ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಪಾಯದ ಮಣ್ಣಿನ ಪರೀಕ್ಷೆ

Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಹೊಸ ಬೆಳೆ ಬೆಳೆದು ನಷ್ಟವಾದರೆ ಆಗ ಕೃಷಿ ವಿಜ್ಞಾನಿಗಳು ಕೇಳುವ ಮೊದಲ ಪ್ರಶ್ನೆ ಮಣ್ಣು ಪರೀಕ್ಷೆ ಮಾಡಿಸಿದ್ದೀರಾ ಎಂದು. ಆದರೆ  ಕಟ್ಟಡ ಕುಸಿದು ಬಿದ್ದಾಗಲೂ ವಿಜ್ಞಾನಿಗಳು ಇದೇ ಪ್ರಶ್ನೆ ಕೇಳುತ್ತಾರೆ. ಹೌದು ಪ್ರತೀ ಕಟ್ಟಡ ಕಟ್ಟುವಾಗ ಮಣ್ಣಿನ ಪರೀಕ್ಷೆ ಕಡ್ಡಾಯ ಎನ್ನುತ್ತಾರೆ ಮಣ್ಣು ವಿಜ್ಞಾನಿ (Geotechnica* Consu* tant) ಮೋಹನ್‌ ಪ್ರಸಾದ್. 
 
ಕಳೆದ 20 ವರ್ಷಗಳಿಂದ ಇವರು ಮಣ್ಣಿನ ಪರೀಕ್ಷೆ ಸಂಬಂಧ ಸಲಹೆ ಗಾರರಾಗಿದ್ದಾರೆ. ಕಟ್ಟಡದ ತಳಪಾಯದ ಮಣ್ಣಿನ ಪರೀಕ್ಷೆ ಯಾಕೆ, ಹೇಗೆ ಎಂಬ ಬಗ್ಗೆ  ಅವರು ಇಲ್ಲಿ ಮಾತನಾಡಿದ್ದಾರೆ. 
 
* ತಳಪಾಯದ ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು? 
ಅದು ಕಟ್ಟಡವಿರಬಹುದು, ಸೇತುವೆ, ಅಣೆಕಟ್ಟೆ, ರಸ್ತೆ, ರನ್‌ವೇ ಹೀಗೆ ಯಾವುದೇ ಬಗೆಯ ನಿರ್ಮಾಣಗಳನ್ನೂ ಮಣ್ಣಿನ ಮೇಲೆಯೇ ಮಾಡಬೇಕು. ಮಣ್ಣು ಎಷ್ಟು ಗಟ್ಟಿ ಇರುತ್ತದೊ ಅದರ ಮೇಲೆ ಕಟ್ಟಡದ ಭವಿಷ್ಯ.   ಕೋಟ್ಯಂತರ ವೆಚ್ಚ ಮಾಡಿ ಕಟ್ಟುವ ಕಟ್ಟಡದ ಸುರಕ್ಷೆ ಮತ್ತು ಅದರಲ್ಲಿ ವಾಸಿಸುವ ಜನರ ರಕ್ಷಣೆ ದೃಷ್ಟಿಯಿಂದ ಮಣ್ಣಿನ ಪರೀಕ್ಷೆ ಅತ್ಯಗತ್ಯ.  
 
* ಕೃಷಿ ಭೂಮಿಯ ಮಣ್ಣು ಪರೀಕ್ಷೆಗೂ ಮನೆ ತಳಪಾಯದ ಮಣ್ಣು ಪರೀಕ್ಷೆಗೂ ಏನು ವ್ಯತ್ಯಾಸ? 
ಸಾಕಷ್ಟು ವ್ಯತ್ಯಾಸಗಳಿವೆ. ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಮಾಡೋದು ಅದರ ಫಲವತ್ತತೆ, ಮಣ್ಣಿನ ರಸಸಾರ, ಮೈಕ್ರೊ ನ್ಯೂಟ್ರಿಯಂಟ್‌, ಪಿ.ಎಚ್‌. ಮೌಲ್ಯ, ಆಮ್ಲೀಯ ಗುಣ ಇತ್ಯಾದಿ ತಿಳಿಯಲು.  ಇದರಿಂದ ಆ ಮಣ್ಣಿನಲ್ಲಿ ಯಾವ ಬೆಳೆ ಹಾಕಬಹುದು ಎಂದು ಗೊತ್ತಾಗುತ್ತದೆ.
 
ಕೊರತೆ ಇರುವ ಪೋಷಕಾಂಶ ಒದಗಿಸಲು ಸಹಾಯ ವಾಗುತ್ತದೆ.  ಆದರೆ ತಳಪಾಯದ ಮಣ್ಣು ಪರೀಕ್ಷೆ ಮಾಡುವುದು ಅದರ ಭಾರ ಹೊರುವ ಸಾಮರ್ಥ್ಯ ತಿಳಿಯಲು ಮಾಡಬೇಕಾಗುತ್ತದೆ. ಇದಕ್ಕೆ Safe bearing Capacity (ಸುರಕ್ಷಿತ ಧಾರಣಾ ಸಾಮರ್ಥ್ಯ) ಎನ್ನಲಾಗುತ್ತದೆ. ಮಣ್ಣು ಒಂದು ಚದರ ಅಡಿ ಜಾಗದಲ್ಲಿ ಎಷ್ಟು ತೂಕವನ್ನು ಹೊರಬಲ್ಲದು ಎಂದು ತಿಳಿಯಬೇಕು. ಅದೂ ಯಾವುದೇ ರೀತಿ ವೈಫಲ್ಯಗಳಾಗದಂತೆ.
 
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಪ್ರತಿ 20 ಟನ್‌/ಚದರ ಮೀಟರ್‌ ತೂಕವನ್ನು ಹಾಕಬಹುದು. ಇಷ್ಟು ಹಾಕಿದರೆ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಆಗಲಾರದು. ಇದು  ನಿಗದಿತ ಮತ್ತು ಇಷ್ಟೇ ಎಂದು ಹೇಳಲಾಗದು. ಈ ರೀತಿ ಮಣ್ಣಿನ ಧಾರಣಾ ಸಾಮರ್ಥ್ಯ ತಿಳಿಯಲು ಪರೀಕ್ಷೆ ಮಾಡಬೇಕು. 
 
* ಎಲ್ಲ ಜಾಗದ ಮಣ್ಣನ್ನೂ ಪರೀಕ್ಷೆ ಮಾಡಲೇ ಬೇಕೆ? 
ಹೌದು. ಇದು ಎರಡು ರೀತಿಯಲ್ಲಿ ಲಾಭವಾಗುತ್ತದೆ. 1. ಆಕಸ್ಮಾತ್ ಮಣ್ಣು ನಾವು ತಿಳಿದುಕೊಂಡಿದ್ದಕ್ಕಿಂತ ಕಳಪೆಯಾಗಿದ್ದರೆ ಕಟ್ಟಡಕ್ಕೆ ತೊಂದರೆ ಯಾಗುತ್ತದೆ. 2. ಮಣ್ಣು  ನಾವು ಅಂದಾಜು ಮಾಡಿದ್ದಕ್ಕಿಂತ ಗುಣಮಟ್ಟ ದಿಂದ ಕೂಡಿದ್ದರೆ ಅನಗತ್ಯವಾಗಿ ತಳಪಾಯಕ್ಕೆ ಹೆಚ್ಚಿನ ವೆಚ್ಚ ಮಾಡುವುದು ತಪ್ಪುತ್ತದೆ.   ಆಗ ತುಂಬಾ ಆಳವಾದ, ಅಗಲವಾದ ತಳಪಾಯದ ಅಗತ್ಯವಿ ರುವುದಿಲ್ಲ. ಮಣ್ಣಿನ ಶಕ್ತಿಯನ್ನು ಪರೀಕ್ಷೆ ಮೂಲಕ ತಿಳಿದು ಅದರ ಪ್ರಕಾರ   ತಳಪಾಯ ಹಾಕಬೇಕು. 
 
 
* ಮಣ್ಣು ಗುಣಮಟ್ಟದಿಂದ ಕೂಡಿರದಿದ್ದರೆ ಏನು ಮಾಡಬೇಕು? 
ಯಾವುದೇ ಮಣ್ಣಿನಲ್ಲೂ ಕಟ್ಟಡ ಕಟ್ಟಬಹುದು. ಅದರೆ ಆ ಮಣ್ಣು ಯಾವ ರೀತಿಯದ್ದೊ ಅದಕ್ಕೆ ಅನುಗುಣವಾಗಿ ತಳಪಾಯ ಹಾಕಬೇಕು.   ಆಗೆಲ್ಲ ರ್‍್ಯಾಫ್ಟ್‌ ತಳಪಾಯ ಅಥವಾ ಫೈಲ್‌ ತಳಪಾಯ ಹಾಕಬೇಕು. ಇದೆಲ್ಲ ದುಬಾರಿ. ಮಣ್ಣು ಕಳಪೆಯಾಗಿದ್ದರೆ ಇದೆಲ್ಲ ಮಾಡಲೇ ಬೇಕಾಗುತ್ತದೆ. 
 
* ಕಳಪೆ ಮಣ್ಣಿನ ಗುಣಮಟ್ಟ ಸುಧಾರಿಸಬಹುದೇ? 
ಹೌದು. ಇದಕ್ಕೆ ಮಣ್ಣು ಸುಧಾರಣಾ ತಂತ್ರಜ್ಞಾನ (Soi* improve Technique) ಎನ್ನುತ್ತಾರೆ.  ಇಲ್ಲವೇ ಭೂಮಿ ಸುಧಾರಣಾ ವಿಧಾನ. ಇದರ ಮೂಲಕ ಮಣ್ಣಿನ  ಸ್ಥಿರತೆ ಸಾಧಿಸಲಾ ಗುತ್ತದೆ. ಆನಂತರ ತಳಪಾಯ ಮಾಡಬಹುದು. 
 
* ಮಣ್ಣು ಪರೀಕ್ಷೆಯ ಹಂತಗಳಿವೆಯೇ? 
ಮಣ್ಣು ಪರೀಕ್ಷೆಯನ್ನು ಮುಖ್ಯವಾಗಿ  ಯಾವ ಕಟ್ಟಡ ಕಟ್ಟುತ್ತಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಮಾಡುತ್ತಾರೆ. ಬಹುಮಹಡಿ ಕಟ್ಟಡ ನಿರ್ಮಿಸುತ್ತೇವೆ ಎಂದಾದರೆ ಆಗ ಪರೀಕ್ಷೆಯನ್ನು ತೀವ್ರವಾಗಿ ಮತ್ತು ವಿಸ್ತೃತವಾಗಿ ಮಾಡಬೇಕು. ಒಂದು ಶೆಡ್‌ ಕಟ್ಟುತ್ತೇವೆ  ಎಂದಾದರೆ ಸಣ್ಣ  ಪರೀಕ್ಷೆ ಸಾಕು. ಪರಮಾಣು ಘಟಕಗಳನ್ನು ಕಟ್ಟಬೇಕಾದರೆ ತುಂಬಾ ಜಾಗರೂಕತೆಯ ಮತ್ತು ಅಷ್ಟೇ ತೀವ್ರವಾದ ಪರೀಕ್ಷೆ ಮಾಡಬೇಕು.
 
ಯಾರೇ  ಮಣ್ಣಿನ ಪರೀಕ್ಷೆಗೆ ಬಂದರೆ ಮೊದಲು ಕೇಳುವ ಪ್ರಶ್ನೆ  ನೀವು ಏನು ಕಟ್ಟುತ್ತೀರಿ? ಎಷ್ಟು ಮಹಡಿ ಎಂದು. ಮನೆ ಕಟ್ಟುವುದಾದರೆ ಎಷ್ಟು ಅಗಲ, ಉದ್ದ, ಇದು ವಾಣಿಜ್ಯ ಕಟ್ಟಡವೊ, ವಸತಿ ಕಟ್ಟಡವೊ, ಕಾಂಕ್ರಿಟ್‌  ಇಲ್ಲವೇ ಸ್ಟೀಲ್‌ ಬಳಸಿಯೊ, ನೆಲಮಾಳಿಗೆ ಇರುತ್ತದೊ ಇಲ್ಲವೊ ಹೀಗೆ ಎಲ್ಲ ಮಾಹಿತಿ ಕೊಡಬೇಕು. ಇದರ ಮೂಲಕ ಕಟ್ಟಡದ ಪ್ರತೀ ಮೂಲೆಗೆ ಬೀಳುವ ತೂಕದ ಅಂದಾಜು ಮಾಡಬಹುದು. 
 
* ಬೆಂಗಳೂರಿನಲ್ಲಿ ಯಾವ ರೀತಿಯ ಮಣ್ಣು ಇದೆ? 
ದೇಶದ ಇತರ ನಗರಗಳಿಗೆ ಹೋಲಿ ಸಿದರೆ ಬೆಂಗಳೂರಿನಲ್ಲಿ ಉತ್ತಮವಾದ ಮಣ್ಣು ಇದೆ. ಆದರೆ ಕೆಲವೆಡೆ ಚೆನ್ನಾಗಿಲ್ಲ. ಕೆರೆ ಅಂಗಳ, ಗದ್ದೆ ಬಯಲುಗಳಲ್ಲಿ ಪ್ರತಿ ವರ್ಷ ನೀರು ನಿಂತು ಮಣ್ಣಿನ ಕಣಗಳೆಲ್ಲ ಭೂಮಿಯ ಆಳಕ್ಕೆ ಹೋಗಿರುತ್ತವೆ. ಆಗ ಮಣ್ಣು ಪದರ ಪದರ ಆಗಿರುತ್ತದೆ. ಇದನ್ನು Sedimentor Deposit ಎನ್ನುತ್ತಾರೆ. ಇಂತಲ್ಲಿ ಮನೆ ಕಟ್ಟಿದರೆ ವಾಲುವುದು, ಬಿರುಕು ಬಿಡುವುದು ಆಗಬಹುದು.
 
ಈಗ ನಗರಗಳಲ್ಲಿ ಜಾಗದ ಒತ್ತಡ ಇದೆ. ಕೆಲ ವರ್ಷಗಳ ಹಿಂದೆ ಆಯ್ಕೆ ಮಾಡಿ ಮನೆ ಕಟ್ಟಬಹುದಿತ್ತು. ಈಗ ಸಿಕ್ಕಲ್ಲಿಯೇ  ಕಟ್ಟಬೇಕು. ಕೆಲವು ಕಡೆಗಳಲ್ಲಿ ಹೊಸ ಬಡಾವಣೆ ಮಾಡಲು ಮಣ್ಣು ತುಂಬಿರುತ್ತಾರೆ. ಅದು ಸಡಿಲವಾಗಿ ರುತ್ತದೆ. ಸಹಜ ಮಣ್ಣು ಎಂದು ತಿಳಿದುಕೊಂಡಿದ್ದು ಭರ್ತಿ ಮಣ್ಣಾಗಿರುತ್ತದೆ. ಬೆಂಗಳೂರಿನಲ್ಲಿ Resudia* Deposti ಮಣ್ಣು ಅಂದರೆ ಇಲ್ಲೇ ಸೃಷ್ಟಿಯಾಗಿ ಇಲ್ಲೇ ಉಳಿದಿರುವುದು. ತಳಪಾಯಕ್ಕೆ ಮಣ್ಣನ್ನು ತೆಗೆಯುತ್ತಾ ಹೋದಂತೆ ಸ್ಥಿತ್ಯಂತರದ ಸ್ಥಿತಿಯಲ್ಲಿ ಇರುತ್ತದೆ. ಬೇರೆ ನಗರಗಳಲ್ಲಿ  ಸಾಗಿದ ಮಣ್ಣು ಇದೆ. ಅಂದರೆ ಒಂದು ಕಡೆ ಉತ್ಪತ್ತಿಯಾಗಿ ಮತ್ತೊಂದು ಕಡೆಗೆ ಸಾಗಿರುತ್ತದೆ. 
 
* ಬೆಂಗಳೂರಿನಲ್ಲಿ ಕಟ್ಟಡ ಕುಸಿತದ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ತಳಪಾಯದ ಮಣ್ಣಿನ ಗುಣದ ಪಾತ್ರವೆಷ್ಟು? 
ಇದೆ. ತನ್ನ ತಳಪಾಯದಲ್ಲಿರುವ ಮಣ್ಣು ಹೇಗಿದೆ ಎನ್ನುವುದರ ಮೇಲೆಯೇ ಆ ಕಟ್ಟಡ ನಿಂತಿರುತ್ತದೆ. ಅದರ ಶಿಥಿಲತೆ ನಿರ್ಧಾರವಾಗುತ್ತದೆ. ಕೆಲವರು ಆಸೆಗೆ ಬಿದ್ದು ಪರೀಕ್ಷೆ ಮಾಡದೆ ಕಟ್ಟಡ ಕಟ್ಟುತ್ತಾರೆ. 
 
* ಆಳ ತಳಪಾಯ ಮಾಡಿದರೆ ಹೆಚ್ಚು ಮಹಡಿ ಕಟ್ಟಬಹುದು ಎಂಬ ಭಾವನೆ ಸಾಮಾನ್ಯವಾಗಿದೆಯಲ್ವಾ? 
ಇದು ಸುಳ್ಳು. ಎಲ್ಲ ಕಡೆಗಳಲ್ಲಿ ಸರಿಯಾಗಲಾರದು. ಉದಾಹರಣೆಗೆ ಹರಳು ಹರಳಾದ, ಮರಳಿನಿಂದ ಕೂಡಿದ ಮಣ್ಣು ಇರುವಲ್ಲಿ ಎಷ್ಟು ಆಳ ತಳಪಾಯ ತೋಡಿದರೂ ಪ್ರಯೋಜನವಿಲ್ಲ. ಕೆಲವು ಮಣ್ಣಿನಲ್ಲಿ ಎಸ್‌ಬಿಸಿ ಸುಧಾರಿಸುವ ಸಾಮರ್ಥ್ಯ ಇರುತ್ತದೆ. ಆದರೆ ಎಲ್ಲ ಕಡೆಯಲ್ಲಲ್ಲ. ಕೆಲವೆಡೆ ಆಳಕ್ಕೆ ಹೋದರೆ  ಬೇರೆ ಬೇರೆ ಸಮಸ್ಯೆಗಳಾಗುತ್ತದೆ. 
 
* ಮಣ್ಣು ಗುಣಮಟ್ಟದಿಂದ ಕೂಡಿರಲು ಇರಲು ಏನು ಕಾರಣ? 
ಹಲವು ಕಾರಣಗಳಿವೆ. ಕೆಲವು ಖನಿಜಗಳಿದ್ದರೆ ಸಮಸ್ಯೆಗಳು ಹೆಚ್ಚು. ಆಗ   ಹಿಗ್ಗುವ, ಕುಗ್ಗುವ ಸಾಧ್ಯತೆಗಳಿರುತ್ತವೆ. ಮಣ್ಣಿನ ಸಾಂದ್ರತೆಯೂ ಒಂದು ಕಾರಣ.  ತೇವಾಂಶ ಸಹ. 
 
* ಮಣ್ಣು ಪರೀಕ್ಷೆ ಮಾಡದೇ ಕಟ್ಟಡ ಕಟ್ಟಿ ಆನಂತರ ಮಣ್ಣಿನ ಸಮಸ್ಯೆ ಕಂಡು ಬಂದರೆ ಏನು ಮಾಡಬೇಕು? 
ತುಂಬಾ ಕಷ್ಟ. ಜಾಣತನವೆಂದರೆ ಕಟ್ಟಡ ಕಟ್ಟುವ ಮೊದಲು ಪರೀಕ್ಷೆ ಮಾಡಬೇಕು. ಕೆಲವು ವಿಧಾನಗಳ ಮೂಲಕ ಸುಧಾರಿಸಬಹುದು. Underpinning, shoring  ಮುಂತಾದ ಪುನರ್ ಸಂಸ್ಕರಣಾ ವಿಧಾನಗಳಿವೆ. ಆದರೆ ಇವು ಕಷ್ಟದ ಕೆಲಸ, ಇದಕ್ಕೆ ಸಾಕಷ್ಟು ಹಣ ಮತ್ತು ಸಮಯ ಹಿಡಿಯು ತ್ತದೆ. ತಜ್ಞರ ಸಲಹೆ ಪಡೆಯಬೇಕಾಗುತ್ತದೆ. 
 
* ಬೆಂಗಳೂರಿನಲ್ಲಿ ಮಣ್ಣು ಪರೀಕ್ಷೆ ಎಲ್ಲಿ ಮಾಡಬಹುದು? 
ಸಾಕಷ್ಟು ಕಡೆ ಸೌಲಭ್ಯಗಳಿವೆ. ಐಐಎಸ್ಸಿ  ನಲ್ಲಿ ಮಾಡುತ್ತಾರೆ. ನಮ್ಮ ಪ್ರಯೋ ಗಾಲಯದಲ್ಲಿ ಮಾಡುತ್ತೇವೆ. 
 
* ಮಣ್ಣಿನ ಪರೀಕ್ಷೆಯ ದರ ಹೇಗೆ? 
ಇದು ಒಂದೊಂದು ಕಡೆ  ಒಂದು ರೀತಿ ಇದೆ. ಕಟ್ಟಡಕ್ಕೆ ಒಂದು ಕೋಟಿ ವ್ಯಯಿಸಿದ್ದರೆ ಮಣ್ಣು ಪರೀಕ್ಷೆಗೆ ₹25 ಸಾವಿರ ವೆಚ್ಚವಾಗುತ್ತದೆ. ಕೆಲವೆಡೆ ಮಣ್ಣು ಭಾರಿ ಸಂಕೀರ್ಣತೆಯಿಂದ ಕೂಡಿದ್ದರೆ ದರ ಸ್ವಲ್ವ ಹೆಚ್ಚಬಹುದು.
 
ಮಣ್ಣಿನ ಪರೀಕ್ಷೆಗೆ ಸಂಬಂಧಿಸಿದ ವಿವರಗಳಿಗೆ ಸಂಪರ್ಕ ದೂರವಾಣಿ: 9844137668, ಈ– ಮೇಲ್: * bhoomiprasad9@gmai* .com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT