ಮರೆತವರು ಮತ್ತು ಕಥೆಯ ಹಿಂದಿನ ಕಥೆಗಳು!

ಕಳೆದ ವಾರ ಇದೇ ಅಂಕಣದಲ್ಲಿ ಪ್ರಕಟವಾದ ‘ಹೈ.ಕ. ನೆಲದ ಬನಿ, ಸಾಹಿತ್ಯದ ಖನಿ’ ಬರಹದಲ್ಲಿ ಬಿ.ಆರ್‌.ವೆಂಕಣ್ಣ, ಕೆ.ಎಸ್‌.ನಾಯಕ್‌, ಅವಿನಾಶ ಬಡಿಗೇರ ಹಾಗೂ ಪ್ರವೀಣ ಪೊಲೀಸ್‌ ಪಾಟೀಲ ಅವರ ಹೆಸರು ಬಿಟ್ಟುಹೋಗಿದ್ದವು. ಇವರನ್ನು ಸಹೃದಯಿ ಓದುಗರು ನೆನಪು ಮಾಡಿದ್ದಾರೆ.

ಕಳೆದ ವಾರ ಇದೇ ಅಂಕಣದಲ್ಲಿ ಪ್ರಕಟವಾದ ‘ಹೈ.ಕ. ನೆಲದ ಬನಿ, ಸಾಹಿತ್ಯದ ಖನಿ’ ಬರಹದಲ್ಲಿ ಬಿ.ಆರ್‌.ವೆಂಕಣ್ಣ, ಕೆ.ಎಸ್‌.ನಾಯಕ್‌, ಅವಿನಾಶ ಬಡಿಗೇರ ಹಾಗೂ ಪ್ರವೀಣ ಪೊಲೀಸ್‌ ಪಾಟೀಲ ಅವರ ಹೆಸರು ಬಿಟ್ಟುಹೋಗಿದ್ದವು. ಇವರನ್ನು ಸಹೃದಯಿ ಓದುಗರು ನೆನಪು ಮಾಡಿದ್ದಾರೆ.

ಈ ಬಾರಿ ವಿದ್ಯಾರ್ಥಿ ವಿಭಾಗದಲ್ಲಿ ಪ್ರವೀಣ ಪೊಲೀಸ್‌ ಪಾಟೀಲ ‘ನಿರ್ದೇಶಕಿಯಾದ ನನ್ನವ್ವ’ ಕಥೆಗೆ ಬಹುಮಾನ ಪಡೆದಿದ್ದಾರೆ. ಇವರು ಕೊಪ್ಪಳ ಜಿಲ್ಲೆಯವರಾಗಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.

ಬಿ.ಆರ್‌.ವೆಂಕಣ್ಣ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಕಲಬುರ್ಗಿಯಲ್ಲಿ ಆಹಾರ ಇಲಾಖೆಯ ಇನ್‌ಸ್ಪೆಕ್ಟರ್‌ ಆಗಿದ್ದರು. ಇವರಿಗೆ ಕಥೆಗಾರ ರಾಜಶೇಖರ ಹತಗುಂದಿ ಅವರೊಂದಿಗೆ ಒಡನಾಟವಿತ್ತು.

ಒಮ್ಮೆ ಇಬ್ಬರೂ ಬೈಕಿನಲ್ಲಿ ಹಳ್ಳಿಗಳನ್ನು ಸುತ್ತಾಡುತ್ತಿರುತ್ತಾರೆ. ಆಗ ವೆಂಕಣ್ಣ ‘ನೀವು ಸಂಕ್ರಮಣಕ್ಕೆ ಬರೆದ ಪೊರೆ ಕಳಚುವ ಪರಿ ಕಥೆ ಚೆನ್ನಾಗಿತ್ತು. ನಾನು ಆರಂಭದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದೆ. ಆಗ ಇದೇ ರೀತಿ ಅನುಭವ ನನಗೂ ಆಗಿತ್ತು’ ಎಂದವರು, ಬೈಕ್‌ ನಡೆಸುತ್ತಲೇ ಅನುಭವವನ್ನು ಹಂಚಿಕೊಳ್ಳುತಾರೆ. ‘ವಸ್ತು ಚೆನ್ನಾಗಿದೆ.

ಧ್ಯಾನಿಸಿ ಬರೆಯಿರಿ; ಕಥೆಯಾಗುತ್ತದೆ’ ಎಂದು ರಾಜಶೇಖರ ಉತ್ತೇಜಿಸುತ್ತಾರೆ. ವೆಂಕಣ್ಣ ಎರಡು ರಾತ್ರಿ ನಿದ್ರೆಗೆಟ್ಟು ಕಥೆ ಬರೆಯುತ್ತಾರೆ. ಅದನ್ನು ಓದಿದ ರಾಜಶೇಖರ ಸೂಕ್ತ ಸಲಹೆ ನೀಡುತ್ತಾರೆ. ಕಥೆ ಸಿದ್ಧವಾಗುತ್ತದೆ. ಅದು ‘ಸಂಕ್ರಮಣ’ದಲ್ಲಿ ಪ್ರಕಟವಾಗಬೇಕು ಎನ್ನುವುದು ವೆಂಕಣ್ಣನವರ ಮಹಾದಾಸೆ. ಆದರೆ, ರಾಜಶೇಖರ ತಾವೇ ಕಥೆಗೆ ‘ಮುಗಿಲೊಡಲ ಮಿಂಚು’ ಎನ್ನುವ ಶೀರ್ಷಿಕೆ ಕೊಟ್ಟು ‘ಪ್ರಜಾವಾಣಿ ಕಥಾಸ್ಪರ್ಧೆ’ಗೆ ಕಳುಹಿಸಲು ತಿಳಿಸುತ್ತಾರೆ.

ಆ ಕಥೆಗೆ ಮೊದಲ ಬಹುಮಾನ ಬರುತ್ತದೆ. ವೆಂಕಣ್ಣ ಬರೆದ ಮೊದಲ ಮತ್ತು ಕೊನೆ ಕಥೆ ಅದು! ಸಿಂಧನೂರಿನ ಕಲಿಗಣನಾಥ ಗುಡದೂರು ಅವರದು ಮತ್ತೊಂದು ಕಥೆ.ಇವರು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂ.ಎ. ಕಲಿಯುತ್ತಿರುತ್ತಾರೆ. ಆ ವರ್ಷ ಬಿಟ್ಟರೆ ಇವರು ವಿದ್ಯಾರ್ಥಿ ವಿಭಾಗದ ಕಥಾಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಸಹಜವಾಗಿಯೇ ಒತ್ತಡ ಹೆಚ್ಚಾಗುತ್ತದೆ. ಅದೇ ಒತ್ತಡದಲ್ಲಿ ಕಥೆಯೊಂದನ್ನು ಅರ್ಧ ಬರೆದು ಚಿತ್ರಶೇಖರ ಕಂಠಿ ಅವರಿಗೆ ತೋರಿಸಲು ಹೋಗುತ್ತಾರೆ.

ಕಥೆ ಓದಿದ ಅವರು ‘ಚೆನ್ನಾಗಿದೆ. ಈಗಲೇ ಪೂರ್ಣ ಮಾಡು. ಕಥೆ ಕಳುಹಿಸಲು ಇನ್ನೆರಡೇ ದಿನಗಳು ಬಾಕಿ ಇವೆ’ ಎಂದವರು, ತಮ್ಮ ಮನೆಯ ಮಾಳಿಗೆಗೆ ತಾವೇ ತಾತ್ಕಾಲಿಕವಾಗಿ ಲೈಟಿನ ವ್ಯವಸ್ಥೆ ಮಾಡಿಕೊಡುತ್ತಾರೆ.

‘ನೀನು ಕಥೆ ಪೂರ್ಣಗೊಳಿಸಿಯೇ ಹೊರಡಬೇಕು’ ಎಂದು ಪ್ರೀತಿಯಿಂದಲೇ ತಾಕೀತು ಮಾಡುತ್ತಾರೆ. ಮಧ್ಯರಾತ್ರಿ ಚಹಾ ತಂದು ಕೊಡುತ್ತಾರೆ. ನಸುಕಿನ ವೇಳೆಗೆ ಕಥೆ ಸಿದ್ಧವಾಗುತ್ತದೆ. ಆ ಗಳಿಗೆಯಲ್ಲೇ ಕಥೆಯನ್ನು ಓದುವ ಕಂಠಿ ಅವರು ‘ಅದ್ಭುತ’ ಎಂದು ಬೆನ್ನು ತಟ್ಟುತ್ತಾರೆ. ಇವರ ‘ಉಡಿಯಲ್ಲಿನ ಉರಿ’ ಕಥೆಯನ್ನು ಸಾರ್ವತ್ರಿಕ ವಿಭಾಗದಲ್ಲಿ ಪರಿಗಣಿಸಿ ಪ್ರಥಮ ಬಹುಮಾನ ಕೊಡಲಾಗಿರುತ್ತದೆ!

ವಿದ್ಯಾರ್ಥಿ ವಿಭಾಗಕ್ಕೆ ಬರುವ ಕಥೆಗಳು ಚೆನ್ನಾಗಿದ್ದರೆ ಅವುಗಳನ್ನು ಸಾರ್ವತ್ರಿಕ ವಿಭಾಗಕ್ಕೆ ಪರಿಗಣಿಸಲಾಗುತ್ತದೆ. ಮೊದಲ ಬಾರಿಗೆ ಬೆಸಗರಹಳ್ಳಿ ರಾಮಣ್ಣ ಅವರ ‘ಸುಗ್ಗಿ’ ಕಥೆ ಹೀಗೆಯೇ ಬಹುಮಾನ ಪಡೆದಿತ್ತು.

‘ಬಹುಮಾನದಿಂದ ಬಂದ ನಾಲ್ಕು ಸಾವಿರ ರೂಪಾಯಿ ನನ್ನ ಪಾಲಿಗೆ ದೊಡ್ಡ ಮೊತ್ತ. ಆ ಹಣ ಹಾಸ್ಟೆಲ್‌ ಮೆಸ್‌ನ ಒಂದು ವರ್ಷದ ಬಿಲ್‌ ಪಾವತಿಗೆ ಸದ್ಬಳಕೆ ಆಯಿತು’ ಎಂದು ಕಲಿಗಣನಾಥ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಅಮರೇಶ ನುಗಡೋಣಿ ಅವರು ಆ ದಿನಗಳನ್ನು ಹೀಗೆ ಮೆಲುಕು ಹಾಕುತ್ತಾರೆ: ‘ಹೊತ್ತು ಮೂಡುವ ಸಮಯ’ ಕಥೆಗೆ ದ್ವಿತೀಯ ಬಹುಮಾನ ಬಂದ ಸುದ್ದಿ ತಿಳಿಯಿತು. ಕಾತರ ಹೆಚ್ಚಾಯಿತು. ಆದರೆ, ವಿಶೇಷಾಂಕವನ್ನು ಕೊಳ್ಳುವಷ್ಟು ಶಕ್ತಿ ನನ್ನಲ್ಲಿ ಇರಲಿಲ್ಲ. ಪತ್ರಿಕೆ ಮಾರುವ ಅಂಗಡಿಗೆ ಹೋಗಿ ಮೆಲ್ಲನೆ ವಿಶೇಷಾಂಕವನ್ನು ತೆರೆದು ನನ್ನ ಕಥೆ ಇರುವುದನ್ನು ಖಾತರಿ ಪಡಿಸಿಕೊಂಡು ಇಟ್ಟು ಬಂದಿದ್ದೆ.

ಎಲ್‌.ಎಸ್‌.ಶೇಷಗಿರಿರಾವ್‌ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಡಾ.ಚಂದ್ರಶೇಖರ ಕಂಬಾರರು ನನಗೆ ಅವರನ್ನು ಕಾಣುವಂತೆ ಹೇಳಿದರು. ಆದರೆ, ನಾನು ಅವರನ್ನು ಭೇಟಿ ಮಾಡದೆ ತಪ್ಪಿಸಿಕೊಂಡೆ. ಮತ್ತೆ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಬಂದರು. ಆಗ ಅವರನ್ನು ನೋಡಲು ಹೋದೆ. ‘ನೀನು ಚೆನ್ನಾಗಿ ಕಥೆ ಬರೆಯುತ್ತೀಯಾ. ಆದರೆ ಅಲ್ಪಪ್ರಾಣ, ಮಹಾಪ್ರಾಣದ್ದೇ ಸಮಸ್ಯೆ. ಜೊತೆಗೆ ನಿನ್ನ ಅಕ್ಷರವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಮುಂದಿನ ಸಲ ಟೈಪು ಮಾಡಿ ಕಳುಹಿಸು’ ಎಂದು ಹೇಳಿದರು. ನಾನು ಇಡೀ ಕಥೆಯನ್ನು ಆಡುಭಾಷೆಯಲ್ಲೇ ಬರೆದಿದ್ದೆ–ಹೀಗೆ ಹೇಳಿ ಅಮರೇಶ ನಕ್ಕರು.

ಕಲಬುರ್ಗಿಯ ಕಥೆಗಾರರೊಬ್ಬರು ಕಥೆ ಬರೆದು ಶಂಕರಯ್ಯ ಘಂಟಿ ಅವರಿಗೆ ಕೊಡುತ್ತಾರೆ. ಅವರಿಗೆ ಕಥೆ ಇಷ್ಟವಾಗುತ್ತದೆ. ಇಬ್ಬರಿಗೂ ತಮಗೆ ಗೊತ್ತಿರುವ ಸಾಹಿತಿ ಬಳಿ ಅಭಿಪ್ರಾಯ ಕೇಳಲು ಹೋಗುತ್ತಾರೆ. ಆ ಸಾಹಿತಿ ನಾಲ್ಕು ದಿನ ಬಿಟ್ಟು ಬರುವಂತೆ ಹೇಳುತ್ತಾರೆ. ಆ ದಿನ ಬರುತ್ತದೆ. ಇಬ್ಬರೂ ಮತ್ತೆ ಹೋಗುತ್ತಾರೆ. ‘ಈ ಕಥೆ ಬರೆಯಲು ನಿನಗೆ ಎಷ್ಟು ಹಣ ಖರ್ಚಾಗಿದೆ’ ಎಂದು ಸಾಹಿತಿ ಕೇಳುತ್ತಾರೆ.

‘ಇಪ್ಪತ್ತೈದರಿಂದ ಮೂವತ್ತು ರೂಪಾಯಿ ಇರಬಹುದು’ ಕಸಿವಿಸಿಯಿಂದಲೇ ಕಥೆಗಾರ ಹೇಳುತ್ತಾರೆ.‘ನಾನು ನಿನಗೆ ಅಷ್ಟು ಹಣವನ್ನು ಕೊಡುತ್ತೇನೆ. ಕಥೆಯನ್ನು ಹರಿದು ಬಿಸಾಕು. ಇದು ಅತ್ಯಂತ ಕೆಟ್ಟ ಕಥೆ. ಕಥೆ ಬರೆಯುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತೇನೆ’ ಎನ್ನುತ್ತಾರೆ ಸಾಹಿತಿ! ಆ ದಿನರಾತ್ರಿ ಕಥೆಗಾರನಿಗೆ ನಿದ್ರಾಭಂಗವಾಗುತ್ತದೆ. ಹಟಕ್ಕೆ ಬಿದ್ದವರಂತೆ ‘ಕಾಳ ಬೆಳುದಿಂಗಳ ಸಿರಿ’ ಕಥೆಯನ್ನು ‘ಪ್ರಜಾವಾಣಿ ಕಥಾಸ್ಪರ್ಧೆ’ಗೇ ಕಳುಹಿಸುತ್ತಾರೆ. ಕಥೆಗೆ ದ್ವಿತೀಯ ಬಹುಮಾನ ಬರುತ್ತದೆ! ಆ ಕಥೆಗಾರ–ರಾಜಶೇಖರ ಹತಗುಂದಿ.

‘ಗಾಢ ಅನುಭವವನ್ನು ಅಷ್ಟೇ ತೀವ್ರತೆಯಿಂದ ಭಾಷೆಯಲ್ಲಿ ಹಿಡಿದಿಟ್ಟರೆ ಕಥೆಯಾಗುತ್ತದೆ. ನಮ್ಮ ಸುಪ್ತ ಮನಸ್ಸಿನಲ್ಲೇ ಕಥೆ ರೂಪುಗೊಳ್ಳುತ್ತದೆ. ನಮ್ಮ ಕಥಾ ಪರಂಪರೆಯೇ ಕಥೆಯ ವಸ್ತು, ವಿನ್ಯಾಸ, ಶೈಲಿ, ತಂತ್ರವನ್ನು ಅಪ್ರಜ್ಞಾಪೂರ್ವಕವಾಗಿಯೇ ಕಲಿಸಿಕೊಟ್ಟಿರುತ್ತದೆ’ ಎಂದು ರಾಜಶೇಖರ ಹತಗುಂದಿ ಹೇಳುತ್ತಾರೆ.

‘ನಮ್ಮ ಭಾಗದಲ್ಲಿ ಪ್ರತಿಭಾವಂತ ಕಥೆಗಾರರು ಇದ್ದಾರೆ. ಆದರೆ ವಿಮರ್ಶಕರು ಮತ್ತು ಪ್ರೋತ್ಸಾಹಿಸುವವರ ಕೊರತೆ ದೊಡ್ಡದಾಗಿದೆ. ನಮ್ಮವರಿಗೆ ವಿಮರ್ಶಕರ ಬೆಂಬಲವೂ ಇದ್ದಿದ್ದರೆ ಬೆರಗು ಹುಟ್ಟಿಸುವಂತಹ ಇನ್ನೂ ಹತ್ತಾರು ಕಥೆಗಾರರು ಹುಟ್ಟಿಕೊಳ್ಳುತ್ತಿದ್ದರು’ ಎನ್ನುತ್ತಾರೆ ಕವಿ, ಕಥೆಗಾರ ಚಿದಾನಂದ ಸಾಲಿ.

ಕಥೆ ಅಷ್ಟೇ ಅಲ್ಲ, ಕಥೆ ಹಿಂದಿನ ಸಂಗತಿಗಳೂ ಸ್ವಾರಸ್ಯಕವಾಗಿರುತ್ತವೆ. ಕಥೆಯ ಹಿಂದೆ ಕಥೆಗಾರನ ಪ್ರತಿಭೆಯ ಜೊತೆಗೆ ಹಲವರ ಪ್ರೋತ್ಸಾಹ, ಮಾರ್ಗದರ್ಶನವೂ ಇರುತ್ತದೆ.

ರಾಜಶೇಖರ ಹತಗುಂದಿ ಅವರ ಉತ್ತೇಜನದಿಂದ ಬಿ.ಆರ್‌.ವೆಂಕಣ್ಣ, ಚಿತ್ರಶೇಖರ ಕಂಠಿ ಅವರ ಸದಾಶಯದಿಂದ ಕಲಿಗಣನಾಥ ಗುಡದೂರು, ಶಾಂತರಸರ ಅಕ್ಕರೆಯಿಂದ ಅಮರೇಶ ನುಗಡೋಣಿ ಕಥಾಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ ಇನ್ನೂ ಹತ್ತಾರು ಕಥೆಗಾರರು ಇದ್ದಾರೆ. ನನಗೆ ಕಥೆಯಷ್ಟೇ, ಅದರ ಹಿಂದಿನ ಕಥೆಗಳೂ ಇಷ್ಟವಾಗುತ್ತವೆ. ಏಕೆಂದರೆ ಅವುಗಳಿಂದಲೂ ಕಲಿಯುವುದು ಬಹಳ ಇರುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017