ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಪರದೆಯ ತರಕಾರಿಗಳು

ಹೊಸ ಹೆಜ್ಜೆ -29
Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ

-ಆರ್.ಕೆ.ಈರಣ್ಣ
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಸಣ್ಣ ನಾಡಗೌಡ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹೆಸರುವಾಸಿ. ಕಳೆದ 60 ವರ್ಷಗಳಿಂದ ಕೃಷಿಯಲ್ಲಿ ತೊಡಗಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಯಶ ಕಂಡವರು. ಇದೀಗ ಅವರ ಮಗ ಶರಣೇಗೌಡ ತಂದೆಯ ಕಾಯಕವನ್ನು ಮುಂದುವರೆಸಿದ್ದಾರೆ. 

ಈ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿಯುತ್ತವೆ. ತುಂಗಭದ್ರಾ ನದಿಯ ಎಡದಂಡೆ ಕಾಲುವೆಯೇ ಇಲ್ಲಿನ ರೈತರ ಜೀವನಾಡಿ. ಈ ಭಾಗದ ಬಹುತೇಕ ರೈತರು ಭತ್ತದ ಬೆಳೆಯನ್ನೇ ಬೆಳೆಯುತ್ತಾರೆ. ಉತ್ತಮ ಇಳುವರಿ, ಕೈತುಂಬ ಹಣ. ಆದರೆ ಶರಣೇಗೌಡರು ಮಾತ್ರ ತರಕಾರಿ ಬೆಳೆಯನ್ನು ಅವಲಂಬಿಸಿದ್ದಾರೆ.

ತಮ್ಮ ಹೊಲದ ಪಕ್ಕದಲ್ಲಿಯೇ 85ನೇ ವಿತರಣಾ ಕಾಲುವೆಯ 8ನೇ ಉಪ ಕಾಲುವೆ ಹರಿಯುತ್ತಿದ್ದರೂ ಇವರ ಜಮೀನಿಗೆ ಆ ನೀರಿನ ವ್ಯವಸ್ಥೆ ಇಲ್ಲ. ಹೊಲದಲ್ಲಿ ಇರುವ ಕೊಳವೆ ಬಾವಿಯಿಂದ ಬರುವುದು ಕೇವಲ ಒಂದೂವರೆ ಇಂಚು ನೀರು. ಆ ನೀರಿನಿಂದಲೇ ವರ್ಷಕ್ಕೆ ಎರಡು ಬೆಳೆಗಳನ್ನು  ಬೆಳೆಸುತ್ತಾರೆ. 2015–16ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ತಮಗಿದ್ದ 20 ಗುಂಟೆ ಹೊಲದಲ್ಲಿ 10 ಗುಂಟೆಯಷ್ಟು ಹಸಿರು ತರಕಾರಿಯ ಟ್ರೇ ಸಸಿಗಳ ತೋಟದ ಹಸಿರು ಪರದೆ ಘಟಕ ನಿರ್ಮಿಸಿದ್ದಾರೆ. ತೋಟದ ಸುತ್ತಲೂ ಹಸಿರು ಪರದೆ ಕಟ್ಟಲಾಗಿದೆ.

ಈ ಪರದೆ ಅಡಿಯಲ್ಲಿ ಹಸಿ ಮೆಣಸಿನ ಟ್ರೇ ಸಸಿಗಳು ನಾಟಿ ಮಾಡಲಾಗಿದೆ. ಎಂಟು ಗುಂಟೆ  ಜಮೀನಿನಲ್ಲಿ ಮೆಣಸಿನಕಾಯಿ, ಒಂದು ಗುಂಟೆಯಲ್ಲಿ ಹೈಬ್ರೀಡ್ ಬದನೇಕಾಯಿ, ಒಂದು ಗುಂಟೆಯಲ್ಲಿ ಟೊಮೆಟೊ, ಹೀರೆಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ದೊಣ್ಣೆ ಮೆಣಸು, ಕೋಸುಗಡ್ಡೆ, ಹೂಕೋಸು, ಗುಲಾಬಿ, ಚೆಂಡುಹೂ, ದಾಳಿಂಬೆ ಸಸಿಗಳನ್ನು ಹಾಕಿದ್ದಾರೆ.

ಇವರ ಕೃಷಿ ಇಷ್ಟಕ್ಕೇ ಮುಗಿಯುವುದಿಲ್ಲ. ಹೊಲದ ಅಂಚಿನಲ್ಲಿ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಇವರ ತೋಟದಲ್ಲಿ ಬೆಳೆದ ನರ್ಸರಿ ಸಸಿಗಳನ್ನು ಜಿಲ್ಲೆಯ ಸುತ್ತಮುತ್ತಲಿನ ರೈತರು ಇಲ್ಲಿಂದಲೇ ಖರೀದಿಸುತ್ತಾರೆ.

ಪ್ರತಿ ಬೆಳೆಗೆ ಮೂರು ಬಾರಿ ಔಷಧ ಸಿಂಪರಣೆ ಮಾಡುತ್ತ ವರ್ಷದಲ್ಲಿ ಎರಡು ಬೆಳೆಗಳನ್ನು ಪಡೆಯುತ್ತಾರೆ. ತಮಗೆ ಬೇಕಾದ ತರಕಾರಿಗಳನ್ನೂ ಬೆಳೆದುಕೊಳ್ಳುತ್ತಾರೆ. ಈ ಮೂಲಕ ತಮಗಿರುವ ಅಲ್ಪ ಜಮೀನಿನಲ್ಲೇ ಈ ರೀತಿ ಕೃಷಿ ವಿಧಾನ ಅಳವಡಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT