ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಸ್ನೇಹಿ’ ಗ್ರಾಮಪಂಚಾಯಿತಿ

Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮ ಬಂಡೀಪುರ ರಾಷ್ಟ್ರೀಯ ಉದ್ಯಾನದೊಂದಿಗೆ ಬೆಸೆದುಕೊಂಡಿದೆ. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇಲ್ಲಿ ಮೊದಲು, ಮಕ್ಕಳ ಕಲಿಕೆಗೆ 7ನೇ ತರಗತಿವರೆಗೆ ಮಾತ್ರ ಅವಕಾಶವಿತ್ತು. ಬಳಿಕ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದರು. ಎರಡು ವರ್ಷದ ಹಿಂದೆ ಈ ವಿಷಯ ಬಾಲಪಂಚಾಯಿತಿ ಸಭೆಯಲ್ಲಿ ಚರ್ಚೆಯಾಯಿತು.

ಸಭೆಯ ನಿರ್ಣಯ ಶಿಕ್ಷಣ ಇಲಾಖೆ ಆಯುಕ್ತರಿಗೆ ಮುಟ್ಟಿತು. ಮಕ್ಕಳ ಒಕ್ಕೊರಲ ಬೇಡಿಕೆಗೆ, ಶಾಲೆಯಲ್ಲಿ 8ನೇ ತರಗತಿ ಪ್ರಾರಂಭಿಸಲು ಅನುಮತಿ ಸಿಕ್ಕಿತು. ಇಂಥಹ ಹತ್ತಾರು ಸಮಸ್ಯೆ ಪರಿಹರಿಸಿದ ಶ್ರೇಯಕ್ಕೆ ಬಾಲಪಂಚಾಯಿತಿ ಪಾತ್ರವಾಗಿದೆ.

‘ಬಚ್ಪನ್‌ ಬಚಾವೋ’ ಎಂದಾಕ್ಷಣ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರು ಥಟ್ಟನೆ ನೆನಪಿಗೆ ಬರುತ್ತಾರೆ. ಅನಿಷ್ಟ ಬಾಲಕಾರ್ಮಿಕ ಪದ್ಧತಿಯ ಮೂಲೋತ್ಪಾಟನೆಯೇ ಈ ಆಂದೋಲನದ ಗುರಿ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ‘ಬಚ್ಪನ್‌ ಬಚಾವೋ’ ಆಶಯ ಸಾಕಾರಗೊಂಡಿದೆ. ಮಂಗಲ, ಹಂಗಳ, ಕಣ್ಣೇಗಾಲ ವ್ಯಾಪ್ತಿಯಲ್ಲಿ – ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ‘ಮಕ್ಕಳ ಸ್ನೇಹಿ’ ಗ್ರಾಮಪಂಚಾಯಿತಿ ರೂಪಿಸುವ ಧ್ಯೇಯವಿಟ್ಟುಕೊಂಡು 6 ವರ್ಷಗಳಿಂದ ಅಭಿಯಾನದಡಿ ಕೆಲಸ ನಡೆಯುತ್ತಿದೆ. ಚಿಣ್ಣರಲ್ಲಿ ನಾಯಕತ್ವದ ಗುಣ ಬೆಳೆಸಲು ಒತ್ತು ನೀಡಲಾಗಿದೆ.

ಕಾರ್ಯ ನಿರ್ವಹಣೆ ಹೇಗೆ?
ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಕ್ಕಹಳ್ಳಿ, ಎಲಚೆಟ್ಟಿ, ಕಣಿಯನಪುರ ಕಾಲೊನಿ, ಕಾರೇಮಾಳ ಕಂದಾಯ ಗ್ರಾಮಗಳಿವೆ. ಗಿರಿಜನರು ವಾಸಿಸುತ್ತಿರುವ ಹಾಡಿನ ಕಣಿವೆ, ಚೆನ್ನಿಕಟ್ಟೆ, ಬೂರುದಾರ ಹುಂಡಿ, ಆನಂಜಿಹುಂಡಿ, ಲೊಕ್ಕೆರೆ, ಗುಡ್ಡೆಕೆರೆ, ಚೆಲುವರಾಯನಪುರ, ಕಣಿಯನಪುರ ಹಾಡಿಗಳಿವೆ.

ಪ್ರತಿ ಗ್ರಾಮದಲ್ಲೂ 11 ಮಕ್ಕಳು ಒಳಗೊಂಡ ಬಾಲಪಂಚಾಯಿತಿ ರಚಿಸಲಾಗಿದೆ. ಪ್ರತಿ ಶನಿವಾರ ಶಾಲೆ ಮುಗಿದ ತಕ್ಷಣ ಈ ಪಂಚಾಯಿತಿಯ ಸಭೆ ನಡೆಯಲಿದೆ. ಇಲ್ಲಿ ಮಕ್ಕಳ ಕುಂದುಕೊರತೆ ಬಗ್ಗೆ ಚರ್ಚಿಸಲಾಗುತ್ತದೆ. ಬಳಿಕ ಸಮಸ್ಯೆ ಪರಿಹರಿಸಲು ಗ್ರಾಮ, ತಾಲ್ಲೂಕು ಪಂಚಾಯಿತಿಗೆ ಮನವಿ ಸಲ್ಲಿಸಲಾಗುತ್ತದೆ. ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಮಕ್ಕಳೇ ಪರಿಶೀಲಿಸುತ್ತಾರೆ.

ಆರೋಗ್ಯ, ಶಿಕ್ಷಣ, ಮಕ್ಕಳ ಹಕ್ಕುಗಳ ರಕ್ಷಣೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಬಾಲಪಂಚಾಯಿತಿ ಕೈಗೊಂಡ ನಿರ್ಣಯಕ್ಕೆ ಯಶಸ್ಸು ಸಿಕ್ಕಿದೆ. ಮಂಗಲದಲ್ಲಿ ಮಗುವೊಂದು ಜಾಂಡೀಸ್‌ ರೋಗಕ್ಕೆ ತುತ್ತಾದ ಬಗ್ಗೆ ಆರೋಗ್ಯ ಇಲಾಖೆಯ ಗಮನ ಸೆಳೆದು, ಊರಿನ ಸ್ವಚ್ಛತೆಗೆ ಮುನ್ನುಡಿ ಬರೆದ ಹೆಗ್ಗಳಿಕೆ ಬಾಲಪಂಚಾಯಿತಿಗೆ ಇದೆ.

‘ಬಾಲಪಂಚಾಯಿತಿಯ ಸುಗಮ ಕಾರ್ಯ ನಿರ್ವಹಣೆಗೆ ಪ್ರತಿ ಗ್ರಾಮದಲ್ಲೂ ಆಸಕ್ತ ಯುವಕರನ್ನು ಒಳಗೊಂಡ ಯುವಮಂಡಳ ರಚಿಸಲಾಗಿದೆ. ಜೊತೆಗೆ, ಸ್ವಸಹಾಯ ಸಂಘದ ಸದಸ್ಯರು, ಗ್ರಾಮದ ಮುಖಂಡರು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಬಾಲಪಂಚಾಯಿತಿಯ ಉತ್ತಮ ಕಾರ್ಯ ನಿರ್ವಹಣೆಗೆ ಇವು ಪೂರಕವಾಗಿ ಕೆಲಸ ನಿರ್ವಹಿಸುತ್ತವೆ’ ಎನ್ನುತ್ತಾರೆ ‘ಬಚ್ಪನ್‌ ಬಚಾವೋ’ ಆಂದೋಲನದ ಸಹಾಯಕ ಯೋಜನಾಧಿಕಾರಿ ಜಿ.ಸಿ. ನಾರಾಯಣಸ್ವಾಮಿ.

‘ಮಂಗಲ ಪಂಚಾಯಿತಿಯು ಬಾಲಮಿತ್ರ ಪಂಚಾಯಿತಿಯಾಗಿ ಘೋಷಣೆಯಾಗಿದೆ. ಪಂಚಾಯಿತಿ ವ್ಯಾಪ್ತಿಯ 11 ಬಾಲ ಪಂಚಾಯಿತಿಗಳನ್ನು ಮುಂದುವರಿಸಿಕೊಂಡು ಹೋಗುವ ಹೊಣೆಯನ್ನು ಸ್ಥಳೀಯ ಆಡಳಿತಕ್ಕೆ ನೀಡಲಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT