ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ನಾಳೆಗಾಗಿ ನೂರಾರು ಕನಸು

Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರಿಗೀಗ ಹಗಲಿರುಳೂ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೆಲಸ. ರಾಯಚೂರಿನಲ್ಲಿ ನಡೆಯಲಿರುವ ಈ ಸಮ್ಮೇಳನದ ಸಿದ್ಧತೆಯ ಮುಂಚೂಣಿಯಲ್ಲಿ ನಿಂತಿರುವ ಅವರು, ‘ಕಸಾಪ’ದ ಪ್ರತಿನಿಧಿಯಾಗಿ ಮೂಡುಬಿದರೆಯ ‘ಆಳ್ವಾಸ್‌ ನುಡಿಸಿರಿ’ಯಲ್ಲಿ ಭಾಗವಹಿಸುವುದಕ್ಕೆ ಬಿಡುವು ಮಾಡಿಕೊಂಡಿದ್ದರು. ‘ನುಡಿಸಿರಿ’ಯ ಗೌಜಿಗದ್ದಲದ ನಡುವೆಯೂ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಜೊತೆಗೆ ಪರಿಷತ್ತನ್ನು ಮುನ್ನಡೆಸುವ ಕುರಿತಂತೆ ತಮ್ಮ ಯೋಜನೆಗಳನ್ನು ಹಂಚಿಕೊಂಡರು.

* ಲೇಖಕರಾಗಿ, ಅಧಿಕಾರಿಯಾಗಿ ನೀವು ಹಲವು ಸಾಹಿತ್ಯ ಸಮ್ಮೇಳನಗಳನ್ನು ಹತ್ತಿರದಿಂದ ಗಮನಿಸಿದ್ದೀರಿ. ಈಗ ನಿಮ್ಮದೇ ಉಸ್ತುವಾರಿಯಲ್ಲಿ ಸಮ್ಮೇಳನ ನಡೆಯುತ್ತಿದೆ. ನೀವು ನೋಡಿದ ಅಥವಾ ಭಾಗಿಯಾದ ಸಮ್ಮೇಳನಗಳಿಗೂ ಆಯೋಜಿಸುತ್ತಿರುವ ಸಮ್ಮೇಳನಕ್ಕೂ ಬದಲಾವಣೆಗಳೇನಾದರೂ ಇವೆಯೇ?
ಕನ್ನಡ ಸಾಹಿತ್ಯ ಪರಿಷತ್ತು 101 ವರ್ಷಗಳ ಇತಿಹಾಸ ಇರುವ ಪ್ರತಿಷ್ಠಿತ ಸಂಸ್ಥೆ. ಸಮ್ಮೇಳನಗಳ ಆಯೋಜನೆಯಲ್ಲಿ ಈ ಹಿಂದಿನಿಂದ ನಡೆದು ಬಂದಿರುವ ಉತ್ತಮ ಅಂಶಗಳನ್ನು ಮುಂದುವರೆಸುತ್ತೇನೆ.

ಸಮ್ಮೇಳನ ಮಾಡುವಾಗ ಈಗಿನ ಅವಶ್ಯಕತೆಗೆ ತಕ್ಕಂತೆ ಕೆಲವು ಬದಲಾವಣೆ ಮಾಡಿದ್ದು, ಈ ಬಾರಿಯೇ ಅದನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ಪ್ರತಿಸಾರಿ ‘ಒಒಡಿ’ ಪ್ರಮಾಣಪತ್ರಕ್ಕಾಗಿ ಸಮ್ಮೇಳನದಲ್ಲಿ ನೂಕುನುಗ್ಗಲು ನಡೆಯುವುದನ್ನು ನೋಡಿದ್ದೇವೆ. ಪರಿಷತ್ತಿನ 30 ಜಿಲ್ಲಾ ಘಟಕಗಳು ಮತ್ತು ನಾಲ್ಕು ಹೊರನಾಡ ಘಟಕಗಳ ಅಧ್ಯಕ್ಷರಿಗೆ ‘ಒಒಡಿ’ ಪ್ರಮಾಣಪತ್ರಗಳನ್ನು ಹಂಚುವ ಜವಾಬ್ದಾರಿ ವಹಿಸುತ್ತಿದ್ದೇವೆ. ಈ ಮೂಲಕ ನೂಕುನುಗ್ಗಲು ತಪ್ಪುತ್ತದೆಂದು ಭಾವಿಸಿರುವೆ.

ಇನ್ನು ಕೆಲವು ಬಾರಿ ಯಾವುದೇ ಕಾರಣವಿಲ್ಲದೆ ಗದ್ದಲ ಮಾಡುವವರು ಇರುತ್ತಾರೆ. ಅವರ ಬಗ್ಗೆ ನಿಗಾ ಇಡಲು ಸಿಸಿಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಮತ್ತು ವ್ಯವಸ್ಥಾಪಕರಿಗೆ ಸೂಚಿಸಿದ್ದೇನೆ. ಇದಿಷ್ಟು ವ್ಯವಸ್ಥೆಯ ವಿಷಯ. ಈ ಬಾರಿ ಗೋಷ್ಠಿಗಳನ್ನು ವಿಭಿನ್ನವಾಗಿ ಆಯೋಜಿಸುತ್ತಿದ್ದೇವೆ.

ದಲಿತ ಬಂಡಾಯ ಸಾಹಿತ್ಯಕ್ಕೆ ಆದ್ಯತೆ ನೀಡಲಾಗಿದೆ. ಈ ಗೋಷ್ಠಿಗಳ ಚರ್ಚೆ ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತದೆ. ಕನ್ನಡಕ್ಕಾಗಿ ಎಷ್ಟೊಂದು ಜನ ಹೋರಾಡುತ್ತಿದ್ದಾರೆ; ಅವರೆಲ್ಲರ ಕೊಡುಗೆಯೂ ಈ ನುಡಿಜಾತ್ರೆಯಲ್ಲಿ ಇದ್ದೇ ಇದೆ. ಹೋರಾಟಗಾರರನ್ನೂ ಸೇರಿಸಿಕೊಂಡು ಚರ್ಚೆ–ಸಂವಾದಗಳನ್ನು ನಡೆಸುವ ಉದ್ದೇಶ ನಮ್ಮದು.

ನೀರಿನ ಸಮಸ್ಯೆ ಕರ್ನಾಟಕವನ್ನು ತೀವ್ರವಾಗಿ ಕಾಡುತ್ತಿದೆ. ಹಾಗಾಗಿ, ಸ್ವತಃ ಎಂಜಿನಿಯರ್‌ ಹಾಗೂ ಜನಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವ ಇರುವ ಬಸವರಾಜ ಬೊಮ್ಮಾಯಿ ಅವರಿಂದ  ನೀರು ಮತ್ತು ನೀರಾವರಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಶೇಷ ಉಪನ್ಯಾಸ ಏರ್ಪಾಡು ಮಾಡಲಾಗಿದೆ. ಕಾವೇರಿ, ಮಹಾದಾಯಿ, ಕೃಷ್ಣಾ ಹೋರಾಟಗಳು ಗೋಷ್ಠಿಗಳಲ್ಲಿ ಉಲ್ಲೇಖವಾಗುತ್ತವೆ.

ಕನ್ನಡ ಶಾಲೆಗಳ ಸಮಸ್ಯೆ ನಮ್ಮನ್ನು ಆತಂಕಕ್ಕೆ ದೂಡಿರುವ ಮತ್ತೊಂದು ಸಂಗತಿ. ಇದರ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚೆ ಆಗಲಿದೆ. ಸಮ್ಮೇಳನದಲ್ಲಿ ಆದಷ್ಟೂ ಸಮಕಾಲೀನ ಸಂಗತಿಗಳಿಗೆ ಆದ್ಯತೆ ನೀಡಲಾಗುವುದು. ಆ ಮೂಲಕ ನಾಡು–ನುಡಿಯ ಸಮಸ್ಯೆಗಳಿಗೆ ಸ್ಪಂದಿಸಲು ಪೂರಕವಾದ ವಿಚಾರವೊಂದು ಸೃಷ್ಟಿಯಾದರೆ ನಮ್ಮ ಪ್ರಯತ್ನ ಸಾರ್ಥಕವಾದಂತೆ.

* ಸಾಹಿತ್ಯ ಸಮ್ಮೇಳನಗಳು, ಮೇಷ್ಟ್ರು ಮತ್ತು ವಿದ್ಯಾರ್ಥಿಗಳ ಪಿಕ್‌ನಿಕ್‌ ತಾಣಗಳಾಗುತ್ತಿವೆ ಎನ್ನುವ ಆರೋಪವಿದೆ. ಇದನ್ನು ತಪ್ಪಿಸಿ, ಸಮ್ಮೇಳನಕ್ಕೆ ಗಾಂಭೀರ್ಯ ತಂದುಕೊಡುವುದು ಹೇಗೆ?
ಹೌದು, ಅನೇಕರು ಪಿಕ್‌ನಿಕ್‌ ಅಂದುಕೊಂಡು ಸಮ್ಮೇಳನಕ್ಕೆ ಬರುತ್ತಾರೆ ಎಂದು ನನಗೂ ಅನ್ನಿಸಿದೆ. ಆದರೆ ಜನಸಾಮಾನ್ಯರು ‘ಕನ್ನಡದ ಜಾತ್ರೆ’ ಎಂದು ಉತ್ಸಾಹದಿಂದ ಸಮ್ಮೇಳನಕ್ಕೆ ಬರುತ್ತಾರೆ. ಸಾಹಿತಿಗಳನ್ನು ನೋಡುವ, ಮಾತನಾಡಿಸುವ ಉಮೇದು ಅವರದು. ಸಮ್ಮೇಳನಾಧ್ಯಕ್ಷರು ಮತ್ತು ವಿದ್ವಾಂಸರ ನುಡಿಗಳನ್ನು ಅಲ್ಪಸ್ವಲ್ಪವಾದರೂ ಜನ ಕೇಳಿಸಿಕೊಳ್ಳುತ್ತಾರೆ. ಇದೇನು ಕಡಿಮೆ ಸಾಧನೆಯಲ್ಲ.

ಪ್ರತಿಯೊಬ್ಬರ ಆಸಕ್ತಿ ಭಿನ್ನವಾಗಿರುತ್ತದೆ. ಅದನ್ನು ನಾವು ಗೌರವಿಸಲೇಬೇಕು. ಸಮ್ಮೇಳನಕ್ಕೆ ಬರುವವರನ್ನು ವರ್ಷಪೂರ್ತಿ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಕಮ್ಮಟ–ಸಮಾವೇಶಗಳನ್ನು ‘ಕಸಾಪ’ ಆಯೋಜಿಸುತ್ತದೆ. ನೀನಾಸಂ ಸಂಸ್ಕೃತಿ ಶಿಬಿರ, ಆಳ್ವಾಸ್‌ ನುಡಿಸಿರಿ, ಧಾರವಾಡ ಸಾಹಿತ್ಯ ಸಂಭ್ರಮ – ಹೀಗೆ ಸಾಹಿತ್ಯಾಸಕ್ತರಿಗೆ ಆಯ್ಕೆಗಳು ಸಾಕಷ್ಟಿವೆ.

* ‘ಕಸಾಪ’ ಸಾಹಿತ್ಯ ಸಮ್ಮೇಳನ ಇವೆಲ್ಲವುಗಳಿಗಿಂತ ಹೇಗೆ ಭಿನ್ನ?
ಮೇಲೆ ಹೇಳಿದ ಶಿಬಿರ, ಕಾರ್ಯಕ್ರಮಗಳಿಗೆ ನಿರ್ದಿಷ್ಟವಾದ ಮತ್ತು ಸೀಮಿತವಾದ ವ್ಯಾಪ್ತಿಯಿದೆ. ನಮ್ಮದು ಲಕ್ಷಾಂತರ ಮಂದಿ ಭಾಗವಹಿಸುವ ಸಮ್ಮೇಳನ. ಸಾಹಿತ್ಯ ಸಮ್ಮೇಳನಕ್ಕೆ ಅದರದ್ದೇ ಆದ ಅನನ್ಯತೆ ಇದೆ. ಹೆಚ್ಚಿನ ಸಂಖ್ಯೆಯ ವಿದ್ವಾಂಸರು, ಸಾಹಿತ್ಯಾಸಕ್ತರು ಸಮ್ಮೇಳನಗಳಲ್ಲಿ ಭಾಗವಹಿಸುತ್ತಾರೆ.

* ಸಾಹಿತ್ಯ ಪರಿಷತ್ತು ನೂರು ವರ್ಷಗಳ ಹಿರಿಯ ಸಂಸ್ಥೆ. ಆದರೆ, ಪರಿಷತ್ತಿನೊಂದಿಗೆ ಯುವಜನರ ಒಡನಾಟ ಅಷ್ಟಕ್ಕಷ್ಟೆ. ತರುಣ ತರುಣಿಯರನ್ನು ಸೆಳೆಯಲು ವಿಶೇಷ ಪ್ರಯತ್ನಗಳನ್ನು ನಡೆಸಿದ್ದೀರಾ?
ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಉದ್ಯೋಗ, ಹಣ ಬದುಕಿನಲ್ಲಿ ಮುಖ್ಯವಾಗುತ್ತಿರುವಾಗ ಯುವಜನ ಅತ್ತ ಮನಸ್ಸು ಮಾಡುವುದು ಸಹಜ. ನಾವು ಅವರ ದಾರಿಯಲ್ಲಿಯೇ ಸಾಗಿ ಅವರನ್ನು ಕನ್ನಡದ ಬಳಿಗೆ ಬರುವಂತೆ ಓಲೈಸಬೇಕಾಗಿದೆ. ಅಂತಹ ಒಂದು ಯೋಚನೆ ಹೀಗಿದೆ: ಬೆಂಗಳೂರು ಮತ್ತಿತರ ನಗರ ಕೇಂದ್ರಗಳಲ್ಲಿರುವ ಕಂಪೆನಿಗಳು ಕನ್ನಡದ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ದೂರುತ್ತವೆ. ಮತ್ತೊಂದು ಕಡೆ, ಕನ್ನಡದ ಯುವಜನತೆ ಉದ್ಯೋಗ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದೆ.

ಇವರಿಬ್ಬರಿಗೆ ಕೊಂಡಿಯಾಗುವ ಪ್ರಯತ್ನವನ್ನು ಪರಿಷತ್ತು ಮಾಡಲಿದೆ. ವಿಜ್ಞಾನ–ತಂತ್ರಜ್ಞಾನ ಮತ್ತು ಕನ್ನಡಿಗರಿಗೆ ಉದ್ಯೋಗ ಸಮಿತಿ ರಚಿಸಲಾಗಿದ್ದು, ಆಧುನಿಕ ಕಾಲದ ಅಗತ್ಯಕ್ಕೆ ತಕ್ಕ ನಡೆಯನ್ನು ಪರಿಷತ್‌ ಇರಿಸಲಿದೆ. ಪ್ರಸಕ್ತ ಸಾಹಿತ್ಯ ಸಮ್ಮೇಳನದಲ್ಲಿ ಯುವಜನರನ್ನು ಗಮನದಲ್ಲಿ ಇರಿಸಿಕೊಂಡು ತಂತ್ರಜ್ಞಾನಕ್ಕೆ ಸಂಬಂಧಿಸಿದ ಗೋಷ್ಠಿಗಳನ್ನು ಆಯೋಜಿಸಿದ್ದೇವೆ.

ಕನ್ನಡ ಉಳಿಯಬೇಕಾದರೆ ಹಳೆಗನ್ನಡ–ನಡುಗನ್ನಡವನ್ನು ಅರಿಯುವುದು ಅಗತ್ಯ. ಕುಮಾರವ್ಯಾಸ, ಪಂಪ, ರನ್ನರನ್ನು ಅರಿಯದೇ ಇದ್ದರೆ ಯುವಜನತೆ ಕನ್ನಡದ ಆಳ ಅಗಲವನ್ನು ಅರಿಯುವುದು ಕಷ್ಟ. ಆದ್ದರಿಂದ ಶಾಸ್ತ್ರೀಯ ಭಾಷಾ ಕಮ್ಮಟಗಳನ್ನು ಎಲ್ಲ ಜಿಲ್ಲೆಗಳಲ್ಲಿ ಮಾಡುತ್ತೇವೆ. ಮೈಸೂರಿನ ‘ಭಾರತೀಯ ಭಾಷಾ ಸಂಸ್ಥಾನ’ದ ಸಹಯೋಗದಲ್ಲಿ ಇಂತಹ ಕಮ್ಮಟಗಳು ಈಗಾಗಲೇ ಆರು ಜಿಲ್ಲೆಗಳಲ್ಲಿ ನಡೆದಿವೆ.

* ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಪರಿಷತ್ತಿನದು ನಿಧಾನನಡೆಯೇ? ಸಾಹಿತ್ಯ ಪರಿಷತ್ತಿನ ಜಾಲತಾಣದಲ್ಲಿ (kasapa.in) ಈಗಲೂ ಹಳೆಯ ಮಾಹಿತಿಯೇ ಇದೆ?
ಈ ಸಾಹಿತ್ಯ ಸಮ್ಮೇಳನದ ಒಳಗೆ ವೆಬ್‌ಸೈಟ್‌ ಕ್ರಿಯಾಶೀಲವಾಗುತ್ತದೆ. ಅಪ್‌ಡೇಟ್‌ ಮಾತ್ರವಲ್ಲ, ಬಳಕೆದಾರರೊಂದಿಗೆ ಸಂವಹನ ನಡೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಕನ್ನಡಿಗರ ಪ್ರಶ್ನೆಗಳಿಗೆ ಉತ್ತರ ದೊರೆಯುವಂತೆ ಮಾಡಬೇಕು, ಪರಿಷತ್ತು ಪ್ರಕಟಿಸಿದ ಮಹತ್ವದ ಗ್ರಂಥಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡಬೇಕು ಎಂದುಕೊಂಡಿದ್ದೇನೆ.

ತಂತ್ರಜ್ಞಾನವನ್ನು ಬಳಸಿಕೊಂಡು ಯುವಜನರನ್ನು ತಲುಪುವುದು ಹೇಗೆಲ್ಲ ಸಾಧ್ಯವೋ ಆ ಎಲ್ಲ ಸಾಧ್ಯತೆಗಳನ್ನು ಕಾರ್ಯರೂಪಕ್ಕೆ ತರಲು ಪರಿಷತ್‌ ಉತ್ಸುಕವಾಗಿದೆ. ಕನ್ನಡ ಪುಸ್ತಕಗಳನ್ನು ಡಿಜಿಟಲೈಸ್‌ ಮಾಡಿ ಆನ್‌ಲೈನ್‌ಗೆ ಅಳವಡಿಸುವುದು ಮಾತ್ರವಲ್ಲ, ಮೊಬೈಲ್‌ಗಳಲ್ಲಿ ಕನ್ನಡಕ್ಕೆ ಪೂರಕವಾದ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಚಿಂತನೆಯೂ ನಮ್ಮ ವಿಜ್ಞಾನ ತಂತ್ರಜ್ಞಾನ ಸಮಿತಿಯ ಮುಂದಿದೆ.

ತಾಂತ್ರಿಕ ಸಂಗತಿಗಳಿಗೆ ಸಂಬಂಧಿಸಿದಂತೆ  ಎಸ್‌.ಆರ್‌.ವಿಜಯಶಂಕರ, ಅನಂತ ಕೊಪ್ಪರ, ಎನ್‌.ಎ.ಎಂ. ಇಸ್ಮಾಯಿಲ್‌, ಅರುಣ್‌ ಕುಮಾರ್‌ ಕನ್ನೂರು ನಮ್ಮೊಡನೆ ಕೈ ಜೋಡಿಸುತ್ತಿದ್ದಾರೆ. ಹೊಸ ಆಲೋಚನೆ ಮತ್ತು ಅನ್ವೇಷಣೆಗೆ ಪರಿಷತ್‌ ಸದಾ ತೆರೆದುಕೊಂಡಿರುತ್ತದೆ. ಒಟ್ಟಿನಲ್ಲಿ ಕನ್ನಡ ಬೆಳೆಯಬೇಕು ಎನ್ನುವ ಆಶಯ ನಮ್ಮದು.

* ಹೊಸ ತಲೆಮಾರಿನ ತರುಣ ತರುಣಿಯರು ಉತ್ಸಾಹದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಭಾಷೆಗೆ ಸಂಬಂಧಿಸಿದಂತೆ ಉಲ್ಲಾಸದ ವಾತಾವರಣವೊಂದು ಕಾಣಿಸುತ್ತಿಲ್ಲ ಎನ್ನುವುದು ಕೆಲವರ ಅಳಲು. ನಿಮಗೆ ಏನನ್ನಿಸುತ್ತದೆ?
ಕನ್ನಡದಲ್ಲಿ ಬರೆದರೆ ಯಾರೂ ಓದುವುದಿಲ್ಲ ಎಂಬುದು ಸುಳ್ಳು. ಆದರೆ ಹೊಸ ತಲೆಮಾರಿಗೆ ತನ್ನದೇ ಆದ ಓದುಗರನ್ನು ಕಂಡುಕೊಳ್ಳುವುದು ಕಷ್ಟವಾಗುತ್ತಿದೆ. ಇಂಗ್ಲಿಷ್‌ ಮಾಧ್ಯಮದ ಕಲಿಕೆ ಕನ್ನಡದ ಓದನ್ನು ಸೀಮಿತಗೊಳಿಸಿರುವುದು ನಿಜ.

ಎಲ್ಲರ ಬಳಿಗೆ ಕನ್ನಡವನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿಯೇ ಇಂಟರ್ನೆಟ್‌, ಆ್ಯಪ್‌ಗಳ ಕುರಿತು ಪರಿಷತ್‌ ತಲೆಕೆಡಿಸಿಕೊಂಡಿರುವುದು. ಮತ್ತೊಂದೆಡೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನ ತಿದ್ದುಪಡಿಯೇ ಆಗಬೇಕಾಗಿದೆ. ಅದಕ್ಕಾಗಿ ಪರಿಷತ್ತಿನ ನೇತೃತ್ವದಲ್ಲಿ ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯಾಯಮೂರ್ತಿಗಳಾದ ರಾಮಾಜೋಯಿಸ್‌,  ಎಚ್‌.ಎನ್‌.ನಾಗಮೋಹನ ದಾಸ್‌, ಎ.ಜೆ.ಸದಾಶಿವ ಸೇರಿದಂತೆ ನಾಡಿನ ಚಿಂತಕರು, ಹೋರಾಟಗಾರರ ಸಭೆ ನಡೆಸಿ ಸಂವಿಧಾನ ತಿದ್ದುಪಡಿಯ ಬಗ್ಗೆ ಚರ್ಚೆ ನಡೆಸಲಾಗಿದೆ.

ಶಿಕ್ಷಣ ನೀತಿ ಮತ್ತು ಶಿಕ್ಷಣ ಮಾಧ್ಯಮದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ   ಪತ್ರ ಬರೆದಿದ್ದೇವೆ. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಿಲುವಳಿ ಮಂಡನೆಯಾದಲ್ಲಿ ಅದನ್ನು ಬೆಂಬಲಿಸುವಂತೆ ಜನಪ್ರತಿನಿಧಿಗಳಿಗೆ ಸಲಹೆ ನೀಡಲು ರಾಜ್ಯದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರನ್ನು ಕೋರಿದ್ದೇವೆ. ಕನ್ನಡದ ನಾಳೆಗಾಗಿ ಮಾಡಬೇಕಾದ ಕೆಲಸ ನೂರಾರಿವೆ. ಒಂದೊಂದಾಗಿ ಕೈಗೆತ್ತಿಕೊಂಡು ಸಾಗುವ ಜವಾಬ್ದಾರಿ ಪರಿಷತ್ತಿನ ಹೆಗಲ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT