ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸುಖ ದುಃಖಕ್ಕೆ ನಾವೇ ಹೊಣೆ

ಕನಕ ಜಯಂತಿ ನ. 17
Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಕನಕದಾಸರು ನಮ್ಮ ನಾಡು ಕಂಡ ಮಹಾತ್ಮರಲ್ಲಿ ಒಬ್ಬರು. ಅವರು ರಚಿಸಿರುವ ಕೀರ್ತನೆಗಳು ಅವರ ವ್ಯಕ್ತಿತ್ವದ ಹಲವು ಆಯಾಮಗಳನ್ನು ತೋರಿಸುತ್ತವೆ. ಸಂತ, ದಾರ್ಶನಿಕ, ಸಮಾಜಸುಧಾರಕ, ಭಕ್ತ – ಹೀಗೆ ಹಲವು ನೆಲೆಗಳಲ್ಲಿ ಕ್ರಿಯಾಶೀಲರಾಗಿದ್ದವರು ಅವರು. ನಿತ್ಯದ ಬದುಕನ್ನು ಹಸನುಗೊಳಿಸಿಕೊಂಡು ನೆಮ್ಮದಿಯಾಗಿರುವ ಪರಿಯನ್ನು ಅವರು ಹಲವು ಕೀರ್ತನೆಗಳಲ್ಲಿ ನಿರೂಪಿಸಿದ್ದಾರೆ. ಸಮಾಜಸುಧಾರಣೆ ಎನ್ನುವುದರ ಮೊದಲ ಮೆಟ್ಟಿಲು ವ್ಯಕ್ತಿ. ಅವನ ಉನ್ನತಿ ಆಗದ ಹೊರತು ಕುಟುಂಬದ ಏಳಿಗೆ ಸಾಧ್ಯವಾಗದು; ಕುಟುಂಬಗಳು ಉದ್ಧಾರವಾಗದೆ ಸಮಾಜವು ವಿಕಾಸವಾಗದು – ಎಂಬ ಧ್ವನಿ ಅವರ ಕೀರ್ತನೆಗಳಲ್ಲಿ ಮಾರ್ದನಿಸುತ್ತಿದೆ. ಆತ್ಮೋದ್ಧಾರದಿಂದಲೇ ಸಮಾಜೋದ್ಧಾರ ಎಂದು ಸಾರಿದವರು ಅವರು.
 
ವ್ಯಕ್ತಿಯ ಅಂತರಂಗದಲ್ಲಿ ಕ್ರಾಂತಿಯಾಗದ ಹೊರತು ಹೊರಗಿನ ಸಮಜದಲ್ಲಿ ಕ್ರಾಂತಿಯ ಬೆಳಕು ಕಾಣದು ಎಂಬುದಕ್ಕೆ ನಿದರ್ಶನವಾದವರು ಅವರು. ವ್ಯಷ್ಟಿಯಿಂದಲೇ ಸಮಷ್ಟಿ – ಎಂಬ ಸೂತ್ರದ ಅಭಿವ್ಯಕ್ತಿಯಾಗಿ ಅವರ ಹಲವು ಕೀರ್ತನೆಗಳು ಮೈಪಡೆದಿವೆ. ನಾವು ನೆಮ್ಮದಿಯಾಗಿರದೆ ನಮ್ಮ ಪರಿಸರವನ್ನು ನೆಮ್ಮದಿಯಾಗಿರಿಸಲು ಹೇಗೆ ಸಾಧ್ಯ? ಆದುದರಿಂದ ಮೊದಲು ನಾವು ನೆಮ್ಮದಿಯನ್ನು ದಕ್ಕಿಸಿಕೊಳ್ಳಬೇಕು; ನಮ್ಮಂತೆ ನೆಮ್ಮದಿಯನ್ನು ಪಡೆದ ಹತ್ತು ಜನರ ಗುಂಪೇ ಸಮಾಜವಲ್ಲವೆ?
 
ಆದರೆ ನಮ್ಮ ನಿತ್ಯದ ಜೀವನದಲ್ಲಿ ಎದುರಾಗುವ ಹಲವು ಸಂದರ್ಭಗಳು ನಮ್ಮನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ಜಾಣ್ಮೆಯಿಂದ ನಡೆದುಕೊಂಡು ನೆಮ್ಮದಿಯನ್ನು ಪಡೆಯುವ ಹಲವು ಗುಟ್ಟುಗಳನ್ನು ಕನಕದಾಸರು ಅವರ ಕೀರ್ತನೆಯೊಂದರಲ್ಲಿ ಒದಗಿದ್ದಾರೆ:
 
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ।
ಸುಜ್ಞಾನಿಗಳ ಕೂಡೆ ಜಗಳವೇ ಲೇಸು ।। 
ಉಂಬುದುವುಕಿಲ್ಲದರಸಿನೋಲಗಕಿಂತ ।
ತುಂಬಿದೂರೊಳಗೆ ತಿರಿದುಂಬುವುದೆ ಲೇಸು ।।
ಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ ಹರಿ ।
ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು ।।
 
ನಮಗೆ ಅರ್ಧ ಸಮಸ್ಯೆಗಳು ಎದುರಾಗುವುದೇ ಜಗಳಗಳ ಮೂಲಕ. ಈ ಜಗಳಗಳಿಗೆ ಮೂಲ ನಮ್ಮ ಸ್ನೇಹ. ಆರಂಭದಲ್ಲಿ ಸ್ನೇಹ ಚೆನ್ನಾಗಿಯೇ ಇರುತ್ತದೆ. ಆದರೆ ನಮ್ಮ ಸ್ನೇಹಿತರು ದಿಟವಾದ ಸ್ನೇಹಿತರಾಗದಿದ್ದರೆ ಮುಂದೆ ಜಗಳಗಳು ಎದುರಾಗುವುದು ಖಂಡಿತ. ಹೀಗಾಗಿ ಆರಂಭದಲ್ಲಿಯೇ ಕನಕದಾಸರು ನಮಗೆ ಎಂಥವರ ಸ್ನೇಹ ಬೇಕು ಎಂಬುದನ್ನು ಹೇಳುತ್ತಿದ್ದಾರೆ. ಅಜ್ಞಾನಿಗಳ ಸ್ನೇಹ ಎಂದಿಗೂ ಅಪಾಯವೇ. ಏಕೆಂದರೆ ಅವರ ಎಲ್ಲ ನಡೆವಳಿಕೆಗಳಿಗೂ ಅವರ ಮೂರ್ಖತನವೇ ಮೂಲಸ್ಫೂರ್ತಿಯಾಗಿರುತ್ತದೆ. ಅಂಥವರ ಸ್ನೇಹಕ್ಕಿಂತಲೂ ತಿಳಿದವರೊಂದಿಗೆ ಜಗಳವೇ ಲೇಸು. ಏಕೆಂದರೆ ಅವರ ಜಗಳದಿಂದಲೂ ನಾವು ಕಲಿಯುವಂಥದ್ದು ಸಾಕಷ್ಟಿರುತ್ತದೆ.
 
ಹೀಗೆಯೇ ಎಷ್ಟೇ ಸಂಪತ್ತು ಇದ್ದರೂ ನೆಮ್ಮದಿಯಾಗಿ ಒಂದು ತುತ್ತು ಅನ್ನ ತಿನ್ನಲು ಆಗದಂಥ ಪರಿಸ್ಥಿತಿ ಇದ್ದರೆ ಏನು ಪ್ರಯೋಜನ? ಪ್ರಯೋಜನಕ್ಕೆ ಬಾರದ ಕಾಡುಹರಟೆಯಲ್ಲಿ ಕಾಲವನ್ನು ಕಳೆಯುವುದಕ್ಕಿಂತಲೂ ಮನಸ್ಸಿಹೂ ಬದುಕಿಗೂ ಹಿತವನ್ನು ಒದಗಿಸುವ ಸಂವಾದ–ಅಧ್ಯಯನಗಳಲ್ಲಿ ತೊಡಗುವುದು ಉತ್ತಮವಲ್ಲವೆ? ಯಾರದೋ ಹಂಗಿನಲ್ಲಿ ಶ್ರೀಮಂತನಾಗಿ ಬದುಕುವುದಕ್ಕಿಂತಲೂ ಬಡವನಾದರೂ ಸ್ವಾಭಿಮಾನದಿಂದ ಬದುಕುವುದೇ ನಿಜವಾದ ಸಾರ್ಥಕತೆಯಲ್ಲವೆ? ಶತ್ರುಗಳ ಹುನ್ನಾರಗಳ ನಿರಂತರ ಸಂಪರ್ಕದಲ್ಲಿದ್ದುಕೊಂಡು ನರಳುವುದಕ್ಕಿಂತಲೂ ದೂರದಲ್ಲಿ ಸುಖವಾಗಿ ಬದುಕುವುದು ಒಳ್ಳೆಯದಲ್ಲವೆ? ಯಾರಿಗೋ ದಾಸನಾಗುವುದಕ್ಕಿಂತಲೂ ದೈವದ ಅನುಚರ ನಾನು ಎಂಬ ದಾಸತ್ವವೇ ಶ್ರೇಷ್ಠವಲ್ಲವೆ? – ಎನ್ನುತ್ತಾರೆ, ಕನಕದಾಸರು. 
 
ಬದುಕಿನಲ್ಲಿ ನಾವು ಮಾಡಿಕೊಳ್ಳುವ ಆಯ್ಕೆಗಳು ನಮ್ಮ ಬದುಕಿನ ಸುಖ–ದುಃಖಗಳನ್ನು ನಿರ್ಧರಿಸತ್ತವೆ; ಈ ಆಯ್ಕೆಗಳು ನಾವೇ ಮಾಡಿಕೊಳ್ಳುವವರಾದ್ದರಿಂದ, ನಮ್ಮ ದುಗುಡಗಳಿಗೂ ನೆಮ್ಮದಿಗೂ ನಾವೇ ಹೊಣೆಗಾರರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT