ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಯಶಸ್ಸು ಅರಸುತ್ತಾ...

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಜಗದೀಶ್‌ ಅರುಣ್‌ ಕುಮಾರ್‌ ಕೂಡ ಒಬ್ಬರು. ರಾಷ್ಟ್ರೀಯ ತಂಡದಲ್ಲಿ ಆಡುವ ಸಾಮರ್ಥ್ಯವಿದ್ದರೂ ದುರದೃಷ್ಟವಶಾತ್‌ ಅವಕಾಶ ಸಿಗದೇ ದೇಶಿ ಟೂರ್ನಿಗಳಲ್ಲಿಯೇ ತಮ್ಮ ಕ್ರಿಕೆಟ್‌ ಬದುಕನ್ನು ಮುಗಿಸಬೇಕಾಯಿತು. 1993ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದ ಬಲಗೈ ಬ್ಯಾಟ್ಸ್‌ಮನ್‌ ಅರುಣ್‌ ಕರ್ನಾಟಕ, ಅಸ್ಸಾಂ ಮತ್ತು ಗೋವಾ ತಂಡಗಳ ಪರ ಆಡಿದ್ದರು. ಐಪಿಎಲ್‌ನಲ್ಲಿ 2008ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿದ್ದರು. ದಕ್ಷಿಣ ವಲಯ, ಮಂಡಳಿಯ ಅಧ್ಯಕ್ಷರ ಇಲೆವೆನ್‌ ಮತ್ತು ಭಾರತ ‘ಎ’ ತಂಡಗಳಲ್ಲಿಯೂ ಆಡಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದ ಅರುಣ್‌ 109 ಪಂದ್ಯಗಳನ್ನಾಡಿದ್ದಾರೆ. 42.90ರ ಸರಾಸರಿಯಲ್ಲಿ ಒಟ್ಟು 7208 ರನ್ ಕಲೆ ಹಾಕಿದ್ದಾರೆ. 20 ಶತಕ ಮತ್ತು 36 ಅರ್ಧಶತಕಗಳನ್ನೂ ಹೊಡೆದಿದ್ದಾರೆ. 2008ರಲ್ಲಿ ಕೊನೆಯ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಕ್ರಿಕೆಟ್‌ನಿಂದ ನಿವತ್ತಿಯಾದರೂ ಸದಾ ಇದೇ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಸ್ವಂತ ಕ್ರಿಕೆಟ್ ಅಕಾಡೆಮಿಯನ್ನೂ ಹೊಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದರು. ರಾಜ್ಯ ತಂಡ ಸತತ ಎರಡು ವರ್ಷ ರಣಜಿ ಮತ್ತು ಇರಾನಿ ಟ್ರೋಫಿಯಲ್ಲಿ ಚಾಂಪಿಯನ್ ಆದಾಗಲೂ ಅರುಣ್‌ ಇದ್ದರು. ಈ ವರ್ಷದಿಂದ ತಂಡದ ಮುಖ್ಯ ಕೋಚ್‌ ಆಗಿದ್ದಾರೆ.

ಆಟಗಾರರು ಪದೇ ಪದೇ ಕ್ಯಾಚ್‌ಗಳನ್ನು ಕೈಚೆಲ್ಲಬಾರದು ಎನ್ನುವ ಕಾರಣಕ್ಕಾಗಿ ಮತ್ತು ಫೀಲ್ಡಿಂಗ್‌ನಲ್ಲಿ ಸುಧಾರಣೆ ತರಲು ಹಲವಾರು ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಅದರಲ್ಲಿ ಪೊರಕೆ ಮೂಲಕ ಫೀಲ್ಡಿಂಗ್‌ ಅಭ್ಯಾಸ ಕೂಡ ಒಂದು. ಪೊರಕೆ ತುದಿಗೆ ಬಡಿದ ಚೆಂಡನ್ನು ಫೀಲ್ಡರ್‌ಗಳು ಹಿಡಿಯಬೇಕು. ಹೆಚ್ಚು ಕ್ಯಾಚಿಂಗ್ ಅಭ್ಯಾಸಕ್ಕೂ ಅರುಣ್‌ ಒತ್ತು ನೀಡುವಂತೆ ಆಟಗಾರರಿಗೆ ಹೇಳುತ್ತಾರೆ. 2012ರಿಂದ ಕೋಚ್‌ ಆಗಿ ತಂಡದ ಅನೇಕ ಏಳು ಬೀಳುಗಳಿಗೆ ಅರುಣ್‌ ಸಾಕ್ಷಿಯಾಗಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

*ರಣಜಿಯಲ್ಲಿ ಕರ್ನಾಟಕ ತಂಡ ಸತತ ಗೆಲುವುಗಳನ್ನು ಪಡೆಯುತ್ತಿದೆ. ಈ ಸಾಧನೆಯ ಗುಟ್ಟೇನು?
ಇದೆಲ್ಲವೂ ನಿರೀಕ್ಷಿತವೂ ಆಗಿತ್ತು. ಇದಕ್ಕೆ ಮುಖ್ಯ ಕಾರಣ ತಂಡದ ಉತ್ತಮ ಬೌಲಿಂಗ್‌. ನೆಟ್ಸ್‌ನಲ್ಲಿ ಬೌಲರ್‌ಗಳು ಕಠಿಣ ಅಭ್ಯಾಸ ಮಾಡಿರುವ ಕಾರಣ ಸತತ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ಇದರಿಂದ ಪ್ರತಿ ಪಂದ್ಯದಲ್ಲಿ ಎದುರಾಳಿ ತಂಡದ 20 ವಿಕೆಟ್‌ಗಳನ್ನು ಪಡೆಯಲು ಆಗುತ್ತಿದೆ. ಸ್ಪಿನ್ನರ್‌ಗಳಾದ ಕೆ. ಗೌತಮ್‌, ಶ್ರೇಯಸ್‌ ವೇಗವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ವಿನಯ್‌ ಮತ್ತು ಅರವಿಂದ್‌ ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶಗಳನ್ನು ಕೊಡುತ್ತಿದ್ದಾರೆ. ವೇಗ ಹಾಗೂ ಸ್ಪಿನ್‌ ಎರಡೂ ವಿಭಾಗ ಬಲಿಷ್ಠವಾಗಿರುವ ಕಾರಣ ಯಶಸ್ಸು ಸಾಧ್ಯವಾಗುತ್ತಿದೆ.

*ಕರ್ನಾಟಕದ ಸತತ ಗೆಲುವುಗಳಿಗೆ ಅರವಿಂದ್‌ ಉತ್ತಮ ಬೌಲಿಂಗ್ ಹೇಗೆ ಕಾರಣವಾಗುತ್ತಿದೆ?
ಕೆಲವು ವರ್ಷಗಳ ಹಿಂದೆ ಅರವಿಂದ್ ಗಾಯಗೊಂಡಿದ್ದರು. ಚೇತರಿಸಿಕೊಳ್ಳಬೇಕಿದ್ದ ಕಾರಣ ಎರಡು ವರ್ಷ ತಂಡದಿಂದ ಹೊರಗಿದ್ದರು. ಬಳಿಕ ಭಾರತ ತಂಡದಲ್ಲಿ ಅವಕಾಶ ಪಡೆದರು. ಎಷ್ಟೇ ಕಷ್ಟದ ಪರಿಸ್ಥಿತಿಯಿದ್ದರೂ ತಂಡಕ್ಕೆ ಆಸರೆಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಯಾವಾಗಲೂ ತಂಡಕ್ಕೆ ಗೆಲುವು ತಂದುಕೊಡಬೇಕೆಂದು ಹೋರಾಡುತ್ತಾನೆ.

*ರಾಜ್ಯದ ಹೆಚ್ಚು ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯನ್ನು ನೀಗಿಸಲು ಹೇಗೆ ಸಜ್ಜಾಗಿದ್ದೀರಿ?
ರಾಜ್ಯ ತಂಡದಲ್ಲಿರುವ ಎಲ್ಲಾ ಆಟಗಾರರಿಗೆ ದೇಶವನ್ನು ಪ್ರತಿನಿಧಿಸುವ ಆಸೆಯಿದೆ. ಹಿರಿಯ ಆಟಗಾರರು ಭಾರತ ತಂಡಕ್ಕೆ ಹೋದರೆ ಅವರ ಸ್ಥಾನ ತುಂಬಬಲ್ಲ ಹೊಸಬರು ನಮ್ಮಲ್ಲಿದಾರೆ. ಕುನಾಲ್‌ ಕಪೂರ್ ಸೇರಿದಂತೆ ಅನೇಕರು ರಾಜ್ಯ ತಂಡದಲ್ಲಿ ಅವಕಾಶಕ್ಕಾಗಿ ಕಾದಿದ್ದಾರೆ. ಬೆಂಚ್‌ಸ್ಟ್ರಂಥ್‌ ಚೆನ್ನಾಗಿರುವ ಕಾರಣ ಹೊಸ ಆಟಗಾರರಿದ್ದರೂ ತಂಡ ಉತ್ತಮ ಪ್ರದರ್ಶನ ನೀಡುತ್ತದೆ. ಹೊಸಬರು ಆರಂಭದಲ್ಲಿ ಸಣ್ಣ ಸಣ್ಣ ಮೊತ್ತ ಗಳಿಸಿ ನಂತರ ಅದನ್ನು ಶತಕವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದ್ದಾರೆ.

*ಮೊದಲ ನಾಲ್ಕು ಪಂದ್ಯಗಳಲ್ಲಿ ಆರಂಭಿಕ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಮಯಂಕ್‌ ಅಗರವಾಲ್‌ ರಾಜಸ್ತಾನದ ಎದುರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರು. ಈ ಬದಲಾವಣೆಗೆ ಕಾರಣವೇನು?
ಹಿಂದೆ ನಡೆದ ಟೂರ್ನಿಗಳಲ್ಲಿ ಮಯಂಕ್‌ ಉತ್ತಮವಾಗಿ ರನ್ ಕಲೆ ಹಾಕಿದ್ದ. ಕಷ್ಟದ ಬೌಲಿಂಗ್‌ ಅನ್ನು ಸಮರ್ಥವಾಗಿ ಎದುರಿಸುವ ಶಕ್ತಿಯಿದೆ.  ಆದ್ದರಿಂದ ಕ್ರಮಾಂಕದಲ್ಲಿ ಬದಲಾವಣೆಯ ಪ್ರಯೋಗ ಮಾಡಿದೆವು. ಇದರಲ್ಲಿ ಯಶಸ್ಸು ಕಂಡು ರಾಜಸ್ತಾನ ವಿರುದ್ಧದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಹೊಡೆದಿದ್ದರಿಂದ ಖುಷಿಯಾಯಿತು. ಮಯಂಕ್‌ ಹೆಚ್ಚು ರನ್ ಗಳಿಸುವುದು ಅಗತ್ಯವಿತ್ತು. ಮಯಂಕ್‌ ಕೂಡ ಭಾರತ ತಂಡದಲ್ಲಿ ಆಡುವುದಕ್ಕೆ ಕಾಯುತ್ತಿದ್ದಾನೆ.

*ಈ ಬಾರಿಯ ಟೂರ್ನಿಯಲ್ಲಿ ರಾಜ್ಯ ತಂಡ ಉತ್ತಮ ಆರಂಭ ಪಡೆದಿದೆ. ಇದನ್ನು ಮುಂದೆಯೂ ಉಳಿಸಿಕೊಂಡು ಹೋಗಲು ಸಾಧ್ಯವಿದೆಯೇ?
ಹೋದ ವರ್ಷ ಲೀಗ್‌ ಹಂತದಲ್ಲಿಯೇ ಸೋತಿದ್ದರಿಂದ ನಮಗೆ ತುಂಬಾ ಆಘಾತವಾಗಿತ್ತು. ಆದ್ದರಿಂದ ನಾವು ಈ ಬಾರಿ ಯಾವ ತಂಡವನ್ನೂ ಹಗುರವಾಗಿ ಪರಿಗಣಿಸಿಲ್ಲ. ಆರಂಭದ ಐದು ಪಂದ್ಯಗಳಲ್ಲಿ ಒಂದು ಡ್ರಾ ಮತ್ತು ನಾಲ್ಕು ಪಂದ್ಯಗಳಲ್ಲಿ ಜಯ ಪಡೆದಿರುವುದರಿಂದ ಹಿಂದಿನ ನಿರಾಸೆ ಸ್ವಲ್ಪ ಮರೆಯಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಚೆನ್ನಾಗಿ ಆಡುತ್ತೇವೆ. ಸತತ ನಾಲ್ಕು ಪಂದ್ಯಗಳಲ್ಲಿ ಸಾಧಿಸಿದ ಜಯವೇ ಇನ್ನುಳಿದ ಪಂದ್ಯಗಳಿಗೂ ಸ್ಫೂರ್ತಿ.

*ಹಿಂದಿನ ವರ್ಷ ಐದು ಪಂದ್ಯಗಳನ್ನು ತವರಿನಲ್ಲಿ ಆಡಿದ್ದರೂ ಉತ್ತಮ ಪ್ರದರ್ಶನ ನೀಡಲು ಆಗಿರಲಿಲ್ಲ. ಆದರೆ ಈ ಬಾರಿ ತಟಸ್ಥ ಸ್ಥಳದಲ್ಲಿ ಪಂದ್ಯಗಳು ನಡೆದರೂ ಸತತ ಗೆಲುವು ಸಾಧ್ಯವಾಗುತ್ತಿದೆಯಲ್ಲ. ಹಾಗಾದರೆ ತಟಸ್ಥ ಸ್ಥಳ ಸೂಕ್ತವೇ?
ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡುತ್ತಿರುವುದರಿಂದಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಹಿಂದಿನ ಐದೂ ಪಂದ್ಯಗಳು ಆಡಿದ ಪಿಚ್‌ಗಳು ಬೌಲರ್‌ಗಳಿಗೆ ಸಹಕಾರಿಯಾಗಿದ್ದವು. ಎದುರಾಳಿ ತಂಡವನ್ನು ಎರಡು ಸಲ ಆಲೌಟ್‌ ಮಾಡುವುದು ಸುಲಭದ ಮಾತಲ್ಲ. ಏಕೆಂದರೆ ತಟಸ್ಥ ಸ್ಥಳದ ಪಿಚ್‌ ಹೇಗಿರುತ್ತದೆ ಎಂಬುದು ಗೊತ್ತಿರುವುದಿಲ್ಲ. ಆದರೂ ನಮ್ಮ ಬೌಲರ್‌ಗಳು ಚುರುಕಾಗಿ ಬೌಲಿಂಗ್ ಮಾಡುತ್ತಿದ್ದಾರೆ. ತಟಸ್ಥ ಸ್ಥಳದಿಂದ ಆಗಿರುವ ಅನುಕೂಲವೇ ಹೆಚ್ಚು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT