ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನ ‘ಬೇಬಿ ಬಾಯ್ಕಾಟ್’

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ
2010ರ ಬೇಸಿಗೆಯ ದಿನ ಮುಂಬೈನ ವಾಂಖೆಡೆ ಕ್ರೀಡಾಂಗಣದ ಮುಂದೆ 13 ವರ್ಷದ ಬಾಲಕನೊಬ್ಬ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಜೊತೆಗೆ ಭಾವಚಿತ್ರ ತೆಗೆಸಿಕೊಂಡಿದ್ದ.
 
ಬರೋಬ್ಬರಿ ಆರು ವರ್ಷಗಳ ನಂತರ ಅದೇ ಹುಡುಗ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ ಬೌಲರ್‌ಗಳ ಎದುರು ಬ್ಯಾಟ್ ಹಿಡಿದು ನಿಂತಿದ್ದ. 
ರಾಜ್‌ಕೋಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಅಲಸ್ಟೇರ್ ಕುಕ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಹಸೀಬ್ ಹಮೀದ್ ಅವರೇ ಆ ಬಾಲಕ. ಅವರಿಗೆ ಈಗ 19 ವರ್ಷ ವಯಸ್ಸು. ಬ್ರಿಟಿಷ್ ತಂಡದ ಪರವಾಗಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ. 
 
ಹಸೀಬ್ ಜನಿಸಿದ್ದು ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನ ಬೋಲ್ಟನ್‌ನಲ್ಲಿ. ಅವರ ತಂದೆ ಇಸ್ಮಾಯಿಲ್  ಭಾರತೀಯ ಮೂಲದವರು. ಅದರಲ್ಲೂ ಗುಜರಾತ್ ರಾಜ್ಯದವರು. ಇದೇ ರಾಜ್ಯದ ರಾಜ್‌ಕೋಟ್‌ನಲ್ಲಿ ಹಸೀಬ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಕಾಕತಾಳೀಯ. ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ರನ್ (31; 98ನಿ, 82ಎ, 6ಬೌಂ) ಗಳಿಸಲಿಲ್ಲ. ಆದರೆ, ಅವರ ಬ್ಯಾಟಿಂಗ್ ಶೈಲಿಯ ಸೊಬಗು ಕ್ರಿಕೆಟ್‌ಪ್ರಿಯರ ಮನಗೆದ್ದಿತು.
 
ಗುಜರಾತ್‌ನ ಉಮರಜಾ ಗ್ರಾಮದ ಇಸ್ಮಾಯಿಲ್ ಹಮೀದ್ ಅವರು ಇಂಗ್ಲೆಂಡ್‌ನಲ್ಲಿ ನೆಲೆಸಿ ಎರಡು ದಶಕಗಳು ಕಳೆದುಹೋಗಿವೆ. ಅವರು ಅಲ್ಲಿಯ ಚೆಶೈರ್ ಕೌಂಟಿ ಪ್ರೀಮಿಯರ್ ಲೀಗ್ ತಂಡಕ್ಕೆ ಆಡಿದ್ದರು. ಹಸೀಬ್‌ಗೆ ಅವರೇ ಪ್ರಥಮ ಕೋಚ್ ಕೂಡಾ. ಆದರೆ, ಅವರ ಸಂಬಂಧಿಕರು ಇನ್ನೂ  ಗುಜರಾತ್‌ನಲ್ಲಿದ್ದಾರೆ. ಇಸ್ಮಾಯಿಲ್ ಅವರ ದೊಡ್ಡ ಮಗನ ಮದುವೆ ಹೋದ ತಿಂಗಳು ಇಲ್ಲಿಯೇ ನಡೆದಿತ್ತು. ಆ ಸಂದರ್ಭದಲ್ಲಿ ಹಸೀಬ್ ಬಾಂಗ್ಲಾದಲ್ಲಿ ಆಡುತ್ತಿದ್ದ ಇಂಗ್ಲೆಂಡ್ ತಂಡದಲ್ಲಿದ್ದರು. 
 
‘ನನ್ನ ಅಣ್ಣನ ಮದುವೆಗೆ ಹೋಗುವ ಆಸೆಯಿತ್ತು. ಆದರೆ, ತಂಡದೊಂದಿಗೆ ಇರು. ಮದುವೆಗೆ ಬರುವುದು ಬೇಡ. ಭಾರತದ ಪ್ರವಾಸದ ಸಂದರ್ಭದಲ್ಲಿ ಭೇಟಿಯಾಗಬಹುದು. ಕ್ರಿಕೆಟ್‌ನಲ್ಲಿ ಶಿಸ್ತು ಮತ್ತು ತನ್ಮಯತೆ ಮುಖ್ಯ ಎಂದು ನನ್ನ ತಂದೆ ಹೇಳಿದ್ದರು. ಆದ್ದರಿಂದ ಮದುವೆಗೆ ಬರಲಿಲ್ಲ. ಆದರೆ, ನನ್ನ ಪೂರ್ವಜರ ತವರಿನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದು ಖುಷಿ ಕೊಟ್ಟಿದೆ’ ಎಂದು ಹಸೀಬ್ ಸಂತಸ ವ್ಯಕ್ತಪಡಿಸುತ್ತಾರೆ.
 
ನಾಸೀರ್ ಹುಸೇನ್, ಮಾಂಟಿ ಪನೇಸರ್, ರವಿ ಬೊಪಾರಾ, ಸಮಿತ್ ಪಟೇಲ್ ಅವರ ನಂತರ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿರುವ ಭಾರತೀಯ ಮೂಲದ ಆಟಗಾರ ಹಸೀಬ್. ಈ ದೇಶದ 674ನೇ ಟೆಸ್ಟ್ ಆಟಗಾರನಾಗಿ ಪದಾರ್ಪಣೆ ಮಾಡಿದ್ದಾರೆ. 
 
ಅವರು ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಅವರ ಪ್ರತಿಭೆ ಮತ್ತು ಜೂನಿಯರ್ ಕೌಂಟಿ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಯೇ ಕಾರಣ. ಎಂಟನೇ ವಯಸ್ಸಿಗೆ ಬ್ಯಾಟ್ ಹಿಡಿದು ಬೋಲ್ಟನ್ ಶಾಲೆಯ ತಂಡದಲ್ಲಿ ಆಡಿದ್ದರು. ನಂತರ ಲ್ಯಾಂಕಶೈರ್ ತಂಡದ ಪರವಾಗಿ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. 48.50ರ ಸರಾಸರಿಯಲ್ಲಿ 1455ರನ್‌ಗಳನ್ನು ಪೇರಿಸಿದ್ದಾರೆ. ಅವು ಯಾರ್ಕ್ ಷೈರ್‌ ತಂಡದ ಎದುರಿನ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು.
 
15ನೇ ವಯಸ್ಸಿಗೆ ಅವರ ಪ್ರತಿಭೆ ಇಂಗ್ಲೆಂಡ್ ಕ್ರಿಕೆಟ್ ವಲಯದ ಗಮನ ಸೆಳೆದಿತ್ತು. ಅವರ ರಕ್ಷಣಾತ್ಮಕ ಆಟ ಮತ್ತು ಸ್ವೀಪ್‌, ಡ್ರೈವ್‌ಗಳು ಇಂಗ್ಲೆಂಡ್ ನ ದಿಗ್ಗಜ ಆಟಗಾರ ಜೆಫ್ರಿ ಬಾಯ್ಕಾಟ್ ಅವರ ಆಟವನ್ನು ನೆನಪಿಸಿದ್ದವು. ಅದರಿಂದಾಗಿ ಹಸೀಬ್ ಅವರನ್ನು ಅಲ್ಲಿಯ ಮಾಧ್ಯಮವು ಬೇಬಿ ಬಾಯ್ಕಾಟ್ ಎಂದು ಕರೆಯಿತು. 
 
ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ 20 ವರ್ಷದೊಳಗಿನ ಪ್ರತಿಭಾನ್ವಿತರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಅವರನ್ನು ತಿದ್ದಿ ತೀಡಿ ರೂಪುಗೊಳಿಸುವ ಕಾರ್ಯ ಮಾಡುತ್ತಿದೆ. 
 
ತಂಡದ ಈಗಿನ ನಾಯಕ ಕುಕ್ ತಮ್ಮ 21ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ್ದರು. ಜೋ ರೂಟ್ ಮತ್ತು ಜೇಮ್ಸ್ ಆಂಡರ್‌ಸನ್‌ ಅವರು 20ನೇ ವಯಸ್ಸಿನಲ್ಲಿ ತಮ್ಮ ಮೊದಲ ಟೆಸ್ಟ್ ಆಡಿದ್ದರು.
 
‘ರಾಷ್ಟ್ರೀಯ ತಂಡದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಆಡಲು ಆರಂಭಿಸುವವರು ದೀರ್ಘ ಸಮಯದವರೆಗೆ ತಂಡಕ್ಕೆ ಆಧಾರವಾಗಬಲ್ಲರು. ಇದರಿಂದ ತಂಡವು ಬಲಿಷ್ಠವಾಗುತ್ತದೆ. ಆಟಗಾರರೂ ವಿಶ್ವಪಟದಲ್ಲಿ ದಾಖಲೆಗಳನ್ನು ಬರೆಯಬಹುದು. ಹಿರಿಯರು ನಿವೃತ್ತರಾದಾಗ ಉಂಟಾಗುವ ಕೊರತೆಯನ್ನೂ ನೀಗಿಸಲು ಈ ಪದ್ಧತಿಯಿಂದ ಸಾಧ್ಯವಿದೆ’ ಎಂದು ಇಂಗ್ಲೆಂಡ್‌ನ ಕ್ರಿಕೆಟ್ ಬರಹಗಾರ ಜಾರ್ಜ್‌  ಡೊಬೆಲ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. 
 
ಲ್ಯಾಂಕ್‌ಷೈರ್ ತಂಡದಿಂದ ಇಂಗ್ಲೆಂಡ್ ತಂಡಕ್ಕೆ 15 ವರ್ಷಗಳ ನಂತರ ಆಯ್ಕೆಯಾಗಿರುವ ಆಟಗಾರ ಹಸೀಬ್. 2001ರಲ್ಲಿ ಮೈಕ್ ಅಥರ್ಟನ್‌ ನಿವೃತ್ತಿಯ ನಂತರ ಈ ತಂಡದಿಂದ ಯಾರೂ ಆಯ್ಕೆಯಾಗಿರಲಿಲ್ಲ. ಅನುಭವಿ ಆಟಗಾರ ಕುಕ್ ಅವರ ಬಳಗದಲ್ಲಿ ಗಟ್ಟಿಯಾದ ಹೆಜ್ಜೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.
 
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT