ಕಪ್ಪುಹಣ ಬೇಟೆಯಲಿ ಚಿಲ್ಲರೆಯಾದ ಬದುಕು

ಪಾಕಿಸ್ತಾನದ ಮೇಲೆ ನಿರ್ದಿಷ್ಟ ದಾಳಿ ನಡೆಸಿದ ಅಬ್ಬರದ ಬೆನ್ನಿಗೇ ದೊಡ್ಡ ನೋಟು ರದ್ದಿನ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳು ಕದ ತಟ್ಟಿರುವ ನಿರ್ಣಾಯಕ ಸನ್ನಿವೇಶದಲ್ಲಿ ತಮ್ಮ ಪಕ್ಷದ ಬತ್ತಳಿಕೆಗೆ ಎರಡು ಬ್ರಹ್ಮಾಸ್ತ್ರಗಳನ್ನು ಸೇರಿಸಿದ ರಾಜಕೀಯ ಸಾಧನೆಯನ್ನೂ ಮಾಡಿದ್ದಾರೆ ಅವರು.

ಕಪ್ಪುಹಣ ಬೇಟೆಯಲಿ ಚಿಲ್ಲರೆಯಾದ ಬದುಕು

ಕಾಳಧನದ  ಖದೀಮ ಕುಳಗಳ ಸಂಹಾರಕ್ಕೆಂದು ನಮ್ಮ ಪ್ರಚಂಡ ಪ್ರಧಾನಿ ನರೇಂದ್ರ ಮೋದಿ ಅವರು ಭೀಮಗದೆಯನ್ನೇ ಬೀಸಿದ್ದಾರೆ. ಅಂದಿನ ಅನ್ನವನ್ನು ಅಂದೇ ದುಡಿದು ಉಣ್ಣಬೇಕಿರುವ ಕೋಟ್ಯಂತರ ಬದುಕುಗಳು ಈ ಗದಾಪ್ರಹಾರದ ಗುರಿಯಲ್ಲ ನಿಜ. ಆದರೆ ವಾಸ್ತವದಲ್ಲಿ ಹೀಗಾಗಿರುವುದನ್ನು ನಿಸೂರಾಗಿ ಆಲೋಚಿಸುವ ಯಾರೂ ಅಲ್ಲಗಳೆಯಲಾರರು.

ಪ್ರಧಾನಿಯವರ ಈ ಕ್ರಮಕ್ಕೆ ಜನಸಾಮಾನ್ಯರು ತೆರೆದ ಮನಸಿನ ನಡೆಮುಡಿ ಹಾಸಿದ್ದಾರೆ. ಮುಕ್ತಕಂಠದ ಅಮಾಯಕ ಪ್ರಶಂಸೆಯೇ ಅವರ ಆರಂಭಿಕ ಪ್ರತಿಕ್ರಿಯೆ. ನೋಡ ನೋಡುತ್ತಿದ್ದಂತೆಯೇ ಧನಿಕ- ದರಿದ್ರರ ನಡುವಣ ಅಂತರ ಆಕಾಶದೆತ್ತರಕ್ಕೆ ಎದ್ದು ನಿಂತ ಅಸಮಾನತೆಯ ಅನ್ಯಾಯ ಅವರ ಕಣ್ಣುಗಳ ದಣಿಸಿವೆ.

ಅಂಚಿನಲ್ಲಿ ನಿಂತ ಈ ಜನವರ್ಗಕ್ಕೆ ಕಾಣುತ್ತಿರುವುದು ಅಂಧಕಾರದ ಪ್ರಪಾತವಲ್ಲದೆ ಮತ್ತೇನೂ ಅಲ್ಲ. ಮುಳುಗುವವ ಹುಲ್ಲುಕಡ್ಡಿಯನ್ನು ಹಿಡಿದಂತೆ ಈ ಜನವರ್ಗ ಕರಿಮೋಡಗಳಲ್ಲಿ ಭ್ರಮೆಯ ಬೆಳ್ಳಿ ಕಿರಣಗಳ ನಿರಂತರ ಅರಸುತ್ತಲೇ ಇವೆ. ಅಪಾಯದೊಂದಿಗೆ ಜೂಜುವ ದಿಟ್ಟ ಸ್ವಭಾವ ತಮ್ಮದೆಂದು ನರೇಂದ್ರ ಮೋದಿ ಕಾಲ ಕಾಲಕ್ಕೆ ತೋರುತ್ತ ಬಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ತಮ್ಮ ಈ ಸ್ವಭಾವವನ್ನು ಅವರು ಮರೆತವರಂತೆ ಕಂಡು ಬಂದಿದ್ದರು.

ವಿದೇಶೀ ಬ್ಯಾಂಕುಗಳಲ್ಲಿ ಬಚ್ಚಿಟ್ಟಿರುವ ಅಗಾಧ ಧನರಾಶಿಯನ್ನು ದೇಶಕ್ಕೆ ವಾಪಸು ತಂದು ಭಾರತೀಯರ ಬ್ಯಾಂಕ್ ಖಾತೆಗಳಲ್ಲಿ ತಲಾ 15 ಲಕ್ಷ ರೂಪಾಯಿ ಜಮಾ ಮಾಡಲಾಗುವುದು ಎಂಬ ಅವರ ಚುನಾವಣಾ ಭರವಸೆಯನ್ನು ಜನ ನಿಜವೆಂದು ನಂಬಿದ್ದುಂಟು.

ಚುನಾವಣೆಗಳ ಬಿಸಿಯಲ್ಲಿ ಆಡಿದ ಈ ಮಾತು ಪ್ರತೀಕಾತ್ಮಕವೇ ವಿನಾ ನಿಜವಲ್ಲ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಷಾ ನಿರಾಸೆಯನ್ನು ಬಿತ್ತಿದ್ದರು. ಪ್ರತಿಪಕ್ಷಗಳ ಹೀಯಾಳಿಕೆಯನ್ನು ಎದುರಿಸಿತ್ತು ಬಿಜೆಪಿ. ಎರಡೂವರೆ ವರ್ಷಗಳ ಅವರ ಅಧಿಕಾರಾವಧಿ ನೆನ್ನೆ ಮೊನ್ನೆಯ ತನಕ  ಏರಿಳಿತಗಳಿಲ್ಲದೆ ಉರುಳಿ ಹೋಗಿತ್ತು.

ಅವರನ್ನು ತಮ್ಮ ಹೃದಯ ಸಿಂಹಾಸನಗಳಲ್ಲಿ ಕುಳ್ಳಿರಿಸಿಕೊಂಡ ಆರಾಧಕವರ್ಗ ಕೂಡ ಒಳಗೊಳಗೇ ನಿರಾಸೆಗೆ ಕುಸಿಯತೊಡಗಿತ್ತು. ಹೊಸತಿನ ಹೊಳಪು ಮಾಸತೊಡಗಿದ್ದ ಸಂಧಿ ಕಾಲದಲ್ಲೇ  ಮೋದಿಯವರು ಹಠಾತ್ತನೆ ಮೈ ಕೊಡವಿದ್ದಾರೆ.

ಪಾಕಿಸ್ತಾನದ ಮೇಲೆ ನಿರ್ದಿಷ್ಟ ದಾಳಿ ನಡೆಸಿದ ಅಬ್ಬರದ ಬೆನ್ನಿಗೇ ದೊಡ್ಡ ನೋಟು ರದ್ದಿನ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿದ್ದಾರೆ. ನೋಟು ರದ್ದು ಕ್ರಮದಿಂದ ಪ್ರತಿಪಕ್ಷಗಳ ಹೀಯಾಳಿಕೆಯ ನಂಜು ಸದ್ಯದ ಮಟ್ಟಿಗಾದರೂ ತೆಳುವಾಗುವುದು ಖಚಿತ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳು ಕದ ತಟ್ಟಿರುವ ನಿರ್ಣಾಯಕ ಸನ್ನಿವೇಶದಲ್ಲಿ ತಮ್ಮ ಪಕ್ಷದ ಬತ್ತಳಿಕೆಗೆ ಎರಡು ಬ್ರಹ್ಮಾಸ್ತ್ರಗಳನ್ನು ಸೇರಿಸಿದ ರಾಜಕೀಯ ಸಾಧನೆಯನ್ನೂ ಮಾಡಿದ್ದಾರೆ ಮೋದಿ.

2014ರಲ್ಲಿ ಬಿಜೆಪಿಯ ಚುನಾವಣಾ ಯಂತ್ರಕ್ಕೆ ಧನಬಲದ ಕೀಲೆಣ್ಣೆ ಎರೆದು ಸುರಿದು ಐತಿಹಾಸಿಕ ವಿಜಯಕ್ಕೆ ದಾರಿ ಮಾಡಿಕೊಟ್ಟ ಸಾಂಪ್ರದಾಯಿಕ ಬೆಂಬಲಿಗ ಕ್ಷೇತ್ರವೊಂದಿದೆ. ಆ ಕ್ಷೇತ್ರದ ಹಿತವನ್ನೂ ತ್ಯಾಗ ಮಾಡಿದ್ದಾರೆ ಮೋದಿ ಎಂಬ ಮಾತಿನಲ್ಲಿ ನಿಜವಿದೆ. ಆದರೆ ಈ ನಡೆಯಲ್ಲೂ ರಾಜಕೀಯ ಜಾಣ್ಮೆ ಇದೆ ಎಂಬುದನ್ನು ಗಮನಿಸಬೇಕು.

ಒಂದು ಕಾಲಕ್ಕೆ ಬಹುತೇಕ ಉತ್ತರಭಾರತದ  ಬ್ರಾಹ್ಮಣ- ಬನಿಯಾ ಪಕ್ಷವೆಂದು ಕರೆಯಲಾಗುತ್ತಿದ್ದ ಬಿಜೆಪಿ, ನಾನಾ ಸಾಮಾಜಿಕ ಗುಂಪುಗಳು, ಜಾತಿಗಳನ್ನು ನುಸುಳಿ ಹೆಚ್ಚು ಹೆಚ್ಚು ಪ್ರಾತಿನಿಧಿಕ ಆಗತೊಡಗಿದ್ದು ಮೊದಲು ವಾಜಪೇಯಿ ಆನಂತರ ಮೋದಿಯವರ ಕಾಲದಲ್ಲಿ.

ಈ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿ ತನ್ನ ಸಾಮಾಜಿಕ ನೆಲೆಯ ಆಳ ಅಗಲಗಳನ್ನು ಸರ್ವವ್ಯಾಪಿ ಆಗಿಸುವುದರಲ್ಲೇ ಮೋದಿಯವರ ವೈಯಕ್ತಿಕ ಗೆಲುವು ಮತ್ತು ಬಿಜೆಪಿಯ ಸಾಮುದಾಯಿಕ ಯಶಸ್ಸು ಅಡಗಿದೆ. ಕೇವಲ ತಮ್ಮ ಸಾಂಪ್ರದಾಯಿಕ ನೆಲೆಯೇ ಸದಾ ಕಾಲಕ್ಕೂ ಚುನಾವಣಾ ಗೆಲುವು ತಂದುಕೊಡಲಾರದು. ಈ ಮಾತನ್ನು ಈಗಿನ ಬಿಜೆಪಿಯಲ್ಲಿ ಮೋದಿಯವರಿಗಿಂತ ಚೆನ್ನಾಗಿ ಬಲ್ಲವರು ಇನ್ಯಾರೂ ಇರಲಾರರು. ಭಾರೀ ಉದ್ಯಮಪತಿಗಳು ಸಿರಿವಂತರ ಬೆಂಬಲ ಈಗಾಗಲೆ ಮೋದಿಯವರಿಗೆ ಇದೆ.

ಶೇ 86ರಷ್ಟು ನೋಟುಗಳ ಚಲಾವಣೆ ರದ್ದು ಮಾಡಿ, ಬದಲಿ ವ್ಯವಸ್ಥೆ ಕಲ್ಪಿಸುವ ಕೆಲಸ ಅಗಾಧ ಮತ್ತು ಅಸದಳ. ಗುರಿ ಮುಟ್ಟುವ ದಾರಿ ದುರ್ಗಮ ಇದ್ದೀತು. ಆದರೆ ಆ ದಾರಿಯಲ್ಲಿ ನಡೆಯುವ ಅಶಕ್ತರು, ಅಸಹಾಯಕರು ನೆಲಕ್ಕೆ ಕಣ್ಣೀರಿಟ್ಟು ಕುಸಿದು ಬೀಳದಂತೆ ಕಸುವು ತುಂಬುವ, ಅವರ ಪಯಣವನ್ನು ಸಹನೀಯಗೊಳಿಸುವ ಸಿದ್ಧತೆಗಳು ಯಾವ ಬೃಹತ್ ಪ್ರಮಾಣದಲ್ಲಿ, ಎಂತಹ ಶರವೇಗದಲ್ಲಿ ಆಗಬೇಕಿತ್ತೋ ಆ ವೇಗದಲ್ಲಿ ಆಗುತ್ತಿಲ್ಲ.

ಮೋದಿಯವರ ಕೈಯಲ್ಲಿ ಮಂತ್ರದಂಡ ಇಲ್ಲ ಹೌದು. ಮಂತ್ರದಂಡ ಬೀಸಿದ ವೇಗದಲ್ಲಿ ತಾಪತ್ರಯಗಳು ಮಾಯವಾಗಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಎದೆ ತಟ್ಟಿಕೊಳ್ಳುವುದನ್ನು ಸದ್ಯಕ್ಕಾದರೂ ಕೈ ಬಿಟ್ಟು ಸಮರೋಪಾದಿಯ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಸಂಕಟದ ಸಮಯದಲ್ಲಿ ಜನರ ಜೊತೆ ನಿಲ್ಲುವ ದಂಡನಾಯಕನ ಪ್ರಾಮಾಣಿಕತೆ ಒಡೆದು ಕಾಣಬೇಕು.

ಬದಲಾಗಿ  ಬೇಕೆಂದಾಗ ಝಳಪಿಸಲು ಆರೆಂಟು ಕ್ರೆಡಿಟ್ ಕಾರ್ಡುಗಳು, ಡೆಬಿಟ್ ಕಾರ್ಡುಗಳಿಂದ ಕಿಸೆ ತುಂಬಿರುವ ಹಣವಂತರೇ ಕಂಗಾಲಾದಂತೆ ವರ್ತಿಸುತ್ತಿದ್ದಾರೆ.  ಇನ್ನು ದಿನಗೂಲಿಗಳು, ಪುಡಿ ವ್ಯಾಪಾರಿ ಗಳು, ಹಳ್ಳಿಗಾಡುಗಳ ಪಾಡನ್ನು ಕೇಳುವವರಾದರೂ ಯಾರು? ಆದರೆ ದೊಡ್ಡ ನೋಟುಗಳ ರದ್ದು ಕ್ರಮವೊಂದರಿಂದಲೇ ಕಪ್ಪು ಹಣ ನಾಶವಾಗುವುದಿಲ್ಲ.

ಈ ಅಕ್ರಮ ಹಣದ ಬಹುಭಾಗ ಈಗಾಗಲೆ ಬಂಗಾರ, ಭೂಮಿ ಕಾಣಿಯ ರೂಪ ಧರಿಸಿದ್ದರೆ ಇಲ್ಲವೇ ಸ್ವಿಸ್ ಬ್ಯಾಂಕುಗಳ ಸಂದೂಕಗಳನ್ನು ಸೇರಿದ್ದರೆ ನೋಟು ರದ್ದತಿಯ ಪ್ರಯೋಜನ ಸೀಮಿತ. ಹೀಗಾಗಿ ರಾಮನ ಲೆಕ್ಕ ಮತ್ತು ಕೃಷ್ಣನ ಲೆಕ್ಕಗಳ ಪೈಕಿ ಎರಡನೆಯದರ ಮೇಲೆ ನಿರಂತರ ಹದ್ದಿನ ನಿಗಾ ಇರಿಸುವುದೊಂದೇ ದಾರಿ ಎಂದು ವಾದಿಸುವ ಆರ್ಥಶಾಸ್ತ್ರಜ್ಞರ ದೊಡ್ಡ ವರ್ಗವೇ ಉಂಟು. ಈ ವಾದ ಇಂದು ನೆನ್ನೆಯದಲ್ಲ.

ಕಾಗದದ ಹಣದ ಪಯಣ ಆರಂಭ ಆದದ್ದು ಹದಿನೆಂಟನೆಯ ಶತಮಾನದ ಕಡೆಯ ಭಾಗದಲ್ಲಿ. ಮೊಗಲ್ ಸಾಮ್ರಾಜ್ಯದ ಪತನ ಮತ್ತು ವಸಾಹತುಶಾಹಿ ಶಕ್ತಿಗಳು ಕಾಲೂರತೊಡಗಿದ್ದ  ಗೊಂದಲದ ದಿನಗಳಲ್ಲಿ. ಅವು 1770ನೆಯ ದಶಕಗಳು. 1946ರಲ್ಲಿ ಬ್ರಿಟಿಷ್ ಆಡಳಿತ ಕೈಗೊಂಡ ನೋಟು ರದ್ದು ಕ್ರಮದಲ್ಲಿ ದೇಶದಾದ್ಯಂತ ಸಂಗ್ರಹವಾದ ಮೊತ್ತ 47 ಕೋಟಿ ರೂಪಾಯಿಗಳು.

1954ರಲ್ಲಿ ದೊಡ್ಡ ನೋಟುಗಳನ್ನು ಪುನಃ ಚಲಾವಣೆಗೆ ತರಲಾಗಿ 1965ರ ಹೊತ್ತಿಗೆ ಸ್ವತಂತ್ರ ಭಾರತದಲ್ಲಿ ಪುನಃ ಕಪ್ಪು ಹಣದ ಗುಲ್ಲೆದ್ದಿತ್ತು. ನೆರೆಯ ಶ್ರೀಲಂಕಾ 1970ರಲ್ಲಿ ನೂರು ಮತ್ತು ಹತ್ತರ ನೋಟುಗಳನ್ನು ಕೂಡ ರದ್ದು ಮಾಡಿದ ಹಿನ್ನೆಲೆಯಲ್ಲಿ ನೋಟು ರದ್ದತಿಗೆ ಭಾರತದಲ್ಲಿ ಮತ್ತೆ ಕೂಗೆದ್ದಿತು. ಈ ಬೇಡಿಕೆ ಪರಿಶೀಲನೆಗೆ  ನ್ಯಾಯಮೂರ್ತಿ ಕೈಲಾಸನಾಥ ವಾಂಛೂ ಸಮಿತಿಯನ್ನು ನೇಮಕ ಮಾಡಲಾಯಿತು.

ದೊಡ್ಡ ನೋಟುಗಳಿರಲಿ, ಹತ್ತರ ನೋಟುಗಳನ್ನೂ ರದ್ದು ಮಾಡಬೇಕೆಂಬ ಶಿಫಾರಸನ್ನು ವಾಂಛೂ ಸಮಿತಿ ಸಲ್ಲಿಸಿತ್ತು. 1978ರ ಜನವರಿ 16ರಂದು ದೊಡ್ಡ ನೋಟು ರದ್ದತಿಯನ್ನು ಘೋಷಿಸಿಯೇಬಿಟ್ಟಿತು ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರ. ₹ 1000, 5000, 10,000ದ ನೋಟುಗಳು ಈಗಿನಂತೆ ರಾತ್ರೋ ರಾತ್ರಿ ರದ್ದಾದವು. ವಿನಿಮಯಕ್ಕೆ ಮೂರೇ ದಿನಗಳ ಕಾಲಾವಕಾಶ. ಇಂದಿನಂತೆಯೇ ಉದ್ದದ ಸರದಿಯ ಸಾಲುಗಳು, ಸಿಟ್ಟು ಸೆಡವು ಹತಾಶೆ ವ್ಯಕ್ತವಾಗಿತ್ತು.

ಭಾರತೀಯ ರಿಸರ್ವ್ ಬ್ಯಾಂಕಿನ ಅಂದಿನ ಗವರ್ನರ್ ಐ.ಜಿ.ಪಟೇಲ್ ನೋಟು ರದ್ದತಿ ಕ್ರಮದ ಪರವಾಗಿರಲಿಲ್ಲ. ಆ ಸಂದರ್ಭದ ತಮ್ಮ ನೆನಪುಗಳನ್ನು ಹೀಗೆ ದಾಖಲಿಸಿದ್ದಾರೆ- ‘ಇಂತಹ ಕಸರತ್ತುಗಳಿಂದ ಕಣ್ಣು ಕುಕ್ಕುವ ಫಲಿತಾಂಶಗಳೇನೂ ಬರುವುದಿಲ್ಲ. ದೊಡ್ಡ ಮೊತ್ತದ ಕಪ್ಪು ಹಣ ಉಳ್ಳ ಜನ ಆ ಹಣವನ್ನು ನಗದು ರೂಪದಲ್ಲಿ ಶೇಖರಿಸಿ ಇಡುವುದು ಅಪರೂಪ.

ಕಪ್ಪು ಹಣವನ್ನು ತಲೆದಿಂಬುಗಳು ಮತ್ತು ಸೂಟ್ ಕೇಸುಗಳಲ್ಲಿ ತುಂಬಿಸಿ ಇಡಲಾಗುತ್ತದೆ ಎಂಬ ಭಾವನೆ ಭೋಳೇತನದ್ದು. ಕಪ್ಪು ಹಣ ಇರಿಸಿದವರು ಸಣ್ಣ ಸಣ್ಣ ಲೇವಾದೇವಿಗಳ ಮೂಲಕ ತಮ್ಮ ಹಣವನ್ನು ಬಿಳಿಯಾಗಿಸಿ ಕೊಡುವ ದಲ್ಲಾಳಿಗಳ ನೆರವನ್ನು ಪಡೆಯುತ್ತಾರೆ. ಸರ್ಕಾರ ಪಟ್ಟು ಹಿಡಿಯಿತಾದ ಕಾರಣ ಈ ರದ್ದು ಕ್ರಮವನ್ನು ಒಪ್ಪಲೇಬೇಕಾಯಿತು. ವೃಥಾ ಕೆಲಸ ಜಾಸ್ತಿ, ಫಲ ಕಮ್ಮಿ’.

ಇನ್ನಿಬ್ಬರು ಅರ್ಥಶಾಸ್ತ್ರಜ್ಞರಾದ ಪಿ.ಆರ್. ಬ್ರಹ್ಮಾನಂದ ಮತ್ತು ಸಿ.ಎನ್.ವಕೀಲ್ ಅವರು ಐ.ಜಿ.ಪಟೇಲ್ ನಿಲುವನ್ನು ಸಮರ್ಥಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಜನತಾ ಸರ್ಕಾರದ ನೋಟು ರದ್ದತಿ ಕ್ರಮ ಮೂಲಭೂತವಾಗಿ ರಾಜಕೀಯ ಉದ್ದೇಶವುಳ್ಳದ್ದೇ ವಿನಾ ಅದರಲ್ಲಿ ಯಾವುದೇ ಆರ್ಥಿಕ ಒಳ ನೋಟ ಇರಲಿಲ್ಲ ಎಂಬ ಮಾಜಿ ಹಣಕಾಸು ಮಂತ್ರಿ ಸಿ.ಸುಬ್ರಹ್ಮಣ್ಯಂ ಅವರ ಅಭಿಪ್ರಾಯಕ್ಕೆ ದನಿಗೂಡಿಸುತ್ತಾರೆ ಕೂಡ.

ಮೊನ್ನೆಯ ತನಕ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಕೂಡ ನೋಟು ರದ್ದು ಕ್ರಮ ಫಲ ನೀಡುವ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ.ಕಪ್ಪು ಹಣ ಉಳ್ಳವರು ಬಲೆಯಿಂದ ಹೊರಬೀಳುವ ಚತುರೋಪಾಯಗಳನ್ನು ಕಂಡು ಹಿಡಿಯುತ್ತಾರೆ. ಕಪ್ಪು ಹಣ ಕಕ್ಕಿಸುವುದು ಕಠಿಣ. ಅಷ್ಟೇ ಅಲ್ಲದೆ ಬಹಳಷ್ಟು ಕಪ್ಪು ಹಣ ಬಂಗಾರದ ರೂಪದಲ್ಲಿ ಶೇಖರ ಆಗಿರುತ್ತದೆ. ತೆರಿಗೆಗಳ್ಳತನದ ಹೆಜ್ಜೆ ಜಾಡುಗಳ ಮೇಲೆ ನಿಗಾ ಇರಿಸಬೇಕು ಎಂಬ ರಾಜನ್ ಅವರ ಮಾತನ್ನು ಸುಲಭವಾಗಿ ತಳ್ಳಿಹಾಕಲು ಬಾರದು.

ಭಾರೀ ಮೊತ್ತದ ಕಪ್ಪು ವ್ಯವಹಾರಗಳಿಗೆ ವಹಿವಾಟುಗಳಿಗೆ ನಗದು ಹಣದ ಬದಲು ಬಂಗಾರದ ನಾಣ್ಯಗಳ ಬಳಕೆಯಾಗಲಿವೆ ಎನ್ನುತ್ತಾರೆ ಆರ್ಥಿಕ ತಜ್ಞ ಸ್ವಾಮಿನಾಥನ್ ಅಂಕ್ಲೇಸಾರಿಯ ಅಯ್ಯರ್. ಐದು ಗ್ರಾಂ ತೂಕದ ಬಂಗಾರದ ನಾಣ್ಯದ ಅಂದಾಜು ಮೌಲ್ಯ 15 ಸಾವಿರ ರೂಪಾಯಿಗಳು. ಹತ್ತು ಗ್ರಾಂ ನಾಣ್ಯದ ಬೆಲೆ ಮೂವತ್ತು ಸಾವಿರ ರೂಪಾಯಿ.

ಈ ಲೆಕ್ಕದಲ್ಲಿ ಒಂದು ಬ್ರೀಫ್ ಕೇಸಿನಲ್ಲಿ ಹಲವು ಕೋಟಿ ರೂಪಾಯಿಗಳನ್ನು ತುಂಬಲು ಬರುತ್ತದೆ. ಚಿನ್ನ ಇಲ್ಲವೇ ಅಮೆರಿಕನ್ ಡಾಲರುಗಳಲ್ಲಿ ಪಾವತಿ. ದೇಶಗಳ ಗಡಿಗಳಿಲ್ಲದ ಬಂಗಾರವನ್ನು ರೂಪಾಯಿ ರದ್ದು ಮಾಡಿದಂತೆ ರದ್ದು ಮಾಡಲು ಬರುವುದಿಲ್ಲ ಎಂಬುದು ಅವರ ಅಭಿಮತ. ‘ಅಲ್ಪಕಾಲದ ನೋವು...ದೀರ್ಘ ದೂರದಲ್ಲಿ ನಲಿವು’ ಎಂಬ ಮೋದಿಯವರ ಮಾತು ನಿಜವಾಗಿ ಪರಿಣಮಿಸಲಿ.

Comments
ಈ ವಿಭಾಗದಿಂದ ಇನ್ನಷ್ಟು
ಕೆಂಪುದೀಪಗಳ ಕೆಳಗೆ ‘ಮಿಂಚುಹುಳು’ಗಳು

ದೆಹಲಿ ನೋಟ
ಕೆಂಪುದೀಪಗಳ ಕೆಳಗೆ ‘ಮಿಂಚುಹುಳು’ಗಳು

5 Mar, 2018
ಮೋದಿ ನಾದಕ್ಕೆ ತಲೆದೂಗುವುದೇ ನಾಗಾಲ್ಯಾಂಡ್?

ದೆಹಲಿ ನೋಟ
ಮೋದಿ ನಾದಕ್ಕೆ ತಲೆದೂಗುವುದೇ ನಾಗಾಲ್ಯಾಂಡ್?

26 Feb, 2018
ತ್ರಿಪುರಾ: ಕಟ್ಟಕಡೆಯ 'ಕೆಂಪು ಕಿಲ್ಲೆ'ಯೇ?

ದೆಹಲಿ ನೋಟ
ತ್ರಿಪುರಾ: ಕಟ್ಟಕಡೆಯ 'ಕೆಂಪು ಕಿಲ್ಲೆ'ಯೇ?

19 Feb, 2018
ಚಾಂಡಾಲ ಬದುಕೊಂದರ ಪ್ರಚಂಡ ಪಾಟಿಸವಾಲು!

ದೆಹಲಿ ನೋಟ
ಚಾಂಡಾಲ ಬದುಕೊಂದರ ಪ್ರಚಂಡ ಪಾಟಿಸವಾಲು!

12 Feb, 2018
ಅವಧಿಗೆ ಮೊದಲೇ ಜನಾದೇಶ ಕೋರುವರೇ ಮೋದಿ?

ದೆಹಲಿ ನೋಟ
ಅವಧಿಗೆ ಮೊದಲೇ ಜನಾದೇಶ ಕೋರುವರೇ ಮೋದಿ?

5 Feb, 2018