ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಎಂಬ ಮಕ್ಕಳ ವಿಶ್ವವಿದ್ಯಾಲಯ

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಖಲೀಲ್ ಜಿಬ್ರಾನನು ಮಕ್ಕಳ ಬಗ್ಗೆ ಹಲವು ಮನನೀಯ ಮಾತುಗಳನ್ನು ಆಡಿದ್ದಾನೆ. ಅವನ ಪದ್ಯವೊಂದರ ಮೊದಲ ಸಾಲೇ ತುಂಬ ಸ್ವಾರಸ್ಯಕರವಾಗಿದೆ: Your children are not your children (ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ). ಇದು ಮನನೀಯವಾದ ಮಾತು. ಇಂದು ಪೋಷಕರು, ಪಾಲಕರು, ಶಿಕ್ಷಕರು, ಅಷ್ಟೇಕೆ, ಇಡಿಯ ಸಮಾಜವೇ ಯೋಚಿಸಬೇಕಾದ ಮಾತು.

ಇಡಿಯ ಶಿಕ್ಷಣವ್ಯವಸ್ಥೆಯ ಭಾರವನ್ನೆಲ್ಲ ನಾವು ಮಕ್ಕಳ ಮೇಲೆ ಹೊರಿಸುತ್ತಿದ್ದೇವೆ. ಅದಕ್ಕೆ ಕಾರಣ ಅವರು ‘ನಮ್ಮ’ ಮಕ್ಕಳು ಎಂದೇ ಅಲ್ಲವೆ? ನಮ್ಮ ಮೇಲೆ ನಮಗೆ ಮೋಹ ಹೆಚ್ಚಲ್ಲವೆ? ಹೀಗಾಗಿ ನಾವು ಏನೇನು ಆಗಬೇಕೆಂದು ಕನಸು ಕಂಡಿದ್ದೆವೋ ಅವೆಲ್ಲವನ್ನೂ ನಮ್ಮ ಮಕ್ಕಳು ಸಾಧಿಸಿ ತೋರಿಸಲಿ – ಎಂದು ಅವರ ಮೇಲೆ ನಮ್ಮ ಬದುಕಿನ ಆಸೆಗಳ ಪರ್ವತವನ್ನೇ ಹೊರಿಸುತ್ತೇವೆ.

ನಾವು ಅವರನ್ನು ದೊಡ್ಡ ದೊಡ್ಡ ಓದನ್ನು ಓದಿಸುವುದು, ನಮ್ಮ ಶಿಕ್ಷಣವ್ಯವಸ್ಥೆಯನ್ನು ರೂಪಿಸುವುದು, ದೊಡ್ಡ ಕೆಲಸಗಳಿಗೆ ಸೇರಲೆಂದು ಹಾರೈಸುವುದು – ಇವೆಲ್ಲವನ್ನು  ವಾಸ್ತವವಾಗಿ ನಾವು ಬಯಸುವುದು ನಮಗಾಗಿಯೇ. ಜಿಬ್ರಾನ್ ಇಂಥ ಮನೋಧರ್ಮದವರನ್ನು ಕುರಿತೇ ಹೇಳುತ್ತಿರುವುದು ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ’. ಆ ಪದ್ಯದ ಮುಂದಿನ ಸಾಲುಗಳೂ ಅರ್ಥಗರ್ಭಿತವಾಗಿವೆ: 

They are the sons and daughters of Life's longing for itself.
They come through you but not from you,
And though they are with you yet they belong not to you.
 
(ಬದುಕಿಗಾಗಿ ಬದುಕೇ ಹಂಬಲಿಸುತ್ತಿರುವ ಬದುಕಿನ ಮಕ್ಕಳು ಅವರು. ಅವರು ನಿಮ್ಮ ಮೂಲಕ ಬಂದಿರಬಹುದಷ್ಟೆ, ಆದರೆ ನಿಮ್ಮಿಂದಲೇ ಅಲ್ಲ; ನಿಮ್ಮ ಜೊತೆ ಅವರಿರಬಹುದು, ಆದರೆ ಅವರು ನಿಮಗೆ ಸೇರಿದವರಲ್ಲ.)
 
ತಂದೆ–ತಾಯಿರನ್ನೇ ಉದ್ದೇಶಿಸಿ ಜಿಬ್ರಾನ್ ಪದ್ಯ ಬರೆದಿರುವುದು ಸ್ಪಷ್ಟ. ಇಡಿಯ ಪದ್ಯವೇ ಮಕ್ಕಳನ್ನು ಹೆತ್ತವರನ್ನು ಎಚ್ಚರಿಸುತ್ತಿದೆ; ಅದರ ಮೂಲಕ ಇಡಿಯ ಸಮಾಜವನ್ನು ಕೂಡ. 
 
‘ಮಕ್ಕಳಿಗೆ ನಾವು ಪ್ರೀತಿಯನ್ನು ಕೊಡಬಹುದೇ ಹೊರತು ನಿಮ್ಮ ಯೋಚನೆಗಳನ್ನಲ್ಲ; ಏಕೆಂದರೆ ಅವರಿಗೆ ಅವರದೇ ಚಿಂತನೆಗಳಿವೆ; ಯೋಚನೆಗಳಿವೆ. ನೀವು ಅವರ ದೇಹಕ್ಕೆ ವಾರಸುದಾರರಿರಬಹುದು, ಆದರೆ ಅವರ ಆತ್ಮಕ್ಕಲ್ಲ; ಏಕೆಂದರೆ ಅವರ ಆತ್ಮದ ತಾಣ ಯಾವುದೆಂದರೆ ಅದು ‘ನಾಳೆ’; ಆ ನಾಳೆಯಲ್ಲಿ ನೀವು ವಾಸಿಸಲಾರಿರಿ; ಇದು ನಿಮ್ಮ ಕನಸ್ಸಿಗೂ ಸಾಧ್ಯವಿಲ್ಲ. ನೀವು ಅವರಂತಾಗಲು ಹಂಬಲಿಸಬಹುದೇ ವಿನಾ ಅವರನ್ನು ಮಾತ್ರ ನಿಮ್ಮಂತೆ ಮಾಡಲು ಮುಂದಾಗದಿರಿ. ಜೀವನ ಹಿಮ್ಮುಖವಾಗಿ ಚಲಿಸದಷ್ಟೆ’ – ಹೀಗೆಲ್ಲ  ತಂದೆ–ತಾಯಿಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಜಿಬ್ರಾನ್‌. 
 
ಆದರೆ ಇದಕ್ಕೆ ತದ್ವಿರುದ್ಧವಾಗಿದೆ ನಮ್ಮ ಮಾನಸಿಕತೆ. ಮಗು ಹುಟ್ಟಿದ ಕೂಡಲೇ ನಾವದನ್ನು ‘ಮಗು’ವಾಗಿ ನೋಡುವ ಮನಃಸ್ಥಿತಿಯನ್ನೇ ಕಳೆದುಕೊಂಡಿದ್ದೇವೆ. ಆ ಮಗುವನ್ನು ‘ಡಾಕ್ಟರ್‌’ನಂತೆಯೋ ‘ಇಂಜಿನಿಯರ್‌’ನಂತೆಯೋ ‘ಸಚಿನ್‌’ ನಂತೆಯೋ ‘ಬಿಲ್‌ ಗೇಟ್ಸ್‌’ನಂತೆಯೋ– ಹೀಗೆ ಏನೇನೋ ಆಗಿ ನೋಡುತ್ತೇವೆಯೇ ಹೊರತು ಮಗುವನ್ನು ‘ಮಗು’ವಾಗಿ ನೋಡಲಾರೆವು.
 
ಆ ಮಗು ‘ನಮ್ಮ ಮಗು’ ಎಂಬ ಭ್ರಾಂತಿಯೋ ಅಹಂಕಾರವೋ ಇರುವುದರಿಂದ ಅದರಲ್ಲಿ ನಮ್ಮ ಆಸೆಗಳನ್ನು ನೋಡುತ್ತಿರುತ್ತೇವೆಯೇ ವಿನಾ ಅದರ ಜೀವನ ನಮಗೆ ಕಾಣದಾಗಿರುತ್ತದೆ. ನಮ್ಮ ಸಾಧನೆಗೆ ಉಪಕರಣವಾಗಿ ನೋಡುತ್ತಿರುತ್ತೇವೆಯೋ ವಿನಾ ಅದರ ಸಂತೋಷದ ಕಲ್ಪನೆಯೇ ನಮ್ಮಲ್ಲಿ ಇರದಂಥ ಜಡತೆಯಲ್ಲಿ ನಾವಿರುತ್ತೇವೆ. ನಮ್ಮ ಈ ಅಹಂಕಾರಕ್ಕೆ ಪೂರಕವಾಗಿಯೇ ನಮ್ಮ ಶಿಕ್ಷಣವ್ಯವಸ್ಥೆಯನ್ನು ನಾವು ರೂಪಿಸಿಕೊಂಡಿದ್ದೇವೆ; ಅದಕ್ಕೆ ತಕ್ಕಂಥ ಪಠ್ಯಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ.
 
ಒಟ್ಟಿನಲ್ಲಿ ‘ಮಗು’ ಎಂದರೆ ಶಿಕ್ಷಣ; ‘ಶಿಕ್ಷಣ’ ಎಂದರೆ ಶಾಲಾ–ಕಾಲೇಜು, ‘ಶಾಲಾ–ಕಾಲೇಜು’ ಎಂದರೆ ‘ಪುಸ್ತಕ’ಗಳು, ‘ಪುಸ್ತಕ’ ಎಂದರೆ ಜೀವನ’ ‘ಜೀವನ’ ಎಂದರೆ ಹಣ; ‘ಹಣ’ ಎಂದರೆ ಶಿಕ್ಷಣ; ‘ಶಿಕ್ಷಣ’ ಎಂದರೆ ಮಗುವಿನ ಜೀವನ – ಎಂಬ ವಿಚಿತ್ರ ಸಮೀಕರಣಕ್ಕೆ ನಾವು ಪಕ್ಕಾಗಿದ್ದೇವೆ. ಆದರೆ ಇವಿಷ್ಟನ್ನೇ  ‘ಶಿಕ್ಷಣ’ ಎನ್ನಲಾದೀತೆ? ಈ ಶಿಕ್ಷಣವ್ಯವಸ್ಥೆಗೆ ಮಕ್ಕಳನ್ನು ಬಲಿಪಶುಗಳನ್ನಾಗಿಸುವುದು ಸರಿಯೆ? – ಎಂದು ಎಂದಾದರೂ ಆಲೋಚಿಸದ್ದೇವೆಯೇ? ತತ್ತ್ವಶಾಸ್ತ್ರಜ್ಞ ಜೆ. ಕೃಷ್ಣಮೂರ್ತಿ ಅವರು ಶಿಕ್ಷಣವನ್ನು ಕುರಿತು ಹೇಳಿರುವ ಮಾತುಗಳು ಮಾರ್ಮಿಕವಾಗಿವೆ:
 
‘ಶಿಕ್ಷಣ ಎಂದರೆ ಪುಸ್ತಕಗಳ ಓದಷ್ಟೆ ಅಲ್ಲ; ಕೆಲವೊಂದು ಮಾಹಿತಿಗಳನ್ನು ಕಂಠಪಾಠ ಮಾಡುವುದೂ ಅಲ್ಲ; ಪುಸ್ತಕಗಳು ಏನನ್ನು ಹೇಳುತ್ತಿವೆಯೋ ಅವನ್ನು ನೋಡುವುಕ್ಕೂ ಕೇಳುವುದಕ್ಕೂ ಕಲಿಯುವುದು ಹಾಗೂ ಅವು ಹೇಳುತ್ತಿರುವುದು ಸರಿಯೇ ಅಥವಾ ತಪ್ಪೇ ಎಂದು ತಿಳಿಯುವುದೇ ಶಿಕ್ಷಣ.
 
ಶಿಕ್ಷಣ ಎಂದರೆ ಪರೀಕ್ಷೆಯನ್ನು ಬರೆಯುವುದು, ಪದವಿಯನ್ನು ಪಡೆಯುವುದು ಮತ್ತು ಕೆಲಸವನ್ನು ಸಂಪಾದಿಸುವುದು, ಆಮೇಲೆ ಮದುವೆ ಮತ್ತು ಜೀವನದಲ್ಲಿ ಆರ್ಥಿಕವಾಗಿ ನೆಲೆಯೊಂದನ್ನು ಕಂಡುಕೊಳ್ಳುವುದು ಅಷ್ಟೇ ಅಲ್ಲ; ಹಕ್ಕಿಯ ಕಲರವನ್ನು ಕೇಳಿಸಿಕೊಳ್ಳುವುದು, ಆಕಾಶವನ್ನು ನೋಡುವುದು, ಮರದ ಅಪ್ರತಿಮ ಸೌಂದರ್ಯವನ್ನೂ ಬೆಟ್ಟದ ಆಕಾರವನ್ನೂ ನೋಡಿ ನಲಿಯವುದು ಮತ್ತು ಅವುಗಳೊಂದಿಗೆ ಸಂವಹನವನ್ನು ಸಾಧಿಸುವುದು, ಅವುಗಳ ಸಾಂಗತ್ಯವನ್ನು ಸಂಪಾದಿಸುವುದು – ಇವೆಲ್ಲವೂ ಕೂಡ ಶಿಕ್ಷಣವೇ.
 
ನಿಮಗೆ ವಯಸ್ಸಾಗುತ್ತಿದ್ದಂತೆಯೇ ನಿಮ್ಮ ಶ್ರವಣಶಕ್ತಿ, ದೃಷ್ಟಿಪಾಟವ ಕ್ಷೀಣವಾಗುತ್ತಹೋಗುತ್ತವೆ; ಏಕೆಂದರೆ ಆಗ ನಿಮ್ಮಲ್ಲಿ – ದುಡ್ಡು ಹೆಚ್ಚು ಬೇಕು, ಇನ್ನೂ ದುಬಾರಿಯಾಗಿರುವ ಕಾರು ಬೇಕು, ಮಕ್ಕಳು ಹೆಚ್ಚು ಬೇಕು ಅಥವಾ ಕಡಿಮೆ ಬೇಕು – ಇಂಥ ಚಿಂತೆಗಳೇ ತುಂಬಿರುತ್ತವೆ. ಇದರ ಜೊತೆಯಲ್ಲಿ ಮತ್ಸರ, ಮಹತ್ವಾಕಾಂಕ್ಷೆ, ಅತಿಯಾಸೆ, ದ್ವೇಷಗಳೂ ತುಂಬಿಕೊಂಡಿರುವುದರಿಂದ ಪ್ರಕೃತಿಯ ಸೊಬಗನ್ನು ಕಾಣಬಲ್ಲ ಕಣ್ಣನ್ನೇ ಕಳೆದುಕೊಂಡಿರುತ್ತೀರಿ.’
 
ಜೀವನವನ್ನು ಕಾಣುವಂಥ ಕಣ್ಣನ್ನು ಕೊಡುವುದೇ ಶಿಕ್ಷಣ. ಇದು ನಮ್ಮ ಅಂತರಂಗವನ್ನೂ ಬಹಿರಂಗವನ್ನೂ ಕಾಣಿಸಬಲ್ಲ ಕಣ್ಣಾಗಿರಬೇಕು. ಈ ಕಣ್ಣಿಗೆ ಮೊದಲ ನೋಟ ಒದಗುವುದೇ ಮನೆ. ಆದುದರಿಂದಲೇ ಮಗುವಿಗೆ ಮೊದಲ ಪಾಠಶಾಲೆ ಎಂದರೆ ಅದು ಮನೆಯೇ ಹೌದು. ಪಾಠಶಾಲೆಯಷ್ಟೆ ಅಲ್ಲ, ಮನೆಯನ್ನು ಮಗುವಿನ ಮೊದಲ ವಿಶ್ವವಿದ್ಯಾಲಯ ಎಂದರೂ ತಪ್ಪಿಲ್ಲ.
 
ಮಗವನ್ನು ನಾವು ನೋಡಬೇಕಾದುದು ಅದು ಚೈತನ್ಯದ ಅನಂತ ಸಾಧ್ಯತೆಗಳ ಬೀಜವನ್ನಾಗಿ. ನಾವು ಅದಕ್ಕೆ ಎಂಥ ಪರಿಸರವನ್ನು, ಪೋಷಕಾಂಶಗಳನ್ನು, ಗಾಳಿ–ನೀರು–ಬೆಳಕುಗಳನ್ನು ಉಣಬಡಿಸುತ್ತೇವೆಯೋ ಅದಕ್ಕೆ ತಕ್ಕಂಥ ಬಾಳಬೆಳೆಯನ್ನು ಅದು ದಕ್ಕಿಸಿಕೊಳ್ಳುತ್ತದೆ. ಆದರೆ ಈ ವಿವೇಕ ಇಂದು ನಮ್ಮ ಮನೆಗಳಿಂದ 
ಮರೆಯಾಗಿದೆ; ಮನೆಗಳೇ ಅದನ್ನು ದೂರ ಮಾಡಿದ ಮೇಲೆ ಸಮಾಜದಲ್ಲಿ ಅದು ಹೇಗೆ ತಾನೆ ನೆಲೆ ಕಾಣಲು ಸಾಧ್ಯ? ಸಮಾಜದಲ್ಲಿ ನೆಲೆಯನ್ನು ಕಳೆದುಕೊಂಡದ್ದು ನಮ್ಮ ಶಿಕ್ಷಣಪದ್ಧತಿಯಲ್ಲಿ ಮನ್ನಣೆಯನ್ನು ಹೇಗೆ ತಾನೆ ಸಂಪಾದಿಸೀತು? 
 
ಮನೆಯಲ್ಲೂ ಹೊರಗೂ ನಾವು ಹೇಗೆ ಬದುಕಬೇಕು? ಆ ಬದುಕು ಹೇಗೆ ಹೇಗೆ ಸತ್ಯವೂ ಶಿವವೂ ಸುಂದರವೂ ಆಗಿರಬೇಕು? ಅಂತರಂಗ–ಬಹಿರಂಗದ ಸ್ವಾಸ್ಥ್ಯವನ್ನು ಅದು ಹೇಗೆ ಕಾಪಾಡಬೇಕು? ಹಿತಾಹಿತಗಳ ನಡುವೆ ನಮ್ಮ ಮನಸ್ಸು ಹೇಗೆ ನೆಮ್ಮದಿಯನ್ನು ಪಡೆಯಬೇಕು? ವ್ಯಷ್ಟಿ–ಸಮಷ್ಟಿಗಳ ಹಿತವನ್ನು ಪೂರೈಸುವಂಥ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸಿಕೊಳ್ಳಬೇಕು? – ಇಂಥವು ಶಿಕ್ಷಣದ ಅಡಿಪಾಯವಾಗಿರಬೇಕು. ಇಂಥ ಶಿಕ್ಷಣವನ್ನು ಪಡೆದವ  ಮಗ/ಮಗಳು ನಮ್ಮದಾಗಿದ್ದರೂ ಅವನು/ಅವಳು ಇಡಿಯ ವಿಶ್ವಕ್ಕೇ ಸೇರಿದವರಾಗಿರುತ್ತಾರೆ. ಶಿಕ್ಷಣ ಕಲಿಸಬೇಕಾದ ವಿಶ್ವಾತ್ಮಭಾವ ಇದೇ ಹೌದು. ನಮ್ಮ ಎಲ್ಲ ಸಂಕುಚಿತ ಎಲ್ಲೆಗಳನ್ನು ಮೀರಿದ ವ್ಯಕ್ತಿತ್ವ ಮಗವಿಗೆ ಒದಗಬೇಕಾದರೆ ಮೊದಲಿಗೆ ನಾವು ‘ನಮ್ಮ 
 
ಮಗು ನಮ್ಮ ಮಗುವಲ್ಲ’ ಎಂಬ ಮಾತಿನ ಅರ್ಥವಂತಿಕೆಯನ್ನು ಮನದಟ್ಟುಮಾಡಿಕೊಳ್ಳಬೇಕು. ಮನೆಗೂ ಮನಕ್ಕೂ ವಿಶ್ವಕ್ಕೂ ಪೂರಕವಾದ ವ್ಯಕ್ತಿತ್ವನಿರ್ಮಾಣದ ಉದ್ದೇಶವೇ ಶಿಕ್ಷಣವಾಗಬೇಕು. ಡಿವಿಜಿಯವರ ಕಗ್ಗದ ಸಾಲುಗಳು ಇಲ್ಲಿ ನೆನಪಾಗುತ್ತಿವೆ:
 
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ |
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT