ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಹ

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2016
Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ
-ಮೋದೂರು ತೇಜ
 
**
ಅವಳ ಮನಸು ಕನವರಿಕೆ ಶಿಖರದ ತುತ್ತತುದಿಯಲ್ಲಿರುವಾಗ ತನ್ನ ಕಳ್ಳುಬಳ್ಳಿಯ ಕೂಸನ್ನ ಕದ್ದಾದರೂ ಸರಿಯೇ ಹೊತ್ತು ತರಬೇಕೆಂಬ  ಅತಿಯಾದ ಹಂಬಲವೇ ಅವಳ ಬೆಂಬಲಕ್ಕೆ ನಿಂತಿದ್ದರಿಂದ ನೋಡ ನೋಡುತ್ತಲೇ ತೋಳುಗಳಿಗೆ ರೆಕ್ಕೆ ಮೂಡಿ ಏಳೇಳು ಸಮುದ್ರಗಳನ್ನು ದಾಟಿ, ಮಗುವಿದ್ದ ಮನೆ ತಲುಪಿದಳು. ಸಾಲು ಶಿಖರಗಳ ನೆತ್ತಿ ಮೇಲೆ ಬೆಣ್ಣೆ ಸುರಿದಂತಿದ್ದ ಹಿಮಬೆಟ್ಟಗಳ ಅಂಚಿನಲ್ಲಿರುವ ತೋಟದ ಮನೆಯಲ್ಲಿ, ಶಬ್ದ ನಿಶ್ಯಬ್ದದ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದರಿಂದ ಮೌನ ಮಡುಗಟ್ಟಿತ್ತು. ತನ್ನ ಹೆಜ್ಜೆ ಸಪ್ಪಳ ತನಗೇ ಕೇಳಿಸದಷ್ಟು ಮೆದುವಾಗಿ ನಡೆದುಬಂದ ಅವಳು ಮನೆಯ ಹಜಾರಕ್ಕೆ ಕಾಲಿಟ್ಟಾಗ, ಭಯದ ಬಳುವಳಿಗೆಂಬಂತೆ ಎದೆ ಬಡಿತ ಜೋರಾಗಿತ್ತು. ಸುತ್ತಲೂ ಕಣ್ಣಾಯಿಸಿದ ಹೊತ್ತಿನಲ್ಲಿ ಯಾರೂ ಇಲ್ಲದ ಧೈರ್ಯಕ್ಕೆ ನಡುಮನೆಗೆ ಬಂದಿದ್ದಳು. ಇಳಿಸಂಜೆಯ ಹೊತ್ತಿನಲ್ಲಿ ಮೈತೊಳೆದು ತೊಟ್ಟಿಲಿನಲ್ಲಿ ಮಲಗಿಸಿದ್ದರಿಂದ ನಿದ್ದೆಗಣ್ಣಿನಲ್ಲಿ ನಗುತ್ತಿದ್ದ ಮಗುವನ್ನೆತ್ತಿಕೊಂಡು ಮುತ್ತಿಟ್ಟು ಎದೆಗಪ್ಪಿಕೊಂಡಾಗ, ಮಾತಿಗೂ ನಿಲುಕದ ಪುಳಕಕ್ಕೆ ಅವಳ ಮನೋರಾಜ್ಯದಲ್ಲಿ ಪಟ್ಟಾಭಿಷೇಕವಾಗಿತ್ತು.
 
ಮಗು ಸಿಕ್ಕಿದ ಸಡಗರಕ್ಕೆ ಅಲ್ಲಿಯೇ ನಿಂತು ಮೈ ಮರೆಯದೆ, ಎದೆಗವಚಿಕೊಂಡ ಮಗುವಿಗೆ ಸೀರೆ ಸೆರಗು ಮರೆಮಾಡಿ ಮನೆಯಂಗಳ ದಾಟುವುದರೊಳಗೆ ಆ ಮನೆಯಾಕೆಯ ಕಣ್ಣಿಗೆ ಬಿದ್ದಳು. ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಕಣ್ಣಿಗೆ ಕಾವಲಿರುವ ರೆಪ್ಪೆಯ ಹಾಗೆ ನೋಡಿಕೊಂಡಿದ್ದ ಮಗುವೇ ಇಲ್ಲದ ಬರಿದಾದ ತೊಟ್ಟಿಲ ಕಂಡು ಆ ಮನೆಯಲ್ಲಿ ಅಳುವಿನ ಆಕ್ರಂದನ ಮುಗಿಲು ಮುಟ್ಟಿತ್ತು. ತೋಟದಲ್ಲಿದ್ದವರೆಲ್ಲ ಅಳುವಿನ ಜಾಡು ಹಿಡಿದು ಗಾಬರಿಯಿಂದ ಓಡಿ ಬಂದವರಿಗೆ ಮಗುವನ್ನು ಕದ್ದೋಡುವವಳ ಸುದ್ದಿ ತಿಳಿಸಿದಳು. ಗಿಡ–ಮರಗಳ ಮರೆಯಲ್ಲಿ ದಾರಿ ಸವೆಸುತ್ತಿರುವ ಅವಳಿಗೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆನ್ನುವ ಸುಳಿವು ಸಿಕ್ಕಿತ್ತು.
 
ಬೆದರಿದ ಜಿಂಕೆಯಂತೆ ಕೂಸನ್ನು ಅವಚಿಕೊಂಡು ಬೆಟ್ಟದ ತುದಿಗೇರತೊಡಗಿದಳು. ಅಷ್ಟೊತ್ತಿಗೆಲ್ಲ ಅವಳ ಬೆನ್ನ ಹಿಂದೆ ಬಂದವರು ನಾಲ್ಕು ದಿಕ್ಕಿನಿಂದಲೂ ಸುತ್ತುವರೆದಾಗ, ತನ್ನ ಪಾಲಿನ ನಿಧಿಯನ್ನ ದಕ್ಕಿಸಿಕೊಂಡೆ ಎನ್ನುವ ತೃಪ್ತಿಯೊಂದಿಗೆ ಹಾರುವುದನ್ನೇ ಮರೆತ ಅವಳ ತೋಳುಗಳಿಗೆ ರೆಕ್ಕೆಗಳೇ ಮೂಡಲಿಲ್ಲ. ಸೀರೆ ಸೆರಗಿನ ಮರೆಯಲ್ಲಿ ಎದೆಗವಚಿಕೊಂಡಿದ್ದ ಮಗುವನ್ನು ಕಿತ್ತುಕೊಳ್ಳಲು ಬಂದವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಲ್ಲೆಡವಿದ ಅವಳು ಎದೆಗಪ್ಪಿಕೊಂಡ ಮಗುವಿನೊಂದಿಗೆ ಬೆಟ್ಟ ತುದಿಯಿಂದ ಕಾಲುಜಾರಿ ಬಿದ್ದಾಗ, ದಟ್ಟವಾದ ಅಡವಿಯೇ ಬೆಚ್ಚಿಬೀಳುವಂತೆ ಚೀರಿದಳು.
 
ಕನಸೊಡೆದೆದ್ದಾಗ...
ಬೆಟ್ಟದ ತುದಿಯಿಂದ ನಿಜವಾಗಿಯೂ ತಾನೇ ಜಾರಿದಳೆಂಬಂತೆ ಬೆಚ್ಚಿಬಿದ್ದ ಮಮತಾ ಕಣ್ಣು ಬಿಟ್ಟಾಗ, ವಾಟುವಾಲಿರುವ ನೇಸರನ ಕೆಂಪು ಕಿರಣಗಳು ಕಿಟಕಿಯಿಂದ ಒಳತೂರಿ ಆಕೆಯ ಮುಖವನ್ನ ಬೆಳಗುತ್ತಿತ್ತು. ಜೀವ ಝಲ್ ಎಂದಂತಾಗಿದ್ದರಿಂದ ಹಾಸಿಗೆಯಿಂದ ಏಳಲು ಮನಸಾಗಿರಲಿಲ್ಲ. ತನ್ನ ಬದುಕಿನ ಭಾಗವೇ ಆಗಿರುವ ಕನಸಿನ ಗುಂಗಿನಿಂದ ಹೊರಬಂದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಮಮತಾಳ ಕೈಕಾಲು ಥರಥರ ನಡುಗುತ್ತಿದ್ದವು. ಮಲಗಿದ್ದಲ್ಲಿಯೇ ಕೋಣೆಯ ಸುತ್ತ ಕಣ್ಣಾಯಿಸಿದಾಗ ತನ್ನ ಹಾಸಿಗೆಗೆ ಹತ್ತಿರದಲ್ಲಿದ್ದ ಬರಿದಾದ ತೊಟ್ಟಿಲು ಆಕೆಯನ್ನು ಅಣಕಿಸುತ್ತಿರುವಂತೆ ಭಾಸವಾಗುತ್ತಿತ್ತು. ಮನಸು ಅನುಭವಿಸುತ್ತಿರುವ ಖಾಲಿತನವನ್ನು ಪ್ರತಿನಿಧಿಸುತ್ತಿರುವ ತೊಟ್ಟಿಲನ್ನು ನೋಡಲಾಗದೆ ಗೋಡೆಯ ಕಡೆ ದೃಷ್ಟಿ ಬದಲಿಸಿದಳು. ಜಗತ್ತಿನ ರೂಪರಾಶಿಯೆಲ್ಲ ಅವರ ನಗುವಿನಲ್ಲಿ ಮನೆ ಮಾಡಿಕೊಂಡಿದೆಯೇನೋ ಎಂಬಂತೆ ನಗುವ ಸ್ನಿಗ್ಧ ಚೆಲುವಿನ ಮುದ್ದುಮಕ್ಕಳ ಚಿತ್ರಪಟಗಳು ಗೋಡೆಯನ್ನಲಂಕರಿಸಿದ್ದವು. ಸಾಲು ಚಿತ್ರಪಟಗಳ ಮಕ್ಕಳಲ್ಲಿ ತನ್ನ ಮಗುವಿನ ಹೋಲಿಕೆ ಹುಡುಕುತ್ತಿರುವ ಮಮತಾಳ ಕಂಗಳು ಸದ್ದು ಮಾಡದೆ ಒದ್ದೆಯಾಗಿದ್ದವು.
 
ಮಮತಾ ಮಲಗಿರುವ ಕೋಣೆಯಲ್ಲಿ ನಿಟ್ಟುಸಿರಿನೊಂದಿಗೆ ಆವರಿಸಿರುವ ನೀರವ ಮೌನವನ್ನು ಕದಡುವಂತೆ ಹೊರಗೆ ಗದ್ದಲವಾಗುತ್ತಿತ್ತು. ಬಹಳ ಹೊತ್ತಿನಿಂದ ಐದಾರು ಜನಕ್ಕೆ ಚಳ್ಳೇಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡುವ ನಾಟಿಕೋಳಿಯನ್ನು ಹಿಡಿಯಲು ಆ ಓಣಿಯ ಹುಡುಗರೆಲ್ಲ ಕೂಡು ಗುಂಪಾಗಿದ್ದರು. ಇನ್ನೇನು ಕೋಳಿ ಕೈಗೆ ಸಿಕ್ಕೇಬಿಡ್ತು ಎನ್ನುವಾಗ ಪುಸುಕ್ಕನೆ ಜಾರಿ ಹೋಗುತ್ತಿತ್ತು. ಆಳೆತ್ತರದವರೆಗೂ ಹಾರುತ್ತಾ ಮನೆಯ ಸೊಂದುಗೊಂದುಗಳಲ್ಲಿ ನಯವಾಗಿ ನುಸುಳಿಕೊಳ್ಳುತ್ತಿತ್ತು. ಕೊನೆಗೆ ಓಡಿ ಓಡಿ ಕೋಳಿಗೂ ಸುಸ್ತಾಗಿದ್ದರಿಂದ, ಆಟನೂ ಮುಗೀತು, ತಂತೀನು ತುಂಡಾಯ್ತು ಎನ್ನುವಂತೆ ಪಕ್ಕದ ಮನೆಯವರ ಅಂಗಳದಲ್ಲಿ ಬೆಳೆದಿದ್ದ ಮಲ್ಲಿಗೆ ಬಳ್ಳಿಯ ಪೊದೆಯಲ್ಲಿ ಸೇರಿಕೊಂಡಾಗ, ಅನಾಯಾಸವಾಗಿ ಸೆರೆಸಿಕ್ಕ ಕೋಳಿ ಗಾಬರಿಯಿಂದ ಕೂಗುತ್ತಾ ರೆಕ್ಕೆಗಳನ್ನು ಬಡಿಯುತ್ತಿತ್ತು. ಆಗ ಮಮತಾಳ ಗಂಡ ಮಂಜಣ್ಣ ಕೋಳಿ ಕಾಲಿಗೆ ಗೋಣಿದಾರ ಕಟ್ಟಿ, ಹಗ್ಗದ ಮಂಚದಡೇಲಿ ಬಿಟ್ಟು, ಪಕ್ಕದ ಮನೆ ಸರೋಜಕ್ಕನ ಜೊತೆ ಮಾತಿಗೆ ಕುಳಿತಿದ್ದ ತನ್ನ ತಾಯಿಗೆ ಬಿಸಿನೀರು ಕಾಯಿಸಲು ಹೇಳಿ, ಬೇರೆ ಕೆಲಸದಲ್ಲಿ ನಿರತನಾದ.
 
‘ಜಲ್ದಿ ಬತ್ತೀನಿ ತಡಿಯೇ ಸರೋಜ’ ಅಂತೇಳಿ ಗುಜ್ಜಮ್ಮ ಒಳಗೆ ಹೋಗಿ ನಾಕು ಚೊಂಬು ಹಿಡಿಯುವಂತ ಪಾತ್ರೆಯಲ್ಲಿ ನೀರು ಹಾಕಿ ಗ್ಯಾಸ್ ಒಲೆ ಮೇಲಿಟ್ಟು, ಕೋಳಿ ಸಾರಿಗೆ ಖಾರ ಅರೆಯಲು ಅಡುಗೆ ಮನೆಯಲ್ಲಿನ ಕಡಪ ಬಂಡೆ ಸೆಲ್ಫಿನ ಮೇಲಿದ್ದ ಡಬ್ಬಗಳಲ್ಲಿರುವ ಗಸಗಸೆ, ಚಕ್ಕೆ, ಲವಂಗ, ಮಸಾಲೆಮೊಗ್ಗು, ಅರಿಶಿಣದಕೊನೆ, ಚಕ್ಕೆಮೊಗ್ಗು, ಹಿಡಿಯೋಟು ಒಣಮೆಣಸಿನಕಾಯಿ, ನಾಕುಪಾವು ಬೆಳ್ಳುಳ್ಳಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ಬಂದಳು. ಮೆಣಸಿನಕಾಯಿಯ ತುಂಬು ಮುರಿದಾಕಿ, ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ, ‘ಏನೇ ಗುಜ್ಜಮ್ಮ ಕೋಳಿ ಸಾರಿನ ಆರ್ಭಟ ಜೋರಾಗಿದ್ದಂಗಿದೆ’ ಅಂತೇಳಿ ಸರೋಜಮ್ಮ ಮಾತಿಗೆ ಮೊದಲಿಟ್ಟಳು. ‘ಬಾಣ್ತಿಗೆ ನಾಟಿ ಕೋಳಿನ ಸಾರು ಇಟ್ರೆ ಒಳ್ಳೇದಂತೆ. ಅದ್ಕೆ ಮನೇಲಿ ಮೊಟ್ಟೆ ಇಡೋ ಹ್ಯಾಟೆ ಇತ್ತು. ಈ ಟೈಮಲ್ಲಿ ಒಳ್ಳೆ ನೆಣವಾಗಿರುತ್ತೆ ಅಂತೇಳಿ ಅದ್ನೆ ಕೊಯ್ದು ಸಾರು ಮಾಡ್ತೀನಿ’ ಎಂದು ಬಾಯ್ತುಂಬ ಇದ್ದ ಅಡಕೆಲೆ ಜೊಲ್ಲನ್ನ ಸೀರೆ ಮೇಲೆ ತೊಟ್ಟಿಸಿಕೊಂಡ ಗುಜ್ಜಮ್ಮ ನಿರ್ಭಾವುಕವಾಗಿ ಹೇಳಿದಳು. ‘ನಿನ್ನ ಸೊಸೇನೆ ಬಂಗಾರದ ಮೊಟ್ಟೆ ಇಡೋ ಕೋಳಿ ಆಗಿರುವಾಗ, ಪಾಪ ಈ ಕೋಳಿನ ಕೊಯ್ಯೋದೇನು ದೊಡ್ಡದಲ್ಲ ಬಿಡು’ ಎಂದುಕೊಂಡ ಸರೋಜಮ್ಮ ಮನಸಲ್ಲೆ ಕುದ್ದು ನೀರಾಗಿದ್ದಳು. ಆ ಹೊಟ್ಟೆಕಿಚ್ಚನ್ನ ಮಾತಿನ ಮೂಲಕ ತಣ್ಣಗೆ ಹೊರ ಹಾಕಿದಳು.
 
‘ಯಂಗೋ ಬಿಡಮ್ಮ, ನಿನ್ನ ಸೊಸೆಯಿಂದ ಒಳ್ಳೆ ದುಡಿಮೆ ಆಯ್ತು’ ಎಂದ ಸರೋಜಮ್ಮನ ಮಾತಿನ ಹಿಂದಿರುವ ವ್ಯಂಗ್ಯದ ಮೊನೆ ಗುಜ್ಜಮ್ಮನ ಎದೆಗೆ ನಾಟಿದಂತಾಗಿತ್ತು. ‘ಯಾತ್ರ ದುಡಿಮೆ ಸರೋಜ ಜೀವಾನ ಪಣಕ್ಕಿಡೊ ಕೆಲ್ಸ ಅದು. ನಮಗು ದುಡ್ಡಿನ್ದು ಬಾಳಾ ಉಪರಾಲು ಇರೋದರಿಂದ ಒಪ್ಪಿಕೊಂಡಂಗೆ ಆಯ್ತು’ ಎಂದಳು. ಸೊಸೆ ಮೇಲೆ ಹುಸಿ ಅಕ್ಕರೆ ತೋರಿಸಿದ ಗಟಾಣಿ ಹೆಂಗಸಾದ ಗುಜ್ಜಮ್ಮನ ಮೆದು ಮಾತು ಕೇಳಿ ಸರೋಜಮ್ಮ ಒಳಗೊಳಗೆ ಹಲ್ಲು ಮಸೆದಿದ್ದಳು. ಕೈಗೆ ಬಂದ ತುತ್ತು ಬಾಯಿಗೆ ಬರ್ದಂಗಾಯ್ತು ಎನ್ನುವ ಸಂಕಟ ಸರೋಜಮ್ಮನ ಮನದಾಳದಲ್ಲಿ ಮನೆ ಮಾಡಿಕೊಂಡಿದ್ದರಿಂದ; ‘ನನ್ನ ಸೊಸೆನು ಇದಾಳೆ ಏತ್ಲಾಂಡಿಯಂತೋಳು. ಅವಳಿಗೆ ಅದೇನೊ ಗೂರು ಐತಂತೆ. ನಮಗೆಲ್ಲಿ ಗಂಟುಬಿದ್ಲೊ ಏನೋ! ನನಗಂತು ಸುಸ್ನೋಟು ಇಷ್ಟ ಇರ್ಲಿಲ್ಲ. ಮ್ಯಾಗಳ ಥಳುಕು ಬಳುಕಿಗೆ ಬೆರಗಾದ ಲೇವ್ಡಿ ನನ್ನಾಟಗಳ್ಳ, ನನಗೆ ಅವಳೇ ಬೇಕಂತ ಹಟ ಮಾಡಿ ಮದುವೆಯಾದ. ಎಲ್ಲ ನಮ್ ಕರ್ಮ’ ಅಂತೇಳಿ ಸೊಸೆನ, ಮಗನ್ನ ಮಾನಾಇಚ್ಚೆ ಬಯ್ದಿದ್ದಳು. ಅಷ್ಟೊತ್ತು ಕೆಂಡದ ಮೇಲೆ ನಿಂತು ಥಣ ಥಣ ಕುಣಿದವಳಂತಾಡಿದ ಸರೋಜಮ್ಮ ಅರೆಗಳಿಗೆ ಹೊತ್ತಿನೊಳಗೆ ಆವೇಶ ಅಣಗಿದಂತಾಗಿದ್ದರಿಂದ, ‘ನಿನ್ ಸೊಸೆ ಎಲ್ಲೆ ಗುಜ್ಜಿ, ಕಾಣ್ತಾನೆ ಇಲ್ಲ?’ ಎಂದು ನಿರುಂಬಳವಾಗಿ ಕೇಳಿದ್ದಳು.
 
‘ಒಡವೇರು ಒಡವೆ ಕೇಳಿದ್ರೆ ಮದ್ಲಿಂಗಿತ್ತಿ ಗುರುಗುಟ್ಟಿದ್ಲು ಅಮ್ಮಂಗೆ, ಅವರ ಕೂಸ್ನ ಅವರು ತಗಂಡು ಹೋದಾಗಿನಿಂದ ಈಯಮ್ಮ ಮುಸುಗೊದ್ದುಕೊಂಡು ಮುಸಿಮುಸಿ ಅಳ್ತಿದಾಳೆ’ ಎಂದು ಮೇದಾವಂತಿಕೆಯಿಂದ ಸೊಸೆಯ ಬಗ್ಗೆ ತಾತ್ಸಾರವಾಗಿ ಹೇಳಿದ ಗುಜ್ಜಮ್ಮನ ಅಸಡ್ಡೆ ಮಾತುಗಳು ಮಮತಾಳ ಮನದ ಕೊಳಕ್ಕೆ ಕಲ್ಲೆಸೆದಂತಾಗಿದ್ದರಿಂದ ಇನ್ನಿಲ್ಲದ ಸಂಕಟವಾಗಿತ್ತು. ಸುರಿಸುವ ಕಂಬನಿಗೂ ಸುಂಕ ಕೇಳುವ ಈ ಜಗತ್ತು, ಅಳತೆಗೂ ಮೀರಿದ ಅಮ್ಮನ ಅಕ್ಕರೆಯನ್ನು ಅರಿಯಲಾರದು ಎಂದುಕೊಂಡ ಮಮತಾಳಿಗೆ ಕಂಡ ಕನಸು, ಕೇಳಿಸಿಕೊಂಡ ಮಾತುಗಳಿಂದ ತನ್ನ ಕರುಳ ಕುಡಿಯ ನೆನಪು ಉಮ್ಮಳಿಸಿಕೊಂಡು ಬಂದು, ಆಕೆಯ ಎದೆ ಬಿಗಿ ಹಿಡಿದಂತಾಗಿದ್ದರಿಂದ ಎದೆಹಾಲು ರವಿಕೆಯನ್ನು ತೋಯಿಸುತ್ತಿತ್ತು. ಮನಸು ನೋವಿನ ಆಲೆಮನೆಯಲ್ಲಿ ಬೇಯುತ್ತಿತ್ತು.
 
ಜಾರಿದ ಕಂಬನಿಯು ನೆನಪಿನ ಒಂದು ಬಿಂದು...
ನಾವು ಯಾವುದನ್ನ ನಿರಾಕರಿಸುತ್ತೇವೆಯೋ ಅದನ್ನೇ ಒಮ್ಮೊಮ್ಮೆ ನಮ್ಮ ಬದುಕಿನ ಭಾಗವಾಗಿಸುವ ಹುನ್ನಾರವನ್ನು ವಿಧಿಯೆಂಬ ಮುದಿಹೆಣ್ಣು ಆಗಾಗ ಮಾಡುತ್ತಲೇ ಇರುತ್ತಾಳೆಂಬುದನ್ನು ಮಮತಾಳ ಬಾಳಿನಲ್ಲಿ ರುಜುವಾತು ಪಡಿಸಿದ್ದಳು. ಮದುವೆಯಾದ ಹೊಸತರದಲ್ಲಿ ಗಂಡನ ಮನೆಗೆ ಬಂದ ಮಮತಾಳಿಗೆ ನಿಧಾನಕ್ಕೆ ನೆರೆಹೊರೆಯವರು, ಸರಿವಾರಿಗೆಯ ಸರೀಕರು, ಊರು ಅರ್ಥವಾಗತೊಡಗಿತ್ತು. ಆ ಊರಿನಲ್ಲಿ ಅಂದವಾದ ಹೆಂಗಸರು ಮಗು ಹೆರುವ ಯಂತ್ರಗಳಂತೆ ಬಾಡಿಗೆ ತಾಯಿಯೆಂಬ ದುಡಿಮೆಯಲ್ಲಿ ನಿರತರಾಗಿರುವುದು ಕಂಡು ಸೋಜಿಗಪಟ್ಟಿದ್ದಳು.
 
‘ಇದರಲ್ಲಿ ಸೋಜಿಗ ಪಡುವಂತಹದ್ದು ಏನಿದೆ ಮಮತ? ಬರಿದಾಗಿರುವ ಇನ್ನೊಂದು ಹೆಣ್ಣಿನ ಮಡಿಲು ತುಂಬಿಸುವ ಪುಣ್ಯದ ಕೆಲಸ ಎಷ್ಟು ಜನಕ್ಕೆ ಸಿಗುತ್ತೆ ಹೇಳು? ನಮಗೆ ಹಣದ ಅವಶ್ಯಕತೆ ಇರುವಂತೆ, ಅವರಿಗೆ ಮಗುವಿನ ಹಂಬಲ ಇರುತ್ತೆ. ಇದರಲ್ಲಿ ತಪ್ಪೇನು? ಸೆರಗು ನಿಂತಾಗಿನಿಂದ ಮಗುವನ್ನು ಹೆತ್ತುಕೊಡುವ ತನಕ ಕುಡಿದ ನೀರು ಅಲುಗಾಡದಂತೆ ಸಾಕುತ್ತಾರೆ. ನಮ್ಮ ಮಡಿಲು ಬರಿದು ಮಾಡಿಕೊಂಡು ಅವರ ಮಡಿಲಿಗೆ ಮಗುವನ್ನು ಹಾಕುವ ಸಮಯದಲ್ಲಿ ಒಂದಿಷ್ಟು ಸಂಕಟ ಆದೇ ಆಗುತ್ತೆ. ದಿನ ಕಳೆದಂತೆಲ್ಲಾ ಆ ಗಾಯಾನೂ ಮಾಯುತ್ತೆ’ ಅಂತೇಳಿ ತನ್ನ ಸರಿವಾರಿಗೆಯ ಅತ್ತೆ ಮನೆ ಸೊಸೆಯೊಬ್ಬಳು, ವಿಷಾದದ ಊರುಗೋಲಿನೊಂದಿಗೆ ಅನಿವಾರ್ಯವೆಂಬ ಹಗ್ಗದ ಮೇಲಿನ ನಡಿಗೆಯ ಬದುಕಿಗೆ ಒಗ್ಗಿಕೊಂಡವಳಂತೆ ಹೇಳಿದಳು.
 
‘ಅಪದ್ದ ಯಾಕೆ ನುಡಿತಿಯ ನೇತ್ರ. ಬೇರೆಯವರ ಮಗುವಿಗೆ ನೀನು ಬಾಡಿಗೆ ತಾಯಿ ಆಗಬೇಕು. ಇಲ್ಲಾಂದ್ರೆ ಈ ಮನೆಯಲ್ಲಿ ನೀನು ಅರಗೀಸು ಕಾಪರ ಮಾಡಂಗಿಲ್ಲ ಅಂತೇಳಿ ಅತ್ತೆ, ಮಾವ, ಗಂಡ ಎಲ್ಲರು ಹಣದ ಅಮಲು ಹತ್ತಿಸಿಕೊಂಡು ಹೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದು ನಮಗೇನು ಗೊತ್ತಿಲ್ವೇನೆ?’ – ಅಂತೇಳಿ ಅತ್ತೆಮನೆ ಸೊಸೆಯರೆಲ್ಲ ಮಧ್ಯಾಹ್ನದ ಹೊತ್ತು ಕೂಡು ಗುಂಪ್ಲಾದಾಗ ಮಾತಾಡಿದ್ದರು. ಆ ಮಾತಿಗೆ ಕಣ್ಣಕುಲಿಕೆಯಲಿ ಜಿನುಗಿದ ಕಂಬನಿಯನ್ನು ಬೇರೆಯವರಿಗೆ ಕಂಡೂ ಕಾಣದಂತೆ ಸೀರೆ ಸೆರಗಿನಿಂದ ಒರೆಸಿಕೊಳ್ಳುತ್ತಾ ತನ್ನ ಮನೆಕಡೆ ಹೋಗುವ ನೇತ್ರ, ಮಮತಾಳಿಗೆ ಅತೃಪ್ತಿಯ ಅಗ್ನಿಕುಂಡದಲ್ಲಿ ಬೇಯುತ್ತಿರುವವಳಂತೆ ಕಾಣುತ್ತಿದ್ದಳು. 
 
ಆ ಊರಲ್ಲಿ ಹಡೆಯುವ ಅರ್ಹತೆ ಪಡೆದುಕೊಂಡ ಆರೋಗ್ಯವಂತ ಸೊಸೆಯರಿಗೆ ಮಾತ್ರ ಎಲ್ಲಿಲ್ಲದ ಬೆಲೆಯಿತ್ತು. ಉಳಿದವರಿಗೆ ನಿತ್ಯವೂ ನರಕ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿತ್ತು. ಕತ್ತಿಗಿಂತಲೂ ಹರಿತ ಅತ್ತೆ–ಮಾವಂದಿರ, ಗಂಡನ ಮೂದಲಿಕೆಯ ಮಾತುಗಳ ಇರಿತ ಆ ಊರಿನ ಅನೇಕ ಅಮಾಯಕ ಸೊಸೆಯಂದಿರ ಕೋಮಲ ಹೃದಯವನ್ನು ಘಾಸಿಗೊಳಿಸುತ್ತಿತ್ತು. ಯಾರೊಂದಿಗೂ ಹೇಳಿಕೊಳ್ಳಲಾಗದ ನೋವಿನೊಂದಿಗೆ ದಿನದೂಡುವವರನ್ನು ಕಂಡು ಮಮತಾಳಿಗೆ ಕರುಮ್ಮೆನಿಸುತ್ತಿತ್ತು. ಅಂತಹ ನಿರ್ಭಾವುಕ ಖುಷಿಯನ್ನು ಅನುಭವಿಸಲು ನನ್ನಿಂದಾಗದು ಎಂದುಕೊಂಡ ಮಮತಾಳಿಗೆ ಮದುವೆಯಾಗಿ ಮೂರು ವರ್ಷ ತುಂಬುವುದರೊಳಗೆ ಒಂದು ಕೂಸಿನ ತಾಯಿಯಾಗಿ ಮುಚ್ಚಟೆಯಾಗಿ ಕಾಪರ ಮಾಡಿಕೊಂಡಿರುವುದನ್ನು ಕಂಡು ಕಾಲವೆಂಬ ಕ್ರೂರಪ್ರಾಣಿ ಮುಸಿಮುಸಿ ನಗುತ್ತಿತ್ತು.
 
ಊರಲ್ಲಿ ಬಾಡಿಗೆತಾಯಿ ಆಗಲು ಆರೋಗ್ಯವಂತ ಹೆಂಗಸರ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಏರುಗತಿಯಲ್ಲಿತ್ತು. ಸುಲಕ್ಷಣವಾಗಿರುವ ಸುಂದರವಾದ ಹೆಣ್ಣುಗಳೆಲ್ಲ ಮಗು ಹೆರುವ ಯಂತ್ರಗಳಂತೆ ಮಮತಾಳಿಗೆ ಕಾಣುತ್ತಿದ್ದರು. ಮಳೆ–ಬೆಳೆ ಇಲ್ಲದೆ ನಡುಹಗಲ ಸುಡುಬಿಸಿಲಿನ ಬಡತನದಲ್ಲಿ ಬೇಯುತ್ತಿದ್ದ ಜನಕ್ಕೆ ಬಾಡಿಗೆ ತಾಯಿಯ ದುಡಿಮೆ ತಂಪು ನೀಡುವ ನೆರಳಿನಂತಿತ್ತು. ಮಗುವಿನ ಹಂಬಲದೊಂದಿಗೆ ಬಾಡಿಗೆ ತಾಯಿಯ ಹುಡುಕಾಟ ನಡೆಸಲು ಊರಿಗೆ ಬರುವ ಹಣವಂತರನ್ನು ಒಲಿಸಿಕೊಳ್ಳಲು ಯಾವು ಯಾವುದೋ ಊನಗಳ ಕಾರಣಕ್ಕೆ ಖಾಲಿ ಇದ್ದವರೆಲ್ಲ ಮುಗಿಬೀಳುತ್ತಿದ್ದರು. ಒಂದು ಸಲ ಆ ರೀತಿ ಮುಗಿಬಿದ್ದವರಲ್ಲಿ ಒಬ್ಬಳಾದ ಸರೋಜಮ್ಮ ತನ್ನ ಒಯ್ಯಾರದ ಮಾತುಗಳಿಂದ ಬಾಂಬೆಯಲ್ಲಿ ನೆಲೆಸಿರುವ ಮಂಗಳೂರು ಮೂಲದ ಉದ್ಯಮಿಯಾದ ಹಿತೇಶ್ ನಿರಾಣಿಯನ್ನು ಒಪ್ಪಿಸಿದ್ದಳು. ಆಕೆಯ ಸೊಸೆ ಜ್ಯೋತಿಯನ್ನು ಮೆಡಿಕಲ್ ಚೆಕಾಫ್‌ಗೆಂದು ಪಟ್ಟಣಕ್ಕೆ ಕರೆದುಕೊಂಡು ಹೋಗಿ ನಿರಾಸೆಯಿಂದ ಹಿಂದಿರುಗಿದ್ದರು. ಸರೋಜಮ್ಮನ ಸೊಸೆಗೆ ಅಸ್ತಮಾ ಇದೆಯೆಂಬ ಕಾರಣಕ್ಕೆ ಹಿತೇಶ್ ನಿರಾಣಿಯವರು ನಿರಾಕರಿಸಿದ್ದರೆಂದು ಆಕೆಯ ವಿರೋಧಿಗಳು ಊರು ತುಂಬಾ ಟಾಂಟಾಂ ಹೊಡೆದಿದ್ದರು. ಆ ಮೂಲಕ ಅನಾಯಾಸವಾಗಿ ಒಬ್ಬ ಎದುರಾಳಿಯನ್ನ ಹೊಡೆದುರುಳಿಸಿದಂತಾಗಿತ್ತು.
 
ಅದೇ ಸಮಯದಲ್ಲಿ ಸರೋಜಮ್ಮನ ಮನೆ ಪಕ್ಕದಲ್ಲಿದ್ದ ಗುಜ್ಜಮ್ಮನ ಸೊಸೆ ಮಮತಾಳನ್ನು ನೋಡಿದ ಹಿತೇಶ್ ‘ನನ್ನ ಮಗುವಿಗೆ ಈಕೆ ತಾಯಿಯಾದರೆ...’ ಎಂದುಕೊಳ್ಳುತ್ತಾನೆ. ಎಣ್ಣೆಗೆಂಪಗಿದ್ದ ಮಮತಾ ಒಂದು ಕೂಸಿನ ತಾಯಿಯಾಗಿದ್ದರೂ ರೂಪಸ್ಥೆಯಾಗಿದ್ದಳು. ದುಂಡುಮುಖ ತೀಡಿದಹುಬ್ಬು ಬಟ್ಟಲಗಣ್ಣು. ನೀಳವಾದ ಮುಂಗುರುಳು. ನಕ್ಕರೆ ಗುಳಿ ಬೀಳುವ ಕೆನ್ನೆಯ ಮಾದಕ ಚೆಲುವು ಅವರಿಗೂ ಇಷ್ಟವಾಗಿತ್ತು. ತನ್ನ ಮನದ ಹಂಬಲವನ್ನು ಗುಜ್ಜಮ್ಮನ ಬಳಿ ಹೇಳಿಕೊಂಡಾಗ, ಅಂತಹ ಸುದಿನಕ್ಕಾಗಿ ಕಾದುಕೊಂಡಿದ್ದ ಗುಜ್ಜಮ್ಮ ಸೊಸೆಯನ್ನು ಒಪ್ಪಿಸಲು ಊಕರಿಸಿದ್ದಳು. ಆದರೆ, ಮಮತ ಮೊದಮೊದಲು ಬಡಪಟ್ಟಿಗೆ ಒಪ್ಪದಿದ್ದಕ್ಕೆ ಮಾತಿನ ಛಡಿ ಏಟುಗಳು ಬೀಳತೊಡಗಿದವು. ‘ನಿನ್ ಕಾಲಕೀರ್ತಿಯಲ್ಲಿ ನಮ್ ಮನೆತನ ಪರ್ಕೆ ತಗಂಡು ಗುಡಿಸಿದಂಗಾಯ್ತು. ಮನೇಲಿ ಕಾಳು–ಕಡಿ ಯಾವಾಗಲೂ ಗೀಜಗನ ಗೂಡು ಇದ್ದಂತೆ ಇರ್ತಿತ್ತು. ಈಗ ಉಂಬಾ ಮುದ್ದೆಗೆ ಭಂಗ ಆಗಿದೆ’ ಅಂತೇಳಿ ಗುಜ್ಜಮ್ಮ ಮೂದಲಿಸುತ್ತಿದ್ದಳು. 
 
ಅತ್ತೆಯ ಅಸಡ್ಡೆ ಮಾತುಗಳು ಕೇಳಿ ಪಿತ್ತಾನ ನೆತ್ತಿಗೇರಿಸಿಕೊಂಡ ಮಮತಾಳು ‘ನಿನಗೆ ದುಡ್ಡಿನ ದೆವ್ವ ಹಿಡಿದಿದ್ರೆ ನೀನೆ ಅವರ ಮಗುನ ಹೆತ್ತುಕೊಡು. ನನಗ್ಯಾಕೆ ಹೇಳ್ತೀಯ? ಯಾರ್ಯಾರಿಗೋ ಮಗೂನ ಹೆತ್ತು ಕೊಡೋಕಲ್ಲ ನಮ್ಮಪ್ಪ ಅವ್ವ ನಿಮ್ ಮಗನಿಗೆ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಟ್ಟಿರೋದು’ ಅಂತ ಎತ್ತರದ ದನಿಯಲ್ಲಿ ಹೇಳಿದಾಗ, ಗುಜ್ಜಮ್ಮ ತೆಪ್ಪಗಾಗದೆ ಊರು–ಕೇರಿ ಒಂದಾಗುವಂತೆ ಕೂಗಾಡತೊಡಗಿದ್ದಳು. ಅತ್ತೆ ಸೊಸೆಯರ ಜಗಳ ನೋಡಿ, ಈ ದಿನ ಯಾಕೋ ನನ್ನ ಗಳಿಗೇನೆ ಸರಿಯಿಲ್ಲ ಎಂದುಕೊಂಡ ಹಿತೇಶ್ ಕುಲಕರ್ಣಿ, ಮಮತಾಳ ಗಂಡ ಮಂಜಣ್ಣನಿಗೆ ದುಂಬಾಲು ಬಿದ್ದ. ‘ನಿಮ್ಮ ತಾಯಿ ದುಡುಕಿ ಏನೇನೊ ಮಾತಾಡಿ, ನಿಮ್ಮ ಹೆಂಡ್ತಿ ಮನಸು ನೋಯಿಸಿದಾರೆ. ಹೆಣ್ಣುಮಕ್ಕಳನ್ನು ಬಲವಂತಕ್ಕೆ ಮಣಿಸೋದಕ್ಕಾಗಲ್ಲ. ಒಂದು ಏದು ನಿಮಿಷ ನಿಮ್ಮ ಸಮ್ಮುಖದಲ್ಲಿ ನಿಮ್ಮ ಮನೆಯವರ ಜೊತೆ ಮಾತಾಡೋಕೆ ಅವಕಾಶ ಕಲ್ಪಿಸಿ. ಪ್ಲೀಸ್...’ ಅಂತೇಳಿ ದೀನವಾಗಿ ಕೇಳಿಕೊಂಡಿದ್ದ. ಆಗ ಮಂಜಣ್ಣ ತಾಯೀನ ಗದರಿ ಕಣ್ಮರೆಗೆ ಕಳಿಸಿದ ಮೇಲೆ, ‘ನೀನು ಬಾಡಿಗೆ ತಾಯಿ ಆಗೋದುಬಿಡೋದು ಒಂದು ಕಡೆಗಿರ್ಲಿ ಮಮತಾ. ನಮ್ ಮನೆ ಬಾಗಿಲಿಗೆ ಬಂದು ಏನೋ ಹೇಳ್ತೀನಿ ಅನ್ನೋರು ಮಾತು ಕೇಳಿಸಿಕೊಳ್ಳೋದು ನಮ್ಮ ಧರ್ಮ’ ಅಂತ ಹೆಂಡ್ತಿಗೆ ಮೆದು ಮಾತಿನಲ್ಲಿ ತಿಳಿಹೇಳಿ, ಅಡಿಗೆ ಮನೆಯಲ್ಲಿ ಮುನಿಸಿಕೊಂಡು ಕುಳಿತಿದ್ದವಳನ್ನು ಮುಂದ್ಲು ಕೋಣೆಗೆ ಕರೆದುಕೊಂಡು ಬಂದಿದ್ದ.
 
ಅರೆಪೆಟ್ಟು ತಿಂದ ನಾಗರಹಾವಿನಂತಿದ್ದ ಮಮತಾಳು ಒಲ್ಲದ ಮನಸ್ಸಿನಿಂದಲೇ ಹಿತೇಶ್ ಕುಲಕರ್ಣಿಯ ಮಾತಿಗೆ ಕಿವಿಯಾನಿಸಿದಳು. ‘ನಿಮ್ಮನ್ನು ಒಪ್ಪಿಸಬೇಕಂತ ನಾನು ನನ್ನ ವ್ಯಥೆ ಹೇಳ್ತಾ ಇಲ್ಲ ತಾಯಿ. ನಮ್ಮ ನೋವಿನ ನಿಜ ನಿಮಗೆ ಗೊತ್ತಾಗಲಿ ಅಂತ, ಅಷ್ಟೆ. ನಮ್ಮದೊಂದು ಪುಟ್ಟ ಸಂಸಾರ. ಅಪ್ಪ ಮಾಡಿದ ಆಸ್ತಿಯನ್ನು ಹತ್ತುಪಟ್ಟು ಹೆಚ್ಚಿಸಿಕೊಂಡು ದೊಡ್ಡ ವ್ಯಾಪಾರಸ್ಥನಾಗಿ ಬೆಳೆದೆ. ಯಾವುದಕ್ಕೂ ಕೊರತೆಯಿಲ್ಲಾ ಅನಿಸುವಾಗ, ಜೀವನ ಪೂರ ಮರೆಯೋಕಾಗದಂತಹ ನೋವನ್ನು ಆ ದೇವರು ನಮ್ಮ ಪಾಲಿಗೆ ಬಳುವಳಿಯಾಗಿ ಕಳಿಸಿದ್ದನ್ನು ನಿರಾಕರಿಸೋಕೆ ಆಗಲಿಲ್ಲ. ನನ್ನ ಹೆಂಡತಿ ಚೊಚ್ಚಲ ಹೆರಿಗೆಯಲ್ಲಿರುವಾಗ, ಮಗು ಹೊಟ್ಟೆಯಲ್ಲೇ ತೀರಿಕೊಂಡಿತ್ತು.
 
ಆಪರೇಷನ್ ಮಾಡಿ ಮಗೂನ ಹೊರತೆಗೆದ ಮೇಲೆ ಈಕೆ ಮತ್ತೆ ಮಗುವಿಗೆ ತಾಯಿಯಾದರೆ ದೊಡ್ಡ ಜೀವಕ್ಕೆ ಅಪಾಯವೆಂದು ಡಾಕ್ಟ್ರು ಹೇಳಿದಾಗ, ಆ ಕ್ಷಣದಲ್ಲಿ ನನ್ನ ಹೆಂಡತಿ ಜೀವ ಮುಖ್ಯ ಎನಿಸಿ ಗರ್ಭಚೀಲ ತೆಗೆಸಿಬಿಟ್ಟೆ. ಆ ಶಾಕ್‌ನಿಂದ ನನ್ನವಳು ಚೇತರಿಸಿಕೊಳ್ಳಿಲಿಲ್ಲ. ಮಂಕು ಹಿಡಿದವಳಂತೆ ದಿನಗಳನ್ನು ದೂಡುತ್ತಿದ್ದಳು. ನೂರಾರು ಕೋಟಿಯ ಆಸ್ತಿಗೆ ವಾರಸುದಾರರು ಇಲ್ದಂಗಾಗುತ್ತೆ. ಎರಡನೇ ಮದುವೆ ಆಗೆಂದು ಬಂಧುಗಳು ಒತ್ತಾಯಿಸಿದರೂ ನನ್ನ ಮನಸು ಒಪ್ಪಲಿಲ್ಲ. ಬಿಂಜೋ ಎನ್ನುವ ಮನೆಯಲ್ಲಿ ಬಂಜೆ ಎನ್ನುವ ಅಪಮಾನದ ಭಾರ ಹೊತ್ತುಕೊಂಡು ಸರೀಕರಿಗೆ ಸದರವಾಗಿ ಬಾಳೋಕಾಗದೆ ಎರಡು ಸಲ ಡೆತ್‌ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಳ್ಳೋಕೆ ಪ್ರಯತ್ನಿಸಿದ್ಲು. ದೇವರು ದೊಡ್ಡವನು, ಏನೂ ಆಗ್ಲಿಲ್ಲ. ಮಕ್ಕಳಿಲ್ಲದ ಮನೆ ಎಷ್ಟೊಂದು ಬೇಸರ ತರಿಸುತ್ತೆಂದರೆ, ಬದುಕಿರುವುದಕ್ಕಿಂತ ಸಾಯೋದೆ ಮೇಲು ಎನಿಸುವಷ್ಟು. ಅಂತಹ ಒಂಟಿತನವೆಂಬ ನರಕದಲ್ಲಿ ನರಳುತ್ತಿರುವ ನನ್ನ ಹೆಂಡ್ತಿಯನ್ನು ತಾಯಿಯನ್ನಾಗಿ ಮಾಡಿ. ಬರಿದಾಗಿರುವ ನಮ್ಮ ಮನೆಯನ್ನ ನನ್ನವಳ ಮಡಿಲನ್ನ ತುಂಬುವುದಕ್ಕೆ ಒಂದು ಮಗುವನ್ನು ಹೆತ್ತುಕೊಟ್ಟರೆ ನಿನ್ನ ಉಪಕಾರದ ಋಣವನ್ನು ನಾವು ಈ ಜನ್ಮದಲ್ಲಿ ಮರೆಯೋದಿಲ್ಲ ತಾಯಿ’ ಅಂತೇಳಿದ ಹಿತೇಶ್ ಮಂಜಣ್ಣನಿಗೆ ತನ್ನ ವಿಸಿಟಿಂಗ್ ಕಾರ್ಡು ಕೊಟ್ಟ. ‘ನಿಮ್ಮ ಹೆಂಡತಿ ಒಪ್ಪಿದಾಗ ನನ್ನ ನಂಬರ್‌ಗೆ ಒಂದು ಮಿಸ್ಡ್‌ಕಾಲ್ ಮಾಡಿ ಸಾಕು’ ಎಂದು ಒದ್ದೆಯಾದ ಕಂಗಳೊಂದಿಗೆ ಎದ್ದು ಹೋಗಿದ್ದ.
 
ಕಬ್ಬಿಣವನ್ನು ಕಾಯಿಸಿ ಬಡಿಯಬೇಕು, ಹೆಣ್ಣನ್ನ ಪ್ರೀತಿಯಿಂದ ಮಣಿಸಬೇಕೆಂದುಕೊಂಡ ಮಂಜಣ್ಣ – ‘ನಮ್ಮನೆ ತಾಪತ್ರಯಗಳನ್ನು ಕೊನೆಗೊಳಿಸೋಕೆ ನಮಗೆ ಹುಟ್ಟು–ಸಾವಿನ ಎರಡು ಮಾರ್ಗಗಳಿವೆ ಮಮತಾ. ನೀನು ಅವರ ಮಗುವಿಗೆ ಜನ್ಮ ಕೊಡೋದು. ಇಲ್ಲಾಂದ್ರೆ ನಾನು ಮಣ್ಣು ಪಾಲಾಗೋದು. ಯಾವುದು ಬೇಕಂತ ನೀನೆ ಆಯ್ಕೆ ಮಾಡ್ಕೊ’ ಎಂದು ಭಾರವಾದ ದನಿಯಲ್ಲಿ ಹೇಳಿದ. 
 
ಮಂಜಣ್ಣನ ಪಾಲಿನ ಮೂರು ಎಕರೆ ನೀರಾವರಿ ಜಮೀನಿನಲ್ಲಿ ಬೆಳೆ ಇಡದೆ ಎರಡು ವರ್ಷ ಆಗಿತ್ತು. ಬೇಸಿಗೆ ಕಾಲದಲ್ಲಿ ಹುಡುಗರು ಉಚ್ಚೆ ಒಯ್ದಂಗೆ ಬರುತ್ತಿದ್ದ ನೀರು, ಗಂಗಮ್ಮ ತಾಯಿ ಇಂಗಿ ಹೋಗಿದ್ದರಿಂದ ಅವೂ ಬರದಂಗಾಗಿದ್ದವು. ನಾಕು ಕಡೆ ಪಾಯಿಂಟ್ ಮಾಡಿಸಿ ಬೋರ್ ಕೊರೆಸಿದರೂ ಫೇಲಾಗಿದ್ದವು. ಆ ಸಾಲ ತೀರಿಸೋಕಾದೆ ಮಂಜಣ್ಣನ ತಂದೆ ದೇಶಾಂತ್ರ ಹೋಗಿದ್ದ. ಅವರ ಅಣ್ಣ ಶೇಖರಪ್ಪ ತಮ್ಮನ ಸಾಲಕ್ಕೂ ನನಗು ಸಂಬಂಧಾನೆ ಇಲ್ಲಾಂತ ಹೆಂಡತಿ ಊರಲ್ಲಿ ನೆಲೆ ನಿಂತಿದ್ದ. ಮೊಂಡು ಧೈರ್ಯಕ್ಕೆ ಬಿದ್ದ ಮಂಜಣ್ಣ, ಇವತ್ತಲ್ಲ ನಾಳೆ ನಿಮ್ಮ ಸಾಲ ತೀರಿಸುತ್ತೇನೆಂದು ಸಾಲಗಾರರಿಗೆ ಹೇಳಿ ಕಾಲ ತಳ್ಳುತ್ತಿದ್ದ ಅಪಮಾನದ ಚಿತ್ರಣ, ಮಮತಾಳ ಕಣ್ಣ ಮುಂದೆ ತೇಲಿ ಬಂದಿದ್ದರಿಂದ, ಗಂಡನ ಮೇಲಿನ ಪ್ರೀತಿಯಿಂದ ಇದೊಂದು ಸಲ ಮಾತ್ರ ಬಾಡಿಗೆ ತಾಯಿ ಆಗ್ತಿನೆಂದು ಷರತ್ತು ಹಾಕಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಳು. 
 
‘ನನ್ನ ಜೊತೆ ಆಡೋಕೆ ಪಾಪು ಬತ್ತೈತೆ’ ಅಂತೇಳಿ ತೊದಲು ಮಾತನಾಡುವ ಮೂರು ವರ್ಷದ ಮಗನ ಮಾತು ಕೇಳಿದಾಗಲೆಲ್ಲ ವಿಷಾದವಾಗಿ ನಗುತ್ತಿದ್ದ ಮಮತಾಳಿಗೆ, ತಾನು ಒಪ್ಪಿಗೆ ಸೂಚಿಸಿದ್ದೆ ತಡ, ಮೆಡಿಕಲ್ ಚೆಕಾಫ್‌ಗೆಂದು ಓಡಾಡಿದ್ದು, ಇಂಟ್ರಾ ಯೂಟ್ರೈನ್ ಇಂಟ್ರಾ ಕಾಸ್ಟರ್ ಡಿವೈಸ್ ಟೆಸ್ಟ್‌ಗಳಲ್ಲಿ ಪಾಸಿಟಿವ್ ರಿಸಲ್ಟ್ ಬಂದ ಖುಷಿಗೆ ಹಿತೇಶ್ ಕುಲಕರ್ಣಿ ತನ್ನ ಗಂಡನ ಕೈಗೆ ನೋಟಿನ ಕಂತೆಯನ್ನಿಟ್ಟಿದ್ದು, ಕುಲಕರ್ಣಿಯ ವೀರ್ಯಾಣುವನ್ನು ಇಂಜೆಕ್ಟ್ ಮಾಡಿದ ಮೇಲೆ ಬಯಕೆ ತುಂಬಿದ ನವಮಾಸಗಳು ಉರುಳಿ ಹೋಗಿದ್ದೇ ಗೊತ್ತಾಗಿರಲಿಲ್ಲ. ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ಹಾಳೆಗಳನ್ನು ತಿರುವಿ ಹಾಕಿದಷ್ಟು ಸಲೀಸಾಗಿ ತಿಂಗಳುಗಳು ಸರಿದುಹೋಗಿದ್ದವು. ಹಾಲಿನಲ್ಲಿ ಅದ್ದಿ ತೆಗೆದಂತಿದ್ದ ಮೂರು ತಿಂಗಳ ಮುದ್ದಾದ ಮಗುವನ್ನು ಕಟ್ಟ ಕಡೆಯದಾಗೆಂಬಂತೆ ಎದೆಗಪ್ಪಿಕೊಂಡು ಮುತ್ತಿಟ್ಟು, ತನ್ನ ಮಡಿಲಿನಿಂದ ಅವರ ಮಡಿಲಿಗೆ ದಾಡಿಸುವಾಗ ಆ ಮಗು ಮೆದುವಾದ ಎಳೆಗೈಯಿಂದ ಮಮತಾಳ ಕಿರುಬೆರಳಿಡಿದಾಗ, ಆ ಶೀತಲಸ್ಪರ್ಶಕ್ಕೆ ಶಿಲೆಯಂತಿದ್ದ ಆಕೆಯ ಮನಸು ಕರಗಿ ನೀರಾಗಿದ್ದರಿಂದ ಕಣ್ಣಿನಕೆರೆಯಲ್ಲಿ ಕಂಬನಿಯ ಕೋಡಿ ಬಿದ್ದಿತ್ತು.
 
ಇಂಗಲಾರದ ನೆನಪಿನ ಗಂಗೆ ಹರಿದಾಗ 
ಎದೆಯ ತುಂಬ ಸಂಕಟದ ಫಸಲು...
ಅಂಗಾಲಿಗೆ ಕಚಗುಳಿ ಇಡುತ್ತಾ ‘ಅಮ್ಮ ಕಕ್ಕ ತೊಳಿ ಬಾ’ ಅಂತೇಳಿ ಮಮತಾಳ ನಾಕುವರ್ಷದ ಮಗ ಚಡ್ಡಿಯನ್ನು ಎದೆಗವಚಿಕೊಂಡು ಕರೆದ. ಇದ್ದವರ ಮೇಲಿನ ಪ್ರೀತಿಗಿಂತ ದೂರವಾದವರಿಂದ ಆಗುವ ದುಃಖವೇ ದೊಡ್ಡದೆಂಬಂತೆ ಮಮತಾಳಿಗೆ ಹಸುಗೂಸಿನದೆ ವ್ಯವನವಾಗಿದ್ದರಿಂದ, ‘ನಿಮ್ಮಜ್ಜಿ ಹತ್ರ ತೊಳಿಸ್ಕ್ಯಾ ಹೋಗು’ ಅಂತ ಹೇಳಿದ್ದಳು. ‘ಇಲ್ಲ... ನನಗೆ ನೀನೆ ತೊಳಿಬೇಕು’ ಅಂತೇಳಿ ಹಟ ಮಾಡಿದಾಗ, ಕುಡಿಯೋಕೆಂದು ಕಾಯಿಸಿಟ್ಟುಕೊಂಡಿದ್ದ ಒಂದು ಚೊಂಬು ಬಿಸಿನೀರು ತಗಂಡು ಮಗನ ಪುಗುಳಿ ತೊಳೆಯಲು ಹೊರಗೆ ಕರೆದುಕೊಂಡು ಬಂದಳು. ಮನೆ ಮುಂದಿದ್ದ ಬೇವಿನ ಮರದ ನೆರಳಿನಡಿಯಲ್ಲಿ ಕುಳಿತಿದ್ದ ಗುಜ್ಜಮ್ಮ ಸರೋಜಮ್ಮನ ಜೊತೆ ಮಾತಿನಲ್ಲಿ ತಲ್ಲೀನಳಾಗಿದ್ದಳು. 
 
ಮನೆಯಂಗಳದ ಎಡ ಭಾಗದಲ್ಲಿದ್ದ ಹಗ್ಗದ ಮಂಚದ ಅಡಿಯಿಂದ ಹೊರ ಬಂದ ಕೋಳಿಗೆ ಕಾಲು ಕಟ್ಟಿದ್ದರಿಂದ ರೆಕ್ಕೆ ಬಡಿಯುತ್ತಿತ್ತು. ‘ಇಲ್ಲಿ ಬಾಡಿಗೆ ತಾಯಿ ದೊರೆಯುತ್ತಾಳೆ’ ಎಂಬ ಬೋರ್ಡನ್ನ ನೇತು ಹಾಕಲು ಬಲಭಾಗದ ಮುಂಗೋಡೆಗೆ ಮಂಜಣ್ಣ ಮೊಳೆ ಹೊಡೆಯುತ್ತಿರುವುದನ್ನು ನೋಡಿದ ಮಮತಾಳಿಗೆ, ‘ಹಣ ಅನ್ನೋದು ಉಪ್ಪಿದ್ದಂತೆ, ಜಾಸ್ತಿ ತಿಂದರೆ ದಾಹ ಹೆಚ್ಚಾಗುತ್ತದೆ. ಕೆಲವರಿಗದು ತೀರದ ದಾಹವಾಗಿಯೂ ಕಾಡಬಹುದು’ ಎಂದು ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರು ಹೇಳಿದ ಮಾತು ನೆನಪಾಗಿ, ಅತಿಯಾಸೆಗೆ ಅಡಿಯಾಳಾದ ಗಂಡನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತ್ತು. ಬಾಡಿಗೆ ತಾಯಿ ದೊರೆಯುತ್ತಾಳೆಂದು ಬರೆದಿರುವುದರ ಕೆಳಗೆ ‘ಹೆಣ್ಣಿನ ಕನಸುಗಳೂ ಮಾರಾಟಕ್ಕಿವೆ ಅಂತ ಬರೆಸಿದ್ರೆ ಚೆನ್ನಾಗಿತ್ತು ಮಾವ’ ಎಂದು ಹೇಳಿದ ಮಮತಾಳ ಮಾತು ಕೇಳಿಸಿಲ್ಲವೆಂಬಂತೆ ಮಂಜಣ್ಣ ಗೋಡೆಗೆ ಮೊಳೆ ಹೊಡೆಯುತ್ತಲೇ ಇದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT