ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೆ ಬಲಿಯಾಯಿತೆ ಗುಂಡಿನ ಕೇಸ್‌?

ಕಟಕಟೆ–41
Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕಲಬುರ್ಗಿಯ ಶಂಕರ ಪಾಟೀಲ  ಅವರಿಗೆ ಸಮಾಜ ಸುಧಾರಣೆಯ ಹುಚ್ಚು. ಸುತ್ತಮುತ್ತಲಿನ ಅಕ್ರಮಗಳನ್ನು ಬಯಲಿಗೆ ಎಳೆಯುವ ಹಂಬಲ. ಕಣ್ಣೆದುರಿಗೇ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳಲು ಅವರಿಗೆ ಮನಸ್ಸಾಗಲಿಲ್ಲ.

ಸಮಾಜ ಸುಧಾರಣೆ ಮಾಡುತ್ತೇವೆಂದು ಸಂಘ– ಸಂಸ್ಥೆ ಕಟ್ಟಿಕೊಂಡು ಸರ್ಕಾರದಿಂದ ಬರುವ ಧನಸಹಾಯವನ್ನು ತಿಂದುತೇಗುತ್ತಿರುವವರನ್ನು ನೋಡಿ ಬೇಸತ್ತು ಹೋಗಿದ್ದರು. ಆದ್ದರಿಂದ ಒಬ್ಬರೇ ನಿಂತು ಇವುಗಳ ವಿರುದ್ಧ ಹೋರಾಡುವ ಪಣ ತೊಟ್ಟರು. ಅದಕ್ಕಾಗಿ ಅವರು ಆಯ್ದುಕೊಂಡ ದಾರಿ ಮಾಹಿತಿ ಹಕ್ಕುಗಳ (ಆರ್‌ಟಿಐ) ಕಾರ್ಯಕರ್ತನಾಗುವುದು.

ಆರ್‌ಟಿಐ ಕಾರ್ಯಕರ್ತ ಎಂದ ಮೇಲೆ ಕೇಳಬೇಕೇ? ಸುತ್ತಮುತ್ತ ಎಲ್ಲರೂ ವೈರಿಗಳೆ. ಪ್ರಭಾವಿಗಳು, ಪುಢಾರಿಗಳು, ರಾಜಕಾರಣಿಗಳು...  ಇವರೆಲ್ಲರ ಮೇಲೆ ಇಂತಹ ಕಾರ್ಯಕರ್ತರ ಎರಡು ಕಣ್ಣುಗಳು ನೆಟ್ಟಿದ್ದರೆ, ಭ್ರಷ್ಟರ ಸಾವಿರಾರು ಕಣ್ಣುಗಳು ಇವರನ್ನು ಹಿಂಬಾಲಿಸುತ್ತಿರುತ್ತವೆ. ಸತ್ಯದ ಮಾರ್ಗದಲ್ಲಿಯೇ ನಡೆಯುವ ಇಂಥವರು ಭ್ರಷ್ಟರನ್ನು ಎದುರು ಹಾಕಿಕೊಂಡು ಜೀವನ ಸಾಗಿಸುವುದು ಬಲುಕಷ್ಟವೆ. ಇಂತಿಪ್ಪ ಪರಿಸ್ಥಿತಿಯಲ್ಲಿದ್ದರು ಶಂಕರ ಪಾಟೀಲರು.  

ಆ ಗ್ರಾಮದಲ್ಲೊಬ್ಬ ಅಬ್ಬೇಪಾರಿಯಾದವ ರಾಜು ಕುಲಕರ್ಣಿ.   ಭ್ರಷ್ಟ ಮಾರ್ಗದಲ್ಲಿಯೇ ಲಾಭ ಮಾಡಿಕೊಳ್ಳುವ ದಾರಿ ಕಂಡುಕೊಂಡವ ಈತ. ಇಂಥ ವ್ಯಕ್ತಿಗಳಿಗೆ ಸಹಜವಾಗಿಯೇ ಇರುವಂತೆ ರಾಜಕಾರಣಿಗಳ ಕೃಪಾಶ್ರಯವೂ ದಕ್ಕಿತ್ತು, ಜೊತೆಗೆ ಇನ್ನೊಂದಿಷ್ಟು ಭ್ರಷ್ಟರ ಬೆಂಬಲವೂ ಇತ್ತು. ಇವನ್ನೆಲ್ಲಾ ಬಳಸಿಕೊಂಡು ಮೋಸ, ವಂಚನೆಯಿಂದ ಜೀವನ ಸಾಗಿಸುತ್ತಾ ಬಂದಿದ್ದಾನೆ.

ಇವನ ಭ್ರಷ್ಟಾಚಾರಕ್ಕೆ ನೆರವಾದದ್ದು ಇವನ ಅಪ್ಪನ ನ್ಯಾಯಬೆಲೆ ಅಂಗಡಿ.  ನ್ಯಾಯದ ಮಾರ್ಗದಲ್ಲಿ ಅಂಗಡಿ ನಡೆಸುತ್ತಿದ್ದ ಅಪ್ಪನ ನಂತರ ಇದರ ಉಸ್ತುವಾರಿ ವಹಿಸಿಕೊಂಡ ರಾಜು. ಅಂಗಡಿಗೆ ಬರುವ ಸರ್ಕಾರದ ಎಲ್ಲ ‘ಭಾಗ್ಯ’ಗಳು ಫಲಾನುಭವಿಗಳಿಗೆ ತಲುಪದಂತೆ ನೋಡಿಕೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಲೇ ಬಂದಿದ್ದಾನೆ. ಆಹಾರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿ ದಿಢೀರ್ ಶ್ರೀಮಂತಿಕೆ ಮೆರೆದಿದ್ದಾನೆ.

ಮೊದಲೇ ಪ್ರಭಾವಿ ವ್ಯಕ್ತಿ, ಕೇಳಬೇಕೆ? ಕಂಡೂ ಕಾಣದ ಹಾಗೆ, ತಮಗೆ ಯಾಕಪ್ಪಾ ಇವನ ಉಸಾಬರಿ ಎಂದು ಹೆದರಿಕೊಂಡು ಬಾಯಿ ಬಿಡದವರೇ ಎಲ್ಲಾ. ತನ್ನನ್ನು ವಿರೋಧಿಸಲು ಯಾರೂ ಇಲ್ಲ ಎಂಬುದನ್ನು ಅರಿತ ರಾಜುವಿನ ಅಕ್ರಮ ನಿರಾತಂಕವಾಗಿ ಮುಂದುವರಿದೇ ಇದೆ.

ಇಂತಿಪ್ಪ ರಾಜುವನ್ನು ಎದುರಿಸಲು ಪಣ ತೊಟ್ಟರು ಶಂಕರ ಪಾಟೀಲರು. ಯಾವುದೇ ‘ಸಶಕ್ತ’ ಹಿನ್ನೆಲೆ ಇರದ ಪಾಟೀಲ ಅವರು ರಾಜುವಿನ ಅನ್ಯಾಯವನ್ನು ಏಕಾಂಗಿಯಾಗಿ ಪ್ರತಿಭಟಿಸತೊಡಗಿದರು. ಒಬ್ಬರಾದರೂ ಹೀಗೆ ಪ್ರತಿಭಟಿಸಲು ಮುಂದೆ ಬಂದರಲ್ಲ ಎಂದು ಜನರೆಲ್ಲಾ ಖುಷಿಪಟ್ಟರು ಅಷ್ಟೆ. ಆದರೆ ರಾಜುವಿನ ಎದುರಿಗೆ ಹೋಗಲು ಇವರಿಗೆ ಧೈರ್ಯ ಇರಬೇಕಲ್ಲ...! ಪಾಟೀಲ ಅವರ ಬೆಂಬಲಕ್ಕೆ ತಾವು ಇದ್ದೇವೆ ಎಂದು ಅವರಿಗೆ ಧೈರ್ಯ ತುಂಬಿದರು. ಆದರೆ ಮುಂದೆ ಹೋಗಲಿಲ್ಲ. ತಮಗಿಲ್ಲದ ಧೈರ್ಯವನ್ನು ಪಾಟೀಲ ಅವರಿಗೆ ತುಂಬಿ ತಾವು ಮಾತ್ರ ತೆರೆಯ ಹಿಂದೆ ನಿಂತು ಎಲ್ಲವನ್ನೂ ನೋಡತೊಡಗಿದರು.

ಇವರಿದ್ದ ಊರಿಗೆ ಉಪ ಲೋಕಾಯುಕ್ತರು ಬರಲಿದ್ದಾರೆ ಎಂಬ ಸುದ್ದಿ ಪಾಟೀಲರ ಕಿವಿಗೆ ಬಿತ್ತು.  ಆ ಉಪ ಲೋಕಾಯುಕ್ತರು ಖಡಕ್‌ ಆಗಿದ್ದ ಬಗ್ಗೆ ಇವರಿಗೆ ತಿಳಿದಿತ್ತು.ಏನಾದರೂ ಅಕ್ರಮ ನಡೆಯುತ್ತಿದ್ದರೆ ತಕ್ಷಣದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ವಿಷಯ ತಿಳಿದಿತ್ತು. ಆದ್ದರಿಂದ ತಕ್ಷಣ ಪಾಟೀಲ ಅವರು ಕಾರ್ಯಪ್ರವೃತ್ತರಾದರು. ಈ ಅವಕಾಶ ಉಪಯೋಗಿಸಿಕೊಂಡು ರಾಜು ಕುಲಕರ್ಣಿಯ ನ್ಯಾಯಬೆಲೆ  ಅಂಗಡಿಯ ಕರ್ಮಕಾಂಡವನ್ನು ಬಯಲಿಗೆ ಎಳೆಯಬೇಕೆಂದು ನಿರ್ಧರಿಸಿದರು.

ಅವನ ಅಕ್ರಮಗಳ ಬಗ್ಗೆ ವಿಡಿಯೊ ಮಾಡಿಕೊಂಡರು.  ಭ್ರಷ್ಟನಿಗೆ ತಕ್ಕ ಶಾಸ್ತಿ ಮಾಡುವ ಆಸೆ ಒಂದೆಡೆಯಾದರೆ ಯಾರೂ ಮಾಡದ ಕಾರ್ಯವನ್ನು ತಾವು ಮಾಡಿ ಜನರಿಂದ ಭೇಷ್‌ ಎನಿಸಿಕೊಂಡು ಜನಪ್ರಿಯ ವ್ಯಕ್ತಿಯೂ ಆಗಬಹುದು ಎಂಬ ಆಸೆ ಇನ್ನೊಂದೆಡೆ.

ಪಾಟೀಲರು ಅಂದುಕೊಂಡಂತೆಯೇ ಆಯಿತು. ಅಂದಿನ ಅಹವಾಲು ಆಲಿಕೆ ಸಭೆಯಲ್ಲಿ ಹಾಜರಾದ ಪಾಟೀಲರು ರಾಜು ಕುಲಕರ್ಣಿಯ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ಉಪ ಲೋಕಾಯುಕ್ತರಿಗೆ ಮನದಟ್ಟು ಮಾಡಿಕೊಟ್ಟರು. ಅಕ್ರಮದ ಬಗ್ಗೆ ತಿಳಿದು ಕೋಪಗೊಂಡ ಉಪ ಲೋಕಾಯುಕ್ತರು ರಾಜುವಿನ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಮಾಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಪರವಾನಗಿ ರದ್ದತಿಯ ಅದೇಶವು ರಾಜು ಕುಲಕರ್ಣಿಗೆ ರವಾನೆಯಾಯ್ತು.

ಈ ಆದೇಶ ನೋಡುತ್ತಿದ್ದಂತೆಯೇ  ರಾಜು ಕೆಂಡಾಮಂಡಲನಾದ. ತನ್ನ ವಿರುದ್ಧ ಶಂಕರ ಪಾಟೀಲರು ದೂರು ನೀಡಿದ್ದನ್ನು ಆತ ಅರಿತ. ತನ್ನನ್ನು ಎದುರಿಸಲು ಸಿದ್ಧರಾಗಿರುವ ಪಾಟೀಲ ಅವರಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ. ಇಲ್ಲದಿದ್ದರೆ ಮುಂದೆ ತನ್ನೆಲ್ಲಾ ವ್ಯವಹಾರಗಳಿಗೆ ಇವರು ಕಂಟಕ ಪ್ರಾಯರಾಗುವ ಸುಳಿವು ಆತನಿಗೆ ತಿಳಿಯಿತು.

ಇಷ್ಟು ಅಂದುಕೊಳ್ಳುತ್ತಲೇ ರಾಜು ಕುಲಕರ್ಣಿ ಕಾರ್ಯಪ್ರವೃತ್ತನಾದ. ತನ್ನ ಕ್ರೌರ್ಯದ ರುಚಿಯನ್ನು ತೋರಿಸಲು ತನ್ನ ಸಹೋದರರೊಂದಿಗೆ ಸನ್ನದ್ಧನಾದ. ರಕ್ತ ಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆದ.

ಉತ್ತರ ಕರ್ನಾಟಕದಲ್ಲಿ ಕೊಲೆಗಳು ನಡೆಯುವುದು ಸಾಮಾನ್ಯವಾಗಿ ಅಮಾವಾಸ್ಯೆಯಂದು. ಆದ್ದರಿಂದಲೇ ‘ಮುಂದಿನ ಅಮಾವಾಸ್ಯೆ ಒಳಗೆ ನಿನ್ನನ್ನು ಖತಂ ಮಾಡುತ್ತೇನೆ’ ಎಂಬುದು ಬದ್ಧ ವೈರಿಗಳ ನಡುವೆ ಸಹಜವಾಗಿ ಕೇಳುವ ಮಾತು. ಅದರಂತೆ ರಾಜು ಕೂಡ ಶಂಕರ ಪಾಟೀಲ ಅವರನ್ನು ಮುಗಿಸಲು ಅಮಾವಾಸ್ಯೆಯ ದಿನ ನಿಗದಿ ಮಾಡಿದ.

ಮನೆಯಲ್ಲಿ ಶೌಚಾಲಯವಿದ್ದರೂ ಆ ಕಡೆಯ ಜನರಿಗೆ ಹೊಲಗಳಲ್ಲಿಯೇ ಬಾಧೆ ತೀರಿಸಿಕೊಳ್ಳದಿದ್ದಲ್ಲಿ ನಿದ್ದೆ ಬರುವುದಿಲ್ಲ ಎಂಬ ಮಾತಿದೆ. ಇದೇ ಮಾತನ್ನು ಪಾಲಿಸುತ್ತಿದ್ದರು ಶಂಕರ ಪಾಟೀಲರು. ಇದು ರಾಜುವಿಗೂ ತಿಳಿದಿತ್ತು.

ಅಮಾವಾಸ್ಯೆಯಂದು ಪಾಟೀಲರು ಹೋಗುವುದನ್ನೇ ಕಾಯುತ್ತಾ ಕುಳಿತರು  ರಾಜು ಹಾಗೂ ಆತನ ಸಹೋದರರು.  ಪಾಟೀಲ ಅವರನ್ನು ಸಾಯಿಸಲು ಮೊದಲೇ ಸಕಲ ಸಿದ್ಧತೆ ಮಾಡಿಕೊಂಡು ಬಂದಿದ್ದರು ಅವರು. ಹೈದರಾಬಾದಿನ ಬಂದೂಕು ವ್ಯಾಪಾರಿಗಳಿಂದ ಈ ಜಿಲ್ಲೆಗೆ ಯಥೇಚ್ಛವಾಗಿ ಬಂದೂಕು ಸರಬರಾಜು ಆಗುತ್ತದೆ. ಅವರಿಂದಲೇ ಬಂದೂಕು ಖರೀದಿಸಿದರು ರಾಜು ಹಾಗೂ ಸಹೋದರರು.

ಬಹಿರ್ದೆಸೆಗೆ ಹೋಗುತ್ತಿದ್ದ ಶಂಕರ ಪಾಟೀಲ ಅವರನ್ನು ಹಿಂಬಾಲಿಸಿದರು ಈ ಆರೋಪಿಗಳು. ಸ್ವಲ್ಪ ದೂರದವರೆಗೆ ಜನರು ಇದ್ದುದರಿಂದ ತಮ್ಮ ಕಾರ್ಯವನ್ನು ಸಾಧಿಸಲು ಅವರಿಗೆ ಆಗಲಿಲ್ಲ. ಆದರೆ ಸುಮಾರು ದೂರ ಹೋಗುತ್ತಿದ್ದಂತೆಯೇ ಶಂಕರ ಪಾಟೀಲ ಅವರಿಗೆ ಯಾರೋ ತಮ್ಮನ್ನು ಹಿಂಬಾಲಿಸುತ್ತಿದ್ದುದು ಭಾಸವಾಯಿತು. ಹಿಂದೆ ತಿರುಗಿದರು ಅಷ್ಟೆ... ರಾಜು ಹಿಡಿದಿದ್ದ ಬಂದೂಕಿನಿಂದ ಎರಡು ಗುಂಡುಗಳು ಪಾಟೀಲ ಅವರ ಎದೆಯನ್ನು ಹೊಕ್ಕವು. ರಕ್ತದ ಕೋಡಿ ಹರಿಯಿತು.  ಶಬ್ದ ಕೇಳಿ ಜನ ಸೇರಿದರು, ಆರೋಪಿಗಳು ಪರಾರಿಯಾದರು. ಅಲ್ಲಿಗೆ ಆರ್‌ಟಿಐ ಕಾರ್ಯಕರ್ತನ ಇನ್ನೊಂದು ಬಲಿಗೆ ಜನರು ಸಾಕ್ಷಿಯಾದರು.

ಇವಿಷ್ಟೂ ನಿಜವಾಗಿ ನಡೆದ ಘಟನೆ. ಆದರೆ ಮುಂದೆ...! ನಂತರದ್ದು ಪೊಲೀಸರ ಕೆಲಸ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಇಲ್ಲದೆಯೇ ಯಾವ ಪ್ರಕರಣದ ತನಿಖೆಯನ್ನೂ ಪೊಲೀಸರು ನಡೆಸುವಂತಿಲ್ಲ. ಅದರಲ್ಲಿಯೂ ಕೊಲೆ, ಅತ್ಯಾಚಾರದಂತಹ (ಕಾಗ್ನಿಜೆಬಲ್‌) ಅಪರಾಧಗಳಲ್ಲಿ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು. ಸಾವಿನ ಕುರಿತು ಅನುಮಾನವಿದ್ದಲ್ಲಿ ಒಂದು ವಾರದ ಗಡುವು ತೆಗೆದುಕೊಳ್ಳಬಹುದು.

ಪೊಲೀಸರಿಗೆ ಇದು ಆರಂಭಿಕ ಹಂತದಲ್ಲಿಯೇ ಇರಬೇಕಿರುವ ಕನಿಷ್ಠ ಜ್ಞಾನ. ಆದರೆ ಪಾಪ... ಈ ಪ್ರಕರಣದ ತನಿಖಾಧಿಕಾರಿಗಳಿಗೆ ಅದು ತಿಳಿದೇ ಇರಲಿಲ್ಲ! ಸ್ಥಳಕ್ಕೆ ಬಂದ ತನಿಖಾಧಿಕಾರಿ ಸುಖಾಸುಮ್ಮನೆ ಸಮಯವನ್ನು ವ್ಯರ್ಥ ಮಾಡಿ, ಸುತ್ತಮುತ್ತಲಿನ ಜನರನ್ನು  ಗೊತ್ತು ಗುರಿ ಇಲ್ಲದೇ ವಿಚಾರಿಸುತ್ತಾ, ವಿಳಂಬವಾಗಿ ಎಫ್‌ಐಆರ್‌ ದಾಖಲಿಸಿದರು.

ಸೂಕ್ಷ್ಮವಾಗಿ ನೋಡಿದಾಗ ಪಾಟೀಲ ಅವರ ದೇಹದಲ್ಲಿ ಇರುವುದು ಎರಡೇ ಗುಂಡಿನ ಗುರುತು ಎಂದು ತಿಳಿಯಬಹುದಾಗಿತ್ತು. ಆದರೆ ಪೊಲೀಸರು, ‘ಶಂಕರ ಪಾಟೀಲ ಅವರ ಎದೆಗೆ ರಾಜು ಕುಲಕರ್ಣಿ ಹಲವಾರು ಬಾರಿ ಗುಂಡಿನ ದಾಳಿ ನಡೆಸಿದ. ನಂತರ ಅವರನ್ನು ಹಿಂಬಾಲಿಸಿ ಪುನಃ ಅವರ ಬೆನ್ನಿಗೆ ಎರಡು ಬಾರಿ ಗುಂಡು ಹಾರಿಸಿದ’ ಎಂದು ಬರೆದುಕೊಂಡರು.

ಆರೋಪಿ ರಾಜು ಪರ ನಾನು ವಕಾಲತ್ತು ವಹಿಸಿದ್ದೇನೆ. ರಾಜು ನಿರಪರಾಧಿ ಎಂದು ಈಗಾಗಲೆ ಪೊಲೀಸರೇ ಸಾಬೀತು ಮಾಡಿಬಿಟ್ಟಿದ್ದರಿಂದ ನನ್ನದೇನೂ ಹೆಚ್ಚಿಗೆ ಕೆಲಸ ಇರಲಿಕ್ಕಿಲ್ಲ! ಪೊಲೀಸರು ಸಿದ್ಧಪಡಿಸಿದ್ದ ದಾಖಲೆಯ ಪ್ರಕಾರ ಹೋದರೆ ಶಂಕರ ಪಾಟೀಲ ಅವರ ದೇಹದ ಮೇಲೆ ಗುಂಡುಗಳ ಹಲವಾರು ಗಾಯಗಳು ಇರಬೇಕಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿಯ ಆಧಾರದಲ್ಲಿ ಅವರ ದೇಹದ ಮೇಲೆ ಆಗಿದ್ದುದು ಕೇವಲ ಎರಡು ಗಾಯಗಳು.

ಕಾನೂನಿಗೆ ಬೇಕಿರುವುದು ಸೂಕ್ತ ಸಾಕ್ಷ್ಯಾಧಾರ ಅಷ್ಟೆ. ಇಲ್ಲಿರುವ ಸಾಕ್ಷ್ಯಾಧಾರಗಳು ಎಲ್ಲವೂ ಆರೋಪಿ ರಾಜು ಪರವಾಗಿಯೇ ಇವೆ, ಅನುಮಾನದ ಆಧಾರದ ಮೇಲೆ ಯಾರಿಗೂ ಕಾನೂನು ಶಿಕ್ಷೆ ಕೊಡುವುದಿಲ್ಲ. ಅದರಂತೆಯೇ ಇಲ್ಲಿಯೂ ಸಾಕ್ಷ್ಯಾಧಾರಗಳು ಒಂದಕ್ಕೊಂದು ತಾಳಮೇಳ ಇಲ್ಲದಿದ್ದರಿಂದ ರಾಜುವಿಗೆ ಎಲ್ಲವೂ ವರದಾನವೆ.

ಈ ಪ್ರಕರಣದಲ್ಲಿ ನಾನು ಆರೋಪಿ ಪರವಾಗಿ ವಾದಿಸುತ್ತಿದ್ದೇನೆ ನಿಜ. ಅದು  ಇಲ್ಲಿ ಮುಖ್ಯವಲ್ಲ. ನಾನು ಹೇಳಹೊರಟಿರುವುದು ಇಷ್ಟೆ. ಇಂಥ ಪ್ರಕರಣಗಳಲ್ಲಿ ತನಿಖಾಧಿಕಾರಿ ಕರ್ತವ್ಯಲೋಪ ಎಸಗುತ್ತಾರೋ, ತಿಳಿಯದೇ ಕೆಲಸ ಮಾಡುತ್ತಾರೋ, ಆರೋಪಿ ಜೊತೆ ಶಾಮೀಲಾಗುತ್ತಾರೋ, ನಿರ್ಲಕ್ಷ್ಯದಿಂದ ಎಫ್‌ಐಆರ್‌ ದಾಖಲು ಮಾಡುತ್ತಾರೋ... ಒಟ್ಟಿನಲ್ಲಿ ಅವರ ಬೇಜವಾಬ್ದಾರಿಯಿಂದ ಹೇಗೆ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ,  ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಸಮಾಜಘಾತುಕ ಶಕ್ತಿಗಳಿಗೆ ಇವರೇ ಪ್ರತ್ಯಕ್ಷ–ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಇದು ತೀರಾ ದುರದೃಷ್ಟಕರ.

ಕನಿಷ್ಠ ಜ್ಞಾನವೂ ಇಲ್ಲದೆ ತನಿಖೆ ನಡೆಸಲು ಮುಂದಾಗಿ ಪೊಲೀಸರು ಹೀಗೆ ಎಡವಟ್ಟು ಮಾಡುವ ಉದಾಹರಣೆಗಳನ್ನು ನಾನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ.

ಮೊದಲೇ ಹೇಳಿದ ಹಾಗೆ ಆರೋಪಿಯ ಪರವಾಗಿ ಇರುವಂಥ ಒಂದೇ ಒಂದು ಅಂಶ ಕೋರ್ಟ್‌ಗೆ ಸಿಕ್ಕರೂ ಆತ ಸುಲಭದಲ್ಲಿ ನಿರಪರಾಧಿ ಆಗಬಲ್ಲ. ಪೊಲೀಸರು ಮಾಡುವ ಇಂಥ ತಪ್ಪುಗಳಿಗೆ ನ್ಯಾಯಾಲಯಗಳನ್ನು ದೂರಿ ಪ್ರಯೋಜನ ಇಲ್ಲ.

ಒಂದು ವೇಳೆ ತನಿಖೆಯನ್ನು ಹೇಗೆ ಮಾಡಬೇಕು ಎಂಬುದು ಪೊಲೀಸರಿಗೆ ತಿಳಿಯದಿದ್ದರೆ, ಅವರಿಗೆ ಈ ಬಗ್ಗೆ  ಅನುಮಾನಗಳೇನಾದರೂ ಇದ್ದಲ್ಲಿ ಪ್ರಾರಂಭದಲ್ಲಿಯೇ ಅನುಮಾನ ಬಗೆಹರಿಸಿಕೊಳ್ಳಬೇಕಾದುದು ಅತಿಮುಖ್ಯ. ಈ ಬಗ್ಗೆ ಪೊಲೀಸ್‌ ಇಲಾಖೆ  ಸೂಕ್ತ ತರಬೇತಿ ನೀಡುವ ಅವಶ್ಯಕತೆ ಕಂಡುಬರುತ್ತದೆ. ಕೊಲೆ ಇಂಥವರೇ ಮಾಡಿದ್ದು ಎಂದು ಜನರಿಗೆ ತಿಳಿದಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಅಪರಾಧಿ ತಪ್ಪಿಸಿಕೊಂಡಾಗ ಪೊಲೀಸ್‌ ಇಲಾಖೆಯ ಮೇಲಿನ ವಿಶ್ವಾಸ ಜನರಲ್ಲಿ ಕುಂದುತ್ತಾ ಹೋಗುತ್ತದೆ.

ಇದಕ್ಕೆ ಅವಕಾಶ ಕೊಡಬಾರದು. ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ, ಏಟು ಬಿದ್ದವನ ಮೈಮೇಲೆ ಗುಂಡು ಒಳಹೋದಾಗ ಆಗುವ ಗಾಯ ಹಾಗೂ ಹೊರಗೆ ಬರುವ ಗಾಯ  (Entry Wound and exit wound) ಇರಬೇಕು. ಒಳಗಡೆ ಹೋಗುವ ಗಾಯದ ಗುರುತು  ಮಾತ್ರ ಇದ್ದರೆ ಗುಂಡು ಶರೀರದ ಒಳಗಡೆಯೇ ಇದೆ ಎಂದು ಅರ್ಥ.

ಆದರೆ ಈ ಘಟನೆಯಲ್ಲಿ ಎಲ್ಲವೂ ಏರುಪೇರು ಆಗಿದ್ದರಿಂದ ನ್ಯಾಯಾಧೀಶರು ವಿಚಾರಣೆ ಸಮಯದಲ್ಲಿ ತನಿಖಾಧಿಕಾರಿಯನ್ನು ಕರೆದು ಪ್ರಶ್ನಿಸಿದರು. ಇದರ ಬಗ್ಗೆ ತಮಗೆ ಸರಿಯಾದ ತಿಳಿವಳಿಕೆ ಇಲ್ಲ ಎಂದು ತನಿಖಾಧಿಕಾರಿ ಉತ್ತರಿಸಿದರು. ಇದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.  ನ್ಯಾಯಾಧೀಶರು ನನ್ನನ್ನು ಉದ್ದೇಶಿಸಿ ‘ಈ ಪ್ರಕರಣದ ಆದೇಶವನ್ನು ಈಗಾಗಲೇ ಪೊಲೀಸರು ಬರೆದು ಆಗಿದೆಯಲ್ಲ, ಈಗ ಇರುವುದು ಔಪಚಾರಿಕ ಪ್ರಕ್ರಿಯೆ ಅಷ್ಟೆ’ ಎಂದರು.

ಇಂಥ ಪ್ರಕರಣಗಳಲ್ಲಿ ನಿಜವಾದ ‘ಅಪರಾಧಿ’ಗಳೂ ತಪ್ಪಿಸಿಕೊಳ್ಳುತ್ತಾರೆ, ತನಿಖಾಧಿಕಾರಿಯೂ ತಪ್ಪಿಸಿಕೊಳ್ಳುತ್ತಾರೆ. ಆದರೆ ಸಮಾಜದ ಉದ್ಧಾರಕ್ಕೆ ನಿಂತವರು, ಊರಿನವರಿಗೆ ನ್ಯಾಯ ದೊರಕಿಸಿಕೊಡಲು ಹೋದವರು ಮಾತ್ರ ಅನ್ಯಾಯವಾಗಿ ಇಹಲೋಕ ತ್ಯಜಿಸುತ್ತಾರೆ.

(ಎಲ್ಲರ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT