ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲುವ ಕನ್ನಡ ನಾಡಿಗೆ ಆಸ್ಪತ್ರೆಗಳೇ ಬುನಾದಿ!

Last Updated 21 ನವೆಂಬರ್ 2016, 4:31 IST
ಅಕ್ಷರ ಗಾತ್ರ
ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇಲ್ಲಿರುವುದು ಒಬ್ಬರೇ ವೈದ್ಯರು. ಸುತ್ತಮುತ್ತಲ 33 ಹಳ್ಳಿಗಳ ಸುಮಾರು 20 ಸಾವಿರ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ವೈದ್ಯರಿಗೆ ಭಾನುವಾರ  ರಜೆ. ರಜಾ ದಿನದಿಂದ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ 23 ಕಿ.ಮೀ. ದೂರದಲ್ಲಿರುವ ಪಾಂಡವಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದೆ. 
 
ತುರ್ತು ಚಿಕಿತ್ಸೆ ಅಗತ್ಯವಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಅನುಭವಿಸುವ ಕಷ್ಟ ಹೇಳತೀರದು. ಈ ಗ್ರಾಮ ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿದೆ ಅಷ್ಟೇ. ಇದು ಕುಗ್ರಾಮವೂ ಅಲ್ಲ. ರಾಜ್ಯದ ನೂರಾರು ಹಳ್ಳಿಗಳ ಪರಿಸ್ಥಿತಿಯೇನೂ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ ಕೆಲವು ದಶಕಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೂರಾರು ಕೋಟಿ ವ್ಯಯಿಸಿದ ಬಳಿಕವೂ ಪರಿಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಆಗಿಲ್ಲ. 
 
ಇತ್ತೀಚಿನ ವರ್ಷಗಳಲ್ಲಿ ಗಲ್ಲಿಗೊಂದು ಕ್ಲಿನಿಕ್‌ಗಳು ಆರಂಭವಾಗಿವೆ. ಸಾಕಷ್ಟು ಸಂಖ್ಯೆಯ ಖಾಸಗಿ ಆಸ್ಪತ್ರೆಗಳು ತಲೆ ಎತ್ತಿವೆ. ಆದರೆ, ಈ ಆಸ್ಪತ್ರೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟಕುತ್ತಿಲ್ಲ. ಈ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಭರಿಸುವ ಶಕ್ತಿ ಜನಸಾಮಾನ್ಯರಿಗೆ ಇಲ್ಲ. 
 
ರಾಜ್ಯದಲ್ಲಿ 50 ವೈದ್ಯಕೀಯ ಕಾಲೇಜುಗಳಿವೆ. ಪ್ರತಿವರ್ಷ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಈ ವಿಷಯದಲ್ಲಿ ರಾಜ್ಯ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಘಟನೆಯ ಮಾನದಂಡದ ಪ್ರಕಾರ 1,000 ಜನರಿಗೆ ಒಬ್ಬರು ವೈದ್ಯರು ಇರಬೇಕು. ಆದರೆ, ರಾಜ್ಯದ ಕೆಲವು ಕಡೆಗಳಲ್ಲಿ 20 ಸಾವಿರ ಜನರಿಗೆ ಒಬ್ಬರೂ ವೈದ್ಯರಿಲ್ಲ. 
 
2007ರಿಂದ 2014ರ ಅವಧಿಯಲ್ಲಿ ದೇಶದಲ್ಲಿ 2 ಲಕ್ಷ ವೈದ್ಯ ಪದವಿ ಪಡೆದಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ವೈದ್ಯ ಪದವಿ ಪಡೆದವರ ಸಂಖ್ಯೆ ಜಾಸ್ತಿ ಇದೆ. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ 23,754, ಕರ್ನಾಟಕದಲ್ಲಿ 25,432, ಕೇರಳದಲ್ಲಿ 9,406, ಆಂಧ್ರ ಪ್ರದೇಶದಲ್ಲಿ 15,233  ಮಂದಿ ವೈದ್ಯಕೀಯ ಶಿಕ್ಷಣ ಗಳಿಸಿದ್ದಾರೆ. 
 
ದೇಶದಲ್ಲಿ 9.5 ಲಕ್ಷ ವೈದ್ಯರು ಇದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಸಂಖ್ಯೆ 1.06 ಲಕ್ಷ ಮಾತ್ರ. ಅಂದರೆ ಪ್ರತಿ 11,528 ಮಂದಿಗೆ ಒಬ್ಬರು ಸರ್ಕಾರಿ ವೈದ್ಯರು ಇದ್ದಾರೆ. ಖಾಸಗಿ ವೈದ್ಯರನ್ನು ಗಣನೆಗೆ ತೆಗೆದುಕೊಂಡರೂ ವೈದ್ಯ– ರೋಗಿ ಅನುಪಾತ 1:1,319 ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ನಾವು ತಲುಪಲು ಇನ್ನೂ ಒಂದು ದಶಕ ಬೇಕು. ಬಿಹಾರ, ಛತ್ತೀಸಗಡ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಹೋಲಿಸಿದರೆ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಈ ರಾಜ್ಯದಲ್ಲಿ 25 ಸಾವಿರ ಮಂದಿಗೆ ಒಬ್ಬರು ಸರ್ಕಾರಿ ವೈದ್ಯರು ಇದ್ದಾರೆ. ಬಿಹಾರದಲ್ಲಿ ಕಳೆದ ಏಳು ವರ್ಷಗಳಲ್ಲಿ 3,179 ವೈದ್ಯರು ಮಾತ್ರ ಸೇರ್ಪಡೆಯಾಗಿದ್ದಾರೆ. 
 
ದೇಶದಲ್ಲಿ 224 ಖಾಸಗಿ ಕಾಲೇಜಗಳು ಸೇರಿದಂತೆ 422 ವೈದ್ಯಕೀಯ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ 57 ಸಾವಿರ ವೈದ್ಯಕೀಯ ಸೀಟುಗಳಿವೆ. ಇದರಲ್ಲಿ ದಕ್ಷಿಣದ ಆರು ರಾಜ್ಯಗಳ ಪಾಲು ಶೇ 60ರಷ್ಟಿದೆ. ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ವೈದ್ಯರಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ನಿರೀಕ್ಷಿಸಲು ಸಾಧ್ಯವೇ?   ಇಂತಹ ಮನೋಭಾವ ಹೊಂದಿರುವವರ ಬೆರಳೆಣಿಕೆಯ ಸಂಖ್ಯೆಯಲ್ಲಿರುತ್ತಾರೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಶೇ 25ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. 
 
ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯ ಆಸ್ಪತ್ರೆಗಳಿದ್ದವು. ಈ  ಆಸ್ಪತ್ರೆಗಳು ನಗರಗಳಿಗೆ ಸೀಮಿತವಾಗಿದ್ದವು. ಆರಂಭದಲ್ಲಿ ಬೆಂಗಳೂರು, ಮೈಸೂರಿನಲ್ಲಿ ವೈದ್ಯಕೀಯ ಆಸ್ಪತ್ರೆಗಳು ತಲೆ ಎತ್ತಿದವು. ಬಳಿಕ ಹುಬ್ಬಳ್ಳಿ, ಬಳ್ಳಾರಿಯಲ್ಲಿ ಆಸ್ಪತ್ರೆಗಳನ್ನು ಆರಂಭಿಸಲಾಯಿತು. ಗ್ರಾಮೀಣ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವ ಉದ್ದೇಶದಿಂದ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶುರು ಮಾಡಲಾಯಿತು.  ಈಗ ಆಸ್ಪತ್ರೆಗಳ ಸಂಖ್ಯೆ ಜಾಸ್ತಿಯಾಗಿದೆ. ಜೊತೆಗೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. 
 
ನಮ್ಮಲ್ಲಿ ಶೇ 50ರಷ್ಟು ಸಾವುನೋವು ಸಂಭವಿಸುವುದು ಸಾಂಕ್ರಾಮಿಕ ರೋಗಗಳಿಂದ. ಅಸಾಂಕ್ರಾಮಿಕ ರೋಗಗಳಿಂದಲೂ ಅಷ್ಟೇ ಪ್ರಮಾಣದಲ್ಲಿ ಜನ ಮೃತಪಡುತ್ತಿದ್ದಾರೆ. ಈ ಹಿಂದೆ ಟೈಫಾಯ್ಡ್, ಜಾಂಡೀಸ್‌, ಪ್ಲೇಗ್‌  ರೋಗಗಳಿಂದ ಹೆಚ್ಚಿನ ಸಂಖ್ಯೆಯ ಜನರು ಸಾಯುತ್ತಿದ್ದರು. ಕಳೆದ 20 ವರ್ಷಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ಕ್ಯಾನ್ಸರ್‌, ಪಾರ್ಶ್ವವಾಯು ಸೇರಿದಂತೆ ಅನೇಕ ಅಸಾಂಕ್ರಾಮಿಕ ರೋಗಗಳು ಜಾಸ್ತಿಯಾಗಿವೆ. 
 
ದೇಶದ ಅಭಿವೃದ್ಧಿಯನ್ನು ಕೇವಲ ಜಿಡಿಪಿ, ಮೂಲಸೌಕರ್ಯದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಆರೋಗ್ಯ ಸೂಚ್ಯಂಕವೂ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಇದು 50 ವರ್ಷದಿಂದ 65ರಿಂದ 70 ವರ್ಷಕ್ಕೆ ಏರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಾದ ಸಿಂಗಪುರ, ಅಮೆರಿಕಗಳಲ್ಲಿ  ಜೀವಿತಾವಧಿ 85 ವರ್ಷ ಇದೆ. ಜೀವಿತಾವಧಿ ಹೆಚ್ಚಿಸಲು ಇನ್ನಷ್ಟು ಉಪಕ್ರಮಗಳನ್ನು ಕೈಗೊಳ್ಳಬೇಕಿದೆ. 
 
ನಮ್ಮಲ್ಲಿನ ಪರಿಸರ, ವರ್ಷದಿಂದ ವರ್ಷಕ್ಕೆ ಕಲುಷಿತಗೊಳ್ಳುತ್ತಿದೆ.  ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಜಲಮೂಲಗಳೆಲ್ಲ ಮಲಿನವಾಗುತ್ತಿವೆ.  ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಗ್ರಾಮೀಣ, ನಗರ ಮಾಲಿನ್ಯ ತಡೆಗಟ್ಟಲು ಯೋಜನೆಗಳನ್ನು ರೂಪಿಸಬೇಕು. 
 
ಕೊಳೆಗೇರಿಗಳಿಗೆ ಸೊಳ್ಳೆ ಪರದೆ
ನಾವು ಮಾತೆತ್ತಿದರೆ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದೇವೆ ಎನ್ನುತ್ತೇವೆ. ಆದರೆ, ಪ್ರಾಥಮಿಕ ಹಂತ ಹಾಗೂ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸಾ ವ್ಯವಸ್ಥೆ ಬಲಪಡಿಸಲು ಹೆಚ್ಚಿನ ಕಾಳಜಿ ವಹಿಸಿಲ್ಲ. ನಮ್ಮಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾದಿಂದ ನೂರಾರು ಮಂದಿ ಸಾಯುತ್ತಿದ್ದಾರೆ. ಡೆಂಗಿ ಕಾಯಿಲೆ ಬಂದರೆ ರೋಗಿಗಳು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಖಾಲಿ ಜಾಗಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. 
 
ರಾಜ್ಯದಲ್ಲಿ 2,796 ಕೊಳೆಗೇರಿಗಳಿವೆ. ಅವುಗಳಲ್ಲಿ 41 ಲಕ್ಷ ಜನರು ನೆಲೆಸಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 862 ಕೊಳೆಗೇರಿಗಳಿವೆ. ಬೆಂಗಳೂರು ನಗರದ ಜನಸಂಖ್ಯೆಯಲ್ಲಿ ಶೇ 20ರಷ್ಟು ಜನ (ಅಂದಾಜು 20 ಲಕ್ಷ) ಕೊಳಚೆ ಪ್ರದೇಶಗಳಲ್ಲೇ ವಾಸವಾಗಿದ್ದಾರೆ. ನಗರದಲ್ಲಿ ವರ್ಷದಿಂದ ವರ್ಷಕ್ಕೆ ಕೊಳೆಗೇರಿಗಳ ಸಂಖ್ಯೆ ಹೆಚ್ಚುತ್ತಿದೆ. ರಾಜಕಾಲುವೆಗಳ ಪಕ್ಕ ಕಿಷ್ಕಿಂದೆಯಂತಹ ಜಾಗಗಳಲ್ಲಿ ಬಡವರು ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ವಾಸಸ್ಥಳ ಹಾಗೂ ಉದ್ಯೋಗ ಸ್ಥಳಗಳಲ್ಲಿ  ನೈರ್ಮಲ್ಯದ ಕೊರತೆಯಿಂದ ಈ ಬಡವರು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ತುತ್ತಾಗುವವರು ಅವರೇ. ಅವರಿಗೆ ಗುಣಮಟ್ಟದ ಆರೋಗ್ಯ ಸೇವೆಯೂ ದೊರಕುತ್ತಿಲ್ಲ. 
 
ರಾಜ್ಯ ಸರ್ಕಾರ ಅನೇಕ ಉಚಿತ ಯೋಜನೆಗಳನ್ನು ಘೋಷಿಸುತ್ತಿದೆ. ಇದಕ್ಕಾಗಿ ಕೋಟಿಗಟ್ಟಲೆ ವ್ಯಯಿಸುತ್ತಿದೆ.  ಇದಕ್ಕೆ ನನ್ನ ವಿರೋಧ ಇಲ್ಲ. ಇದರ ಜತೆಗೆ ಕೊಳೆಗೇರಿಗಳ ನಿವಾಸಿಗಳಿಗೆ ಪ್ರತಿವರ್ಷ ಉಚಿತವಾಗಿ ಸೊಳ್ಳೆ ಪರದೆ ವಿತರಿಸಬೇಕು. ಇದರಿಂದ ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. 
ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ಶೌಚಾಲಯ ನಿರ್ಮಾಣವಾಗುತ್ತಿವೆ. ಅವುಗಳ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಅವುಗಳ ನಿರ್ವಹಣೆ ಹೊಣೆಯನ್ನು ಏಜೆನ್ಸಿಗೆ ನೀಡಬೇಕು. ಜತೆಗೆ ಎಲ್ಲ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕು. 
 
ಗರ್ಭಿಣಿಯರಿಗೆ ಹಾಲು ಕೊಡಿ 
ಶಾಲಾ ವಿದ್ಯಾರ್ಥಿಗಳಿಗೆ ಕೆಲವು ವರ್ಷಗಳಿಂದ ಹಾಲು ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳ ಆರೋಗ್ಯ ಕಾಳಜಿಯು ಹುಟ್ಟಿನಿಂದಲೇ ಆರಂಭವಾಗಬೇಕು. ಜೊತೆಗೆ ತಾಯಂದಿರಿಗೂ ಹೆಚ್ಚಿನ ಪೌಷ್ಟಿಕಾಂಶದ ಅಗತ್ಯ ಇದೆ. ಕೆಎಂಎಫ್‌ ಪ್ರತಿನಿತ್ಯ ಲಕ್ಷಾಂತರ ಲೀಟರ್‌ ಹಾಲು ಸಂಗ್ರಹ ಮಾಡುತ್ತಿದೆ. ಅದರಲ್ಲಿ ಒಂದು ಪ್ರಮಾಣವನ್ನು ಗರ್ಭಿಣಿಯರಿಗೆ ನೀಡಬೇಕು. ಶಾಲಾ ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಹಾಲಿನ ಜತೆಗೆ ಪೌಷ್ಟಿಕಾಂಶ ಇರುವ ಬಿಸ್ಕತ್‌ ಕೊಡಬೇಕು. ಇದರಿಂದ ಕೆಎಂಎಫ್‌ಗೂ ಉತ್ತೇಜನ ಸಿಗುತ್ತದೆ. ಮೊಟ್ಟೆ ಕೊಡುವುದು ಉತ್ತಮ ಯೋಜನೆ ಅಲ್ಲ. ಇದರ ದುರ್ಬಳಕೆಯೇ ಹೆಚ್ಚು.
 
ತುರ್ತು ಚಿಕಿತ್ಸಾ ಘಟಕಗಳ ಸ್ಥಾಪಿಸಿ
ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ ಕೊರತೆ ಇದೆ. ವೆಂಟಿಲೇಟರ್‌ಗಳೂ ಸಾಕಷ್ಟು ಸಂಖ್ಯೆಯಲ್ಲಿಲ್ಲ. ಹೀಗಾಗಿ  ತುರ್ತು ಚಿಕಿತ್ಸೆ ಪಡೆಯಲು ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಶುಲ್ಕ  ದುಬಾರಿಯಾಗಿದ್ದರೂ ಎಲ್ಲ ಸವಲತ್ತು ಇರುತ್ತದೆ ಎಂಬುದು ಇದಕ್ಕೆ ಕಾರಣ. 2– 3 ದಿನಕ್ಕೆ ಲಕ್ಷಾಂತರ ರೂಪಾಯಿ ಬಿಲ್‌ ಪಾವತಿಸಿ ರೋಗಿಗಳು ಸುಸ್ತಾಗಿ ಹೋಗುತ್ತಾರೆ. 
 
ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಜನರಿಗೆ ದಿಕ್ಕೇ ತೋಚುವುದಿಲ್ಲ. ಜೀವಿತಾವಧಿಯ ಸಂಪಾದನೆ ಒಂದೆರಡು ದಿನಗಳಲ್ಲೇ ಖಾಲಿಯಾಗುತ್ತದೆ. ಆಸ್ತಿ, ಚಿನ್ನ ಮಾರುವ ಪ್ರಮೇಯ ಎದುರಾಗುತ್ತದೆ. ಅವರ ಕಣ್ಣೀರು ಒರೆಸುವುದು ಸರ್ಕಾರದ ಆದ್ಯ ಕರ್ತವ್ಯ.   
 
ಜನರನ್ನು ಸರ್ಕಾರಿ ಆಸ್ಪತ್ರೆಗಳ ಕಡೆಗೆ ಸೆಳೆಯುವ ಕೆಲಸ ತುರ್ತಾಗಿ ಆಗಬೇಕು. ಜಿಲ್ಲಾಸ್ಪತ್ರೆಯಲ್ಲಿ 25 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಸ್ಥಾಪಿಸಬೇಕು. ಅದರಲ್ಲಿ ಮಹಿಳೆಯರಿಗೆ 10 ಹಾಸಿಗೆ ಮೀಸಲು ಇಡಬೇಕು. ಈ ವ್ಯವಸ್ಥೆ ಕಲ್ಪಿಸಲು ಪ್ರತಿ ಆಸ್ಪತ್ರೆಗೆ ₹4.5 ಕೋಟಿ ಸಾಕು. ತಾಲ್ಲೂಕು ಆಸ್ಪತ್ರೆಯಲ್ಲಿ ಮೂರು ಹಾಸಿಗೆ ಸಾಮರ್ಥ್ಯದ ತುರ್ತು ನಿಗಾ ಘಟಕ ತೆರೆಯಬೇಕು. ಇದಕ್ಕೆ ₹25 ಲಕ್ಷ ಮೊತ್ತ ಹೂಡಿಕೆ ಮಾಡಬೇಕಾಗುತ್ತದೆ.
 
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇದಕ್ಕೆ ಶಾಸಕರ ಹಾಗೂ ಸಂಸದರ ನಿಧಿಯ ಅನುದಾನವನ್ನು ಬಳಸಬಹುದು. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ಜತೆಗೆ ಈ ಘಟಕಗಳ ಜೋಡಣೆ ಮಾಡಬೇಕು. ತಜ್ಞ ವೈದ್ಯರಿಂದ ಸಲಹೆ ಪಡೆಯಬೇಕು. ಇದಕ್ಕಾಗಿ ಟೆಲಿಮೆಡಿಸಿನ್‌ ಜಾಲವನ್ನು ಇನ್ನಷ್ಟು ಬಲಪಡಿಸಬೇಕು. 
 
ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ನೂರಾರು ಕೋಟಿ ವ್ಯಯಿಸುತ್ತಿದ್ದೇವೆ. ಅತ್ಯುತ್ತಮ ದರ್ಜೆಯ ಉಪಕರಣಗಳನ್ನು ಅಳವಡಿಸುತ್ತಿದ್ದೇವೆ. ಆದರೆ, ಲ್ಯಾಬ್‌ಗಳ ಸಮರ್ಪಕ ನಿರ್ವಹಣೆ ಮಾಡುವುದಿಲ್ಲ.  ಆಸ್ಪತ್ರೆಗಳಲ್ಲಿ ತಾಂತ್ರಿಕ ತಜ್ಞರ ಅಭಾವ ಇದೆ.  ಇದರಿಂದ ಉಪಕರಣಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗುತ್ತಿವೆ. ಲ್ಯಾಬ್‌ಗಳ ನಿರ್ವಹಣೆ ಹೊಣೆಯನ್ನು ಹೊರಗುತ್ತಿಗೆಗೆ ನೀಡಬಹುದು. ಸಾಮಾನ್ಯ ಜನರಿಗೆ ಎಟಕುವ ದರದಲ್ಲಿ ದರ ನಿಯಂತ್ರಣ ಮಾಡಬೇಕು. 
 
ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ  ಸ್ಥಳೀಯ ಆಡಳಿತದ ಹಸ್ತಕ್ಷೇಪ ಹೆಚ್ಚಾಗಿದೆ. ವೈದ್ಯರು ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಇಲ್ಲ. ಈ ಆಸ್ಪತ್ರೆಗಳ ಮೇಲ್ವಿಚಾರಣೆಯನ್ನು ಆರೋಗ್ಯ ಇಲಾಖೆಯೇ ನೇರವಾಗಿ ನೋಡಿಕೊಳ್ಳಬೇಕು. 
 
ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ, ಹಳ್ಳಿಗಳಲ್ಲಿ ಕೆಲಸ ಮಾಡಲು ವೈದ್ಯರು ಮುಂದೆ ಬರುತ್ತಿಲ್ಲ. ವೈದ್ಯರು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತ ಆಗಿದ್ದಾರೆ. ಅವರು ಹಳ್ಳಿ, ಹೋಬಳಿ ಪ್ರದೇಶಗಳಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು. 
 
20 ಹಳ್ಳಿಗೊಂದು ಮಿನಿ ಸ್ಪೆಷಾಲಿಟಿ ಆಸ್ಪತ್ರೆ 
ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಅವರು ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ವೈದ್ಯರಿಗೂ ಇತಿಮಿತಿಗಳು ಇರುತ್ತವೆ. ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಭಾವೋದ್ವೇಗದಿಂದ ನಡೆದು ಕೊಳ್ಳುವುದು ಸರಿಯಲ್ಲ. ಕಾಯಿಲೆಯೇ ಗಂಭೀರವಾಗಿದ್ದರೆ ವೈದ್ಯರೇನು ಮಾಡಲು ಸಾಧ್ಯ. ಅವರೇನೂ ದೇವರಲ್ಲ.  ದೌರ್ಜನ್ಯ ಹೆಚ್ಚುತ್ತಿರುವ ಕಾರಣ ಹಳ್ಳಿಗಳಿಗೆ ಹೋಗಲು ಅವರು ಹಿಂದೇಟು ಹಾಕುತ್ತಿದ್ದಾರೆ. 
 
ವೈದ್ಯರು 364 ದಿನಗಳಲ್ಲೂ ಹಳ್ಳಿಯಲ್ಲಿರಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಅಮೆರಿಕ, ಯುರೋಪ್ ರಾಷ್ಟ್ರಗಳ ಎಲ್ಲ ಹಳ್ಳಿಗಳಲ್ಲೂ ವೈದ್ಯರು ಇಲ್ಲ. ವೈದ್ಯರು ತಮ್ಮ ಕುಟುಂಬದ ಬಗ್ಗೆಯೂ ಆಲೋಚನೆ ಮಾಡಬೇಕಲ್ಲವೇ? ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡುವುದು ಬೇಡವೇ? 
 
20 ಹಳ್ಳಿಗೊಂದು ಮಿನಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು. ಅಲ್ಲಿ ಸಕಲ ಆರೋಗ್ಯ ಸವಲತ್ತು ಇರಬೇಕು. ಆಂಬುಲೆನ್ಸ್‌ ಸೌಲಭ್ಯವನ್ನೂ ಒದಗಿಸಬೇಕು. ಟೆಲಿಮೆಡಿಸಿನ್‌ ಜಾಲದ ವ್ಯವಸ್ಥೆ ಮಾಡಬೇಕು. ಆಗ ವೈದ್ಯರಿಗೂ ಅನುಕೂಲವಾಗುತ್ತದೆ. ರೋಗಿಗಳಿಗೂ ಉಪಕಾರವಾಗುತ್ತದೆ.  
 
ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಹೊರಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಎರಡು ತಿಂಗಳು  ಇಂಟರ್ನ್‌ಶಿಪ್‌ ಮಾಡಬೇಕಿದೆ. ಸದ್ಯ ಹೆಚ್ಚಿನ ವಿದ್ಯಾರ್ಥಿಗಳು ಒಂದೆರಡು ಆಸ್ಪತ್ರೆಗಳಲ್ಲೇ ಇಂಟರ್ನ್‌ಶಿಪ್‌ ಮಾಡುತ್ತಿದ್ದಾರೆ. ಅದರ ಬದಲು ಹತ್ತಿಪ್ಪತ್ತು ಆಸ್ಪತ್ರೆಗಳನ್ನು ಅವರನ್ನು ನಿಯೋಜನೆ ಮಾಡಬೇಕು. ಆಗ ತರಬೇತಿ ವೈವಿಧ್ಯದಿಂದ ಕೂಡಿರುತ್ತದೆ. ಅಲ್ಪ ಕಾಲ ವೈದ್ಯರ ಕೊರತೆಯೂ ನೀಗುತ್ತದೆ. 
 
ನಾಲ್ಕು ದಿಕ್ಕಿನಲ್ಲಿ ಆಸ್ಪತ್ರೆ
ಬೆಂಗಳೂರು ಅಗಾಧವಾಗಿ ಬೆಳೆದಿದೆ. ನಗರಕ್ಕೆ ವಲಸೆ ಬರುತ್ತಿರುವ ಕೂಲಿ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಆಗುತ್ತಿದೆ. ಈ ಹಿಂದೆ ಬಿಬಿಎಂಪಿ ವ್ಯಾಪ್ತಿ 220 ಚದರ ಕಿ.ಮೀ. ಇತ್ತು. ಈಗ ಅದು 800 ಚದರ ಕಿ.ಮೀ.ಗೆ ಏರಿದೆ. ನಗರದ ಒಡಲೊಳಗೆ 110 ಹಳ್ಳಿಗಳು ಸೇರಿಕೊಂಡಿವೆ. ನಗರದ ಜನಸಂಖ್ಯೆ 1 ಕೋಟಿ ದಾಟಿದೆ. ಅಂದರೆ ರಾಜ್ಯದ ಜನಸಂಖ್ಯೆ ಶೇ 20ರಷ್ಟು ಮಂದಿ ರಾಜಧಾನಿಯೊಳಗೇ ಇದ್ದಾರೆ. ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. 
 
ಈಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸೇವೆ ಒದಗಿಸುವುದು ಕಷ್ಟ ಸಾಧ್ಯ. ನಗರದ ಹೊರವಲಯಗಳ ಜನರು ಉತ್ತಮ ಆರೋಗ್ಯ ಸೇವೆ ಪಡೆಯಲು ಅಲೆದಾಡಬೇಕಿದೆ. ಈ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್, ಹೆಬ್ಬಾಳ, ಪಶ್ಚಿಮ ಕಾರ್ಡ್‌ ರಸ್ತೆ, ಕೋಣನಕುಂಟೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಬೇಕು. ಪ್ರತಿ ಆಸ್ಪತ್ರೆಯಲ್ಲಿ ಕನಿಷ್ಠ 300 ಹಾಸಿಗೆ ವ್ಯವಸ್ಥೆ ಇರಬೇಕು. ಸಕಲ ಆರೋಗ್ಯ ಸೇವೆಗಳೂ ಒಂದೇ ಸೂರಿನಡಿ ಸಿಗಬೇಕು. ಪ್ರತಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕನಿಷ್ಠ ₹100 ಕೋಟಿ ಹೂಡಿಕೆ ಮಾಡಬೇಕು. 
 
**
ಏನು ಆಗಬೇಕು?
* ಟೆಲಿಮೆಡಿಸಿನ್‌ ಜಾಲವನ್ನು ಬಲಪಡಿಸಿ ಗ್ರಾಮಾಂತರ ಭಾಗದಲ್ಲೂ ತಜ್ಞವೈದ್ಯರ ತುರ್ತುಸೇವೆ ಸಿಗುವಂತೆ ನೋಡಿಕೊಳ್ಳಬೇಕು
* ಗ್ರಾಮೀಣ ಜನರ ಆರೋಗ್ಯ ಕಾಪಾಡಲು  ಶಕ್ತವಾಗುವಂತೆ ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಲ್ಲ ರೀತಿಯ ಸೌಲಭ್ಯಗಳಿಂದ ಬಲಪಡಿಸಬೇಕು
* ಸರ್ಕಾರಿ ಆಸ್ಪತ್ರೆಗಳ ಲ್ಯಾಬ್‌ಗಳ ನಿರ್ವಹಣೆಗೆ ತಾಂತ್ರಿಕ ತಜ್ಞರನ್ನು ನೇಮಕ ಮಾಡಿಕೊಳ್ಳಬೇಕು
* ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತುರ್ತು ನಿಗಾ ಘಟಕಗಳ ವ್ಯವಸ್ಥೆ ಮಾಡಬೇಕು
* ಗ್ರಾಮೀಣ ಭಾಗದಲ್ಲೂ ರಕ್ತ ನಿಧಿಗಳ ಸ್ಥಾಪನೆ ಮಾಡಬೇಕು
* ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ‘ಹೆಲ್ತ್‌ ಕಾರ್ಡ್‌’ ವಿತರಣೆ ಮಾಡಿ, ಎಲ್ಲ ರೀತಿಯ ವೈದ್ಯಕೀಯ ಸೇವೆಗಳು ಯಾವುದೇ ಆಸ್ಪತ್ರೆಯಲ್ಲಿ ಸುಲಭವಾಗಿ ಸಿಗುವ ವ್ಯವಸ್ಥೆ ಮಾಡಬೇಕು

ಲೇಖಕರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ

ನಿರೂಪಣೆ: ಮಂಜುನಾಥ ಹೆಬ್ಬಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT