ನಿಧಾನ ಸಾವಿನ ಕಡೆಗೆ ತೆವಳುತ್ತಿದ್ದೇವೆಯೇ?

ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಮಾತಿದು. ಬಿ.ಬಿ.ಸಿ ಹಿಂದಿ ಸುದ್ದಿ ವಾಹಿನಿಯ ವರದಿಗಾರ ಅಜಯ್‌ ಶರ್ಮ ಕರ್ನಾಟಕಕ್ಕೆ ಬಂದಿದ್ದರು. ಅವರಿಗೆ ಭಾರತದ ವಿವಿಧ ರಾಜ್ಯಗಳಲ್ಲಿ ಏಳು ಸಾವಿರ ಕಿಲೋಮೀಟರ್‌ಗಳಷ್ಟು ದೀರ್ಘ ಸಂಚಾರ ಮಾಡಿ ಅಲ್ಲಿನ ಬರದ ಸ್ಥಿತಿಯ ಬಗೆಗೆ ವರದಿ ಮಾಡಲು ಬಿ.ಬಿ.ಸಿ ಸೂಚಿಸಿತ್ತು.

ನಿಧಾನ ಸಾವಿನ ಕಡೆಗೆ ತೆವಳುತ್ತಿದ್ದೇವೆಯೇ?

ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಮಾತಿದು. ಬಿ.ಬಿ.ಸಿ ಹಿಂದಿ ಸುದ್ದಿ ವಾಹಿನಿಯ ವರದಿಗಾರ ಅಜಯ್‌ ಶರ್ಮ ಕರ್ನಾಟಕಕ್ಕೆ ಬಂದಿದ್ದರು. ಅವರಿಗೆ ಭಾರತದ ವಿವಿಧ ರಾಜ್ಯಗಳಲ್ಲಿ ಏಳು ಸಾವಿರ ಕಿಲೋಮೀಟರ್‌ಗಳಷ್ಟು ದೀರ್ಘ ಸಂಚಾರ ಮಾಡಿ ಅಲ್ಲಿನ ಬರದ ಸ್ಥಿತಿಯ ಬಗೆಗೆ ವರದಿ ಮಾಡಲು ಬಿ.ಬಿ.ಸಿ ಸೂಚಿಸಿತ್ತು. 

ದಕ್ಷಿಣ ಕರ್ನಾಟಕದ ಹುಂಚಿನಾಳ (ಹಂಚಿನಾಳ?) ಎಂಬ ಒಂದು ಹಳ್ಳಿಯಿಂದ ಅವರು ತಮ್ಮ ಪ್ರಯಾಣ ಆರಂಭಿಸಿದ್ದರು. ಆ ಹಳ್ಳಿಯಲ್ಲಿ ಅವರು ಭೇಟಿ ಮಾಡಿದ್ದು ಹನುಮಂತಿ ಎಂಬ ನೂರೊಂದು ವರ್ಷದ ವೃದ್ಧ ಜೀವವನ್ನು. ಹಣ್ಣಾಗಿ ಹೋಗಿದ್ದ ಆ ಮುದುಕಿಯ ಮುಖದ ಮೇಲಿನ ಆಳವಾದ ಗೆರೆಗಳು ಇಡೀ ಭಾರತದ ಮೇಲೆ ಬರ ಎಳೆದ ಬರೆಗಳ ಹಾಗೆ ಕಾಣುತ್ತಿದ್ದುವು ಎಂದು ಅಜಯ್‌ ಶರ್ಮ ಬರೆದಿದ್ದರು.

ಅವರು ಕಳಿಸಿದ ವರದಿ ಕಳೆದ ಮೇ ತಿಂಗಳು ಪ್ರಕಟವಾಗಿತ್ತು. ‘ಈಗ ಹನುಮಂತಿ ಬದುಕಿದ್ದಾಳೋ ಇಲ್ಲವೋ’ ಎಂದು ಅವರು ತಮ್ಮ ವರದಿಯಲ್ಲಿ ಶಂಕಿಸಿದ್ದರು. ಏಕೆಂದರೆ ಕಳೆದ ವರ್ಷದ ಬರವೂ ಇಷ್ಟೇ ತೀವ್ರವಾಗಿತ್ತು. ಜೀವನದಲ್ಲಿ ಸೋತು ಹಣ್ಣುಹಣ್ಣಾಗಿದ್ದ ಹನುಮಂತಿ ಎಲ್ಲ ಆಸೆ ಕಳೆದುಕೊಂಡಿದ್ದಳು.

‘ತಮ್ಮಾ ನಾನು ಇನ್ನು ಬಹಳ ದಿನ ಬದುಕಲಿಕ್ಕಿಲ್ಲ’ ಎಂದು ಆಕೆ ಅಜಯ್‌ ಶರ್ಮಗೆ ಹೇಳಿದ್ದಳು. ಸತತವಾಗಿ ಕಾಡುತ್ತಿರುವ ಬರ ನಮ್ಮ ಹಳ್ಳಿಗರ ಬದುಕುವ ಭರವಸೆಯನ್ನೇ ಕಸಿದುಕೊಳ್ಳುತ್ತಿದೆಯೇ? ತಾನು ಬಹಳ ದಿನ ಬದುಕಲಿಕ್ಕಿಲ್ಲ ಎಂಬ ಹನುಮಂತಿಯ ಮಾತು ಅದನ್ನೇ ಹೇಳುತ್ತಿರುವಂತಿದೆ.

ಈ ವರ್ಷ ವಾಡಿಕೆಗಿಂತ ಉತ್ತಮ ಮುಂಗಾರು ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆಯವರು ಅಂದಾಜು ಮಾಡಿದ್ದರು. ಅಜಯ್‌ ಶರ್ಮ ತಮ್ಮ ಸುದೀರ್ಘ ಪಯಣದ ನಂತರ ಕಳೆದ ಮೇ ತಿಂಗಳು ತಮ್ಮ ವರದಿ ಪ್ರಕಟಿಸಿದಾಗ ಹವಾಮಾನ ಇಲಾಖೆಯ ಮುಂಗಾಣ್ಕೆ ನಮ್ಮ ನೆತ್ತಿಯ ಮೇಲೆ ಭರವಸೆಯ ಮೋಡದಂತೆ ಇನ್ನೂ ತೇಲುತ್ತಿತ್ತು.

ಈಗ ಮತ್ತೊಂದು ಅಕ್ಟೋಬರ್‌ ಮುಗಿದು ನವೆಂಬರ್‌ ತಿಂಗಳಲ್ಲಿ 20 ದಿನಗಳೂ ಮುಗಿಯುತ್ತ ಬಂದಿವೆ. ತಲೆಯ ಮೇಲಿನ ಮೋಡಗಳು ಯಾವಾಗ ಕರಗಿ ಹೋದುವೋ ಗೊತ್ತೇ ಆಗಲಿಲ್ಲ. ಹೀಗೆ ಬಂದು ಹಾಗೆ ಹೋದ ಮೋಡಗಳ ಜೊತೆಗೆ ಮುಂಗಾರು ಕೈ ಕೊಟ್ಟಿತು. ಈಗ ಹಿಂಗಾರು ಮಳೆಯೂ ಕೈ ಕೊಟ್ಟಿದೆ. ಕರ್ನಾಟಕ ಸತತ ಮೂರನೇ ಬರಗಾಲವನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರ ಅಧಿಕೃತವಾಗಿಯೇ ಘೋಷಿಸಿರುವ ಪ್ರಕಾರ 139 ತಾಲ್ಲೂಕುಗಳಲ್ಲಿ ಬರ ಬಿದ್ದಿದೆ.  ಇದರಿಂದ ಆಗಿರುವ ನಷ್ಟದ ಅಂದಾಜು ₹16,000 ಕೋಟಿ.

ಹವಾಮಾನ ಇಲಾಖೆಯವರ ಭರವಸೆಯ ಮಾತುಗಳನ್ನು ನಂಬಿ ರೈತರು ಮಳೆಯಾಶ್ರಿತ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು. ಸಾಲ ಮಾಡಿ ಬೀಜ, ಗೊಬ್ಬರ ತಂದಿದ್ದರು.ಆಗೀಗ ಬಿದ್ದ ಮಳೆಯಿಂದ ಬೆಳೆ ಚಿಗುರಿತ್ತು. ಕಾವೇರಿ, ಕೃಷ್ಣಾ ಜಲಾಶಯಗಳ ಅಚ್ಟುಕಟ್ಟು ಪ್ರದೇಶಗಳಲ್ಲಿ ಕಾಲುವೆಯ ನೀರು ಬಿಟ್ಟಾರು ಎಂದು ಅಲ್ಲಿನ ಗದ್ದೆ–ಹೊಲಗಳಲ್ಲಿಯೂ ರೈತರು ಬಿತ್ತನೆ ಮಾಡಿದ್ದರು. ಅತ್ತ ಮಳೆಯೂ ಕೈ ಕೊಟ್ಟಿತು.

ಇತ್ತ ಕಾಲುವೆಯ ನೀರೂ ರೈತರ ಜೊತೆಗೆ  ಕಣ್ಣು ಮುಚ್ಚಾಲೆ ಆಡಿತು. ಒಮ್ಮೆ  ನೀರು ಬಿಡುತ್ತೇವೆ ಎಂದರು, ಒಂದಿಷ್ಟು ದಿನ ಬಿಟ್ಟಂತೆ  ಮಾಡಿ ಮತ್ತೆ  ಬಿಡುವುದಿಲ್ಲ ಎಂದರು.

ಮುಂಗಾರು ಮಳೆಯ ಹಾಗೆಯೇ ಮುಂಗಾರು ಬೆಳೆಯ ಪಾಡೂ ಆಯಿತು. ಹಿಂಗಾರು ಬೆಳೆ ಬಿತ್ತನೆಯೇ ಆಗಲಿಲ್ಲ. ಎಲ್ಲಿಯೋ ಕೊಂಚ ಬಿತ್ತನೆ ಆಗಿದ್ದರೂ ಚೋಟುದ್ದ, ಗೇಣುದ್ದ ಬೆಳೆದು ನಿಂತಿದ್ದ ಬೆಳೆ ಕೂಡ ಸುಟ್ಟು ಹಳದಿ ಬಣ್ಣಕ್ಕೆ ತಿರುಗಿತು. ಸುಟ್ಟು ಹೋದ ಬೆಳೆಯನ್ನು ನೋಡಿ ಎಷ್ಟೆಂದು ಹೊಟ್ಟೆ ಉರಿಸಿಕೊಳ್ಳುವುದು ಎಂದು ರೈತರು ಹೊಲವನ್ನು ಹರಗಿ ಬಿಟ್ಟಿದ್ದಾರೆ. ಅವರ ಬದುಕು ಅವರ ಹೊಲದಂತೆಯೇ ಬಟಾ ಬಯಲಾಗಿದೆ!

ಇದು ಇಂದು ನಿನ್ನೆಯ ಕಥೆಯಲ್ಲ. ಉತ್ತರ ಕರ್ನಾಟಕದ 30 ಹಾಗೂ ದಕ್ಷಿಣ ಕರ್ನಾಟಕದ 40 ತಾಲ್ಲೂಕುಗಳು ಕಳೆದ ಐದು ವರ್ಷಗಳಿಂದ ಸತತವಾದ ಬರಗಾಲಕ್ಕೆ ತುತ್ತಾಗಿ ತತ್ತರಿಸಿವೆ. ಇದರಲ್ಲಿ ಉತ್ತರ ಕರ್ನಾಟಕದ 11 ಮತ್ತು ದಕ್ಷಿಣ ಕರ್ನಾಟಕದ 15 ತಾಲ್ಲೂಕುಗಳಲ್ಲಿ ಕಳೆದ ಸುಮಾರು 12–13 ವರ್ಷಗಳಿಂದ ಬರ ಬಿದ್ದಿದೆ. ಈ ಅಂಕಿ ಅಂಶಗಳ ಒಂದು ವಿಶೇಷ ಎಂದರೆ ನಾವೆಲ್ಲ ಒಂದಿಷ್ಟು ಸಮೃದ್ಧ ನಾಡು ಎಂದುಕೊಂಡಿರುವ ದಕ್ಷಿಣ ಕರ್ನಾಟಕದಲ್ಲಿಯೇ ಬರಪೀಡಿತ ತಾಲ್ಲೂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.

ಸರ್ಕಾರದ ಆಯವ್ಯಯದ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ಒಟ್ಟು ₹30,000 ಕೋಟಿ ಖರ್ಚಾಗಿದೆ. ವರ್ಷಕ್ಕೆ ₹10,000 ಕೋಟಿ ಖರ್ಚು ಮಾಡುವುದಾಗಿ ಆಯವ್ಯಯದಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿರುವುದಾಗಿ ತಮ್ಮ ಸರ್ಕಾರದ ಸಾಧನೆ ಹೇಳುವಾಗ ಮುಖ್ಯಮಂತ್ರಿಗಳು ಮತ್ತೆ ಮತ್ತೆ ಹೇಳಿದ್ದಾರೆ.

ಆದರೂ ಈ ವರ್ಷದ ಬರಗಾಲ ರೈತರ ಮೇಲೆ ಮಾಡಿರುವ ಕೆಟ್ಟ ಪರಿಣಾಮವೇನು ಎಂಬುದನ್ನು ಅದೇ ಮುಖ್ಯಮಂತ್ರಿಗಳು ತಮ್ಮ ಈಚಿನ ಪ್ರವಾಸದಲ್ಲಿ ಕಣ್ಣಾರೆ ಕಂಡಿದ್ದಾರೆ.

ಅಂಕಿ ಅಂಶಗಳು ಹೇಗೆ ನಮ್ಮನ್ನು ವಂಚಿಸಬಹುದು ಎಂಬುದಕ್ಕೆ ಇದು ಒಂದು ಒಳ್ಳೆಯ ನಿದರ್ಶನ. ಸರ್ಕಾರ ನೀರಾವರಿಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ ಅಥವಾ ಹಾಗೆಂದು ಹೇಳಿಕೊಳ್ಳುತ್ತಿದೆ. ಆದರೆ,  ರಾಜ್ಯದ ಒಟ್ಟು ಸ್ಥಿತಿಯನ್ನು ನೋಡಿದಾಗ ವರ್ಷ ವರ್ಷಗಳ ಬರದ ಸ್ಥಿತಿಯಲ್ಲಿ ಅಂಥ ವ್ಯತ್ಯಾಸವೇನೂ ಆದಂತೆ ಕಾಣುವುದಿಲ್ಲ. ಹಾಗೆ ನೋಡಿದರೆ ವರ್ಷದಿಂದ ವರ್ಷಕ್ಕೆ ಸ್ಥಿತಿ ಬಿಗಡಾಯಿಸುತ್ತಲೇ ನಡೆದಿದೆ.

ಒಂದೋ ಸರ್ಕಾರ ಎಂದೂ ಮುಗಿಯದ ನೀರಾವರಿ ಯೋಜನೆಗಳ ಮೇಲೆ ಹಣ ಹಾಕುತ್ತ ಇರಬಹುದು ಅಥವಾ ಅದು ಕೈಗೆತ್ತಿಕೊಳ್ಳುವ ಯೋಜನೆಗಳ ಆದ್ಯತೆಯಲ್ಲಿಯೇ ಎಲ್ಲಿಯೋ ದೋಷ ಇರಬಹುದು.

ಸರ್ಕಾರದ ಪ್ರಕಾರ ಅಥವಾ ವಿಧಾನಸೌಧದಲ್ಲಿ ಕುಳಿತು ಯೋಜನೆ ರೂಪಿಸುವವರ ಪ್ರಕಾರ ದೊಡ್ಡ ದೊಡ್ಡ  ನೀರಾವರಿ ಯೋಜನೆಗಳು ಅಗತ್ಯವೇ ಇರಬಹುದು. ಅಣೆಕಟ್ಟೆಗಳನ್ನು ಕಟ್ಟಿ, ಅಲ್ಲಿ ಹಿಡಿದಿಟ್ಟ ನೀರನ್ನು ಹರಿಸಲು ಕಾಲುವೆಗಳನ್ನು ಕಟ್ಟಿ, ಆ ಕಾಲುವೆಗಳಲ್ಲಿ ನೀರು ಹರಿದು ಬಂದು ಅದು ರೈತರ ಹೊಲ ತಲುಪುವ ವೇಳೆಗೆ ತಲೆಮಾರುಗಳೇ ಅಳಿದು ಹೋಗಬಹುದು. ಕೃಷ್ಣೆಯ ವಿಚಾರದಲ್ಲಿ ಹಾಗೆಯೇ ಆಗಿದೆ.

ಭಾರಿ ನೀರಾವರಿ ಖಾತೆಯನ್ನು ನಿರ್ವಹಿಸುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ತಮ್ಮ  ವಿಜಯಪುರ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಬತ್ತಿ ಹೋಗಿ, ಹೂಳು ತುಂಬಿದ್ದ ನೂರಾರು ಎಕರೆಗಳಷ್ಟು ವಿಶಾಲವಾದ ಆರೇಳು ಕೆರೆಗಳನ್ನು ಭರ್ತಿ ಮಾಡಿಸುತ್ತಿರುವುದು ಕೆರೆ– ಬಾವಿ ತುಂಬಿಸುವ, ಅಂತರ್ಜಲ ಮರುಪೂರಣ ಮಾಡುವ ಸಣ್ಣ ನೀರಾವರಿ ಯೋಜನೆಗಳೇ ಹೆಚ್ಚು ಉಪಯುಕ್ತ ಎಂಬ ತಿಳಿವಳಿಕೆಯಿಂದ ಇರಬೇಕು. ಅಥವಾ ಇದು ನೀರಾವರಿ ಇಲಾಖೆಯ  ದ್ವಂದ್ವವನ್ನು ತೋರಿಸುತ್ತ ಇರಬಹುದು.

ಇಲ್ಲವೇ ನಮ್ಮ ಒಟ್ಟು ಕೃಷಿ ವ್ಯವಸ್ಥೆಯ ದ್ವಂದ್ವಸ್ಥಿತಿಯ ರೂಪಕವೂ ಆಗಿರಬಹುದು. ನಮ್ಮ ರೈತರಿಗೆ ದೊಡ್ಡ ನೀರಾವರಿ ಯೋಜನೆಗಳ ನೀರು ಬೇಕೇ ಅಥವಾ ದೇಸಿ ಜ್ಞಾನದ ರೂಪದಲ್ಲಿನ ಅಂತರ್ಜಲ ರಕ್ಷಿಸುವ ಕೃಷಿ ಹೊಂಡಗಳು ಬೇಕೇ? ಭಾರಿ ಪ್ರಮಾಣದಲ್ಲಿ ನೀರು ಬಯಸುವ ಭತ್ತ, ಕಬ್ಬು ಬೆಳೆ ಬೇಕೇ ಅಥವಾ ಕಡಿಮೆ ನೀರಿನಲ್ಲಿ ಬರುವ ಪೀಕು ಬೇಕೇ?

ಈ ದಿಸೆಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೇನಾದರೂ ಪ್ರಯೋಜನ ಅಥವಾ ಮಾರ್ಗದರ್ಶನ ಸಿಕ್ಕಿದೆ ಎಂದು ಅನಿಸುವುದಿಲ್ಲ. ಸಿಕ್ಕಿದ್ದರೆ ಕಾವೇರಿ ಜಲಾನಯನ ಪ್ರದೇಶಗಳಿಗೆ ಈಚೆಗೆ  ಭೇಟಿ ನೀಡಿದ್ದ ಕೇಂದ್ರ ತಜ್ಞರ ತಂಡ, ಕರ್ನಾಟಕದಲ್ಲಿ ಯಾವುದೋ ಕಾಲದ ಕೃಷಿ ಬೆಳೆ ಮತ್ತು ನೀರು ಬಳಕೆ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಟೀಕೆ ಮಾಡುತ್ತಿರಲಿಲ್ಲ.

ಅವರ ಟೀಕೆ ಕೃಷಿಗೆ ಸಂಬಂಧಿಸಿದ ಎಲ್ಲ ಸರ್ಕಾರಿ ಇಲಾಖೆಗಳ ಸಾಮೂಹಿಕ ವೈಫಲ್ಯಕ್ಕೆ ಭಾಷ್ಯದಂತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಚೆಗೆ ರಾಜ್ಯದ ಅನೇಕ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ರಾಜ್ಯವನ್ನು ಕಾಡುತ್ತಿರುವ ಬರದ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಇದೂ ಒಂದು ರೀತಿ ವಾರ್ಷಿಕ ವಿಧಿಯಂತೆ ಇದೆ.

ಆಯಾ ಕಾಲದ ಮುಖ್ಯಮಂತ್ರಿಗಳು ಹೀಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಭೇಟಿ ಮುಗಿದ ನಂತರ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರೂ ಅದೇ ಮಾತು ಆಡಿದ್ದಾರೆ. ರೈತರ ಸಾಲದಲ್ಲಿ ಅರ್ಧದಷ್ಟು ಮೊತ್ತವನ್ನು ಕೇಂದ್ರ  ವಹಿಸಿಕೊಂಡರೆ  ಉಳಿದ ಅರ್ಧವನ್ನು ರಾಜ್ಯ ಭರಿಸುವುದಾಗಿ ಹೇಳಿದ್ದಾರೆ.

ನಾಳೆ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಇದು ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಡಬಹುದು. ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರರ ವಿರುದ್ಧ ತಮ್ಮ ಅಸ್ತ್ರಗಳನ್ನು ಬಳಸಬಹುದು. ಆದರೆ, ರೈತರು ಎದುರಿಸುವ ಬರದ ಸ್ಥಿತಿಗಿಂತ ಹೆಚ್ಚು ರೋಚಕವಾದ ಸಚಿವ ತನ್ವೀರ್ ಸೇಠ್‌ ರಾಜೀನಾಮೆ ವಿಚಾರ ಅಧಿವೇಶನವನ್ನು ಬಹುಕಾಲ ಕಾಡಬಹುದೇ?

ಎಷ್ಟೇ ಆಗಲಿ ಬರ ಎಂಬುದು ಸಪ್ಪೆ ವಿಚಾರ! ದೊಡ್ಡ ಮೊತ್ತದ ನೋಟುಗಳನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಜನರ ಗಮನ ಬೇರೆ  ಕಡೆ ಸೆಳೆಯಲು, ಸೇಠ್‌ ರಾಜೀನಾಮೆ ಕೇಳಿ ಗಲಾಟೆ ಮಾಡುವುದು ಬಿಜೆಪಿಗೆ ಒಂದು ಒಳ್ಳೆಯ ತಂತ್ರವಾಗಿಯೂ ಕಾಣಬಹುದು!

ಸೇಠ್‌ ರಾಜೀನಾಮೆ ಕೇಳುವಾಗ ಬಿಜೆಪಿ ಶಾಸಕರಿಗೆ ಇರುವ ಉಮೇದು ಬರಪೀಡಿತ ಜನರ ಬಗೆಗೆ  ಮಾತನಾಡುವಾಗ ಇರಲಿಕ್ಕಿಲ್ಲ. ಆದರೆ, ಈಗ ಬಿದ್ದಿರುವ ಬರ ಜನರ ಬದುಕಿನ ಮೇಲೆ ತೀವ್ರವಾದ ಗಾಯ ಮಾಡಿದೆ. ಇನ್ನೂ ಇದು ನವೆಂಬರ್ ತಿಂಗಳು.

ಬೆಳೆಯಂತೂ ಸಂಪೂರ್ಣ ಕೈ ಕೊಟ್ಟಿದೆ. ನಿತ್ಯದ ಅಶನಕ್ಕೆ ಒಂದಿಷ್ಟು ಕಾಳುಕಡಿ ಹೇಗೂ ಸಿಗಬಹುದು. ಸರ್ಕಾರವೂ ಅಕ್ಕಿ ಕೊಡುತ್ತದೆ. ಆದರೆ, ದನಕರುಗಳ ಪಾಡು? ದನಕರುಗಳನ್ನು ಸಾಕಬೇಕು ಎಂದರೆ ಹೊಲಗಳಲ್ಲಿ ಮೇವು ಇಲ್ಲ. ಕಟುಕರಿಗೆ ಮಾರಬೇಕು ಎಂದು ಹೊರಟರೆ ಗೋರಕ್ಷಕರು ಬಂದು ಅಡ್ಡ ಹಾಕುತ್ತಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಿರುವ ಉದ್ವಿಗ್ನತೆ ನಾಳೆ ಇಡೀ ರಾಜ್ಯಕ್ಕೆ ವಿಸ್ತರಿಸಬಹುದು. ದನಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಹಾಗೆಯೂ ಇಲ್ಲ. ಮಾರುವಂತೆಯೂ ಇಲ್ಲ.

ರೈತರ ಕಷ್ಟ ಯಾರಿಗೂ ಬೇಡ. ಈಗ ಅವರ ಸಾಲ ಮನ್ನಾ ಮಾಡುವ ಚರ್ಚೆ ನಡೆದಿದೆ. ಬಹುಶಃ ಸಾಲ ಮನ್ನಾ ಆದರೆ ಅದರ ಶ್ರೇಯ ಯಾರು ತೆಗೆದುಕೊಳ್ಳಬೇಕು ಎಂದು ಈಗ  ರಾಜಕೀಯ ಲೆಕ್ಕಾಚಾರ ನಡೆದಿರಬಹುದು. ವಿರೋಧ ಪಕ್ಷಗಳಿಗೆ ಆ ಶ್ರೇಯ ಸಿಗಬಾರದು ಎಂದೇ ಆಡಳಿತ ಪಕ್ಷ ಕೇಂದ್ರವೂ ಅರ್ಧ ಪಾಲು ಕೊಡಲಿ ಎಂದು ಪಟ್ಟು ಹಾಕುತ್ತಿರಬಹುದು.

ಆದರೆ, ಪ್ರತಿ ಸಾರಿ ಬರ ಬೀಳುವುದು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಎಂದು ಕೇಳುವುದು ಒಂದು ರೀತಿ ವಿಧಿಲಿಖಿತ ಶಾಸನದಂತೆ ಕಾಣುತ್ತದೆ. ಬರದಿಂದ ತಪ್ಪಿಸಿಕೊಳ್ಳುವುದು ಹೇಗೆ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕ್ರಮಗಳು ಏನಾದರೂ ಇವೆಯೇ ಎಂದು ಚರ್ಚೆ ನಡೆದುದು ನಮಗೆ  ನೆನಪು ಇಲ್ಲ. ಹಾಗೆ ನೋಡಿದರೆ ಈ ದಿಸೆಯಲ್ಲಿ ಮುಂದಾಳತ್ವ ವಹಿಸಬೇಕಿದ್ದ ಕೃಷಿ ಸಚಿವರ ದಿವ್ಯ ಮೌನ ಒಂದೊಂದು ಸಲ ಸೋಜಿಗವಾಗಿಯೂ ಮತ್ತೆ ಕೆಲವು ಸಲ ಕ್ರೂರವಾಗಿಯೂ ಕಾಣುತ್ತದೆ.

ಬಹುಶಃ ಅದು ಅವರಿಗೆ ಸೂಕ್ತವಾದ ಖಾತೆಯೇ ಅಲ್ಲವೇನೋ? ಸರ್ಕಾರದಿಂದ ಜನರಿಗೆ ಯಾವ ಯಾವ ರೀತಿಯಲ್ಲಿ ಅನ್ಯಾಯ ಆಗುತ್ತದೆಯಲ್ಲವೇ? ಕಳೆದ ಮೂರು ವರ್ಷಗಳಿಂದ ರಾಜ್ಯದ ಮುಕ್ಕಾಲು ಭಾಗ ಮತ್ತೆ ಮತ್ತೆ ಬರಗ್ರಸ್ತವಾಗುತ್ತಿದೆ. ರೈತರು ಬಿತ್ತಿದ ಬೆಳೆ ಅವರ ಕೈಗೆ ಬರುತ್ತಿಲ್ಲ. ಬಂದ ಬೆಳೆಗೆ ಬೆಲೆ ಸಿಗುತ್ತಿಲ್ಲ.

ರೈತರು ಇಂದು ಟೊಮೆಟೊ ರಸ್ತೆಗೆ ಚೆಲ್ಲಿದ್ದರೆ ನಿನ್ನೆ ಈರುಳ್ಳಿ ಚೆಲ್ಲಿದ್ದರು. ಇದು ಕೇವಲ ರೈತರ ಅಜ್ಞಾನವನ್ನು ತೋರಿಸುತ್ತದೆಯೇ ಅಥವಾ ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡದ ಕೃಷಿ ಇಲಾಖೆಯ ಹೊಣೆಗೇಡಿತನವನ್ನು ತೋರಿಸುತ್ತದೆಯೇ? ‘ಹಿಂದೆಯೂ ಹೀಗೆಯೇ ಆಗಿತ್ತು’ ಎಂದರೆ ‘ಮುಂದೆಯೂ ಹೀಗೆಯೇ ಆಗುತ್ತದೆ’ ಎಂದು ಹೇಳಿದಂತೆಯೂ ಆಗುತ್ತದೆ. ಅಂದರೆ, ‘ರೈತರ ಸಮಸ್ಯೆಗಳು ನಿರಂತರ ಮತ್ತು ಎಂದೆಂದೂ ಮುಗಿಯದ ಗೋಳುಗಳು’ ಎಂದು ನಾವು ಒಪ್ಪಿಕೊಳ್ಳಬೇಕೇ?

ಹಾಲಿ ಕೃಷಿ ಸಚಿವ ಕೃಷ್ಣ ಬೈರೇಗೌಡರ ಕಾಲಕ್ಕಿಂತ ಎರಡು ದಶಕಗಳ ಹಿಂದಿನ ಕೃಷಿ ಸಚಿವ ಸಿ.ಬೈರೇಗೌಡರನ್ನೇ ಜನರು ಸ್ಮರಿಸುವುದು ಏನನ್ನು ಹೇಳುತ್ತಿರಬಹುದು? ಇದುವರೆಗೆ ಚರ್ಚೆ ಮಾಡಿದ್ದು ಕೃಷಿಕರ ಮತ್ತು ದನಕರುಗಳ ಸಮಸ್ಯೆ ಮಾತ್ರ ಆಯಿತು. ಕುಡಿಯುವ ನೀರು? ನದಿಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ನಾವು ನಿರಂತರವಾಗಿ ಶೋಷಣೆ ಮಾಡಿದ  ಅಂತರ್ಜಲ ಬಹುತೇಕ ಕಡೆ ಬಳಕೆಗೆ ಅಯೋಗ್ಯವಾಗಿದೆ. ಮತ್ತು ಅದರ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ.ಇದನ್ನು ತಡೆಯಲು ನಮ್ಮ ಬಳಿ ಯಾವ ಯೋಚನೆಗಳೂ, ಯೋಜನೆಗಳೂ ಇದ್ದಂತೆ ಕಾಣುವುದಿಲ್ಲ. ನಾವು ಒಂದು ರಾಜ್ಯವಾಗಿ ನಿಧಾನ ಸಾವಿನ ಕಡೆಗೆ ತೆವಳುತ್ತಿದ್ದೇವೆಯೇ?                                            

Comments
ಈ ವಿಭಾಗದಿಂದ ಇನ್ನಷ್ಟು
ಈಗ ದಾರಿಗಳು ಅಗಲುವ ಸಮಯ...

ನಾಲ್ಕನೇ ಆಯಾಮ
ಈಗ ದಾರಿಗಳು ಅಗಲುವ ಸಮಯ...

27 Aug, 2017
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

ನಾಲ್ಕನೇ ಆಯಾಮ
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

20 Aug, 2017
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

ನಾಲ್ಕನೇ ಆಯಾಮ
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

13 Aug, 2017
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

ನಾಲ್ಕನೇ ಆಯಾಮ
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

6 Aug, 2017
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

ನಾಲ್ಕನೇ ಆಯಾಮ
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

30 Jul, 2017