ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಗ್ರಾಮಸಭೆ ಹಕ್ಕೊತ್ತಾಯದ ಸಾಧನ

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನಾವು ಚಿಕ್ಕವರಿದ್ದಾಗ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಈ ಧ್ಯೇಯವಾಕ್ಯ ಈಗ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಬದಲಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬುದು ಇತ್ತೀಚಿನ ಪರಿಕಲ್ಪನೆ. ಮಕ್ಕಳು ಸಮಾಜದ ಆಸ್ತಿಯಾಗಬೇಕಾದರೆ ಅದಕ್ಕೆ ಪೂರಕ ವಾತಾವರಣ ಅಗತ್ಯ. ಆದರೆ ಇಂದು ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಮಾಜದ ಎಲ್ಲ ಸ್ತರಗಳಲ್ಲಿ ಮಕ್ಕಳ ಶೋಷಣೆ ಆಗುತ್ತಿರುವುದನ್ನು ಗಮನಿಸುತ್ತೇವೆ. ದಿನಬೆಳಗಾದರೆ ಮಾಧ್ಯಮಗಳಲ್ಲಿ ಮಕ್ಕಳ ಮೇಲಾಗುವ ಅತ್ಯಾಚಾರ, ದೌರ್ಜನ್ಯ, ಅಪಹರಣ, ಅನಾಥಮಗುವಿನ ಪತ್ತೆ, ಕಸದ ತೊಟ್ಟಿಯಲ್ಲಿ ಸಿಕ್ಕ ಹಸುಗೂಸು – ಹೀಗೆ ಮಕ್ಕಳನ್ನು ಕೇಂದ್ರೀಕೃತಗೊಂಡ ಅನೇಕ ಸುದ್ದಿಗಳನ್ನು ಕಾಣಬಹುದು. ಸಮಾಜದ ಆಸ್ತಿಯಾಗಬೇಕಾದ ಮಗು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವಾಗ ಇಂತಹ ಮಕ್ಕಳ ರಕ್ಷಣೆ ಮಾಡುವವರು ಯಾರು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆಲ್ಲಾ ಉತ್ತರವೆಂದರೆ ಯಾರಿಗೆ ತೊಂದರೆಯಾಗಿದೆಯೋ ಅವರೇ ಅದರ ವಿರುದ್ದ ಧ್ವನಿ ಎತ್ತಬೇಕು.

ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಹಾಗೂ ಆ ಹಕ್ಕುಗಳಿಗೆ ಚ್ಯುತಿ ಬಂದಾಗ ರಕ್ಷಣೆ ಮಾಡಿಕೊಳ್ಳಲು ಹಾಗೂ ತಮ್ಮ ಬೇಕು–ಬೇಡಗಳನ್ನು ಸಮಾಜದ ಮುಂದೆ ನಿರ್ಭಯವಾಗಿ ಹೇಳಿಕೊಳ್ಳಲು ಇರುವ ಒಂದೇ ಒಂದು ವೇದಿಕೆ ಎಂದರೆ ಮಕ್ಕಳ ವಿಶೇಷ ಗ್ರಾಮಸಭೆ. ನಾಗರಿಕರು ತಮ್ಮ ಬೇಡಿಕೆಗಳನ್ನು ಅಹವಾಲುಗಳನ್ನು ಗ್ರಾಮಸಭೆಯ ಮೂಲಕ ಸಲ್ಲಿಸುವಂತೆ ಮಕ್ಕಳೂ ಸಹ ತಮ್ಮ ಬೇಡಿಕೆಗಳನ್ನು ಕುಂದುಕೊರತೆಗಳನ್ನು ಮಕ್ಕಳ ಗ್ರಾಮಸಭೆಯ ಮೂಲಕ ಪರಿಹರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

ಏನಿದು ಮಕ್ಕಳ ಗ್ರಾಮಸಭೆ? 
ಮಕ್ಕಳು ತಮ್ಮ ಸಂರಕ್ಷಣೆ, ವ್ಯವಸ್ಥೆ, ಕುಂದುಕೊರತೆಗಳನ್ನು ಹೇಳಿಕೊಳ್ಳುವ ಹಾಗೂ ತಮ್ಮ ಬಗ್ಗೆ ತೀರ್ಮಾನವಾಗುವ ವಿಷಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಸ್ಥಳೀಯ ಸರ್ಕಾರದ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕಲ್ಪಿಸಲಾಗುವ ಒಂದು ವೇದಿಕೆಯೇ ಮಕ್ಕಳ ಗ್ರಾಮಸಭೆ. ಸ್ಥಳೀಯ ಸರಕಾರ ಎಂದರೆ ಗ್ರಾಮ ಪಂಚಾಯ್ತಿಗಳು ಪ್ರತಿವರ್ಷ ಮಕ್ಕಳಿಗಾಗಿ ಒಂದು ಗ್ರಾಮಸಭೆಯನ್ನು ಕಡ್ಡಾಯವಾಗಿ ಏರ್ಪಡಿಸಬೇಕು. ಆ ಮೂಲಕ ಮಕ್ಕಳ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಪ್ರಯತ್ನಿಸಬೇಕು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿವರ್ಷವೂ ನವೆಂಬರ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ಹಮ್ಮಿಕೊಳ್ಳಬೇಕೆಂದು ಹಾಗೂ ಈ ತಿಂಗಳಲ್ಲಿ ಒಂದು ದಿನವನ್ನು ಮಕ್ಕಳ ವಿಶೇಷ ಗ್ರಾಮಸಭೆ ನಡೆಸಲು ಮೀಸಲಿಡಬೇಕೆಂದು ದಿನಾಂಕ 18–09–2006 ಮತ್ತು 28–08–2007ರ ಸುತ್ತೋಲೆಗಳಲ್ಲಿ ಸರ್ಕಾರವು ಸೂಚನೆ ನೀಡಿದೆ. ಅಲ್ಲದೇ  ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯ್ತಿ ರಾಜ್ಯ ಕಾಯ್ದೆ- 1993ರ 3 ಎಚ್ 2(1)ರಲ್ಲಿ ಮಕ್ಕಳ ಸಬಲೀಕರಣಕ್ಕಾಗಿ ಮಕ್ಕಳ ವಿಶೇಷ ಗ್ರಾಮಸಭೆಯನ್ನು ವರ್ಷಕ್ಕೆ ಕನಿಷ್ಠ ಒಂದು ಬಾರಿ ಕರೆಯತಕ್ಕದ್ದು ಎಂದು  ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.

ಮಕ್ಕಳ ಗ್ರಾಮಸಭೆಯ ಉದ್ದೇಶಗಳು
* ಮಕ್ಕಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಮಸ್ಯೆಗಳನ್ನು ಮಕ್ಕಳಿಂದಲೇ ತಿಳಿದುಕೊಳ್ಳುವುದು.
* ಮಕ್ಕಳಿಗೆ ಮೀಸಲಾದ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು.
* ಮಕ್ಕಳು ಸಂಘಟಿತರಾಗಿ ತಮಗಿರುವ ಎಲ್ಲಾ ಹಕ್ಕುಗಳನ್ನು ಬಳಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು.
* ಮಕ್ಕಳು ತಮ್ಮ ಸಮಸ್ಯೆಗಳನ್ನು, ಆಲೋಚನೆಗಳನ್ನು, ಅಭಿಪ್ರಾಯಗಳನ್ನು ಗ್ರಾಮ ಪಂಚಾಯ್ತಿಯ ಹಿರಿಯರೊಂದಿಗೆ  ಹಂಚಿಕೊಳ್ಳಲು ಹಾಗೂ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಡುವುದು.
* ತಮ್ಮ ಸುತ್ತಮುತ್ತಲ ಮಕ್ಕಳ ಮೇಲೆ ನಡೆಯುವ ಅನ್ಯಾಯ, ಅಕ್ರಮಗಳನ್ನು ಗುರುತಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಕಲ್ಪಿಸುವುದು.
* ಭವಿಷ್ಯದಲ್ಲಿ ವಯಸ್ಕರಾದಾಗ ಗ್ರಾಮಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಪೂರ್ವ ತಯಾರಿ ನೀಡುವುದು.

ಆಯೋಜನೆ ಮತ್ತು ನಿರ್ವಹಣೆ
ಪ್ರತಿವರ್ಷ ನವೆಂಬರ್/ಡಿಸೆಂಬರ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ಹಮ್ಮಿಕೊಂಡು, ಈ ಅವಧಿಯಲ್ಲಿ ಒಂದು ದಿನವನ್ನು ಮಕ್ಕಳ ಗ್ರಾಮಸಭೆ ನಡೆಸಲು ಗ್ರಾಮ ಪಂಚಾಯ್ತಿಯು ದಿನ ಮತ್ತು ಸ್ಥಳ ನಿಗದಿ ಪಡಿಸಬೇಕು. ಈ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪೂರ್ವ ತಯಾರಿಗೆ ಸಮಯಾವಕಾಶ ನೀಡಬೇಕು. ಸಭೆ ನಿಗದಿಗೊಳಿಸುವ ಮುನ್ನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಎಲ್ಲ ಶಾಲೆಗಳಲ್ಲಿ ಆಸಕ್ತ ಶಿಕ್ಷಕ/ಶಿಕ್ಷಕಿಯರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಿ ಮಕ್ಕಳ ಜೊತೆ ಶಾಲಾ ಮಟ್ಟದಲ್ಲಿ ಪೂರ್ವಭಾವಿಯಾಗಿ ಚರ್ಚಿಸಲು ಅವಕಾಶ ನೀಡಬೇಕು.

ಗ್ರಾಮ ಪಂಚಾಯ್ತಿ ಅಧ್ಯಕ್ಷರು/ಪಿ.ಡಿ.ಒ/ನೋಡಲ್ ಅಧಿಕಾರಿಗಳು ಮಕ್ಕಳ ಗ್ರಾಮಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಕಾರ್ಯಸೂಚಿ ಸಿದ್ದಪಡಿಸಿ ಎಲ್ಲ ಶಾಲೆಗಳಿಗೂ ಹಾಗೂ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಕನಿಷ್ಠ ಮೂರು ದಿನಗಳೊಳಗಾಗಿ ತಿಳಿಸಬೇಕು. ನಿಗದಿತ ದಿನಾಂಕದಂದು ಸಭೆಯನ್ನು ಆಯೋಜಿಸಬೇಕು.

ಈ ಸಭೆಯಲ್ಲಿ ಪಂಚಾಯ್ತಿ ವ್ಯಾಪ್ತಿಯ ಆಯ್ದ ಮಕ್ಕಳು(ಮಕ್ಕಳ ಹಕ್ಕುಗಳ ಕ್ಲಬ್‌ನ ಸದಸ್ಯರು) ಹಾಗೂ ಸಮನ್ವಯಾಧಿಕಾರಿ ಶಿಕ್ಷಕರು, ಮುಖ್ಯಗುರುಗಳು, ಎಸ್.ಡಿ.ಎಂ.ಸಿ. ಅಧ್ಯಕರು, ಪಂಚಾಯ್ತಿ ಅಧ್ಯಕ್ಷರು, ನೋಡೆಲ್ ಅಧಿಕಾರಿಗಳು, ಪಿ.ಡಿ.ಒ. ಗ್ರಾಮ ಪಂಚಾಯ್ತಿ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು. ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಬೇಕು.

ಮಕ್ಕಳಿಂದ ಬರುವ ಅಹವಾಲುಗಳನ್ನು ಲಿಖಿತರೂಪದಲ್ಲಿ ದಾಖಲಿಸಬೇಕು. ಕೆಲವು ಸಮಸ್ಯೆಗಳಿಗೆ ಚರ್ಚೆಯ ಮೂಲಕ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳ ಗ್ರಾಮಸಭೆಯಲ್ಲಿ ತೆಗದುಕೊಂಡ ನಿರ್ಣಯಗಳನ್ನು ಪಿ.ಡಿ.ಒ. ಹಾಗೂ ನೋಡಲ್ ಅಧಿಕಾರಿಗಳು ಹತ್ತು ದಿನದೊಳಗೆ ಕ್ರಮ ಜರುಗಿಸಿ ಅನುಪಾಲನಾ ವರದಿ ಮಂಡಿಸಬೇಕು. ನಿರ್ದಿಷ್ಟ ಸಮಯದಲ್ಲಿ ಗ್ರಾಮಪಂಚಾಯ್ತಿಯು ಸಭೆ ಕರೆಯದಿದ್ದಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಮೂಲಕ ಒತ್ತಾಯಿಸಬಹುದು ಅಥವಾ ತಾಲೂಕ ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿಗಳ ಗಮನಕ್ಕೆ ತರಬಹುದು.

ಪೂರ್ವ ತಯಾರಿ ಹೀಗಿರಲಿ
* ದಿನಾಂಕ ಹಾಗೂ ಸ್ಥಳ ನಿಗದಿ ನಂತರ ಪೋಸ್ಟರ್, ಕರಪತ್ರ ಹಾಗೂ ಡಂಗುರ ಹೊಡೆಸುವ ಮೂಲಕ ಪ್ರಚಾರ ಮಾಡಬೇಕು.
* ಪಂಚಾಯ್ತಿ ವ್ಯಾಪ್ತಿಯಲ್ಲಿನ 3–18 ವಯೋಮಾನದ ಮಕ್ಕಳ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಬೇಕು.
* ಸಭೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಕುಳಿತುಕೊಳ್ಳಲು ಸ್ಥಳಾವಕಾಶ, ಕುಡಿಯುವ ನೀರು, ಶೌಚಾಲಯ, ವಾಹನ ವ್ಯವಸ್ಥೆ, ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ ಮಾಡುವುದು.
* ಹಬ್ಬ ಹಾಗೂ ಮಕ್ಕಳ ಪರೀಕ್ಷೆಯ ಅಕ್ಕಪಕ್ಕದ ದಿನಾಂಕಗಳಲ್ಲಿ ಮಕ್ಕಳ ಗ್ರಾಮಸಭೆ ನಿಗದಿಗೊಳಿಸಬಾರದು.
* ಮಕ್ಕಳ ಗ್ರಾಮಸಭೆಯ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಬೇಕು. ಮೆರವಣಿಗೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಧ್ಯೇಯವಾಕ್ಯಗಳ ಪೋಸ್ಟರ್, ಬ್ಯಾನರ್, ಚಿತ್ರಗಳು ಹಾಗೂ ಫಲಕಗಳನ್ನು ಪ್ರದರ್ಶಿಸಬೇಕು.
* ಮೆರವಣಿಗೆ ಸಂದರ್ಭದಲ್ಲಿ ಇತರೆ ಮಕ್ಕಳಿಂದ ದೂರು ಸ್ವೀಕರಿಸಲು ಒಂದು ದೂರು ಪೆಟ್ಟಿಗೆಯ ವ್ಯವಸ್ಥೆ ಮಾಡಬೇಕು.
* ಮೆರವಣಿಗೆ ದಾರಿಯಲ್ಲಿ ಸೂಕ್ತ ರಕ್ಷಣೆ ಮಾಡಬೇಕು.
* ಮಕ್ಕಳು ಗ್ರಾಮಸಭೆಯಲ್ಲಿ ಹೇಳಬೇಕಾದ ವಿಷಯಗಳನ್ನು ಸಂಗ್ರಹಿಸಲು ಹಾಗೂ ಅವುಗಳನ್ನು ಸಭೆಯಲ್ಲಿ ಮಂಡಿಸಲು ಅವಕಾಶ ನೀಡಬೇಕು.
* ಮಕ್ಕಳು ತಮ್ಮ ಹಕ್ಕುಗಳನ್ನು, ಸಮಸ್ಯೆಗಳನ್ನು ಹಾಗೂ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು.

ಚರ್ಚಾ ವಿಷಯಗಳು ಹೀಗಿರಲಿ
ಶಿಶುಮರಣವನ್ನು ತಡೆಯುವುದು, ಮಕ್ಕಳ ಆರೋಗ್ಯ ಬೆಳವಣಿಗೆ, ಪೌಷ್ಟಿಕ ಆಹಾರ, ಅಪೌಷ್ಟಿಕತೆಯ ನಿರ್ಮೂಲನೆ, ಅಂಗನವಾಡಿಗಳ ಸಬಲೀಕರಣ, ಕಡ್ಡಾಯ ಪ್ರಾಥಮಿಕ ಶಿಕ್ಷಣ, 6–14 ವಯೋಮಾನದ ಎಲ್ಲ ಮಕ್ಕಳ ಕಡ್ಡಾಯ ದಾಖಲಾತಿ ಹಾಗೂ ನಿರಂತರ ಹಾಜರಾತಿ, ಮಕ್ಕಳ ಬೌದ್ಧಿಕ ಬೆಳೆವಣಿಗೆಗೆ ಪೂರಕವಾದ ಆಟಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು, ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, ಹೆಣ್ಣುಮಕ್ಕಳ ಪೋಷಣೆ ಹಾಗೂ ರಕ್ಷಣೆ, ಮಕ್ಕಳ ಭಾಗವಹಿಸುವ ಹಕ್ಕನ್ನು ಖಾತರಿ ಪಡಿಸುವುದು, ಎಚ್.ಐ.ವಿ. ಭಾದಿತ ಮಕ್ಕಳಿಗೆ ಪುನರ್ವಸತಿ, ಮಕ್ಕಳ ವಲಸೆ ತಡೆಗಟ್ಟುವುದು, ಸ್ವಚ್ಛತೆಯ ಅರಿವು ಮೂಡಿಸುವುದು, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕತೆ ನಿರ್ಮೂಲನೆ, ಮಕ್ಕಳ ಜೀತಪದ್ಧತಿ ವಿರುದ್ಧ ಧ್ವನಿ ಎತ್ತುವುದು, ಅಂಗವಿಕಲ–ಮಕ್ಕಳು ಹಾಗೂ ದೇವದಾಸಿ ಕುಟುಂಬದ ಮಕ್ಕಳ ರಕ್ಷಣೆ, ಮಕ್ಕಳ ಮೇಲಿನ ತಾರತಮ್ಯ ನಿವಾರಣಾ ಕ್ರಮಗಳು ಮುಂತಾದ ವಿಷಯಗಳ ಮೇಲೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು.

ಯಾರು ಭಾಗವಹಿಸಬೇಕು?
ಮಕ್ಕಳ ಗ್ರಾಮಸಭೆಯಲ್ಲಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲೆಗಳ ವಿದ್ಯಾರ್ಥಿ ಪ್ರತಿನಿಧಿಗಳು, ಸ್ಥಳೀಯ ಶಾಲೆಯ ಎಲ್ಲ ಮಕ್ಕಳು, ಪಂಚಾಯ್ತಿ ಅಧ್ಯಕ್ಷರು, ಪಿ.ಡಿ.ಒ, ಸದಸ್ಯರುಗಳು, ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕ/ಶಿಕ್ಷಕಿಯರು, ಸ್ಥಳೀಯ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯ್ತಿ ನೋಡಲ್ ಅಧಿಕಾರಿಗಳು, ಮಕ್ಕಳ ಹಕ್ಕುಗಳ ಕ್ಲಬ್‌ನ ಸದಸ್ಯರು, ಮಕ್ಕಳ ಏಳಿಗೆಗಾಗಿ ಶ್ರಮಿಸುವ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣಪ್ರೇಮಿಗಳು, ಸ್ಥಳೀಯ ಶಿಕ್ಷಣತಜ್ಞರು, ಮಹಿಳಾ ಮಂಡಳದ ಸದಸ್ಯರು ಒಟ್ಟಾರೆ ಮಕ್ಕಳ ಏಳಿಗೆಗಾಗಿ ಶ್ರಮಿಸುವವರು ಭಾಗವಹಿಸಬಹುದು.

ಸಭೆಯ ಅನುಪಾಲನೆ
ಸಭೆಯಲ್ಲಿ ಮಕ್ಕಳಿಂದ ಬಂದ ಅಹವಾಲುಗಳನ್ನು ಲಿಖಿತವಾಗಿ ದಾಖಲಿಸಬೇಕು. ಸಭೆಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಮುಖ್ಯಗುರುಗಳು ಹಾಗೂ ಸಂಬಂಧಿಸಿದವರಿಗೆ ಸೂಚನೆ ನೀಡಬೇಕು. ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲದ ಅಂಗೀಕಾರಗಳನ್ನು 10 ದಿನಗಳ ಒಳಗಾಗಿ ವ್ಯವಸ್ಥೆಗೊಳಿಸಿ ಮೇಲಧಿಕಾರಿಗಳಿಗೆ ಅಂದರೆ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು.

ನಮ್ಮ ಸಮಾಜದ ಅವಿಭಾಜ್ಯ ಅಂಗವಾದ ಮಕ್ಕಳ ರಕ್ಷಣೆ ಮತ್ತು ಅಭಿವೃದ್ದಿ ಎಲ್ಲ ಸಮುದಾಯಗಳ ಆದ್ಯ ಕರ್ತವ್ಯ. ಆಡಳಿತ ವಿಕೇಂದ್ರಿಕರಣದ ಸ್ಥಳೀಯ ಘಟಕವಾದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಿ ಸಂರಕ್ಷಿಸುವಲ್ಲಿ ಮಕ್ಕಳ ಗ್ರಾಮಸಭೆ ಸೂಕ್ತ ವೇದಿಕೆಯಾಗಿದೆ. ಮಕ್ಕಳ ಏಳಿಗೆಗೆ ಶ್ರಮಿಸುವ ಪ್ರತಿಯೊಬ್ಬರೂ ಕೈಜೋಡಿಸಿ ಮಕ್ಕಳ ಗ್ರಾಮಸಭೆಯನ್ನು ಯಶಸ್ವಿಗೊಳಿಸೋಣ. ಆ ಮೂಲಕ ಸ್ವಸ್ಥ ಮಕ್ಕಳ ಕೂಟವನ್ನು ನಿರ್ಮಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT