ಪೂರ್ಣಚಂದ್ರನ ಸುತ್ತ ಅರ್ಧಸತ್ಯಗಳು

ಸೂಪರ್ ಮೂನ್‌ಗೂ ಅದರೊಂದಿಗೆ ತಳಕು ಹಾಕಿಕೊಂಡಿರುವ ಘಟನೆಗಳಿಗೂ ಒಂದಕ್ಕೊಂದು ತಾಳಮೇಳ ಇಲ್ಲ. ಸೂಪರ್‌ ಮೂನ್‌ ಬರುವ ಮೊದಲೇ ಅವೆಲ್ಲ ಸಂಭವಿಸಿವೆ.ವಿಜ್ಞಾನಿಗಳ ಪರಿಭಾಷೆಯಲ್ಲಿ ‘ಸೂಪರ್ ಮೂನ್’ ಎಂಬ ಪರಿಕಲ್ಪನೆಯೇ ಇಲ್ಲ. ಆದರೂ ಯಾರೋ ಹೇಳಿದ್ದಕ್ಕೆ ನಾವು ಇನ್ನಷ್ಟು ಉತ್ಪ್ರೇಕ್ಷೆಯ ದನಿಗೂಡಿಸುತ್ತ ಹೋಗುತ್ತೇವೆ.

ಪೂರ್ಣಚಂದ್ರನ ಸುತ್ತ ಅರ್ಧಸತ್ಯಗಳು

ಮೊನ್ನೆ ಭಾನುವಾರದ ಸರಿರಾತ್ರಿಯ ಮಾತು. ಚಂದ್ರ ಮೆಲ್ಲಗೆ ತನ್ನ ಪಾಡಿಗೆ ನ್ಯೂಝಿಲೆಂಡ್‌ನ ಪೂರ್ವದ ಆಕಾಶದಲ್ಲಿ ಸಾಗುತ್ತಿದ್ದ. ಈ ಬಾರಿ ಆತ ಪೂರ್ಣಚಂದ್ರ ಅಷ್ಟೇ ಅಲ್ಲ, ಬಹುದೊಡ್ಡ ಗಾತ್ರದ ಸೂಪರ್ ಮೂನ್ ಆಗಿ ವಿಜೃಂಭಿಸಲಿದ್ದಾನೆ ಎಂಬ ಸುದ್ದಿ ಹರಡಿತ್ತು. ಇತರೆಲ್ಲ ಹುಣ್ಣಿಮೆಗಳಿಗಿಂತ ಈ ಬಾರಿ ಸಮುದ್ರ ಜಾಸ್ತಿ ಉಕ್ಕೇರಲಿದೆ, ಅಲ್ಲಲ್ಲಿ ಭೂಕಂಪನ ಆಗಲಿದೆ; ಸುನಾಮಿ ಬಂದೀತು ಎಂಬ ಎಚ್ಚರಿಕೆ ಬಂದಿತ್ತು.

ಹಾಗೇ ಆಯಿತು. ನ್ಯೂಝಿಲೆಂಡ್ ದೇಶದ ಕಡಲಂಚಿನ ಕೈಕೌರು ಎಂಬ ಊರಲ್ಲಿ ಮರುದಿನ ಭೂಕಂಪನ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 7.5ರಷ್ಟು ಭಾರೀ ಭೂಕಂಪನ.ಮನೆಗಳು ಕುಸಿದವು. ಹೆದ್ದಾರಿಗಳು ತಿರುಚಿ ಸೀಳು ಬಿಟ್ಟು ಹೋಳಾದವು. ಕಡಲಂಚಿನ ಗುಡ್ಡಗಳು ಕುಸಿದವು. ಸಮುದ್ರದ ತಳವೇ ಒಂದು ಮೀಟರಿನಷ್ಟು ಮೇಲೆದ್ದಿದ್ದರಿಂದ ಹೀಗೆಲ್ಲ ಆಯಿತು ಎಂದು ವಿಜ್ಞಾನಿಗಳು ಹೇಳಿದರು.

ಎರಡೂವರೆ ಮೀಟರ್ ಎತ್ತರದ ಸುನಾಮಿ ಉಕ್ಕೇರಿ ಬಂತು. ಕಡಲಂಚಿನಲ್ಲಿದ್ದ ಸೀಲ್ ಪ್ರಾಣಿಗಳ ವಿಶಿಷ್ಟ ಅಭಯತಾಣ ‘ಹೊಸಕಿಹೋಯಿತು’ ಎಂದು ‘ಗಾರ್ಡಿಯನ್’ ಪತ್ರಿಕೆ ವರದಿ ಮಾಡಿತು. ಸೂಪರ್ ಚಂದ್ರನ ಆಗಮನದ ತುಸು ಮುಂಚಿನ ಪರಿಣಾಮಗಳನ್ನು ನೋಡಿ. ಚಿಲಿ ದೇಶದ ಕುರಿಕೊ ಎಂಬಲ್ಲಿ 6.4 ಪ್ರಮಾಣದ ಭೂಕಂಪನ ಸಂಭವಿಸಿತು.

ನವಂಬರ್ 7ರಂದು ಅಮೆರಿಕದ ಓಕ್ಲಹಾಮಾದ ಬಳಿಯ ಕುಶಿಂಗ್ ಎಂಬಲ್ಲಿ 5.0ರ ಭೂಕಂಪನ. ನವೆಂಬರ್ 11ರಂದು ಜಪಾನಿನ ಮಿಯಾಗಿ ಪ್ರಾಂತದಲ್ಲಿ 6.2ರ ಭೂಕಂಪನ. ಅದಾಗಿ ಎರಡು ದಿನಗಳ ನಂತರ ನ್ಯೂಝಿಲೆಂಡ್‌ನಲ್ಲಿ ಸರಣಿ ಅನಾಹುತ. ಚರಿತ್ರೆಯುದ್ದಕ್ಕೂ ಪೃಥ್ವಿಯ ಅನರ್ಥಗಳಿಗೂ ಸೂಪರ್ ಚಂದ್ರನಿಗೂ ಏನೆಲ್ಲ ಸಂಬಂಧಗಳು ಜೋಡಣೆಗೊಂಡಿವೆ.

1912ರ ಏಪ್ರಿಲ್ 14ರಂದು ಟೈಟಾನಿಕ್ ಹಡಗು ಮುಳುಗಿದ್ದು ಗೊತ್ತಲ್ಲ? ಅದು ನೀರಡಿಯಲ್ಲಿನ ಹಿಮದ ಬಂಡೆಗೆ ಬಡಿದು ತನ್ನ ಮೊದಲ ಪ್ರಯಾಣದಲ್ಲೇ 1500 ಜನರನ್ನು ಬಲಿ ತೆಗೆದುಕೊಂಡಿತು. ಹಿಮಬಂಡೆ ಅಲ್ಲಿ ಕುಸಿಯಲು ಕಾರಣ ಏನೆಂದರೆ ಜನವರಿ 4ರಂದು ಸೂಪರ್ ಮೂನ್ ವೈಚಿತ್ರ್ಯ ಆಕಾಶದಲ್ಲಿ ಕಂಡಿತ್ತು. ಅದೂ ಅಂತಿಂಥದ್ದಾಗಿರಲಿಲ್ಲ.

ಆ ಗಾತ್ರದ ಮಹಾಚಂದ್ರ ಹಿಂದೆ ಕ್ರಿ.ಶ. 796ರಲ್ಲಿ ಕಂಡಿತ್ತು. ಮುಂದೊಮ್ಮೆ ಅಂಥ ಗಾತ್ರದ ಚಂದ್ರನನ್ನು ನೋಡಬೇಕೆಂದರೆ 2257ರವರೆಗೆ ಕಾಯಬೇಕು. ಮಹಾಚಂದ್ರ ಸಮೀಪ ಬಂದಾಗಿನ ಇನ್ನೊಂದು ಮಹಾ ಸಂಕಷ್ಟವನ್ನು ನೋಡಿ: 2011ರ ಮಾರ್ಚ್ 11ರ ಫುಕುಶಿಮಾ ದುರಂತ ಗೊತ್ತಲ್ಲ? ಅಲ್ಲೇ ಸಮೀಪ ದೊಡ್ಡ ಭೂಕಂಪನ ಸಂಭವಿಸಿ 13 ಮೀಟರ್ ಎತ್ತರದ ಸುನಾಮಿ ಅಲೆಗಳು ಮೇಲೆದ್ದು ಬಂದು 16 ಸಾವಿರ ಜನರನ್ನು ಬಲಿ ತೆಗೆದುಕೊಂಡಿದ್ದು?

ಫುಕುಶಿಮಾ ಪರಮಾಣು ರಿಯಾಕ್ಟರಿಗೂ ನೀರು ನುಗ್ಗಿ ಸ್ಫೋಟದ ಸ್ಥಿತಿಗೆ ಬರುವಂತೆ ಮಾಡಿದ್ದು? ಆಗ ಸೂಪರ್ ಮೂನ್ ಭೂಮಿಗೆ ತೀರ ಸಮೀಪದಲ್ಲಿತ್ತು. ದುರಂತದ ಸಂಕಷ್ಟಗಳೊಂದಿಗೆ ಜಪಾನ್ ಏಗುತ್ತಿದ್ದಾಗ, ಮಾರ್ಚ್ 19ರಂದು ಬಾನಲ್ಲಿ ಸೂಪರ್ ಚಂದ್ರ ನಗುತ್ತಿದ್ದ. ಅಷ್ಟೇಕೆ, 2004ರ ಡಿಸೆಂಬರ್ 24ರಂದು ಸುಮಾತ್ರಾ ಸುನಾಮಿಗೆ ಭಾರತದ ಕರಾವಳಿಗುಂಟ 15 ಸಾವಿರಕ್ಕೂ ಹೆಚ್ಚು ಜನರು ಸಾವಪ್ಪಿದರಲ್ಲ? ಅದಾಗಿ ಎರಡೇ ವಾರದಲ್ಲಿ ಜನವರಿ 10ರಂದು ಆಕಾಶದಲ್ಲಿ ಸೂಪರ್ ಚಂದ್ರ ಮೂಡಿಬಂದಿದ್ದ.

ಹುಣ್ಣಿಮೆಯ ಚಂದ್ರ ಆಗೊಮ್ಮೆ ಈಗೊಮ್ಮೆ ಅಷ್ಟೆಲ್ಲ ಸಮೀಪ ಬರಲು ಕಾರಣ ಇಷ್ಟೆ: ಭೂಮಿಯ ಸುತ್ತ ಚಂದ್ರ ಪ್ರದಕ್ಷಿಣೆ ಹಾಕುವ ಕಕ್ಷೆ ಅಂಡಾಕಾರ ಇದೆ. ಭೂಮಿಯಿಂದ ನೋಡುವವರಿಗೆ ಅದು ತಿಂಗಳಲ್ಲಿ ಕೆಲವಷ್ಟು ದಿನ ದೂರ ಇದ್ದಂತೆ ಕಾಣುತ್ತದೆ; ಮತ್ತೆ ಕ್ರಮೇಣ ಸಮೀಪ ಬರುತ್ತಿದ್ದಂತೆ ಕಾಣುತ್ತದೆ. ಈ ಕಕ್ಷೆಯೂ ಆಗಾಗ ಆಚೀಚೆ ಪಲ್ಲಟ ಆಗುತ್ತಿರುವುದರಿಂದ ಭೂಮಿ ಮತ್ತು ಚಂದ್ರನ ನಡುವಿನ ಅಂತರ ಸದಾ ಹೆಚ್ಚು ಕಮ್ಮಿ ಆಗುತ್ತಿರುತ್ತದೆ.

ಭೂಮಿಯಿಂದ ಚಂದ್ರನ ದೂರ ಅತಿ ಹೆಚ್ಚೆಂದರೆ 406.7 ಸಾವಿರ ಕಿಲೊಮೀಟರ್; ಅತಿ ಕಮ್ಮಿ ಎಂದರೆ 356.4 ಕಿ.ಮೀ ಸಮೀಪ ಇದೆ. ಸಮೀಪ ಬಂದಾಗ ಮೊನ್ನೆ ಅದು ನಮಗೆ ಮಾಮೂಲಿಗಿಂತ ಶೇಕಡ 14ರಷ್ಟು ದೊಡ್ಡದಾಗಿ ಕಂಡಿತ್ತು. ಮಾಧ್ಯಮಗಳು ಅದನ್ನೇ ‘ಭಾರೀ’ ದೊಡ್ಡದು ಎಂಬಂತೆ ಬಿಂಬಿಸುತ್ತವೆ (ಕನ್ನಡದ ಒಂದು ಪತ್ರಿಕೆಯಂತೂ 14 ‘ಪಟ್ಟು ದೊಡ್ಡದು’ ಎಂತಲೇ ಪ್ರಕಟಿಸಿತ್ತು).

ಸೂಪರ್ ಮೂನ್ ಎಂದು ಸಂಭ್ರಮಿಸಿ ಕುತೂಹಲದಿಂದ ನೋಡುವವರಿಗೆ ನಿರಾಸೆಯೇ ಆಗುತ್ತದೆ. ಶೇಕಡ 14 ಹಾಗಿರಲಿ, ಶೇಕಡ 100ರಷ್ಟು ಹೆಚ್ಚಾದರೂ ನಿರಾಸೆ ಆಗುತ್ತದೆ. ಅದಕ್ಕೊಂದು ಜ್ಯಾಮಿತಿಯ ಕಾರಣವೂ ಇದೆ. ಮನೆಯಲ್ಲಿ ತಯಾರಾಗುವ ಮಾಮೂಲು ಪುರಿ 10 ಸೆಂಟಿಮೀಟರ್ ವ್ಯಾಸ ಎಂದುಕೊಳ್ಳಿ.

ಪುರಿಯ ವಿಸ್ತೀರ್ಣವನ್ನು ಡಬಲ್ ಮಾಡಿದರೆ ಅದರ ಅಗಲ 10 ಇದ್ದುದು 20  ಆಗುವುದಿಲ್ಲ, ಬದಲಿಗೆ 14 ಸೆಂಟಿಮೀಟರ್ ಮಾತ್ರ ಆಗಿರುತ್ತದೆ. ಇನ್ನು ಅದರ ವಿಸ್ತೀರ್ಣ ಡಬಲ್ ಅಲ್ಲ, ಕೇವಲ ಶೇಕಡ 14 ಹೆಚ್ಚಾಯ್ತು ಎಂದರೆ ವ್ಯತ್ಯಾಸ ಗೊತ್ತೂ ಆಗುವುದಿಲ್ಲ. ‘ಅಕ್ಟೋಬರ್‌ನ ಹುಣ್ಣಿಮೆಯ ಚಂದ್ರನಿಗೆ ಹೋಲಿಸಿದರೆ ಮೊನ್ನಿನ ಮಹಾಚಂದ್ರನ ಗಾತ್ರ ಎಷ್ಟು ಜಾಸ್ತಿ ಅಂತೀರಿ?

ಅಸಲೀ 16 ಇಂಚಿನ ಪೀಜ್ಜಾ ಅನ್ನೋದು 16.05  ಇಂಚಿನ ಪೀಜ್ಜಾ ಆದಂತೆ ಅಷ್ಟೇ!’ ಎಂದು ಅಮೆರಿಕದ ಜನಪ್ರಿಯ ಭೌತವಿಜ್ಞಾನಿ ನೀಲ್ ಡಿ’ಗ್ರಾಸ್ ಟೈಸನ್ ನಿನ್ನೆ ಟ್ವೀಟ್ ಮಾಡಿದ್ದಾರೆ. ಭೂಮಿಗೆ ರೌಂಡ್ ಹೊಡೆಯುವಾಗ ಚಂದ್ರ ಪ್ರತಿ ತಿಂಗಳೂ ಒಂದು ಬಾರಿ ನಮಗೆ ತೀರ ಸಮೀಪಕ್ಕೆ ಬಂದೇ ಬರುತ್ತಾನೆ. ಆಗ ಹುಣ್ಣಿಮೆ ಆಗಿರಲೇಬೇಕೆಂದಿಲ್ಲ.

ಬಿದಿಗೆ ಆಗಿರಬಹುದು, ಅಥವಾ ಚೌತಿ ಅಥವಾ ಏಕಾದಶಿ ಯಾವುದೂ ಆಗಿರಬಹುದು. ಆಗೆಲ್ಲ ನಾವು ‘ಸೂಪರ್ ಬಿದಿಗೆ ಚಂದ್ರ’ ಅಥವಾ ‘ಸೂಪರ್ ಏಕಾದಶಿ’ ಎಂದು ಕುಣಿಯುವುದಿಲ್ಲ ಏಕೆ ಎಂದು ಟೈಸನ್ ಕೇಳುತ್ತಾರೆ. ಅಪರೂಪಕ್ಕೊಮ್ಮೆ ಹೀಗೆ ಚಂದ್ರ ಹತ್ತಿರ ಬಂದಾಗಲೇ ಹುಣ್ಣಿಮೆಯೂ ಆಗಿರುತ್ತದೆ. ಅದೂ ವರ್ಷದಲ್ಲಿ ನಾಲ್ಕಾರು ಬಾರಿ ಹೀಗೆ, ಮಾಮೂಲಿಗಿಂತ ತುಸು ಜಾಸ್ತಿ ಹಿಗ್ಗಿರುತ್ತದೆ. 

ನಮಗೆ ಬಿದಿಗೆ, ಚೌತಿ ಮುಂತಾದ ಚಂದ್ರನಿಗಿಂತ ಪೂರ್ಣಚಂದ್ರ ಬಿಂಬವೇ ಅತ್ಯಂತ ಮೋಹಕವಾಗಿರುತ್ತದೆ- ಅದರ ಬಗ್ಗೆ ಮಾತಿಲ್ಲ. ಪ್ರೇಮಿಗಳಿಗೆ, ಕವಿಗಳಿಗೆ ಅಷ್ಟೇಕೆ, ತಲೆ ಸರಿ ಇಲ್ಲದವರಿಗೂ ಆ ರಾತ್ರಿ ತುಸು ಹೆಚ್ಚಿನ ಪ್ರಮಾಣದಲ್ಲಿ ಉದ್ರೇಕ ಉಂಟಾಗುತ್ತದಂತೆ. ಸಹಜವೇ ಇದ್ದೀತು, ಏಕೆಂದರೆ ಗಿಡಮರಗಳೆಲ್ಲ ಹಗಲಿನ ಹಸುರನ್ನು ಕಳೆದುಕೊಂಡು ಕೇವಲ ಕಪ್ಪು ಬಿಳುಪಿನಲ್ಲಿ ಕಾಣುತ್ತವೆ (ಕೆಂಪು, ಹಳದಿ ಹೂಗಳಿಗೂ ಚಂದ್ರನ ಬೆಳಕಿನಲ್ಲಿ ಬಣ್ಣವಿರುವುದಿಲ್ಲ, ಬೇಕಿದ್ದರೆ ಪರೀಕ್ಷಿಸಿ ನೋಡಿ).

ಇಂಥ ನಾಟಕೀಯ ಸನ್ನಿವೇಶದಿಂದಾಗಿಯೇ ಏನೆಲ್ಲ ಸಂಭವಿಸಬಹುದು. ಆತ್ಮಹತ್ಯೆ, ಅಪರಾಧ, ಅಪಘಾತಗಳು ಹೆಚ್ಚುತ್ತವಂತೆ. ಹೆಚ್ಚಿನ ಮಹಿಳೆಯರಲ್ಲಿ ಋತುಸ್ರಾವವೂ ಹುಣ್ಣಿಮೆಯ ಆಚೀಚೆ ಆಗುತ್ತದೆ ಎಂತಲೂ ಪ್ರತೀತಿ ಇದೆ. ಇದಕ್ಕೆಲ್ಲ ಕಾರಣ? ಭೂಮಿಯ ಒಂದು ಕಡೆ ಚಂದ್ರ, ಇನ್ನೊಂದು ಕಡೆ ಸೂರ್ಯ ಒಂದೇ ರೇಖೆಯಲ್ಲಿದ್ದಾಗ- ಅಂದರೆ ಹುಣ್ಣಿಮೆಯಂದು ಇವೆರಡೂ ಸೇರಿ ಭೂಮಿಯನ್ನು ತುಸು ಜಗ್ಗುತ್ತವೆ.

ಚಂದ್ರ ಕೊಂಚ ಜಾಸ್ತಿಯೇ ಜಗ್ಗುತ್ತಾನೆ. ಇದರಿಂದಾಗಿ ಸಮುದ್ರದಲ್ಲಿ ತುಸು ಜಾಸ್ತಿ ಉಬ್ಬರ ಕಾಣಿಸಿಕೊಳ್ಳುತ್ತದೆ. ನಮ್ಮ ದೇಹದಲ್ಲೂ ಶೇಕಡ 65ರಷ್ಟು ನೀರೇ ತುಂಬಿರುವುದರಿಂದ, ಮಿದುಳಲ್ಲಂತೂ ಶೇಕಡ 75ರಷ್ಟು ನೀರು ತುಂಬಿರುವುದರಿಂದ ಬುದ್ಧಿ ವಿಚಲಿತ ಆಗುತ್ತದೆ ಎಂದು ಕೆಲವರು ತರ್ಕಿಸುತ್ತಾರೆ (ನೀರಿನ ಬದಲು ಮಣ್ಣು ತುಂಬಿದ್ದರೆ ಅವರ ಬುದ್ಧಿ ನೇರ ಇರುತ್ತದೆಯೇ ಎಂದು ಕೇಳಬೇಡಿ).

ಸಾಮಾನ್ಯ ಹುಣ್ಣಿಮೆಯಂದು ಇಷ್ಟೆಲ್ಲ ಏರುಪೇರು ಆಗುತ್ತದಾದರೆ ಸೂಪರ್ ಪೂರ್ಣಿಮೆಯಂದು ಚಂದ್ರ ಶೇಕಡ 14ರಷ್ಟು ಸಮೀಪ ಬಂದಾಗ ಹುಚ್ಚು ಅಷ್ಟರಮಟ್ಟಿಗೆ ಹೆಚ್ಚಾಗಬೇಕಾದುದು ಸಹಜವೇ. ಅದು ಶೇಕ್ಸ್‌ಪಿಯರ್ ಗಮನಕ್ಕೂ ಬಂದಿತ್ತು. ಆತನ ಒಥೆಲ್ಲೊ ನಾಟಕದಲ್ಲಿ ‘ಅದಕ್ಕೆಲ್ಲ ಚಂದ್ರಮ್ಮನೇ ಕಾರಣ; ಆಕೆ ಮಾಮೂಲಿಗಿಂತ ಅಂದು ತುಸು ಸಮೀಪ ಬರುತ್ತಾಳೆ, ಗಂಡಸರಿಗೆ ಹುಚ್ಚು ಹಿಡಿಸುತ್ತಾಳೆ’ ಎಂಬ ಮಾತು ಇದೆ.

ಅದು ಕವಿಸಮಯ ಎನ್ನೋಣ. ವಿಜ್ಞಾನಿಗಳು ಬೇರೆಯದನ್ನೇ ಹೇಳುತ್ತಾರೆ. ಸಮುದ್ರದ ತೆರೆದ ತಟಾಕದಲ್ಲಿ ನೀರನ್ನು ಜಗ್ಗಿದ ಹಾಗೆ ಕೊಡದ ನೀರನ್ನು ಅಥವಾ ತಲೆಬುರುಡೆಯೊಳಗಿನ ನೀರನ್ನು ಚಂದ್ರ ಜಗ್ಗಲಾರ. ಹುಣ್ಣಿಮೆಯಂದು ಹುಚ್ಚು ಮತ್ತು ಆತ್ಮಹತ್ಯೆ ಹೆಚ್ಚುತ್ತದೆ ಎನ್ನಲು ಕೂಡ ಕಾರಣಗಳಿಲ್ಲ. ಅಪಮೃತ್ಯು ಮತ್ತು ಹುಣ್ಣಿಮೆಯ ಸಂಬಂಧ ಕುರಿತ 37 ಸಂಶೋಧನ ಪ್ರಬಂಧಗಳ ವಿಶ್ಲೇಷಣೆ ಮಾಡಿ 1985ರಲ್ಲಿ ‘ಸೈಕಾಲಜಿ ಬುಲ್ಲೆಟಿನ್’ ಎಂಬ ಪತ್ರಿಕೆಯಲ್ಲಿ ಒಂದು ಪ್ರಬಂಧ ಪ್ರಕಟವಾಯಿತು.

ಅವೆಲ್ಲವೂ ಅಸಂಬದ್ಧ, ಊಹಾತ್ಮಕ ಅಧ್ಯಯನಗಳೆಂದೂ ಇನ್ನು ಮುಂದೆ ಇವೆರಡರ ತಾಳೆ ನೋಡುವ ಲೆಕ್ಕಾಚಾರಗಳನ್ನೇ ಕೈಬಿಡಬೇಕೆಂದೂ ರೊಟ್ಟನ್ ಮತ್ತು ಕೆಲ್ಲಿ ಎಂಬಿಬ್ಬರು ವಿಜ್ಞಾನಿಗಳು ಘೋಷಿಸಿದರು. ತುಂಬಾ ಹಿಂದೆ, ಮನೆಗಳೇ ಇಲ್ಲದಿದ್ದಾಗ, ಹುಣ್ಣಿಮೆ ಬೆಳಕು ಜಾಸ್ತಿ ಇದ್ದಾಗ ಬೇಟೆ ಚಪಲ ಹೆಚ್ಚುತ್ತಿತ್ತು. ರಾತ್ರಿಯೆಲ್ಲ ಎಚ್ಚರಿರಬೇಕಾಗುತ್ತಿತ್ತು. ಕೆಲವರಿಗೆ ನಿದ್ರಾಹೀನತೆಯಿಂದ ನಿತ್ಯ ವರ್ತನೆಯಲ್ಲಿ ವ್ಯತ್ಯಾಸ ಆಗುತ್ತಿತ್ತು. ಅದೇ ಕ್ರಮೇಣ ಕತೆಗಳಲ್ಲಿ, ಸಿನೆಮಾಗಳಲ್ಲಿ, ನಂತರವಂತೂ ನೀಲಿಚಂದ್ರ, ಚಿನ್ನದ ಚಂದ್ರ ಎಂದೆಲ್ಲ ಟಿಆರ್‌ಪಿ ಹೆಚ್ಚಿಸಲು ಹೊರಟ ವಿಡಿಯೊ ವರದಿಗಳಲ್ಲಿ ಉತ್ಪ್ರೇಕ್ಷೆ ಹೆಚ್ಚುತ್ತ ಹೋಗಿದೆ.

ಹಾಗಿದ್ದರೆ ವಾಹನ ಅಪಘಾತ? ಅವು ಜಾಸ್ತಿ ಆಗುತ್ತವೆ ಎಂದು ಅಂಕಿಸಂಖ್ಯೆಗಳ ಮೂಲಕ ಸಾಧಿಸಲು ಹೊರಟವರೂ ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗಿದೆ. 1982ರ ಒಂದು ಅಧ್ಯಯನಕ್ಕೆಂದು ಸಂಗ್ರಹಿಸಿದ ಅಂಕಿಸಂಖ್ಯೆಗಳ ಪ್ರಕಾರ ಕೆಲವು ಹುಣ್ಣಿಮೆಗಳಲ್ಲಿ ಜಾಸ್ತಿ ಅಪಘಾತ ಸಂಭವಿಸಿದ್ದು ನಿಜವೇ ಆದರೂ ಅವೆಲ್ಲವೂ ವಾರಾಂತ್ಯದ ಹುಣ್ಣಿಮೆಗಳೇ ಆಗಿದ್ದವು. ರಜೆ ಬಂತೆಂದು ಮೋಜು ಮಾಡಲು/ ಮಾಡುತ್ತ ಧಾವಿಸಿದಾಗ ಅಪಘಾತ ಆಗುವ ಸಂಭವ ಸಹಜವಾಗಿ ಜಾಸ್ತಿ ಆಗಿರುತ್ತದೆ.

ಮತ್ತೆ ಈ ಅಂಕಣದ ಆರಂಭದಲ್ಲಿ ನ್ಯೂಝಿಲೆಂಡ್, ಟೈಟಾನಿಕ್, ಫುಕುಶಿಮಾ ಕೊಟ್ಟ ಉದಾಹರಣೆಗಳು? ಅವೆಲ್ಲವೂ ಅರ್ಧಸತ್ಯದ ಕತೆಗಳೇ. ಪ್ರತಿವರ್ಷವೂ ಲಕ್ಷಾಂತರ ಭೂಕಂಪನಗಳು ಅಲ್ಲಿ ಇಲ್ಲಿ ಸಂಭವಿಸುತ್ತಲೇ ಇರುತ್ತವೆ. ಪ್ರತಿ ದೊಡ್ಡ ಭೂಕಂಪನಕ್ಕೂ ಮೊದಲು ಚಿಕ್ಕ ಚಿಕ್ಕ ಒತ್ತಡಗಳು, ಕಂಪನಗಳು ಆಗುತ್ತಿರುತ್ತವೆ.

ಹಾಗೆ ಅಲ್ಲೆಲ್ಲ ತಿಂಗಳುಗಟ್ಟಲೆ ಶಿಲಾಪದರಗಳನ್ನು ಪದೇ ಪದೇ ಒತ್ತುತ್ತ ಕೂರಲು ಚಂದ್ರನಿಗೆ ಬೇರೆ ಕೆಲಸ ಇಲ್ಲವೆ? ದಿನಕ್ಕೆ 88 ಸಾವಿರ ಕಿ.ಮೀ ಓಡುತ್ತಲೇ ಇರಬೇಕಾದ ಡ್ಯೂಟಿ ಅವನಿಗಿದೆ. ಅದೂ ಅಲ್ಲದೆ ಆ ಘಟನೆಗಳನ್ನೆಲ್ಲ ಮತ್ತೊಮ್ಮೆ ನೋಡಿ. ಸೂಪರ್ ಮೂನ್ ಬರುವ ಮೊದಲೇ ಸಂಭವಿಸಿವೆ. ಒಂದಕ್ಕೂ ತಾಳಮೇಳ ಇಲ್ಲ. ವಿಜ್ಞಾನಿಗಳ ಪರಿಭಾಷೆಯಲ್ಲಿ ‘ಸೂಪರ್ ಮೂನ್’ ಎಂಬ ಪರಿಕಲ್ಪನೆಯೇ ಇಲ್ಲ. ಆದರೂ ಯಾರೋ ಹೇಳಿದ್ದಕ್ಕೆ ನಾವು ಇನ್ನಷ್ಟು ಉತ್ಪ್ರೇಕ್ಷೆಯ ದನಿಗೂಡಿಸುತ್ತ ಹೋಗುತ್ತೇವೆ.     

ಚಂದ್ರ ತುಸು ದೊಡ್ಡದಾಗಿ ಕಂಡಾಗ ಆನಂದಿಸೋಣ. ಸುಂದರ ತಾಣ ಹುಡುಕಿ ಚಂದದ ಚಿತ್ರ ತೆಗೆಯೋಣ. ಆದರೆ ಈ ಚಾನೆಲ್‌ಗಳು ಅದಕ್ಕೆ ಬಣ್ಣಹಚ್ಚಿ, ಉತ್ಪ್ರೇಕ್ಷಿಸಿ, ದಿಗಿಲೆಬ್ಬಿಸಿ ಹೊರಕ್ಕೆ ಹೋಗಲೂ ಬಿಡದೆ ನಮ್ಮನ್ನು ಟಿವಿಯೆದುರೇ ಕೂರಿಸುತ್ತವೆ. ಅಂಗೈ ಹುಣ್ಣಿಮೆಗೆ ಭೂತಗನ್ನಡಿ ಹಿಡಿಯುತ್ತವೆ. ಅದಕ್ಕೇನನ್ನೋಣ?

Comments
ಈ ವಿಭಾಗದಿಂದ ಇನ್ನಷ್ಟು
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

ವಿಜ್ಞಾನ ವಿಶೇಷ
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

8 Mar, 2018
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

ವಿಜ್ಞಾನ ವಿಶೇಷ
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

22 Feb, 2018
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

ವಿಜ್ಞಾನ ವಿಶೇಷ
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

8 Feb, 2018
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ವಿಜ್ಞಾನ ವಿಶೇಷ
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

25 Jan, 2018
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

ವಿಜ್ಞಾನ ವಿಶೇಷ
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

11 Jan, 2018