ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸೇವೆಯಿಂದ ಜನಸೇವೆಯೆಡೆಗೆ...

ಅಕ್ಷರ ಗಾತ್ರ
ಬಿಡುವಿನ ವೇಳೆಯಲ್ಲಿ ರಂಗಭೂಮಿಗಾಗಿ ದುಡಿಯುವವರ ನಡುವೆ ವಿಭಿನ್ನವಾಗಿ ಕಾಣಿಸುವವರು ಕೊಪ್ಪಳದ ಶಿಕ್ಷಕರ ಕಲಾ ಸಂಘ. 2010ರಲ್ಲಿ ಆರಂಭಗೊಂಡ ಈ ಸಂಘವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಂಗಭೂಮಿ ಕಲಾವಿದರಿಗೆ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುವ ಮೂಲಕ ಭಿನ್ನವಾಗಿ ಗುರುತಿಸಿಕೊಂಡಿದೆ. 
 
ಶಿಕ್ಷಕರಾದ ರಾಮಣ್ಣ ಶ್ಯಾವಿ ಹಾಗೂ ಪ್ರಾಣೇಶ ಪೂಜಾರ ಅವರು ಈ ಸಂಘದ ರೂವಾರಿಗಳು. ಗ್ರಾಮೀಣ ಭಾಗಗಳಲ್ಲಿ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವ ಮಾಡುವ ಮೂಲಕ ರಂಗಸೇವೆ ಆರಂಭಿಸಲಾಯಿತು. ‘ರಕ್ತರಾತ್ರಿ’ ಎಂಬ ಮೊದಲ ಪೌರಾಣಿಕ ನಾಟಕಕ್ಕೆ ನಿರೀಕ್ಷೆಗೂ ಮೀರಿ ಹಣ ಹರಿದು ಬಂತು. ಈ ಹಣದಿಂದ ಗದಗಿನ ಪಂಡಿತ್ ಶ್ರೀ ಪುಟ್ಟರಾಜ ಗವಾಯಿಗಳವರಿಗೆ ಸಹಾಯಾರ್ಥವಾಗಿ ಒಟ್ಟು 65ಸಾವಿರ ರೂಪಾಯಿಗಳು ಹಾಗೂ ತುಲಾಭಾರ ಕಾರ್ಯವನ್ನು ಮಾಡಲಾಯಿತು. ಅಲ್ಲಿಂದ ಆರಂಭವಾದ ಇವರ ಜನಸೇವೆ ನಿರಂತರವಾಗಿ ಮುಂದುವರಿದಿದೆ. ನಾಟಕದಿಂದ ಬರುವ ಹಣದಿಂದ ಹಲವರಿಗೆ ಧನಸಹಾಯ ಮಾಡುವ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತ ಬಂದಿದ್ದಾರೆ ತಂಡದ ಸದಸ್ಯರು. ಸರ್ಕಾರ, ಸಂಘ ಸಂಸ್ಥೆಗಳು ಗುರುತಿಸದ ವ್ಯಕ್ತಿಗಳಿಗೆ ಧನಸಹಾಯ ಮಾಡುವುದು, ಶಾಲೆಗಳಿಗೆ ಸಸಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಹಸಿರೀಕರಣಕ್ಕೆ ಪ್ರೋತ್ಸಾಹಿಸುವುದು, ಹಸಿರೀಕರಣಕ್ಕೆ ಒತ್ತು ನೀಡಿರುವ ಶಾಲೆಗಳನ್ನು ಗುರುತಿಸಿ ಪ್ರತಿವರ್ಷ ಒಂದು ಶಾಲೆಗೆ ‘ತಾಲ್ಲೂಕು ಮಟ್ಟದ ಹಸಿರೀಕರಣ ಪ್ರಶಸ್ತಿ’ ನೀಡುವುದು, ನಶಿಸಿ ಹೋಗುತ್ತಿರುವ ರಂಗಕಲೆಯನ್ನು ಉಳಿಸಿ ಬೆಳೆಸಲು ಇಂದಿನ ಯುವಪೀಳಿಗೆಗೆ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸುವುದು, ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಧನಸಹಾಯ ನೀಡುವುದು... ಹೀಗೆ ಹಲವು ರೀತಿಯ ನೆರವು ನೀಡುತ್ತಿದ್ದಾರೆ.
 
ಇವರ ಸಹಾಯಹಸ್ತ ಇಷ್ಟಕ್ಕೇ ನಿಂತಿಲ್ಲ. ಉತ್ತರ ಕರ್ನಾಟಕದ ಹಿರಿಯ ರಂಗಕಲಾವಿದೆ ವಂದನಾ ಗದಗ ಅವರಿಗೆ ₹ 60ಸಾವಿರ, ಸಾಲುಮರದ ತಿಮ್ಮಕ್ಕ ಅವರಿಗೆ ಒಂದು ಲಕ್ಷ ರೂಪಾಯಿ,  ರಂಗಕವಿ ಧುತ್ತರಗಿ ಅವರ ಮಗ ಶಿವಕುಮಾರ ಧುತ್ತರಗಿ ಅವರಿಗೆ 25ಸಾವಿರ ರೂಪಾಯಿ ಧನಸಹಾಯ ಸೇರಿದಂತೆ ಹಲವು ವಿಭಿನ್ನ ರೀತಿಯಲ್ಲಿ ಕಲಾಸಂಘವು ತಮ್ಮ ನಿಸ್ವಾರ್ಥ ಸೇವೆಗೈಯುತ್ತ ಬಂದಿದ್ದಾರೆ. ಈ ವರ್ಷದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಭಿನಯಿಸಿದ ‘ವೀರ ಸಿಂಧೂರ ಲಕ್ಷ್ಮಣ’ ಎಂಬ ಐತಿಹಾಸಿಕ ನಾಟಕದಿಂದ ಬಂದ ಹಣವನ್ನು ಅಂಗವಿಕಲ ಬಡ ಮಕ್ಕಳಿಗೆ ಧನಸಹಾಯವಾಗಿ ನೀಡಲಾಗಿದೆ. ಇವರ ಸಾಮಾಜಿಕ ಸೇವೆಯನ್ನು ಮೆಚ್ಚಿ ಹಲವು ರಂಗಾಸಕ್ತರು, ಶಿಕ್ಷಕರು, ದಾನಿಗಳು ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಕ್ತ ಮನಸ್ಸಿನಿಂದ ಹಣಕಾಸು ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. 
 
ಚಿತ್ರರಂಗದ ನಂಟು
ಶಿಕ್ಷಕರ ಕಲಾಸಂಘಕ್ಕೂ ಕನ್ನಡದ ಚಿತ್ರರಂಗಕ್ಕೂ ಸಂಬಂಧವಿದೆ. ಇತ್ತೀಚೆಗೆ ಬಿಡುಗಡೆಯಾದ ‘ಅನ್ನದಾತ’ ಚಲನಚಿತ್ರದಲ್ಲಿ ನಟಿಸಿರುವ ಕಲಾವಿದರಲ್ಲಿ ಬಹುತೇಕ ನಟರು ಈ ಕಲಾಸಂಘದ ಸದಸ್ಯರು ಎಂಬುದು ವಿಶೇಷ. ರಂಗಭೂಮಿಯಿಂದಲೇ ಬೆಳೆದು ಬಂದ ಪ್ರಸಿದ್ಧ ಹಾಸ್ಯನಟ ಮಂಡ್ಯ ರಮೇಶ ಅವರೊಂದಿಗೆ ಕಲಾತಂಡದ ಒಡನಾಟವಿದೆ. ಇವರ ‘ಚಾಮಚೆಲುವೆ’ ಎಂಬ ನಾಟಕ ಈ ಕಲಾಸಂಘದ ಮೇಲೆ ವಿಶೇಷ ಪ್ರಭಾವ ಬೀರಿದೆ. ಈ ಬಾರಿಯ ಶಿಕ್ಷಕರ ದಿನಾಚರಣೆ ಅಂಗವಾಗಿ ಕೊಪ್ಪಳದ ಸಾಹಿತ್ಯಭವನದಲ್ಲಿ ಅಭಿನಯಿಸಿದ ‘ವೀರ ಸಿಂಧೂರ ಲಕ್ಷ್ಮಣ’ ಐತಿಹಾಸಿಕ ನಾಟಕದ ಕುರಿತ ಟ್ರೇಲರ್ ಸಿದ್ಧಪಡಿಸುವ ಮೂಲಕ ರಂಗಭೂಮಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. ಈ ಬಾರಿ ಪ್ರದರ್ಶನಗೊಂಡ ನಾಟಕಕ್ಕೆ ಐತಿಹಾಸಿಕ ಪುರುಷ ಸಿಂಧೂರ ಲಕ್ಷ್ಮಣನ ವಂಶಸ್ಥರಾದ ಲಕ್ಷ್ಮಣನಾಯಕರನ್ನು ಅತಿಥಿಯಾಗಿ ಕರೆಸಿದ್ದು ಈ ನಾಟಕಕ್ಕೆ ಜೀವಂತಿಕೆಯನ್ನು ತಂದುಕೊಟ್ಟಿತ್ತು. 
 
ಕಲಾತಂಡದ ವತಿಯಿಂದ ಇತ್ತೀಚೆಗೆ ‘ಗಾನಯೋಗಿ ಮೆಲೊಡೀಸ್’ ಎಂಬ ಸಂಗೀತ ಕಛೇರಿಯನ್ನು ಆರಂಭಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಸಂಗೀತ ಕಛೇರಿಯಿಂದ ಬಂದ ಹಣವನ್ನು ಸೇವಾನಿಧಿಗೆ ವಿನಿಯೋಗಿಸುತ್ತಿರುವುದು ಇವರ ಹೃದಯ ಶ್ರೀಮಂತಿಕೆಗೆ ಹಿಡಿದ ಕನ್ನಡಿ. ಇಷ್ಟೇ ಅಲ್ಲದೇ, ಪ್ರತಿಯೊಬ್ಬ ಸದಸ್ಯರು ಪ್ರತಿ ತಿಂಗಳು ತಲಾ 200 ರೂಪಾಯಿಯನ್ನು ತಂಡದ ನಿಧಿಗೆ ಮೀಸಲಿಡುತ್ತಾರೆ. ತಂಡದ ಅಧ್ಯಕ್ಷರಾದ ರಾಮಣ್ಣ ಶ್ಯಾವಿ, ಉಪಾಧ್ಯಕ್ಷ ಶಿವನಗೌಡ್ರು, ಕಾರ್ಯದರ್ಶಿ ಪ್ರಾಣೇಶ ಪೂಜಾರ, ಖಜಾಂಚಿ ದಯಾನಂದ ಸಾಗರ, ಸದಸ್ಯರಾದ ಮಂಜುನಾಥ ಪೂಜಾರ, ಸುರೇಶ ಕಂಬಳಿ, ದೇವರಾಜ ಮೇಟಿ, ರಮೇಶ, ಮಹಾಂತೇಶ, ಗವಿಸಿದ್ಧಪ್ಪ ಸೇರಿದಂತೆ ಹಲವು ರಂಗಾಸಕ್ತರು ಹಗಲಿರುಳು ರಂಗಸೇವೆಗಾಗಿ ದುಡಿಯುತ್ತಿದ್ದಾರೆ.  
 
‘ಶಿಕ್ಷಕರಾಗಿದ್ದವರು ಇಂದಿನ ದಿನಗಳಲ್ಲಿ ಕೇವಲ ಸಂಬಳಕ್ಕಾಗಿ ದುಡಿದು ತಮ್ಮ ಕರ್ತವ್ಯಕ್ಕೆ ದ್ರೋಹ ಬಗೆಯುವವರಿದ್ದಾರೆ. ಇಂಥದ್ದರಲ್ಲಿ ಕೊಪ್ಪಳದ ಕಲಾತಂಡದ ಸದಸ್ಯರ ಕಾರ್ಯ ಶ್ಲಾಘನಾರ್ಹ’ ಎನ್ನುತ್ತಾರೆ ನಟ ಮಂಡ್ಯ ರಮೇಶ ಹಾಗೂ ಸಂಪನ್ಮೂಲ ಶಿಕ್ಷಕ -ವೀರೇಶ ಜಿ. ಮೇಟಿ.
 
ನಶಿಸಿ ಹೋಗುತ್ತಿರುವ ರಂಗಭೂಮಿಯ ಪ್ರತಿಷ್ಠೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಪ್ಪಳದ ಶಿಕ್ಷಕರ ಕಲಾತಂಡವು ನಡೆಸುತ್ತಿರುವ ಪ್ರಯತ್ನ, ಈ ಮೂಲಕ ಕೈಗೊಳ್ಳುತ್ತಿರುವ ಸಮಾಜಸೇವೆ, ಸಹಾಯಹಸ್ತ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿಯೇ ಸಾರ್ಥಕತೆಯನ್ನು ಕಾಣುತ್ತಿರುವ ಇವರ ಸೇವೆ ಅಭಿನಂದನಾರ್ಹ. ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಈ ತಂಡವನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ.
 
**
ಪ್ರದರ್ಶಿತ ನಾಟಕಗಳು
‘ರಕ್ತರಾತ್ರಿ’, ’ಗಂಡುಗಲಿ ಕುಮಾರರಾಮ’, ‘ಸಂಗೊಳ್ಳಿ ರಾಯಣ್ಣ’, ’ಸಿಂಹಾಸನ ಖಾಲಿ ಇದೆ’, ’ವೀರ ಸಿಂಧೂರ ಲಕ್ಷಣ’ ಸೇರಿದಂತೆ ಇನ್ನೂ ಹಲವಾರು ಐತಿಹಾಸಿಕ, ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಕೊಪ್ಪಳ, ಬೆಂಗಳೂರು, ಗಂಗಾವತಿ, ಹಗರಿಬೊಮ್ಮನಹಳ್ಳಿ ಮತ್ತು ಇತರೆ ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ‘ಸಂಗೊಳ್ಳಿ ರಾಯಣ್ಣ’ ನಾಟಕ ಒಟ್ಟು 16 ಬಾರಿ ಪ್ರದರ್ಶನಗೊಂಡಿದೆ. 
 
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯವು ಏರ್ಪಡಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧ ಕಡೆಗಳಿಂದ ಭಾಗವಹಿಸಿದ 40 ನಾಟಕ ತಂಡಗಳ ಪೈಕಿ ಅಂತಿಮ ಸುತ್ತಿಗಾಗಿ ಆಯ್ಕೆಯಾಗುವ ಮೂರು ತಂಡಗಳಲ್ಲಿ ಇವರ ‘ಸಂಗೊಳ್ಳಿ ರಾಯಣ್ಣ’ ನಾಟಕವೂ ಒಂದು. ಈ ಮೂಲಕ ದ್ವಿತೀಯ ಸ್ಥಾನ ಪಡೆಯುವ ಮೂಲಕ ‘ಅತ್ಯುತ್ತಮ ಕಲಾಸಂಘ’ ಎಂಬ ಹೆಗ್ಗಳಿಕೆ  ಪಡೆದಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT