ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ರಾಕ್‌ ಕ್ಲೈಂಬಿಂಗ್‌!

Last Updated 14 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಗಣಿ ಜಿಲ್ಲೆ ಬಳ್ಳಾರಿಯಲ್ಲಿ, ತುಂಗಭದ್ರಾ ನದಿ ತಟದಲ್ಲಿರುವ ಹಂಪಿ ಎಂದರೆ ಬಹುತೇಕರಿಗೆ ಅಲ್ಲಿನ ಅದ್ಭುತ ಶಿಲ್ಪಕಲೆಯೇ ನೆನಪಾಗುತ್ತದೆ. ಯುನೆಸ್ಕೋ ಗುರುತಿಸಿರುವ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ, ದಕ್ಷಿಣ ಭಾರತದ ಪ್ರಮುಖ ಗ್ರಾಮವಾದ ಹಂಪಿಯು, ವಿಜಯನಗರ ಸಾಮ್ರಾಜ್ಯದ ಅದ್ಭುತ ಚರಿತ್ರೆಯನ್ನಷ್ಟೇ ತನ್ನ ಒಡಲೊಳಗೆ ಇಟ್ಟುಕೊಂಡಿಲ್ಲ. ಸಾಹಸಿಗಳಾದ ಹವ್ಯಾಸಿ ಮತ್ತು ನುರಿತ ಚಾರಣಿಗರಿಗೆ, ಅದರಲ್ಲೂ ರಾಕ್‌ ಕ್ಲೈಂಬಿಂಗ್‌ನಲ್ಲಿ ಒಂದು ಕೈ ನೋಡೇಬಿಡೋಣ ಎಂಬ ಧೈರ್ಯವಂತರಿಗೆ, ಜೀವಮಾನದಲ್ಲಿ ಎಷ್ಟು ಬಾರಿ ಹತ್ತಿ ಇಳಿದರೂ ಸವೆಯದಷ್ಟು ಶಿಲಾ ಬೆಟ್ಟಗಳೂ ಈ ಪುಟ್ಟ ಹಳ್ಳಿಯಲ್ಲಿವೆ. ಒಂದರ ಮೇಲೊಂದರಂತೆ, ಪ್ರಕೃತಿಯೇ ಶಿಲ್ಪಿಯಾಗಿ ತನಗೆ ತೋಚಿದಂತೆ, ಪೇರಿಸಿಟ್ಟಂತೆ ಕಾಣುವ, ಬೃಹತ್ತಾದ ಅಸಂಖ್ಯ ಶಿಲೆಗಳದೊಂದು ವಿಶಾಲ ವೈವಿಧ್ಯಮಯ ಲೋಕವೇ ಇದೆ, ಕಾಲಿದ್ದೋರು ಹಂಪಿ ನೋಡಿ, ಕಣ್ಣಿದ್ದೋರು ಕನಕಗಿರಿ ನೋಡಿ ಎಂಬ ನಾಣ್ಣುಡಿ ಸುಮ್ಮನೇ ಜನಪ್ರಿಯವಾಗಿಲ್ಲ.
 
ಬಹುತೇಕರು ತಿಳಿದಿರುವಂತೆ, ವಿಶ್ವದ ಹತ್ತಾರು ದೇಶಗಳಿಂದ ಇಲ್ಲಿಗೆ ವಿದೇಶಿಯರು ಚರಿತ್ರೆಯ ಸ್ಮಾರಕಗಳನ್ನು ಮಾತ್ರವೇ ನೋಡಲು ಬರುವುದಿಲ್ಲ. ಹಾಗೆ ಕಂಡರೂ, ಅವರಲ್ಲಿ ಬಹುತೇಕರು, ಹತ್ತಲು ಬಲು ಕಠಿಣವಾದ ಬಂಡೆಗಳೊಂದಿಗಿನ ಸಾಹಸ ಸಂವಾದಕ್ಕಾಗಿಯೂ ಹಂಪಿಯನ್ನು ಪ್ರತಿ ವರ್ಷವೂ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಬಲ್ಲವರೇ ಬಲ್ಲವರು.
 
ಹಂಪಿಗೆ ಬರುವ ಭಕ್ತರು ಗುಡಿ ಸಾಲಿಗೆ ಭೇಟಿ ನೀಡುವುದನ್ನೇ ಮುಖ್ಯವಾಗಿಸಿಕೊಂಡರೆ, ಸಾಹಸವನ್ನು ಆರಾಧಿಸುವವರು ಅದೇ ಸುತ್ತಮುತ್ತಲಿನ ಬಂಡೆಗಳಲ್ಲೇ ತಮ್ಮ ದೇವರನ್ನು ಕಾಣುತ್ತಾರೆ. ಅದೇ ಅವರಿಗೆ ಗುಡಿ, ಸ್ವರ್ಗ. ಹೀಗಾಗಿಯೇ, ವಿದೇಶಿಯರ ನಡುವೆ ಹಂಪಿಗೆ ‘ಪ್ಯಾರಡೈಸ್‌ ಆಫ್‌ ರಾಕ್‌ ಕ್ಲೈಂಬಿಂಗ್‌’ ಎಂಬ ಹೆಸರೂ ಚಾಲ್ತಿಯಲ್ಲಿದೆ! ಹಂಪಿ ಹೀಗೆ, ರಾಕ್‌ ಕ್ಲೈಂಬಿಂಗ್‌ನ ರಾಜಧಾನಿ. ಸಾಹಸಿಗರು ತಲುಪಲು ಹವಣಿಸುವ ಅಂತಿಮ ಗುರಿ.
 
ಜರ್ಮನಿ, ಫ್ರಾನ್ಸ್‌, ಇಂಗ್ಲೆಂಡ್‌, ಸ್ಪೇನ್‌, ಇಟಲಿ, ಆಸ್ಟ್ರೇಲಿಯಾ, ಸ್ವಿಡ್ಜರ್‌ಲೆಂಡ್‌ ಸೇರಿದಂತೆ ಹತ್ತಾರು ದೇಶಗಳ ಚಾರಣಿಗರು ಪ್ರತಿ ವರ್ಷ ಈ ಬಂಡೆಗಳೊಂದಿಗೆ ಸಖ್ಯ ಏರ್ಪಡಿಸಿಕೊಳ್ಳುತ್ತಾರೆ. ನಡೆಯಲು, ಓಡಲು, ಹಾರಲು ಹಲವು ಬಗೆಯ ಮಾರ್ಗಗಳಿರುವಂತೆ, ಬಂಡೆಗಳನ್ನು ಏರಲೂ ಇಲ್ಲಿ ಮಾರ್ಗಗಳಿವೆ. ರಾಕ್‌ ಕ್ಲೈಂಬಿಂಗ್ ಪರಿಭಾಷೆಯಲ್ಲಿ ಅದು ‘ರೂಟ್‌’. 
 
ಹಂಪಿಯ ಸುತ್ತಮುತ್ತಲಿನ ಬಂಡೆಗಳನ್ನು ಏರಲು ಸರಳ, ಸುಲಭವಾದುದರ ಜೊತೆಗೆ ಕಠಿಣ, ಅತಿ ಕಠಿಣ ಮಾರ್ಗಗಳಿವೆ. ಕದಲದೇ ನಿಂತ ಬಂಡೆಗಳನ್ನು ಸೂಕ್ಷ್ಮವಾಗಿ ಗುರುತಿಸುತ್ತಾ ಹೋದಂತೆ, ಅಲ್ಲಲ್ಲಿ ಕಾಣುವ ಬಿಳಿಯ ಚುಕ್ಕಿಯಂಥ ಬಣ್ಣಗಳು ಮಾರ್ಗಗಳ ಕುರಿತು ತಮ್ಮ ಗುಟ್ಟುಗಳನ್ನು ಬಿಟ್ಟುಕೊಡುತ್ತವೆ, ಸಾಹಸಿಗರಿಗೆ ಮಾತ್ರ. ಅವು ಅವರಿಗೂ ಮುಂಚೆ ಬಂಡೆ ಏರಿದವರ ಹೆಜ್ಜೆ ಗುರುತುಗಳು! ಬಿಟ್ಟು ಹೋದ ನೆನಪುಗಳು!!
 
ಹಗ್ಗದ ನೆರವು ಇಲ್ಲದೆಯೇ ಬಂಡೆ ಏರುವ (ಬೋಲ್ಡರಿಂಗ್‌) ಕಠಿಣ ಮಾರ್ಗ ಮತ್ತು ಹಗ್ಗದ ನೆರವಿನಲ್ಲಿ ಬಂಡೆಗಳನ್ನು ಏರುವ ಸಲೀಸು ಮಾರ್ಗದ (ಬೋಲ್ಟೆಡ್‌ ರೂಟ್‌) ಪೈಕಿ, ಬಹುತೇಕರಿಗೆ ಕಠಿಣವಾದುದೇ ಪ್ರಿಯ. ಅಂಥವರ ಹತ್ತಿರ ಹೋಗಿ ಅವರ ಕೈ ಬೆರಳು, ಕಾಲ್ಬೆರಳುಗಳನ್ನು ಕೀಲಿಸಿ ನೋಡಿದರೆ, ಮುಚ್ಚಿದ ಗಾಯಗಳ ಮೇಲೆ ಹಾಕಿದ ಪ್ಲಾಸ್ಟರುಗಳು ಕಾಣುತ್ತವೆ. ಕಠಿಣ ಮಾರ್ಗದಲ್ಲಿ ಗಾಯಗಳು ಸಾಮಾನ್ಯ. ಅವುಗಳೊಂದಿಗೆ ನಕ್ಕರೆ ಮಾತ್ರ ಬಂಡೆಗಳು ಮೆದುವಾಗುತ್ತವೆ. ಬಂಡೆಗಳನ್ನು ಮೆದು ಮಾಡುವುದೇ ಸಾಹಸಿ ಚಾರಣಿಗರ ಹವ್ಯಾಸ. ವಿಶ್ವದ ಶ್ರೇಷ್ಠ ರಾಕ್‌ ಕ್ಲೈಂಬರ್‌ ಎಂದೇ ಹೆಸರಾದ, ಅಮೆರಿಕದ ಕ್ರಿಸ್‌ ಓಂಪ್ರಕಾಶ್‌ ಶರ್ಮಾ ಮತ್ತು ಅವರ ಗೆಳೆಯರಾದ ಕೇಟಿ ಬ್ರಾನ್‌ ಮತ್ತು ನೇಟ್‌ ಗೋಲ್ಡ್‌ ಅವರೊಂದಿಗೆ ಹಂಪಿಯಲ್ಲಿ ರಾಕ್‌ ಕ್ಲೈಂಬಿಂಗ್‌ ಮಾಡಿದ ರೋಚಕ ವಿಡಿಯೊ ‘ಪಿಲಿಗ್ರಿಮೇಜ್‌’ 2003ರಲ್ಲಿ ಹೊರಬರುವವರೆಗೂ, ಹಂಪಿಯು ಈ ಕ್ಷೇತ್ರದಲ್ಲಿ, ಕೆಲವೇ ನುರಿತ ಸಾಹಸಿಗರಿಗಷ್ಟೇ ಗೊತ್ತಿದ್ದ ಗುಟ್ಟಾದ ಸ್ಥಳವಾಗಿತ್ತು!
 
ಈಗ ಸನ್ನಿವೇಶ ಹಾಗಿಲ್ಲ. ತಂಪು ಹವೆ ಹಬ್ಬಿರುವ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನೂರಾರು ವಿದೇಶಿಯರು ಹಂಪಿಗೆ ಬಂದು ತಂಗುತ್ತಾರೆ, ಬಂಡೆ ಹತ್ತಲು ಬೇಕಾದ ಎಲ್ಲ ಸಾಮಗ್ರಿಗಳನ್ನೂ ತಮ್ಮೊಂದಿಗೆ ತರುವ ಅವರು ಇರುವಷ್ಟು ದಿನ ಬಂಡೆಗಳ ಸಖ್ಯ ಸಾಧಿಸುತ್ತಾರೆ. ವಿಪರ್ಯಾಸವೆಂದರೆ, ಇಂಥ ಅಪರೂಪದ ಸಾಹಸ ಕ್ರೀಡೆಗೆ ಅಗತ್ಯವಿರುವ ಸಲಕರಣೆಗಳು ಹಂಪಿಯಲ್ಲಾಗಲೀ, ಹೊಸಪೇಟೆಯಲ್ಲಾಗಲೀ ಸಿಗುವುದಿಲ್ಲ. 
 
ಶಿಕ್ಷಕರೂ ಉಂಟು: ಬಂಡೆಗಳನ್ನು ಹತ್ತುವುದು ಹೇಗೆ ಎಂದು ಗಂಟೆಗಳ ಲೆಕ್ಕದಲ್ಲಿ ಹೇಳಿಕೊಡುವ ಕೆಲವೇ ಸಂಖ್ಯೆಯ ಶಿಕ್ಷಕರು ಇಲ್ಲಿದ್ದರೂ, ಬಹುತೇಕರು ವಿದೇಶಿಯರಿಗಷ್ಟೇ ಆದ್ಯತೆ ನೀಡುತ್ತಾರೆ. ಹೀಗಾಗಿ ಬಂಡೆಗಳ ನಡುವೆ ಇದ್ದರೂ, ಅವುಗಳನ್ನು ಹತ್ತಿ ಇಳಿಯುವ ಪಾಠಗಳನ್ನು ಸ್ಥಳೀಯ ಮಕ್ಕಳಿಗೆ, ಯುವಜನರಿಗೆ ಹೇಳಿಕೊಡುವ ವ್ಯವಸ್ಥೆಯೂ ಇಲ್ಲಿ ಇಲ್ಲ. ಇದೆ ಎನ್ನಬಹುದಾದರೆ, ಅದು ದುಬಾರಿ ಎನ್ನಬೇಕು.
 
ವಿಶಿಷ್ಟ ಪಾರಂಪರಿಕ ಸ್ಥಳದಲ್ಲಿ, ಪರಿಸರ ಪ್ರೇಮಿಯಾದ ಸಾಹಸ ಕ್ರೀಡಾ ಪ್ರವಾಸೋದ್ಯಮಕ್ಕೂ ಇರುವ ವಿಪುಲ ಅವಕಾಶಗಳನ್ನು ಪ್ರವಾಸೋದ್ಯಮ ಇಲಾಖೆಯು ಕಣ್ಮುಂದೆಯೇ ಬಿಟ್ಟುಕೊಟ್ಟಿದೆ ಎಂಬುದಕ್ಕೂ ಈ ಸನ್ನಿವೇಶ ಸಾಕ್ಷಿಯಾಗಿದೆ.
 
**
ಹಂಪಿ ಬೆಂಗಳೂರಿನಿಂದ 353 ಕಿ.ಮೀ ಬಳ್ಳಾರಿಯಿಂದ 74 ಕಿ.ಮೀ ಹೊಸಪೇಟೆಯಿಂದ 13 ಕಿಮೀ ದೂರದಲ್ಲಿದೆ. ಹೊಸಪೇಟೆಯಿಂದ ಬಸ್‌, ರೈಲು ಸೌಲಭ್ಯವಿದೆ. ಹೊಸಪೇಟೆ ಹೋಟೆಲ್‌ ಮತ್ತು ಹಂಪಿಯ ಸ್ಟೇಹೋಂಗಳಲ್ಲಿ ಉಳಿದುಕೊಳ್ಳಲು ಅವಕಾಶವಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT