ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾದವರ ದಾರಿದೀಪ ‘ಪ್ರೇರಣ’ ಫೌಂಡೇಶನ್‌

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಸಮಕಾಲೀನ ಶಿಕ್ಷಣಪದ್ಧತಿಯಲ್ಲಿ ವಿದ್ಯಾರ್ಥಿ ಗಳಿಸಿದ ಅಂಕ ಆಧರಿಸಿ ಆತನ ಬುದ್ಧಿವಂತಿಕೆ ನಿರ್ಧರಿಸಲಾಗುತ್ತದೆ. ಶೈಕ್ಷಣಿಕ ಜೀವನದಲ್ಲಿ ಎಸ್‌.ಎಸ್‌.ಎಲ್‌.ಸಿ. ಮತ್ತು ದ್ವಿತೀಯ ಪಿ.ಯು. ಪ್ರಮುಖ ತಿರುವುಗಳು. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು ಮುಂದಿನ ಹಂತಕ್ಕೆ ಬುನಾದಿ. ಈ ಹಂತದಲ್ಲಿ ಅನುತ್ತೀರ್ಣರಾದಾಗ ಅಪಮಾನ, ಯಾತನೆ ತಾಳಲಾರದೇ ಮಾನಸಿಕವಾಗಿ ಕುಗ್ಗುವವರೇ ಹೆಚ್ಚು. 
 
ಸೋತವರಿಗೆ ಆತ್ಮವಿಶ್ವಾಸ ಮೈಗೂಡಿಸಿ, ಓದುವ ಕಲೆ ಕರಗತಗೊಳಿಸಿ ಪ್ರತಿಭೆಯನ್ನು ಓರೆಗೆ ಹಚ್ಚಿ ಅವರನ್ನು ಗೆಲ್ಲಿಸುವ ಕಾಯಕದಲ್ಲಿ ಮೈಸೂರಿನ ‘ಪ್ರೇರಣ ಫೌಂಡೇಶನ್‌’ ನಿರತವಾಗಿದೆ. ಸಹಸ್ರಾರು ಮಂದಿ ಇಲ್ಲಿ ಕೋಚಿಂಗ್‌ ಪಡೆದು ಯಶಸ್ಸು ಗಳಿಸಿದ್ದಾರೆ. ತರಗತಿಗಳಿಗೆ ನಿಯಮಿತವಾಗಿ ಹಾಜರಾಗಿ, ತರಬೇತಿ ಪಡೆದರೂ ಪಾಸಾಗದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ.  
 
ತರಬೇತಿ ತರಗತಿ ಆರಂಭ 
‘ಪರೀಕ್ಷೆಯೊಂದರ ಸೋಲು ಜೀವನದ ಸೋಲಲ್ಲ, ಸೋಲು ಶಾಶ್ವತವಲ್ಲ, ಸೋತವನೂ ಗೆಲ್ಲಬಲ್ಲ’ ಎಂಬ ಘೋಷವಾಕ್ಯದೊಂದಿಗೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಫೇಲಾದವರಿಗೆ ಮಾತ್ರ ತರಬೇತಿ ನೀಡುವುದು ವಿಶೇಷ.  ಎಸ್‌.ಎಸ್‌. ಭಟ್‌ ಅವರು 2000ನೇ ಇಸವಿಯಲ್ಲಿ ಈ ಸಂಸ್ಥೆಯನ್ನು ಆರಂಭಿಸಿದರು. ವಿದ್ಯಾರ್ಥಿಗಳ ಕೀಳರಿಮೆ ದೂರಮಾಡಿ, ‘ನೀವೂ ಬುದ್ಧಿವಂತರು, ನಿಮ್ಮಲ್ಲೂ ಪ್ರತಿಭೆ ಇದೆ, ಉತ್ತಮ ಅಂಕ ಗಳಿಸ ಬಲ್ಲಿರಿ’ ಎಂಬುದನ್ನು ಅವರಿಗೆ ವೇದ್ಯವಾಗಿಸುವುದು ಸಂಸ್ಥೆಯ ವೈಶಿಷ್ಟ್ಯ. ಪ್ರಸಕ್ತ ವರ್ಷದ ದೀರ್ಘಾವಧಿ ಕಾರ್ಯಾಗಾರದ ತರಗತಿಗಳು ಈಗಾಗಲೇ ಆರಂಭವಾಗಿವೆ. ರಾಜ್ಯದ ವಿವಿಧೆಡೆಯ120 ವಿದ್ಯಾರ್ಥಿಗಳು ಕೋಚಿಂಗ್ ಪಡೆಯುತ್ತಿದ್ದಾರೆ.
 
ದೀರ್ಘಾವಧಿ, ಅಲ್ಪಾವಧಿ ತರಬೇತಿ
ನಗರದಲ್ಲಿ ಪ್ರಸ್ತುತ ಮೂರು ಕಡೆ ತರಬೇತಿ ಕೇಂದ್ರಗಳು ಇವೆ. 20 ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎನ್‌.ಬಿ. ಪ್ರದೀಪ್‌ಕುಮಾರ್‌ ಹಾಗೂ ನಿರಂಜನ್‌ ಕೋರಾಲಿ ಕೋಚಿಂಗ್‌ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 150 ದಿನಗಳ ದೀರ್ಘಾವಧಿ ಮತ್ತು ಪೂರಕ ಪರೀಕ್ಷೆ ಸಂದರ್ಭದಲ್ಲಿ 40 ದಿನಗಳ ಅಲ್ಪಾವಧಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತದೆ. ವಸತಿ ಸಹಿತ ಮತ್ತು ರಹಿತ ವ್ಯವಸ್ಥೆ ಇದೆ. 
 
ಪಿ.ಯು. ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳ ವಿಷಯಗಳನ್ನು ಬೋಧನೆ ಮಾಡಲಾಗುವುದು.  ‘ದುಶ್ಚಟ, ಅನಾಸಕ್ತಿ, ಅಶಿಸ್ತು, ಒತ್ತಡ, ಆರೊಗ್ಯ ಸಮಸ್ಯೆ, ಮೊಬೈಲ್‌–ಟಿ.ವಿ.–ಅಂತರ್ಜಾಲ ಗೀಳು, ಪ್ರೀತಿ–ಪ್ರೇಮ ಮೊದಲಾದ ಕಾರಣಗಳಿಂದಾಗಿ ಸರಿಯಾಗಿ ಅಧ್ಯಯನ ಮಾಡದೆ ಅನುತ್ತೀರ್ಣರಾಗಿರುತ್ತಾರೆ. ಸೋಲಿನ ಕಾರಣ ಗುರುತಿಸಿ ಅವರನ್ನು ಓದಿನೆಡೆಗೆ ಪ್ರೇರೇಪಿಸುತ್ತವೆ. ಕಲಿಸುವುದು, ಕಲಿತದ್ದನ್ನು ಪರೀಕ್ಷಿಸುವುದು, ತಪ್ಪುಗಳನ್ನು ಗುರುತಿಸಿ ತಿದ್ದಿ ತೀಡುವುದು, ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ತುಂಬಿ ಉಜ್ವಲ ಭವಿಷ್ಯ ರೂಪಿಸುವುದು ತರಬೇತಿ ಕಾರ್ಯಸೂಚಿಯಾಗಿದೆ’ ಎಂದು ಗಣಿತಬೋಧಕ ಪ್ರದೀಪ್‌ಕುಮಾರ್‌ ಹೇಳುತ್ತಾರೆ.
 
ರಾಜ್ಯದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕೋಚಿಂಗ್‌ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಪಿ.ಯು.ನಲ್ಲಿ ವಿಜ್ಞಾನ ವಿಭಾಗದ ಭೌತವಿಜ್ಞಾನ ರಸಾಯನವಿಜ್ಞಾನ, ಜೀವವಿಜ್ಞಾನ, ಗಣಿತ ವಿಷಯಗಳಲ್ಲಿ ಕಡಿಮೆ ಅಂಕ ಗಳಿಸಿದ್ದವರು, ಇಲ್ಲಿ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದು, ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ ಓದುವ ಕನಸನ್ನು ನನಸಾಗಿಕೊಂಡಿದ್ದಾರೆ.  
 
ಸಮಾಲೋಚನೆ:
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆಪ್ತಸಲಹೆ (ಕೌನ್ಸೆಲಿಂಗ್‌) ಕಾರ್ಯಕ್ರಮವನ್ನು ಆಯೋಜಿಸಿ, ಗುರಿಯೆಡೆಗೆ ಸಾಗಲು ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸನ್ನದ್ಧರಾಗಬೇಕು ಎಂಬ ಕುರಿತು ಅರಿವು ಮೂಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೋಧಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಹೊಣೆಗಳೇನು ಎಂಬುದನ್ನು ತಿಳಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಛಲ, ಶಿಸ್ತು, ಏಕಾಗ್ರತೆ, ಸಮಯಪಾಲನೆ ರೂಢಿಸಿ ಅವರ ಮುಂದಿರುವ ಸವಾಲನ್ನು ಎದುರಿಸುವ ಬಗೆಯನ್ನೂ ಹೇಳಿಕೊಡಲಾಗುತ್ತದೆ. 
ಮಾಹಿತಿಗೆ: 9845081342, 9900373011 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT