ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಅವರೇ, ತಾಪಮಾನ ಶಮನಕ್ಕೆ ನೆರವಾಗಿ

ಹವಾಮಾನ ಬದಲಾವಣೆ ತಡೆ ವಿರುದ್ಧ ನಿಲುವು ತಳೆದರೆ ಯುವ ಜನರಿಂದ ಅತ್ಯುಗ್ರ ಪ್ರತಿಕ್ರಿಯೆ
Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರೇ, ಹೌದು, ನೀವು ಚುನಾವಣೆಯಲ್ಲಿ ಗೆದ್ದಿದ್ದೀರಿ. ನೀವು ನನ್ನ ಆಯ್ಕೆ ಆಗಿರಲಿಲ್ಲ, ಆದರೂ ಶೀಘ್ರವೇ ನೀವು ನನ್ನ ದೇಶದ ಅಧ್ಯಕ್ಷರಾಗಲಿದ್ದೀರಿ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜುಗುಪ್ಸೆ ಹುಟ್ಟುವಂತೆ ನೀವು ಆಡಿದ ಮಾತುಗಳು ಮತ್ತು ಮಾಡಿದ ಕೆಲಸಗಳನ್ನು ಮರೆಯುವ ಅಥವಾ ಕ್ಷಮಿಸುವ ಉದ್ದೇಶವೇನೂ ನನಗೆ ಇಲ್ಲ.

ನಿಜವಾದ ಜನರನ್ನು ಅದು ನೋಯಿಸಿದೆ, ನಮ್ಮ ರಾಜಕೀಯ ಪ್ರಕ್ರಿಯೆಯ ಘನತೆಯನ್ನು ಕುಗ್ಗಿಸಿದೆ ಮತ್ತು ನಮ್ಮ ವೈವಿಧ್ಯಮಯ ಸಮಾಜವನ್ನು ಒಗ್ಗಟ್ಟಾಗಿ ಇರಿಸುವುದಕ್ಕೆ ಅಗತ್ಯವಾದ ಸಾಮಾಜಿಕ ನಿಯಮಗಳನ್ನು ಅಳಿಸಿ ಹಾಕಿದೆ. ನೀವು ಗೆದ್ದಿದ್ದೀರಿ ಎಂಬ ಒಂದೇ ಕಾರಣಕ್ಕೆ ಅವುಗಳಿಗೆ ಪ್ರತಿರೋಧ ಒಡ್ಡುವುದನ್ನು ನಿಲ್ಲಿಸಲು ನನಗೆ ಸಾಧ್ಯವಿಲ್ಲ.

ಅದೇನೇ ಇರಲಿ, ನೀವು ವಿಫಲರಾಗಲಿದ್ದೀರಿ ಎಂಬ ಆಶಾವಾದದಲ್ಲಿ ಪ್ರತಿದಿನವನ್ನೂ ಕಳೆಯಲು ನನಗೆ ಇಷ್ಟವಿಲ್ಲ. ಇಲ್ಲಿ ಪಣಕ್ಕೆ ಒಡ್ಡಲಾಗಿರುವ ಅಂಶಗಳು ಬಹಳ ಮಹತ್ವದ್ದಾಗಿವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ ತೀವ್ರವಾದ ಭರವಸೆಗಳ ಬಗ್ಗೆ ಸ್ಪಷ್ಟ ಮರುಚಿಂತನೆಯನ್ನು ನೀವು ಆರಂಭಿಸಿದ್ದೀರಿ ಎಂಬ ಕಾರಣದಿಂದ ನಿಮ್ಮ ಜತೆ ತಾತ್ವಿಕವಾದ ಅನುಸಂಧಾನ ನನ್ನ ಸರಿಯಾದ ಪ್ರತಿಕ್ರಿಯೆ ಆಗಬಹುದು. ಈ ಅನುಸಂಧಾನವನ್ನು ಆರಂಭಿಸೋಣ: ಹವಾಮಾನ ಬದಲಾವಣೆ ಎಂಬುದು ಒಂದು ಮೋಸ ಎಂಬ ನಿಮ್ಮ ಹೇಳಿಕೆಯ ಬಗ್ಗೆ ದಯವಿಟ್ಟು ಮರುಚಿಂತನೆ ನಡೆಸಿ.

ಹವಾಮಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಿದ್ಧ ಎಂದು ನೀವು ಘೋಷಿಸಿದರೆ ಇತರ ಯಾವುದೇ ವಿಚಾರಗಳಿಗಿಂತ ಹೆಚ್ಚಾಗಿ ಅದು ನಿಮ್ಮ ವಿರೋಧಿಗಳ ಗಮನ ಸೆಳೆಯುತ್ತದೆ. ನೀವು ಅಂತಹ ಘೋಷಣೆ ಮಾಡಿದರೆ ಬಹಳಷ್ಟು ಜನರು ನಿಮ್ಮನ್ನು ಹೊಸದಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ- ನಿಮ್ಮ ಯಾವುದೇ ಬೆಂಬಲಿಗ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಈ ವಿಷಯಕ್ಕೆ ಸಂಬಂಧಿಸಿ ಅವರು ನಿಮಗೆ ಮತ ಹಾಕಿದ್ದಲ್ಲ.

ಹವಾಮಾನ ಬದಲಾಗುತ್ತಿದೆ ಎಂಬುದನ್ನು ಅವರ ಮಕ್ಕಳು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಅವರೆಲ್ಲರಿಗೂ ಗೊತ್ತು. ನೀವೂ ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದಾದರೆ ಅವರು ಬಹಳ ಖುಷಿಪಡುತ್ತಾರೆ.

ಮಕ್ಕಳ ಬಗ್ಗೆ ಮಾತನಾಡುವುದಾದರೆ ಟ್ರಂಪ್ ಅವರೇ, ನಿಮ್ಮ ಮಕ್ಕಳು ನಿಮ್ಮ ಗಾಲ್ಫ್ ಕೋರ್ಸ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ತಾಪಮಾನ ಏರಿಕೆಯಿಂದಾಗಿ ನಿಮ್ಮ ಡ್ಯುರಲ್ ಗಾಲ್ಫ್‌ ಕೋರ್ಸ್‌ಗೆ ತೊಂದರೆಯಾಗಲಿದೆ ಎಂಬುದನ್ನು ನಿಮ್ಮ ಮಕ್ಕಳು ನಿಮಗೆ ಹೇಳಿಯೇ ಇರುತ್ತಾರೆ.

ಯಾಕೆಂದರೆ, ಮಂಜುಗಡ್ಡೆ ಕರಗುವುದರಿಂದಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಮಿಯಾಮಿಯ ಕೆಲವು ಭಾಗಗಳು ಈಗಾಗಲೇ ಪ್ರವಾಹದ ಸಮಸ್ಯೆ ಎದುರಿಸುತ್ತಿವೆ. ದಕ್ಷಿಣ ಫ್ಲಾರಿಡಾದ ರಿಯಲ್ ಎಸ್ಟೇಟ್ ಬಗ್ಗೆ ಸುದ್ದಿ ಪ್ರಕಟಿಸುವ ‘ದ ರಿಯಲ್ ಡೀಲ್’ ಎಂಬ ಪತ್ರಿಕೆ ಪ್ರಕಾರ, ‘ಮಿಯಾಮಿ ಕಡಲ ಕಿನಾರೆಯ ಕೆಲವು ಭಾಗಗಳು ಹದಿನೈದೇ ವರ್ಷಗಳಲ್ಲಿ ಪ್ರವಾಹದ ನೀರಿನಿಂದ ಆವೃತವಾಗಿರುತ್ತವೆ’. ಇದರಿಂದಾಗಿ ನಿಮ್ಮ ಕಡಲ ತಡಿಯ ಗಾಲ್ಫ್ ಕೋರ್ಸ್ ಕಡಲಿನಡಿಯ ಗಾಲ್ಫ್ ಕೋರ್ಸ್ ಆಗಿ ಬದಲಾಗಲಿದೆ.

ಇದು ಮೋಸ ಅಲ್ಲ. ದಾಖಲೆಗಳ ಪ್ರಕಾರ ಈ ವರ್ಷದ ಅಕ್ಟೋಬರ್ ಅಮೆರಿಕದ ಮೂರನೇ ಅತ್ಯಂತ ಹೆಚ್ಚು ಉಷ್ಣತೆಯ ತಿಂಗಳಾಗಿತ್ತು. ‘ಉತ್ತರ ಅಮೆರಿಕದ ಅತ್ಯಂತ ಹೆಚ್ಚಿನ ಉಷ್ಣತೆಯ ವಾರ ಕೆನಡಾದಲ್ಲಿ ದಾಖಲಾಗಿದೆ. ಅಲ್ಲಿ ಸಾಮಾನ್ಯಕ್ಕಿಂತ 30 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ಉಷ್ಣತೆ ದಾಖಲಾಗಿದೆ’ ಎಂದು ಇತ್ತೀಚೆಗೆ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ. ಇದು ಅಭೂತಪೂರ್ವ.

ಪೆಂಟಗನ್‌ಗೆ ಭೇಟಿ ನೀಡಿದಾಗ ಹವಾಮಾನ ಬದಲಾವಣೆ ಬಗ್ಗೆ ಅಲ್ಲಿನ ಜನರಲ್‌ಗಳನ್ನು ಕೇಳಿ. ಅವರು ನೀಡುವ ಉತ್ತರ ಹೀಗಿರುತ್ತದೆ: ಯುರೋಪ್‌ಗೆ ಈಗ ಪ್ರವಾಹದೋಪಾದಿಯಲ್ಲಿ ಬರುತ್ತಿರುವ ವಲಸಿಗರಲ್ಲಿ ಹೆಚ್ಚಿನವರು ಸಿರಿಯಾ ಅಥವಾ ಇರಾಕ್‌ಗೆ ಸೇರಿದವರಲ್ಲ. ಬದಲಿಗೆ, ನಾಲ್ಕರಲ್ಲಿ ಮೂರು ಭಾಗ ಮಧ್ಯ ಆಫ್ರಿಕಾದ ಒಣ ಪ್ರದೇಶಗಳಿಂದ ಬರುತ್ತಿರುವವರು. ಹವಾಮಾನ ಬದಲಾವಣೆಯ ಜತೆಗೆ ಭಾರಿ ಪ್ರಮಾಣದಲ್ಲಿ ಜನರು ವಲಸೆ ಹೋಗುತ್ತಿರುವುದರಿಂದಾಗಿ ಅಲ್ಲಿ ಸಣ್ಣ ಪ್ರಮಾಣದ ಬೇಸಾಯ ಅಸಾಧ್ಯ ಎನ್ನುವಂತಾಗಿಬಿಟ್ಟಿದೆ.

ನ್ಯಾಷನಲ್‌ ಜಿಯೊಗ್ರಫಿಕ್‌ ವಾಹಿನಿಯ ಸಾಕ್ಷ್ಯಚಿತ್ರವೊಂದರ ಭಾಗವಾಗಿ ನಾನು ಕಳೆದ ಏಪ್ರಿಲ್‌ನಲ್ಲಿ ಸೆನೆಗಲ್‌ನ ನಿರಾಶ್ರಿತ ಗುಂಪೊಂದನ್ನು ಅನುಸರಿಸಿ ಸಾಗಿದ್ದೆ. ಅವರು ನಿಗರ್‌ ಮೂಲಕ ಲಿಬಿಯಾ ಮತ್ತು ಯುರೋಪ್‌ನತ್ತ ಸಾಗುತ್ತಿದ್ದರು. ಪ್ರತಿ ತಿಂಗಳು ಸಾವಿರಾರು ಜನ ಇಂತಹ ಪ್ರಯಾಣ ಕೈಗೊಳ್ಳುತ್ತಾರೆ. ನಮ್ಮ ಭಾಗದಲ್ಲಿಯೂ ಇಂತಹ ವಲಸೆ ಆರಂಭವಾಗಲಿದೆ. ಯಾವ ಗೋಡೆಗಳೂ ಜನರನ್ನು ತಡೆಯುವುದು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯನ್ನು ನೀವು ನಿರ್ಲಕ್ಷಿಸಿ, ನಮ್ಮಲ್ಲಿ ಕಟ್ಟುನಿಟ್ಟಾದ ವಲಸೆ ನೀತಿ ಇದೆ ಎಂದು ಹೇಳುವುದು ಸಾಧ್ಯವಿಲ್ಲ.

ನೀವು ಅರ್ಥ ಮಾಡಿಕೊಳ್ಳಲೇಬೇಕಾದ ಕೆಲವು ಅಂಶಗಳಿವೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಪರಿಸರ ಸಂರಕ್ಷಣಾ ಸಂಸ್ಥೆಗೆ ನೀವು ಹವಾಮಾನ ಬದಲಾವಣೆಯನ್ನು ನಿರಾಕರಿಸುವ ವ್ಯಕ್ತಿಯನ್ನು ಮುಖ್ಯಸ್ಥರನ್ನಾಗಿ ನೇಮಿಸುತ್ತೀರಿ ಎಂದಿಟ್ಟುಕೊಳ್ಳಿ; ಹಾಗೆಯೇ ಭೂಮಿಯ ತಾಪದ ಹೆಚ್ಚಳ ತಡೆಗೆ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಕಡಿಮೆ ಮಾಡುವ ಪ್ಯಾರಿಸ್‌ ಒಪ್ಪಂದಕ್ಕೆ 190 ರಾಷ್ಟ್ರಗಳು ಬದ್ಧವಾಗಿವೆ. ಈ ಒಪ್ಪಂದದಿಂದ ಅಮೆರಿಕ ಹೊರಬರುವ ನಿರ್ಧಾರ ಕೈಗೊಳ್ಳಿ. ಅದಕ್ಕೆ ಅಮೆರಿಕ ಮತ್ತು ಯುರೋಪ್‌ನ ಯುವ ಜನರಿಂದ ಅತ್ಯುಗ್ರವಾದ ಪ್ರತಿಕ್ರಿಯೆ ವ್ಯಕ್ತವಾಗಲಿದೆ.
 
ಯುರೋಪ್‌ನಿಂದ ವ್ಯಕ್ತವಾಗುವ ಪ್ರತಿಕ್ರಿಯೆ, ಪಶ್ಚಿಮದ ಮೈತ್ರಿಕೂಟವನ್ನು ಮುನ್ನಡೆಸುವ ನಿಮ್ಮ ಸಾಮರ್ಥ್ಯವನ್ನೇ ಕಸಿದುಕೊಳ್ಳುತ್ತದೆ. ಹವಾಮಾನ ಶಾಸ್ತ್ರಜ್ಞ ಜೋ ರೊಮ್‌ ನಿಮ್ಮ ಧೋರಣೆಯಿಂದಾಗಬಹುದಾದ ಪರಿಣಾಮವನ್ನು ಹೀಗೆ ಬಣ್ಣಿಸುತ್ತಾರೆ. ‘ಮಹಾದುರಂತಮಯ ಹವಾಮಾನ ಏರಿಕೆಯನ್ನು ತಡೆಯುವ ಜಗತ್ತಿನ ಕೊನೆಯ ಮತ್ತು ಅತ್ಯುತ್ತಮ ಅವಕಾಶವನ್ನು ತಪ್ಪಿಸಿದ ವ್ಯಕ್ತಿ ಎಂದು ಇತಿಹಾಸ ಸೇರುವುದು ಖಚಿತ’. ಇಂತಹ ಹೆಸರು ಪಡೆದುಕೊಳ್ಳುವುದು ನಿಮಗೆ ಬೇಕಿದೆಯೇ?

ನಿಮಗೆ ಒಂದು ಉತ್ತಮವಾದ ದಾರಿ ಇದೆ– ಮುಕ್ತ ಮಾರುಕಟ್ಟೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿ ನಿಮ್ಮ ಬದಲಾದ ನಿಲುವನ್ನು ನೀವು ರೂಪಿಸಿಕೊಳ್ಳಬಹುದು. ಹವಾಮಾನ ಮತ್ತು ಇಂಧನ ನೀತಿಯ ಬಗ್ಗೆ ದೊಡ್ಡ ದೊಡ್ಡ ಕಂಪೆನಿಗಳಿಗೆ ಸಲಹೆ ನೀಡುವ ಹಾಲ್‌ ಹಾರ್ವೆ, ತಂತ್ರಜ್ಞಾನದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ‘ಸೌರಶಕ್ತಿಯ ವೆಚ್ಚ 2008ರಿಂದ ಶೇ 80ರಷ್ಟು ಕಡಿಮೆಯಾಗಿದೆ; ಪವನ ವಿದ್ಯುತ್‌ ವೆಚ್ಚ ಶೇ 50ಕ್ಕಿಂತಲೂ ಕಡಿಮೆಯಾಗಿದೆ; ಬ್ಯಾಟರಿಯ ವೆಚ್ಚ ಶೇ 70ರಷ್ಟು ಕಡಿಮೆಯಾಗಿದೆ; ಎಲ್‌ಇಡಿ ಬಲ್ಬ್‌ಗಳ ವೆಚ್ಚ ಶೇ 90ಕ್ಕಿಂತ ಕಡಿಮೆಯಾಗಿದೆ. ಈ ಎಲ್ಲದರ ಪರಿಣಾಮವಾಗಿ ಹೆಚ್ಚು ಶುದ್ಧವಾದ ಭವಿಷ್ಯಕ್ಕೆ ಮಲಿನವಾದ ಭವಿಷ್ಯಕ್ಕಿಂತ ವೆಚ್ಚ ಕಡಿಮೆ’.

ಮೆಕ್ಸಿಕೊದಿಂದ ಮಧ್ಯಪ್ರಾಚ್ಯದ ವರೆಗೆ ಒಂದು ಕಿಲೊವಾಟ್‌ ಸೌರ ವಿದ್ಯುತ್‌ ಅಥವಾ ಪವನ ವಿದ್ಯುತ್‌ನ ಬೆಲೆ ₹10–15ಗಳಷ್ಟು ಕಡಿಮೆ ಇದೆ. ನೈಸರ್ಗಿಕ ಅನಿಲದಿಂದ ಉತ್ಪಾದಿಸಲಾಗುವ ಇದೇ ಪ್ರಮಾಣದ ವಿದ್ಯುತ್‌ಗೆ ತಗಲುವ ವೆಚ್ಚ ಸುಮಾರು ₹30. ಕಲ್ಲಿದ್ದಲು ಬಳಸಿ ಉತ್ಪಾದಿಸಲಾಗುವ ವಿದ್ಯುತ್‌ ಬೆಲೆ ಇದರ ದುಪ್ಪಟ್ಟು.

ಇನ್ನೊಂದು ವಿಚಾರವನ್ನೂ ನಾವು ಗಮನದಲ್ಲಿ ಇರಿಸಿಕೊಳ್ಳಬೇಕು: ಕಲ್ಲಿದ್ದಲು, ತೈಲ, ಅನಿಲ ಎಲ್ಲದರ ಬೆಲೆಯೂ ಏರಿಳಿಕೆ ಆಗುತ್ತಿರುತ್ತದೆ.  ಆದರೆ ಪವನ ವಿದ್ಯುತ್‌, ಸೌರ ವಿದ್ಯುತ್‌ ಮತ್ತು ಎಲ್‌ಇಡಿ ತಂತ್ರಜ್ಞಾನದ ವೆಚ್ಚ ಕಡಿಮೆಯಾಗುತ್ತಲೇ ಹೋಗುತ್ತದೆ. ಹಳೆಯದಕ್ಕಿಂತ ಕಡಿಮೆ ವೆಚ್ಚದ ಹೊಸ ತಂತ್ರಜ್ಞಾನದ ಆವಿಷ್ಕಾರವಾದರೆ ಹಳೆಯದಕ್ಕೆ ವಿದಾಯ ಹೇಳಲಾಗುತ್ತದೆ. ಈ ವಿದಾಯದಿಂದ ಒಟ್ಟು ಮನುಕುಲಕ್ಕೆ ಒಳ್ಳೆಯದೇ ಆಗುತ್ತದೆ.

ನವದೆಹಲಿ ಅಥವಾ ಬೀಜಿಂಗ್‌ನ ಇತ್ತೀಚಿನ ಫೋಟೊಗಳನ್ನು ನೀವು ನೋಡಿದ್ದೀರಾ? ಬೆಳೆ ತ್ಯಾಜ್ಯ ಮತ್ತು ಪಳೆಯುಳಿಕೆ ಇಂಧನವನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯದಿಂದ ಅಲ್ಲಿನ ಜನರಿಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಹಾಗಾದರೆ, ಭಾರತೀಯರು ಏನು ಮಾಡುತ್ತಿದ್ದಾರೆ? ಅವರು ಬೆಳೆ ತ್ಯಾಜ್ಯ ಸುಡುವುದನ್ನು ಕಡಿಮೆ ಮಾಡುತ್ತಿದ್ದಾರೆ, ಡೀಸೆಲ್‌ ಕಾರುಗಳ ಬಳಕೆ ಕಡಿಮೆ ಮಾಡುತ್ತಿದ್ದಾರೆ ಮತ್ತು ಅವರು ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದಿಸುವ ಬದರ್‌ಪುರ ಸ್ಥಾವರವನ್ನು ಮುಚ್ಚಿಬಿಟ್ಟಿದ್ದಾರೆ.

ಪಳೆಯುಳಿಕೆ ಇಂಧನಕ್ಕೆ ಅವರು ಪರ್ಯಾಯವನ್ನು ಕಂಡುಕೊಳ್ಳಲೇಬೇಕಾಗಿದೆ. ಹಾಗಾಗಿ ಅವರು ಪರಿಸರಪೂರಕ ತಂತ್ರಜ್ಞಾನದ ಮೇಲೆ ಭಾರಿ ಹೂಡಿಕೆ ಮಾಡುತ್ತಿದ್ದಾರೆ.ಅಮೆರಿಕವನ್ನು ಕಲ್ಲಿದ್ದಲಿನ ದಾಸನಾಗಿಯೇ ಉಳಿಸುವುದು ಮತ್ತು ಪರಿಸರಪೂರಕ ಇಂಧನಕ್ಕೆ ಸಂಬಂಧಿಸಿ ಅಮೆರಿಕ ಸಾಧಿಸಿದ ಮುನ್ನಡೆಯನ್ನು ಅಳಿಸಿ ಹಾಕುವುದು ನಿಮ್ಮ ಕಾರ್ಯತಂತ್ರವೇ– ಪರಿಸರಪೂರಕ ಇಂಧನ ಮುಂದೆ ಜಗತ್ತಿನ ಅತ್ಯಂತ ದೊಡ್ಡ ರಫ್ತು ಉದ್ಯಮವಾಗುವುದು ಖಚಿತ. ನಾವು ಇಂತಹ ಇಂಧನದ ತಂತ್ರಜ್ಞಾನವನ್ನು ಭಾರತ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳಬೇಕೇ?

ಟ್ರಂಪ್‌ ಅವರೇ, ನೀವು ಫ್ಲಾರಿಡಾದಲ್ಲಿ ಗೆದ್ದಿದ್ದೀರಿ. ಅಲ್ಲಿ ಹಿಲರಿ ಅವರಲ್ಲದೆ ಬೇರೆ ಯಾರು ಸೋತಿದ್ದಾರೆ ಎಂಬುದು ನಿಮಗೆ ಗೊತ್ತೇ? ಹಳೆಯ ಕಾಲದ ಇಂಧನದ ಪ್ರತಿಪಾದಕರು. ರಾಜ್ಯದಲ್ಲಿ ಸೌರಶಕ್ತಿ ಬಳಕೆಯ ಬೆಳವಣಿಗೆಯನ್ನು ತಡೆಯಬೇಕು ಎಂಬುದರ ಪರವಾಗಿ ಜನಮತಗಣನೆಗಾಗಿ ಅವರು ಎರಡು ಕೋಟಿ ಡಾಲರ್‌ (ಸುಮಾರು ₹140 ಕೋಟಿ) ಖರ್ಚು ಮಾಡಿದ್ದಾರೆ.

ಫ್ಲಾರಿಡಾದ ಜನರು ಟ್ರಂಪ್‌ ಪರವಾಗಿ ನಿಂತ ಹಾಗೆಯೇ ಸೌರ ವಿದ್ಯುತ್‌ನ ಪರವಾಗಿಯೂ ನಿಂತಿದ್ದಾರೆ. ಈ ಎರಡನ್ನೂ ತಡೆಯಲು ಯತ್ನಿಸಿದವರನ್ನು ಸೋಲಿಸಿದ್ದಾರೆ. ಇದು ನಿಮಗೆ ಜನರು ನೀಡಿರುವ ಸಂದೇಶದ ಒಟ್ಟು ಸಾರಾಂಶ.

(ಲೇಖಕ ಮೂರು ಬಾರಿ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ,  ಅಂಕಣಕಾರ ದಿ ನ್ಯೂಯಾರ್ಕ್‌ ಟೈಮ್ಸ್‌ editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT