ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್ ಸುತ್ತಮುತ್ತ

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಟೆಸ್ಟ್ ಕ್ರಿಕೆಟ್‌ ಮಾದರಿಗೆ ಉಳಿಗಾಲವಿದೆಯೇ? ಎಂಬ ವಿಷಯದ ಕುರಿತ ಚರ್ಚೆಗಳನ್ನು ಮಾಡುವುದನ್ನು   ನಿಲ್ಲಿಸಬೇಕು. ಏಕದಿನ ಮಾದರಿ ಆರಂಭವಾದಾಗಲೂ ಟೆಸ್ಟ್ ಕಥೆ ಮುಗಿಯಿತು ಎನ್ನಲಾಗಿತ್ತು. ಆದರೆ ಅದು ಹುಸಿಯಾಯಿತು’...

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಎರಡು ತಿಂಗಳು ಹಿಂದೆ ಕಾರ್ಯಕ್ರಮದಲ್ಲಿ ಹೇಳಿದ್ದ ಮಾತುಗಳಿವು. ಸದ್ಯದ ಕ್ರಿಕೆಟ್ ಋತುವಿನಲ್ಲಿ ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗಳತ್ತ ಒಂದು ಬಾರಿ ಕಣ್ಣು ಹಾಯಿಸಿದರೆ ಕುಂಬ್ಳೆ ಅವರ ಮಾತುಗಳು ಸತ್ಯವೆನಿಸುತ್ತವೆ.

ಪ್ರತಿಯೊಂದು ಸರಣಿಯಲ್ಲಿಯೂ ಅಚ್ಚರಿಯ ಫಲಿತಾಂಶಗಳು, ಅನಿರೀಕ್ಷಿತವಾದ ಬೆಳವಣಿಗೆಗಳು ನಡೆಯುತ್ತಿವೆ. ಹೊಸ ತಾರೆಗಳು ಉದಯಿಸುತ್ತಿದ್ದಾರೆ. ಇದರೊಂದಿಗೆ  ಶ್ವೇತ ಸಮವಸ್ತ್ರದ ಆಟದಲ್ಲಿಯೂ ಕ್ರಿಕೆಟ್ ರಂಗೇರುತ್ತಿದೆ. ಟ್ವೆಂಟಿ–20 ಭರಾಟೆಯಲ್ಲಿ ಬಿಳಿಬಣ್ಣ ಮಂಕಾಗುವುದಿಲ್ಲ ಎಂಬ ಸಂದೇಶಗಳು ಸಿಗುತ್ತಿವೆ. ಇದು ಕ್ರಿಕೆಟ್ ಪ್ರಿಯರಲ್ಲಿ ಹೊಸ ಹಿಗ್ಗು ಮೂಡಿಸಲು ಕಾರಣವಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಂಬೆಗಾಲಿಕ್ಕುತ್ತಿರುವ ಬಾಂಗ್ಲಾದೇಶದ ತಂಡವು ಹೋದ ತಿಂಗಳು ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದು, ಆಸ್ಟ್ರೇಲಿಯಾ ತಂಡವನ್ನು ಅದರ ತವರಿನಲ್ಲಿಯೇ ದಕ್ಷಿಣ ಆಫ್ರಿಕಾ ತಂಡವು ಮಣಿಸಿದ್ದು, ಶಾರ್ಜಾದಲ್ಲಿ 1–2ರಿಂದ ಸರಣಿ ಹಿನ್ನಡೆ ಅನುಭವಿಸಿದ್ದ ವೆಸ್ಟ್ ಇಂಡೀಸ್ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದು, ತವರಿನಲ್ಲಿ ತನಗೆ ತಾನೇ ಸಾಟಿ ಎಂಬಂತೆ ಮೆರೆಯುತ್ತಿದ್ದ ಭಾರತ ತಂಡಕ್ಕೆ ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ಕಲಿಸಿದ್ದ ಪಾಠಗಳು ಟೆಸ್ಟ್ ಕ್ರಿಕೆಟ್‌ನ ಸೌಂದರ್ಯ, ತಾಕತ್ತು, ಶ್ರೀಮಂತಿಕೆಗಳನ್ನು ಅನಾವರಣಗೊಳಿಸಿವೆ. 

ಪ್ರತಿದಿನವೂ ರೋಚಕ
ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ರೋಚ ಕತೆ ಮತ್ತು ಮನರಂಜನೆ ಹೆಚ್ಚು ಎಂದು ಹೇಳಲಾಗು ತ್ತದೆ. ಆದರೆ ಆದು ಆಯಾ ಪಂದ್ಯದ ಫಲಿತಾಂಶ ಹೊರಹೊಮ್ಮುವವರೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಟೆಸ್ಟ್ ಕ್ರಿಕೆಟ್ ಹಾಗಲ್ಲ. ಪ್ರತಿದಿನವೂ ಒಂದೊಂದು ಹೊಸ ತಿರುವು ಪಡೆಯುತ್ತ, ರೋಚಕತೆ ಹುಟ್ಟಿಸುತ್ತ ಸಾಗಿಸುತ್ತವೆ.

ಪರ್ತ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು  ಮೊದಲ ಇನಿಂಗ್ಸ್‌ನಲ್ಲಿ 242 ರನ್‌ಗಳಿಗೆ ಸರ್ವಪತನ ಕಂಡಿತ್ತು. ಆತಿಥೇಯ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (97 ರನ್)ಮತ್ತು ಶಾನ್ ಮಾರ್ಷ್ (63 ರನ್) ಅವರ ಆಟ ನೋಡಿದವರು ಪಂದ್ಯ ಏಕಪಕ್ಷೀಯವಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದರು. ಆದರೆ, ಹರಿಣಗಳ ನಾಡಿನ ವೇಗಿ ವೆರ್ನಾನ್ ಫಿಲಾಂಡರ್, ಕಗಿಸೊ ರಬಾಡ ಅವರು ಕಾಂಗರೂ ಪಡೆಯ ನಿರೀಕ್ಷೆಯನ್ನು ಬುಡಮೇಲು ಮಾಡಿದರು. ಅವರ ಬಿರುಗಾಳಿ ವೇಗದ ಮುಂದೆ ಆಸ್ಟ್ರೇಲಿಯಾ ಕೇವಲ 2 ರನ್‌ಗಳ ಮುನ್ನಡೆ ಪಡೆದಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಶತಕಗಳನ್ನು ದಾಖಲಿಸಿದ್ದ ಡೀನ್ ಎಲ್ಗರ್ ಮತ್ತು ಜೀನ್ ಪಾಲ್ ಡುಮಿನಿ ಅವರು  ಆಫ್ರಿಕಾ ತಂಡವು 540 ರನ್‌ಗಳ ದೊಡ್ಡ ಮೊತ್ತ ಪೇರಿಸಲು ಕಾರಣರಾಗಿದ್ದರು. ನಂತರ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 177 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ವಿದೇಶಿ ನೆಲದಲ್ಲಿ ಗೆಲುವಿನ ಬರ ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ಬಳಗ ಗೆದ್ದು ಕೇಕೆ ಹಾಕಿತ್ತು. ನಂತರ ಹೋಬರ್ಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಫ್ರಿಕಾ ಬಳಗ ಜಯಿಸಿತ್ತು. ಫಿಲಾಂಡರ್ ಮತ್ತು ಕೈಲ್ ಅಬಾಟ್ ಅವರ ವೇಗಕ್ಕೆ ಆತಿಥೇಯರು ಶರಣಾದರು.

ಇದರೊಂದಿಗೆ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಫಾಫ್ ಡು ಪ್ಲೆಸಿಸ್‌ ಬಳಗವು ಮೇಲುಗೈ ಸಾಧಿಸಿತ್ತು. ಪ್ರಮುಖ ಬ್ಯಾಟ್ಸ್‌ಮನ್ ಎ.ಬಿ. ಡಿವಿಲಿಯರ್ಸ್ ಮತ್ತು ವೇಗಿ ಡೇಲ್ ಸ್ಟೇಯ್ನ್ ಅವರ ಅನುಪಸ್ಥಿತಿ ಯಲ್ಲಿಯೂ ತಂಡದ ಈ ಸಾಧನೆ ಮಹತ್ವದ್ದು. ಅಲ್ಲದೇ ಕಾಂಗರೂ ತಂಡವನ್ನು ಅದರ ನೆಲದ ಲ್ಲಿಯೇ ಮಣಿಸುವುದೆಂದರೆ ಸುಲಭದ ಮಾತಲ್ಲ.

ಬಾಂಗ್ಲಾದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಗಳಿಸಿತ್ತು. ಸರಣಿಯ ಕೊನೆಯ ಮತ್ತು ಎರಡನೇ ಟೆಸ್ಟ್‌ನಲ್ಲಿಯೂ ಅಲಸ್ಟೇರ್ ಕುಕ್ ಬಳಗವೇ ಮೇಲುಗೈ ಸಾಧಿಸುವ ನೆಚ್ಚಿನ ತಂಡವಾಗಿತ್ತು. ಆದರೆ, ಇಲ್ಲಿ ಬಾಂಗ್ಲಾದ ಸ್ಪಿನ್ನರ್ ಮೆಹದಿ ಹಸನ್ ಮೆರಾಜ್ (159ಕ್ಕೆ12) ಅವರು ಆ ಪಂದ್ಯದಲ್ಲಿ ಒಟ್ಟು ಒಂದು ಡಜನ್ ವಿಕೆಟ್ ಗಳಿಸಿ ಕುಕ್ ಬಳಗಕ್ಕೆ ಆಘಾತ ನೀಡಿದರು. ಆಂಗ್ಲರ ವಿರುದ್ಧ ಮೊದಲ ಜಯದ ಇತಿಹಾಸ ಬರೆದರು. ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಇಂಗ್ಲೆಂಡ್‌ ತಂಡವು 272 ರನ್‌ಗಳ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ‘ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೂ ಏನು ಬೇಕಾದರೂ ಆಗಬಹುದು’ ಎಂದು ಹೇಳುವ ಕ್ರಿಕೆಟ್‌ ಪಂಡಿತರ ಮಾತು ಈ ಪಂದ್ಯದಲ್ಲಿ ನಿಜವಾಗಿತ್ತು.

ಶಾರ್ಜಾದಲ್ಲಿ (ಪಾಕ್ ತಂಡದ  ಆತಿಥೇಯ ತಾಣ) ಕೂಡ ಇದೇ ರೀತಿಯಾಗಿತ್ತು. ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಪಾಕ್ ತಂಡವು ಮೂರನೇ ಪಂದ್ಯವನ್ನೂ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು.  ಆದರೆ, ಕ್ರೇಗ್ ಬ್ರಾಥ್‌ವೈಟ್ ಅವರ ಅಮೋಘ ಬ್ಯಾಟಿಂಗ್ ಮತ್ತು ಜಾಸನ್ ಹೋಲ್ಡರ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಕೆರಿಬಿಯನ್ ಪಡೆ ಗೆದ್ದಿತು. ಟ್ವೆಂಟಿ–20 ವಿಶ್ವ ಚಾಂಪಿಯನ್ ವಿಂಡೀಸ್ ತಂಡವು ದೀರ್ಘ ಮಾದರಿ ಕ್ರಿಕೆಟ್‌ನಲ್ಲಿ ಮತ್ತೆ ತನ್ನ ವೈಭವಕ್ಕೆ ಮರಳುವ ಮುನ್ನುಡಿಯಾಗಿ ಈ ಜಯವನ್ನು ವಿಶ್ಲೇಷಿಸಲಾಗುತ್ತಿದೆ. ಈ ಪಂದ್ಯದಲ್ಲಿ ಕೆರಿಬಿಯನ್ ಬಳಗದ ದೈತ್ಯ ಶಕ್ತಿಯ ಸೆಳಕು ಗಮನ ಸೆಳೆದಿದ್ದಂತೂ ನಿಜ.

ಹೋದ ತಿಂಗಳಷ್ಟೇ ಭಾರತದಲ್ಲಿ ಸರಣಿ ಸೋತು ಮರಳಿದ್ದ ನ್ಯೂಜಿಲೆಂಡ್ ತಂಡವು  ತನ್ನ ನೆಲದಲ್ಲಿ ನಡೆಯುತ್ತಿ ರುವ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 133 ರನ್‌ಗಳ ಮೊತ್ತಕ್ಕೆ ಹೆಡೆಮುರಿ ಕಟ್ಟಿದೆ. ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದು ಕೊಂಡು 104 ರನ್ ಗಳಿಸಿದೆ. ಐಸಿಸಿ ಅಗ್ರಶ್ರೇಯಾಂಕದ ಪಟ್ಟಿಯ ಎರಡನೇ ಸ್ಥಾನದಲ್ಲಿರುವ ಪಾಕ್ ತಂಡವು ಕಿವೀಸ್‌ಗೆ ಎರಡನೇ ಇನಿಂಗ್ಸ್‌ ನಲ್ಲಿ ತಿರುಗೇಟು ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಈ ಪಂದ್ಯದ ಫಲಿತಾಂಶ ಹೊರಹೊಮ್ಮುವುದಂತೂ ಬಹುತೇಕ ಖಚಿತ. ಯಾರ ಪರ ಎಂಬುದು ಈ ಲೇಖನ ಪ್ರಕಟವಾಗುವ ಹೊತ್ತಿಗೆ ತಿಳಿದಿರುತ್ತದೆ.

ಇಂತಹ ಫಲಿತಾಂಶ ನೀಡುವ ಪಂದ್ಯಗಳಿಂದಾಗಿ ಟೆಸ್ಟ್ ಮಾದರಿಯು ಜನಮನ ಸೆಳೆಯುತ್ತದೆ.  ಮನರಂಜನೆಯ ಮೂಲ ಗಳು ಹೆಚ್ಚಾಗಿರುವ ಆಧುನಿಕ ಜಗತ್ತಿನಲ್ಲಿ ಸಪ್ಪೆ ಡ್ರಾ ಸಾಧಿಸುವ ಟೆಸ್ಟ್ ಪಂದ್ಯಗಳಿಗೆ ಜನ ಬರುವುದಿಲ್ಲ. ಟಿವಿ ಪ್ರಾಯೋಜಕತ್ವವೂ ಲಭಿಸುವುದಿಲ್ಲ. ಆದ್ದರಿಂದ ಫಲಿತಾಂಶ ಹೊರಹೊಮ್ಮುವಂತಹ ಪಂದ್ಯಗಳು ಪ್ರಮುಖವಾಗುತ್ತವೆ. ಅದಕ್ಕೆ ತಕ್ಕಂತೆ  ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರ ಕೌಶಲ್ಯ ಬದಲಾಗಿದೆ. ದಶಕಗಳ ಹಿಂದೆ ಆಡುತ್ತಿದ್ದ ಆಟಗಾರರಷ್ಟು ರಕ್ಷಣಾತ್ಮಕವಾಗಿ ಈಗಿನವರು ಆಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT