ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳಿನ ಸುಳಿಯಲ್ಲಿ ಇಂಟರ್‌ನೆಟ್‌!

Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ
-ಫರ್ಹಾದ್‌ ಎಂ, ನ್ಯೂಯಾರ್ಕ್‌ ಟೈಮ್ಸ್‌
**
ಸತ್ಯದ ಅಥವಾ ವಾಸ್ತವ ಸಂಗತಿಯ ಬಗೆಗಿನ ನಮ್ಮ ಒಟ್ಟಾರೆ ಗ್ರಹಿಕೆಯನ್ನು ಇಂಟರ್‌ನೆಟ್‌ ತಪ್ಪಾಗಿ ನಿರೂಪಿಸುತ್ತಿದೆಯೇ? ಹೌದು ಎನ್ನುತ್ತವೆ ಇತ್ತೀಚೆಗಿನ ಅಧ್ಯಯನ ಮತ್ತು ಜನಮತ ಸಂಗ್ರಹಣೆಗಳು.
ಆಧುನಿಕ ಇಂಟರ್‌ನೆಟ್‌ ಜಗತ್ತಿನಲ್ಲಿ ನಮ್ಮಲ್ಲಿ ಬಹುತೇಕರು ತಮ್ಮದೇ ಆದಂತಹ ಮಾಹಿತಿಗಳ ಕೋಶದ ಒಳಗೆ ಅವಿತು ಕುಳಿತಿರುತ್ತಾರೆ. ಅದರಿಂದ ಅವರು ಹೊರಬರುತ್ತಿಲ್ಲ ಎಂಬ ಸಂಗತಿ ಜನಾಭಿಪ್ರಾಯಗಳಿಂದ ತಿಳಿದುಬಂದಿದೆ.
‘ನಿರ್ದಿಷ್ಟ ಪಕ್ಷ ಅಥವಾ ಸಿದ್ಧಾಂತವನ್ನು ಅನುಸರಿಸುವವರು ಅಥವಾ ಅವಲಂಬಿತರು ಸರ್ಕಾರಗಳ ನೀತಿಗಳ ಬಗ್ಗೆ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಜೊತೆಗೆ ನಿಜಾಂಶವನ್ನೂ ಮರೆ ಮಾಚುತ್ತಾರೆ’ ಎಂಬ ಅನಿಸಿಕೆಯನ್ನು ಪ್ಯೂ ಅಧ್ಯಯನ ಕೇಂದ್ರ ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ ಶೇ 81ರಷ್ಟು ಮಂದಿ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್‌ ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ವರವಾಗಲಿವೆ ಎಂಬ ವಾದವನ್ನು ತಂತ್ರಜ್ಞರು ಮತ್ತು ಆದರ್ಶವಾದಿಗಳು ಹಲವಾರು ವರ್ಷಗಳಿಂದ ಮುಂದಿಡುತ್ತಲೇ ಬಂದಿದ್ದಾರೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ.
ದಶಕದ ಹಿಂದೆ ಅಮೆರಿಕದಲ್ಲಿ ನಾನು ಯುವ ವರದಿಗಾರನಾಗಿ, ತಂತ್ರಜ್ಞಾನ ಮತ್ತು ರಾಜಕಾರಣ ನಡುವಣ ಸಂಬಂಧದ ಬಗ್ಗೆ ವರದಿ ಮಾಡುವಾಗ ತದ್ವಿರುದ್ಧ ಸಂಗತಿಗಳನ್ನೇ ನೋಡಿದ್ದೆ. ಆಗ ಇಂಟರ್‌ನೆಟ್‌ನಲ್ಲಿ 9/11ರ ದಾಳಿಯ ವಿಷಯಗಳೇ ತುಂಬಿದ್ದವು. ಅವುಗಳ ಬಗ್ಗೆ ಪರ ವಿರೋಧ ಚರ್ಚೆಗಳೇ ನಡೆಯುತ್ತಿದ್ದವು. ಇದರ ನಡುವೆಯೇ 2004ರಲ್ಲಿ ಜಾರ್ಜ್‌ ಡಬ್ಲ್ಯು ಬುಷ್‌ ಅವರು ಜಾನ್‌ ಕೆರಿ ಅವರನ್ನು ಸೋಲಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದಿದ್ದರು.
ಅದೇ ರೀತಿ ನಂತರ ಬರಾಕ್‌ ಒಬಾಮ ಅವರ ಹುಟ್ಟಿನ ಬಗ್ಗೆಯೂ ಇಂಟರ್‌ನೆಟ್‌ನಲ್ಲಿ ಸುಳ್ಳಿನ ಸರಮಾಲೆಯೇ ಹರಿದಾಡಿತು. ಒಬಾಮ ಅವರು ವಿದೇಶದ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು ಎಂಬ ವಿಷಯ ಇಂಟರ್‌ನೆಟ್‌ನಲ್ಲಿ ಪ್ರವಹಿಸಿತು. ನಿಜಾಂಶ ಎಂದರೆ ಒಬಾಮ ಅವರು ಹವಾಯಿಯಲ್ಲಿ ಜನಿಸಿದವರು. ಅವರ ಕುಟುಂಬ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದೆ.
ಅಮೆರಿಕಕ್ಕೆ ಪಿತೂರಿಗಳು, ಒಳಸಂಚುಗಳು ಹೊಸತೇನಲ್ಲ. ಆದರೆ, ಆನ್‌ಲೈನ್‌ ಮಾಧ್ಯಮದಲ್ಲಿರುವ ವಂಚನೆ, ಸುಳ್ಳುಗಳು ಮತ್ತು ಗೌಣವಾದ ಸಂಗತಿಗಳು ಈಗ ಇತರೆ ಮಾಧ್ಯಮಗಳಿಂದ ಹೆಚ್ಚು ವಿಷಮಯವಾಗಿ ಕಾಣುತ್ತಿವೆ.
ಆನ್‌ಲೈನ್‌ನಲ್ಲಿ ಹೇಗೆ ಮಾಹಿತಿಗಳು ಹರಿದಾಡುತ್ತವೆ ಎಂಬುದನ್ನು ಅಧ್ಯಯನ ಮಾಡಿದರೆ ಇದಕ್ಕೆ ಕಾರಣಗಳು ಸಿಗುತ್ತವೆ. ಆನ್‌ಲೈನ್‌ನಲ್ಲಿರುವ ಬಹುತೇಕ ಎಲ್ಲ ವಿಷಯಗಳು ಸತ್ಯದ ವಿರುದ್ಧವಾಗಿಯೇ ಇದೆ.
ವಿವೇಚನೆ ಬಳಸದ ಜನ: ಆನ್‌ಲೈನ್‌ನಲ್ಲಿ ಓದಿದ ಸುದ್ದಿಗಳನ್ನು ಮಾಹಿತಿಗಳನ್ನು ಇತರರಿಗೆ ಹಂಚಿಕೊಳ್ಳುವಾಗ ಜನರು ವಿವೇಚನೆಯನ್ನು ಬಳಸುವುದಿಲ್ಲ.
ಭಿನ್ನ ಸೈದ್ಧಾಂತಿಕ ಮಾಹಿತಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಜನರು ವಿವೇಕದಿಂದ ವರ್ತಿಸುವುದು, ನಾಗರಿಕ ಪ್ರಜ್ಞೆ ಬಳಸುವುದು ಅಪರೂಪ ಎಂಬುದನ್ನು ಮನಶಾಸ್ತ್ರಜ್ಞರು ಮತ್ತು ಸಮಾಜ ವಿಜ್ಞಾನದ ಹಲವಾರು ಬಾರಿ ತೋರಿಸಿದ್ದಾರೆ. ಜನರು ತಮ್ಮಲ್ಲಿರುವ ಪೂರ್ವಗ್ರಹ ಕಲ್ಪನೆಯಂತೆ ಮತ್ತು ಪಕ್ಷಪಾತಿಯಂತೆ ವರ್ತಿಸುತ್ತಾರೆ ಎಂಬುದು ಅವರ ಅಂಬೋಣ. ತಮ್ಮ ಯೋಚನೆಗಳಿಗೆ, ಸಿದ್ಧಾಂತಗಳಿಗೆ ಯಾವ ಮಾಹಿತಿ ಸರಿ ಹೊಂದುತ್ತದೋ ಅವುಗಳನ್ನೇ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ.
ಉದಾಹರಣೆಗೆ, ಫೇಸ್‌ಬುಕ್‌, ಗೂಗಲ್‌, ಟ್ವಿಟರ್‌, ಸುದ್ದಿ ಮಾಧ್ಯಮಗಳಲ್ಲಿ ಜನರು ತಮಗೆ ಇಷ್ಟಕ್ಕೆ ವಿರುದ್ಧವಾದ ಸಂಗತಿಗಳನ್ನು ಓದಲು ಇಷ್ಟಪಡುವುದಿಲ್ಲ. ತಮಗೆ ಯಾವುದು ನೆಚ್ಚಿಕೆಯೋ ಅದನ್ನೇ ಹಂಚಿಕೊಳ್ಳುತ್ತಾರೆ.
ದಾಖಲೆಗಳಿಗೂ ಮನ್ನಣೆ ಇಲ್ಲ: ಡಿಜಿಟಲ್‌ ತಂತ್ರಜ್ಞಾನದಲ್ಲಿ ಕ್ಯಾಮೆರಾ ಮೂಲಕ ಸುದ್ದಿಗಳನ್ನು, ದೃಶ್ಯಗಳನ್ನು ಸೆರೆ ಹಿಡಿಯಲು ಹಾಗೂ ಅವುಗಳನ್ನು ಪಸರಿಸಲು ಅವಕಾಶ ಇದೆ.
ಈಗೀಗ ಎಲ್ಲಿಯಾದರೂ ಯಾವುದಾದರೂ ಘಟನೆಗಳು ನಡೆದ ತಕ್ಷಣ ಚಿತ್ರಗಳು, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇವುಗಳೇ ಆ ಪ್ರಕರಣದ ಪ್ರಾಥಮಿಕ ಸಾಕ್ಷ್ಯಗಳು.
ಈ ಸಾಕ್ಷ್ಯಗಳ ಮೂಲಕ ನಿಜಾಂಶವನ್ನು ಜಗತ್ತಿಗೆ ಸಾರಬಹುದು ಎಂದು ತಿಳಿದಿರಬಹುದು. ಆದರೆ, ವಾಸ್ತವದಲ್ಲಿ ಅದು ಹಾಗಿಲ್ಲ.
9/11ರ ದಾಳಿ
ಅಮೆರಿಕ ಮಾಜಿ ಅಧ್ಯಕ್ಷ ಜಾನ್‌ ಎಫ್‌. ಕೆನಡಿ ಹತ್ಯೆ ಮತ್ತು 9/11ರ ದಾಳಿ ಪ್ರಕರಣಗಳನ್ನು ಪರಿಗಣಿಸಿದರೆ ಇದು ಗೊತ್ತಾಗುತ್ತದೆ.
ಕೆನಡಿ ಹತ್ಯೆಗೆ ಸಂಬಂಧಿಸಿದಂತೆ ಎಲ್ಲರೂ ಕೇವಲ ಒಂದೇ ಒಂದು ದೃಶ್ಯಾವಳಿ (ಡಿಲೇ ಪ್ಲಾಜಾದ ದೃಶ್ಯ) ಮಾತ್ರ ನೋಡಿದ್ದಾರೆ. ಅದೇ ರೀತಿ 9/11ರ ದಾಳಿ ನಡೆದಾಗ ನೂರಾರು ಕ್ಯಾಮೆರಾಗಳು ವಿಮಾನಗಳು ಅವಳಿ ಕಟ್ಟಡಗಳಿಗೆ ಡಿಕ್ಕಿ ಹೊಡೆಯುವ ದೃಶ್ಯಗಳನ್ನು ಮಾತ್ರ ಸೆರೆ ಹಿಡಿದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಹಲವು ಸಂಶಯಗಳು ಈಗಲೂ ಇವೆ. ಅಮೆರಿಕನ್ನರ ಪಾಲಿಗೆ ಎರಡೂ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ.
9/11ರ ವಿಚಾರದಲ್ಲಿ ಸರ್ಕಾರ ಸತ್ಯವನ್ನು ಮುಚ್ಚಿಡುತ್ತಿದೆ ಎಂಬ ಅಭಿಪ್ರಾ ಯವನ್ನು ಬಹುತೇಕರು ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದಾರೆ. ಕೆನಡಿ ಅವರ ಹತ್ಯೆಗೆ ಸಂಬಂಧಿಸಿದಂತೆಯೂ ಇಂತಹದೇ ನಿಲುವು ವ್ಯಕ್ತವಾಗಿದೆ.
ದಾಖಲೆಗಳೂ ಈಗ ಬೆಲೆ ಕಳೆದುಕೊಂಡಿದೆ. ಯಾವುದೇ ವಿಷಯದ ಪರ ಮತ್ತು ವಿರೋಧ ಅಭಿಪ್ರಾಯ ಹೊಂದಿರುವ ಮಂದಿ ತಮ್ಮ ತಮ್ಮ ನಿಲುವಿಗೆ ಬದ್ಧರಾಗಿರುತ್ತಾರೆ.
ಆಧುನಿಕ ಜಗತ್ತಿನಲ್ಲಿ ಯಾವುದಾದರೊಂದು ಸಾಕ್ಷ್ಯ ನೀಡಿದರೂ ನಂಬದಂತಹ ಸ್ಥಿತಿ ಇದೆ. ಡಿಜಿಟಲ್‌ ತಂತ್ರಜ್ಞಾನದಲ್ಲಿ ಛಾಯಾಚಿತ್ರಗಳನ್ನು, ವಿಡಿಯೊಗಳನ್ನು ತಿರುಚಲು ಸಾಧ್ಯವಿರುವುದು ಇದಕ್ಕೆ ಕಾರಣ. ಸಾಕ್ಷ್ಯಗಳನ್ನು ಕೂಡ ತಮಗೇ ಬೇಕಾದ ರೀತಿಯಲ್ಲಿ ಜನರು ವಿಶ್ಲೇಷಿಸುತ್ತಾರೆ.
ಉದಾಹರಣೆಗೆ ಒಂದು ನಿರ್ದಿಷ್ಟ ಚಿತ್ರ, ವಿಡಿಯೊ ಅಥವಾ ದಾಖಲೆಯನ್ನು ಭಿನ್ನ ನಿಲುವು ಹೊಂದಿರುವ ಇಬ್ಬರು ವಿಭಿನ್ನ ಆಲೋಚನೆಗಳನ್ನು ಮಂಡಿಸಿ ವಿವರಿಸುತ್ತಾರೆ ಎಂಬುದನ್ನು ಅಧ್ಯಯನಕಾರರು ತೋರಿಸಿದ್ದಾರೆ. ಇತ್ತೀಚೆಗಿನ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆ.
ಸುಳ್ಳಿಗೆ ಸಾಂಸ್ಥಿಕ ರೂಪ
ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿಗಳು ಮತ್ತು ಮಾಹಿತಿಗಳು ನಿಜವೇ ಸುಳ್ಳೆ ಎಂಬುದನ್ನು ನಿರಂತರವಾಗಿ ಪರಿಶೀಲಿಸಲು ಸಾಕಷ್ಟು ಅವಕಾಶ ಇದೆ. ಯಾವುದೇ ಒಂದು ವಿಚಾರವನ್ನು ಯಾರಾದರೂ ಸುಳ್ಳು ಎಂದು ಹೇಳಿದರೆ, ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ.
ಸುಳ್ಳು ಈಗ ಸಾಂಸ್ಥಿಕ ರೂಪವಾಗಿ ಮಾರ್ಪಟ್ಟಿದೆ. ಸುಳ್ಳನ್ನೇ ಸೃಷ್ಟಿಸುವ, ಸುಳ್ಳು ಸುದ್ದಿಗಳನ್ನೇ ಪ್ರಕಟಿಸುವ ಹಲವು ಜಾಲತಾಣಗಳು ಈಗ ಇಂಟರ್‌ನೆಟ್‌ನಲ್ಲಿ ಸಕ್ರಿಯವಾಗಿವೆ. ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದೂ ಈಗ ಉದ್ಯಮವಾಗಿದೆ. ಫೇಸ್‌ಬುಕ್‌ನಲ್ಲಿನ ರಾಜಕೀಯ ಪುಟಗಳ ಬಗ್ಗೆ ಇತ್ತೀಚೆಗೆ ನಡೆಸಿರುವ ಅಧ್ಯಯನ ಇದನ್ನೇ ಸಾರಿ ಹೇಳುತ್ತಿವೆ.
ಬಜ್‌ಫೀಡ್‌ ವಿಶ್ಲೇಷಣೆ ಪ್ರಕಾರ, ಬಲಪಂಥೀಯ ವೆಬ್‌ಸೈಟ್‌ಗಳಲ್ಲಿ ದಾರಿತಪ್ಪಿಸುವ ಮಾಹಿತಿಗಳು ಶೇ 38ರಷ್ಟಿದ್ದರೆ, ಎಡಪಂಥೀಯ ವೆಬ್‌ಸೈಟ್‌ಗಳಲ್ಲಿ ಶೇ 20ರಷ್ಟು ಇದ್ದವು.
ಸತ್ಯವನ್ನು ಪರಿಶೀಲಿಸುವ ವೆಬ್‌ಸೈಟ್‌ಗಳೂ ಇವೆ. ಒಂದು ವೇಳೆ ಅವರು ಉತ್ತಮವಾಗಿ ಕೆಲಸ ಮಾಡಿದರೆ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸುಳ್ಳುಗಳನ್ನು ತಪ್ಪಿಸಬಹುದು. ಸತ್ಯವನ್ನು ಬಯಸುವ ಜನರಿಗೆ ವಾಸ್ತವಾಂಶವನ್ನು ತಿಳಿಸಬಹುದು.
ಆದರೆ, ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಸುಳ್ಳಿನ ಪ್ರವಾಹದ ಮಧ್ಯೆ ಸತ್ಯ ಶೋಧಕ ತಾಣಗಳ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಿ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT