ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹಾಕಿಯ ಚುಕ್ಕಾಣಿ ಹಿಡಿದ ಬಾತ್ರಾ

ವ್ಯಕ್ತಿ
Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕ್ರೀಡೆ ಎನ್ನುವುದು ಇವತ್ತು ಸ್ಪರ್ಧಾಕೂಟಗಳು ಮತ್ತು ಪದಕ ಪ್ರತಿಷ್ಠೆಯ ಸೀಮಿತ ವಲಯವನ್ನು ಮೀರಿ ನಿಂತಿದೆ. ಎಪ್ಪತ್ತರ ದಶಕದ ನಂತರ ಒಲಿಂಪಿಕ್ಸ್‌, ವಿಶ್ವಕಪ್‌ ಫುಟ್‌ಬಾಲ್‌ ಮತ್ತು ಕ್ರಿಕೆಟ್‌ಗಳು ಟೆಲಿವಿಷನ್‌ ‘ಕ್ರೀಡಾ ಕ್ರಾಂತಿ’ಯ ಜತೆಗೆ ಕಾರ್ಪೊರೇಟ್‌ ಹೊಳಪು ಕಂಡುಕೊಂಡು ಜಗತ್ತಿನಾದ್ಯಂತ ಮೋಡಿ ಮಾಡಿದವು. ಈ ನಡುವೆ ಹಾಕಿ ಆಡಳಿತವೆಂದರೆ ‘ಯುರೋಪ್‌ನ ರಾಜಪರಂಪರೆ’ಗಳಂತೆ ಆ ಖಂಡದೊಳಗೇ ಜಡ್ಡುಗಟ್ಟಿದಂತಿತ್ತು. ಲೂಸಾನ್‌ನ ಕೇಂದ್ರ ಕಚೇರಿಯೇ ‘ಹಾಕಿ ಅರಮನೆ’ಯಂತಿತ್ತು.

ಹೊಸಗಾಳಿಗೆ ತೆರೆದುಕೊಂಡಿದ್ದೇ ಕಡಿಮೆ. ಇದೀಗ, ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನಲ್ಲಿ (ಎಫ್‌ಐಎಚ್‌) ಕ್ರಾಂತಿಯೇ ನಡೆದು ಹೋಗಿದೆ. ಪ್ಯಾರಿಸ್‌ನಲ್ಲಿ ಎಫ್‌ಐಎಚ್‌ ಹುಟ್ಟು ಪಡೆದು 92 ವರ್ಷಗಳ ನಂತರ ಆ ಖಂಡದ ಹೊರಗಿನವರೊಬ್ಬರು ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. 

ಅವರು ಭಾರತದ ನರಿಂದರ್‌ ಬಾತ್ರಾ! ಭಾರತದ ಕ್ರೀಡಾ ಚರಿತ್ರೆಯಲ್ಲಿ ಇದೊಂದು ವಿಶೇಷ ಅಧ್ಯಾಯ. ಅಂತರರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಗೆ ಜಗಮೋಹನ್‌ ದಾಲ್ಮಿಯ, ಶರದ್‌ ಪವಾರ್‌, ಎನ್‌.ಶ್ರೀನಿವಾಸನ್‌ ಮತ್ತು ಶಶಾಂಕ್‌ ಮನೋಹರ್‌ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.

ವಿಶ್ವ ಸ್ಕ್ವಾಷ್‌ ಫೆಡರೇಷನ್‌ಗೆ ಎನ್‌.ರಾಮಚಂದ್ರನ್‌ ಅಧ್ಯಕ್ಷರಾಗಿದ್ದಾರೆ. ಜನಾರ್ದನ ಗೆಹ್ಲಾಟ್‌ ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ನ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ವಿಶ್ವ ಮಟ್ಟದಲ್ಲಿ ಕ್ರೀಡಾಡಳಿತಗಾರರಾಗಿ ಎದ್ದುಕಂಡಿರುವ ಭಾರತೀಯರು ಇಲ್ಲವೇ ಇಲ್ಲ. ಹೋದ ವಾರ ದುಬೈನಲ್ಲಿ ನಡೆದ ಎಫ್‌ಐಎಚ್‌ನ 45ನೇ ಮಹಾಧಿವೇಶನದಲ್ಲಿ ಬಾತ್ರಾ ಅವರು ಅಧಿಕ ಮತ ಗಳಿಸಿ ಚುನಾಯಿತರಾದಾಗ ಜಗತ್ತಿನಾದ್ಯಂತ ಹಾಕಿ ವಲಯ ಬೆರಗಾಗಿತ್ತು.

ಹಾಕಿಯ ನಿಯಮಗಳನ್ನು ರೂಪಿಸಿದ ಇಂಗ್ಲೆಂಡ್‌ ತನ್ನ ವಸಾಹತುಗಳಲ್ಲಿ ಈ ಕ್ರೀಡೆಯನ್ನು ಪರಿಚಯಿಸಿತು. ಹಾಕಿಯ ಅಂತರರಾಷ್ಟ್ರೀಯ ಸಂಸ್ಥೆ ಹುಟ್ಟು ಪಡೆದಾಗ ಅದರಲ್ಲಿ ಆಸ್ಟ್ರಿಯ, ಬೆಲ್ಜಿಯಂ, ಚೆಕಸ್ಲೊವಾಕಿಯ, ಫ್ರಾನ್ಸ್‌, ಹಂಗರಿ, ಸ್ಪೇನ್‌, ಸ್ವಿಟ್ಜರ್‌ಲೆಂಡ್‌ ದೇಶಗಳು ಮಾತ್ರ ಇದ್ದವು.

ಈಗ 128 ದೇಶಗಳಾಗಿವೆ. ಆದರೆ ಈ ಕ್ರೀಡೆಯ ಆಡಳಿತ ಮತ್ತು ನಿಯಮಗಳನ್ನು ರೂಪಿಸುವ ಶಕ್ತಿ ಶತಮಾನದಿಂದಲೂ  ಯುರೋಪ್‌ನ ಕೈಯಲ್ಲಿಯೇ ಇದೆ. ಆದರೆ ಈ ಕ್ರೀಡೆ ಯುರೋಪ್‌, ಕೆನಡಾ, ಅರ್ಜೆಂಟಿನಾ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಕೆಲವು ದೇಶಗಳಲ್ಲಷ್ಟೇ ಗಟ್ಟಿಯಾಗಿ ನೆಲೆ ಕಂಡುಕೊಂಡಿದೆ.

ಈಚೆಗಿನ ದಿನಗಳಲ್ಲಿ ರಗ್ಬಿ, ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಮುಂತಾದ ಕ್ರೀಡೆಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿರುವಾಗ ಹಾಕಿ ಮಾತ್ರ ಆ ವೇಗದಲ್ಲಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಒಲಿಂಪಿಕ್ಸ್‌ನಿಂದಲೇ ಹಾಕಿಯನ್ನು ತೆಗೆದರೂ ಅಚ್ಚರಿ ಇಲ್ಲ ಎಂಬ ವದಂತಿಗೆ ಕಳೆದ ಒಂದು ವರ್ಷದಿಂದ ರೆಕ್ಕೆಗಳು ಮೂಡಿದ್ದವು.

ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ವಿಶ್ವ ಹಾಕಿ ಕುಟುಂಬವನ್ನು ಸಮೃದ್ಧಿಯೊಂದಿಗೆ ವಿಶ್ವದಾದ್ಯಂತ ವಿಸ್ತರಿಸುವ ಚಾಣಾಕ್ಷತನ ಇರುವ ಆಡಳಿತಗಾರರೊಬ್ಬರ ಅನಿವಾರ್ಯತೆ ಇತ್ತು. ಇದೀಗ ವಿಶ್ವ ಹಾಕಿ ವಲಯದಲ್ಲಿ ಬಹುತೇಕ ಮಂದಿಯ ಆಯ್ಕೆ ಬಾತ್ರಾ ಅವರಾಗಿದ್ದಾರೆ.

ಕಾಶ್ಮೀರ ವಿಶ್ವವಿದ್ಯಾಲಯದ ಕಾನೂನು ಪದವೀಧರ ಬಾತ್ರಾ, ದೊಡ್ಡ ಮಟ್ಟದಲ್ಲಿ ಹಾಕಿ ಆಡಿದವರೇನಲ್ಲ. ಈ ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡವರು.  59ರ ಹರೆಯದ ಇವರು ಕೇವಲ ಎರಡು ವರ್ಷಗಳ ಹಿಂದಷ್ಟೇ ‘ಹಾಕಿ ಇಂಡಿಯಾ’ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಕೆಲವು ಕಾಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಈ ನಡುವೆ ಏಷ್ಯಾ ಹಾಕಿ ಫೆಡರೇಷನ್‌ ಮತ್ತು ಭಾರತ ಒಲಿಂಪಿಕ್‌ ಸಂಸ್ಥೆಗಳ ಉಪಾಧ್ಯಕ್ಷರಾಗಿದ್ದರು. ಇವರು ಮೂಲತಃ ಒಬ್ಬ ವಾಣಿಜ್ಯೋದ್ಯಮಿ. ಶಿಕ್ಷಣ ಸಂಸ್ಥೆಗಳು, ಜವಳಿ ಸರಕು ರಫ್ತು, ವಾಹನದ ಬಿಡಿಭಾಗಗಳ ತಯಾರಿಕೆ ಸೇರಿದಂತೆ ಹತ್ತು ಹಲವು ವಹಿವಾಟುಗಳನ್ನು ಒಳಗೊಂಡಿರುವ ಉದ್ದಿಮೆ ಗುಂಪೊಂದರ ಆಡಳಿತ ನಿರ್ದೇಶಕರಾಗಿರುವ ಇವರು, ತಮ್ಮ ಸಂಸ್ಥೆಗಳನ್ನು ಲಾಭದಾಯಕವಾಗಿ ನಡೆಸಿದಷ್ಟೇ ಮುತುವರ್ಜಿಯಿಂದ ಹಾಕಿ ಇಂಡಿಯಾದ ಆಡಳಿತ ನಡೆಸಿ ಯಶಸ್ಸಿನ ಹಾದಿಯತ್ತ ಕೊಂಡೊಯ್ದರು.

ಒಲಿಂಪಿಕ್ಸ್‌ನಲ್ಲಿ 1928ರಿಂದ ಸತತವಾಗಿ 6 ವರ್ಷಗಳ ಕಾಲ ಚಿನ್ನ ಗೆದ್ದಿರುವ ಹೆಗ್ಗಳಿಕೆಯ ಭಾರತ, 80ರ ದಶಕದಿಂದ ಇನ್ನಿಲ್ಲದಂತೆ ಕಳಾಹೀನವಾಗುತ್ತಾ ಬಂದಿತು. 2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾದ ಭಾರತ, 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕೊನೆಯ ಸ್ಥಾನಕ್ಕಿಳಿಯಿತು. ಇಂತಹ ಕಾಲಘಟ್ಟದಲ್ಲಿ ಇವರು ‘ಹಾಕಿ ಇಂಡಿಯಾ’ ಮೂಲಕ ಭಾರತದಾದ್ಯಂತ ಹಾಕಿ ಅಲೆ ಎಬ್ಬಿಸಿದರು.

2013ರಲ್ಲಿ ‘ಫ್ರಾಂಚೈಸ್‌ ಆಧಾರಿತ’ ಹಾಕಿ ಇಂಡಿಯಾ ಲೀಗ್‌ ನಡೆಸಿದರು. ಅದು ಆಟಗಾರರು ಮತ್ತು ತಾಂತ್ರಿಕ ಮಂದಿಗೆ ಹಣಕಾಸಿನ ಭದ್ರತೆ ನೀಡಿತಲ್ಲದೆ, ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ಸು ಪಡೆಯಿತು. ದೇಶದಾದ್ಯಂತ ಹೆಚ್ಚು ಹೆಚ್ಚು ಎಳೆಯರು ಈ ಆಟದತ್ತ ಆಕರ್ಷಿತರಾದರು. ಅದೇ ವರ್ಷ ದೆಹಲಿಯಲ್ಲಿ ಎಫ್‌ಐಎಚ್‌ ಜೂನಿಯರ್‌ ವಿಶ್ವಕಪ್‌ ಕೂಟವನ್ನು ಸಂಘಟಿಸಿದರು. ಅದರ ಹಿಂದಿನ ವರ್ಷ ದೆಹಲಿಯಲ್ಲಿಯೇ ಎಫ್‌ಐಎಚ್‌ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಪಂದ್ಯಗಳನ್ನು ಸಂಘಟಿಸಿದ್ದರು. ಎರಡು ವರ್ಷಗಳ ಹಿಂದೆ ಎಫ್‌ಐಎಚ್‌ ವಿಶ್ವಲೀಗ್‌ ಅಂತಿಮ ಸುತ್ತಿನ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಿದರು.

ಹಾಕಿ ಇಂಡಿಯಾ ಮೂಲಕ ಬಾತ್ರಾ ಅವರು ಈ ದೇಶದಲ್ಲಿ ಹಾಕಿ ಚಟುವಟಿಕೆಗಳಿಗೆ ಹೊಸರೂಪು ನೀಡಿದರು. ಚೇತನ ತುಂಬಿದರು. ಭಾರತ ಕ್ರೀಡಾ ಪ್ರಾಧಿಕಾರದ ಜತೆಗೂಡಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದರು. ನಿರಂತರವಾಗಿ ಒಂದಿಲ್ಲಾ ಒಂದು ಟೂರ್ನಿಯನ್ನು ಸಂಘಟಿಸಿದರು.

ಪ್ರತಿಭಾನ್ವೇಷಣೆ ಪ್ರಕ್ರಿಯೆ ಪರಿಣಾಮಕಾರಿ ಆಯಾಮ ಕಂಡುಕೊಂಡಿತು. ಹೋದ ವರ್ಷ ಹಾಕಿ ಜಗತ್ತಿನ ಪ್ರತಿಷ್ಠಿತ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿ ಕೂಟದಲ್ಲಿ ಭಾರತ ಬೆಳ್ಳಿ ಗೆದ್ದರೆ, ಇದೇ ವರ್ಷ ರಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿತು. ಅಜ್ಲಾನ್‌ ಷಾ ಟ್ರೋಫಿ ಟೂರ್ನಿಯಲ್ಲಿಯೂ ಭಾರತ ರನ್ನರ್ಸ್‌ಅಪ್‌ ಸ್ಥಾನ ಪಡೆಯಿತು.

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯೂ ಭಾರತದ ಮುಡಿಗೇರಿತು. ಇದೇ ರೀತಿ ಭಾರತ ಯಶಸ್ಸಿನ ದಾಪುಗಾಲು ಇಡತೊಡಗಿದರೆ, ಕೆಲವೇ ವರ್ಷಗಳಲ್ಲಿ ಹಾಕಿಯಲ್ಲಿ ವಿಶ್ವದ ಅಗ್ರಮಾನ್ಯ ದೇಶವಾಗುವುದು ಖಚಿತ. ಇಂತಹ ಮೈಲಿಗಲ್ಲುಗಳ ಹಿಂದೆ ಬಾತ್ರಾ ದಕ್ಷತೆ ಅಡಗಿದೆ ಎಂಬುದು ಹಾಕಿ ‘ಹಿರಿಯಣ್ಣ’ಗಳ ಕೂಟಕ್ಕೆ ಗೊತ್ತಾಯಿತು. ಅವರು ಹಾಕಿಯ ಹಿತದೃಷ್ಟಿಯಿಂದ ಬಾತ್ರಾ ಅವರ ಕೈಗೇ ‘ಲೂಸಾನ್‌ ಹಾಕಿ ಅರಮನೆ’ಯ ಕೀಲಿ ಕೈ ನೀಡಿದ್ದಾರೆ.

ಹೋದ ವಾರ ವಿಶ್ವ ಹಾಕಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಮಾಧ್ಯಮದ ಜತೆ ಮಾತನಾಡಿದ ಬಾತ್ರಾ ‘ಜಗತ್ತಿನ ಹೆಚ್ಚು ಜನರನ್ನು ತಲುಪುವುದು ಮತ್ತು ಅಪಾರ ಆದಾಯ ಗಳಿಸುವುದೇ ಸದ್ಯದ ನಮ್ಮ ಹೆಗ್ಗುರಿ’ ಎಂದಿರುವುದು ಅರ್ಥಪೂರ್ಣ. ‘ಮುಂದಿನ  ಪೀಳಿಗೆ ಕ್ರಿಕೆಟ್‌, ಫುಟ್‌ಬಾಲ್‌ನಂತೆ ಹಾಕಿಯತ್ತ ನೋಡುವಂತೆ ಮಾಡುವುದು ಎಫ್‌ಐಎಚ್‌ನ  ಆಶಯವಾಗಿದೆ’ ಎಂದಿದ್ದಾರೆ.

‘ಒಂದು ದಶಕದ ಹಾಕಿ ಕ್ರಾಂತಿಯ ಯೋಜನೆಯ ಮೂಲಕ ಆಫ್ರಿಕಾ ಖಂಡದ ಕೆಲ ದೇಶಗಳೂ ಸೇರಿದಂತೆ ವಿಶ್ವದಾದ್ಯಂತ ಎಫ್‌ಐಎಚ್‌ ಜಾಲವನ್ನು ವಿಸ್ತರಿಸಲಿದ್ದೇವೆ.ವೃತ್ತಿಪರತೆ ವೃದ್ಧಿಸುವುದರ ಜತೆಗೆ, ಪ್ರೇಕ್ಷಕರು ಬಯಸುವ ಮನರಂಜನೆ ನೀಡುವುದು... ಇತ್ಯಾದಿ ಮೂಲಕ ಜಗತ್ತಿನ ಕ್ರೀಡಾ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುವ ಗುರಿ ಇದೆ’ ಎಂದೂ ಅವರು ಹೇಳಿದ್ದಾರೆ.

ಈ ಆತ್ಮವಿಶ್ವಾಸದ ಕನಸುಗಳು  ಮುಂದಿನ ಒಂದು ದಶಕದಲ್ಲಿ ಜಗತ್ತಿನಾದ್ಯಂತ ಹಾಕಿ ಹೊಸ ಆಯಾಮ ಕಂಡುಕೊಳ್ಳುವುದರ ದ್ಯೋತಕದಂತಿವೆ. ಜಾಗತಿಕ ಹಾಕಿಯಲ್ಲಿ ನಡೆಯಲಿರುವ ಇಂತಹದ್ದೊಂದು ‘ಹಾಕಿ ಕ್ರಾಂತಿ’ಯ ಹರಿಕಾರ ಭಾರತೀಯ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT