ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನ ನಡುವೆ ಗ್ಯಾಮ್ಯ ವಾತಾವರಣ ನೀಡುವ ‘ಮಲ್ಹಾರ’

Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ
ವಾಯು ಮಾಲಿನ್ಯ, ಸಂಚಾರ ದಟ್ಟಣೆ ಸಮಸ್ಯೆಗಳಿಂದಾಗಿ ‘ಉದ್ಯಾನನಗರಿ’ ಬೆಂಗಳೂರು, ಅಪಾಯದತ್ತ ವಾಲುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. 
 
ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸ್ವಚ್ಛಂದ ಪರಿಸರಕ್ಕಾಗಿ ಹಲವರು, ನೈಸರ್ಗಿಕ ಪರಿಸರದ ವಾತಾವರಣವನ್ನು ಹುಡುಕುತ್ತಿದ್ದಾರೆ. ಅಂಥ ವಾತಾವರಣವಿರುವ ‘ಆಧುನಿಕ ಗ್ರಾಮ’ವೊಂದು ಬೆಂಗಳೂರಿನಂಥ ‘ಕಾಂಕ್ರಿಟ್ ಕಾಡಿ’ನಲ್ಲೇ ಇದೆ. ಮೈಸೂರು ರಸ್ತೆಯ ಕೆಂಗೇರಿ ಪ್ರದೇಶಕ್ಕೆ ಹೊಂದಿಕೊಂಡಿರುವ ಸುಮಾರು 13 ಎಕರೆ ಜಾಗದಲ್ಲಿ ‘ಗುಡ್‍ಅರ್ತ್‌’ ಸಂಸ್ಥೆಯು ಸುಂದರ ಹಾಗೂ ಅರ್ಥಪೂರ್ಣ ‘ಮಲ್ಹಾರ್’ ಹೆಸರಿನ ಗ್ರಾಮವೊಂದನ್ನು ಸೃಷ್ಟಿಸಿದೆ. 
 
ಪರಿಸರ ಚೆನ್ನಾಗಿದ್ದರೆ, ಜೀವನವೂ ಚೆನ್ನಾಗಿರುತ್ತದೆ ಎಂಬುದನ್ನು ಮನಗಂಡಿರುವ  ಗುಡ್‍ಅರ್ಥ್ ಸಂಸ್ಥೆಯು ಪರಿಣತ ವಾಸ್ತುಶಿಲ್ಪಿಗಳು ‘ಮಲ್ಹಾರ್’ ಹೆಸರಿನ ಪ್ರದೇಶವನ್ನು ನಿರ್ಮಿಸಿದ್ದಾರೆ. ಮನಸ್ಸಿಗೆ ಆಹ್ಲಾದಕರವಾದ ವಾತಾವರಣದಲ್ಲಿ ಗ್ರಾಮೀಣ ಸೊಗಡಿನ ಮನೆಗಳನ್ನು ಈ ಗ್ರಾಮದಲ್ಲಿ  ನಿರ್ಮಿಸಿದೆ.
 
ಪರಿಸರಸ್ನೇಹಿ ಗ್ರಾಮ
ವಾಸಯೋಗ್ಯವಾದ ಪರಿಸರ ನಿರ್ಮಿಸಿ, ಅದರ ನಡುವೆಯೇ ಮನೆಗಳನ್ನು ನಿರ್ಮಿಸಲಾಗಿದೆ.  ಒಂದಕ್ಕೊಂದು ಮನೆಗಳು ಭಿನ್ನವಾಗಿವೆ. ಇಡೀ ಗ್ರಾಮವೇ ಸಂಪೂರ್ಣ ಹಸಿರಾಗಿದ್ದು, ಅಲ್ಲಿ ಹವಾನಿಯಂತ್ರಿತ ಯಂತ್ರದ ಅವಶ್ಯಕತೆಯೇ ಇಲ್ಲ. ದಿನವಿಡೀ ಮನೆಯೊಳಗೆ ಬೆಳಕಿಗೆ ಕೊರತೆ ಇರುವುದಿಲ್ಲ.
 
ಈ ಗ್ರಾಮವನ್ನು ‘ಮಲ್ಹಾರ್ ಫೂಟ್‌ ಪ್ರಿಂಟ್‌’, ‘ಮಲ್ಹಾರ್ ರಿಸೋನೆನ್ಸ್’, ‘ಮಲ್ಹಾರ್ ಮೊಸಾಯಿಕ್’ ಎಂಬ ಹೆಸರಿನ ಹಂತಗಳಲ್ಲಿ ನಿರ್ಮಿಸಲಾಗಿದೆ. ಹೊಸದಾಗಿ ‘ಮಲ್ಹಾರ್ ಪ್ಯಾಟರ್ನ್ಸ್‌’ ಹಂತ ಸಿದ್ಧವಾಗುತ್ತಿವೆ.  
 
ಈ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಮರಗಳು ನಮ್ಮನ್ನು ಸ್ವಾಗತಿಸುತ್ತವೆ. ಪೂರ್ತಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಒಂದು ಸುತ್ತು ಹಾಕಿದರೆ ಹಳ್ಳಿ ನೆನಪಾಗುತ್ತದೆ.
 
ಆಕರ್ಷಕ ವಿನ್ಯಾಸದ ಸ್ವತಂತ್ರ ಮನೆಗಳು
ಗ್ರಾಮದ ಮನೆಗಳನ್ನು ಕಣ್ಣಿಗೆ ಹಾಗೂ ಮನಸ್ಸಿಗೆ ಅಂದವಾಗಿ ಕಾಣುವಂತೆ ಕಟ್ಟಲಾಗಿದೆ. ಶೇ 50ರಷ್ಟು ಕಟ್ಟಿಗೆ ಬಳಸಿ ನಿರ್ಮಾಣ ಮಾಡಲಾಗಿದ್ದು, ಅಗತ್ಯವಿರುವ ಕಡೆ ಸಿಮೆಂಟ್ ಮತ್ತು ಮರಳು ಬಳಕೆ ಮಾಡಲಾಗಿದೆ. 2,3,4 ಕೊಠಡಿಗಳ ಮನೆಗಳಿವು. 
 
ವಿನ್ಯಾಸದಲ್ಲಿ ಒಂದಕ್ಕಿಂತ ಒಂದು ಭಿನ್ನ. ಕೊಠಡಿಗೆ ಬೆಳಕು, ಗಾಳಿ ಬರುವಂತೆ ಮಾಡುವ ದೊಡ್ಡ ಗಾತ್ರದ ಕಿಟಕಿಗಳು, ಜಿ+1 ಅಂತಸ್ತಿನ ಮನೆಗಳ ನಡುವೆಯೇ ಛಾವಣಿ ಹತ್ತಲು ನಯವಾದ ಮೆಟ್ಟಿಲು. ಜತೆಗೆ ನೈಸರ್ಗಿಕ ಬಣ್ಣವೇ ಈ ಮನೆಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮನೆಯ ಅಂದಕ್ಕೆ ಒಪ್ಪುವ ಪೀಠೋಪಕರಣಗಳು. ಮನೆಗಳಿಗೆ ವರಾಂಡ, ಹಿತ್ತಲು ಇದೆ.  ಎಲ್ಲವೂ ಸ್ವತಂತ್ರ ಮನೆಗಳು ಎನ್ನುವುದು ವಿಶೇಷ. ಅದರಿಂದಾಗಿ ಒಂದೇ ಗೋಡೆ ಎರಡು ಮನೆ ಎಂಬ ಅಪಾರ್ಟ್‌ಮೆಂಟ್‌ ಕಲ್ಪನೆಗೆ ಇಲ್ಲಿ ಜಾಗವೇ ಇಲ್ಲ.
 
ಇಡೀ ಗ್ರಾಮಕ್ಕೆ ಒಂದೇ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಕೆಲ ಮನೆಗಳ ಮುಂದೆ ಮಾತ್ರ ಪಾರ್ಕಿಂಗ್‌ಗೆ ಜಾಗವಿದೆ. ವಾಹನ ನಿಲ್ಲಿಸಿ, ಮನೆಗಳಿಗೆ ನಡೆದುಕೊಂಡು ಹೋಗಬಹುದು.
 
ನೆಮ್ಮದಿಗಾಗಿ ಗ್ರಾಮ ನಿರ್ಮಾಣ
ಈ ಗ್ರಾಮ ನಿರ್ಮಾಣದ ಹಿಂದೆ ಹಲವರ ಶ್ರಮವಿದೆ. ಎಂಜಿನಿಯರಿಂಗ್ ಶಿಕ್ಷಣ ಮುಗಿದ ಬಳಿಕ ಸ್ನೇಹಿತರೇ ಹುಟ್ಟುಹಾಕಿದ ಸಂಸ್ಥೆ ಗುಡ್‌ಅರ್ತ್‌. ಇದರ ರೂವಾರಿಗಳಲ್ಲಿ ಒಬ್ಬರಾದ ನತಾಶಾ ಐಪೇ, ಗ್ರಾಮದ ಬಗ್ಗೆ ಹೇಳಿದ್ದಿಷ್ಟು...
 
‘ಆರ್ಕಿಟೆಕ್ಟ್‌, ಎಂಜಿನಿಯರಿಂಗ್‌ ಓದಿದ ಸ್ನೇಹಿತರು ಸೇರಿ ಸಂಸ್ಥೆ ಹುಟ್ಟುಹಾಕಿದ್ದೇವೆ. ಮನೆಗಳನ್ನು ಭಿನ್ನವಾಗಿ ರೂಪಿಸಬೇಕು. ಜನರ ನೆಮ್ಮದಿಗಾಗಿ ಗ್ರಾಮ ನಿರ್ಮಿಸಬೇಕು ಎಂಬ ತತ್ವವನ್ನು ಪಾಲಿಸಿದ್ದೇವೆ.
 
‘ಬೆಳೆಯುತ್ತಿರುವ ನಗರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಅವುಗಳಿಗೆ ಪರಿಹಾರವಿದ್ದರೂ ಆ ಬಗ್ಗೆ ಯೋಚಿಸುವ ಸಮಯ ಇಲ್ಲ. ಇಂಥ ಸ್ಥಿತಿಯಲ್ಲಿ ಜನರಿಗೆ ಶಾಂತಿ, ನೆಮ್ಮದಿ ಬೇಕಾಗಿದೆ. ಅದಕ್ಕಾಗಿಯೇ ಈ ಪರಿಸರಸ್ನೇಹಿ ನಗರ ನಿರ್ಮಿಸಿದ್ದೇವೆ. ಇಲ್ಲಿಯ ಮನೆಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ.’ 
 
‘ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ. ಸೌರಶಕ್ತಿ ಮೂಲಕ ವಿದ್ಯುತ್ ಪೂರೈಕೆಯಾಗುತ್ತದೆ. ಕೊಳಚೆ ನೀರು ಶುದ್ಧೀಕರಣಕ್ಕೆ ಘಟಕವಿದೆ. ಆ ಮೂಲಕ ಬಳಕೆಯಾದ ನೀರು ಪುನಃ ಬಳಕೆಗೆ ಸಿಗುತ್ತದೆ. ಮಕ್ಕಳಿಗೆ ಇಷ್ಟವಾಗುವ ಆಟದ ಮೈದಾನ, ವಾಯುವಿಹಾರಕ್ಕೆ ಉದ್ಯಾನ, ಅಲ್ಲಲ್ಲಿ ಕಾರಂಜಿಗಳು ಇವೆ. ಇವುಗಳಿಂದ ಗ್ರಾಮವೂ ಸದಾ ತಂಪಾಗಿರುತ್ತದೆ’ ಎನ್ನುತ್ತಾರೆ ನತಾಶಾ.
 
ಮನೆ ಕಟ್ಟುವವರಿಗೆ ಮಾದರಿ
ಕಡಿಮೆ ಖರ್ಚಿನಲ್ಲಿ ಅಂದ ಹಾಗೂ ಚೆಂದ, ಮನಸ್ಸಿಗೆ ಇಷ್ಟವಾಗುವ ಮನೆ ಕಟ್ಟಬೇಕು ಎಂದುಕೊಳ್ಳುವವರು ಒಮ್ಮೆ ಈ ಗ್ರಾಮಕ್ಕೆ ಭೇಟಿ ನೀಡಬೇಕು. ಹಳೇ ಮನೆಗಳ ಸಾಮಗ್ರಿಗಳನ್ನು ಬಳಸಿಕೊಂಡು ಇಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಜತೆಗೆ ನಿರುಪಯುಕ್ತ ವಸ್ತುಗಳೆಂದು ನಾವು ಬಿಸಾಕುವ ವಸ್ತುಗಳು ಸಹ ಇಲ್ಲಿ ಅಲಂಕಾರಿಕ ವಸ್ತುಗಳಾಗಿವೆ. ಮನೆಯ ಯಾವ ಭಾಗವನ್ನು ಹೇಗೆ, ಯಾವುದರಿಂದ ಕಟ್ಟಬೇಕು ಎಂಬ ಪ್ರಶ್ನೆಗಳಿಗೆ ಈ ಗ್ರಾಮದ ಮನೆಗಳಿಂದ ಉತ್ತರ ಸಿಗುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT