೋಜನಗಳು ಹೆಚ್ಚಿವೆ’ ಎಂದು ಅವರು ಹೇಳಿದರು. ನೋಟು ಚಲಾವಣೆ ರದ್ದು ವಿಚಾರ ತೀರಾ ರಹಸ್ಯವಾಗಿದ್ದ ಕಾರಣ, ಹೊಸ ನೋಟುಗಳ ಅಗತ್ಯಕ್ಕೆ ತಕ್ಕಂತೆ ಎಟಿಎಂ ಯಂತ್ರಗಳಲ್ಲಿ ಮೊದಲೇ ಬದಲಾವಣೆ ತರಲು ಆಗಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ವ್ಯವಸ್ಥೆಯಲ್ಲಿ ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಣ ಚಲಾವಣೆ ಆರಂಭವಾದ ನಂತರದ ಪ್ರಯೋಜನಗಳು ಅಧಿಕವಾಗಿರುತ್ತವೆ. ಜನರಿಂದ ಬರುವ ಹಣದಿಂದಾಗಿ ಬ್ಯಾಂಕ್‌ಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚಲಿದೆ’ ಎಂದರು.

ಇಂದು ಅಂಚೆ ಕಚೇರಿ ತೆರೆಯಲಿದೆ (ಬೆಂಗಳೂರು): ‘ರಾಜ್ಯದ ಎಲ್ಲ ಅಂಚೆ ಕಚೇರಿಗಳು ಭಾನುವಾರವೂ (ನ.13) ಕಾರ್ಯನಿರ್ವಹಿಸಲಿವೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು ರದ್ದಾದ ನೋಟುಗಳನ್ನು ಠೇವಣಿ ಇಡಬಹುದು.

ಜತೆಗೆ ನೋಟುಗಳ ವಿನಿಮಯ ಮಾಡಿಸಿಕೊಳ್ಳಬಹುದು’ ಎಂದು ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌  (ಕರ್ನಾಟಕ ವೃತ್ತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ನ.10, 11ರಂದು ರಾಜ್ಯದ ಅಂಚೆ ಕಚೇರಿ ಗಳಲ್ಲಿ ಉಳಿತಾಯ ಯೋಜನೆಯಡಿ ₹362 ಕೋಟಿ ಗಳಷ್ಟು ಠೇವಣಿಯಾಗಿದೆ’ ಎಂದು ಹೇಳಿದ್ದಾರೆ.

ಕಪ್ಪು ಕುಳಗಳ ವಿರುದ್ಧ ಕ್ರಮ ಖಚಿತ: ಪ್ರಧಾನಿ
ಕೋಬ್ (ಪಿಟಿಐ):
ಕಪ್ಪು ಹಣವನ್ನು ಬ್ಯಾಂಕ್‌ ಗಳಿಗೆ ಜಮಾ ಮಾಡಿರುವವರು ಮತ್ತು ಮಾಡುತ್ತಿ ರುವವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

‘ಅಪ್ರಾಮಾಣಿಕರೇ, ನಾವು ಬ್ಯಾಂಕ್‌ಗಳಲ್ಲಿ ಕಪ್ಪುಹಣ ಜಮಾ ಮಾಡಿದ್ದೇವೆ, ಇನ್ನು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಭಾವಿಸಬೇಡಿ. ಡಿಸೆಂಬರ್ 30ರ  ನಂತರ ನಿಮ್ಮ ಶಿಕ್ಷೆಗೆಂದೇ ಬೇರೊಂದು ಯೋಜನೆ   ಬರಬಹುದು’ ಎಂದು ಪ್ರಧಾನಿ ಹೇಳಿದ್ದಾರೆ.

ಬಿಜೆಪಿ ಸ್ನೇಹಿತರಿಗೆ ಗೊತ್ತಿತ್ತು: ಕೇಜ್ರಿವಾಲ್
ನವದೆಹಲಿ (ಪಿಟಿಐ):
₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡು ವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿ ಸುವ ಮೊದಲೇ, ಬಿಜೆಪಿ ತನ್ನ ‘ಸ್ನೇಹಿತರಿಗೆ’ ಈ ಬಗ್ಗೆ ಮಾಹಿತಿ ನೀಡಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದರು. ಅಲ್ಲದೆ, ಈ ನೋಟುಗಳ ಚಲಾವಣೆ ರದ್ದು ಪಡಿಸುವ ತೀರ್ಮಾನ ‘ಭಾರಿ ಹಗರಣ’ ಎಂದೂ ಅವರು ಬಣ್ಣಿಸಿದರು.

ಈ ತೀರ್ಮಾನದ ಮೂಲಕ ಪ್ರಧಾನಿ ಮೋದಿ ಅವರು ಕಾಳ ಧನಿಕರ ಮೇಲೆ ‘ನಿರ್ದಿಷ್ಟ ದಾಳಿ’ ನಡೆಸಿಲ್ಲ. ಬದಲಿಗೆ, ಅವರು ಜನ ಸಾಮಾ ನ್ಯರ ಸಣ್ಣ ಉಳಿತಾಯದ ಮೇಲೆ ದಾಳಿ ನಡೆಸಿ ದ್ದಾರೆ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.

ತಮ್ಮ ಆರೋಪಕ್ಕೆ ಪೂರಕವಾಗಿ ಕೇಜ್ರಿ ವಾಲ್ ಅವರು, ‘ಬಿಜೆ ಪಿಯ ಪಂಜಾಬ್‌ ಘಟಕದ ಕಾನೂನು ವಿಭಾಗದ ಮುಖ್ಯಸ್ಥ ಸಂಜೀವ್ ಕಂಬೋಜ್ ಅವರು ನೋಟು ಚಲಾ ವಣೆ ರದ್ದು ಗೊಳಿಸುವ ಘೋಷ ಣೆಗೂ ಮುನ್ನವೇ ₹ 2,000 ಮುಖಬೆಲೆಯ ನೋಟು ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ’ ಎಂದರು.

‘ಠೇವಣಿ ಹೆಚ್ಚಳ’: ‘ಜುಲೈನಿಂದ ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿ ಹಣ ಜಮಾ ಮಾಡುವ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಅಂದರೆ, ನೋಟು ಚಲಾವಣೆ ರದ್ದತಿ ಘೋಷಣೆಗೂ ಮುನ್ನವೇ ಬಿಜೆಪಿ ತನ್ನ ಸ್ನೇಹಿತರಿಗೆ ಈ ಮಾಹಿತಿ ರವಾನಿಸಿತ್ತು ಎನ್ನುವುದಕ್ಕೆ ಇದು ಉದಾಹರಣೆ. ಇದೊಂದು ದೊಡ್ಡ ಹಗರಣ’ ಎಂದು ಕೇಜ್ರಿವಾಲ್ ಆರೋಪಿಸಿದರು.

ನೋಟು ರದ್ದು: ಏನು ಎತ್ತ?
* ಶನಿವಾರದ ವೇಳೆಗೆ ಶೇಕಡ 40ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ಲಭ್ಯ
* ಕೆಲವೇ ಗಂಟೆಗಳಲ್ಲಿ ಖಾಲಿಯಾದ ಎಟಿಎಂಗಳಲ್ಲಿನ ಇದ್ದ ಹಣ
* ₹ 500 ಮುಖಬೆಲೆಯ ಹೊಸ ನೋಟುಗಳು ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಲಭ್ಯ
* ಬೇಡಿಕೆ ಪೂರೈಸಲು ₹100ರ ಮುಖಬೆಲೆಯ ಗಲೀಜಾದ ನೋಟು ಚಲಾವಣೆಗೆ ಬಿಟ್ಟ ಆರ್‌ಬಿಐ
* ಎರಡು ದಿನಗಳಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ₹ 2 ಲಕ್ಷ ಕೋಟಿ ಜಮೆ
* ಎಸ್‌ಬಿಐಗೆ ಬಂದಿರುವ ಹಣದ ಮೊತ್ತ ₹ 47 ಸಾವಿರ ಕೋಟಿ
* ರೈತರ ಹಾಗೂ ಗೃಹಿಣಿಯರ ಖಾತೆಗಳಲ್ಲಿ ಜಮಾ ಆಗುವ ₹ 2.5 ಲಕ್ಷದವರೆಗಿನ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವುದಿಲ್ಲ: ಕೇಂದ್ರ ಅಭಯ
* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ಸೋಮವಾರದ ತನಕ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT