ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯ ಗೀಳಲ್ಲಿ...

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇಮ್ರಾನ್‌ ಖಾನ್‌
ಅಮಿರ್‌ ಖಾನ್‌ ಸಂಬಂಧಿಯಾದ ಇಮ್ರಾನ್‌ ಬಾಲನಟನಾಗಿ ಮೊದಲು ಕಾಣಿಸಿಕೊಂಡಿದ್ದು, ಅಮಿರ್‌ ಖಾನ್‌ ನಟನೆಯ ‘ಕಯಾಮತ್‌ ಸೆ ಕಯಾಮತ್‌ ತಕ್‌’ ಮತ್ತು ‘ಜೋ ಜೀತಾ ವಹಿ ಸಿಕಂದರ್‌’ ಸಿನಿಮಾದಲ್ಲಿ.

ನಂತರ 2008ರಲ್ಲಿ ತೆರೆಕಂಡ ‘ಜಾನೇ ತು..ಯಾ ಜಾನೆ ನಾ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿ ಕಾಣುತ್ತಿದ್ದಂತೆ ಇವರು ಹಲವು ಅವಕಾಶಗಳನ್ನು ಪಡೆದರು. ಕಳೆದ ವರ್ಷ ಬಿಡುಗಡೆಯಾದ ‘ಕಟ್ಟೀ ಬಟ್ಟೀ’ ಸಿನಿಮಾದ ನಂತರ ಯಾವ ಸಿನಿಮಾವನ್ನು ಇವರು ಒಪ್ಪಿಕೊಂಡಿಲ್ಲ. 

**
ಹೃತಿಕ್‌ ರೋಷನ್‌
‘ಕಹೋನಾ ಪ್ಯಾರ್‌ ಹೇ’ ಸಿನಿಮಾದ ಮೂಲಕವೇ ಹೃತಿಕ್‌ ಬೆಳ್ಳಿ ತೆರೆ ಪ್ರವೇಶಿದ್ದು, ಎಂದೇ ಹಲವರು ತಿಳಿದಿದ್ದಾರೆ. ಆದರೆ ಹೃತಿಕ್ ಆರು ವರ್ಷದವರಿರುವಾಗಲೇ ‘ಆಶಾ’ ಸಿನಿಮಾದಲ್ಲಿ ನಟಿಸಿದ್ದರು. ನಂತರ ‘ಆಪ್‌ ಕೆ ದಿವಾನೆ’ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದನ್ನು ಮಾಡಿದ್ದರು.
 
ಹನ್ನೊಂದನೇ ವರ್ಷದಲ್ಲಿ ತಮ್ಮ ಅಜ್ಜ ಓಂ ಪ್ರಕಾಶ್‌ ಅವರ ‘ಭಗ್‌ವಾನ್‌ ದಾದಾ’ ಸಿನಿಮಾದಲ್ಲಿ ಇವರು ನಟಿಸಿದ್ದರು. ನಂತರ ಶಿಕ್ಷಣಕ್ಕೆ ಪ್ರಾಮುಖ್ಯ ನೀಡುವ ಉದ್ದೇಶದಿಂದ ಇವರು ಸಿನಿಮಾಕ್ಕೆ ಅಲ್ಪವಿರಾಮವನ್ನು ಹಾಕಿದ್ದರು. 
 
**
ಶ್ರೀದೇವಿ
53ನೇ ವಯಸ್ಸಿನಲ್ಲಿಯೂ  ಸೌಂದರ್ಯವನ್ನು ಕಾಪಿಟ್ಟುಕೊಂಡಿರುವ ಶ್ರೀದೇವಿ, ನಾಲ್ಕು ವರ್ಷವಿರುವಾಗಲೇ ತಮಿಳಿನ ‘ಕಂದನ್‌ ಕರುಣೈ’ ಸಿನಿಮಾದ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದವರು. ನಂತರ ತೆಲುಗು, ಹಿಂದಿ, ಮಲಯಾಳಿ, ಕನ್ನಡ ಸಿನಿಮಾಗಳಲ್ಲಿ ನಟಿಸಿ  ಜನಪ್ರಿಯತೆ ಪಡೆದಿದ್ದಾರೆ.
 
1967–97ರವರೆಗೆ ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಶ್ರೀದೇವಿ, ನಂತರ ಹದಿನೈದು ವರ್ಷ ಸಿನಿಮಾ ನಂಟಿನಿಂದ ದೂರವೇ ಉಳಿದಿದ್ದರು.
 
2012ರಲ್ಲಿ ಬಿಡುಗಡೆಯಾದ ‘ಇಂಗ್ಲಿಷ್‌ ವಿಂಗ್ಲಿಷ್‌’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಮರುಪ್ರವೇಶ ಮಾಡಿದ ಇವರು, ಭರ್ಜರಿ ಯಶಸ್ಸನ್ನೂ ಕಂಡರು. ಈ ಸಿನಿಮಾದಲ್ಲಿನ ಪ್ರಬುದ್ಧ ನಟನೆಯಿಂದಾಗಿ ಶ್ರೀದೇವಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು. ಕಳೆದ ವರ್ಷವಷ್ಟೇ ಬಿಡುಗಡೆಯಾದ ತಮಿಳಿನ ‘ಪುಲಿ’ ಸಿನಿಮಾದಲ್ಲಿ  ಇವರು ನಟಿಸಿದ್ದಾರೆ.
 
**
ಕುನಾಲ್‌ ಖೆಮೂ
ನಟಿ ಸೋಹಾ ಅಲಿ ಖಾನ್‌ ಅವರನ್ನು ವರಿಸಿರುವ ಕುನಾಲ್‌, ನಟನೆಯ ಅಂಗಳಕ್ಕೆ ಇಳಿದಿದ್ದು, ಆರನೇ ವರ್ಷದಲ್ಲಿ. ಸಿನಿಮಾದ ನಂಟು ಹೊಂದಿರುವ ರವಿ ಮತ್ತು ಜ್ಯೋತಿ ದಂಪತಿ ಪುತ್ರ ಕುನಾಲ್‌. ಹೀಗಾಗಿ ಇವರಿಗೆ ನಟನೆ ಪಟ್ಟುಗಳು ರಕ್ತಗತ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯ ಮೂಲಕ ಇವರು ಮೊದಲ ಬಾರಿಗೆ ಬಣ್ಣ ಹಚ್ಚಿದರು.
 
ನಂತರ ‘ರಾಜಾ ಹಿಂದೂಸ್ತಾನಿ’, ‘ಬಾಯ್‌’, ‘ಹಮ್‌ ಹೇ ರಹಿ ಪ್ಯಾರ್‌ ಕೆ’ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಂಡರು.  ನಂತರ ಯುವನಟನಾಗಿ ಕಾಣಿಸಿಕೊಂಡಿದ್ದು, ‘ಕಲ್‌ಯುಗ್‌’ ಸಿನಿಮಾದಲ್ಲಿ. ಇಲ್ಲಿಯವರೆಗೂ ಸುಮಾರು ಇಪ್ಪತ್ತು ಸಿನಿಮಾಗಳಲ್ಲಿ ನಟಿಸಿರುವ ಇವರು, ಯಶಸ್ಸು ಗಳಿಸಿದ್ದು ಕಡಿಮೆಯೇ. 
 
**
ಕಮಲ್‌ ಹಾಸನ್‌
ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ, ಗೀತೆ ರಚನೆ... ಹೀಗೆ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡವರು ಕಮಲ್‌ ಹಾಸನ್. ಇವರು ನಾಲ್ಕನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು, ತೆಲುಗು, ಮಲಯಾಳಿ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 1959ರಲ್ಲಿ ಬಿಡುಗಡೆಯಾದ ಭೀಮ್‌ ಸಿಂಗ್‌ ನಿರ್ದೇಶನದ ತಮಿಳಿನ ‘ಕಲತ್ತೂರ್‌ ಕಣ್ಣಮ್ಮ’ ಇವರು ನಟಿಸಿದ ಮೊದಲ ಚಿತ್ರ.
 
ಈ ಸಿನಿಮಾದ ನಟನೆಗೆ ಇವರು ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದರು. ಬಾಲನಟನಾಗಿ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಒಂಬತ್ತು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಇವರು, ಭರತನಾಟ್ಯ ಮತ್ತು ಕರಾಟೆಯನ್ನು ಕಲಿತರು. ಯುವನಟನಾಗಿ ನಟಿಸಿದ ಮೊದಲ ಚಿತ್ರ ತಮಿಳಿನ ‘ಮಾನವನ್‌’.
 
**
ಊರ್ಮಿಳಾ 
ಆರನೇ ವರ್ಷದಲ್ಲಿ ‘ಕರ್ಮ್‌’ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದವರು ಊರ್ಮಿಳಾ ಮಾತೋಂಡ್ಕರ್. ಕೆಲವು ಮರಾಠಿ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. ಒಂಬತ್ತನೇ ವಯಸ್ಸಿಗೆ ಶೇಖರ್‌ ಕಪೂರ್‌ ಅವರ ‘ಮಾಸೂಮ್‌’ ಚಿತ್ರದಲ್ಲಿ ನಟಿಸಿ ಚಿತ್ರಪ್ರೇಮಿಗಳಿಂದ  ಭೇಷ್‌ ಎನ್ನಿಸಿಕೊಂಡಿದ್ದರು. 
 
ನಟನೆಗೆ ಇವರು ವಿರಾಮ ನೀಡಿದ್ದು ಕಡಿಮೆ. ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ರಂಗೀಲಾ’ ಸಿನಿಮಾ ಇವರ ವೃತ್ತಿ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಅಂದಿನಿಂದ ಇವರು ‘ರಂಗೀಲಾ ಹುಡುಗಿ’ ಎಂದೇ ಜನಪ್ರಿಯರಾದರು. ಇತ್ತೀಚೆಗೆ ಬೆಳ್ಳಿತೆರೆಯಲ್ಲಿ ಇವರು ಕಾಣಿಸುವುದು ಕಡಿಮೆಯಾಗಿದ್ದು, ಕಿರುತೆರೆಯಲ್ಲಿ 
ಮಿಂಚುತ್ತಿದ್ದಾರೆ.
 
**
ರಿಷಿ ಕಪೂರ್‌
ನಟ, ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡವರು ರಿಷಿ ಕಪೂರ್‌. ರಾಜ್‌ಕಪೂರ್‌ ಅವರ ಎರಡನೇಯ ಮಗನಾದ ಇವರಿಗೆ ಬಣ್ಣದ ಲೋಕದ ನಂಟು ರಕ್ತಗತವಾಗಿಯೇ ಬಂದಿದೆ.
 
1970ರಲ್ಲಿ  ‘ಮೇರಾ ನಾಮ್‌ ಜೋಕರ್‌’ ಸಿನಿಮಾದ ಮೂಲಕ ಮೊದಲ ಬಾರಿಗೆ ನಟನೆಯ ಅಂಗಳಕ್ಕೆ ಇಳಿದ ಇವರಿಗೆ ‘ನ್ಯಾಷನಲ್‌ ಫಿಲ್ಮ್ ಅವಾರ್ಡ್‌’ ಗರಿಮೆ ದೊರಕಿತ್ತು. ನಂತರ ಡಿಂಪಲ್‌ ಕಪಾಡಿಯಾ ಅವರ ಜೊತೆಗಿನ  ‘ಬಾಬಿ’ ಸಿನಿಮಾದ ನಟನೆಗಾಗಿ ಉತ್ತಮ ನಟ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. 1970ರಿಂದ 2000 ಇಸವಿಯೊಳಗೆ ಇವರು ತೊಂಬತ್ತೆರಡು ಸಿನಿಮಾದಲ್ಲಿ ನಟಿಸಿದ್ದಾರೆ. 
 
**
ಅಮಿರ್‌ ಖಾನ್‌
‘ಮಿ.ಪರ್ಫೆಕ್ಷನಿಸ್ಟ್‌’ ಎಂದು ಹೆಸರು ಪಡೆದಿರುವ ಬಹುಮಖ ಪ್ರತಿಭೆ ಅಮಿರ್‌ ಖಾನ್‌ ತಮ್ಮ ಸಂಬಂಧಿ ನಸೀರ್‌ ಹುಸೇನ್‌ ನಿರ್ದೇಶನದ ‘ಯಾದೋನ್‌ ಕಿ ಬಾರಾತ್‌’ ಸಿನಿಮಾದ ಮೂಲಕ ಬಾಲಿವುಡ್‌ ಅಂಗಳ ಪ್ರವೇಶಿಸಿದರು.
 
ನಂತರ ಬಹುಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದ ಇವರು, 1984 ರಲ್ಲಿ ‘ಹೋಲಿ’ ಸಿನಿಮಾದ ಮೂಲಕ ಪುನಃ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು. ‘ಕಯಾಮತ್ ಸೆ ಕಯಾಮತ್‌ ತಕ್‌’ ಸಿನಿಮಾದಿಂದ ಇವರು ಜನಪ್ರಿಯತೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT