ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಎಚ್‌. ಸ್ಕಂದಕುಮಾರ್‌, ಬೆಂಗಳೂರು
* ನಾನು ಶಿಕ್ಷಣ ಸಾಲವನ್ನು ಯುಕೋ ಬ್ಯಾಂಕಿನಿಂದ 14–1–2011 ರಂದು ಪಡೆದಿರುತ್ತೇನೆ. ಅಗತ್ಯ ದಾಖಲೆ ಒದಗಿಸಿದ್ದೇನೆ. ಬ್ಯಾಂಕಿನವರು ಸಬ್ಸಿಡಿಯನ್ನು ಮರುಪಾವತಿಯ ದಿನಾಂಕದಿಂದ ಸರ್ಕಾರ ಕೊಡುವುದಿಲ್ಲ ಎಂದು ಹೇಳುತ್ತಾರೆ. ನಾನು ಮರುಪಾವತಿಯನ್ನು ಶುರುಮಾಡಿದ್ದೇನೆ. ತಾ. 4–9–2012 ರಿಂದ ಇಲ್ಲಿಯತನಕ ಮಾತ್ರ ಸಬ್ಸಿಡಿ ಕೊಡುತ್ತಾರಂತೆ. ಈಗ ಶೇ 12 ರಂತೆ ಬಡ್ಡಿ ವಿಧಿಸುತ್ತಿದ್ದಾರೆ. ಇದು ಸರಿಯೇ?
ಉತ್ತರ: ಬಡ್ಡಿ ಅನುದಾನಿತ ಶಿಕ್ಷಣ ಸಾಲ 1–4–2009 ರಿಂದ ಜಾರಿಯಲ್ಲಿದೆ. ಈ ಅವಕಾಶ ವೃತ್ತಿಪರ ಶಿಕ್ಷಣ ಭಾರತದಲ್ಲಿ ಪಡೆಯುವರಿಗೆ ಲಭ್ಯವಿರುತ್ತದೆ. ಆದರೆ, ಹೆತ್ತವರ ಆದಾಯ ವಾರ್ಷಿಕ ₹ 4.50 ಲಕ್ಷ ದೊಳಗಿರಬೇಕು.
 
ಬಡ್ಡಿ ಅನುದಾನಿತ (interest subsidy) ಸಾಲದ ಅವಧಿ ವಿದ್ಯಾರ್ಥಿಯ ಅಧ್ಯಯನದ ಕೋರ್ಸಿನ ಅವಧಿ ಹಾಗೂ ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ 6 ತಿಂಗಳು (ಇವುಗಳಲ್ಲಿ ಯಾವುದು ಮೊದಲು ಅದು ಅನ್ವಯವಾಗುತ್ತದೆ) ಈ ಅವಧಿ ನಂತರ ಅನುದಾನ ದೊರೆಯುವುದಿಲ್ಲ. ಬಹಳಷ್ಟು ಬ್ಯಾಂಕುಗಳಲ್ಲಿ ಶಿಕ್ಷಣ ಸಾಲಕ್ಕೆ ಬಡ್ಡಿ ಅನುದಾನ ದೊರೆಯದೆ, ಪ್ರಶ್ನೆ ಕೇಳುತ್ತಿದ್ದಾರೆ. ನೀವು ನಿಜವಾಗಿ ಯುಕೋ ಬ್ಯಾಂಕಿಗೆ ಕೃತಜ್ಞತೆ ತಿಳಿಸಬೇಕು. ಜೊತೆಗೆ ಚಿರಋಣಿಯಾಗಬೇಕು.
 
ಸುಶೀಲ, ಮೈಸೂರು
* ನನ್ನ ವಯಸ್ಸು 66. 2010 ರಲ್ಲಿ 
₹ 1,05,000 ಮತ್ತು ₹ 1,80,000 ಅಂಚೆ ಕಚೇರಿಯಲ್ಲಿ ಎಂಐಪಿ ಹಾಕಿದ್ದೆ. ಅದರಿಂದ ₹ 2000 ಆರ್‌.ಡಿ. ಮಾಡಿದ್ದೆ. ಇನ್ನು ಮೂರು ತಿಂಗಳಲ್ಲಿ ತಿಂಗಳಲ್ಲಿ ಎಂಐಪಿ–ಆರ್‌ಡಿ ಅವಧಿ ಮುಗಿದು ಹಣ ಸಿಗುತ್ತದೆ. ಈ ಹಣ ಲಾಭದಾಯಕವಾಗಿ ಹೂಡುವ ವಿಧಾನ ತಿಳಿಸಿ. ಬೇರೆ ವರಮಾನವಿಲ್ಲ. ಕಳೆದ 2 ವರ್ಷಗಳಲ್ಲಿ ಬೇರೆಯವರ ಮಾತು ಕೇಳಿ ಷೇರು ಮಾರುಕಟ್ಟೆಯಲ್ಲಿ ₹ 1 ಲಕ್ಷ ನಷ್ಟ ಪಡುವಂತಾಗಿದ್ದೆ.
ಉತ್ತರ: ಬ್ಯಾಂಕುಗಳಲ್ಲಿ ಠೇವಣಿ ಮೇಲಿನ ಬಡ್ಡಿ ಗಣನೀಯವಾಗಿ ಇಳಿದಿರುತ್ತದೆ. ಇಂದಿನ ಎಂಐಎಸ್‌ ಬಡ್ಡಿ ದರ ಅಂಚೆ ಕಚೇರಿಯಲ್ಲಿ ಶೇ 7.8 ಹಾಗೂ ಆರ್‌ಡಿ ಶೇ 7.4 ಒಟ್ಟಿನಲ್ಲಿ ಬ್ಯಾಂಕ್‌  ಹಾಗೂ ಅಂಚೆ ಕಚೇರಿಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರ ಬಹಳ ಕಡಿಮೆ ಇರುವುದರಿಂದ ಬಡ್ಡಿಯಿಂದಲೇ ಜೀವಿಸುವ ಹಿರಿಯನಾಗರಿಕರಿಗೆ ಜೀವನ ಸಾಗಿಸುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ.
 
ಮೈಸೂರಿನಲ್ಲಿ ಭದ್ರವಾಗಿರುವ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಪ್ರತೀ ತಿಂಗಳೂ ಬಡ್ಡಿ ಪಡೆಯಿರಿ. ₹ 3  ಲಕ್ಷ ಬಡ್ಡಿ ಬಂದರೂ ನಿಮಗೆ ಆದಾಯ ತೆರಿಗೆ ಇರುವುದಿಲ್ಲ. ಏಪ್ರಿಲ್‌ ಒಂದನೇ ವಾರ 15ಎಚ್‌ ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಿ ಟಿಡಿಎಸ್‌ ಆಗದಂತೆ ನೋಡಿಕೊಳ್ಳಿ. ನಿಮ್ಮ ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ನೀವು ತಿಳಿಸಿದ ಸತ್ಯಾಂಶ ಹಲವರಿಗೆ ಎಚ್ಚರಿಕೆ ಗಂಟೆಯಾಗಲಿ ಎಂದು ಆಶಿಸುತ್ತೇನೆ.
 
**
ಬಿ. ಷಣ್ಮುಖ, ಬೆಂಗಳೂರು
* ಸರ್ಕಾರಿ ನೌಕರಿಯಿಂದ ನಿವೃತ್ತನಾಗಿರುತ್ತೇನೆ. ವಯಸ್ಸು 64. ತಿಂಗಳ ಪಿಂಚಣಿ ₹ 8,900. 3 ಜನ ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಮಗ ಸಾಫ್‌್ಟವೇರ್‌ ಎಂಜಿನಿಯರ್‌. ನನ್ನ ಉಳಿತಾಯದ ಹಣ ₹ 7  ಲಕ್ಷ ವಿಜಯ ಬ್ಯಾಂಕ್‌, ₹6.5 ಲಕ್ಷ ಎಸ್‌ಬಿಐ, ₹11.5 ಲಕ್ಷ ಸಿಂಡಿಕೇಟ್‌ ಬ್ಯಾಂಕ್‌. ಬೇರೆ ಬೇರೆ ಊರುಗಳಲ್ಲಿ ಎರಡು ನಿವೇಶನಗಳಿವೆ. ಇವುಗಳ ಮೌಲ್ಯ ₹ 15  ಲಕ್ಷವಾಗಬಹುದು. ಅಂಚೆ ಕಚೇರಿಯಲ್ಲಿ ಪ್ರತೀ ತಿಂಗಳೂ ₹ 2,000 ಆರ್‌ಡಿ ಮಾಡುತ್ತಿದ್ದೇನೆ. ಈಗ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಳ್ಳ ಬೇಕೆಂದಿದ್ದೇನೆ. ಬಾಡಿಗೆ ₹ 13,000 ಕೊಡುತ್ತೇನೆ. ಮಾರ್ಗದರ್ಶನ ಮಾಡಿ.
ಉತ್ತರ: ನಿಮ್ಮೊಡನಿರುವ ₹ 25 ಲಕ್ಷದಿಂದ ಬೆಂಗಳೂರಿನಲ್ಲಿ ನಿವೇಶನ ಮನೆ ಮಾಡಲು ಸಾಧ್ಯವಿಲ್ಲ.  ನಿಮ್ಮ ಮಗನ ಸಂಬಳದ ಆಧಾರದ ಮೇಲೆ ಅವರ ಹೆಸರಿನಲ್ಲಿ ₹ 50 ಲಕ್ಷ ಗೃಹಸಾಲ ಪಡೆಯಿರಿ ಹಾಗೂ ನಿಮ್ಮೊಡನಿರುವ ಸ್ವಲ್ಪ ಠೇವಣಿ ಸೇರಿಸಿ, ಮನೆ ಮಾಡಿಕೊಳ್ಳಿ. ಪ್ರಾಯಶ ನಿವೇಶನ ಕೊಂಡು ಮನೆ ಕಟ್ಟಲು ಈ ಹಣ ಸಾಕಾಗಲಾರದು. ಆದರೆ ಒಂದು ಫ್ಲ್ಯಾಟ್‌ ಕೊಂಡುಕೊಳ್ಳಬಹುದು.
 
ಗೃಹಸಾಲದಿಂದ ನಿಮ್ಮ ಮಗನಿಗೆ ಕಂತು ಬಡ್ಡಿ ಮೇಲೆ ಆದಾಯ ತೆರಿಗೆ ವಿನಾಯ್ತಿ ದೊರೆಯುತ್ತದೆ, ಜೊತೆಗೆ ನೀವು ಮುಂದೆ ಬಾಡಿಗೆ ಕೊಡುವ ಪ್ರಮೇಯವಿಲ್ಲ. ನಿಮ್ಮ ಬೇರೆ ಊರಿನಲ್ಲಿರುವ ನಿವೇಶನ ಮಾರಾಟ ಮಾಡಬೇಡಿ. ಸ್ಥಿರ ಆಸ್ತಿ ಮಾಡಬೇಕೇ ವಿನಾ ಮಾರಾಟ ಮಾಡಬಾರದು. ಈ ಆಸ್ತಿ ನಿಮ್ಮ ಜೀವನದ ಸಂಜೆಯಲ್ಲಿ ನಿಮ್ಮನ್ನು ಕಾಪಾಡುತ್ತದೆ. 
 
**
ಶ್ರೀನಿವಾಸಮೂರ್ತಿ, ಚಿತ್ರದುರ್ಗ
* ನನ್ನ ವಯಸ್ಸು 70. ನಾನು ಈ ಹಿಂದೆ ಎಚ್‌ಎಂಟಿ ಕಂಪೆನಿಯಲ್ಲಿ ಉದ್ಯೋಗ ಮಾಡಿ, 2000 ಇಸವಿಯಲ್ಲಿ ನಿವೃತ್ತನಾದೆ. ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದು ಅದನ್ನು ಇದೇ ವರ್ಷ ಬಾಡಿಗೆಗೆ ಕೊಟ್ಟು ನನ್ನ ಸ್ವಂತ ಊರಿಗೆ ಬಂದಿದ್ದೇನೆ. ನನ್ನ ಬಾಡಿಗೆದಾರರು ₹ 14,000 ಟಿಡಿಎಸ್‌ ಹಿಡಿದು, ₹ 35,000 ಬಾಡಿಗೆ ಕೊಡುತ್ತಾರೆ. ನಾನು ನಿವೃತ್ತಿ ಹೊಂದು ವವರೆಗೆ ₹ 2000 ವರಮಾನ ತೆರಿಗೆ ಸಲ್ಲಿಸು ತ್ತಿದ್ದು, ತದನಂತರ ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ವರಮಾನ ತೆರಿಗೆ ರಿಟರ್ನ್‌ ಸಲ್ಲಿಸಲಿಲ್ಲ. 
 
ಪ್ರಶ್ನೆ:  . ಈಗ ವರಮಾನ ತೆರಿಗೆ ವ್ಯಾಪ್ತಿಗೆ ಬರುವುದರಿಂದ ರಿಟರ್ನ್‌ ಸಲ್ಲಿಸಬೇಕೇ ಅಥವಾ ಈ ವರ್ಷದಿಂದ ಅಂದರೆ 2016–17 ರಿಂದ ಸಲ್ಲಿಸಿದರೆ ಸಾಕೆ?; ವರಮಾನ ತೆರಿಗೆ ವ್ಯಾಪ್ತಿಯಿಂದ ಹೊರಗುಳಿಯಲು ಸೂಕ್ತ ಉಳಿತಾಯ ಯೋಜನೆ ತಿಳಿಸಬೇಕಾಗಿ ಪ್ರಾರ್ಥನೆ.
ಉತ್ತರ: ಒಬ್ಬ ವ್ಯಕ್ತಿ  ಆದಾಯ ತೆರಿಗೆಯ ವ್ಯಾಪ್ತಿಯಲ್ಲ್ಿ ಇದ್ದು ನಂತರ ವ್ಯಾಪ್ತಿಯಿಂದ ಹೊರ ಗುಳಿದರೆ, ಹಾಗೆ ಆದಾಯವಿಲ್ಲದ ವರ್ಷಗಳಲ್ಲಿ ರಿಟರ್ನ್‌ ತುಂಬುವ ಅವಶ್ಯಕತೆ  ಇಲ್ಲ. ನಿಮ್ಮ ಆದಾಯ ಬಾಡಿಗೆಯಾಗಿರುವುದರಿಂದ ಒಟ್ಟು ಬರುವ ಬಾಡಿಗೆಯಲ್ಲಿ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30 ಕಳೆದುಬರುವ ಮೊತ್ತಕ್ಕೆ ಮಾತ್ರ ತೆರಿಗೆ ಕೊಟ್ಟರೆ ಸಾಕು, ಹಾಗೂ ಬರುವ ತೆರಿಗೆಯಲ್ಲಿ ಈಗಾಗಲೇ ಕಡಿತವಾದ ಟಿಡಿಎಸ್‌ ಕಳೆದು ತೆರಿಗೆ ಕೊಡಿರಿ. ಹಾಗೂ ರಿಟರ್ನ್‌ ಸಲ್ಲಿಸಿ.
 
**
ಹೆಸರು ಬೇಡ, ಮಂಡ್ಯ
* ಕೇಂದ್ರ ಸರ್ಕಾರದ ನೌಕರ.  ವಯಸ್ಸು 53. ಸಂಬಳ ₹ 52,000 ಕಡಿತ: ಜಿಪಿಎಫ್‌ ₹ 3000, ಪಿಎಲ್‌ಐ ₹ 11500, ಎಲ್‌ಐಸಿ ₹ 1200, ಪಿಟಿ ₹ 200, ಮನೆ ಸಾಲ ಇಎಂಐ ₹ 17500, ಮಗಳ ವಿದ್ಯಾಭ್ಯಾಸ ಸಾಲ ₹ 2000, ಆದಾಯ ತೆರಿಗೆ ₹ 1000, ಹಬ್ಬದ ಸಾಲ ₹ 500, ವೈಯಕ್ತಿಕ ಆರ್‌ಡಿ ₹ 2000, ಮನೆ ಖರ್ಚು ₹ 1000. ಜಮಾ ಖರ್ಚು ಕಳೆದು ₹ 3100 ಉಳಿಯುತ್ತದೆ. ನನಗೆ 7 ವರ್ಷ ಮಾತ್ರ ಸೇವಾವಧಿ ಇದೆ. ಮಗಳು 3ನೇ ವರ್ಷ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾಭ್ಯಾಸ, ಮದುವೆ ಬಗ್ಗೆ ಹೇಗೆ ಹಣ ಹೊಂದಿಸಲಿ, ತಿಳಿಸಿ.
ಉತ್ತರ: ನಿಮ್ಮ ಮನೆ ಸಾಲ ಯಾವಾಗ ತೀರುತ್ತದೆ ಎನ್ನುವುದನ್ನು ನೀವು ತಿಳಿಸಿಲ್ಲ. ನಿಮ್ಮ ಕಡಿತ ಅಥವಾ ಖರ್ಚಿನಲ್ಲಿ ಏನೂ ಕಡಿಮೆ ಮಾಡುವಂತಿಲ್ಲ. ಮಗಳ ವಿದ್ಯಾಭ್ಯಾಸ ಸದ್ಯದಲ್ಲೇ ಮುಗಿಯುತ್ತದೆ.  ವೈದ್ಯಕೀಯ ಕೋರ್ಸು ಮಾಡುತ್ತಿರುವುದರಿಂದ, ವೈದ್ಯರೇ ನಿಮ್ಮ ಮಗಳನ್ನು ಹುಡುಕಿಕೊಂಡು ಬರುತ್ತಾರೆ. ಮದುವೆಗೆ ಗರಿಷ್ಠ ₹ 2  ಲಕ್ಷ ಖರ್ಚು ಮಾಡಿ.
 
ಹೆಚ್ಚಿನ ಆಡಂಬರದಲ್ಲಿ ಹುರುಳಿಲ್ಲ. ಮದುವೆಗೆ ₹ 2  ಲಕ್ಷ, ಸಂಬಳ ಪಡೆಯುವ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆಯಿರಿ. ಶಿಕ್ಷಣ ಸಾಲದ ಬಡ್ಡಿ ಸೆಕ್ಷನ್‌ 80ಇ ಆಧಾರದ ಮೇಲೆ ಸಂಪೂರ್ಣ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಸದ್ಯಕ್ಕೆ  ಕಷ್ಟವಾದರೂ, ಸುಖದ ದಿವಸಗಳು ಮುಂದೆ ಬರುತ್ತವೆ. 
 
**
ರಾಮರಾಜ್‌, ತಿಪಟೂರು
* ನಾನು ಹಾರ್ಡ್‌ವೇರ್‌, ಗ್ಲಾಸ್‌ ಮತ್ತು ಪ್ಲೈವುಡ್‌ ಅಂಗಡಿ ತೆರೆಯಬೇಕೆಂದಿದ್ದೇನೆ. ಇದಕ್ಕೆ ನನಗೆ ಹಣದ ಅವಶ್ಯಕತೆ ಇದೆ. ನಾನು ಯಾವ ಬ್ಯಾಂಕಿನಿಂದ ಸಾಲ ಪಡೆಯಬಹುದು. ಎಷ್ಟು ಮೊತ್ತದ ಸಾಲ ದೊರೆಯಬಹುದು, ಬಡ್ಡಿ ದರ, ಸಾಲ ಮರುಪಾವತಿಸುವ ಅವಧಿ ಈ ವಿಚಾರದಲ್ಲಿ ಸಲಹೆ ನೀಡಬೇಕಾಗಿ ವಿನಂತಿ.
ಉತ್ತರ: ನೀವು ಇಷ್ಟು ದಿನಗಳ ತನಕ ಏನು ಮಾಡುತ್ತಿದ್ದೀರಿ, ನಿಮ್ಮ ವಿದ್ಯಾರ್ಹತೆ, ಹಿನ್ನೆಲೆ ಹಾಗೂ ನೀವು ಎಷ್ಟು ಬಂಡವಾಳ ಹಾಕಬಹುದು ಎನ್ನುವುದು ಮುಖ್ಯವಾಗುತ್ತದೆ. ಯಾವುದೇ ಉದ್ಯೋಗ ಅಥವಾ ವ್ಯಾಪಾರ ಮಾಡುವಾಗ ಸ್ವಲ್ಪಮಟ್ಟಿನ ಅನುಭವ ಇರಲೇಬೇಕು. ಬ್ಯಾಂಕುಗಳಲ್ಲಿ ಸಾಲ ಕೊಡುವಾಗ, ವ್ಯಕ್ತಿಯ ಹಿನ್ನೆಲೆ, ಅನುಭವ, ಹಾಗೂ ಸಾಲ ಮರುಪಾವತಿಸುವ ಸಾಮರ್ಥ್ಯ ನೋಡುತ್ತಾರೆ. ಇದೇ ವೇಳೆ ನೀವು ಎಷ್ಟು ಬಂಡವಾಳ ಹಾಕಬಹುದು ಎನ್ನುವುದು ಕೂಡಾ ಮುಖ್ಯವಾಗುತ್ತದೆ.
 
ನೀವು ಇದುವರೆಗೆ ವ್ಯವಹರಿಸುತ್ತಿರುವ ಬ್ಯಾಂಕಿನಲ್ಲಿ ವಿಚಾರಿಸಿ. ನೀವು ಮಾಡಲಿರುವ ಉದ್ಯೋಗದ ಪ್ರಾಜೆಕ್‌್ಟ ರಿಪೋರ್ಟ್‌ ಬ್ಯಾಂಕಿಗೆ ಸಲ್ಲಿಸಿರಿ. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ‘ಕಿಶೋರ್‌’ (₹ 50000 ರಿಂದ ₹ 5.00 ಲಕ್ಷ) ಎನ್ನುವ ಯೋಜನೆಯಲ್ಲಿ ಸಾಲ ಸಿಗಬಹುದು. ಬಡ್ಡಿ ದರ ಶೇ 12. ಮರುಪಾವತಿ 60–84 ತಿಂಗಳು.  
 
 
**
ಕುಮಾರ, ತುಮಕೂರು
* ತುಮಕೂರಿನಲ್ಲಿ 2 ಎಕರೆ ಜಮೀನು ಹೊಂದಿದ್ದೆ. ವಯಸ್ಸು 48. ಜಮೀನು ಕೆ.ಐ.ಎ.ಡಿ.ಬಿಗೆ   ಭೂ ಸ್ವಾಧೀನವಾಗಿ ಕೃಷಿ ಭೂಮಿ ಪರಿಹಾರ ರೂಪದಲ್ಲಿ ₹ 60  ಲಕ್ಷವನ್ನು ಎನ್‌ಇಎಫ್‌ಟಿ ಮುಖಾಂತರ, ನನ್ನ ಎಸ್‌ಬಿಎಂ–ಎಸ್‌ಬಿಎ/ಸಿ ಖಾತೆಗೆ ಜಮಾ ಮಾಡಿರುತ್ತಾರೆ.   ಈ ಹಣದಲ್ಲಿ ನನ್ನ  ಮೂವರು ಸಹೋದರಿಯರಿಗೆ  ತಲಾ ₹ 5 ಲಕ್ಷ ಕೊಟ್ಟಿದ್ದೇನೆ. ಉಳಿದ ₹ 45 ಲಕ್ಷ ನನ್ನೊಡನಿದೆ.  ನನಗೆ ಸ್ವಂತ ಮನೆ ಇಲ್ಲ. ತುಮಕೂರಿನಲ್ಲಿ ₹ 25 ಲಕ್ಷಕ್ಕೆ ಮನೆ ಖರೀದಿಸಬೇಕೆಂದಿದ್ದೇನೆ. ತೆರಿಗೆ ಬರುತ್ತದೆಯೇ ಹಾಗೂ ಹಣ ಹೇಗೆ ವಿನಿಯೋಗಿಸಲಿ ತಿಳಿಸಿ.
ಉತ್ತರ:  ಕ್ಯಾಪಿಟಲ್‌ಗೇನ್‌ ಸೆಕ್ಷನ್‌ 48 ಆಧಾರದ ಮೇಲೆ ಕೃಷಿ ಭೂಮಿ ಮಾರಾಟ ಅಥವಾ ಸರ್ಕಾರ ಸ್ವಾಧೀನಪಡಿಸಿ. ಬಂದಿರುವ ಹಣಕ್ಕೆ ತೆರಿಗೆ ಇರುವುದಿಲ್ಲ. ನೀವು ತಕ್ಷಣ ತುಮಕೂರಿನಲ್ಲಿ ಮನೆ ಕೊಳ್ಳಿರಿ. ಇದು ಒಂದು ಉತ್ತಮ ಹೂಡಿಕೆ ಜೊತೆಗೆ ನಿಮಗೆ ಅವಶ್ಯಕತೆ ಕೂಡಾ ಇದೆ. ಉಳಿದ 
ಹಣವನ್ನು ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಠೇವಣಿ ಇರಿಸಿರಿ. ಹೆಚ್ಚಿನ ಬಡ್ಡಿ ಅಥವಾ ವರಮಾನದ ಆಸೆಯಿಂದ ಖಾಸಗಿಯವರಿಗೆ ಸಾಲ ಕೊಟ್ಟು ಅಸಲನ್ನು ಕಳೆದುಕೊಳ್ಳಬೇಡಿ.
 
**
ವಿಜಯಶೇಖರ, ಹಳಿಯಾಳ
* ನಾನು ಆಗಸ್‌ 2015 ರಲ್ಲಿ ಸಾರಿಗೆ ಸಂಸ್ಥೆಯಿಂದ ನಿವೃತ್ತನಾದೆ. ನನಗೆ ಬರತಕ್ಕ ಪಿ.ಎಫ್‌. ಗ್ರ್ಯಾಚುಟಿ, ರಜಾ ಸಂಬಳ ನಗದೀಕರಣದಿಂದ ₹ 32  ಲಕ್ಷ ಬಂದಿರುತ್ತದೆ. ಇದರಲ್ಲಿ ₹ 39,700 ತೆರಿಗೆ ಕಡಿತ ಮಾಡಿರುತ್ತಾರೆ. ನನಗೆ ತಿಂಗಳಿಗೆ  ₹ 2,048 ಪಿಂಚಣಿ ಇದೆ. ನಾನು ₹ 14 ಲಕ್ಷ 6 ವರ್ಷ, ₹ 8  ಲಕ್ಷ ಒಂದು ವರ್ಷ, ಅವಧಿ ಠೇವಣಿಯಲ್ಲಿ ಇರಿಸಿದ್ದೇನೆ. ನನಗೆ 27 ವರ್ಷದ ಮಗ, 25 ವರ್ಷದ ಮಗಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಹಂಗಾಮಿ ಕೆಲಸಕ್ಕೆ ಸೇರಿದ್ದೇನೆ. ಮುರಿದ ಆದಾಯ ತೆರಿಗೆ ಹಿಂದೆ ಪಡೆಯಬಹುದೇ? ಸೆಕ್ಷನ್‌ 80ಸಿ ಯಲ್ಲಿ  ₹ 1.50 ಲಕ್ಷ ಯಾವ ಠೇವಣಿಯಲ್ಲಿ ಇರಿಸಲಿ? ಅಂಚೆ ಕಚೇರಿಯಲ್ಲಿ ₹ 10,000 ಆರ್‌ಡಿ ಮಾಡಿದರೆ 5 ವರ್ಷಗಳಲ್ಲಿ ಎಷ್ಟು ಹಣ ದೊರೆಯಬಹುದು? ಆರ್‌ಡಿ ಮೇಲೆ ಹಣ ಪಡೆಯುವಾಗ ತೆರಿಗೆ ಬರುತ್ತದೆಯೇ? ಊರಿನಲ್ಲಿ ಸ್ವಂತ ಮನೆ ಇದೆ ವಾರ್ಷಿಕವಾಗಿ ₹ 60,000 ಬಾಡಿಗೆ ಬರುತ್ತದೆ. ಆದಾಯ ತೆರಿಗೆ ಯಾವ ರೀತಿಯಲ್ಲಿ ಲೆಕ್ಕ ಹಾಕಬೇಕು? ಊರಿನ ಸ್ವಂತ ಮನೆ ಮಾರಾಟ ಮಾಡಿ ಹಳಿಯಾಳದಲ್ಲಿ ಕಟ್ಟಿದ ಮನೆ ಅಥವಾ ಮನೆ ಕಟ್ಟುವ ಯೋಚನೆ ಇದೆ. 
ಉತ್ತರ: ಓರ್ವ ವ್ಯಕ್ತಿ ನಿವೃತ್ತನಾಗಿ, ನಿವೃತ್ತಿಯಿಂದ ಬರುವ ಬೇರೆ ಬೇರೆ ಹಣಕ್ಕೆ ಈ ಕೆಳಗಿನಂತೆ ಆದಾಯ ತೆರಿಗೆ ವಿನಾಯತಿ ಇದೆ.
 
 
ಮೇಲಿನ ವಿವರಣೆಗೆ ಮೀರಿ ತೆರಿಗೆ ಮುರಿದಲ್ಲಿ ರಿಟರ್ನ್‌ ತುಂಬಿ ಕಡಿತವಾದ ಹಣ (ಟಿಡಿಎಸ್‌) ವಾಪಸ್ಸು ಪಡೆಯಬಹುದು. ಸೆಕ್ಷನ್‌ 80ಸಿ ಆಧಾರದ ಮೇಲೆ, ಅಂಚೆ ಕಚೇರಿ ಸೀನಿಯರ್‌ ಸಿಟಿಜನ್‌ ಠೇವಣಿ ಅಥವಾ 5 ವರ್ಷಗಳ ಬ್ಯಾಂಕ್‌ ಠೇವಣಿ ಆರಿಸಿಕೊಳ್ಳಿ.
 
₹ 10,000 ಆರ್‌ಡಿ 5 ವರ್ಷಗಳಲ್ಲಿ ಅಂಚೆ ಕಚೇರಿಯಲ್ಲಿ ಅವಧಿ ಮುಗಿಯುತ್ತಲೇ ₹ 7.27 ಲಕ್ಷ ಮೊತ್ತವಾಗಿ ಕೈ ಸೇರುತ್ತದೆ. ಅಂಚೆ ಕಚೇರಿ ಆರ್‌ಡಿ ಅಥವಾ ಬ್ಯಾಂಕ್‌  ಆರ್‌ಡಿಗೆ ತೆರಿಗೆ ವಿನಾಯತಿ ಇರುವುದಿಲ್ಲ. ನೀವು ಪ್ರತ್ಯೇಕವಾಗಿ ಬಾಡಿಗೆ ಕೊಡುತ್ತಿದ್ದರೂ, ಊರಿನ ಮನೆ ಬಾಡಿಗೆಗೆ ತೆರಿಗೆ ಇದೆ. ಬಾಡಿಗೆಯಲ್ಲಿ ಶೇ 30 ಕಳೆದು ತೆರಿಗೆ ಸಲ್ಲಿಸಬಹುದು. ನಿಮ್ಮ ಊರಿನ ಮನೆ ಮಾರಾಟಮಾಡಿ, ಹಳಿಯಾಳದಲ್ಲಿ ಮನೆಕಟ್ಟುವುದು ಒಂದು ಉತ್ತಮ ಯೋಜನೆ.
 
**
ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ, ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ; ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು –560001 
ಇ–ಮೇಲ್‌: businessdesk@prajavani.co.in –ಸಂ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT