ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಯರ ದಿಟ್ಟ ನಡೆ...

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮಹಿಳಾ ಕ್ರಿಕೆಟ್‌ ಲೋಕದಲ್ಲಿ ಭಾರತ ತಂಡ ಹಲವು ಮೈಲಿಗಲ್ಲು ಗಳನ್ನು ನೆಟ್ಟಿದೆ. 2005ರ ಏಕದಿನ ವಿಶ್ವಕಪ್‌ನಲ್ಲಿ  ರನ್ನರ್ಸ್‌ ಅಪ್‌ ಆಗಿದ್ದ ತಂಡ   ಮೂರು ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆಯನ್ನೂ ಮಾಡಿದೆ. ಟೆಸ್ಟ್‌ ಮತ್ತು ಟ್ವೆಂಟಿ–20 ಮಾದರಿಗಳಲ್ಲೂ ಭಾರತದ ವನಿತೆಯರ ಸಾಧನೆ ಗಮನಾರ್ಹವಾದುದು.

ಈಗ ಮತ್ತೊಂದು ವಿಶ್ವಕಪ್‌ ಸಮೀಪಿಸುತ್ತಿದೆ. 2017ರ ಟೂರ್ನಿಯ ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಪ್ರತಿಷ್ಠಿತ ಟೂರ್ನಿಗೆ ನೇರ ಅರ್ಹತೆ ಗಳಿಸುವ ಕನಸು ಕಾಣುತ್ತಿರುವ ಭಾರತ ತಂಡ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಹೋದ ವಾರ ಆಂಧ್ರ ಪ್ರದೇಶದ ಮುಲಪಾಡಿನಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್‌ ಬಳಗ ‘ಕ್ಲೀನ್‌ ಸ್ವೀಪ್‌’ ಸಾಧನೆಯ ಗರಿ ಮುಡಿಗೇರಿಸಿಕೊಂಡಿದೆ.

ಮೂರೂ ಪಂದ್ಯಗಳಲ್ಲಿ ಮಿಂಚಿ ಕೆರಿಬಿಯನ್‌ ನಾಡಿನ ವನಿತೆಯರ ಸದ್ದಡಗಿಸಿದ್ದ ಆತಿಥೇಯರು ವಿಶ್ವದ ಬಲಿಷ್ಠ ತಂಡಗಳನ್ನು ಸದೆ ಬಡಿಯುವ ತಾಕತ್ತು ತಮ್ಮಲ್ಲಿದೆ ಎಂಬುದನ್ನು ನಿರೂಪಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ನಡೆದಿದ್ದ ಟ್ವೆಂಟಿ–20 ಸರಣಿಯಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದ ಭಾರತ ತಂಡ ಫೆಬ್ರುವರಿಯಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಟ್ರೋಫಿ ಎತ್ತಿ ಹಿಡಿದಿತ್ತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಮಿಥಾಲಿ ಬಳಗ ಎಂಟು ತಿಂಗಳ ಬಳಿಕ ಈಗ ವಿಂಡೀಸ್‌  ಎದುರೂ ಹಿಂದಿನ ಸಾಧನೆ  ಪುನರಾವರ್ತಿಸಿರುವುದು ಭಾರತದ ಮಹಿಳಾ ಕ್ರಿಕೆಟ್‌ನ ಮಟ್ಟಿಗೆ ಮಹತ್ವದ ಬೆಳವಣಿಗೆಯಾಗಿದೆ.   ಈ ಸರಣಿ ಗೆಲುವು ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ವನಿತೆಯರ ಕನಸಿಗೆ ಬಲ ತುಂಬಿದೆ.

ಮಿಥಾಲಿ, ವೇದಾ  ಮೋಡಿ
ನಾಯಕಿ ಮಿಥಾಲಿ ರಾಜ್‌ ಮತ್ತು ಕರ್ನಾಟಕದ ಪ್ರತಿಭಾನ್ವಿತೆ  ವೇದಾ ಕೃಷ್ಣಮೂರ್ತಿ ಅವರು ಬ್ಯಾಟಿಂಗ್‌ ವಿಭಾಗದಲ್ಲಿ ಭಾರತದ ಶಕ್ತಿ ಎನಿಸಿದ್ದಾರೆ.  ಇವರು ಆಂಧ್ರಪ್ರದೇಶದ ಗೋಕರಾಜು ಲಿಯಾಲ ಗಂಗರಾಜು ಮೈದಾನದಲ್ಲಿ ರನ್‌ ಮಳೆ ಸುರಿಸಿ ತವರಿನ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದರು.

ಅಲ್ಪ ಮೊತ್ತದ ಎದುರು ತಂಡ ಆರಂಭಿಕ ಆಘಾತಕ್ಕೊಳಗಾಗಿದ್ದಾಗಲೆಲ್ಲಾ ತಂಡಕ್ಕೆ ಆಸರೆಯಾಗಿದ್ದ ವೇದಾ ಮತ್ತು ಮಿಥಾಲಿ ಪ್ರವಾಸಿ ಬಳಗದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಅವರ ಸೊಬಗಿನ ಆಟ ಆತಿಥೇಯ ತಂಡ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಲು ನೆರವಾಗಿತ್ತು.

ಮೊದಲ ಪಂದ್ಯದಲ್ಲಿ ಅಜೇಯ 46ರನ್‌ ಗಳಿಸಿದ್ದ 33 ವರ್ಷದ ಬಲಗೈ ಬ್ಯಾಟ್ಸ್‌ವುಮನ್‌ ಮಿಥಾಲಿ ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 45 ಮತ್ತು 15 ರನ್‌ ಕಲೆಹಾಕಿ ಗಮನ ಸೆಳೆದಿದ್ದರು.

ಚಿಕ್ಕಮಗಳೂರಿನ ವೇದಾ ಕೂಡಾ ತಮ್ಮ ಮನಮೋಹಕ ಬ್ಯಾಟಿಂಗ್‌ ಮೂಲಕ ತವರಿನ ಅಭಿಮಾನಿಗಳ ಮನ ಗೆದ್ದಿದ್ದರು. 24 ವರ್ಷ ವಯಸ್ಸಿನ ವೇದಾ ಅವರು ಸರಣಿಯ ಮೊದಲ ಪಂದ್ಯದಲ್ಲಿ ಔಟಾಗದೆ 52ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ನಂತರದ ಪಂದ್ಯಗಳಲ್ಲಿಯೂ ವೇದಾ ಆಟ ರಂಗೇರಿತ್ತು. ಎರಡನೇ ಪಂದ್ಯದಲ್ಲಿ ಅಜೇಯ 8ರನ್‌ ಕಲೆಹಾಕಿದ್ದ ಬಲಗೈ ಬ್ಯಾಟ್ಸ್‌ವುಮನ್‌ ಕೊನೆಯ ಪಂದ್ಯದಲ್ಲಿ 71ರನ್‌ ಗಳಿಸಿ ಸೈ ಎನಿಸಿ ಕೊಂಡಿದ್ದರು. ಸ್ಮೃತಿ ಮಂದಾನ, ದೀಪ್ತಿ ಶರ್ಮಾ ಮತ್ತು ದೇವಿಕಾ ವೈದ್ಯ ಅವರೂ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಇದು ತಂಡ ವಿಶ್ವಾಸದಿಂದ ಪುಟಿಯುತ್ತಿರುವುದರ ದ್ಯೋತಕವಾಗಿದೆ.

ರಾಜೇಶ್ವರಿ ಹೊಳಪು
ವಿಂಡೀಸ್‌ ವಿರುದ್ಧದ ಸರಣಿ ಗೆಲುವಿನಲ್ಲಿ ಕರ್ನಾಟಕದ ಪ್ರತಿಭೆ ರಾಜೇಶ್ವರಿ ಗಾಯಕ್ವಾಡ್‌ ಅವರ ಪಾತ್ರವೂ ಅಮೂಲ್ಯವಾದುದು. ಕೆರಿಬಿಯನ್‌ ನಾಡಿನ ಡೀನಾಂಡ್ರ ದೊತ್ತಿನ್‌, ಶಕೀರಾ ಸೆಲ್ಮನ್‌, ಅನಿಸಾ ಮೊಹಮ್ಮದ್‌, ಹೇಲ್‌ ಮ್ಯಾಥ್ಯೂಸ್‌, ಶಕ್ವಾನ ಕ್ವಿಂಟೈನ್‌, ಕೈಸಿಯಾ ಎ ನೈಟ್‌ ಮತ್ತು ಶೆಮೈನ್‌ ಕ್ಯಾಂಪ್‌ಬೆಲ್‌ ಅವರಂತಹ ದೈತ್ಯ ಆಟಗಾರ್ತಿಯರನ್ನು ತಮ್ಮ ಸ್ಪಿನ್‌ ಬಲೆಯಲ್ಲಿ ಒದ್ದಾಡುವಂತೆ ಮಾಡಿದ್ದ ರಾಜೇಶ್ವರಿ  ತವರಿನ ತಂಡ ಮೂರೂ ಪಂದ್ಯಗಳಲ್ಲೂ ಅಧಿಪತ್ಯ ಸಾಧಿಸಲು ನೆರವಾಗಿದ್ದರು.

ಮೊದಲ ಮತ್ತು ಮೂರನೇ ಪಂದ್ಯಗಳಲ್ಲಿ ತಲಾ ನಾಲ್ಕು ವಿಕೆಟ್‌ ಉರುಳಿಸಿದ್ದ ವಿಜಯಪುರದ ಆಟಗಾರ್ತಿ  ಎರಡನೇ ಪಂದ್ಯದಲ್ಲಿ ಒಂದು ವಿಕೆಟ್‌ ಕೆಡವಿದ್ದರು.

ಜೂಲನ್‌ ಮಿಂಚು
ಸರಣಿಯಲ್ಲಿ ಪ್ರಮುಖ ಆಕರ್ಷಣೆ ಎನಿಸಿದ್ದ 33 ವರ್ಷದ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.
ಪರಿಣಾಮಕಾರಿ ದಾಳಿ ನಡೆಸಿದ ಅವರು ಮೂರು ಪಂದ್ಯ ಗಳಿಂದ 2 ವಿಕೆಟ್‌ ಗಳಿಸಿದರೂ ಕೂಡಾ ಎದುರಾಳಿಗಳಿಗೆ ಹೆಚ್ಚು ರನ್‌ ಬಿಟ್ಟುಕೊಟ್ಟಿರಲಿಲ್ಲ.
ಸ್ಪಿನ್ನರ್‌ ಏಕ್ತಾ ಬಿಸ್ಟ್‌ ಕೂಡಾ ಸರಣಿಯಲ್ಲಿ ಗಮನ ಸೆಳೆದರು. ತಮ್ಮ ಚುರುಕಿನ ದಾಳಿಯಿಂದ ವಿಂಡೀಸ್‌ ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕಕ್ಕೆ ಪೆಟ್ಟು ನೀಡಿದ್ದ ಅವರು  ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.

ಸಿಗದ ಜನಮನ್ನಣೆ
ಭಾರತದಲ್ಲಿ ಕ್ರಿಕೆಟ್‌ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಪುರುಷರ ತಂಡದ ಪಂದ್ಯಗಳು ನಡೆದಾಗ  ಕ್ರೀಡಾಂಗಣದ ಗ್ಯಾಲರಿಗಳು ಪ್ರೇಕ್ಷಕರಿಂದ ತುಂಬಿ ಹೋಗಿರುತ್ತದೆ. ಟಿ.ವಿ ಯಲ್ಲಿ ಪಂದ್ಯಗಳನ್ನು ಕಣ್ತುಂಬಿಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲ.

ಆದರೆ ಮಹಿಳಾ ಕ್ರಿಕೆಟ್‌ನ ವಿಚಾರಕ್ಕೆ ಬಂದಾಗ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಟಿಕೆಟ್‌ ದರ ಕಡಿಮೆ ಇದ್ದರೂ  ಬೆರಳೆಣಿಕೆಯಷ್ಟು ಮಂದಿ ಮಾತ್ರ ಕ್ರೀಡಾಂಗಣಗಳಿಗೆ ಬಂದು ಪಂದ್ಯಗಳನ್ನು ವೀಕ್ಷಿಸುತ್ತಾರೆ. ಕೆಲವೊಮ್ಮೆ ಕ್ರಿಕೆಟ್‌ ಸಂಸ್ಥೆಗಳು ಉಚಿತ ಪ್ರವೇಶ ನೀಡಿದರೂ ಜನ ಮೈದಾನದತ್ತ ಮುಖ ಮಾಡಿಯೂ ನೋಡುವುದಿಲ್ಲ. ಇನ್ನೂ ಟಿ.ವಿ. ಯಲ್ಲಿ ಪಂದ್ಯ ವೀಕ್ಷಿಸುವವರ ಸಂಖ್ಯೆಯೂ ಅಷ್ಟಕಷ್ಟೆ.

ಟಿ.ವಿ. ಮತ್ತು ದಿನ ಪತ್ರಿಕೆಗಳಲ್ಲೂ ಮಹಿಳಾ ಕ್ರಿಕೆಟ್‌ಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಏಕದಿನ ಸರಣಿಯೂ ಸುದ್ದಿಯಾಗದೆ ಸದ್ದಿಲ್ಲದ ಹಾಗೆ  ಮುಗಿದು ಹೋಗಿದ್ದು ಇದಕ್ಕೊಂದು ನಿದರ್ಶನ.

ಬೇಕಿದೆ ಪ್ರೋತ್ಸಾಹ
ಪುರುಷರ ಕ್ರಿಕೆಟ್‌ನಂತೆ ಮಹಿಳಾ ಕ್ರಿಕೆಟ್‌ ಕೂಡಾ ಹೆಚ್ಚು ಜನರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹಲವು ಯೋಜನೆಗಳನ್ನು ರೂಪಿಸಿದೆಯಾದರೂ  ಅವು ಅಷ್ಟು ಪ್ರಯೋಜನವಾದಂತೆ ಕಾಣುತ್ತಿಲ್ಲ.

ಭಾರತದಲ್ಲಿ ಕ್ರಿಕೆಟ್‌ಗೆ ದೊಡ್ಡ ಮಾರುಕಟ್ಟೆ ಇದೆ. ಆದರೆ ಅದು ಪುರುಷರ ಕ್ರಿಕೆಟ್‌ಗೆ ಮಾತ್ರ ಸೀಮಿತವಾದಂತಿದೆ. ಮಹಿಳಾ ಕ್ರಿಕೆಟ್‌ಗೂ ಸೂಕ್ತ ಪ್ರೋತ್ಸಾಹ ಸಿಕ್ಕರೆ ಈ ಮಾರುಕಟ್ಟೆಯನ್ನು ಇನ್ನೂ ವಿಸ್ತರಿಸಬಹುದು ಎಂಬ ಮಾತುಗಳೂ ಕೇಳಿ ಬಂದಿವೆ. ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಕ್ಲೇರ್‌ ಕಾನ್ನರ್‌ ಅವರು ಈ ಮಾತನ್ನು ಒತ್ತಿ ಹೇಳುತ್ತಾರೆ.

‘ಭಾರತದಲ್ಲಿ ಕ್ರಿಕೆಟ್‌ ಒಂದು ಧರ್ಮವಾಗಿದೆ. ಕ್ರಿಕೆಟಿಗರು ಇಲ್ಲಿನ ಜನರ ಆರಾಧ್ಯ ದೈವಗಳಾಗಿದ್ದಾರೆ. ಭಾರತದ ನೆಲದಲ್ಲಿ ಸರಣಿ ನಡೆದರೆ ಹಣದ ಹೊಳೆಯೇ ಹರಿದುಬರುತ್ತದೆ. ಹೀಗಾಗಿಯೇ ಇಲ್ಲಿ ಪಂದ್ಯಗಳನ್ನು ಆಡಲು ಎಲ್ಲಾ ತಂಡಗಳು ತುದಿಗಾಲಿನಲ್ಲಿ ನಿಂತಿರುತ್ತವೆ. ಇದು ಪುರುಷರ ವಿಭಾಗಕ್ಕೆ ಮಾತ್ರ ಸೀಮಿತವಾಗಿದೆ. ಭಾರತದ ಮಹಿಳೆಯರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ಅವ ರಿಗೂ ಸಾಕಷ್ಟು ಬೆಂಬಲ ಸಿಗಬೇಕು. ಆಗ ಇನ್ನಷ್ಟು ಸಾಧನೆಗೆ ಸ್ಫೂರ್ತಿ ಸಿಗಲಿದೆ’ ಎಂದು ಅವರು  ಹಿಂದೊಮ್ಮೆ  ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT