ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ, ಪುರಾಣ, ದೈವಗಳ ಉಸುಕಿನಲ್ಲಿ...

ಹಲವು ಹತ್ತು ರಕ್ತಸಿಕ್ತ ಇತಿಹಾಸ ಶ್ರೀಸಾಮಾನ್ಯರ ಸಮಾಜಕ್ಕೆ ಕೊಟ್ಟ ಕೊಡುಗೆ ಏನಿರಬಹುದು?
Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇಷ್ಟೊಂದು ಪ್ರಾಕೃತಿಕ ಸಂಪನ್ಮೂಲವಿರುವ ಈ ಭಾರತವು ಇತಿಹಾಸದಲ್ಲಿ ಅಥವಾ ವರ್ತಮಾನದಲ್ಲಿ ಕ್ಷೇಮಕರ ಬಾಳುವೆಯನ್ನು ನಡೆಸಿದಂತೆ ಕಾಣುವುದಿಲ್ಲ. ರಾಜ್ಯ-ಸಾಮ್ರಾಜ್ಯ, ಸ್ತ್ರೀಯರು ಮತ್ತು ಭಂಡಾರ ಲೂಟಿಯ ಸಂಬಂಧದಲ್ಲಿ, ದೇವರು ಧರ್ಮದ ಹೆಸರಿನಲ್ಲಿ ಇಲ್ಲಸಲ್ಲದ ಹೊಡೆದಾಟವೆಬ್ಬಿಸಿ, ರಕ್ತ ಕಾರಿಕೊಂಡ ಈ ನೆಲದಲ್ಲಿ ಇಂದಿಗೂ ರಾಜಕಾರಣ ಇರುವುದು ವೈಯಕ್ತಿಕ ನೆಲೆಯಲ್ಲಿ ಅಥವಾ ಹಲವಾರು ಪಕ್ಷಗಳ ಹೆಸರಿನಲ್ಲಿ.

ಬದುಕುವ ಮಾರ್ಗದ ಅನೇಕ ಸಾಧ್ಯತೆಗಳು ಇಲ್ಲಿವೆ. ನಾನು ನೋಡಿದ ತೊಂಬತ್ತು ದೇಶಗಳ ಪೈಕಿ ತೃತೀಯ ಜಗತ್ತಿನ ಆಯಾ ನೆಲೆಗಳಲ್ಲಿ ಅಥವಾ ಆಫ್ರಿಕಾದಂಥ ದೇಶಗಳಲ್ಲಿ ಇರಬಹುದಾದ ಅನನುಕೂಲಗಳಲ್ಲಿ ಅವರ ಬದುಕು  ಸುಧಾರಣೆ ಕಷ್ಟ ಎನ್ನುವಂತಿದೆ. ಆದರೆ ಭಾರತದಲ್ಲಿ ಮಾತ್ರ ಅಪಾರ ಪ್ರಾಕೃತಿಕ ಸಂಪತ್ತು ಇದ್ದೂ ಅದನ್ನು ಇಲ್ಲಗೈಯುತ್ತ, ಭ್ರಮೆಗಳನ್ನು ಮೈ, ಮೆದುಳಿಗೆ ಮೆತ್ತಿಕೊಂಡು ನಾನಾ ದುರಂತ ತಂದುಕೊಳ್ಳುತ್ತಿರುವುದು ದುರದೃಷ್ಟಕರವೆಂದು ಈಚೆಗೆ ಇಂಗ್ಲೆಂಡ್‌ನ ರಚನಾವಾದದ ಪ್ರವರ್ತಕ ಕಾಲಿನ್ ಮೆಕೆಬಿಯವರು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ ನೆನಪು. ಇದು ಈ ಹೊತ್ತಿನದಲ್ಲ, ಎಲ್ಲ ಶತಮಾನಗಳ ಕಥೆ.

ಉತ್ತರ ಕರ್ನಾಟಕದ ರಾಜನೊಬ್ಬನಿಗೆ ತಾನು ನಾಳಿನ ಯುದ್ಧದಲ್ಲಿ ಸೋಲುವೆನೆಂದು ಖಚಿತವಾಯಿತು. ಅರುವತ್ತು ಜನ ಹೆಂಡಂದಿರನ್ನು ಏನು ಮಾಡುವುದು? ಅರಮನೆಯ ಒಳಗಿನ ಸುರಂಗ ಮಾರ್ಗದಿಂದ ತಪ್ಪಿಸಿಕೊಂಡು ಹೋಗಿ, ಆವರೆಗೆ ರಾಣಿಯರೆನಿಸಿಕೊಂಡಿದ್ದವರು ಎಲ್ಲಿ ಬದುಕಬೇಕು? ಅದರಿಂದ ಸ್ವತಃ ರಾಜನೇ ಅಷ್ಟು ಜನ ಹೆಂಡಂದಿರನ್ನು ಸಾಲಾಗಿ ನಿಲ್ಲಿಸಿ ಕೊಂದು ಅರಮನೆಯ ಒಳಗೇ ಇದ್ದ ಬಾವಿಗೆ ಹಾಕಿಸಿದ. ಈಗಲೂ ಆ ರಾಣಿಯರಿಗಾಗಿ ಕಟ್ಟಿಸಿದ ಸಮಾಧಿಗಳು ಸಾಲಾಗಿವೆ.

ಮಧ್ಯಕಾಲೀನ ಈ ಕಥೆ ಈ ಬಗೆಯದಾದರೆ ಇನ್ನೊಬ್ಬ ರಾಜನ ಹೆಂಡತಿಯರು ‘ನಮ್ಮ ಕಣ್ಣೆದುರು ಮಕ್ಕಳು ಅನಾಥರಾಗಿ ಸಾಯುವುದು ಇಷ್ಟವಿಲ್ಲ, ಮೊದಲು ನಮ್ಮನ್ನು ಕೊಂದು ನಂತರ ಹೆತ್ತವರನ್ನೂ ಹತಗೈಯಬಹುದು’ ಎಂದರು. ಪಾಳೆಯಗಾರ ಹಾಗೇ ಮಾಡಿದ. ಮಾರನೇ ದಿನ ಯುದ್ಧದಲ್ಲಿ ಸತ್ತ. ಈ ಬಗೆಯ ಹಲವು ರಕ್ತಸಿಕ್ತ ಇತಿಹಾಸ ಶ್ರೀಸಾಮಾನ್ಯರ ಸಮಾಜಕ್ಕೆ ಕೊಟ್ಟ ಕೊಡುಗೆ ಏನಿರಬಹುದು? ಕರ್ನಾಟಕವೇ ಅಲ್ಲ, ಭಾರತದ ಗತಇತಿಹಾಸವನ್ನು ಅಧ್ಯಯನ ಮಾಡಬೇಕಾದ ಕ್ರಮವೇ ಬದಲಾಗಬೇಕಿದೆ.

ಈ ನಾಡಿನ ಇಲ್ಲವೇ ದೇಶದ ಯಾವುದೇ ಪ್ರದೇಶಕ್ಕೆ ಹೋದರೂ ಅವರವರ ಅಂಗೈ, ಮುಂಗೈಯಗಲದ ಭಾಗಗಳಲ್ಲಿ, ಅವರವರೇ ಭೂಮಂಡಲವನ್ನೆಲ್ಲ ಆಳುತ್ತಿರುವವರೆಂಬ ಭ್ರಮೆಯಲ್ಲಿ ಅಮಾಯಕ ಸೈನಿಕರ ತಲೆಗೆ ಕೈಲಾಸ, ವೈಕುಂಠವಲ್ಲದೆ ಸುಂದರ ಹೆಣ್ಣುಮಕ್ಕಳ ಆಮಿಷ ತುರುಕಿ, ನೆಲಕ್ಕೆ ನೆಲವೇ ರಕ್ತ ಕುಡಿಯುವಂತೆ ಹೊಡೆದಾಡಿದರು.

ಅಲ್ಲೆಲ್ಲೋ ಪೂರ್ತಿಯಾಗಿ ಪಾಳುಬಿದ್ದ ಹಳ್ಳಿಯೊಂದು ಕಾಣಿಸುತ್ತಿದೆಯಲ್ಲ ಎಂದರೆ ಗ್ರಾಮಸ್ಥರು ಅದೇ ನಮ್ಮ ಮೂಲ ಸ್ಥಾನ, ಅಲ್ಲಿ ಆಗಿಂದಾಗ್ಗೆ ಸೈನ್ಯ ಹಾಯುತ್ತಿದ್ದು, ಆ ದಂಡುದಳದವರು ಅನ್ನ, ನೀರು, ಕುರಿ, ಕೋಳಿಗಳಲ್ಲದೆ ನಮ್ಮ ಹೆಂಗಸರನ್ನೂ ಹಾರಿಸಿಕೊಂಡು ಹೋಗುತ್ತಿದ್ದರು. ಆ ‘ದಂಡಿನಹಾದಿ’ ಬಿಟ್ಟು ಇತ್ತ ಓಡಿಬಂದೆವೆನ್ನುತ್ತಿದ್ದರು.

ದೇಹ ಗಟ್ಟಿ ಮಾಡಿಕೊಂಡು ನಿತ್ಯ ನಿರಂತರ ಯುದ್ಧ ಮಾಡುವ ಪ್ರಾಯಸ್ತ ಸೈನ್ಯಕ್ಕೆ ಹೆಂಗಸರು ಇಲ್ಲದಿದ್ದರೆ ಹೇಗೆ? ಹೀಗಾಗಿ ಅಸಂಖ್ಯಾತ ಹೆಂಗಸರು ಸೈನ್ಯದ ಹಿಂದೆಯೇ ಹೊರಟು ಹಗಲು ಹೊಡೆದಾಡುತ್ತಿದ್ದ ಸೈನಿಕರಿಗೆ ರಾತ್ರಿಸೇವೆ ಮಾಡಬೇಕಿತ್ತು. ಈ ಬಗೆಯ ದಂತಕಥೆಗಳೊಂದಿಗೆ ಅಪಾರ ಸಂಖ್ಯೆಯ ಬೇಚರಾಕ್ ಗ್ರಾಮಗಳು ಮಧ್ಯ ಕರ್ನಾಟಕದಿಂದ ಹಿಡಿದು ಉತ್ತರ ಕರ್ನಾಟಕದವರೆಗೆ ಕಾಣಸಿಗುತ್ತವೆ. ಆದರೆ ಈ ರೀತಿಯ ಪಾಳುಬಿದ್ದ ಗ್ರಾಮಗಳು ದಕ್ಷಿಣ ಕರ್ನಾಟಕದ ಅರಣ್ಯಭಾಗಗಳಲ್ಲಿ ಕಾಣಿಸುವುದಿಲ್ಲ.

ಕರ್ನಾಟಕದಲ್ಲೋ, ಭಾರತದಾದ್ಯಂತವೋ ಜರುಗಿಹೋದ ಇತಿಹಾಸವನ್ನು ಹಿಂಸೆಯ ಅವಘಡ ಎಂದರಿಯದೆ, ಭಾವುಕತೆಯಿಂದ ಒಪ್ಪಿಕೊಂಡು ಬಂದದ್ದೇ ಹೆಚ್ಚು. ಕಾಣದ ದೈವಗಳನ್ನು ಧ್ಯಾನಿಸುವಂತೆ, ಆಗಿಹೋದ ಇತಿಹಾಸವನ್ನು ಕೊಂಡಾಡುತ್ತ ಕಥೆ, ಕಾದಂಬರಿಗಳನ್ನು ಕಲ್ಪನಾತ್ಮಕ ಸಂಗತಿಗಳೊಂದಿಗೆ ಕಟ್ಟಲಾಯಿತು.

ಇದು ತಕ್ಕಮಟ್ಟಿಗೆ ಸ್ವಾತಂತ್ರ್ಯಾಂದೋಲನದ ಹೊತ್ತಿನಲ್ಲಿ ಒಂದಿಷ್ಟು ಪರಿಣಾಮ ಬೀರಿದ್ದು ನಿಜ. ಆದರೆ ಇದೀಗಲೂ ಅಕ್ಷರ ಬಲ್ಲವರು ಗತ ಇತಿಹಾಸವನ್ನು ಅಷ್ಟೇ ರೋಮಾಂಚನದಲ್ಲಿ, ಪರ ವಿರೋಧದ ಗತಿಯಲ್ಲಿ ನೋಡುವ ಅಗತ್ಯವಿಲ್ಲವೆನ್ನಿಸುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ ಗ್ರಾಮೀಣ ಜಗತ್ತು ಅರಸರನ್ನು ಸ್ತುತಿಸಿದ್ದು ಕಡಿಮೆ. ಇದ್ದರೂ ಕ್ವಚಿತ್ತಾಗಿ ಮಾತ್ರ. ಜನಪದರ ದೈವಗಳೆಂದರೆ ಅವರ ಕಣ್ಣೆದುರೇ ಓಡಾಡಿದ ಸಂತರು, ಆದರ್ಶ ಪುರುಷರು.

ಮೈಸೂರಿನ ಕಡೆಯ ಟಿಪ್ಪು ಇತ್ತ ಸ್ವಾತಂತ್ರ್ಯ ಹೋರಾಟಗಾರನಾದರೆ ಅತ್ತ ಮಧ್ಯಕರ್ನಾಟಕದ ಚಿತ್ರದುರ್ಗದಲ್ಲಿ ಅವನು ಮತ್ತು ಅವನ ತಂದೆ ಹೈದರಾಲಿಯ ವ್ಯಕ್ತಿತ್ವದ ಚಹರೆಯೇ ಬೇರೆ.

ಚಿತ್ರದುರ್ಗ ಪತನಕ್ಕೆ ಹೈದರಾಲಿಯೇ ಕಾರಣ ಎಂದು ಅಲ್ಲಿಯ ಜನಸಮೂಹ ಭಾವಿಸುತ್ತದೆ. ಈ ನಡುವೆಯೇ ಹೈದರ್ ಮಾಡಿದ ಜಾಣತನವೆಂದರೆ ಆ ಭಾಗದ ಜನಪ್ರಿಯ ಸಂತ ತಿಪ್ಪೇಸ್ವಾಮಿಗೆ ತನ್ನದೇ ಮುಸ್ಲಿಂ ಶೈಲಿಯ ಸಮಾಧಿ ಮಂದಿರ ಕಟ್ಟಿಸಿದ. ಅಲ್ಲೇ ಹುಟ್ಟಿದ ತನ್ನ ಮಗನ ಹೆಸರು ತಿಪ್ಪುಸುಲ್ತಾನನೆಂದುಬಿಟ್ಟ. ಆದರೆ ಇತಿಹಾಸಕಾರರು, ಹೈದರಾಲಿ ಚಿತ್ರದುರ್ಗವನ್ನು ವಶಪಡಿಸಿಕೊಳ್ಳುವ ಹೊತ್ತಿಗೆ ಟಿಪ್ಪುವಿಗೆ ಇಪ್ಪತ್ತೈದರ ಪ್ರಾಯವಾಗಿದ್ದಿತು ಎನ್ನುತ್ತಾರೆ.

ಇದೇನೆ ಇರಲಿ ಚಿತ್ರದುರ್ಗ ಸುತ್ತಿನಲ್ಲಿ ಶರಣ ತಿಪ್ಪೇಸ್ವಾಮಿಯ ಲೋಕ ಕಲ್ಯಾಣ ಕಾಯಕದ ಕಾರಣಕ್ಕೋ, ಧರ್ಮಸಮನ್ವಯ ತತ್ವಕ್ಕೋ ಏನೋ ಹಿಂದೂ, ಮುಸ್ಲಿಂ ಸಂಬಂಧವು ‘ಏನ್ ದೊಡ್ಡಪ್ಪಾ, ಏನ್ ಚಿಕ್ಕಪ್ಪಾ’ ಎಂಬಂತಿದೆ. ಉತ್ತರ ಕರ್ನಾಟಕದ ಕಡೆಗೆ ಹೋಗುತ್ತಿದ್ದಂತೆ ಅಲ್ಲಿಯ ಸೂಫಿಸಂತರ, ತತ್ವಪದಕಾರರ ಕಾರಣಕ್ಕೆ ಮನುಷ್ಯ ಸಂಬಂಧಗಳು ಇನ್ನೂ ಗಾಢವಾಗುತ್ತವೆ. ಈ ಸಂಗತಿ ರಾಜಕಾರಣಕ್ಕೆ ಬಂದರೆ ಮಾತ್ರ ಅದು ಪಡೆದುಕೊಳ್ಳುವ ಭಯಂಕರ ಅವಘಡವೇ ಬೇರೆ.

ಕಬ್ಬಿಣದಿಂದ ಮಾಡಿದ ಕತ್ತಿ ಹಿಡಿದ ಪಾಳೆಯಗಾರನಾದರೆ ಸಾತ್ವಿಕ ಮಾರ್ಗ ಕಷ್ಟ ಅಂದುಕೊಂಡ ಕನಕಪ್ಪನಾಯಕ ಅದೇ ಕಬ್ಬಿಣದಿಂದ ಬಿಡಿಸಿದ ತಂತಿಯ ತಂಬೂರಿ ಹಿಡಿದ. ಅತಿ ಆತ್ಮ ಪ್ರತ್ಯಯದ ಕನಕದಾಸ ಉಡುಪಿಗೆ ಬಂದು ‘ಕೂಗುತ್ತಿರುವುದು ಕೇಳಿಸುತ್ತಿಲ್ಲವೆ? ಬಾಗಿಲು ತೆರೆ, ಎಲ್ಲರಿಗೂ ಮುಖ ತೋರುವ ಕೃಷ್ಣಾ ನನಗೆ ಯಾಕೆ ದರ್ಶನ ಕೊಡುವುದಿಲ್ಲವೆಂದು’ ದನಿಯೇರಿಸಿದರು. ಕನಕದಾಸರು ಹೋದೆಡೆಯಲ್ಲೆಲ್ಲ ಮಾತಾಡಿರುವುದು ಹಾಗೆಯೆ.

ತಿರುಪತಿ ತಿಮ್ಮಪ್ಪನಿಗೆ ‘ಏನಯ್ಯ ದೇಶದೇಶಗಳಲ್ಲಿ ಹೆಸರಾದ ಶೆಟ್ಟಿ, ಬಡ್ಡಿ ವ್ಯವಹಾರದ ಶೆಟ್ಟಿ’ ಎಂದರು. ಶ್ರೀರಂಗಪಟ್ಟಣದ ಶ್ರೀರಂಗನಿಗೆ ‘ನೀನು ಹೀಗೆ ದಿಮರಂಗಾ ಅಂತ ಮಲಗಿಬಿಟ್ಟರೆ ನಿನ್ನ ಎಬ್ಬಿಸುವವರು ಯಾರು?’ ಎಂದು ನಿತ್ಯ ಜಂಗಮ ಸ್ಥಿತಿಯ ಕನಕರು ಹಾಡಿದರು.

ಅಷ್ಟೇ ಅಲ್ಲ ಸಾಮಾಜಿಕ ಶ್ರೀಮಂತರು, ರಾಜಕಾರಣದವರ ಗೋಳು ಕಂಡು, ‘...ಕಷ್ಟಪಟ್ಟರು ಇಲ್ಲ, ಕಳವಳಿಸಿದರು ಇಲ್ಲ, ಭ್ರಷ್ಟಮಾನವನೇ ನೀನು ನರಿಯ ಬುದ್ಧಿಯಲಿ ನಡೆದರು ಇಲ್ಲ, ಅರಿಯದೇ ಹಲವ ಹಂಬಲಿಸಿದರು ಇಲ್ಲ, ಕಂಡಕಂಡವರಿಗೆ ಕೈ ಮುಗಿದರು ಇಲ್ಲ, ಗಂಡುಗತ್ತರಿಯ ಕೊರಳಿಗಿಟ್ಟರು ಇಲ್ಲ, ಪ್ರಚಂಡನಾದರು ಇಲ್ಲವೆಂದು...’ ದೇಶ ಆಳುವವರ ಹಣೆಯ ಬರಹವನ್ನೆಲ್ಲ ಬಿಚ್ಚಿಡುತ್ತ ಕರ್ನಾಟಕದಾದ್ಯಂತ ಸಂಚರಿಸಿದರು. ಇಂಥ ಕನಕದಾಸರು ಧ್ಯಾನಿಸಿದ ಕೇಶವ, ಕೃಷ್ಣ ಇರುವುದು ಉಡುಪಿಯಲ್ಲೊ, ಮಥುರೆಯಲ್ಲೊ? ಕುಮಾರವ್ಯಾಸ ಮಹಾಕವಿಯ ಕೃಷ್ಣನಂತೂ ಕಾಣಿಸಿಕೊಳ್ಳುವುದು ಎಲ್ಲಿಯೂ ಅಲ್ಲ, ಭಂಗ ಬಿದ್ದು ಕರೆಯುವವರ, ಪ್ರಾರ್ಥಿಸುವವರ ಮುಂದೆ.

ಸ್ವಯಂವರದಲ್ಲಿ ದ್ರೌಪದಿ ಸಾಲು ಸಾಲು ಕ್ಷತ್ರಿಯರನ್ನು ದಾಟಿ ಕೃಷ್ಣನ ಮುಂದೆ ನಿಂತವಳು, ‘ಯಲಾ ಇವನು ಭಂಡಗಂಡನಾಗುವ ಬದಲು ಅಂತರಂಗದ ಪ್ರಾಣಮಿತ್ರನಾದರೆ ಹೇಗಿರಬಹುದು’ ಎಂದುಕೊಂಡಳು. ಹಾಗೆಂದುಕೊಂಡದ್ದೇ ಮನದೊಳಗೆ ಬೆಳೆದುಬಿಟ್ಟ ಮಹಾಮೈತ್ರಿ ಮಹಾಭಾರತ ಕಥನದುದ್ದಕ್ಕೂ ಕಾಯ ಮಾಯದ ಮೋಹಗಳನ್ನು ದಾಟಿದ ಲೋಕೋತ್ತರ ಸ್ತ್ರೀ ಪುರುಷ ಸಂಬಂಧವಾಗಿಬಿಟ್ಟಿತು.

ದೂರ್ವಾಸಾತಿಥ್ಯದ ಪ್ರಾರ್ಥನೆಯ ವೇಳೆ ಬಂದು ನಿಂತ ಕೃಷ್ಣ  ತನಗೇ ಹಸಿವು ಎಂದ. ಪರಮವೃತಿಯಾದ ವಿದುರನ ಗುಡಿಸಲ ಮುಂದೆ ನಿಂತು ಅಲ್ಲಿಯೂ ತನಗೆ ಹಸಿವೆಂದ.

ಕುಮಾರವ್ಯಾಸನ ಪ್ರಕಾರ ‘ದೇಶಿಗರ ದೈವ’ ಎನಿಸಿಕೊಳ್ಳುವ ಕೃಷ್ಣ ಹಸಿವಿನವನೇ ಅಥವಾ ದೀನನೇ ಎಂದುಕೊಂಡರೆ ಅಲ್ಲ, ಸಾಮ್ರಾಜ್ಯಸಿಂಹಾಸನದ ಗೊಣಸು ಮುರಿಯುವವ. ಹಾಗಾಗಿ ಬಡವರ ಗುಡಿಸಲ ಮುಂದೆ, ಸಿಂಹಾಸನಗಳ ಮುಂದೆ ನಿಲ್ಲುವ ಕೃಷ್ಣ ಪ್ರಾರ್ಥಿಸುವ ಬಡವರಿಗೆ ಎಲ್ಲೆಂದರಲ್ಲಿ ಕಾಣಿಸಿರಬೇಕು. ಎಲ್ಲೆಂದರಲ್ಲಿ ಅಂದರೆ ಈ ಹೊತ್ತಿನ ವ್ಯಾಪಾರಿ ದೈವಗಳಂತಲ್ಲ.

ಜನಸಂದಣಿಯ ಜಾಗಗಳಲ್ಲಿ, ಎಲ್ಲೆಲ್ಲಿ ಕಾಸಿನ ವರಮಾನವಿದೆಯೋ ಅಲ್ಲೆಲ್ಲ ಇಷ್ಟಸಿದ್ಧಿಯ, ಅಭೀಷ್ಟಸಿದ್ಧಿಯ, ವರಸಿದ್ಧಿಯ ಸಕಲ ಸಂಕಷ್ಟಹರ ದೈವಗಳು ಹೇಗೆಂದರೆ ಹಾಗೆ ರಾತ್ರೋರಾತ್ರಿ ಸಣ್ಣಪುಟ್ಟ ಗುಡಿಗಳಾಗಿ, ದರ್ಗಾಗಳಾಗಿ ಎದ್ದುಕೊಳ್ಳುತ್ತವಲ್ಲ, ಹಾಗಲ್ಲ. ಇನ್ನು ಇಂಥ ಗುಡಿಗಳಲ್ಲಿ ಯಾರು ಗರ್ಭಾಂಕಣ ಪ್ರವೇಶಿಸಬೇಕು, ನವರಂಗದಲ್ಲಿ ಯಾರು ಇರಬೇಕು, ಹೊರಗೆ ನಿಲ್ಲುವವರು ಯಾರು, ಪ್ರಸಾದ ಯಾರಿಗೆ ಉಂಟು, ಯಾರಿಗೆ ಇಲ್ಲ ಎಂಬೆಲ್ಲ ತಾರತಮ್ಯಗಳು ಅಲ್ಲಲ್ಲೇ ಹುಟ್ಟಿಕೊಳ್ಳುತ್ತವೆ.

ಇನ್ನು ಹಿಂಸಾತ್ಮಕ ದೈವಗಳ ಕಥನ ಮತ್ತು ಅವುಗಳ ಸನಿಹದ ಮೌಢ್ಯ ಪ್ರದರ್ಶನದ ಕಥೆಯೇ ಬೇರೆ. ಉತ್ತರ ಭಾರತದ ಈಶಾನ್ಯಭಾಗದಲ್ಲಿ ದೇವಿಯ ಮುಂದೆ ಕೋಣಗಳನ್ನು ಇರುಕಿನಲ್ಲಿ ಸಿಕ್ಕಿಸಿ ಹೊಡೆಹೊಡೆಯುತ್ತ ಹಣ್ಣುಗಾಯಿ ನೀರುಗಾಯಿ ಮಾಡಿ ಆಮೇಲೆ ಕೊಂದರೆ ದೇವತೆಗೆ ಸಂತೋಷ. ಮಧ್ಯಭಾರತದಲ್ಲಿ ಮತ್ತು ಮಧ್ಯ ಕರ್ನಾಟಕದಲ್ಲಿ ಮೇಕೆಯ ಹಿಂಗಾಲುಗಳನ್ನು ಕತ್ತರಿಸಿ ಅವು ದೇವತೆ ಮುಂದೆ ತೂರಾಡಿಕೊಂಡು ಬಿದ್ದ ನಂತರ ಕೊಂದರೆ ದೇವತೆಗೆ ತುಂಬ ಸಂತೋಷ.

ಒಂದು ಜಾತ್ರೆಯ ಆಚರಣೆಯೆಂದರೆ ಹೆಂಗಸು-ಹೆಂಗಸರೇ ಜುಟ್ಟು ಹಿಡಿದುಕೊಂಡು ತಲೆಗೆ ತಲೆ ಘಟ್ಟಿಸಿಕೊಳ್ಳುವುದುಂಟು. ಕೇರಳದ ಒಂದು ಗ್ರಾಮದಲ್ಲಿ ಮನೋವೈಕಲ್ಯಕ್ಕಾಗಿ ಹರಕೆ ಕಟ್ಟಿಕೊಂಡ ಹೆಣ್ಣುಮಗಳು ಗುಡಿಯ ಮುಂದಿನ ಮರಕ್ಕೆ ತಲೆ ಡಿಕ್ಕಿ ಹೊಡೆದುಕೊಂಡರೆ ಹಿಡಿದ ಹುಚ್ಚು ಬಿಡುತ್ತದೆ.

ಉಳಿದಂತೆ ಕರ್ನಾಟಕದ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರಾಯದಲ್ಲಿ ಹುಚ್ಚು ಹಿಡಿಯಿತೆಂದು ದೇವರ ಮುಂದೆ ನಿಲ್ಲಿಸಿ ತಣ್ಣೀರು ಸುರಿದು ಮುಳ್ಳು ಬೆತ್ತದಲ್ಲಿ ಹೊಡೆಯುವುದು ಇದ್ದೇ ಇದೆ. ಹಾಗೆಯೇ ಪೂಜಾರಿಯು ಆ ಹೆಣ್ಣುಮಗಳನ್ನು ಭಯಂಕರ ದನಿಯಲ್ಲಿ ಪ್ರಶ್ನಿಸುತ್ತ ಹಿಡಿದಿರುವ ದೆವ್ವ ಹೆಣ್ಣೋ, ಗಂಡೋ ಎಂದು ಪತ್ತೆ ಹಚ್ಚಿದ ಸಂಶೋಧನೆಯನ್ನು ನೆರೆದ ಬಂಧುಬಳಗಕ್ಕೆಲ್ಲಾ ಬಿತ್ತರಿಸುತ್ತಾನೆ.

ಇದೇ ನಿಟ್ಟಿನಲ್ಲಿ ಶತಶತಮಾನಗಳ ಉದ್ದಕ್ಕೂ ಹುಟ್ಟಿಕೊಂಡ ಅಪರಿಮಿತ ಧರ್ಮಶಾಸ್ತ್ರ ಗ್ರಂಥಗಳನ್ನೊಮ್ಮೆ ಪುಟ ತಿರುವಿಬಿಟ್ಟರೆ ಇಂಥದೇ ಅಸಂಖ್ಯಾತ ಸಂಗತಿಗಳನ್ನು ಹೇಳಿರುವಂತೆ ತೋರುತ್ತದೆ.

ಬೆಳಗ್ಗೆ ಎದ್ದರೆ ದಂತದಾವನದ ಬಗೆ ಹೇಗೆ, ಯಾವ್ಯಾವ ಶಕುನಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು, ಯಾವ ದಿನ ಯಾವ ದಿಕ್ಕಿನಲ್ಲಿ ರಾಜರು ಪ್ರಯಾಣ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಿ ಹೇಳುತ್ತವೆ. ಚೌಲ, ನಾಮಕರಣ, ಮರಣ ಇತ್ಯಾದಿಗಳೊಂದಿಗೆ ಯಾವ ಗಳಿಗೆಯಲ್ಲಿ ಗೃಹಸ್ಥರು ಸತ್ತರೆ ಮನೆ ಖಾಲಿ ಮಾಡಬೇಕು, ಸತ್ತವನು ಕಣ್ಣೆದುರಿಗಿದ್ದರೆ ಮಾಡುವ ಶ್ರಾದ್ಧಕರ್ಮಗಳು ಯಾವುವು, ಎಲ್ಲಿಯೋ ಕಣ್ಣಿಗೆ ಕಾಣದಂತೆ ತೀರಿಕೊಂಡರೆ ನೆರವೇರಿಸಬೇಕಾದ ಶ್ರಾದ್ಧಕರ್ಮಗಳು ಯಾವುವು ಎಂಬೆಲ್ಲ ಸಂಗತಿಗಳನ್ನು ಪುನರಾವರ್ತನೆಯಾಗಿ ಹೇಳಿರುವ ಪುರಾಣಕೃತಿಗಳು ಓದಿದರೆ ಮಾತ್ರವಲ್ಲ, ನೋಡಿದರೇ ತಲೆ ಸುತ್ತಿ ಬರುವಷ್ಟಿವೆ.

ಅದಕ್ಕೋ ಏನೋ ಕರ್ನಾಟಕದಾದ್ಯಂತ ತತ್ವಪದಕಾರರು ‘ವೇದವೇದಾಂತವೆಲ್ಲ ಮಿಥ್ಯ, ನೀನು ಅರಿತದ್ದೇ ಸತ್ಯ’ ಎಂದು ಹಾಡಿಬಿಟ್ಟರು. ಕಲ್ಯಾಣದ ಶರಣರು ದೈವವೆಂದರೆ ಅದು ಕೋಟಿ ಸೂರ್ಯರಿಗೆ ಮೀಟಾದ ಪ್ರಭೆ ಎಂದರು. ಆ ಪ್ರಭೆಯ ಬೆಳಕು ಯಾರ ಜಯಂತಿಯಲ್ಲೂ, ಗುಡಿಯಲ್ಲೂ ಕಾಣಿಸುವಂತದ್ದಲ್ಲ. ಅದೊಂದು ಬೆಳಕಿನ ಮಾರ್ಗ.

ಜಗತ್ತಿನ ಮೇಲೆ ನಂಬಿಕೆ, ಪ್ರೇಮವಿರುವವರ ಏಕಾಂತದ ಪಯಣ. ಅದು ದಕ್ಷಿಣ ಕರ್ನಾಟಕದ ತಂಬೂರಿ ಮೀಟುವ ನೀಲಗಾರರ ಪ್ರಕಾರ, ಮಾದಾರ ಚನ್ನಯ್ಯನ ಇಲ್ಲವೇ ಹರಳಯ್ಯನ ತಿಪ್ಪೆಯಲ್ಲೂ ಉರಿಯುತ್ತದೆ. ಸುರಿವ ಮಳೆಯೂ, ಹರಿವ ಜಲವೂ, ತಿಪ್ಪೆಯೂ ಧನದಾನ್ಯ ಸಮೃದ್ಧಿಯ ಮೂಲದ್ರವ್ಯ ತಾನೆ! ಅದರೊಳಗಿನ ಅಂತರ್ಗತ ಬೆಳಕು ಬರಿಯ ಬೆಳಕಾಗಿ ಕಾಣಿಸುವುದಿಲ್ಲ, ಪರಂಜ್ಯೋತಿ ಸ್ವರೂಪವಾಗಿ ಗೋಚರವಾಗುತ್ತದೆನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT