ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡ ಸಪಾಟಿಲ್ಲದ ಗಾಜಿನ ಚೂರು

ಬದ್ಮಾಶ್
Last Updated 18 ನವೆಂಬರ್ 2016, 11:07 IST
ಅಕ್ಷರ ಗಾತ್ರ

ಬದ್ಮಾಶ್
ನಿರ್ಮಾಣ: ರವಿ ಕಶ್ಯಪ್
ನಿರ್ದೇಶನ: ಆಕಾಶ್ ಶ್ರೀವತ್ಸ
ತಾರಾಗಣ: ಧನಂಜಯ, ಸಂಚಿತಾ ಶೆಟ್ಟಿ, ಜಹಾಂಗೀರ್, ಅಚ್ಯುತಕುಮಾರ್

ನಾಯಕ ಮತ್ತು ಖಳನಾಯಕನ ನಡುವಣ ಬೌದ್ಧಿಕ ಸವಾಲುಗಳ ಸ್ವಾರಸ್ಯಕರ ನಿರೂಪಣೆಯ ಯಂಡಮೂರಿ ವೀರೇಂದ್ರನಾಥ್‌ ಕಾದಂಬರಿಗಳು ಒಂದೆರಡು ದಶಕಗಳ ಹಿಂದೆ ಕನ್ನಡ ಓದುಗಜಗತ್ತನ್ನು ಆವರಿಸಿಕೊಂಡಿದ್ದವು. ಅವರ ಕಾದಂಬರಿ ಆಧರಿಸಿದ ತೆಲುಗಿನ ‘ಆಖರಿ ಪೋರಾಟಂ’ ಸಿನಿಮಾ, ನಾಯಕ–ನಾಯಕಿ ಹಾಗೂ ಕಳ್ಳ ಸ್ವಾಮಿಯ ನಡುವಿನ ಬೌದ್ಧಿಕ ಯುದ್ಧದ ರೋಚಕತೆಯ ಕಥೆಯಿಂದಾಗಿ ಯಶಸ್ವಿಯಾಗಿತ್ತು. ಇತ್ತೀಚಿನ ‘ರೇಸುಗುರ್ರಂ’ ತೆಲುಗುಚಿತ್ರದಲ್ಲೂ ಶ್ರೀಸಾಮಾನ್ಯ ತರುಣ ಹಾಗೂ ರಾಜಕಾರಣಿಯ ಪೈಪೋಟಿಯ ಚಿತ್ರಣವಿತ್ತು. ಈ ಚಿತ್ರಗಳನ್ನು ನೆನಪಿಸುವ ಕನ್ನಡದ ‘ಬದ್ಮಾಶ್‌’ ಚಿತ್ರ, ಗುಣಮಟ್ಟದಲ್ಲಿ ಅವುಗಳ ಹತ್ತಿರಕ್ಕೂ ಸುಳಿಯದೆ ನಿರಾಶೆಹುಟ್ಟಿಸುತ್ತದೆ.

ಕಿಲಾಡಿ ತರುಣನೊಬ್ಬ ಭ್ರಷ್ಟ ರಾಜಕಾರಣಿಯ ವಿರುದ್ಧ ತನ್ನ ಬುದ್ಧಿ–ಶಕ್ತಿಯಿಂದ ಗೆಲುವು ಸಾಧಿಸುವ ಕಥೆ ‘ಬದ್ಮಾಶ್‌’ ಚಿತ್ರದ್ದು. ಈ ಚಿತ್ರದಲ್ಲಿ ಕಪಟಿ ಸ್ವಾಮಿಯೊಬ್ಬನಿದ್ದಾನೆ. ಕೊಹಿನೂರ್‌ಗಿಂತಲೂ ಬೆಲೆಯುಳ್ಳದ್ದು ಎಂದು ಹೇಳಲಾದ ವಜ್ರದ ಉಪಕಥನವೂ ಇದೆ. ಆದರೆ, ಇವೆಲ್ಲವೂ ನೋಡುಗರನ್ನು ಒಳಗೊಳ್ಳುವಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ತೀರಾ ತೆಳುವಾದ ಕಥೆ ಹಾಗೂ ದೃಶ್ಯಗಳ ಸಡಿಲ ಹೆಣಿಗೆಯಲ್ಲಿ ಸಿನಿಮಾ ಸೊರಗಿದೆ.

ನಿರ್ದೇಶಕ ಆಕಾಶ್‌ ಶ್ರೀವತ್ಸ ಅವರಿಗೆ ದೃಶ್ಯಗಳನ್ನು ವೈಭವೀಕರಿಸುವುದರಲ್ಲಿ ವಿಪರೀತ ಕಾಳಜಿ. ಆದರೆ, ಈ ವೈಭವೀಕರಣವನ್ನು ತಾಳಿಕೊಳ್ಳುವಷ್ಟು ಶಕ್ತಿ ಚಿತ್ರಕಥೆಗಿಲ್ಲ. ಪಾತ್ರದ ವೈಭವೀಕರಣದಲ್ಲಿ ನಾಯಕನ ಪಾತ್ರ ಕೆಲವೊಮ್ಮೆ ಕುಸಿಯುತ್ತದೆ. ನಾಯಕನೂ ಸೇರಿದಂತೆ ಸಿನಿಮಾದಲ್ಲಿನ ಪಾತ್ರಗಳು ಜನಪ್ರಿಯ ಕಲಾವಿದರನ್ನು ಅನುಕರಿಸುತ್ತವೆ. ಈ ಅನುಕರಣೆಯಲ್ಲಿ ಮೂಲಪಾತ್ರಗಳಿಗೊಂದು ಸ್ವಂತಿಕೆಯೇ ಇಲ್ಲದಂತಾಗಿದೆ. ಕಥೆಯಲ್ಲಿ ಗೊಂದಲದ ಅಂಶಗಳೂ ಇವೆ. ಅಮೂಲ್ಯ ಎನ್ನಲಾಗುವ ಹರಳು ವಜ್ರವೋ ವೈಡೂರ್ಯವೋ ಸ್ಪಷ್ಟವಾಗುವುದಿಲ್ಲ. ಪ್ರೇಕ್ಷಕರ ಪಾಲಿಗಂತೂ ಅದು ಬುಡ ಸಪಾಟಿಲ್ಲದ ಗಾಜಿನ ಚೂರಿನಂತೆ ಕಾಣಿಸುತ್ತದೆ.

ದುಷ್ಟ ರಾಜಕಾರಣಿಯ ವಿರುದ್ಧ ಹೋರಾಟ ನಡೆಸುವ ನಾಯಕನ ನೈತಿಕತೆಯ ಬಗ್ಗೆ ನಿರ್ದೇಶಕರಿಗೆ ಪ್ರಶ್ನೆ ಕಾಡಿದಂತಿಲ್ಲ. ಲೋಲುಪ ಮದ್ಯದ ಉದ್ಯಮಿಗೆ ನೆರವು ನೀಡುವ ನಾಯಕ ಕೂಡ ಭ್ರಷ್ಟನೇ. ಇಂಥ ವ್ಯಕ್ತಿ, ಚಿತ್ರದ ಕೊನೆಗೆ ಖಾದಿ ತೊಟ್ಟು ಅಧಿಕಾರದ ಚುಕ್ಕಾಣಿ ಹಿಡಿದು ಬದಲಾವಣೆಯ ಮಾತನಾಡುವುದು, ಚಿತ್ರಕಥೆಗೆ ತಾತ್ವಿಕ ತಳಹದಿ ಇಲ್ಲದಿರುವುದನ್ನು ಸೂಚಿಸುವಂತಿದೆ.

‘ಬದ್ಮಾಶ್‌’ ಇದ್ದುದರಲ್ಲಿ ಸಹನೀಯ ಎನ್ನಿಸುವುದು ಕಲಾವಿದರಿಂದಾಗಿ. ರಂಗುರಂಗಿನ ವ್ಯಕ್ತಿತ್ವದ ಹುಡುಗನಾಗಿ ಧನಂಜಯ, ನಾಯಕನ ಗೆಳೆಯನಾಗಿ ಜಹಾಂಗೀರ್‌, ರಾಜಕಾರಣಿಯ ಪಾತ್ರದಲ್ಲಿ ಅಚ್ಯುತಕುಮಾರ್‌, ದಿವಾಳಿ ಸ್ಥಿತಿಗೆ ತಲುಪಿ ಲಂಡನ್‌ಗೆ ಹಾರುವ ಉದ್ಯಮಿಯಾಗಿ ಪ್ರಕಾಶ ಬೆಳವಾಡಿ ಗಮನಸೆಳೆಯುತ್ತಾರೆ. ನಾಯಕಿ ಸಂಚಿತಾ ಶೆಟ್ಟಿ ಅಭಿನಯದಲ್ಲಿ ಇನ್ನಷ್ಟು ಪಳಗಬೇಕು.

ಕಲಸುಮೇಲೋಗರದಂಥ ಕಥೆಗೊಂದು ತೀವ್ರತೆಯನ್ನು ತಂದುಕೊಡಲು ಜೂಡಾ ಸ್ಯಾಂಡಿ (ಸಂಗೀತ) ಮತ್ತು ಶ್ರೀಶ ಕೂದುವಳ್ಳಿ (ಛಾಯಾಗ್ರಹಣ) ಶ್ರಮಿಸಿದ್ದಾರೆ. ಆದರೆ, ಬುಡವೇ ಭದ್ರವಿಲ್ಲದಿದ್ದಾಗ ಕೊಂಬೆರೆಂಬೆಗಳ ಗಟ್ಟಿತನದ ಬಗ್ಗೆ ಏನು ಹೇಳುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT