ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರೆ ಮರೆತಳೇ ಸೀರೆ...

Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

-ರಾಜೇಶ್ವರಿ ಚೆನ್ನಾಂಗೋಡು

**

ಸೀರೆಯ ನೆರಿಗೆಯನ್ನು ಕ್ಯಾಬಿನಲ್ಲಿ ಕುಳಿತ ಮೇಲೆಯೇ ಸರಿಪಡಿಸಿಕೊಳ್ಳಲಾಗಿದ್ದು. ಬಳಿಯಲ್ಲಿದ್ದ ಸಹೋದ್ಯೋಗಿ, ಅನುದಿನದ ಸಹಯಾತ್ರಿ ‘ಹೇಗೆ ಇಷ್ಟೆಲ್ಲಾ manage ಮಾಡ್ತೀರಾ ಈ ಆರೂ ಹತ್ತರ ಬೆಳ್ಳಂಬೆಳಿಗ್ಗೆ, ನಿಮ್ಮ husband ತುಂಬಾ ಸಹಾಯ ಮಾಡ್ತಾರೆ ಅನ್ಸತ್ತೆ’ ಅಂದಾಗ, ಮೊದಲು ಅವಾಕ್ಕಾಗಿ, ಆಮೇಲೆ ನಕ್ಕುಬಿಟ್ಟಿದ್ದೆ. ‘ಮದುವೆ ಆಗಿಲ್ವಲ್ಲಾ ಮೇಡಂ ನಂಗೆ’ ಅಂದಿದ್ದೆ. ಆಮೇಲೆ ಮಾತಿನಿಂದ ತಿಳಿದಿದ್ದು, ನನ್ನ ಪ್ರಾಯದ ಮದುವೆಯಾಗದ ಹುಡುಗಿಯರ ಗುಂಪಿನಲ್ಲಿ, ನನಗೆ ಮದುವೆಯಾಗಿದೆಯೆಂದು ನಿರ್ಧಾರವಾಗಿತ್ತು. ಕಾರಣ ನಾನು ಪ್ರತಿ ಶುಕ್ರವಾರ ತಪ್ಪದೇ ಸೀರೆ ಉಡುತ್ತಿದ್ದೆ.

ಸೀರೆಯೆಂಬುದು ಹುಡುಗಿ ಹೆಂಗಸಾಗಿ ಬದಲಾಗುವ, ಅವಿವಾಹಿತೆ ವಿವಾಹಿತೆಯಾದಾಗ ಅಷ್ಟೇ ಅನಿವಾರ್ಯವಾಗಿ ಕಲಿತು ಅಭ್ಯಾಸಮಾಡಿಕೊಳ್ಳಬೇಕಾಗಿ ಬರುವ ಉಡುಗೆಯಾಗಿ ಅವರಿಗೆಲ್ಲ ಕಾಣುತ್ತಿತ್ತು. ಸೀರೆಯೆಂಬುದು ನನಗೆ ಅಮ್ಮನ ಹಾಗಾಗುವ ಕನಸಿನ ಭಾಗ ಮಾತ್ರ. ಮದುವೆಗೂ ಸೀರೆಗೂ ನನ್ನ ಮಟ್ಟಿಗೆ ಯಾವ ಸಂಬಂಧವೂ ಕಾಣಸಿಕ್ಕಿಲ್ಲ. 

ಆದರೆ, ಈಗ ಕಾರ್ಪೊರೇಟ್‌ ಜಗತ್ತಿನ ಹೊಸ್ತಿಲು ದಾಟಿ ಹೊರಬಂದು, ಮತ್ತೆ ವಿದ್ಯಾರ್ಥಿಯಾಗುವ ಜೀವನದ ಸುಖದಲ್ಲಿರುವಾಗ ಸೀರೆ ಉಡಲು ಸಿಗುವ ಅಪರೂಪ ಅವಕಾಶಗಳನ್ನು ಸವಿಯುವಾಗ, ಹಿಂದಿನ ಮತ್ತು ಈಗಿನ ಅನುಭವಗಳೆಲ್ಲ ರಸಕರವಾಗುತ್ತಿವೆ. ಸೀರೆ ಉಡಲು ಹಂಬಲಿಸುವ ನನ್ನಂಥವರೂ, ಉಡಲೂ, ‘ಹೊತ್ತು’ ನಡೆಯಲೂ ಬಾರದೆ ಕಿರಿಕಿರಿಯಾಗಿಸಿಕೊಂಡವರೂ ಹಲವರಿರುವಾಗ, ಮತ್ತು ಸೀರೆಗಾಗಿ ಆಂದೋಲನಗಳೂ ಆರಂಭವಾಗಿರುವಾಗ, ಅಮ್ಮನ ಸೀರೆಯ ನೆರಿಗೆ ತುದಿ ಹಿಡಿದು; ಆಹಾ ಅದೆಷ್ಟು ಕೋಮಲವೆಂದು ಪ್ರತಿದಿನವೂ ರೋಮಾಂಚಿತಳಾಗುತ್ತಿದ್ದ ನಾನು ಸೀರೆಯ ಬಗ್ಗೆ ಬರೆದೇ ತೀರಬೇಕಾಗುತ್ತದೆ.

ಸೀರೆಯೆಂಬುದು ಬೆಂಗಳೂರಿನ ಐಟಿ ಜೀವನದ ವೇಗಕ್ಕೆ ತಕ್ಕ ಉಡುಗೆಯಲ್ಲ. ಈಗಿನ ಹೆಂಗಸರ ತೀರ ಅವಸರದ, ಓಡುನಡಿಗೆಗೆ ಸೇರುವುದಿಲ್ಲ ಎಂಬ ವಾದ ತುಂಬ ಸಾಮಾನ್ಯವಾಗಿರುವಾಗಲೂ ನಾನು ಮಾತ್ರ ಅದನ್ನು ಅರ್ಥಮಾಡಿಕೊಂಡಿದ್ದೇ ಇಲ್ಲ. ‘ಈಗಿನ ಕಾಲದ’ ಹುಡುಗಿಯರು ಪಡಲಾಗದ ಬವಣೆ ಪಟ್ಟು, ವರ್ಷಕ್ಕೊಂದು ದಿನವೋ ಅಥವಾ ಹಬ್ಬಕ್ಕೊಂದು ದಿನವೋ ಯಾರದೋ ಕೈಯಲ್ಲಿ ಉಡಿಸಿಕೊಂಡು, ನಡೆಯಲಾಗದೆ, ಇನ್ನೇನು ಎಡವಿ ಬಿದ್ದೇಹೋದೆನೆಂಬಂತೆ ನಡೆದು ಹೋಗುವಾಗ, ಕಣ್ಣು ಪಿಳಿಪಿಳಿ ಬಿಟ್ಟು ನೋಡುತ್ತೇನೆ.
 
ಅದೇನೇನೋ ಮಾಯಾವಿದ್ಯೆಗಳನ್ನೆಲ್ಲ ಕಲಿತು, ಆಕಾಶದಲ್ಲಿ ವಿಮಾನ ಹಾರಿಸುವ, ನಾಸಾದಲ್ಲಿ ನಕ್ಷತ್ರ ಲೋಕದ ದೂರ, ವೇಗಗಳನ್ನೆಲ್ಲ ಗಣನೆ ಮಾಡುವ ವನಿತೆಯರಿಗೆ ಇದೇಕೆ ಸೀರೆ ಮಾತ್ರ ಅಯೋಮಯ? ಆದರೆ ಸೀರೆಯುಡಲು ಬಾರದು ಅನ್ನುವಾಗ, ದುಃಖದ ತೆಳ್ಳಗಿನ ಪೊರೆಯ ಹಿಂದೆಯೇ, ಸೀರೆಯುಡುವ ಅಗತ್ಯವೇನು? – ಎಂಬ ಪ್ರಶ್ನೆಯೂ ಕೆಲವೊಮ್ಮೆ ಮಿಂಚಿ ಹೋಗುತ್ತೆ, ನನ್ನ ಹಲವು ಗೆಳತಿಯರ ಮನದಲ್ಲಿ. ಹೌದು, ಅಗತ್ಯವೇನು?
 
ತನ್ನ ಅಪಾರವಾದ ಉದ್ದದಿಂದಾಗಿ, ಮೊದಲಬಾರಿ ಮತ್ತು ಮುಂದಿನ ಕೆಲವು ಬಾರಿ ಕಂಡವರನ್ನು ಗಾಬರಿ ಬೀಳಿಸುವ ಮೋಜಿನಲ್ಲಿ ತೊಡಗಿರುವುದರಿಂದಲೇ ಸೀರೆಯೆಂಬುದು ಹುಡುಗಿಯರಿಂದ ದೂರವಾಗುತ್ತಿದೆಯೇನೋ... ಆರು ಅಡಿ. ಹೇಗೆ ಸುತ್ತಿ ಬಳಸಿ, ನೆರಿಗೆ ಮಡಸಿ, ತುರುಕಿಸಿ, ಪಿನ್ನುಗಳಲ್ಲಿ ಬಂಧಿಸಡಬೇಕಲ್ಲ!! ಅದೆಂಥಾ ಪಾಡು! ಅಷ್ಟಾದರೆ ಮುಗಿಯಿತೇ? ಹೆಜ್ಜೆ ಹೆಜ್ಜೆಗೂ ಕಾಲಿಗಡ್ಡಬಂದು, ಛೇಡಿಸುವ ನೆರಿಗೆ. ಬೆನ್ನ ಹಿಂದಿಂದ ‘ಮುಕ್ತ ಮುಕ್ತ’ವೆನ್ನುತ್ತ ಹಾರಾಡಿ, ಅದೆಲ್ಲೆಲ್ಲೋ ಸಿಲುಕಿಹಾಕಿಸಿಕೊಂಡು ಗೊಂದಲ ತಂದಿಡುವ ಸೆರಗು. ಕಿರಿಕಿರಿಯೇ. ನಿಜ. ಆದರೂ, ಹಂಬಲಿಸುತ್ತಾರಲ್ಲ, ಯಾಕೆ? ಇಷ್ಟೆಲ್ಲ ಕಷ್ಟಗಳ ಬಳಿಕವೂ ಸೀರೆ ಕೊಡುವ ಸೌಂದರ್ಯ, ಗಾಂಭೀರ್ಯ, ಕೆಲವೊಮ್ಮೆ ಮಾದಕತೆಯೂ, ಇನ್ಯಾವ ಉಡುಗೆಯಿಂದ ಸಿಕ್ಕೀತು? ಸೀರೆಯುಡುವುದು ಅಗತ್ಯವಾಗುವುದು ಈ ಕಾರಣಗಳಿಂದಲೇ? 
 
 ಸೀರೆಯನ್ನು ನಮ್ಮ ಸಮಾಜ ಈಗಲೂ ಗೌರವಾನ್ವಿತ ಉಡುಗೆಯಾಗಿ ನೋಡುತ್ತಿದೆ. ಆದರೆ ನಗರಗಳಲ್ಲಿ ಸೀರೆ ದೈನಂದಿನ ಜೀವನದ ಭಾಗವಾಗುತ್ತಿದೆಯೇ ಎಂಬುದು ಸಂದೇಹಾರ್ಹ. ವಿವಿಧ ಉದ್ದಿಮೆಗಳ ದಿನನಿತ್ಯದ ಜೀವನಶೈಲಿಗನುಗುಣವಾಗಿ ಬಟ್ಟೆಗಳು ಆರಿಸಲ್ಪಡುವಾಗ, ಸೀರೆ ಮುಂಚೂಣಿಯಿಂದ ಮರೆಯಾಗಿರುವುದು ಸ್ಪಷ್ಟವಾಗುತ್ತೆ.
 
ಪರದೇಶಗಳ ಉಡುಗೆಗಳು ನಮಗೆ ಹತ್ತಿರವಾಗುವುದು ಅವುಗಳನ್ನು ಸಲೀಸಾಗಿ ತೊಡಲು ಸಾಧ್ಯವಾಗುವುದರಿಂದ. ಸೀರೆಗೆ ಬದಲಾಗಿ ಸಲ್ವಾರುಗಳೂ, ಕುರ್ತಿಗಳೂ ನಮ್ಮ ದೇಶದ ಪ್ರತಿನಿಧಿಗಳಾಗುವಾಗ, ಜೀನ್ಸ್ ಪ್ಯಾಂಟು , ಫ್ರೋಕುಗಳಂಥಾ ಹೊರದೇಶದ ಬಟ್ಟೆಗಳೂ ನಮಗೆ ಪ್ರಿಯವಾಗುವುದು ಕಾಣುತ್ತವೆ. ಇವೆಲ್ಲದರ ಸಾಮಾನ್ಯ ಗುಣ, ಅವುಗಳ ಬಳಕೆಯಲ್ಲಿ ಸಿಗುವ ಸುಖವೆಂಬುದು ಮೇಲ್ನೋಟಕ್ಕೇ ಕಂಡುಬಂದರೂ, ಆಳದಲ್ಲಿ ಲೋಕದ ವಿವಿಧ ಭಾಗಗಳ ಜನರೊಡನೆ ವ್ಯವಹರಿಸುವ ಅಗತ್ಯವಿರುವಾಗ, ಮತ್ತು ನಮ್ಮ ಕೆಲಸ ಅವರ ಅಗತ್ಯಗಳಿಗೆ ತಕ್ಕಂತೆ ಸರಕು ಮತ್ತು ಸೇವೆಗಳನ್ನು ನಿರ್ಮಿಸಿ ಮಾರಾಟ ಮಾಡುವುದಾಗುವಾಗ, ಅವರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ, ಅವರಿಗೆ ವೇದ್ಯವಾಗುವ ರೂಪ, ವೇಷಭೂಷಣಗಳಲ್ಲಿ, ಅವರಿಗೂ ಹಿಡಿತಕ್ಕೆ ಸಿಗುವ ಸಂಜ್ಞೆ, ಹಾವಭಾವಗಳಲ್ಲಿ ಸಂವಹಿಸುವ ಅಗತ್ಯ ಬರುವಾಗ ನಮ್ಮ ಸಂಸ್ಕೃತಿಯನ್ನು ಅವರ ಮೇಲೆ ಹೇರುವುದಕ್ಕಿಂತ ಸುಲಭವಾಗಿ ನಾವೇ ಅವರ ಸಂಸ್ಕೃತಿಯನ್ನು ಅಳವಡಿಸಿ ಕೊಳ್ಳುವುದಾಗುತ್ತದೆ. ಆಗ, ನಮಗೆ, ನಮ್ಮ ಮೇಲುದ್ಯೋಗಿಗಳಿಗೆ, ಸಹೋದ್ಯೋಗಿಗಳಿಗೆ ಮತ್ತು ನಮ್ಮ ಸಂಪಕರ್ದಲ್ಲಿದ್ದು ನಮ್ಮ ನಡತೆಯ ಮೇಲೆ ಪ್ರಭಾವ ಬೀರುವ ಹಲವರಿಗೆ ನಮ್ಮ ಬಟ್ಟೆಗಳಲ್ಲೂ ಬದಲಾವಣೆಗಳಾಗುವ ಅಗತ್ಯ ಕಾಣುತ್ತದೆ; ಮತ್ತು ನಾವು ಬದಲಾಗುತ್ತೇವೆ. ಇದರ ಪರಿಣಾಮ ಕೇವಲ ನಮ್ಮ ಕೆಲಸದ ಸ್ಥಳಕ್ಕೆ ಮಾತ್ರ ಸೀಮಿತವಾಗಿರದೇ, ಅದು ಹೊಸತನದ ಸಂಕೇತವಾಗಿ, ಮನೆಗಳನ್ನೂ ಮಾರುಕಟ್ಟಗಳನ್ನೂ ವ್ಯಾಪಿಸಿಬಿಟ್ಟಿದೆ. 
 
ಅವೆಷ್ಟೋ ಕುಟುಂಬಗಳಲ್ಲಿ ಸೀರೆಯೆಂಬುದು ಹೆಂಗಸರ ಮೇಲೊಂದು ಹೊರೆಯಾಗುವುದೂ ತೀರ ಅಸಾಮಾನ್ಯವಲ್ಲ. ಹಬ್ಬಹರಿದಿನಗಳಲ್ಲಿ, ಮದುವೆ-ಮುಂಜಿಗಳಲ್ಲಿ ಹೆಂಗಸರು ಸೀರೆಯುಡಲೇಬೇಕಾಗುವುದು, ಅವರವರ ಆಯ್ಕೆಗಿಂತಾಚೆಗೆ ಮನೆಯವರು ಹೇರುವ ಅಗತ್ಯವಾಗಿ ಹೋಗುವುದು ನಮ್ಮಲ್ಲಿ ಹಲವರಿಗೆ ಕೆಲವೊಮ್ಮೆ ಒಪ್ಪಿಕೊಳ್ಳಲಿಕ್ಕಾಗದೇ ಹೋಗುವ ಸತ್ಯ. ಆಗ, ಹುಟ್ಟುವ ಹಠ, ನಿಷೇಧದ ಭಾವನೆಗಳು, ಸೀರೆಯ ಹೊರತಾದ ಉಡುಗೆಗಳನ್ನು ಬಳಸುವುದಕ್ಕೆ ಪ್ರೇರಣೆಯಾಗುವುದೂ ಸತ್ಯ. ಸೀರೆಯ ಮೇಲಿನ ಗೌರವವೂ ಹೀಗೆ ಉಸಿರುಗಟ್ಟಿಸುವ ಮಟ್ಟಕ್ಕೆ ಹೋದಾಗ, ಸೀರೆಯೆಂಬುದು ಬಂಧನವಾಗಿಯೂ ಉಳಿದ ವೇಷಗಳು ಸ್ವಾತಂತ್ರ್ಯದ ಸಂಕೇತವಾಗಿಯೂ ಕಾಣಿಸಿಬಿಡುತ್ತದೆ. 
‘ಈಗಿನ ಕಾಲದ’ ಹುಡುಗಿಯರು ಸೀರೆ ಉಡುವುದನ್ನು ಮಹಾಸಾಹಸವಾಗಿ ಕಾಣುವುದೂ ಇನ್ನೊಂದು ಕುತೂಹಲಕಾರಿ ಅಂಶವೇ.
 
ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹುಡುಗರ, ಪುರುಷರ ವೇಷಭೂಷಣಗಳು ಬದಲಾಗಿ ಕಾಲಗಳಾಯ್ತು. ಅದರ ಫಲವಾಗಿಯೋ ಏನೋ, ಪಂಚೆ, ಪೈಜಾಮಗಳು ನಮಗೆ ಅನ್ಯವಾಗಿಹೋಗಾಯ್ತು. ಮೆಲ್ಲಗೆ ಬದಲಾದ ಹುಡುಗಿಯರ ಸಮವಸ್ತ್ರಗಳೂ ನಮ್ಮ ದಾರಿಯಡಿಗೆ ನುಸುಳಿ, ಕಾಲಿಗಂಟಿದ ಮೇಲೆ, ಹುಡುಗಿಯರು ಶಾಲೆಯ, ಕಾಲೇಜಿನ  ಸಮಯದಲ್ಲಿ ಎಂದೂ ಉಪಯೋಗಿಸದ, ಅಥವಾ ಅಪರೂಪಕ್ಕೊಮ್ಮೆ ಮಾತ್ರ ಉಪಯೋಗಿಸಿದ ಸೀರೆ ಅವರ ದಿನಬಳಕೆಯಲ್ಲಿ ಬರುವುದು ಹೇಗೆ? ಮದುವೆಯ ದಿನವೇ ಮೊಟ್ಟಮೊದಲನೆಯ ಬಾರಿ ಸೀರೆಯುಟ್ಟ ಗೆಳತಿಯರು ನನಗೆ ಸಾಕಷ್ಟಿದ್ದಾರೆ.
 
ನನಗೆ ಸಿರೆಯುಡಲು ಅಮ್ಮನೂ ಅಜ್ಜಯೂ ಕಲಿಸಿದಾಗ, ನಾನು ಒಂದೇ ಸುತ್ತಿನಲ್ಲಿ ಮುಚ್ಚಿಹೋಗುವಷ್ಟಿದ್ದೆ. ಆದರೂ ಸೀರೆಯ ಮೇಲೆ ಪ್ರೇಮ ಹುಟ್ಟುವಷ್ಟು ಅಂದವಾಗಿ, ಉಡಬೇಕೆಂದು ಆಸೆ ಹುಟ್ಟುವಷ್ಟು ಸಲೀಸಾಗಿ, ಐದೇ ನಿಮಿಷದಲ್ಲಿ ಸೀರೆಯುಟ್ಟು ಓಡುವವರೇ ಅವರಿಬ್ಬರೂ. ನೀರು ಕುಡಿಯುವುದೂ ಸೀರೆಯುಡುವುದೂ ಒಂದೇ ರೀತಿಯೆಂದು ಪ್ರತ್ಯಕ್ಷವಾಗಿ ತೋರಿಸಿಕೊಟ್ಟವರವರು. ಹಾಗಾಗಿ, ‘ಈಗಿನ ಕಾಲದ’ ಹುಡುಗಿಯರ ಮೇಲಿನ ಆರೋಪಗಳನ್ನು ರಾಶಿ ಹಾಕುವ ಮೊದಲು, ಅವರಿಗೆ ಸೀರೆಯನ್ನು ಅನಗತ್ಯವೆಂದೂ, ಭಾರವೆಂದೂ, ಮದುವೆಯಾಗುವ ಅನಿವಾರ್ಯದ ಸಂಕೇತವೆಂದೂ ಹೇಳದೇ ಹೇಳಿದ ಅಮ್ಮಂದಿರೂ ಅಜ್ಜಿಯಂದಿರೂ ಅಣ್ಣ ತಮ್ಮಂದಿರೂ ಗಂಡ ಎಲ್ಲರೂ ಯೋಚಿಸಬೇಕೇನೋ?
 
ಕೊನೆಗೆ, ನಾನು ಮದುವೆಯಾದವಳೆಂದು ನಿರ್ಧರಿಸಿದ ಸಹೋದ್ಯೋಗಿಗಳಿದ್ದ ಆ ನಮ್ಮ ಕಚೇರಿಗೇ ಮತ್ತೆ ಹೋಗಬೇಕು. ಅಲ್ಲಿ ನಾನು ಮೊದಮೊದಲು ಸೀರೆಯಟ್ಟರೆ, ಹುಬ್ಬೇರಿಸುವವರಿದ್ದರು, ಮನೆಯಲ್ಲಿ ಕೆಲಸವಿಲ್ಲ ಈ ಹುಡುಗಿಗೆ ಎಂದನ್ನುವ ಹೆಂಗೆಳೆಯರಿದ್ದರು, ಮುಂದೆ ನಿಂತು ಕಣ್ಣಿಂದಲೇ ಗೌರವಿಸಿ ಹೋಗುವ ಅಣ್ಣಂದಿರಿದ್ದರು; ಒಂದು ಶುಕ್ರವಾರ ಸೀರೆಯ ಬದಲು ಬೇರೇನಾದರೂ ತೊಟ್ಟರೆ ಕಾಲೆಳೆದು, ಸೀರೆಯನ್ನೇ ಅನುಮೋದಿಸಿ ಮತ್ತೆ ಸೀರೆಗೆ ಮರಳುವಂತೆ ಮಾಡುವ ಸಹೋದ್ಯೋಗಿಗಳಿದ್ದರು. ಆದರೆ, ಸೀರೆ ಕಾರ್ಪೊರೇಟ್ ಜೀವನಶೈಲಿಗೆ ತೀರ ಸರಿಹೋಗದೆಂದು ತುಂಬ ಶಕ್ತವಾಗಿಯೇ ಸಾರಿ ಹೇಳುವ ಹಲವರು ನನಗೆ ಸಿಕ್ಕಿದ್ದರು.
 
‘ಅದೇನು ಆಂಟಿ ಥರ ಸೀರೆ’ ಎಂದು ಮೂದಲಿಸಿದ ನನ್ನ ಸಹೋದ್ಯೋಗಿಯೊಬ್ಬರಿಗೆ, ‘ನನ್ನ ಉಡುಗೆಯ ಆಯ್ಕೆ ಕೇವಲ ನನ್ನದು ಮಾತ್ರ’ ಎಂದಂದಿದ್ದು ನಿಚ್ಚಳವಾಗಿ ನೆನಪಿದೆ. ಅಂದಿನಿಂದ ಸೀರೆಯೆಂಬುದು ನನ್ನತನದ, ಸ್ವಂತಿಕೆಯ ಭಾಗವಾಗಿಹೋಗಿದೆ. ಸೀರೆ, ಉದ್ದ ಬೊಟ್ಟು, ಕಾಲ್ಗೆಜ್ಜೆಗಳೆಲ್ಲ ಕಾರ್ಪೊರೇಟಿನಲ್ಲಿ ಅಸಾಮಾನ್ಯವೋ ಅಸಹ್ಯವೋ ಆಗುವಾಗ, ಅವನ್ನೆಲ್ಲ ಮೆಚ್ಚಿದ ಕೆಲವು ವಿದೇಶಿಗರೂ, ನನ್ನ ಗೆಳೆಯ-ಗೆಳತಿಯರೂ ಜೊತೆಯಲ್ಲಿದ್ದಾರೆ. ಸೀರೆ ಹಾಗೆಲ್ಲೋ ನನ್ನ ಮತ್ತು ಇನ್ನೆಷ್ಟೋ ಜನರ ಚಿತ್ರದ ಭಾಗವಾಗಿ ಹೋಗುತ್ತದೆ. ಆದರೆ, ಅದು ಅವರ ಸ್ವಂತ ಆಯ್ಕೆಯಾದಾಗ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT