ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿಯಲ್ಲಿ ಅಟ್ಯಾ ಪಟ್ಯಾ

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ
ನಿರೀಕ್ಷೆ ಹುಸಿಯಾಗಲಿಲ್ಲ. ಸಮಬಲದ ಹಣಾಹಣಿಯಲ್ಲಿ ರಾಜ್ಯದ ಬಾಲಕರು ರೋಚಕ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಾಗ ರಾಜ್ಯ ಸಂಸ್ಥೆಯ ಪದಾಧಿಕಾರಿಗಳ ಮುಖ ಅರಳಿತು. ಯೋಜನೆಗಳನ್ನು ಅನುಷ್ಠಾನಗೊಳಿಸಲು ಇದು ತಕ್ಕ ಸಮಯ ಎಂದು ಲೆಕ್ಕ ಹಾಕಿದರು.
 
ಧಾರವಾಡದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಜೂನಿಯರ್ ಅಟ್ಯಾ ಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ಬಾಲಕರ ತಂಡ ಪ್ರಶಸ್ತಿ ಎತ್ತಿ ಹಿಡಿಯುವುದರ ಬಗ್ಗೆ ಯಾರಿಗೂ ಸಂದೇಹ ಇರಲಿಲ್ಲ. ಯಾಕೆಂದರೆ ಈ ಕ್ರೀಡೆಯಲ್ಲಿ ರಾಜ್ಯದ ಬಾಲಕರು ಮತ್ತು ಪುರುಷರು ನಿರಂತರ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. 1986ರಿಂದ ನಿರಂತರ ಎಂಟು ವರ್ಷ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರಾಜ್ಯದ ಪುರುಷರ ತಂಡ ನಂತರ ಇಲ್ಲಿಯ ವರೆಗೆ ಮೂರನೇ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಧಾರವಾಡದಲ್ಲಿ ಗಳಿಸಿದ ಪ್ರಶಸ್ತಿ ಸೇರಿದಂತೆ ನಿರಂತರ ಎರಡು ಬಾರಿ ಚಾಂಪಿಯನ್ ಆಗಿರುವ ಜೂನಿಯರ್ ಬಾಲಕರ ತಂಡ ಒಟ್ಟು ಹನ್ನೆರಡು ಬಾರಿ ಪ್ರಶಸ್ತಿ ಬಗಲಿಗೆ ಹಾಕಿಕೊಂಡ ಸಾಧನೆ ಮಾಡಿದೆ. ಸಬ್‌ ಜೂನಿಯರ್ ಬಾಲಕರು ನಿರಂತರ ನಾಲ್ಕು ಬಾರಿ ಆಧಿಪತ್ಯ ಸ್ಥಾಪಿಸಿದ್ದಾರೆ.
 
ಈ ಎಲ್ಲ ಸಾಧನೆಗಳು ಕರ್ನಾಟಕದಲ್ಲಿ ಅಟ್ಯಾ ಪಟ್ಯಾ ಬಲಿಷ್ಠವಾಗಿದೆ ಎಂದು ಹೇಳಲು ಕಾರಣವಾಗಿದೆಯಾದರೂ ಈ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ರಾಜ್ಯ ಅಟ್ಯಾ ಪಟ್ಯಾ ಸಂಸ್ಥೆಯ ಆಸೆಗೆ ಕಾಯಕಲ್ಪ ತುಂಬಿತ್ತು ತವರಿನಲ್ಲಿ ಈ ಬಾರಿ ಗಳಿಸಿದ ಜಯ.
 
ಕೊರತೆಗಳು ಏನೇನು?
ನೆರೆಯ ಮಹಾರಾಷ್ಟ್ರದಲ್ಲಿ ಉದಯ ಕಂಡ ಅಟ್ಯಾ ಪಟ್ಯಾ ಕರ್ನಾಟಕಕ್ಕೆ ಕಾಲಿಟ್ಟು 35 ವರ್ಷಗಳಾಗಿವೆ. ಆದರೆ ಎಲ್ಲ ಜಿಲ್ಲೆಗಳಿಗೆ ಇದು ಇನ್ನೂ ತಲುಪಿಲ್ಲ. ಒಟ್ಟು 13 ಜಿಲ್ಲೆಗಳು ರಾಜ್ಯ ಸಂಸ್ಥೆಯಲ್ಲಿ ಸೇರ್ಪಡೆಗೊಂಡಿವೆ. ಅದರಲ್ಲಿ ಬಹುಪಾಲು ಉತ್ತರ ಕರ್ನಾಟಕದ್ದು. ಸ್ಪರ್ಧೆಗಳಲ್ಲಿ ರಾಜ್ಯ ತಂಡದ ಪರ ಉತ್ತಮ ಪ್ರದರ್ಶನ ನೀಡುವವರೆಲ್ಲರೂ ಈ ಭಾಗದವರೇ. ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡದ ಆಟಗಾರರು ಪಂದ್ಯಗಳಲ್ಲಿ ಮಿಂಚು ಹರಿಸುತ್ತಾರೆ. ದಕ್ಷಿಣದ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಈ ಕ್ರೀಡೆಯ ಹೆಜ್ಜೆ ಗುರುತುಗಳು ಇನ್ನೂ ಮೂಡಿಲ್ಲ.
 
ಪುರುಷ ಮತ್ತು ಬಾಲಕರ ತಂಡಗಳು ರಾಜ್ಯದಲ್ಲಿ ಬಲಿಷ್ಠವಾಗಿವೆಯಾದರೂ ಮಹಿಳೆ ಮತ್ತು ಬಾಲಕಿಯರು ಇನ್ನೂ ಸರಿಯಾಗಿ ಬೆಳಕಿಗೆ ಬರಲಿಲ್ಲ. ಅಟ್ಯಾ ಪಟ್ಯಾ ತರಬೇತಿ ನೀಡುವ ಚಂದರಗಿಯ ಕ್ರೀಡಾ ಶಾಲೆ, ಧಾರವಾಡದ ಯೂನಿವರ್ಸಿಟಿ ಪಬ್ಲಿಕ್ ಸ್ಕೂಲ್‌ ಮುಂತಾದ ಕಡೆಗಳಲ್ಲಿ ಬಾಲಕಿಯರು ಇಲ್ಲದಿರುವುದು ಅಥವಾ ಕಡಿಮೆ ಸಂಖ್ಯೆಯಲ್ಲಿ ಇರುವುದು ಇದಕ್ಕೆ ಪ್ರಮುಖ ಕಾರಣ. ಆದ್ದರಿಂದ ಬಾಲಕಿಯರತ್ತ ಚಿತ್ತ ಹರಿಸಿ ಆ ವಿಭಾಗವನ್ನು ಗಟ್ಟಿಗೊಳಿಸುವುದು ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದು.
 
‘ದಕ್ಷಿಣದ ಜಿಲ್ಲೆಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಿ ಪರಿಣಿತರಿಂದ ತರಬೇತಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮೈಸೂರು, ಹಾಸನ ಮತ್ತು ತುಮಕೂರಿನಿಂದ ಇದಕ್ಕೆ ಈಗಾಗಲೇ ಸ್ಪಂದನೆ ದೊರೆತಿದೆ. ಸದ್ಯ ಗದಗ ಜಿಲ್ಲೆ ರೋಣ ತಾಲ್ಲೂಕು ಯಾವಗಲ್ ಶಾಲೆಯಲ್ಲಿ ಬಾಲಕಿಯರಿಗೆ ಉತ್ತಮ ತರಬೇತಿ ಸಿಗುತ್ತಿದೆ. ಇದೇ ರೀತಿಯಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಬಾಲಕಿಯರ ವಿಭಾಗಕ್ಕೆ ಹೊಸ ಚೇತನ ತುಂಬುವ ಯೋಜನೆ ಇದೆ’ ಎನ್ನುತ್ತಾರೆ ರಾಜ್ಯ ಅಟ್ಯಾ ಪಟ್ಯಾ ಸಂಸ್ಥೆಯ ಕಾರ್ಯದರ್ಶಿ ವಿ.ಡಿ.ಪಾಟೀಲ.
 
ಭಾರತೀಯ ಅಟ್ಯಾ ಪಟ್ಯಾ ಫೆಡರೇಷನ್‌ನಲ್ಲಿ ಒಟ್ಟು 27 ರಾಜ್ಯಗಳು ಸೇರಿಕೊಂಡಿವೆ. ಕೊನೆಗೆ ಸೇರಿದ್ದು ಪುದುಚೇರಿ. ಆದರೂ ಆ ರಾಜ್ಯ ಈಗ ಬಲಿಷ್ಠವಾಗಿದೆ. ಈ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಅಲ್ಲಿ ಸರ್ಕಾರಿ ನೌಕರಿ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಇದೆ. ಕಳೆದ ನಾಲ್ಕು ವರ್ಷಗಳಿಂದ ಆ ರಾಜ್ಯ ಪುರುಷರ ವಿಭಾಗದ ಚಾಂಪಿಯನ್ ಆಗಿ ಮೆರೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕಾಲೇಜು ಪ್ರವೇಶ ಸಂದರ್ಭದಲ್ಲಿ ಅಟ್ಯಾ ಪಟ್ಯಾ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುತ್ತದೆ. ಆ ರಾಜ್ಯವೂ ಉತ್ತಮ ಪ್ರದರ್ಶನ ನೀಡುತ್ತಿದೆ. 
 
ನಮ್ಮ ರಾಜ್ಯದಲ್ಲಿ ಮೂರು ವರ್ಷಗಳಿಂದ ಕ್ರೀಡಾ ರತ್ನ ಪ್ರಶಸ್ತಿಗೆ ಅಟ್ಯಾ ಪಟ್ಯಾ ಕ್ರೀಡಾಪಟುಗಳನ್ನು ಪರಿಗಣಿಸಲಾಗುತ್ತಿದೆ. ಈ ಪೂರಕ ಪರಿಸ್ಥಿತಿಯ ಲಾಭ ಪಡೆದುಕೊಂಡು ಈ ಕ್ರೀಡೆಯನ್ನು ಬೆಳೆಸಲು ಪ್ರಯತ್ನಿಸಲಾಗುವುದು’ ಎಂದು ವಿ.ಡಿ.ಪಾಟೀಲ ಭರವಸೆಯಿಂದ ನುಡಿಯುತ್ತಾರೆ.
 
**
ಎಸ್‌ಜಿಎಫ್‌ಐನಲ್ಲಿ ಸೇರಿಸಲು ಯತ್ನ
‘ಅಟ್ಯಾ ಪಟ್ಯಾವನ್ನು ಶಾಲಾ ಹಂತದಿಂದಲೇ ಬೆಳೆಸಿದರಷ್ಟೇ ಹೆಚ್ಚು ಪ್ರಸಿದ್ಧಿ ಗಳಿಸಲು ಸಾಧ್ಯ. ಇದನ್ನು ಮನಗಂಡಿರುವ ಭಾರತೀಯ ಅಟ್ಯಾ ಪಟ್ಯಾ ಫೆಡರೇಷನ್‌ ಈ ಕ್ರೀಡೆಗೆ  ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಮಾನ್ಯತೆಗೆ ಶ್ರಮಿಸುತ್ತಿದೆ’ ಎನ್ನುತ್ತಾರೆ ಅಟ್ಯಾ ಪಟ್ಯಾ ಫೆಡರೇಷನ್‌ ಅಧ್ಯಕ್ಷ ಮತ್ತು ರಾಜ್ಯ ಅಟ್ಯಾ ಪಟ್ಯಾ ಸಂಸ್ಥೆಯ ಕಾರ್ಯದರ್ಶಿ ವಿ.ಡಿ.ಪಾಟೀಲ.
 
‘ಶಾಲಾ ಕ್ರೀಡಾಕೂಟದಲ್ಲಿ ಅಟ್ಯಾ ಪಟ್ಯಾ ಇದೆ. ಆದರೆ ಜಿಲ್ಲಾ ಮಟ್ಟದ ವರೆಗೆ ಮಾತ್ರ ಸ್ಪರ್ಧೆಗಳಿರುತ್ತವೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಹೋಗಲು ಅವಕಾಶ ಇಲ್ಲದ ಕಾರಣ ಯಾರೂ ಅದರ ಕಡೆಗೆ ಲಕ್ಷ್ಯ ಕೊಡುತ್ತಿಲ್ಲ. ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲೂ ಈ ಕ್ರೀಡೆಯನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಈ ಆಟಕ್ಕೆ ಕಡಿಮೆ ಜಾಗ, ಕನಿಷ್ಟ ಪರಿಕರಗಳು ಸಾಕಾಗುತ್ತದೆ. ಆದ್ದರಿಂದ ಆಯೋಜಕರಿಗೆ ಹೆಚ್ಚು ಶ್ರಮ ಇಲ್ಲ. ಆದ್ದರಿಂದ ಕ್ರೀಡಾಕೂಟಗಳಲ್ಲಿ ಇದನ್ನು ಸೇರಿಸುವುದು ಸುಲಭ’ ಎಂದು ವಾದಿಸುತ್ತಾರೆ ಪಾಟೀಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT