ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಬೇಕು ಸರ್ಕಾರಿ ಶಾಲೆ

Last Updated 21 ನವೆಂಬರ್ 2016, 19:55 IST
ಅಕ್ಷರ ಗಾತ್ರ

ಮುಧೋಳದಿಂದ 10 ಕಿ.ಮೀ ದೂರದ ಯಡಹಳ್ಳಿ ಪ್ರವೇಶಿಸಿದಾಗ ಎದುರಿಗೆ ಬಂದ ಕುರಿಗಾಹಿಯನ್ನು ಇಲ್ಲಿ ಶಾಲೆ ಎಲ್ಲಿದೆ ಎಂದು ಪ್ರಶ್ನಿಸಿದೆ. ಯಾವುದ್ರಿ ಹೊರಟ್ಟಿ ಅವರ ಸಾಲಿ ಏನ್ರಿ ಎಂಬ ಮರುಪ್ರಶ್ನೆ ಎದುರಾಯಿತು. ಅದಕ್ಕೆ ತಲೆ ಹಾಕುತ್ತಿದ್ದಂತೆಯೇ, ಇದೇ ರಸ್ತೆಯಲ್ಲಿ ಮುಂದೆ ಹೋಗಿ ಅಲ್ಲಿ ಎಡಕ್ಕೆ ದೊಡ್ಡ ಕಟ್ಟಡ ಸಿಗುತ್ತದೆ  ಎಂಬ ಉತ್ತರ ಸಿಕ್ಕಿತು. ಅದನ್ನು ಅನುಸರಿಸಿ ಮುಂದೆ ಸಾಗಿದಾಗ ಎರಡು ಅಂತಸ್ತಿನ ದೊಡ್ಡ ಕಟ್ಟಡ ಕಾಣಿಸಿತು.

ದೂರದಿಂದ ಯಾವುದೋ ಎಂಜಿನಿಯರಿಂಗ್ ಕಾಲೇಜಿನಂತೆ ಕಾಣುತ್ತಿದ್ದ ಶಾಲೆಯ ಮುಂದೆ ಜನಜಂಗುಳಿಯೇ ನೆರೆದಿತ್ತು. ಒಳಗೆ ಪ್ರವೇಶಿಸಿದಾಗ ಅಲ್ಲಿದ್ದ ಸಿಬ್ಬಂದಿ ಸದ್ದು ಮಾಡದಂತೆ ಸೂಚಿಸಿದವರೇ ಪಕ್ಕದಲ್ಲಿಯೇ ಕೂರಿಸಿಕೊಂಡರು. ಅಲ್ಲಿಯೇ ಎದುರಿನ ಕೊಠಡಿಯಲ್ಲಿ ನಡೆಯುತ್ತಿದ್ದ ಶಾಲಾಭಿವೃದ್ಧಿ ಸಮಿತಿ ಸಭೆಯ (ಎಸ್‌ಡಿಎಂಸಿ) ಚರ್ಚೆಯ ಆಗು–ಹೋಗುಗಳ ಕುರಿತ ಕುತೂಹಲ ಹೊರಗಿದ್ದವರ ಮೌನಕ್ಕೆ ಕಾರಣವಾಗಿತ್ತು.

ಶಾಲೆಯ ಉಳಿತಾಯ ಖಾತೆಯಲ್ಲಿ ಇದ್ದ ₹25 ಲಕ್ಷ ಠೇವಣಿಗೆ ಟಿಡಿಎಸ್ ಮುರಿದಿರುವ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಸಭೆ ನೇತೃತ್ವ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಫೋನ್‌ನಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು. ಸರ್ಕಾರಿ ಶಾಲೆ ಠೇವಣಿಗೂ ಟಿಡಿಎಸ್ ಮುರಿದದ್ದು ಅವರ ಆಕ್ಷೇಪಕ್ಕೆ ಕಾರಣವಾಗಿತ್ತು. ‘ನಾವು ಠೇವಣಿಯ ಬಡ್ಡಿಯಿಂದಲೇ ಸ್ವಚ್ಛತಾ ಸಿಬ್ಬಂದಿಗೆ ವೇತನ ನೀಡುತ್ತೇವೆ. ಅದರಲ್ಲೂ ತೆರಿಗೆ ಮುರಿದುಕೊಂಡರೆ ಹೇಗೆ’ ಎಂದು ಅತೃಪ್ತಿ ವ್ಯಕ್ತಪಡಿಸುತ್ತಲೇ ಫೋನ್‌ ರಿಸೀವರ್ ಇಟ್ಟ ಅವರು, ನಾಳೆಯೇ ಬೇರೆ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅಲ್ಲಿ ಠೇವಣಿ ಇಡುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು. ನಂತರ ಶಾಲೆಯ ಬಾಕಿ ಕೆಲಸಗಳ ಬಗ್ಗೆ, ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಯಿತು. ಮಧ್ಯಾಹ್ನದ ಊಟಕ್ಕೆ ಎದ್ದಾಗ ಹೊರಟ್ಟಿ ನಮ್ಮನ್ನು ಎದುರುಗೊಂಡರು. ಶಾಲಾ ಕಟ್ಟಡ, ಆವರಣದಲ್ಲಿ ಸುತ್ತಾಡಿದ ನಂತರ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಕುಳಿತು ತಮ್ಮೂರಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಮುನ್ನೆಲೆಗೆ ತಂದ ರೀತಿಯ ಬಗ್ಗೆ ನಮ್ಮೊಂದಿಗೆ ಹರಟಿದರು.

ಅಭಿವೃದ್ಧಿ ಹೇಗೆ...
ಯಡಹಳ್ಳಿಯಲ್ಲಿ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ 6.5 ಎಕರೆ ಜಮೀನನ್ನು ಶಾಲೆಗೆ ದಾನವಾಗಿ ನೀಡಿದ ಹೊರಟ್ಟಿ, ಅಲ್ಲಿ ₹15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ, ಪೀಠೋಪಕರಣ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌, ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ, ಆಟದ ಮೈದಾನ, ಕೈತೋಟ, ರಂಗಮಂದಿರ, ಹಾಸ್ಟೆಲ್‌ ವ್ಯವಸ್ಥೆ, ಒಳಾಂಗಣ ಕ್ರೀಡಾಂಗಣ, ಕಾಂಪೌಂಡ್ ಹೀಗೆ ಅಂತರರಾಷ್ಟ್ರೀಯ ದರ್ಜೆಯ ಶಾಲೆಯೊಂದು ಹೊಂದಿರಬಹುದಾದ ಹತ್ತು ಹಲವು ಸವಲತ್ತುಗಳನ್ನು ಕಲ್ಪಿಸಿದ್ದಾರೆ.

ಇದಕ್ಕಾಗಿ ಹೊರಟ್ಟಿ ಕುಟುಂಬದ ಅವ್ವ ಸೇವಾ ಟ್ರಸ್ಟ್‌ ಶಾಲೆಗೆ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿಕೊಟ್ಟಿದೆ. ಜೊತೆಗೆ ಸರ್ಕಾರದಿಂದಲೂ ಹೆಚ್ಚಿನ ಅನುದಾನ ದೊರೆತಿದೆ. ಶಾಲೆಯ ಅಭಿವೃದ್ಧಿಗೆ ಶಾಸನಸಭೆಯಲ್ಲಿ ಹೊರಟ್ಟಿ ಅವರ ಸಹವರ್ತಿಗಳೂ ಕೈ ಜೋಡಿಸಿದ್ದಾರೆ. ಜೊತೆಗೆ ಊರಿನಲ್ಲಿ ಪಿತ್ರಾರ್ಜಿತವಾಗಿ ಬಂದಿರುವ  ಜಮೀನಿನ ಉತ್ಪನ್ನವನ್ನೂ ಶಾಲೆಯ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ.

ಶಾಲೆಗೆ ದೇಣಿಗೆ ನೀಡಿದವರು...
ವಿಧಾನಪರಿಷತ್ ಸದಸ್ಯರಾದ ಚಿಕ್ಕಮಗಳೂರಿನ ಎಂ. ಶ್ರೀನಿವಾಸ್, ಮಹಾಂತೇಶ ಕೌಜಲಗಿ, ಜಯಮಾಲಾ, ತಾರಾ ಅನುರಾಧ, ವೀರಣ್ಣ ಮತ್ತಿಕಟ್ಟಿ, ಎಸ್.ಆರ್.ಪಾಟೀಲ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಶಾಸಕರ ಪ್ರದೇಶಾಭಿವೃದ್ಧಿನಿಧಿಯಡಿ ಅನುದಾನ ನೀಡಿದ್ದಾರೆ. ಸ್ಥಳೀಯ ರನ್ನ ಶುಗರ್ಸ್ ಸಂಸ್ಥೆ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ಕೊಡಿಸುತ್ತಿದೆ. ಯಡಹಳ್ಳಿಯ ತುಂಗಾ ಪಾಟೀಲ ಎಂಬುವವರು ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಒಂದು ಎಕರೆ ಜಾಗ ನೀಡಿದ್ದಾರೆ. 

ಅಕ್ಕಪಕ್ಕದ ಜಿಲ್ಲೆಯ ಮಕ್ಕಳು: ಯಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಶಿಕ್ಷಣಕ್ಕೆ ಅವಕಾಶವಿದೆ. ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಹೊಂದಿರುವ ಪದವಿಪೂರ್ವ ಕಾಲೇಜು ಇದ್ದು ಪಕ್ಕದ ಗದಗ ಜಿಲ್ಲೆಯ ರೋಣ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕು ಸೇರಿದಂತೆ ಸುತ್ತಲಿನ ಪಟ್ಟಣ, ಹಳ್ಳಿಗಳ ಸಾವಿರಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಾಲೆ ಕಲಿಯುತ್ತಿದ್ದಾರೆ.

ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ: ಸಾಮಾನ್ಯವಾಗಿ ಉತ್ತಮ ಶಿಕ್ಷಣ ಅರಸಿ ಗ್ರಾಮೀಣ ಮಕ್ಕಳು ಪಟ್ಟಣಕ್ಕೆ ಹೋಗುತ್ತಾರೆ. ಆದರೆ ನಮ್ಮಲ್ಲಿ ಮುಧೋಳ, ಬೀಳಗಿ, ಮಹಾಲಿಂಗಪುರ, ಕೆರೂರು, ಜಮಖಂಡಿ ಪಟ್ಟಣಗಳ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಅಭಿವೃದ್ಧಿ ಎಂದಾಕ್ಷಣ ಇಲ್ಲಿ ಕಟ್ಟಡ ಮಾತ್ರ ಕಟ್ಟಿಲ್ಲ. ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಯಡಹಳ್ಳಿಯ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಸತೀಶ ದೇಶಪಾಂಡೆ ಹೇಳುತ್ತಾರೆ.

ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ನಡುವೆ ಸಮನ್ವಯ ಇರುವಂತೆ ನೋಡಿಕೊಳ್ಳಲಾಗಿದೆ. ಇಲ್ಲಿನ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ಆಗಾಗ ಪಾಲಕರಿಗೂ ಮಾಹಿತಿ ನೀಡಲಾಗುತ್ತಿದೆ. ಸರ್ಕಾರದಿಂದ ನೀಡುವ ತರಬೇತಿ ಕಾರ್ಯಕ್ರಮಗಳ ಜೊತೆಗೆ ಶಾಲೆಗೂ ವಿಷಯ ತಜ್ಞರನ್ನು ಕರೆಸಿ ಶಿಕ್ಷಕರಿಗೆ ತರಬೇತಿ ಕೊಡಿಸುತ್ತೇವೆ. ಇದರ ಫಲವಾಗಿ ವರ್ಷದಿಂದ ವರ್ಷಕ್ಕೆ ಶಾಲೆಯ ಫಲಿತಾಂಶ ಹಾಗೂ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಅವರ ವಿವರಣೆ.

ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ಕೊಟ್ಟು ವೈಯಕ್ತಿಕವಾಗೂ ಅವರ ಬಗ್ಗೆ ಗಮನ ಹರಿಸುವಂತೆ ನೋಡಿಕೊಳ್ಳುತ್ತೇವೆ. ಆಗಾಗ ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಿ ಪಾಲಕರು ಹಾಗೂ ಶಿಕ್ಷಕರೊಂದಿಗೆ ಸಾಹೇಬರೇ (ಹೊರಟ್ಟಿ) ನೇರವಾಗಿ ಮಾತನಾಡುತ್ತಾರೆ. ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸಲಹೆ–ಸೂಚನೆ ನೀಡಿ ಅವು ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಸುಸಜ್ಜಿತ ಆಟದ ಮೈದಾನ ನಿರ್ಮಿಸಿ ಕ್ರೀಡಾ ಚಟುವಟಿಕೆಗಳಿಗೂ ಒತ್ತು ನೀಡುತ್ತಿದ್ದೇವೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 2012ರಿಂದ ಇಲ್ಲಿಯವರೆಗೆ ನಿರಂತರವಾಗಿ ಶೇ100ರಷ್ಟು ಫಲಿತಾಂಶ ಬಂದಿರುವುದು ಗುಣಮಟ್ಟಕ್ಕೆ ಸಾಕ್ಷಿ ಎಂಬುದು ದೇಶಪಾಂಡೆ ಅವರ ಅಭಿಮತ.

ಕೆರೆಗೆ ಚೆಲ್ಲುವ ಪ್ರಯತ್ನ: ನಾನು ಶಿಕ್ಷಣ ಸಚಿವನಾಗಿದ್ದ ವೇಳೆ ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಯೊಂದನ್ನು ಊರಿನವರೇ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದ್ದರು. ಅದರ ಉದ್ಘಾಟನೆಗೆ ಹೋಗಿದ್ದೆ. ಆಗಲೇ ನಮ್ಮೂರಿನ ಶಾಲೆಯನ್ನು ಅಭಿವೃದ್ಧಿಪಡಿಸುವ ಕನಸು ಕಂಡಿದ್ದೆನು. ಇದೊಂದು ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರಯತ್ನ ಎನ್ನುವ ಬಸವರಾಜ ಹೊರಟ್ಟಿ, ಇದರ ಹಿಂದೆ ಅಪ್ಪ–ಅವ್ವನ ಕನಸು ಸಾಕಾರಗೊಳಿಸಿದ ಸಂತಸವೂ ಇದೆ ಎನ್ನುತ್ತಾರೆ,
50ರ ದಶಕದಲ್ಲಿ ಅಪ್ಪ ಶಿವಲಿಂಗಪ್ಪ ಹೊರಟ್ಟಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು.

ಆ ಕಾಲದಲ್ಲಿ ಶಿಕ್ಷಕರಿಗೆ ಪಗಾರ (ವೇತನ) ಕಡಿಮೆ. ಅದರಲ್ಲಿಯೇ ಮನೆ ನಿಭಾಯಿಸುವ ಜೊತೆಗೆ ಪ್ರತಿ ವರ್ಷ ಇಬ್ಬರು ಬಡ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಅಪ್ಪ ಹೊರುತ್ತಿದ್ದರು. ಅದೊಮ್ಮೆ ಮುಧೋಳದ ಬಾಲಕನೊಬ್ಬ ತನಗೂ ಶಾಲೆ ಕಲಿಸುವಂತೆ ಕೇಳಿಕೊಂಡು ಅಪ್ಪನ ಬಳಿ ಬಂದಿದ್ದನು. ಆದರೆ ಅದಾಗಲೇ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತಿದ್ದ ಅವರಿಗೆ ಈ ಬಾಲಕನಿಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಹಾಗಾಗಿ ಸಹಾಯ ಕೇಳಿಕೊಂಡು ಬಂದ ಬಾಲಕನನ್ನು ವಾಪಸ್‌ ಕಳುಹಿಸಿದ್ದರು.

ಸಂಜೆ ಮನೆಗೆ ಬಂದವರೇ ಅವ್ವನ ಬಳಿ ಬೇಸರ ತೋಡಿಕೊಂಡು ರಾತ್ರಿ ಊಟ ಮಾಡದೇ ಮಲಗಿದ್ದರು. ಅದನ್ನು ಅವ್ವ ಆಗಾಗ ನಮ್ಮ ಬಳಿ ಪ್ರಸ್ತಾಪಿಸುತ್ತಿದ್ದರು. ಬಡವರ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಆಗಲೇ ಹೇಳುತ್ತಿದ್ದರು. ಅದೇ ಕಾರಣಕ್ಕೆ ನಮ್ಮೂರಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅದನ್ನು ಮಾದರಿಯಾಗಿ ರೂಪಿಸುವ ಸಂಕಲ್ಪ ತೊಟ್ಟಿದ್ದಾಗಿ ಹೊರಟ್ಟಿ ಹೇಳುತ್ತಾರೆ.

*
ಯಡಹಳ್ಳಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶಾಸನ ಸಭೆಯ ನನ್ನ ಒಡನಾಡಿಗಳು, ಹಿತೈಷಿಗಳು ಹಾಗೂ ಸ್ಥಳೀಯರು ನೆರವಾಗಿದ್ದಾರೆ. ಜನಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಊರಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡರೆ ಸಾಕು, ಗುಣಮಟ್ಟದ ಶಿಕ್ಷಣ ದೊರೆತು ಬಡವರ ಮಕ್ಕಳು ಬದುಕು ರೂಪಿಸಿಕೊಳ್ಳುತ್ತಾರೆ...
-ಬಸವರಾಜ ಹೊರಟ್ಟಿ ವಿಧಾನಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT